ADVERTISEMENT

ಎಡ್ಗರ್ ಅಲನ್ ಪೋ ಅವರ ‘ಹೃದಯ ಹೇಳಿದ ಕಥೆ’

ಪ್ರಜಾವಾಣಿ ವಿಶೇಷ
Published 2 ಆಗಸ್ಟ್ 2025, 23:59 IST
Last Updated 2 ಆಗಸ್ಟ್ 2025, 23:59 IST
   

ಮೂಲ: ಎಡ್ಗರ್ ಅಲನ್ ಪೋ

ಕನ್ನಡಕ್ಕೆ: ಜ್ಯೋತಿ

ನಿಜ!- ನಾನು ಭಯಂಕರ ನರ್ವಸ್‌ ಆಗಿದ್ದೆ, ಈಗಲೂ ಆಗಿದ್ದೇನೆ; ಆದರೆ ನೀವು ನನ್ನ ಹುಚ್ಚ ಎಂದು ಏಕೆ ಹೇಳುತ್ತೀರಿ? ನಿಜ, ನನಗೆ ಒಂದು ಕಾಯಿಲೆ ಇತ್ತು. ಆದರೆ, ಅದು ನನ್ನ ಇಂದ್ರೀಯಗಳನ್ನು ಚುರುಕುಗೊಳಿಸಿದೆ- ಅವುಗಳನ್ನು ನಾಶ ಮಾಡಲಿಲ್ಲ - ಮಂದಗೊಳಿಸಲಿಲ್ಲ. ವಿಶೇಷವಾಗಿ, ನನ್ನ ಶ್ರವಣಶಕ್ತಿ ತುಂಬಾ ಚೆನ್ನಾಗಿದೆ. ನನಗೆ, ಸ್ವರ್ಗ ಮತ್ತು ಭೂಮಿಯಲ್ಲಿರುವ ಎಲ್ಲಾ ಶಬ್ದಗಳು ಚೆನ್ನಾಗಿ ಕೇಳಿಸುತ್ತವೆ, ನರಕದಲ್ಲಿನ ಅನೇಕ ಶಬ್ದಗಳು ಕೂಡ ಕೇಳಿಸುತ್ತವೆ. ಹೀಗಿದ್ದೂ, ನನ್ನ ಹುಚ್ಚ ಎಂದು ಹೇಗೆ ಹೇಳುತ್ತೀರಿ? ನನ್ನ ಮಾತನ್ನು ಸ್ವಲ್ಪ ಕೇಳಿಸಿಕೊಳ್ಳಿ! ನೋಡಿ, ನಾನು ಎಷ್ಟು ಆರೋಗ್ಯಕರವಾಗಿದ್ದೇನೆ - ನಾನು, ನಿಮಗೆ ಈ ಪೂರ್ಣಕಥೆಯನ್ನು ಎಷ್ಟು ಶಾಂತವಾಗಿ ಹೇಳಬಲ್ಲೆ, ಗೊತ್ತಾ?...

ADVERTISEMENT

ಈ ಕೊಲೆ ಮಾಡುವ ವಿಚಾರ ನನ್ನ ತಲೆಗೆ ಹೇಗೆ ಹೊಕ್ಕಿತು ಎಂದು ಹೇಳುವುದು ಅಸಾಧ್ಯ; ಆದರೆ, ಒಮ್ಮೆ ಆ ವಿಚಾರ ಮೂರ್ತರೂಪ ಪಡೆದ ಮೇಲೆ, ಹಗಲು ರಾತ್ರಿ ಅದು ನನ್ನ ಮನಸ್ಸನ್ನು ಕಾಡಲಾರಂಭಿಸಿತು. ನನಗೆ ಆ ಮನೆಯ ಯಾವುದೇ ಬೆಲೆ ಬಾಳುವ ವಸ್ತು ಬೇಕಿರಲಿಲ್ಲ. ಯಾವುದೇ ತೀವ್ರ ಭಾವನೆಗಳು ಈ ಕೊಲೆಗೆ ಕಾರಣವಾಗಿರಲಿಲ್ಲ. ನಿಜ ಹೇಳಬೇಕೆಂದರೆ, ನಾನು ಆ ಮುದುಕನನ್ನು ಪ್ರೀತಿಸುತ್ತಿದ್ದೆ. ಅವನು ನನಗೆ ಯಾವತ್ತೂ ಅನ್ಯಾಯ ಮಾಡಿಲ್ಲ, ಅವಮಾನ ಮಾಡಿಲ್ಲ. ಅವನ ಬಂಗಾರದ ಮೇಲೆ ನನಗೆ ಆಸೆ ಇರಲಿಲ್ಲ. ಅದು... ಕೊಲೆಗೆ ಕಾರಣ ಅವನ ಒಂದು ಕಣ್ಣು ಎಂದು ನಾನು ಭಾವಿಸುತ್ತೇನೆ! ಹೌದು, ಆ ಕಣ್ಣು! ಅವನ ಒಂದು ಕಣ್ಣು ರಣಹದ್ದಿನ ಕಣ್ಣಿನಂತೆ ಕಾಣಿಸುತ್ತಿತ್ತು- ಮಸುಕಾದ ನೀಲಿ ಕಣ್ಣು, ಅದರ ಮೇಲೆ ಪೊರೆ ಬಂದಿತ್ತು. ಅದು, ನನ್ನ ಮೇಲೆ ಬಿದ್ದಾಗಲೆಲ್ಲ ನನ್ನ ಮೈಯ ರಕ್ತವೆಲ್ಲಾ ತಣ್ಣಗಾಗುತ್ತಿತ್ತು; ನಿಧಾನವಾಗಿ- ಹಂತ ಹಂತವಾಗಿ- ನಾನು ಆ ಮುದುಕನ ಜೀವ ತೆಗೆಯುವ ಮನಸ್ಸು ಮಾಡಿದೆ. ಈ ಮೂಲಕ ನಾನು ಆ ಕಣ್ಣುಗಳಿಂದ ಮುಕ್ತಿ ಹೊಂದಲು ಬಯಸಿದ್ದೆ.

