ಅದು ಒಂದು ಸುಡುಗಾಡು ಸಿದ್ಧರ ಕೊಂಪೆ. ಊರೆಂದರೆ ಊರಲ್ಲ. ಊರಿನಲ್ಲಿರುವವರೆಲ್ಲಾ ಸುಖವಾಗಿಲ್ಲ. ಸುಖವೆಂದು ಹರಸಿಕೊಂಡವರೆಲ್ಲಾ ಊರುಬಿಟ್ಟು ದೂರ ಬೆಂಗಳೂರೆಂಬ ಮಾಯಾನಗರಿಯಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಜೀವತೇಯುತ್ತಿದ್ದಾರೆ. ಊರ ಶರಾಬು ಅಂಗಡಿಯ ಮುಂದೆ ಜನರ ಸಾಲು ಅಮುಖ್ಯವೆನಿಸುವುದಿಲ್ಲ.
ಹತ್ತಿರದ ಪಟ್ಟಣಗಳೆಂದರೆ ಅರಸೀಕೆರೆ, ಚಿತ್ರದುರ್ಗ, ಜಗಳೂರು, ದಾವಣಗೆರೆ ಮತ್ತು ಹರಪನಹಳ್ಳಿ, ಹುಚ್ಚಂಗಿದುರ್ಗ ಈಸು ಪಟ್ಟಗಳು. ಅರವತ್ತು ಮೈಲು ದೂರವಿದ್ದುದರಿಂದ ಕಾಲುನೆಡೆಗೆಯಲ್ಲೇ ಹೋಗಬೇಕಿತ್ತು. ಇಲ್ಲ ಅಂದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದರೆ ಎತ್ತಿನ ಗಾಡಿಯನ್ನು ಕಟ್ಟಿಕೊಂಡೇ ಹೋಗಬೇಕಿತ್ತು. ಹೆರಿಗೆ ಹೆಣ್ಣುಮಕ್ಕಳ ಸ್ಥಿತಿಗತಿಯಂತೂ ಹೇಳತೀರದು. ಎಷ್ಟೋ ಹೆಣ್ಣು ಮಕ್ಕಳು ಎತ್ತಿನ ಗಾಡಿಯಲ್ಲೇ ಹೆರಿಗೆ ಮಾಡಿಕೊಂಡು ಪ್ರಾಣಬಿಟ್ಟದ್ದುಂಟು.
ಹರಿಜನರ ದುರಗಪ್ಪ ಎಂಬುವವನು ಎಲ್.ಎಸ್. (ಹೈಯರ್ ಸೆಕೆಂಡರಿ) ಪಾಸುಮಾಡಿದ ಒಬ್ಬನೇ ವಿದ್ಯಾವಂತ. ಉಳಿದವರೆಲ್ಲಾ ಪ್ರೈಮರಿಯಲ್ಲೇ ಕ್ಲಾಸ್ ಬಿಟ್ಟು ಊರಿನ ತೋಟದಮನೆ ಸಾವುಕಾರರ ಮನೆಯಲ್ಲಿ ಜೀತಕ್ಕಿದ್ದುದುಂಟು. ದುರುಗಪ್ಪನು ಹತ್ತಿರದ ಪಟ್ಟಣದ ದುರ್ಗಾಪುರದಲ್ಲಿ ಅಂಚೆ ಕಚೇರಿಯಲ್ಲಿ ಅಂಚೆ ಪತ್ರಗಳನ್ನು ಊರೂರಿಗೆ ತಲುಪಿಸುವ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದನು.
ಕೆಲವು ದಿನಗಳು ಋತುಮಾನಗಳ ಒಡಲೊಳಗೆ ಕಲಿತ ಹುಡುಗರ ಸಮಾಜ ಚಿಗುರೊಡೆಯತೊಡಗಿತು. ಅರಿವಿನ ಬಿಲದೊಳಗೆ ಹಬೆಯಾಡುವ ಸ್ವಾತಂತ್ರ, ಸಮಾನತೆ, ಅಕ್ಷರತೆಯ ಅರಿವು ಮೂಡಣದಲಿ ಸೂರ್ಯನ ರೀತಿ ಅಂಬೇಡ್ಕರರ ಚಿಂತನೆಗಳು ಉದಯವಾಗಿ ಹೊಸ ಸಂಚಲನವೊಂದು ಪಸರಿಸಿತ್ತು. ಹೀಗೆ ಕೆಲವು ದಿನಗಳಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟಿಕೊಂಡಿತ್ತು. ಜೀತಮಾಡುವುದನ್ನು ನಿಲ್ಲಿಸಲು ಹೋರಾಟ ನಡೆಸಿತ್ತು. ದುರ್ಗಾಪುರ ಪಟ್ಟಣದಿಂದ ಕಗ್ಗೆರೆ ರಂಗಪ್ಪ, ಚಂದ್ರಪ್ಪ, ದರುಮಪ್ಪ, ಕೆಂಚಮ್ಮ, ಮಾರಮ್ಮ, ಗಂಗಮ್ಮ ಮತ್ತಿತರ ಚಳುವಳಿಯ ಮುಖಂಡರು ಭೇಟಿ ನೀಡಿ ಹಟ್ಟಿಯಲ್ಲಿರುವ ಜನರಲ್ಲಿ ತಾನು ಮನಷ್ಯರೆಂಬ ಭಾವನೆ ಬರತೊಡಗಿ ತಮ್ಮಲ್ಲಿ ಇದ್ದಬದ್ದ ಜಮೀನಿನಲ್ಲಿ ಅವರೇ ಆರಂಭಮಾಡುವಂತೆ ಅಣಿಗೊಳಿಸಿದರು.
ದುರಗಪ್ಪನಿಗೆ ಇಲ್ಲಿಯವರೆಗೆ ಮಕ್ಕಳಿರಲಿಲ್ಲ. ತಾನಿದ್ದ ದುರ್ಗಾಪುರದಲ್ಲಿ ಮನೆದೇವರಾದ ಕರಿಯಮ್ಮದೇವಿಗೆ ಹರಕೆ ಮಾಡಿಕೊಂಡ. ಊರಿಗೆ ಹದಿನೈದು ದಿವಸಕ್ಕೊಮ್ಮೆ ಬರುತ್ತಿದ್ದ ಮೇರಿಯಮ್ಮ ಎಂಬ ನರ್ಸಮ್ಮನನ್ನು ಕಂಡು ಇದ್ದ ವಿಷಯವನ್ನೆಲ್ಲಾ ಹೇಳಿದ.
‘ಮದುವೆಯಾಗಿ ಆರು ವರ್ಷಗಳಾದೂ ಮಕ್ಕಳಾಗಿಲ್ಲ ಕಣಮ್ಮ, ಯಾರಾದ್ರು ಲೇಡಿಡಾಕ್ಟ್ರಿಗೆ ನನ್ ಹೆಂಡ್ತಿನ ತೋರಿಸ್ಬೇಕಣಮ್ಮ’.
‘ಆಯ್ತು, ದುರುಗಪ್ಪ, ಮುಂದಿನ ಶುಕ್ರವಾರ ನಿನ್ ಹೆಂಡ್ತಿನ ಆಸ್ಪತ್ರೆಗೆ ಕರ್‌ಕೊಂಡ್ ಬಾ. ಅಲ್ಲಿ ಸುಶೀಲಮ್ಮ ಡಾಕ್ಟರ್‌ಗೆ ಹೇಳಿ ತೋರ್ಸಿ ಗುಳಿಗೆ ಬರೆಸ್‌ಕೊಡ್ತೀನಿ’.
‘ಆಯ್ತು ಕಣಮ್ಮ’ ಎಂದು ದುರಗಪ್ಪ ಸಮಾಧಾನದ ನಿಟ್ಟುಸಿರುಬಿಟ್ಟ.
ತನ್ನ ಹೆಂಡತಿಯನ್ನು ಜಗಳೂರಿನಲ್ಲಿರುವ ಸಂತೆಹೊಂಡದ ಹತ್ತಿರ ಸುಶೀಲಮ್ಮ ಡಾಕ್ಟರಿಗೆ ತೋರಿಸಲು ಕರೆದುಕೊಂಡು ಹೋದನು. ದುರಗಪ್ಪನ ಹೆಂಡತಿ ಸೀತವ್ವಳ್ಳನ್ನು ಪರೀಕ್ಷಿಸಲಾಯಿತು ಸುಶೀಲಮ್ಮ ಡಾಕ್ಟರ್. ಅದೆಂತದೋ ರಕ್ತ, ವಂದವನ್ನು ಟೆಸ್ಟ್ ಮಾಡಿಸಲಾಯಿತು.
