ADVERTISEMENT

ಕಥೆ | ಸಮಾಧಿಯಾಗದವರ ನಡುವೆ...

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 21:45 IST
Last Updated 21 ಜನವರಿ 2023, 21:45 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ವಾರದಿಂದ ಇಡೀ ಬ್ಯಾಡ್ರಟ್ಟಿ ಬೆಂಕಿಯಾಗಿತ್ತು. ಮನೆ ಮನೆಗಳಲ್ಲೂ ಮ್ಯಾಲೆ ಮ್ಯಾಲೆ ಮೀಟಿಂಗುಗಳು. ಟೇಷನ್ನು, ಪಂಚಾಯಿತಿ, ಹಟ್ಟಿ..... ಧಗ ಧಗ ಅನ್ತಿತ್ತು. ಬ್ಯಾಡ್ರಟ್ಟಿ ಯಜಮಾನ್ರುಗಳಂತೂ ಕಣ್ಣಾಗ ನೀರು ತುಂಬಿಕೊಂಡು ಮನಿಗೂ ಮಸಣಕ್ಕೂ ದಿನಕ್ಕೆ ಐದಾರು ಬಾರಿ ಸುತ್ತಾಡಿ ಬರ‍್ತಿದ್ರು. ಎಸ್ಸೈ ಮೇಟಿ ಸಾಹೇಬರಂತೂ ಈ ಕೇಸ್ ಹೇಗೆ ಡೀಲ್ ಮಾಡಬೇಕೆಂದು ತಿಳಿಯದೇ ತಲೆ ಮೇಲೆ ಕೈ ಹೊತ್ತು ಕೂತಿದ್ದರು. ಪಿಡಿಒ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಊರೇ ಬಿಟ್ರು ಅನ್ನೋ ತನಕ ಊರಲ್ಲಿ ಸುದ್ದಿ ಹಬ್ಬಿತ್ತು.

ಸಂತೋಷಪುರದಿಂದ ಚಿತ್ರದುರ್ಗದ ದಾರಿಲಿ ಮೂರು ಕಿಲೋಮೀಟರ್ ದೂರದಲ್ಲಿ ಎಡಭಾಗಕ್ಕೆ ಗುಡಾಳ್ ಮಳ್ಳಜ್ಜರ ತೆಂಗು-ಅಡಿಕೆ ತೋಟ. ಅದರ ಬಾಜುವಿಗೇ ಬ್ಯಾಡರ ಸಮಾದಿಗಳಿರೋ ಮಸಣ. ಮಸಣ ಅಂದ್ರೆ ಒಂದು ಜಾತಿಯವರದಷ್ಟೇ ಅಲ್ಲ. ಮೂರು ಎಕರೆ ಮೂವತ್ತಾರು ಗುಂಟೇಲಿ ಆರಂಭದಲ್ಲಿ ಬ್ಯಾಡ್ರು ಹೆಣ ಹಾಕ್ಕೋತಾರೆ, ಆಚೆ ಕಾಲು ಭಾಗಕ್ಕೆ ಕುರುಬರು ಹೂಳ್ತಾರೆ, ಮೂಲೆಕಡೆಗೆ ಉಪ್ಪಾರ ಗುಡ್ಡೆಗಳಿವೆ. ಆ ಒಟ್ಟು ಮಸಣವೇ ಇದೀಗ ಇಡೀ ಸಂತೋಷಪುರದ ಕುತೂಹಲ ಕೆರಳಿಸಿ ಬ್ಯಾಡರ ನಿದ್ದೆ ಹಾಳು ಮಾಡಿರೋದು.