ವಿಷಯ ಇಷ್ಟೇ... ನೀವು ನನ್ನ ಹುಚ್ಚ ಎಂದು ತಿಳಿದಿದ್ದೀರಿ. ಆದರೆ, ಹುಚ್ಚರಿಗೆ ಏನೂ ಗೊತ್ತಿರುವುದಿಲ್ಲ. ನೀವು ನನ್ನನ್ನು ಆಗ ನೋಡಬೇಕಿತ್ತು. ನಾನು ಎಷ್ಟು ಬುದ್ಧಿವಂತಿಕೆಯಿಂದ - ಎಚ್ಚರಿಕೆಯಿಂದ - ದೂರದೃಷ್ಟಿಯಿಂದ - ಈ ಕೆಲಸ ಮಾಡಲು ಹೋದೆ ಎಂದು ನೀವು ನೋಡಬೇಕಾಗಿತ್ತು! ನಾನು ಅವನನ್ನು ಕೊಲ್ಲುವ ಮೊದಲು, ಒಂದು ವಾರ ಪೂರ್ತಿ ಅವನನ್ನು ತುಂಬಾ ಚೆನ್ನಾಗಿ ನೋಡಿಕೊಂಡೆ. ಪ್ರತಿ ರಾತ್ರಿ, ಮಧ್ಯರಾತ್ರಿ ಹೊತ್ತಿಗೆ, ನಾನು ಅವನ ಬಾಗಿಲಿನ ಕೊಂಡಿಯನ್ನು ತಿರುಗಿಸಿ ಅದನ್ನು ತೆರೆಯುತ್ತಿದ್ದೆ - ಓಹ್, ತುಂಬಾ ನಿಧಾನವಾಗಿ!... ನಂತರ, ನಾನು ನನ್ನ ತಲೆ ಒಳಗೆ ಹಾಕಲು ಸಾಕಾಗುವಷ್ಟು ತೆರೆಯುತ್ತಾ, ನನ್ನ ಲಾಟೀನನ್ನು ಹಚ್ಚದೆ ಕೈಯಲ್ಲಿ ಭದ್ರವಾಗಿ ಇಟ್ಟುಕೊಳ್ಳುತ್ತಿದ್ದೆ. ಸುತ್ತಲೂ ಸಂಪೂರ್ಣ ಕತ್ತಲೆ. ನಾನು ನನ್ನ ತಲೆಯನ್ನು ನಿಧಾನವಾಗಿ ಮುಂದಕ್ಕೆ ತಳ್ಳುತ್ತಿದ್ದೆ. ಓಹ್, ನಾನು ಅದನ್ನು ಎಷ್ಟು ಕುತಂತ್ರದಿಂದ ಒಳಕ್ಕೆ ತಳ್ಳುತ್ತಿದ್ದೆ ಎನ್ನುವುದನ್ನು ನೀವು ನೋಡಿದ್ದರೆ ಖಂಡಿತ ನಗುತ್ತಿದ್ದೀರಿ! ನಾನು ಅದನ್ನು ನಿಧಾನವಾಗಿ ಸರಿಸುತ್ತಿದ್ದೆ - ತುಂಬಾ, ತುಂಬಾ ನಿಧಾನವಾಗಿ. ಅದರಿಂದ ಆ ಮುದುಕನ ನಿದ್ರೆಗೆ ತೊಂದರೆಯಾಗದಂತೆ. ಎಷ್ಟು ನಿಧಾನ ಅಂದರೆ, ನನ್ನ ಪೂರ್ಣ ತಲೆಯನ್ನು ಬಾಗಿಲೊಳಗೆ ತೂರಿಸಲು ನನಗೆ ಸುಮಾರು ಒಂದು ಗಂಟೆ ಹಿಡಿಯುತ್ತಿತ್ತು. ನನಗೆ, ಅವನು ಹಾಸಿಗೆಯ ಮೇಲೆ ಕಣ್ಣು ಮುಚ್ಚಿ ಮಲಗಿದ್ದಾನೆಯೇ ಅಥವಾ ಕಣ್ಣು ತೆರೆದಿದ್ದಾನೆಯೇ ಎಂದು ನೋಡಬೇಕಿತ್ತು. ಹಾ! - ಹೇಳಿ, ಒಬ್ಬ ಹುಚ್ಚ ಇಷ್ಟು ಬುದ್ಧಿವಂತನಾಗಿರುತ್ತಾನೆಯೇ? ನಂತರ, ಆ ಕೋಣೆಯಲ್ಲಿ ನನ್ನ ತಲೆ ಒಳಹೋದಾಗ, ನಾನು ಲಾಟೀನನ್ನು ಎಚ್ಚರಿಕೆಯಿಂದ ತೆರೆಯುತ್ತಿದ್ದೆ - ಓಹ್, ಬಹಳ ಎಚ್ಚರಿಕೆಯಿಂದ - ಎಚ್ಚರಿಕೆಯಿಂದ (ಬಾಗಿಲಿನ ಕೀಲುಗಳು ಕರ್ಕಶ ಸದ್ದು ಮಾಡದಂತೆ) - ನಾನು ಅದನ್ನು ಸ್ವಲ್ಪವೇ ತೆರೆಯುತ್ತಿದ್ದೆ. ಒಂದೇ ಒಂದು ತೆಳುವಾದ ಬೆಳಕಿನ ಕಿರಣ, ಆ ರಣಹದ್ದು ಕಣ್ಣಿನ ಮೇಲೆ ಬೀಳುವಂತೆ. ನಾನು ಈ ಕೆಲಸವನ್ನು ಏಳು ದೀರ್ಘ ರಾತ್ರಿಗಳವರೆಗೆ ಮಾಡಿದೆ - ಪ್ರತಿ ರಾತ್ರಿ, ಮಧ್ಯರಾತ್ರಿಯ ಹೊತ್ತಿಗೆ - ಆದರೆ ಪ್ರತಿ ಬಾರಿ, ಆ ಕಣ್ಣು ಮುಚ್ಚಿರುವುದನ್ನು ನೋಡಿದೆ; ನನಗೆ ಕೊಲೆ ಮಾಡಲು ಸಾಧ್ಯವಾಗಲಿಲ್ಲ; ಯಾಕಂದರೆ ನನ್ನನ್ನು ಕೆಣಕಿದ್ದು ಮುದುಕನಲ್ಲ, ಅವನ ಆ ದುಷ್ಟ ಕಣ್ಣು ಮಾತ್ರ. ರಾತ್ರಿಯ ಕಾರ್ಯಾಚರಣೆಯ ನಂತರ, ಪ್ರತಿದಿನ ಬೆಳಿಗ್ಗೆ ನಾನು ಧೈರ್ಯವಾಗಿ ಅವನ ಕೋಣೆಗೆ ಹೋಗುತ್ತಿದ್ದೆ. ಅವನೊಂದಿಗೆ ಖುಷಿಯಿಂದ ಮಾತನಾಡುತ್ತಿದ್ದೆ. ಅವನ ಹೆಸರು ಕೂಗಿ ಅವನು ತನ್ನ ರಾತ್ರಿಯನ್ನು ಹೇಗೆ ಕಳೆದ ಎಂದು ವಿಚಾರಿಸುತ್ತಿದ್ದೆ. ಅವನು ತುಂಬಾ ಒಳ್ಳೆಯ ಮನುಷ್ಯನಾಗಿದ್ದ. ಪ್ರತಿ ರಾತ್ರಿ ಸರಿಯಾಗಿ ಹನ್ನೆರಡು ಗಂಟೆಗೆ ಅವನು ಮಲಗಿದ್ದಾಗ, ನಾನು ಅವನನ್ನು ದಿಟ್ಟಿಸಿ ನೋಡುತ್ತಿದ್ದೆ ಎಂದು ಅವನಿಗೆ ಅನುಮಾನ ಬರಲೇ ಇಲ್ಲ.