ಸುಮಾರು ಐದು ತಿಂಗಳಾಗಿರಬಹುದು ದುರಗಪ್ಪನ ಹೆಂಡತಿ ಸೀತವ್ವ ಒಂದೇ ಸಮನೆ ವಾಂತಿ ಮಾಡುತ್ತಿದ್ದಳು. ದುರುಗಪ್ಪನಿಗೆ ದಿಕ್ಕೇ ತೋಚಲಿಲ್ಲ. ನರ್ಸ್ ಮೇರಿಯಮ್ಮನ ಹತ್ತಿರ ಕರೆದೊಂದು ಹೋದ.
‘ದುರಗಪ್ಪನೋರೆ ಹೆದರ್‌ಬೇಡಿ ನಾನು ಟೆಸ್ಟ್ ಮಾಡ್ತೀನಿ’
ತನ್ನ ಹೆಂಡತಿಗೆ ಏನಾಗಿದೆಯೋ ಏನೋ, ಮೊದಲೇ ಜೋಳದ ಸಿಪ್ಪೆದಂಟು ಇದ್ದಂಗವ್ಳೆ. ‘ತಾಯಿ ಕರಿಯವ್ವ ನೀನೇ ಕಾಪಾಡಬೇಕು ಕಣವ್ವ’ ಎಂದು ಪರಿತಪಿಸುತ್ತಿದ್ದ.
ಬಾಗಿಲು ಕಿರ್..ಸದ್ದು ಕೇಳಿದೊಡನೆ ಎದ್ದು ನಿಂತು ಧೀನನಾಗಿ ಕೈಮುಗಿಯುತ್ತಾ ‘ನರ್ಸಮ್ನೋರೆ ಏನಾಗಿಗೆ ಸೀತವ್ವನಿಗೆ’
ನಗುನಗುತ್ತಲೇ ಮೇರಿ ನರ್ಸಮ್ನೋರು ‘ಏನು ಗಾಬರಿ ಆಗಬೇಡ ದುರುಗಪ್ಪ, ನೀನು ಅಪ್ಪ ಆಗ್ತೀದ್ದೀಯ, ನೋಡು ದುರುಗಪ್ಪ ನಿನ್ನ ಹೆಂಡ್ತಿನ ಚೆನ್ನಾಗಿ ನೋಡಿಕೊಳ್‌ಬೇಕು. ನಾನು ಕೊಡೋ ಮಾತ್ರೆ ಔಷಧಿಗಳನ್ನು ತಪ್ಪದೇ ಕೊಡಬೇಕು, ಪ್ರತಿ ತಿಂಗಳು ಟೆಸ್ಟಿಂಗ್ ಬರಬೇಕು, ಮರೀಬಾರ್ದು.’
2
ಒಬ್ಬತ್ತು ತಿಂಗಳ ನಂತರ ಒಂದು ಒಳ್ಳೆಯ ಶುಭ ಗಳಿಗೆಯಲ್ಲಿ ಸೀತವ್ವ ಸುಖವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಮಗು ದಷ್ಟಪುಷ್ಟವಾಗಿ ದುಂಡುದುಂಡಗೆ ಮುದ್ದಾಗಿತ್ತು. ಮಗುವಿನ ಮುಖದಲ್ಲಿ ಕಳೆಯನ್ನು ನೋಡಿ ಕರಿಯಮ್ಮ ದೇವಿಯೇ ಹುಟ್ಟಿಬಂದಿದ್ದಾಳೆಂದು ಸಂತೋಷಪಡುತ್ತಿದ್ದ ದುರುಗಪ್ಪ. ಮಗುವಿನ ಹೆಸರನ್ನು ಶಬ್ದಮಣಿ ಎಂದು ಹೆಸರನ್ನೂ ಇಟ್ಟರು.
ಶಬ್ದಮಣಿಗೆ ಐದು ವರ್ಷ ಆದಾಗ ಅಲ್ಲಿನ ಸರ್ಕಾರಿ ಶಾಲೆಗೆ ಒಂದನೇ ತರಗತಿಗೆ ಸೇರಿಸಿದ. ಆ ಶಾಲೆಯಲ್ಲಿ ನಾಲ್ಕನೇ ತರಗತಿವರೆಗೆ ಓದಿದ ಶಬ್ದಮಣಿ ಪ್ರೈಮರಿ ಶಾಲೆಯಲ್ಲಿ ಕಲಿತು ಹೈಯರ್ ಪ್ರೈಮರಿ ಶಾಲೆಗೆ ಹೋಗಲು ಆರಂಭಿಸಿದಳು. ಇದ್ದಕ್ಕಿಂದಂತೆ ಶಾಲೆಯಲ್ಲಿ ಶಬ್ದಮಣಿಗೆ ಕಿರಿಕಿರಿ ಅನ್ನಿಸತೊಡಗಿತು. ಓದು ಬರಹದಲ್ಲಿ ತೀರಾ ಆಸಕ್ತಿಯಿಂದ ಕಲಿಯುತ್ತಿದ್ದ ಇವಳಿಗೆ ತನ್ನ ಹೆಸರೇ ತುಂಬಾ ನೋವು ತರಹತ್ತಿತ್ತು. ತನ್ನ ಗೆಳತಿಯರು ಅವಳನ್ನು ಶಬ್ದಿ. . . ಶಬ್ದಿ. . .ಎಂದು ಶಾರ್ಟ್ ನೇಮಿನಲ್ಲಿ ಕರೆಯುತ್ತಿದ್ದರು. ಒಂದು ದಿನ ಮನೆಗೆ ಅತ್ತುಕೊಂಡು ಬಂದಾಗ….
‘ಯಾಕಮ್ಮ ಏನಾಯ್ತೇ ಶಾಲೆಯಲ್ಲಿ, ಯಾರದರೂ ಏನಾದರೂ ಅಂದರೇ’ ತನ್ನ ಮಗಳನ್ನು ತಲೆ ನೇವರಿಸುತ್ತಾ ಕೇಳಿದಾಗ,
‘ಅಪ್ಪಾ, ನನಗೆ ಬೇರೆ ಹೆಸರು ಇಡಲು ಆಗಲಿಲ್ಲವೇ, ಯಾಕಪ್ಪ ನನಗೆ ಶಬ್ದಮಣಿ ಅಂತ ಹೆಸರಿಟ್ಟೆ, ಸ್ಕೂಲಲ್ಲಿ ಎಲ್ಲಾರು ಶಬ್ದಿ. . . ಶಬ್ದಿ.. . ಎಂದು ಕರೆಯುತ್ತಾರೆ’ ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದರು.
ಅಯ್ಯೋ, ಮಗಳೇ, ನಿನ್ನ ಹೆಸರು ದೇವರ ಹೆಸರು ಕಣಮ್ಮ, ಯಾರೋ ತಿಳಿಯದೇ ನಿನ್ನನ್ನು ರೇಗಿಸಿರಬಹುದು. ಅದಕ್ಕೆಲ್ಲಾ ಅಳಬಾರದು, ನೀನು’ ಎಂದು ಸಮಾಧಾನ ಪಡಿಸಿದನು.
ಎಸ್.ಎಸ್.ಎಲ್.ಸಿ ಪರೀಕ್ಷೆಯು ಹತ್ತಿರ ಬಂತು. ಶಬ್ದಮಣಿ ಇನ್ನೂ ಹೆಚ್ಚಾಗಿ ಓದಲು ಶುರುಮಾಡಿದಳು. ಪರೀಕ್ಷೆಯಲ್ಲಿ ಚೆನ್ನಾಗಿ ಉತ್ತರಗಳನ್ನು ಬರೆದಿದ್ದರಿಂದ ಮೊದಲ ದರ್ಜೆಯಲ್ಲಿಯೇ ಪಾಸುಮಾಡಿ ಸ್ಕೂಲಿಗೆ ಹೆಸರು ತಂದಿದ್ದಳು.
ಕಾಲೇಜಿಗೆ ಹೋಗಲು ಶಬ್ದಮಣಿಗೆ ಆಸೆ ಏನೋ ಇತ್ತು. ಆದರೆ ಪಿ.ಯು.ಕಾಲೇಜು ಜಗಳೂರಿನಲ್ಲಿ ಇದ್ದುದಿರಂದ ಸಾರಿಗೆ ವ್ಯವಸ್ಥೆ ಇರಲಿಲ್ಲ. ದುರಗಪ್ಪನಿಗೂ ಯೋಚನೆಯಾಯಿತ್ತು. ಆ ಊರಿನೊಳಗೆ ಇದ್ದ ತನ್ನ ಗುರುಗಳಾದ ಶಿವಮೂರ್ತಪ್ಪ ಮೇಸ್ಟ್ರನ್ನು ಕೇಳಿದರೆ ಯಾವುದಾದರೂ ಪರಿಹಾರ ಸಿಗುತ್ತೆ ಎಂದು ಬೆಳ್ಳಂಬೆಳಿಗ್ಗೆ ಶಿವಮೂರ್ತಪ್ಪ ಮೇಸ್ಟ್ರ ಮನೆಕಡೆಗೆ ಹೋದ ದುರುಗಪ್ಪ.
