ADVERTISEMENT

ಕ್ಯಾರೆಟ್ ಮೆಲ್ಲುವ ಬಗ್ಸ್‌ನ ಕಥೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 19:30 IST
Last Updated 3 ಆಗಸ್ಟ್ 2019, 19:30 IST
   

ಕಾರ್ಟೂನ್‌ಗಳನ್ನು ನೋಡಲು ಇಷ್ಟಪಡದ ಮಕ್ಕಳು ಯಾರಿದ್ದಾರೆ? ಮಕ್ಕಳ ಪಾಲಿಗೆ ರಮ್ಯ ಲೋಕವೊಂದನ್ನು ಸೃಷ್ಟಿಸುತ್ತವೆ ಕಾರ್ಟೂನ್‌ ಪಾತ್ರಗಳು. 1920 ಮತ್ತು 30ರ ದಶಕದ ಅವಧಿಯು ಆ್ಯನಿಮೇಟೆಡ್‌ ಕಾರ್ಟೂನ್‌ಗಳ ಪಾಲಿಗೆ ಸುವರ್ಣ ಯುಗವನ್ನು ತೆರೆದಿಟ್ಟಿತು. 1930ರ ದಶಕದ ಕೊನೆಯಲ್ಲಿ ಅಮೆರಿಕದ ಪ್ರಸಿದ್ಧ ವಾರ್ನರ್‌ ಬ್ರದರ್ಸ್‌ ಕಂಪನಿಯು ಮುದ್ದಾದ ಮೊಲದ ಕಾರ್ಟೂನ್‌ ಪಾತ್ರವೊಂದನ್ನು ಸೃಷ್ಟಿಸಿತು. ನಮಗೆ ಈಗ ಗೊತ್ತಿರುವ ಬಗ್ಸ್‌ ಬನ್ನಿ ಎಂಬ ಮೊಲದ ಪಾತ್ರ ಮೊದಲು ಕಾಣಿಸಿಕೊಂಡಿದ್ದು 1940ರ ಜುಲೈ 27ರಂದು – ‘ಅ ವೈಲ್ಡ್‌ ಹೇರ್‌’ ಎಂಬ ಕಾರ್ಟೂನ್‌ ಮೂಲಕ.

ಉದ್ದನೆಯ ಕಿವಿಗಳಿರುವ, ತುಂಟತನ ತುಂಬಿರುವ, ಸದಾ ಕ್ಯಾರೆಟ್‌ ಮೆಲ್ಲುವ, ಹಾಸ್ಯ ಪ್ರವೃತ್ತಿಯ ಈ ಮೊಲ ಜನಪ್ರಿಯತೆಯನ್ನು ಬಹಳ ವೇಗವಾಗಿ ಗಿಟ್ಟಿಸಿಕೊಂಡಿತು. ಜನಪ್ರಿಯತೆಯಲ್ಲಿ ಇದು ಮಿಕ್ಕಿ ಮೌಸ್‌ಗೆ ಸ್ಪರ್ಧೆ ನೀಡಿತು ಸಹ. ಟೆಕ್ಸ್ ಆವೆರಿ ನಿರ್ದೇಶನದ ‘ಅ ವೈಲ್ಡ್‌ ಹೇರ್‌’ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.

ವಾರ್ನರ್‌ ಬ್ರದರ್ಸ್‌ ಕಂಪನಿಯ ಅತ್ಯಂತ ಪ್ರತಿಭಾನ್ವಿತ ತಂಡವೊಂದು ಬಗ್ಸ್ ಬನ್ನಿ ಪಾತ್ರವನ್ನು ಸೃಷ್ಟಿಸಿತ್ತು. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆ್ಯನಿಮೇಟರ್‌ ಬೆನ್‌ ಬಗ್ಸ್‌ ಹಾರ್ಡವೇ ಎನ್ನುವವನ ಸಲಹೆ ಮೇರೆಗೆ ಇದನ್ನು ಸೃಷ್ಟಿಸಲಾಗಿತ್ತು. ಹಾಗಾಗಿ, ಈ ಪಾತ್ರದ ಮೊದಲ ಚಿತ್ರಕ್ಕೆ ‘ಬಗ್‌ನ ಬನ್ನಿ’ ಎಂಬ ಹೆಸರಿಡಲಾಗಿತ್ತು.

ADVERTISEMENT

ಬಗ್ಸ್‌ ಬನ್ನಿ ಪಾತ್ರಕ್ಕೆ ಧ್ವನಿ ನೀಡಿದ್ದು ಮೆಲ್‌ ಬ್ಲಾಂಕ್ ಎಂಬ ವ್ಯಕ್ತಿ. ಈತ ಸರಿಸುಮಾರು 50 ವರ್ಷ ಧ್ವನಿ ನೀಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.