ಎಂಟನೇ ರಾತ್ರಿ ನಾನು ಬಾಗಿಲು ತೆರೆಯುವಾಗ ಸಾಮಾನ್ಯಕ್ಕಿಂತ ಇನ್ನೂ ಹೆಚ್ಚು ಜಾಗರೂಕನಾಗಿದ್ದೆ. ಗಡಿಯಾರದ ನಿಮಿಷದ ಮುಳ್ಳು ಕೂಡ ನನಗಿಂತ ಹೆಚ್ಚು ವೇಗವಾಗಿ ಚಲಿಸುತ್ತಿತ್ತು. ಆ ರಾತ್ರಿ ನನಗೆ ನನ್ನ ಶಕ್ತಿ, ಬುದ್ಧಿವಂತಿಕೆಯ ಕುರಿತು ಹೆಚ್ಚು ಆತ್ಮವಿಶ್ವಾಸವಿತ್ತು. ನಾನು ಯಶಸ್ವಿ ಆಗುತ್ತೇನೆ ಅನ್ನಿಸತೊಡಗಿತು. ನನಗೆ ನನ್ನ ಜಯದ ಭಾವನೆಗಳನ್ನು ಹತ್ತಿಕ್ಕಲು ಕಷ್ಟವಾಯಿತು. ನಾನು ಅಲ್ಲಿದ್ದೆ... ನಿಧಾನವಾಗಿ ಬಾಗಿಲು ತೆರೆಯುತ್ತಿದ್ದೆ... ಮತ್ತು ಆ ಮುದುಕನಿಗೆ ನನ್ನ ರಹಸ್ಯ ಕಾರ್ಯಾ ಚರಣೆ ಅಥವಾ ಆಲೋಚನೆಗಳ ಬಗ್ಗೆ ಸ್ವಲ್ಪವೂ ಸಂಶಯ ಬಂದಿಲ್ಲ ಎನ್ನುವ ವಿಚಾರ ನನಗೆ ಖುಷಿ ಕೊಟ್ಟಿತು. ನಾನು ಮನಸ್ಸಿನಲ್ಲಿಯೇ ನಕ್ಕೆ; ಬಹುಶಃ, ಅವನಿಗೆ ನನ್ನ ಬರುವಿಕೆಯ ಸದ್ದು ಕೇಳಿಸಿತು; ಯಾಕೆಂದರೆ, ಅವನು ಗಾಬರಿಯಾದವನಂತೆ, ಇದ್ದಕ್ಕಿದ್ದಂತೆ ಮಗ್ಗಲು ಬದಲಾಯಿಸಿದ. ನೀವು ಈಗ ಅಂದುಕೊಳ್ಳುತ್ತೀರಿ, ನಾನು ಹಿಂದೆ ಸರಿದೆ ಎಂದು - ಆದರೆ ನಾನು ಹಾಗೆ ಮಾಡಲಿಲ್ಲ. ಯಾಕೆಂದರೆ, ಅವನ ಕೋಣೆಯಲ್ಲಿ ದಟ್ಟವಾದ ಕತ್ತಲೆ ಇತ್ತು, (ದರೋಡೆಕೋರರ ಭಯದಿಂದ, ಆ ಕೋಣೆಯ ಕಿಟಿಕಿಗಳಿಗೆ ಶಟರ್ ಹಾಕಲಾಗಿತ್ತು) ನಾನು ಬಾಗಿಲು ತೆರೆಯುವುದನ್ನು ಅವನು ನೋಡುವುದಿಲ್ಲ ಎಂದು ನನಗೆ ತಿಳಿದಿತ್ತು. ನಾನು ಬಾಗಿಲನ್ನು ನಿಧಾನವಾಗಿ, ನಿಧಾನವಾಗಿ ಮುಂದಕ್ಕೆ ತಳ್ಳುತ್ತಿದ್ದೆ...
 
ಅಂತೂ, ನಾನು ನನ್ನ ತಲೆಯನ್ನು ಬಾಗಿಲಿನ ಒಳಗೆ ಹಾಕಿದೆ. ಲಾಟೀನು ಬೆಳಕನ್ನು ಹೆಚ್ಚಿಸಲು ಹೊರಟೆ. ನನ್ನ ಹೆಬ್ಬೆರಳು ಲಾಟೀನಿನ ಹಿತ್ತಾಳೆ ಕೊಂಡಿಗೆ ಜಾರಿ ಬಿದ್ದು ಸದ್ದಾಯಿತು, ಆಗ, ಮುದುಕ ಹಾಸಿಗೆಯಿಂದ ತಕ್ಷಣ ಎದ್ದು, "ಯಾರದು?" ಎಂದು ಕಿರುಚಿದ.

ನಾನು ಸುಮ್ಮನಿದ್ದೆ, ಏನೂ ಹೇಳಲಿಲ್ಲ. ಸುಮಾರು ಒಂದು ಗಂಟೆ ನಾನು ನನ್ನ ಸ್ನಾಯುಗಳನ್ನು ಸಡಿಲಿಸದೇ ನಿಂತಿದ್ದೆ. ಈ ಮಧ್ಯೆ ಅವನು ಮಲಗಿರುವುದು ನನಗೆ ಕಾಣಿಸಲಿಲ್ಲ. ಅಂದರೆ, ಅವನು ಇನ್ನೂ ಹಾಸಿಗೆಯ ಮೇಲೆ ಕುಳಿತು ಸದ್ದಿನ ನಿರೀಕ್ಷೆಯಲ್ಲಿದ್ದ; - ನಾನು, ಕಳೆದ ಏಳು ರಾತ್ರಿಗಳು ಮಾಡಿದಂತೆ, ರಾತ್ರಿಯ ನೀರವ ಮೌನದ ನಡುವೆ ಗೋಡೆ ಗಡಿಯಾರ ಮಾಡುವ ಟಿಕ್ ಟಿಕ್... ಸದ್ದನ್ನು ಕೇಳಿಸಿಕೊಳ್ಳುತ್ತಾ ನಿಂತೆ.