ಬಹಳ ದಿನಗಳಾದ ಮೇಲೆ ತನ್ನ ಶಿಷ್ಯ ಬಂದಿರುವುದನ್ನು ನೋಡಿ ಅಚ್ಚರಿಯಾಯಿತು ಶಿವಮೂರ್ತಪ್ಪ ಮೇಸ್ಟರಿಗೆ.
‘ಒಳಗೆ ಬಾರೋ ದುರ್ಗಪ್ಪ’
‘ಇಲ್ಲೇ ಇರ‍್ತೀನಿ ಸಾ, ಕಟ್ಟೆ ಮೇಲೆ ಕೂತ್ಕನ್ತೀನಿ, ಸ್ವಲ್ಪ ಹೊರಗೆ ಬರ‍್ರೀ ಸಾ’
‘ಏನೋ ದುರ್ಗಪ್ಪ, ಈಗ ನೆನಪಯ್ತೇನೋ’
‘ಹಿಂಗೆ ಸುಮ್ನೆ ಬಂದೆ ಸಾ,’
‘ನೀನು ಸುಮ್‌ಸುಮ್ನೆ ಬರೋ ಶಿಷ್ಯ ಅಲ್ಲ ಕಣೋ’
‘ಸಾ.... . . ನಮ್ಮ ಶಬ್ದಮಣಿಯವ್ವ ಎಸ್.ಎಸ್.ಎಲ್.ಸಿ ಪಾಸ್ ಮಾಡವ್ಳೆ’
‘ಹೌದೇನೋ, ಒಳ್ಳೆದಾಯ್ತು ಬಿಡು, ಅವಳನ್ನು ಕಾಲೇಜಿಗೆ ಕಳಿಸು’
‘ಗುರುಗಳೇ ಅದೇ ಸಮಸ್ಯೆ ಆಗಿದೆ, ಕಾಲೇಜು ಇರೋದು ದಾವಣಗೆರೆ, ಜಗಳೂರು, ಚಿತ್ರದುರ್ಗದಲ್ಲಿ. ಆದರೆ ಅಲ್ಲಿಗೆ ಓಡಾಡಲು ಬಸ್ಸಿನ ಸೌಕರ್ಯ ಇಲ್ವಲ್ಲ ಸಾ, ನಿಮಗೇ ಗೊತ್ತಲ್ವೆ? ಈಗ ಏನ್ ಮಾಡೋದು ತಿಳಿತಾ ಇಲ್ಲ ಸಾ. ..’
‘ಹೌದಲ್ಲೋ, ಕಾಲೇಜು ಇರೋದೆ ದೊಡ್ಡ ದೊಡ್ಡ ಊರುಗಳಲ್ಲಿ, ಅಲ್ಲಿಗೆ ಹೋಗಲು ವ್ಯವಸ್ಥೆ ಇಲ್ಲ. ಏನ್ ಮಾಡೋದೋ ದುರುಗಪ್ಪ?’
‘ನೀವೇ ಏನಾರಾ ಹೇಳಿ ಸಾ’
ದುರುಗಪ್ಪನಿಗೆ ಟೀ ಕೊಡಲು ತನ್ನ ಮನೆಯವರಾದ ಸಿದ್ದಮ್ಮನಿಗೆ ಕೂಗಿ ಹೇಳಿದರು. ಮನೆ ಮಗನಂತಿದ್ದ ದುರುಗಪ್ಪ ಬಂದಿರುವುದು ಸಿದ್ದಮ್ಮನಿಗೆ ಸಂತೋಷವಾಯಿತು.
‘ಏನಪ್ಪಾ ದುರುಗು ಚೆನ್ನಾಗಿದಿಯೆನೋ, ಇತ್ತಕಡೆ ಬರಲೇ ಇಲ್ವಲ್ಲೋ, ಏನಾರ ಕೆಲಸ ಹೇಳೋಣಾ ಅಂದ್ರೆ,ಬರ‍್ತಾ ಇಲ್ವಲ್ಲೋ’
‘ಇಲ್ಲ ಕಣ್ಣವ್ವಾ ಪೋಸ್ಟ್‌ಮ್ಯಾನ್ ಕೆಲಸಕ್ಕೆ ಹೋಗ್ತಾ ಇದ್ದೀನಿ, ಬರಾಕೆ ಆಗ್ಲಿಲ್ಲ ಕಣವ್ವ’
ದುರುಗಪ್ಪ ಮೇಸ್ಟರು ಇಬ್ಬರು ಟೀ ಗುಟುಕಿಸುತ್ತಾ ಇರುವಾಗ ಮಲೇರಿಯಾ ಹೆಲ್ತ್ ಇನ್‌ಸ್ಪೆಕ್ಟರ್ ಬಿದ್ರಿ ಚಂದ್ರಶೇಖರಪ್ಪನವರು ಬಂದು ಬಿಳಿಗೋಡೆ ಮೇಲೆ ಏನೋ ಪೆನ್ಸಿಲ್‌ನಲ್ಲಿ ಗೀಚುತ್ತಾ ನಗು ನಗುತ್ತಲೇ ‘ನಮುಸ್ಕಾರ ಸಾರ್, ಚೆನ್ನಾಗಿದ್ದೀರಾ. . . . .. ’
‘ಬರ‍್ರೀ. . .. .ಬರ‍್ರೀ. .. . ., ಚಂದ್ರಪ್ಪನೋರೆ ಸ್ವಲ್ಪ ಟೀ ಕುಡಿಯೋಣ’ ಸಿದ್ದಮ್ಮನಿಗೆ ಟೀ ತರಲು ಹೇಳಿದರು. ಆಗ ತನ್ನ ಶಿಷ್ಯನ ಮಗಳು ಎಸ್.ಎಸ್.ಎಲ್.ಸಿ ಪಾಸು ಮಾಡಿದ್ದು ಹೀಗ ಏನು ಮಾಡಬೇಕೆಂದು ಸಲಹೆ ಕೇಳಿದರು ಮೇಸ್ಟ್ರು.
‘ಹೌದಾ ಸಾರ್, ಒಳ್ಳೆಯದೇ ಆತು. ಸಾರ್, ದುರ್ಗದಲ್ಲಿ ಒಂದು ಕೋರ್ಸ್ ಇದೆ, ಸಾಮಾಜಿಕ ಕಾರ್ಯಕರ್ತೆ ಎಂದು ಒಂದೂವರೆ ವರ್ಷದ ಕೋರ್ಸ್. ಈ ತರಬೇತಿಯನ್ನು ಮಾಡಿದರೆ ಸರ್ಕಾರದ ಕೆಲಸ ಗ್ಯಾರಂಟಿ ಸಾರ್. ಟ್ರೈನಿಂಗ್ ಮುಗಿದ ತಕ್ಷಣವೇ ಸರ್ಕಾರವೇ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತೆ.’
‘ಎಸ್.ಎಸ್.ಎಲ್.ಸಿ. ಮೇಲೆ ತಗೋತರಾ ಸಾರ್’ ಮೇಸ್ಟರ್ ಪ್ರಶ್ನೆಗೆ
‘ಹೌದು ಸಾರ್, ಅದಕ್ಕೆ ಅಪ್ಲಿಕೇಶನ್ ಹಾಕಬೇಕು, ಬೇಕಾದ್ರೆ ನಾನು ಒಂದು ಅಪ್ಲಿಕೇಶನ್ ತಂದ್ಕೊಡ್ತಿನಿ, ಹೇಗಿದ್ರೂ ಹೆಡ್ಡಾಫೀಸಿಗೆ ಚಿತ್ರದುರ್ಗಕ್ಕೆ ಹೋಗಬೇಕು. ಆಗ ಅಪ್ಲಿಕೇಶ್‌ನ ತಂದ್ಕೊಡ್ತಿನಿ ಸಾರ್’.
‘ಚಂದ್ರಪ್ನೋರೆ ಅಲ್ಲಿ ತರಬೇತಿ ಮಾಡಲು ಉಳಿಯಲಿಕ್ಕೆ ಏನಾದರೂ ಹಾಸ್ಟೆಲ್ ವ್ಯವಸ್ಥೆ ಇದೆಯಾ’ ಮೇಸ್ಟರ ಪ್ರಶ್ನೆ
‘ಸಾರ್, ತರಬೇತಿಯಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಈ ತರಬೇತಿ. ಒಳ್ಳೆಯ ಹಾಸ್ಟಲಿದೆ ಸಾರ್.’
‘ಏನೋ ದುರ್ಗಪ್ಪ, ನಿನ್ ಮಗಳನ್ನು ಈ ತರಬೇತಿಗೆ ಕಳುಸ್ತಿಯೇನೋ’
‘ಬುದ್ದಿ, ನೀವು ಏನ್ ಹೇಳ್ತಿರೋ ಹಾಗೆ ಕೇಳ್ತಿನಿ ಬುದ್ದಿ, ನೀವೇ ನನಗೆ ದಾರಿ ತೋರಿಸ್ಬೇಕು’ ಎಂದನು ದುರುಗಪ್ಪ.