ಆ ಮಸಣದ ಒಳಗೆಲ್ಲಾ ಉಲ್ಡಪ್ಪರ ತಿಮ್ಮ ಹುಚ್ಚನಂಗೆ ಅಳ್ತಾ ಸುತ್ತು ಹಾಕ್ತಿದ್ದಾನೆ. ಅವನ ಅವ್ವನ ಸಮಾಧಿ ಕಾಣೆಯಾಗಿದೆ; ಅದನ್ನು ಹುಡುಕ್ತಾ ವಾರದಿಂದ ಮನೆ-ಮಸಣ ಒಂದು ಮಾಡಿ ಅಲೆಯುತ್ತಿದ್ದಾನೆ..... ಅವನಿಗೆ ಅವನ ಅವ್ವನ ಸಮಾಧಿ ಸಿಗ್ತಿಲ್ಲ! ‘ಅವ್ವಾ, ಇಲ್ಲೆ...ಇದೇ ಮಸಣದದಾಗೆ ನನ್ನ ಕೈಯಾರೆ ಮಣ್ಣು ಮಾಡಿದ್ದೆ, ನಿನ್ನ ಗುಡ್ಡೆ ಕಾಣ್ತಿಲ್ವಲ್ಲವ್ವಾ? ಎಲ್ಲಿ ಹೋದ್ಯವ್ವಾ? ಮಕ ತೋರಿಸವ್ವಾ?’ ಅಂತ ಜೆಸಿಬಿಯಿಂದ ವಾರದ ಹಿಂದೆ ಮಸಣಾಭಿವೃದ್ಧಿ ಅಂತ ಪಂಚಾಯಿತಿ ಕೆಲಸ ಮಾಡಕ್ ಹೋಗಿ ಎಡವಟ್ಟಾಗಿಬಿಟ್ಟಿತ್ತು. ಅರ್ಧಕರ್ಧ ಮಸಣ ನೆಲಸಮ ಮಾಡಿ ಬಿಟ್ಟಿದ್ದ. ಮೈದಾನದಂತಾದ ಮಸಣದಲ್ಲಿ ಮಣ್ಣಲ್ಲಿ ಮಣ್ಣಾಗಿ ಉಲ್ಡಾಡ್ತಾ ಎದೆ ಮೇಲೆ ಅದೇ ಮಣ್ಣು ಹಾಕ್ಕೊಂಡು ಅಳ್ತಿದ್ದ ಬ್ಯಾಡ್ರಟ್ಟಿ ತಿಮ್ಮ. ಸಂಜೆ ಮುಂದೆ ‘ಹಟ್ಟಿ ಜನ ಅಲ್ಲಿ ಪಂಚಾಯಿತಿ ಸೇರ‍್ಕಂತತೆ ಬಾರಲೆ ಮಾರಾಯ ’ ಅಂತ ಅವನ ಗೆಳೆಯರು ಸಂತೋಷಪುರದ ಪೊಲೀಸ್ ಸ್ಟೇಷನ್ನಿಗೆ ಕರೆದೊಯ್ದರು!

ADVERTISEMENT

ಕಂಟ್ರಾಕ್ಟುದಾರ, ಪಿಡಿಒ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಮೂರೂ ಜಾತಿಯ ಮುಖಂಡರು ಸ್ಟೇಷನ್ ಒಳಗಿದ್ದರು. ಹೊರಗೆ ಆಯಾ ಜಾತಿಯ ದಂಡಿಗೆ ದಂಡೇ ಸೇರಿತ್ತು. ಬೇರೆ ಜನಾಂಗವೂ ಕುತೂಹಲಕ್ಕಿತ್ತು. ತಿಮ್ಮನ ರೋಧನೆಯೇ ಹೆಚ್ಚಾಗಿತ್ತು.