ಸ್ವಲ್ಪ ಹೊತ್ತಿನ ನಂತರ, ನನಗೆ ಸ್ವಲ್ಪ ನರಳಿದ ಸದ್ದು ಕೇಳಿಸಿತು. ಅದು ಸಾವಿನ ಭಯದಿಂದ ಮೂಡಿದ ನರಳುವಿಕೆ ಎಂದು ನನಗೆ ತಿಳಿದಿತ್ತು. ಅದು ನೋವು ಅಥವಾ ದುಃಖದ ನರಳುವಿಕೆ ಅಲ್ಲ - ಓಹ್, ಅಲ್ಲ! - ಅತಿ ಭಯ ಕಾಡುವಾಗ ಆತ್ಮದ ಒಳಗಿನಿಂದ ಹೊರಬರುವ ಪ್ರತಿಧ್ವನಿ, ಆರ್ತನಾದ. ನನಗೆ ಆ ಶಬ್ದ ಚೆನ್ನಾಗಿ ಗೊತ್ತಿತ್ತು. ಯಾಕೆಂದರೆ, ಅನೇಕ ರಾತ್ರಿಗಳು, ಮಧ್ಯರಾತ್ರಿಯ ಹೊತ್ತಿನಲ್ಲಿ, ಇಡೀ ಜಗತ್ತು ಮಲಗಿದ್ದಾಗ, ಅದು ನನ್ನ ಎದೆಯ ಆಳದಿಂದ ಹೊರಹೊಮ್ಮುತ್ತಿತ್ತು. ನನ್ನನ್ನು ವಿಚಲಿತಗೊಳಿಸುತ್ತಿತ್ತು. ನನಗೆ ಅದು ಚೆನ್ನಾಗಿ ಗೊತ್ತಿತ್ತು. ಈಗ, ಆ ಮುದುಕನಿಗೆ ಏನನ್ನಿಸುತ್ತಿದೆ ಎಂದು ನನಗೆ ತಿಳಿದು, ಅವನ ಬಗ್ಗೆ ಕರುಣೆ ಹುಟ್ಟಿತು. ಆದರೂ, ನಾನು ನನ್ನೊಳಗೆ ನಕ್ಕೆ. ಮೊದಲ ಸಣ್ಣ ಶಬ್ದ ಆದಾಗಿಂದ, ಅವನು ಎಚ್ಚರವಾಗಿದ್ದಾನೆ. ಅವನು ಹಾಸಿಗೆಯಲ್ಲಿ ಮಗ್ಗಲು ಬದಲಾಯಿಸಿದಾಗಲೇ ನಾನು ಅರ್ಥ ಮಾಡಿಕೊಂಡೆ. ಆ ಹೊತ್ತಿನಿಂದ, ಅವನ ಭಯವು ಹೆಚ್ಚಾಗುತ್ತಿದೆ. ಅವನು ತನ್ನ ಭಯವನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದಾನೆ. ಆದರೆ ಸಾಧ್ಯವಾಗುತ್ತಿಲ್ಲ. ಅವನು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಿದ್ದಾನೆ - "ಬಹುಶಃ, ಇದು ಚಿಮಣಿಯಲ್ಲಿನ ಗಾಳಿಯ ಸದ್ದೇ ಹೊರತು ಬೇರೇನೂ ಅಲ್ಲ" - ನೆಲದಲ್ಲಿ ಇಲಿ ಓಡಾಡುತ್ತಿರಬಹುದು." ಅಥವಾ "ಇದು ಕೇವಲ ಕೀಟದ ಸದ್ದು." ಹೌದು, ಅವನು ಈ ರೀತಿ ಊಹಿಸಿಕೊಂಡು ತನ್ನನ್ನು ತಾನೇ ಸಮಾಧಾನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ: ಆದರೆ ಅದೆಲ್ಲಾ ವ್ಯರ್ಥವೆಂದು ಅವನಿಗೆ ಅನ್ನಿಸ ತೊಡಗಿದೆ. ಎಲ್ಲಾ ವ್ಯರ್ಥ; ಏಕೆಂದರೆ ಸಾವು ಅವನನ್ನು ಸಮೀಪಿಸುತ್ತಿದೆ. ಅವನ ಹಿಂದೆ ಸಾವಿನ ಕಪ್ಪು ನೆರಳು ಹಿಂಬಾಲಿಸುತ್ತಿದೆ. ಅವನನ್ನು ಆವರಿಸುತ್ತಿದೆ. ಸಾವಿನ ಗ್ರಹಿಸಲಾಗದ ನೆರಳಿನ ಶೋಕದ ಪ್ರಭಾವವನ್ನು ಅವನು ಅನುಭವಿಸುತ್ತಿದ್ದಾನೆ- ಅವನು ಕೋಣೆಯೊಳಗೆ ನನ್ನ ತಲೆಯನ್ನು ಇನ್ನೂ ನೋಡಲಿಲ್ಲ. ನನ್ನ ಮಾತು ಕೇಳಲಿಲ್ಲ- ಆದರೂ ಭಯ ಅನುಭವಿಸುತ್ತಿದ್ದಾನೆ.

ನಾನು ತುಂಬಾ ಸಮಯ, ಬಹಳ ತಾಳ್ಮೆಯಿಂದ ಕಾದೆ... ಅವನು ಇನ್ನೂ ಮಲಗಲಿಲ್ಲ. ನಾನು ಲಾಟೀನು ಸ್ವಲ್ಪ ತೆರೆಯಲು ನಿರ್ಧರಿಸಿದೆ - ಒಂದು ಸಣ್ಣ ಬೆಳಕಿನ ಕಿರಣ. ಅದನ್ನು ನಾನು ತೆರೆದೆ - ಗುಟ್ಟಾಗಿ ತೆರೆದೆ - ಜೇಡರ ಬಲೆಯ ದಾರದಂತಹ ಒಂದೇ ಒಂದು ಮಂದ ಕಿರಣವು ಸೀಳಿನಿಂದ ಹೊರಬಂದು ಆ ರಣಹದ್ದಿನ ಕಣ್ಣಿನ ಮೇಲೆ ಬೀಳುವವರೆಗೆ ತೆರೆದೆ. ನೀವು ಅದನ್ನು ಊಹಿಸಲು ಸಾಧ್ಯವಿಲ್ಲ...
 