‘ಚಂದ್ರಪ್ಪನ್ನೋರೆ ಒಂದು ಅರ್ಜಿ ತನ್ನಿ ಅದಕ್ಕೆ ತಗಲುವ ಫೀಜನ್ನು ನಾನು ಕೊಡ್ತೀನಿ’
‘ಅಯ್ಯೋ, ಸಾರ್ ನಿಮ್ ಹತ್ರ ಇಸ್ಕೋಳ್ಳಾದೇ, ನಾನೇ ತಂದ್ಕೊಡ್ತೀನಿ, ಬಿಡ್ರಿ ಅದೆಲ್ಲಾ ಏನೂ ಬೇಡ’
‘ತುಂಬಾ ಉಪಕಾರಾಯ್ತು ಸಾರ್, ನಿಮ್ಮ ಸಹಾಯ ಯಾವತ್ತೂ ಮರೆಯಂಗಿಲ್ಲ ಸಾರ್’ ದುರಗಪ್ಪ ಚಂದ್ರಪ್ಪನವರಿಗೆ ಕೈಮುಗಿಯುತ್ತಾ ಧನ್ಯವಾದ ಹೇಳಿದ.
ಹೆಲ್ತ್ ಇನ್‌ಸ್ಪೆಕ್ಟರ್ ಬಿದರಿ ಚಂದ್ರಪ್ಪನವರು ತರಬೇತಿಯ ಅರ್ಜಿ ತಂದಾಗ ಶಿವಮೂರ್ತಪ್ಪ ಮೇಸ್ಟ್ರು ಅರ್ಜಿಯನ್ನು ಭರ್ತಿ ಮಾಡಿ ಶಬ್ದಮಣಿಯಿಂದ ಸಹಿ ಮಾಡಿಸಿ ಅರ್ಜಿ ಸಲ್ಲಿಸಿದರು.
ಸ್ವಲ್ಪ ದಿನಗಳ ನಂತರ ಶಬ್ದಮಣಿ ಹೆಸರಿಗೆ ಒಂದು ಲಕೋಟೆ ಬಂದು ತರಬೇತಿಗೆ ಆಯ್ಕೆಯಾಗಿರುವಾಗಿ ತರಬೇತಿಗೆ ಹಾಜರಾಗಲು ಕೂಡಲೇ ಅಗತ್ಯ ಎಸ್.ಎಸ್.ಎಲ್.ಸಿ. ಸರ್ಟಿಪೀಕೇಟ್, ಕ್ಯಾಸ್ಟ್ ಸರ್ಟಿಫಿಕೇಟ್, ಟಿ.ಸಿ. ಹಾಗೂ ನಡೆತೆ ಪ್ರಮಾಣ ಪತ್ರಗಳೊಂದಿಗೆ ಹಾಗೂ ಅಗತ್ಯ ಸಾಮಾನುಗಳೊಂದಿಗೆ ತರಬೇತಿ ಶಾಲೆಯ ಆವರಣದಲ್ಲಿರುವ ಹಾಸ್ಟೆಲ್‌ನಲ್ಲಿ ತಂಗಬೇಕೆಂದು ಸೂಚಿಸಲಾಗಿತ್ತು.
ತರಬೇತಿಗೆ ಅಡ್ಮಿಷನ್ ಆಯಿತು. ಹಾಸ್ಟೆಲ್ ವ್ಯವಸ್ಥೆಯು ಚೆನ್ನಾಗಿ ಇದ್ದುದನ್ನು ನೋಡಿ ದುರುಗಪ್ಪನಿಗೆ ಸಮಾಧಾನವಾಯಿತು.
‘ಬರ‍್ತೀನಿ ಕಣವ್ವ, ಚೆನ್ನಾಗಿ ಓದು, ವಾರ ವಾರ ಬರ‍್ತೀನಿ ಹೆದರಬೇಡ’ ಎಂದು ಹೇಳುವಾಗ ಕಣ್ಣಲಿ ನೀರು ತುಂಬಿಕೊಂಡಿದ್ದನ್ನು ಗಮನಿಸಿದ ಶಬ್ದಮಣಿಗೂ ಕಣ್ಣುಗಳು ತೇವಗೊಂಡವು.
‘ನಾನು ಚೆನ್ನಾಗಿ ಓದ್ತೀನಪ್ಪ, ಅವ್ವನನ್ನು ಚೆನ್ನಾಗಿ ನೋಡ್ಕೋ, ನನ್ನ ಬಗ್ಗೆ ಚಿಂತೆ ಮಾಡಬೇಡಿ’ ಎಂದು ಹೇಳಿ ಕಳುಹಿಸಿಕೊಟ್ಟಳು ಶಬ್ದಮಣಿ.
ಕರ್ಣನಿಗೆ ತನ್ನ ಕುಲದ ಬಗ್ಗೆ ಹುಟ್ಟಿದಾರಭ್ಯ ಅವನ ಮರಣದವರೆಗೂ ಕುಲದ ಸಮಸ್ಯೆ ಹೇಗೆ ಕಾಡುತ್ತಿತ್ತೋ ಅವನಂತೆಯೇ ಶಬ್ದಮಣಿಗೆ ತನ್ನ ಜಾತಿಯಿಂದ ಸೂಕ್ಷ್ಮವಾಗಿ ಅವಮಾನಗಳಾಗುತ್ತಿದ್ದವು.
ತರಬೇತಿಯು ಪೂರ್ಣಗೊಳಿಸಿಕೊಂಡು ಒಂದೆರೆಡು ತಿಂಗಳಲ್ಲೇ ಕೆಲಸದ ಆದೇಶ ಬಂದು ಚಿಕ್ಕನಾಯಕನಹಳ್ಳಿಯ ಹತ್ತಿವಿರುವ ಕಡವಗೆರೆ ಊರಿಗೆ ಸಮಾಜ ಸೇವಾ ಕೇಂದ್ರಕ್ಕೆ ಸ್ಥಳನೇಮಕಾತಿಗೊಳ್ಳುತ್ತದೆ.
ಆದರೆ ಹರಿಜನದವಳಾದ್ದರಿಂದ ಆ ಊರಿನಲ್ಲಿ ವಾಸಿಸಲು ಬಾಡಿಗೆ ಮನೆ ಸಿಗುತ್ತಿಲ್ಲ. ಯಾರೂ ಇವರಿಗೆ ಬಾಡಿಗೆ ಮನೆ ಕೊಡಲು ನಿರಾಕರಿಸುತ್ತಿದ್ದರು.
ಏನು ಮಾಡುವುದು ಗೊತ್ತಾಗದೇ ಆ ಊರಿನ ಗ್ರಾಮಪಂಚಾಯಿತಿ ಚೇರಮನ್ ಚನ್ವೀರೇಗೌಡರ ಮನಗೆ ಹೋಗುತ್ತಾರೆ. ತಮ್ಮ ಪರಿಚಯ ಮಾಡಿಕೊಂಡು ಹೊಸದಾಗಿ ಕೆಸಲಕ್ಕೆ ಸೇರಿರುದಾಗಿ ತಾವು ಹರಿಜನ ಅಂತ ಈ ಊರಿನಲ್ಲಿ ಯಾರೂ ಬಾಡಿಗೆ ಮನೆ ಕೊಡುತ್ತಿಲ್ಲವೆಂದು…..
‘ನೀವೇ ಏನಾದರೂ ಉಳಿಯಲಿಕ್ಕೆ ವ್ಯವಸ್ಥೆ ಮಾಡಬೇಕೆಂದು’ ಕೇಳಿಕೊಂಡ ದುರುಗಪ್ಪ.
‘ಸ್ವಲ್ಪ ಹೊತ್ತು ಇರಿ, ಅಲ್ಲೇ ಜಗುಲಿಯ ಮೇಲೆ ಕೂತ್ಕೊಳ್ರೀ, ಏನಾದ್ರೂ ಮಾಡೋಣ’ ಎಂದು ತನ್ನ ಮನೆಯ ಆಳು ರುದ್ರಯ್ಯನನ್ನು ಕರೆದು
‘ಲೇ ರುದ್ರಯ್ಯ ಬಾರೋ ಇಲ್ಲಿ, ಈಯಮ್ಮಂಗೆ ಯಾವುದಾದ್ರೂ ಒಂದು ಸಣ್ಣ ರೋಮೋ ಮನೆಯೋ ಎಲ್ಲಿ ಸಿಗುತ್ತೆ, ನೀನು ಊರೊಳಗೆ ಹೋಗಿ ಹುಡುಕ್ಕಂಡ ಬಾರೋ ರುದ್ರಯ್ಯ....’