‘ತಗಳಿ ಸಾರ್ ನಮ್ಮ ಕಂಪ್ಲೆಂಟು, ನಮ್ಮ ಭಾವನೆಗಳಿಗೆ ಈ ಹಲ್ಕಾ ನನ್ನ ಮಗ ಕಂಟ್ರಾಕ್ಟುದಾರ ಧಕ್ಕೆ ತಂದಿದ್ದಾನೆ. ಸತ್ತ ಮಾತ್ರಕ್ಕೆ ಸತ್ತವರ ಜೊತೆಗಿನ ನೆನಪೂ ಸಾಯುತ್ತಾ? ಪರಂಪರೆ, ಸನಾತನ ಧಾರ್ಮಿಕ ಬಾಂಧವ್ಯ ಈ ಬೋಳಿಮಗನಿಗೆ ಗೊತ್ತೇನ್ರಿ?’ ನಾಯಕರ ರಾಮಪ್ಪ ಮಾಜಿ ಛೇರ್ಮನ್ ಅಲ್ಲೇ ಮಕ ನೆಲಕ್ ಹಾಕಿ ನಿಂತಿದ್ದ ಕಂಟ್ರಾಕ್ಟುದಾರನಿಗೆ ಹೊಡೆಯಲು ಹೋಗಿ, ಹೊಡೆಯದೇ ಗದರಿಸಿ ಕಣ್ಣು ಗುಡ್ಡೆ ಅಗಲಿಸಿ ಬೈತಿದ್ದ. ಜೊತೆಗಿದ್ದ ಕೆಲ ಪುಡಾರಿ ಹುಡುಗ್ರು ಅವನ ಕಪಾಳಕ್ಕೆ ಈಗಾಗಲೇ ಬಿಗಿದಿದ್ರು. ಬಾಸುಂಡೆ ಕರಿ ಕೆನ್ನೆ ಮೇಲೆ ಕೆಂಪಾಗಿ ಮೂಡಿದ್ದವು.

‘ಈ ದರಿದ್ರ ನನ್ನ ಮಕ್ಳಿಗೆ ಅನುದಾನ ಯಾವನು ಹಾಕಿ ಕೊಟ್ಟಿದ್ದು? ಯಾವ ಹೆಡ್ಡು? ಜಿಪಿಎಸ್ ಮೂಲಕ ಆಗಿದ್ದಾ? ಕ್ರಿಯಾ ಯೋಜನೆ ಮಾಡಿದ್ದಾರಾ? ಮಸಣ ಅಭಿವೃದ್ಧಿಗೆ ಟಿ.ಪಿ, ಜೆಡ್.ಪಿಯಿಂದ ಅನುಮೋದನೆ ಆಗಿದೆಯಾ? ಕಾನೂನು ಮೂಲಕ ಈ ಕೆಲಸಕ್ಕೆ ಮುಂದಾಗಿದ್ರೆ ಯಾವ ಜಾತಿಯ ಮುಖಂಡರನ್ನು ಈ ಪಂಚಾಯಿತಿ ಜನ ಕರೆದು ಗಮನಕ್ಕೆ ತಂದಿದ್ದಾರೆ? ಇದೇನು ಸೈಕಲ್ಲೂ ಓಡಾಡದ ರಸ್ತೆನಾ ಮಣ್ಣು ಕಿತ್ತು ಮಣ್ಣು ಹಾಕಿ ಹಣ ನುಂಗಕೆ? ಕಾಡಲ್ಲಿ ಸೇತುವೆ, ಡಕ್ಕು, ಇಂಗುಗುಂಡಿ ಮಾಡಿ ಹಣ ಇವರ ಹೆಂಡ್ರ ಸೀರೆಗೆ ಹಾಕ್ತಾರಲ್ಲಾ ಹಂಗಾ? ನೂರಾರು ವರ್ಷಗಳಿಂದ ಮೂರು-ನಾಲ್ಕು ಜಾತಿಯವರು ಒಂದೇ ಕಡೆ ಹೆಣ ಹೂಳ್ತಿರೋ ಮಸಣನ ಸಮಾದಿಗಳ ಸಮೇತ ನೆಲಸಮ ಮಾಡಿ ಹೈಸ್ಕೂಲ್ ಮೈದಾನತರ ಸಾಫ್ ಸೀದಾ ಮಾಡಿದ್ದಾನಲ್ಲ ಈ ಸುವ್ವರ್ ಸೂಳೆಮಕ್ಳಿಗೆ ಏನು ಮಾಡಬೇಕು ಹೇಳಿಸಾರ್?