ಆ ಕಣ್ಣು ತೆರೆದಿತ್ತು - ವಿಶಾಲವಾಗಿ, ಬಹಳ ದೊಡ್ಡದಾಗಿ ತೆರೆದಿತ್ತು - ಅದನ್ನು ನಾನು ನೋಡುತ್ತಿದ್ದಂತೆ ಕೋಪಗೊಂಡೆ. ಅದನ್ನು ಸ್ಪಷ್ಟವಾಗಿ ನೋಡಿದೆ - ಆ ಮಂದ ನೀಲಿ ಕಣ್ಣು, ಅದರ ಮೇಲೆ ಪೂರ್ಣ ಚರ್ಮದ  ಪೊರೆ, ಅದನ್ನು ನೋಡಿ ನನ್ನ ಎಲುಬಿನ ಮಜ್ಜೆಯೊಳಗಿಂದ ನಡುಕ ಹುಟ್ಟಿತು; ನಾನು ಆ ಮುದುಕನ ಮುಖ, ಅವನ ದೇಹ, ಏನನ್ನೂ ನೋಡಲಿಲ್ಲ: ನಾನು, ಬೆಳಕಿನ ಕಿರಣವನ್ನು ಕೇವಲ ಆ ಕಣ್ಣಿಗೆ ಕೇಂದ್ರೀಕರಿಸಿದ್ದೆ. ನಿಖರವಾಗಿ ಆ ಸ್ಥಳದ ಮೇಲೆ.
ನೋಡಿ, ನಾನು ನಿಮಗೆ ಆಗಲೇ ಹೇಳಿದ್ದೇನೆ. ನೀವು ನನ್ನ ಹುಚ್ಚುತನ ಎಂದು ತಪ್ಪಾಗಿ ಭಾವಿಸಿರುವುದು, ನನ್ನ ಇಂದ್ರೀಯಗಳ ಚುರುಕುತನವನ್ನು- ನನ್ನ ಕಿವಿಗಳಿಗೆ ಏನೋ ಶಬ್ದ ಕೇಳಲಾರಂಭಿಸಿತು. ಹತ್ತಿಯ ಬಟ್ಟೆಯಿಂದ ಸುತ್ತಿದ ಗಡಿಯಾರದಿಂದ ಕೇಳುವ ಟಿಕ್ ಟಿಕ್ ಸದ್ದಿನಂತೆ. ಯಾವುದೊ ಮಂದ, ತ್ವರಿತ ಶಬ್ದ, ನನ್ನ ಕಿವಿಗೆ ಕೇಳಿಸತೊಡಗಿತು. ನನಗೆ ಆ ಶಬ್ದ ಚೆನ್ನಾಗಿ ಗೊತ್ತಿತ್ತು. ಅದು ಆ ಮುದುಕನ ಹೃದಯ ಬಡಿತ. ಅದನ್ನು ಕೇಳಿ ನನ್ನ ಕೋಪ ಹೆಚ್ಚಾಯಿತು. ಅವನನ್ನು ಕೊಲ್ಲುವುದಕ್ಕೆ ಪ್ರಚೋದಿಸಿತು. ಡ್ರಮ್ ಸದ್ದು ಒಬ್ಬ ಸೈನಿಕನಿಗೆ ಯುದ್ಧದಲ್ಲಿ ಕಾದಾಡಲು ಪ್ರಚೋದಿನೆ ನೀಡುವಂತೆ...
ಆದರೂ ನಾನು ನನ್ನನ್ನು ನಿಯಂತ್ರಿಸಿಕೊಂಡೆ. ಸುಮ್ಮನೆ ನಿಂತೆ. ಶಬ್ದ ಆಗಬಾರದೆಂದು ನನ್ನ ಉಸಿರನ್ನು ಬಿಗಿ ಹಿಡಿದುಕೊಂಡೆ. ಕೈಯಲ್ಲಿದ್ದ ಲಾಟೀನನ್ನುಅಲುಗಾಡಿಸದೆ ಹಿಡಿದು ನಿಂತುಕೊಂಡೆ. ಆ ಕಣ್ಣಿನ ಮೇಲೆ ಬೆಳಕಿನ ಕಿರಣ ಸ್ಥಿರವಾಗಿ ಬೀಳುವಂತೆ ನೋಡಿಕೊಂಡೆ. ಆದರೆ, ಅವನ ಹೃದಯ ಬಡಿತದ ಸದ್ದು ಹೆಚ್ಚಾಯಿತು. ಜೋರಾಗಿ, ಇನ್ನೂ ಜೋರಾಗಿ ಕೇಳಿಸತೊಡಗಿತು. ಪ್ರತಿ ಕ್ಷಣವೂ ಜೋರಾಯಿತು. ಇನ್ನೂ ಜೋರಾಯಿತು. ಪಾಪ... ಮುದುಕನ ಭಯ ವಿಪರೀತವಾಗಿರಬೇಕು! ಇನ್ನೂ ಜೋರಾಗಿ ಕೇಳಿಸಿತು. ನಾನು ನಿಮಗೆ ಹೇಳುತ್ತಿದ್ದೇನೆ. ಪ್ರತಿ ಕ್ಷಣವೂ ಜೋರಾಗಿ ಕೇಳಿಸಿತು! - ನೀವು ನನ್ನ ಮಾತು ಚೆನ್ನಾಗಿ ಕೇಳಿಸಿಕೊಳ್ಳುತ್ತಿದ್ದೀರಿ ತಾನೇ?... ನಾನು ತುಂಬಾ ಉದ್ವಿಗ್ನನಾಗಿದ್ದೇನೆ ಎಂದು ನಿಮಗೆ ಹೇಳಿದ್ದೇನೆ: ಹೌದು, ನಾನು ಆತಂಕದಲ್ಲಿದ್ದೇನೆ. ಆಗ, ಆ ರಾತ್ರಿಯ ನೀರವ ಮೌನದಲ್ಲಿ, ಆ ಹಳೆಯ ಮನೆಯ ಒಂಟಿತನದ ನಡುವೆ, ಆ ವಿಚಿತ್ರ ಶಬ್ದ ನನ್ನಲ್ಲಿ ಅಸಾಧ್ಯ ಭಯ ತರಿಸಿತು. ಆದರೂ, ಕೆಲವು ನಿಮಿಷಗಳ ಕಾಲ ನನ್ನನ್ನು ತಡೆದುಕೊಂಡೆ. ಆದರೆ, ಆ ಬಡಿತ ಜೋರಾಯಿತು. ಇನ್ನೂ ಜೋರಾಯಿತು! ಅವನ ಹೃದಯ ಇನ್ನೇನು ಸಿಡಿಯಬಹುದು ಎಂದುಕೊಂಡೆ. ಈಗ ಹೊಸ ಆತಂಕ ನನ್ನನ್ನು ಆವರಿಸಿತು- ಈ ಶಬ್ದ ನೆರೆಮನೆಯವರಿಗೆ ಕೇಳಿಸಿದರೆ! ಮುದುಕನ ಸಾವಿನ ಗಳಿಗೆ ಬಂದಿದೆ! ಇನ್ನು ತಡ ಮಾಡಬಾರದು... ನಾನು ಜೋರಾಗಿ ಕಿರುಚುತ್ತಾ, ಲಾಟೀನು ಬೆಳಕು ಹೆಚ್ಚಿಸಿ ಆ ಕೋಣೆಯೊಳಗೆ ಜಿಗಿದೆ. ಅವನು ಒಮ್ಮೆಲೇ ಕಿರುಚಿ ಕೊಂಡ- ಒಮ್ಮೆ ಮಾತ್ರ. ಕ್ಷಣಾರ್ಧದಲ್ಲಿ ನಾನು ಅವನನ್ನು ನೆಲಕ್ಕೆ ಎಳೆದೆ, ಅವನ ಭಾರವಾದ ಹಾಸಿಗೆಯನ್ನು ಅವನ ಮೇಲೆ ಎಳೆದು ಹಾಕಿದೆ. ನಂತರ, ನಾನು ಸಂತೋಷದಿಂದ ಮುಗುಳ್ನಕ್ಕೆ. ಇಲ್ಲಿಯವರೆಗೆ ನಾನು ಮಾಡಿದ ಕಾರ್ಯ ಯಶಸ್ವಿ ಆಗಿದ್ದಕ್ಕೆ ಖುಷಿ ಪಟ್ಟೆ. ಇನ್ನೂ ಕೆಲವು ನಿಮಿಷಗಳ ಕಾಲ ಅವನ ಹೃದಯ ಬಡಿತದ ಸದ್ದು ಕೇಳಿಸುತ್ತಿತ್ತು. ಆದರೆ, ಅದು ನನ್ನನ್ನು ಕೆರಳಿಸಲಿಲ್ಲ; ಯಾಕೆಂದರೆ ಅದು ಗೋಡೆಯ ಹೊರಗೆ ಕೇಳಿಸುತ್ತಿರಲಿಲ್ಲ. ಸ್ವಲ್ಪ ಹೊತ್ತಿನ ನಂತರ, ಅದು ನಿಂತುಹೋಯಿತು. ಮುದುಕ ಸತ್ತಿದ್ದ. ನಾನು ಹಾಸಿಗೆ ತೆಗೆದು ಅವನ ಶವ ಪರೀಕ್ಷಿಸಿದೆ. ಹೌದು, ಅವನು ಕಲ್ಲಿನಂತೆ ಸತ್ತು ಮಲಗಿದ್ದ. ನಾನು ನನ್ನ ಕೈಯನ್ನು ಅವನ ಹೃದಯದ ಮೇಲೆ ಇರಿಸಿದೆ. ಹಲವು ನಿಮಿಷಗಳ ಕಾಲ ಅಲ್ಲಿಯೇ ಹಿಡಿದೆ. ನಾಡಿಮಿಡಿತ ಇರಲಿಲ್ಲ. ಅವನು ಸತ್ತಿದ್ದ. ಇನ್ನು ಮುಂದೆ ಅವನ ಕಣ್ಣು ನನಗೆ ತೊಂದರೆ ಕೊಡುವುದಿಲ್ಲ.