ರುದ್ರಯ್ಯ ದೂರದ ತಿಪಟೂರಿಗೆ ಅಂಟಿಕೊಂಡಿರುವ ಅಂಚೆಚಾಮನಹಳ್ಳಿಯ ಕುಗ್ರಾಮದವನು. ಸಣ್ಣ ಹುಡುಗನಿಂದಲೇ ಮನೆಬಿಟ್ಟು ತಿಪಟೂರಿನ ಅಕ್ಕಿಬಸವರಾಜಯ್ಯನ ಕೊಬ್ಬರಿ ಅಂಗಡಿಯೊಂದರಲ್ಲಿ ಕೂಲಿ ಮಾಡಿಕೊಂಡಿದ್ದವನು. ಒಂದು ದಿನ ಚನ್ವೀರೇಗೌಡರು ಕೊಬ್ಬರಿ ಬಿಡಲು ಹೋದಾಗ ಈ ರುದ್ರಯ್ಯ ಕೊಬ್ಬರಿ ಅಂಗಡಿಯಲ್ಲಿ ಕಣ್ಣಿಗೆ ಬೀಳುತ್ತಾನೆ. ಚುರುಕು ಹುಡುಗ, ಮಾತುಗಳು, ನಡವಳಿಕೆಗಳು ಚನ್ವೀರೇಗೌಡರಿಗೆ ಆಕರ್ಷಕವಾಗುತ್ತಾನೆ.
‘ಅಕ್ಕಿಬಸವರಾಜಯ್ಯನವರೆ, ಈ ಹುಡ್ಗನ್ನ ನಮ್‌ಜೊತೆ ಕಳ್ಸಿಕೊಡಿ, ನನಗೆ ಸಾಕು ಮಗ ಬೇಕು. ನಿಮಗೆ ಗೊತ್ತೆ ಇದೆಯಲ್ಲ. ನನಗೆ ಗಂಡು ಮಕ್ಕಳಿಲ್ಲ’
‘ಏನೋ ರುದ್ರಯ್ಯ, ಈ ಗೌಡ್ರ ಜತೆ ಹೋಗ್ತೀಯೇನೋ’ ನಗು ನಗುತ್ತಲೇ ಅಕ್ಕಿಬಸವರಾಜಯ್ಯ ಕೇಳಿದಾಗ
‘ಬುದ್ದಿ, ನೀವು ಎಲ್ಲಿಗಾರ ಕಳ್ಸಿ ಹೋಗ್ತೀನಿ, ಆದ್ರೆ ನಮ್ಮೂರಿಗೆ ಮಾತ್ರ ಹೋಗಲ್ಲ’ ರುದ್ರಯ್ಯ ನಗುತ್ತಲೇ ಹೇಳುತ್ತಾನೆ.
ರುದ್ರಯ್ಯ ಊರೊಳಗೆ ಹೋಗಿ ಖಾಲಿ ಮನೆಯಿರುವ ಮಾಹಿತಿಯನ್ನು ಕಲೆಹಾಕಿಕೊಂಡು ಬಂದು
‘ಅಪ್ಪಯ್ಯ ಮನೆಗಳೇನೋ ಖಾಲಿ ಇವೆ. ಆದ್ರೆ ಅರ‍್ಯಾರೂ ಹರಿಜನರಿಗೆ ಮನೆ ಕೊಡಲ್ವಂತೆ, ಚೇರ್‌ಮನ್ರು ಹೇಳಿದಾರೆಂದು ಕೇಳಿದರೂ ಕೊಡಲ್ಲ ಅಂದ್ರು’.
ಚೇರ್‌ಮನ್ ಚನ್ವೀರೇಗೌಡರಿಗೆ ಚಿಂತೆ ಕಾಡತೊಡಗಿತು.
‘ಅಪ್ಪಾಜಿ, ಈ ಊರಿನಾಗಿ ಇವರಿಗೆ ಮನೆಯಂತೂ ಗ್ಯಾರಂಟಿ ಸಿಗಲ್ಲ. ನೀವು ಕೊಬ್ಬರಿ, ರಾಗಿ, ಜೋಳ ಹಾಕ್ತೀರಲ್ಲ ಆ ಗೋಡನ್ ಪಕ್ಕ ಐತಲ್ಲ ಆ ರೂಮ್ ಕೊಡ್ರಿ. ಅಲ್ಲೇ ಇದ್ಕಂಡ್ ಹೋಗ್ಲಿ’
‘ಅಲ್ಲೋ ಆ ರೂಂನಾಗೆ ಗೊಬ್ರದ್‌ಚೀಲ ಇದವಲ್ಲೋ’
‘ಅವನ್ನ ಗೋಡಂಗೆ ಹಾಕಿದ್ರಾಯ್ತು, ಅದನ್ನ ಖಾಲಿ ಮಾಡಿ ಕೊಡ್ತೀನಿ ತಗಳ್ರೀ’
‘ಅದೂ ಸರಿ ಕಣ ರುದ್ರಯ್ಯ, ಎಲ್ಲಾ ಖಾಲಿ ಮಾಡಿ ಕಸಗುಡಿಸಿ ಆಯಮ್ಮನಿಗೆ ಏನೂ ಬೇಕೋ ಕೇಳಿ ಸಹಾಯ ಮಾಡು’ ಎಂದರು ಚನ್ವೀರೇಗೌಡ್ರು,
‘ನೋಡಮ್ಮ ಸದ್ಯಕ್ಕೆ ಆ ರೂಂನಲ್ಲಿರು. ಮುಂದೆ ನೋಡೋಣ, ನಿನಗೆ ರುದ್ರಯ್ಯ ಎಲ್ಲಾ ಸಹಾಯ ಮಾಡ್ತಾನೆ, ಸ್ವಲ್ಪಹೊತ್ತು ಇರ‍್ರಿ, ಊಟ ಮಾಡ್ಕಂಡು ಆ ರೂಂಗೆ ಹೋಗಾನಂತ್ರಿ’ ಎಂದು ತಿಳಿಸಿ ಚನ್ವೀರೇಗೌಡರು ಮನೆ ಒಳಗೆ ಹೋದರು.
‘ಯಜಮಾನ್ರೇ, ನೀವು ಸ್ವಲ್ಪಹೊತ್ತು ಊಟ ಮಾಡಿ ಇಲ್ಲೇ ಇರ‍್ರೀ, ರೂಂ ಅನ್ನು ರೆಡಿ ಮಾಡ್ತೀನಿ’ ಎಂದು ರೂಂ ಕಡೆ ಹೆಜ್ಜೆ ಹಾಕುತ್ತಾನೆ.
‘ಯಜಮಾನ್ರೇ, ರೂಂ ರೆಡಿಯಾಯ್ತು, ನೀರಿಗೆ ಡ್ರಂ ಇಟ್ಟಿವ್ನಿ, ಕೊಡಪಾನ, ಬಕೆಟ್ಟು, ತಂಬಿಗೆ, ಹಾಸಿಗೆ, ಹೊದಿಕೆ ಎಲ್ಲಾವೂ ಇಟ್ಟಿವ್ನಿ. ಚಾಪೆ ಇದೆ, ಇನ್ನೂ ಏನಾದ್ರೂ ಬೇಕಾದ್ರೆ ಕೇಳ್ರೀ ಇಲ್ಲೇ ಇರ‍್ತೀನಿ’ ಎಂದು ಹೇಳಿ ರುದ್ರಯ್ಯ ಮನೆಯೊಳಗೆ ಹೋಗುತ್ತಾನೆ.
ಶಬ್ದಮಣಿ ಹಾಗೂ ದುರುಗಪ್ಪ ಇಬ್ಬರೂ ಕೊಠಡಿಗೆ ಹೋಗಿ ನೋಡುತ್ತಾರೆ. ಪರವಾಗಿಲ್ಲ, ಇರಬಹುದು. ಸ್ವಲ್ಪದಿವಸ ಸೀತವ್ವಳನ್ನು ಕರಿಯಮ್ಮನ ಜೊತೆ ಬಿಡಲು ನಿರ್ಧಸಿರುತ್ತಾನೆ.