ಮೇಟಿ ಸಾಹೇಬರು ಪಿಡಿಒ ಕಡೆ ನೋಡಿದರು.

‘ಗ್ರಾಮೀಣ ಅಭಿವೃದ್ಧಿಗೆ ಅಂತ ಇಂತಿಷ್ಟು ಫಂಡ್ ಬಂದಿತ್ತು ಅದನ್ನು ಇಯರ್ ಎಂಡ್ ಒಂದು ಹೆಡ್‌ನಲ್ಲಿ ಮಸಣದ ಅಚ್ಚುಕಟ್ಟಿಗೆ ಅಂತ ಹಾಕಿ ಕೊಟ್ಟಿದ್ದು ನಾವೇ, ಆದರೆ ಈ ಮನುಷ್ಯ ಎಲ್ಲಾ ಸಮಾಜದ ಮುಖಂಡರ ಕರೆದು ಮಾತಾಡಿ ಮುಂದುವರೆಯದೇ ಹಣದಾಸೆಗೆ ರೋಡು ಕಿತ್ತು ರೋಡ್ ಹಾಕಿದಂತೆ ಇಡೀ ಸಮಾಧಿ ನೆಲಸಮ ಮಾಡಿ ಈಗ ನಿಮ್ಮೆದುರು ನಮ್ಮ ಸಮಾಧಿ ಕಟ್ಟಕ್ ಹೊಂಟಿದ್ದಾನೆ. ದಯಮಾಡಿ ಕ್ಷಮಿಸಿ, ಇದು ನಮ್ಮಿಂದಾದ ತಪ್ಪು, ತಿದ್ದಿಕೊಳ್ಳಲು ಅವಕಾಶ ಕೊಡಿ ಅಥವಾ ನೀವು ಏನೇ ಶಿಕ್ಷೆ ಕೊಟ್ರೂ ಅನುಭವಿಸಲು ಸಿದ್ದ ಆದರೆ ಇದು ನಮ್ಮಿಂದ ಬೇಕು ಅಂತ ಆದ ತಪ್ಪಲ್ಲ..’ ಕ್ಷೀಣ ದನಿಯಲ್ಲಿ ಅಂದ ಪಿಡಿಒ ತಲೆ ತಗ್ಗಿಸಿ.

ಅವನ ದನಿಯಲ್ಲಿ ಪ್ರಾಮಾಣಿಕತೆಯಿತ್ತು.

‘ಸುಮ್ಮನೆ ಕಂಪ್ಲೆಂಟ್ ತಗಳಿ ದೇವರು.. ಈ ಪಿಡಿಒ, ಆಧ್ಯಕ್ಷ, ಕಂಟ್ರಾಕ್ಟುದಾರ ಮತ್ತು ಇದಕ್ಕೆ ಸಂಬಂಧಿಸಿದ ಪಂಚಾಯಿತಿ ಕೆಲವು ಸದಸ್ಯರ ಮೇಲೆ ಎಫ್ಐಆರ್ ಹಾಕಿ. ನಾವೂ ಮನುಷ್ಯರು. ನೂರಾರು ವರ್ಷಗಳಿಂದ ಚೆಂದಾಗಿ ಬಾಳುತ್ತಿರುವ ಈ ಸಂತೋಷಪುರದಲ್ಲಿ ಈಗ ಜಾತಿ ಜಾತಿ ನಡುವೆ ವಿಷ ಬೀಜ ಹಾಕಕ್ ಹೊಂಟರಾ ಈ ಚೋದಿ ಮಕ್ಳು? ಅಂದ ಮತ್ತೊಂದು ಜಾತಿಯ ಮತ್ತೊಬ್ಬ ಮುಖಂಡ!