ನೀವು, ಇನ್ನೂ ನಾನು ಹುಚ್ಚ ಎಂದು ಭಾವಿಸಿದರೆ, ಇನ್ನು ಮುಂದೆ ಹಾಗೆ ಯೋಚಿಸುವುದಿಲ್ಲ. ಈಗ, ಅವನ ದೇಹವನ್ನು ಮರೆಮಾಡಲು ನಾನು ತೆಗೆದುಕೊಂಡ ಬುದ್ಧಿವಂತ ಮುನ್ನೆಚ್ಚರಿಕೆಗಳನ್ನು ವಿವರಿಸುತ್ತೇನೆ. ಆಗ, ನಿಮ್ಮ ಸಂಶಯವೆಲ್ಲಾ ನಿವಾರಣೆಯಾಗುತ್ತದೆ. ರಾತ್ರಿ ಕ್ಷೀಣಿಸ ತೊಡಗಿತು. ನಾನು ತರಾತುರಿಯಲ್ಲಿ, ಆದರೆ ಮೌನವಾಗಿ ಕೆಲಸ ಮಾಡಿದೆ. ಮೊದಲು ನಾನು ಶವವನ್ನು ತುಂಡು ತುಂಡಾಗಿ ಕತ್ತರಿಸಿದೆ. ಅವನ ತಲೆ ಮತ್ತು ಕೈ ಕಾಲುಗಳನ್ನು ಕತ್ತರಿಸಿದೆ...

ನಂತರ, ಆ ಕೋಣೆಗೆ ಹಾಸಿದ್ದ ಮರದ ತುಂಡಿನ ನೆಲದಿಂದ ಮೂರು ಹಲಗೆಗಳನ್ನು ತೆಗೆದು, ಆ ಶವದ ತುಂಡುಗಳನ್ನು ಅದರೊಳಗೆ ಇರಿಸಿದೆ. ಆಮೇಲೆ, ಆ ಹಲಗೆಗಳನ್ನು ಜಾಣ್ಮೆಯಿಂದ, ಕುತಂತ್ರದಿಂದ ಪುನಃ ಜೋಡಿಸಿದೆ, ಯಾರ ಕಣ್ಣಿಗೂ- ಅವನ ಕಣ್ಣಿಗೂ ಕೂಡ- ಏನನ್ನೂ ಪತ್ತೆಹಚ್ಚಲು ಸಾಧ್ಯವಾಗದ ಹಾಗೆ. ಇನ್ನು ತೊಳೆಯಲು ಏನೂ ಉಳಿದಿರಲಿಲ್ಲ - ಯಾವುದೇ ರೀತಿಯ ಕಲೆಗಳು- ರಕ್ತದ ಕಲೆಗಳು ಕೂಡ. ನಾನು ತುಂಬಾ ಜಾಗರೂಕನಾಗಿದ್ದೆ. ಎಲ್ಲವನ್ನೂ ಒಂದು ಟಬ್ ನಲ್ಲಿ ತೊಳೆದು ಹಾಕಿದೆ- ಹಾ! ಹಾ!