ಒಂದಿನ ರುದ್ರಯ್ಯನಿಗೆ ಮಲೇರಿಯಾ ಜ್ವರಬಂದು ಹಾಸಿಗೆ ಹಿಡಿಯುತ್ತಾನೆ. ಶಬ್ದಮಣಿಗೆ ಕುಡಿಯುವ ನೀರು ಬೇಕಾಗಿದ್ದರಿಂದ ಸೇದೋಬಾವಿಗೆ ಹೋದಾಗ ಅವಳಿಗೆ ಕಹಿ ಅನುಭವ ಆಗುತ್ತದೆ. ಏನೆಂದರೆ ಶಬ್ದಮಣಿಯೇ ಸೇದೋಬಾವಿಯಲ್ಲಿ ಕೊಡಪಾನವನ್ನು ಬಿಟ್ಟು ನೀರನ್ನು ಸೇದುವಂತಿರಲಿಲ್ಲ. ಅಲ್ಲಿನ ಜನರು
‘ಸ್ಪಲ್ವ ಆ ಕಡೆ ನಿಂತು ಕೊಡ ಅಲ್ಲಿಡಮ್ಮ, ನೀರನ್ನು ಅದರೊಳಗೆ ಹಾಕ್ತೀವಿ. ಆಗ ಕೊಡಪಾನವನ್ನ ತಗೊಂಡು ಹೋಗು’ ಅಂದಾಗ ಶಬ್ದಮಣಿಗೆ ಅವಮಾನವಾಯಿತು. ‘ನಾನೇಕೆ ಬಾವಿಯಲ್ಲಿ ನೀರು ಸೇದಬಾರದು, ನಾನೇನು ನಿಮ್ಮತರ ಮನುಷ್ಯಳಲ್ಲವೇ’ ಪ್ರಶ್ನಿಸಿದಾಗ ಊರಿನ ಜನರೆಲ್ಲಾ ಜಗಳಕ್ಕೆ ನಿಲ್ಲುತ್ತಾರೆ.
ದುರಗಪ್ಪ ಸೇದೋಬಾಯಿಯ ಹತ್ತಿರ ಬಂದು, ಜಗಳಕ್ಕೆ ನಿಂತಿದ್ದ ಜನರಿಗೆ. . ..
‘ತಪ್ಪಾಯಿತು, ಕ್ಷಮಿಸಿ, ಇನ್ನು ಮುಂದೆ ಈ ತರ ಮಾಡದಂತೆ ನನ್ನ ಮಗಳಿಗೆ ಬುದ್ಧವಾದ ಹೇಳುತ್ತೇನೆ.’ ಎಂದು ಜನರನ್ನು ಸಮಾಧಾನಿಸಿ ತನ್ನ ಮಗಳಿಗೆ ಸಮಾಧಾನ ಮಾಡಿ. . .
‘ನೋಡಮ್ಮ ಈ ಜನರ ಜೊತೆ ಜಗಳವಾಡಬೇಡ. ಅವರ ನಂಬಿಕೆಗೆ ನಾವು ಬೆಲೆಕೊಟ್ಟರಾಯಿತು. ಸುಮ್ನೆ ಬಾ’ ಎಂದು ಕರೆದುಕೊಂಡು ಹೋದ.
ಚನ್ವೀರೇಗೌಡರಿಗೆ ಹೇಗೋ ಸುದ್ದಿ ಮುಟ್ಟುತ್ತದೆ. ‘ನೀನು ಸುಮ್ನೆ ಇರ‍್ಬಾದೇನವ್ವ, ನಿನಗೆ ನೀರು ಬೇಕು ತಾನೆ ರುದ್ರಯ್ಯ ತಂದ್ಕೊಡ್ತಾನೆ. ನೀನು ಜನರತ್ರ ಹ್ಯಾಕ್ ಹೋಗಿದ್ದವ್ವ’ ಶಬ್ದಮಣಿಗೆ ಬುದ್ಧಿವಾದ ಹೇಳಿ ಸುಮ್ಮನಾಗಿಸುತ್ತಾನೆ. ಆದರೂ ಶಬ್ದಮಣಿಗೆ ಅದೇನೋ ಹಟ ಕಾಡುತ್ತಿತ್ತು. ಏಕೆ ಈ ಜನ ನಮ್ಮನ್ನು ಕಂಡರೆ ಅಷ್ಟು ಅವಮಾನ ಮಾಡುತ್ತಾರೆ. ಏನಾದರಾಗಲೀ ಸೇದೋ ಬಾವಿಯಲ್ಲಿ ನೀರನ್ನು ಸೇದಲೇಬೇಕೆಂದು ಹಟಮಾಡಿ ತನ್ನ ಮೇಲಾಧಿಕಾರಿಗಳಿಗೂ ಜಗಳೂರಿನ ತಹಸಿಲ್ದಾರರಿಗೆ ಒಂದು ಅರ್ಜಿಯನ್ನು ಬರೆಯುತ್ತಾಳೆ.
ಊರಿನೊಳಗೆ ಯಾವುದೋ ಸರ್ಕಾರಿ ಜೀಪುಗಳು ನುಗ್ಗಿ ಬರುವುದನ್ನು ಊರಿನ ಜನರು ಅಚ್ಚರಿಯಿಂದ ನೋಡುತ್ತಾರೆ. ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಜನರೆಲ್ಲಾ ಜಮಾಯಿಸುತ್ತಾರೆ. ಚೇರ್‌ಮನ್ ಚನ್ವೀರೇಗೌಡರಿಗೆ ತಹಸಿಲ್ದಾರರಿಂದ ಕರೆ ಹೋಗುತ್ತದೆ.
‘ನಮುಸ್ಕಾರ ಸ್ವಾಮಿ,’ ಎರಡು ಕೈಮುಗಿದು ನಿಂತು ಬಂದ ಕಾರಣವನ್ನು ಕೇಳುತ್ತಾನೆ ಚನ್ವೀರೇಗೌಡ.
‘ನೋಡ್ರೀ ಗೌಡ್ರೆ, ನಿಮ್ ಊರ‍್ನಲ್ಲಿ ಹರಿಜನ ಸಮುದಾಯದ ಗೌರ‍್ಮೆಂಟ್ ನೌಕರಳಾದ ಶಬ್ದಮಣಿಯಮ್ಮಗೆ ಬಾವಿಯಲ್ಲಿ ನೀರು ಸೇದಲು ಅವಕಾಶ ಕೊಡಲಿಲ್ಲವೆಂದು ದೂರು ಬಂದಿದೆ’.
‘ಸಾಹೇಬ್ರೇ, ಇದೆಲ್ಲಾ ಮಾಮೂಲಿ ಈ ಊರ‍್ನಲ್ಲಿ, ನಾನು ಸರಿಮಾಡ್ತಿನಿ ಬಿಡ್ರೀ ಸಾಹೇಬ್ರೇ’
‘ನೋಡಿ ಗೌಡ್ರೇ, ಆ ಶಬ್ದಮಣಿಯಮ್ಮನ್ನ ಹಾಗೂ ಊರಲ್ಲಿರೋ ಕೆಲವು ಜನರನ್ನು ಇಲ್ಲಿಗೆ ಕರೆಸ್ರೀ, ವಿಚಾರಣೆ ಮಾಡಿ ಹೋಗ್ತೀನಿ, ಮುಂದೆ ಇದೆಲ್ಲಾ ಆಗ್‌ಬರ್ದ್ ನೋಡ್ರೀ, ಇದೆಲ್ಲಾ ಅಟ್ರಾಸಿಟಿ ಆಗ್‌ಬಿಡುತ್ತೆ. ಹರಿಜನರನ್ನು ಮಾನವೀಯತೆಯಿಂದ ನೊಡ್ಕೊಳ್ಬೇಕು, ಸರಿಯನಾ’
‘ಆಯ್ತು ಸಾಹೇಬ್ರೇ’ ಚನ್ವೀರೇಗೌಡರು, ಶಬ್ದಮಣಿ ಹಾಗೂ ಊರಿನ ಕೆಲವು ಮುಖಂಡರನ್ನು ಗ್ರಾಮ ಪಂಚಾಯಿತಿ ಕಚೇರಿಗೆ ಕರೆಸಿದರು. ಪ್ರತಿಯೊಬ್ಬರಿಂದ ಹೇಳಿಕೆ ಪಡೆದು. . .
‘ಇನ್ನು ಮುಂದೆ ಹರಿಜನರು ಯಾರೇ ಸೇದೋಬಾವಿಯಲ್ಲಿ ನೀರು ಸೇದಿದರೆ ಯಾರೂ ಅಡ್ಡಿ ಮಾಡುವ ಹಾಗಿಲ್ಲ. ಒಂದು ವೇಳೆ ಯಾರಾದರೂ ತೊಂದರೆ ಮಾಡಿದರೆ ನಿಮ್ಮ ಮೇಲೆ ಕೇಸ್ ಹಾಕಿ ಕಂಬಿ ಒಳಗೆ ಸೇರಿಸ್ತೀನಿ ಹುಷಾರ್’. . . . ತಹಸಿಲ್ದಾರರು ಎಚ್ಚರಿಕೆ ನೀಡಿದರು.
‘ರೀ, ಶಬ್ದಮಣಿಯಮ್ನೋರೆ ನೀವು ಇನ್ನು ಮುಂದೆ ನೀರು ಸೇದಿಕೊಳ್ಳಬಹುದು. ನಿಮಗೆ ಯಾರಾದರೂ ತೊಂದರೆ ಕೊಟ್ಟರೆ ಹೇಳಿ ಅವರ ಮೇಲೆ ಕೇಸ್ ಹಾಕ್ತೀನಿ’ ಎಂದು ಸಮಾಧಾನ ಹೇಳಿ ತಹಸಿಲ್ದಾರರು ನಿರ್ಗಮಿಸಿದರು.