ನಾಲ್ಕು ವರ್ಷ ಪಿಯುಸಿ ಓದಿ ಎಲ್ಎಲ್‌ಬಿ ಅಡ್ಮಿಷನ್ ಆಗಿ ಮೊದಲನೇ ವರ್ಷಕ್ಕೇ ವಾಪಾಸು ಬಂದ ಬ್ಯಾಡರ ಕಣ್ಣಪ್ಪೇಶ ಸಧ್ಯ ಬ್ಯಾಡರ ಗುಂಪಿನಲ್ಲಿ ಕ್ರಾಂತಿಕಾರಿ ನಾಯಕ ಅಂತ ತನಗೆ ತಾನೇ ಬಿಂಬಿಸಿಕೊಂಡು ಹಾರಾಡ್ತಾ ಹೋರಾಡ್ತಿದ್ದ. ಇದೀಗ ಅವನೇ ಮುಂದಾಗಿ ಬಿಳಿ ಹಾಳೆ ಮೇಲೆ ದೂರು ಬರೆದು ಮಾಜಿ ಛೇರ್ಮನ್ ಹೇಳಿದ ಹೆಸರುಗಳಿಗೆ ಅಪರಾಧಿ ಅಂತ ಅವನೇ ನಿರ್ಧರಿಸಿ ಅಲ್ಲಿದ್ದ ಜನರಲ್ಲಿ ಸೈನ್ ಮಾಡಕ್ ಬರೋರತ್ರ ಮಾಡಿಸಿ ಹೆಡ್ ಕಾನ್ಸಟೇಬಲ್ ಓಂಕಾರಪ್ಪನ ಮುಂದೆ ಹಿಡಿದು ‘ತಕ್ಕಳಿ ನಮ್ ಬ್ಯಾಡರ ದೂರಿದು. ನಮಗೆ ಅನ್ಯಾಯ ಆಗಿದೆ. ನಮ್ಮ ಪೂರ್ವಜರು ಮಕ್ಕಂಡಿದ್ದ ಜಾಗನ ಹಾಳು ಮಾಡಿ ಅವರ ಆತ್ಮ ಅಲಿಯಂಗ್ ಮಾಡಿರೋ ಭೋಸುಡಿ ಮಕ್ಳಿಗೆ ಕಾನೂನ್ನಗೆ ಇರೋ ಎಲ್ಲಾ ಸೆಕ್ಷನ್ನು ಹಾಕಿ ಒಳಗ್ ನೂಕ್ರಿ. ಈ ಕಂಟ್ರಾಕ್ಟರನ ಲೈಸೆನ್ಸ್ ರದ್ದು ಮಾಡ್ಸಿ. ಈ ಪಿಡಿಒ ಅಮಾನತ್ತಾಗಬೇಕು. ಟಿಪಿ-ಜೆಡ್‌ಪಿ ಕೊನಿಗೆ ವಿಧಾನಸೌಧತನಕ ಹೋಗ್ತೀವಿ. ಈ ಆಧ್ಯಕ್ಷ ಇದ್ದದ್ದು ಒಂದು ಪಕ್ಷ, ಗೆದ್ದ ಮೇಲೆ ಬೇರೆ ಪಾರ್ಟಿ ಸೇರಿ ದೌಲತ್ ಹಡಿಸ್ತಿದ್ದಾನೆ. ಇವನ ಕುರ್ಚಿನೂ ಕಳಚ್ಕಬೇಕು, ಈ ಸದಸ್ಯರಿಗೆ ಕೋರ್ಟ್‌ ಕಟಕಟೆ ಹತ್ಸಿ ಯಾವನ್ನೂ ಬಿಡಬೇಡಿ’ ಅಂತ ಹಲ್ ಹಲ್ ಕಡಿದು ಅಬ್ಬರಿಸಿದ.