ನಾನು ಇಷ್ಟೆಲ್ಲಾ ಕೆಲಸ ಮುಗಿಸಿದಾಗ, ಮಧ್ಯರಾತ್ರಿಯಂತೆ ಇನ್ನೂ ಕತ್ತಲಿತ್ತು. ಗಡಿಯಾರದಲ್ಲಿ ನಾಲ್ಕು ಗಂಟೆ ಹೊಡೆದಂತೆ, ಬೀದಿ ಬಾಗಿಲನ್ನು ಯಾರೋ ತಟ್ಟಿದ ಸದ್ದು ಕೇಳಿಸಿತು. ನಾನು ನಿರಾಳ ಹೃದಯದಿಂದ ಬಾಗಿಲು ತೆರೆಯಲೆಂದು ಕೆಳಗೆ ಇಳಿದೆ- ಈಗ ನನಗೇನು ಭಯ? ಮನೆಯೊಳಗೆ ಮೂವರು ಗಂಡಸರು ಪ್ರವೇಶಿಸಿದರು. ತಮ್ಮನ್ನು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡರು. ರಾತ್ರಿಯ ಹೊತ್ತಿನಲ್ಲಿ, ನೆರೆಮನೆಯವರು ಈ ಮನೆಯಿಂದ ಕಿರುಚಾಟವನ್ನು ಕೇಳಿದರು; ಏನೋ ಅನಾಹುತವಾಗಿದೆ ಎಂದು ಅನುಮಾನದಿಂದ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು; ಪೊಲೀಸ್ ಕಚೇರಿಯಲ್ಲಿ ಮಾಹಿತಿ ದಾಖಲಿಸಲಾಗಿದೆ, ಮತ್ತು ಈ ಅಧಿಕಾರಿಗಳನ್ನು ಮನೆ ತಲಾಶೆಗೆಂದು ನಿಯೋಜಿಸಲಾಗಿದೆ.
ನಾನು ಮುಗುಳ್ನಕ್ಕೆ- ನಾನು ಯಾವುದರ ಭಯ? ನಾನು ಅವರನ್ನು ಒಳಗೆ ಸ್ವಾಗತಿಸಿದೆ. ಅವರಿಗೆ ಹೇಳಿದೆ, ಆ ಬೊಬ್ಬೆ ಹಾಕಿದ್ದು ನಾನೇ, ಆದರೆ ನನ್ನ ಕನಸಿನಲ್ಲಿ. ಮತ್ತು ಮನೆಯ ಮುದುಕ ದೇಶಾಂತರ ಹೋಗಿದ್ದಾನೆ ಎಂದೆ. ನಾನು ಅವರನ್ನು ಮನೆಯ ಮೂಲೆ ಮೂಲೆಗೆ ಕರೆದೊಯ್ದೆ, ಚೆನ್ನಾಗಿ ಹುಡುಕಲು ಹೇಳಿದೆ. ಅವರನ್ನು ಅವನ ಕೋಣೆಗೆ ಕರೆದೊಯ್ದೆ. ಅವನ ಸಂಪತ್ತು, ಸುರಕ್ಷಿತವಾಗಿದೆ. ಅಸ್ತವ್ಯಸ್ತ ಆಗಿಲ್ಲ ಎಂದು ತೋರಿಸಿದೆ. ನನ್ನ ಆತ್ಮವಿಶ್ವಾಸದ ಉತ್ಸಾಹ ಹೆಚ್ಚಾಗಿ, ಅವರಿಗಾಗಿ ಮೂರು ಕುರ್ಚಿಗಳನ್ನು ತಂದು ಆ ಕೋಣೆಯಲ್ಲಿ ಹಾಕಿದೆ. ಅವರ ರಾತ್ರಿ ಡ್ಯೂಟಿಯ ಆಯಾಸಕ್ಕೆ, ಸ್ವಲ್ಪ ವಿಶ್ರಾಂತಿ ಪಡೆಯಲು ಹೇಳಿದೆ. ನಾನು, ನನ್ನ ಪೂರ್ಣ ವಿಜಯದ ಉದ್ದಟತನದಲ್ಲಿ, ನನ್ನ ಸ್ವಂತ ಆಸನವನ್ನು ಆ ಶವದ ಮೇಲಿರುವ ಮರದ ಹಲಗೆಗಳ ಮೇಲೆ ಇರಿಸಿದೆ.

ಆ ಅಧಿಕಾರಿಗಳು ನನ್ನ ಮಾತಿನಿಂದ ತೃಪ್ತರಾದರು. ನನ್ನ ನಡವಳಿಕೆ ಅವರಿಗೆ ಮನವರಿಕೆ ಮಾಡಿತು. ನಾನು ಸ್ವತಃ ನಿರಾಳನಾದೆ. ಅವರು ಅಲ್ಲಿ ಕುಳಿತರು. ನಾನು ಅವರಿಗೆ ನಗುತ್ತಲೇ ಉತ್ತರಿಸಿದೆ. ಅವರು ಪರಿಚಿತ ವಿಷಯಗಳನ್ನು ತೆಗೆದುಕೊಂಡು ಹರಟೆ ಹೊಡೆಯಲು ಆರಂಭಿಸಿದರು. ಆದರೆ, ನಿಧಾನವಾಗಿ ನನ್ನ ಮೈಯಲ್ಲಿ ನಡುಕ ಹುಟ್ಟಿತು ಮತ್ತು ಒಮ್ಮೆ ಅವರು ತೊಲಗಲಿ ಅನ್ನಿಸತೊಡಗಿತು. ನನ್ನ ತಲೆ ಸಿಡಿಯಲಾರಂಭಿಸಿತು. ನನ್ನ ಕಿವಿಯಲ್ಲಿ ಗುಂಯ್ ಎನ್ನುವ ಶಬ್ದ ಕೇಳಲು ಆರಂಭವಾಯಿತು: ಆದರೆ ಅವರು ಇನ್ನೂ ಕುಳಿತು ಹರಟೆ ಹೊಡೆಯುತ್ತಿದ್ದರು. ಗುಂಯ್ ಸದ್ದು ಹೆಚ್ಚು ಸ್ಪಷ್ಟವಾಯಿತು: ಅದು ಮುಂದುವರೆಯಿತು. ಇನ್ನೂ ಹೆಚ್ಚು ನಿಖರವಾಯಿತು: ಆ ಭಾವನೆಯನ್ನು ತೊಡೆದುಹಾಕಲು, ನಾನು ಹೆಚ್ಚು ಮುಕ್ತವಾಗಿ ಮಾತನಾಡ ತೊಡಗಿದೆ: ಆದರೆ ಆ ಸದ್ದು ಮುಂದುವರೆಯಿತು, ಖಚಿತತೆ ಪಡೆಯಿತು - ನಿಧಾನವಾಗಿ, ಆ ಶಬ್ದ ನನ್ನ ಕಿವಿಯೊಳಗಿಂದ ಬರುತ್ತಿಲ್ಲ ಎಂದು ನನಗೆ ಅರಿವಾಯಿತು.