ಚನ್ವೀರೇಗೌಡರು.. . .
‘ನೋಡಮ್ಮ ನಿನಗೆ ನೀರು ಬೇಕಾದ್ರೆ ನಮ್ಮ ರುದ್ರಯ್ಯ ತಂದು ಕೊಡ್ತಾನೆ. ನೀನು ಯಾರಿಗೂ ಕಂಪ್ಲೇಂಟ್ ಮಾಡ್‌ಬೇಡ’ ಎಂದು ಶಬ್ದಮಣಿಗೆ ಹೇಳಿದರು.
ಆದರೆ ಶಬ್ದಮಣಿ ಹಟದಿಂದ ಪ್ಲಾಸ್ಟಿಕ್ ಕೊಡವನ್ನು ತೆಗೆದುಕೊಂಡು ನೀರನ್ನು ಸೇದಲು ಅಂದೇ ಹೋಗಿ ಬಾವಿಯೊಳಗೆ ಹಗ್ಗಬಿಟ್ಟು ನೀರನ್ನು ಸೇದುಕೊಂಡೇ ಬಂದು ಸಮಾಧಾನದ ನಿಟ್ಟುಸಿರುಬಿಟ್ಟಳು.
ಶಬ್ದಮಣಿ ನೀರನ್ನು ಸೇದೋಬಾವಿಯಲ್ಲಿ ಸೇದಿ ತೆಗೆದುಕೊಂಡು ಹೋದ ವಿಷಯ ಊರೆಲ್ಲಾ ಒಬ್ಬರ ಬಾಯಿಯಿಂದ ಮೊತ್ತೊಬ್ಬರ ಬಾಯಿಗೆ ಹೋಗಲು ತಡವಾಗಲಿಲ್ಲ. ಒಂದೇ ಸಮನೆ ಊರಲ್ಲಿ ಗುಸುಗುಸು ಮಾತುಗಳು ಆರಂಭವಾದವು.
ಹೀಗೇ ಊರಿನಲ್ಲಿ ಸಂಚಲನವಾಗಿ ಹೊಸರೂಪ ಪಡೆದುಕೊಂಡಿತು. ಅಂದಿನಿಂದ ಊರಿನಲ್ಲಿ ಯಾರೂ ಶಬ್ದಮಣಿ ನೀರು ಸೇದಿದ ಬಾವಿಯಿಂದ ನೀರು ಸೇದದೇ ಊರಿನ ಪಕ್ಕದಲ್ಲೇ ಇರುವ ಮತ್ತೊಂದು ಬಾವಿಯಲ್ಲಿ ನೀರು ಸೇದಲು ಶುರುಮಾಡಿದರು.
ಶಬ್ದಮಣಿಗೆ ಈ ಊರೇ ಬೇಡವಾಯಿತು. ಈ ಜನರು ಬದಲಾಗುವುದಿಲ್ಲ. ನಮ್ಮನ್ನು ಮಾನವೀಯತೆಯಿಂದ ನೋಡುವುದಿಲ್ಲವೆಂದು ಖಚಿತಪಡಿಸಿಕೊಂಡು ವರ್ಗಾವಣೆ ಮಾಡಲು ತನ್ನ ಮೇಲಾಧಿಕಾರಿಗೆ ಅರ್ಜಿಯನ್ನು ಗುಜರಾಯಿಸಿದಳು. ದುರುಗಪ್ಪ ತನ್ನ ಹೆಂಡತಿ ಸೀತವ್ವಳನ್ನು ಕರಿಯಮ್ಮನೊಂದಿಗೆ ಬಿಟ್ಟು ತನ್ನ ಊರಿಗೆ ಹೋಗಿದ್ದ. ಎಷ್ಟು ದಿನ ಅಂತ ರಜೆ ಹಾಕುತ್ತಾನೆ. ಅದೂ ಅಲ್ಲದೇ ಅಂಚೆಕಚೇರಿ ಕೆಲಸ ಬೇರೆ. ತನ್ನ ಮಗಳನ್ನು ತನ್ನ ಊರಕಡೆ ವರ್ಗಾವಣೆ ಮಾಡಿಸಿಕೊಳ್ಳಲು ಆ ತಾಲ್ಲೂಕಿನ ಎಂ.ಎಲ್.ಎ ಸಾಬೇಬರನ್ನು ಕಾಣಲು ನಿರ್ಧರಿಸಿದನು.
ಇತ್ತ ಶಬ್ದಮಣಿಗೂ ರುದ್ರಯ್ಯನಿಗೂ ಅನುರಾಗದ ಭಾವಗಳು ಚಿಗುರೊಡೆದವು. ಬರುಬರುತ್ತಾ ಶಬ್ದಮಣಿಯು ರುದ್ರಯ್ಯನನ್ನೆ ಮದುವೆ ಆದರೆ ಆಗಬೇಕು. ಇಲ್ಲದಿದ್ದರೆ ಮದುವೆಯೇ ಬೇಡ ಎಂದು ತೀರ್ಮಾನಿಸಿದ್ದಳು.
ಊರಿಗೆ ಹೋದಾಗ ತನ್ನ ತಂದೆ ದುರುಗಪ್ಪನ ಮುಂದೆ ವಿಚಾರವನ್ನು ತೆಗೆದಳು. ‘ಅಪ್ಪಯ್ಯ, ನೀನು ತಪ್ಪು ತಿಳಿಯಬೇಡ, ನಾನು ರುದ್ರಯ್ಯನನ್ನು ಇಷ್ಟಪಡ್ತಿದ್ದೀನಿ, ಅವನನ್ನೇ ಮದ್ವೆ ಆಗಲು ಇಷ್ಟಪಡ್ತೀನಿ.’ ಎಂದಾಗ ಸಿಡಿಲು ಬಂದು ಎರಗಿದಂತೆ ದುರುಗಪ್ಪನಿಗೆ ಅದೆಲ್ಲಿಂದ ಸಿಟ್ಟು ಬಂತೋ ಶಬ್ದಮಣಿಯ ಕಪಾಳಕ್ಕೆ ಹೊಡೆಯುತ್ತಾನೆ. ‘ಹುಡ್ಗಾಟ ಮಾಡ್ಕಂಡಿಯಾ, ನಮ್ ಜಾತಿಯೆಲ್ಲಿ, ಅವನ್ ಜಾತಿ ಎಲ್ಲಿ. ಸುಮ್ನೆಬಿಡ್ತಾರ ನಮ್ ನೆಂಟ್ರು’.
ಬಿಕ್ಕಳಿಸಿ ಅಳುತ್ತಾಲೇ ಶಬ್ದಮಣಿಯು. . . .‘ನೀವು ಹೊಡೀರಿ ಬಡೀರಿ, ನಾನು ಅವನನ್ನೇ ಮದ್ವೆ ಆಗೋದು’ ಎಂದು ಅಳುತ್ತಾ ಬಿದ್ದುಕೊಂಡಳು.
ಕೊನೆಗೆ ಶಬ್ದಮಣಿ ಒಂದು ತೀರ್ಮಾನ ತೆಗೆದುಕೊಂಡಳು. ಕೆಲವು ಸ್ನೇಹಿತರನ್ನು ಕರೆದುಕೊಂಡು ಹೋಗಿ ರುದ್ರಯ್ಯನನ್ನು ಧರ್ಮಸ್ಥಳದಲ್ಲಿ ಮದುವೆ ಮಾಡಿಕೊಂಡು ಬಂದಳು.
ಶಬ್ದಮಣಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಾದವು. ಅವಳ ಮನಸ್ಸಿನಲ್ಲಿ ಜಾತಿಚೇಳುಗಳು ಕಟುಕುತ್ತಲೇ ಇದ್ದವು. ನಾಯಿಗೆರೆಯಲ್ಲಿ ಸ್ವಲ್ಪ ವರ್ಷಗಳು ಕಳೆದು ರಾಂಪುರಕ್ಕೆ ವರ್ಗಾವಣೆ ಮಾಡಿಸಿಕೊಂಡು ಬಂದು ಕೆಲಸ ಮಾಡುತ್ತಿದ್ದಳು.