ನಿಸ್ಸಂದೇಹವಾಗಿ, ನಾನು ವಿಪರೀತ ಭಯಗೊಂಡೆ; ಅದು ಗೊತ್ತಾಗಬಾರದೆಂದು ಹೆಚ್ಚು ನಿರ್ಗಳವಾಗಿ, ಎತ್ತರದ ಧ್ವನಿಯಲ್ಲಿ ಮಾತನಾಡ ತೊಡಗಿದೆ. ಆದರೂ ಆ ಸದ್ದು ಹೆಚ್ಚಾಯಿತು- ಈಗ ನಾನು ಏನು ಮಾಡಬಹುದು? ಆ ಸದ್ದು ಮಂದ, ತ್ವರಿತ ಶಬ್ದವಾಗಿತ್ತು - ಅದು, ಹತ್ತಿಯ ಬಟ್ಟೆ ಸುತ್ತಿದಾಗ ಗಡಿಯಾರ ಮಾಡುವಂತಹ ಟಿಕ್ ಟಿಕ್ ಶಬ್ದ. ನಾನು ಏದುಸಿರು ಬಿಡತೊಡಗಿದೆ - ಆ ಅಧಿಕಾರಿಗಳಿಗೆ ಅದು ಇನ್ನೂ ಕೇಳಿಸಲಿಲ್ಲ... ನಾನು ಹೆಚ್ಚು ಏರು ಧ್ವನಿಯಲ್ಲಿ ವೇಗವಾಗಿ ಮಾತನಾಡ ತೊಡಗಿದೆ; ಆದರೆ ಆ ಶಬ್ದ ಏರುತ್ತಲೇ ಇತ್ತು. ನಾನು ಎದ್ದು ನಿಂತೆ, ಏರಿದ ಸ್ವರದಲ್ಲಿ ಚಿಕ್ಕ ಪುಟ್ಟ ವಿಷಯಗಳ ಬಗ್ಗೆ, ಅತಿಯಾದ ಹಾವಭಾವದೊಂದಿಗೆ ವಾದಿಸ ತೊಡಗಿದೆ; ಆದರೆ ಆ ಶಬ್ದ ಹೆಚ್ಚುತ್ತಲೇ ಹೋಯಿತು. ಅವರು ಏಕೆ ಇನ್ನೂ ಹೋಗುತ್ತಿಲ್ಲ?... ನಾನು ನೆಲದಲ್ಲಿ ಭಾರವಾದ ಹೆಜ್ಜೆಗಳೊಂದಿಗೆ ಅತ್ತಿಂದಿತ್ತ ನಡೆದಾಡ ತೊಡಗಿದೆ. ಆ ಪುರುಷರ ಮೇಲೆ ಕೋಪ ಹೆಚ್ಚಾಗ ತೊಡಗಿತು - ಜೊತೆಗೆ ಶಬ್ದವು ಹೆಚ್ಚಾಗ ತೊಡಗಿತು. ಓ ದೇವರೇ! ನಾನು ಈಗ ಏನು ಮಾಡಬಹುದು? ನನ್ನ ಬಾಯಲ್ಲಿ ನೊರೆ ಬಂತು - ನಾನು ಆಕ್ರೋಶಗೊಂಡೆ - ಶಾಪ ಹಾಕಿದೆ! ನಾನು ಕುಳಿತಿದ್ದ ಕುರ್ಚಿ ಯನ್ನು ಅಲುಗಾಡಿಸ ತೊಡಗಿದೆ. ಅದನ್ನು ಆ ಮರದ ಹಲಗೆಗಳ ಮೇಲೆ ಎಳೆದು ಸದ್ದು ಮಾಡ ತೊಡಗಿದೆ. ಆದರೂ, ಆ ಶಬ್ದ ಇನ್ನೂ ಹೆಚ್ಚಾಗಿ ಹೇಳಿಸ ತೊಡಗಿತು. ನಿರಂತರವಾಗಿ ಹೆಚ್ಚಾಯಿತು. ಇನ್ನೂ ಜೋರಾಗಿ ಕೇಳಿಸಿತು - ಜೋರಾಗಿ - ಜೋರಾಗಿ! ಆದರೂ ಆ ಗಂಡಸರು ನಗುನಗುತ್ತಾ ಹರಟೆ ಹೊಡೆಯುತ್ತಲೇ ಇದ್ದರು. ಅವರಿಗೆ ಈ ಸದ್ದು ನಿಜವಾಗಿಯೂ ಕೇಳಿಸಿಲ್ಲವೇ?... ಓ ದೇವರೇ! - ಇಲ್ಲ, ಇಲ್ಲ! ಅವರು ಕೇಳಿಸಿ ಕೊಂಡಿದ್ದಾರೆ! - ಅವರಿಗೆ ಸಂಶಯ ಬಂದಿದೆ! - ಅವರಿಗೆ ತಿಳಿದಿದೆ! - ಅವರು ನನ್ನ ಅಪಹಾಸ್ಯ ಮಾಡುತ್ತಿದ್ದಾರೆ! - ನಾನು ಹಾಗೆ ಯೋಚಿಸಿದೆ. ಈಗಲೂ ಹಾಗೆಯೆ ಭಾವಿಸುತ್ತೇನೆ. ಆದರೆ ಈ ಸಂಕಟಕ್ಕಿಂತ ಬೇರೆ ಏನಾದರೂ ಪರವಾಗಿಲ್ಲ! ಈ ಅಪಹಾಸ್ಯಕ್ಕಿಂತ ಏನನ್ನಾದರೂ ಸಹಿಸಿಕೊಳ್ಳಬಹುದು! ನಾನು ಇನ್ನು ಮುಂದೆ ಆ ಕಪಟ ನಗುವನ್ನು ಸಹಿಸಲಾರೆ!... ಒಂದೋ, ಜೋರಾಗಿ ಕಿರುಚಬೇಕು ಅಥವಾ ಸಾಯಬೇಕು ಎಂದು ನಾನು ಭಾವಿಸಿದೆ! - ಈಗ - ಮತ್ತೆ! - ಕೇಳಿಸಿಕೊಳ್ಳಿ ! ಜೋರಾಗಿ! ಜೋರಾಗಿ! ಜೋರಾಗಿ! ಜೋರಾಗಿ! - ಆ ಸದ್ದು ಕೇಳಿಸುತ್ತಿದೆ...

“ಓ ವಿಲನ್‌ಗಳೇ!” ನಾನು ಜೋರಾಗಿ ಕಿರುಚಿದೆ, “ಇನ್ನೂ... ನಾಟಕ ಮಾಡಬೇಡಿ! ನಾನು ಈ ಕೊಲೆ ಮಾಡಿರುವುದನ್ನು ಒಪ್ಪಿಕೊಳ್ಳುತ್ತೇನೆ! - ಈ ಹಲಗೆಗಳನ್ನು ತೆಗೆದು ಹಾಕಿ! - ಇಲ್ಲಿ, ಇಲ್ಲಿ! - ಅವನ ಭೀಕರ ಹೃದಯ ಹೊಡೆದು ಕೊಳ್ಳುತ್ತಿದೆ! ”...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.