ರಾಂಪುರದಲ್ಲಿ ಶಬ್ದಮಣಿಗೆ ನೆಲೆ ನಿಲ್ಲುವಂತಾಯಿತು. ರುದ್ರಯ್ಯನಿಗೆ ಒಂದು ರೇಷನ್ ಅಂಗಡಿಯನ್ನು ಇಟ್ಟುಕೊಟ್ಟಳು ಪ್ರಮುಖ ರಸ್ತೆಯಲ್ಲಿ. ದಿನದಿನಕ್ಕೂ ರುದ್ರಯ್ಯನ ಜಾಣತನದಿಂದ ರೇಷನ್ ಅಂಗಡಿಯ ವ್ಯಾಪಾರ ವೃದ್ಧಿಯಾಗುತ್ತಾ ಹೋಯಿತು. ಮಕ್ಕಳಿಬ್ಬರೂ ಚೆನ್ನಾಗಿ ಓದಿ ಡಿಗ್ರಿಯನ್ನು ಪಾಸುಮಾಡಿದರು. ಆ ಇಬ್ಬರು ಮಕ್ಕಳಿಗೆ ಮದುವೆಯನ್ನೂ ಮಾಡಿ ಜವಾಬ್ಧಾರಿಯನ್ನು ಕಳೆದುಕೊಂಡರು. ಮನೆಯನ್ನು ಕಟ್ಟಿಸಿದ್ದೂ ಆಯಿತು. ತೆಂಗಿನ ತೋಟವನ್ನು ಖರೀದಿಸಿದ್ದೂ ಆಯಿತು. ಹೀಗಿರುವಾಗ ರುದ್ರಯ್ಯನಿಗೆ ವ್ಯಾಪಾರದಲ್ಲಿ ಬಹಳವೇ ಲಾಭವಾಯಿತು.
ಶಬ್ದಮಣಿಗೂ ಪ್ರಮೋಷನ್ ಆಗಿ ಉನ್ನತ ದರ್ಜೆಯ ಕೆಲಸದಲ್ಲಿದ್ದಳು. ಸರ್ವಜ್ಞ ವಚನವೊಂದು ರುದ್ರಯ್ಯನಿಗೆ ಅನ್ವಯವಾಗುತ್ತಿತ್ತು. ‘ಬೆಚ್ಚನೆಯ ಮನೆಯಿದ್ದು ಇಚ್ಚೆಯನರಿವ ಹೆಂಡತಿಯಿರಲು ಸ್ವರ್ಗಕ್ಕೆ ಕಿಚ್ಚುಹಚ್ಚೆಂದು ಸರ್ವಜ್ಞ’.
ಕೆಟ್ಟವರ ಸಹವಾಸವೇ ರುದ್ರಯ್ಯನಿಗೆ ಮುಳುವಾಯಿತು. ರುದ್ರಯ್ಯನ ಗೆಳೆಯರು ಊರೊಳಗಿರುವ ಗಂಡಬಿಟ್ಟ ಸುಭದ್ರಮ್ಮಳನ್ನು ರುದ್ರಯ್ಯನಿಗೆ ಗಂಟುಹಾಕಿದರು. ಸುಭ್ರದಮ್ಮನ ಕಣ್ಣು ರುದ್ರಯ್ಯನ ಮೇಲೆಬಿದ್ದು ಗಾಳಹಾಕಿ ರುದ್ರಯ್ಯನನ್ನು ಹೇಗಾದರೂ ಮಾಡಿ ತನ್ನ ವಶಕ್ಕೆ ಪಡೆದುಕೊಳ್ಳುವ ತಂತ್ರಗಳಲ್ಲಿ ಯಶಸ್ವಿಯಾದಳು. ಎಡೆಯೂರಿನಲ್ಲಿ ಮದುವೆಯನ್ನು ಮಾಡಿಕೊಂಡು ರುದ್ರಯ್ಯನ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದಳು.
ಗುಟ್ಟು ರಟ್ಟಾಗಲು ಬಹಳ ದಿನಗಳು ಆಗಲಿಲ್ಲ. ಹೇಗೋ ಶಬ್ದಮಣಿಗೆ ಗೊತ್ತಾಯಿತು.
ರುದ್ರಯ್ಯನನ್ನು ಹೀನಾಯ ಬೈದಳು ಶಬ್ದಮಣಿ
‘ನಿಮಗೆ ನಾನೇನು ಕಡಿಮೆ ಮಾಡಿದ್ದೆ?, ಅವಳ್ಯಾವಳೋ ನಾಯಿಮುಟ್ಟಿದ ಮಡಕೆಯನ್ನು ಮದುವೆಯಾಗಿದ್ದೀರಲ್ರೀ. ನಿಮಗೆ ನಾಚಿಕೆಯಾಗಬೇಕು’ ಎಷ್ಟೇ ಬೈದರೂ ರುದ್ರಯ್ಯ ಒಂದೂ ಮಾತನಾಡಲಿಲ್ಲ. ಆದರೂ ಶಬ್ದಮಣಿ ಬಿಡಲಿಲ್ಲ.
ತೋಟದ ಮನೆಗೆ ಹೋಗಿ ಸುಭದ್ರಮ್ಮನನ್ನು ಹಿಗ್ಗಾಮುಗ್ಗಾ ಬೈದು ಹೊಡೆದು ಹೊರಗೆ ಅಟ್ಟಿದಳು. ಮತ್ತೆ ಈ ಕಡೆ ಸುಳಿಯದಂತೆ ಎಚ್ಚರಿಕೆ ನೀಡಿ ತೋಟದಮನೆಗೆ ಬೀಗ ಹಾಕಿ ರುದ್ರಯ್ಯನೊಂದಿಗೆ ಮನೆಗೆ ಹಿಂತಿರುಗಿದಳು. ರುದ್ರಯ್ಯ ಬಾಲಸುಟ್ಟ ಬೆಕ್ಕಿನಂತೆ ಆಗಿದ್ದ. ರುದ್ರಯ್ಯ ಏನೂ ಹೇಳಲು ಅಸಹಾಯಕನಾಗಿದ್ದ. ಅವನೊಳಗೆ ಸುಭದ್ರಮ್ಮನೇ ತುಂಬಿದ್ದಳು. ಹೇಗಾದರೂ ಮಾಡಿ ಮನೆಬಿಟ್ಟು ಹೋಗಬೇಕೆಂದು ಸಂಚುಹಾಕುತ್ತಿದ್ದ. ನಂಬಿಕೆ ದ್ರೋಹ ಮಾಡಿದ ರುದ್ರಯ್ಯನನ್ನು ಶಬ್ದಮಣಿ ಕ್ಷಮಿಸಲು ಸಾಧ್ಯವಾಗಲಿಲ್ಲ. ರುದ್ರಯ್ಯನನ್ನು ಹೊರಗೆ ಹೋಗದಂತೆ ಬಂಧನದಲ್ಲಿಟ್ಟಳು.
ಅಂದು ಭೀಮನ ಅಮವಾಸ್ಯೆ ಕಗ್ಗತ್ತಲು ಕವಚಿತ್ತು. ರಣಕತ್ತಲು ಕೇಕೆ ಹಾಕುತ್ತಿತ್ತು. ಕರೆಂಟು ಬೇರೆ ಹೋಗಿತ್ತು. ಸರಿರಾತ್ರಿ ಶಬ್ದಮಣಿ ಗಾಢವಾದ ನಿದ್ರೆಯಲ್ಲಿದ್ದಳು. ರುದ್ರಯ್ಯನ ವಿಷಯುಕ್ತ ಮನಸ್ಸು ಏನೇನೋ ಯೋಚಿಸುತ್ತಿತ್ತು.
ರುದ್ರಯ್ಯನಿಗೆ ಸುಭದ್ರಮ್ಮನ ಒಲವು ಬಹಳ ಕಾಡುತ್ತಿತ್ತು. ಮನಸ್ಸಿಗೆ ಮಂಕು ಕವಿದಿತ್ತು. ತಾನೇನು ಮಾಡುತ್ತೇನೆಂದು ಅವನಿಗೆ ಪರಿವೇ ಇರಲಿಲ್ಲ. ದಿಢೀರನೆ ಎದ್ದು ಶಬ್ದಮಣಿಯನ್ನಯ ನೋಡುತ್ತಾನೆ. ಶಬ್ದಮಣಿ ಗಾಢವಾದ ನಿದ್ರೆಯಲ್ಲಿರುತ್ತಾಳೆ. ಪಕ್ಕದಲ್ಲಿರುವ ತಲೆದಿಂಬನ್ನು ತೆಗೆದುಕೊಂಡು ಶಬ್ದಮಣಿಯ ಮುಖಕ್ಕಿಟ್ಟು ಅದುಮೇ ಅದುಮುತ್ತಾನೆ. ಕೆಲವೇ ಕ್ಷಣಗಳು ಶಬ್ದಮಣಿಯ ಚಲನೆ ನಿಂತುಹೋಗುತ್ತದೆ. ಒಳಗಡೆಯ ಕಿಲಕ ತೆಗೆದು ಹೊರಗಡೆ ಬಾಗಿಲಿಗೆ ಚಿಲಕ ಹಾಕಿ ರಗ್ಗನ್ನು ಹೊದ್ದುಕೊಂಡು ಸುಭದ್ರಮ್ಮನ ಮನೆಕಡೆ ಹೆಜ್ಜೆ ಹಾಕುತ್ತಾನೆ. ಶಬ್ದಮಣಿಯ ಜೀವನದ ಮಹಾಯಾನ ಅಂತ್ಯವಾಗಿ ಕಥೆಗೊಂದು ಶೀರ್ಷಿಕೆಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.