ಕಂಪ್ಲೆಂಟು ಪಡೆದು ಸ್ಟೇಷನ್ನು ಖಾಲಿ ಮಾಡಿಸಿ ಎಲ್ಲರನ್ನೂ ಕಳಿಸಿದರು ಮೇಟಿ ಸಾಹೇಬರು. ಪಂಚಾಯಿತಿ ಇದೆ ಬಾರೋ ಅಂತ ತಿಮ್ಮನನ್ನು ಕರೆತಂದವರು ಇವನ ಸಂಕಟ ಯಾರೊಬ್ಬರೂ ಸಭೆ ಎದುರು ಯಾರೂ ತರಲಿಲ್ಲ. ಅವನ ಗೋಳನ್ನು ಯಾರೂ ಕೇಳಲೂ ಇಲ್ಲ. ಮತ್ತೆ ಅಳುತ್ತಾ ಸೈಕಲ್ ತುಳಿಯುತ್ತಾ ಸಂಜೆ ದಾಟಿದ್ದರೂ ಅವ್ವ, ಅವ್ವಾ... ಅನ್ನುತ್ತಾ ಮಸಣದೆಡೆ ಹೋಗಿಬಿಟ್ಟ.

ಈ ಉಲ್ಡಪ್ಪರ ತಿಮ್ಮ ಊರಲ್ಲಿರೋ ಸಾಲುಮರಗಳ ನಡುವೆ ತಳ್ಳುಗಾಡಿಲಿ ಕಾರ ಮಂಡಕ್ಕಿ ಮಾರಿಕೊಂಡು ಬದುಕುತ್ತಿದ್ದ. ಆರಂಭದಲ್ಲಿ ವ್ಯಾಪಾರ ಚೆನ್ನಾಗಿ ನಡಿತಾಯಿತ್ತು. ಕ್ರಮೇಣ ಆಜಾಬಾಜು ಎದುರ ಬದುರ ತಳ್ಳುಗಾಡಿಗಳು ನೂರಾರು ಆಗಿಬಿಟ್ಟವು. ಕಾರ ಮಂಡಕ್ಕಿ ಜೊತೆಗೆ ಎಗ್ ರೈಸ್, ಪಾನಿಪೂರಿ, ಜಿಲೇಬಿ, ಗೋಬಿ, ಫಾಸ್ಟ್ ಫುಡ್ ಮತ್ತೇನೇನೋ ಪೈಪೋಟಿಯಲ್ಲಿ ಬಂದು ತಿಮ್ಮನ ಅಂಗಡಿಗೆ ಎಳ್ಳು-ನೀರು ಬಿಟ್ಟಂಗಾಯಿತು. ವ್ಯಾಪಾರ ಡಲ್ಲಾಯಿತು. ಆಡೋ ಹುಡುಗರಿಂದ ಹಿಡಿದು ಅಲ್ಲಾಡೋ ಮುದುಕರವರೆಗೂ ಬಾಟಲಿಯಿಂದ ಅದೇನೇನೋ ಸುರಿದು, ಭರ್ಜರಿ ಒಗ್ಗರಣೆ ಘಾಟಿಂದ ಮಾಡೋ ಬಣ್ಣ ಬಣ್ಣದ ಐಟಂಗಳಿಗೆ ಮುಗಿಬಿದ್ದರು. ಕಾರ ಮಂಡಕ್ಕಿನ ಕ್ಯಾರೆ ಅನ್ನಲಿಲ್ಲ. ತಿಮ್ಮನಿಗೆ ಬದುಕು ಮತ್ತು ವ್ಯಾಪಾರ ಎರಡೂ ಭಾರವಾಗಿಬಿಟ್ಟಿತು. ಇಲ್ಲೇ ಇದ್ರೆ ಅವ್ವನ ಹೊಟ್ಟೆ ತಮ್ಮ ತಂಗಿಯರ ಜೀವನ ಬರಕತ್ತಾಗಲ್ಲ ಅಂತ ತಮ್ಮನ್ನ ಕರಕೊಂಡು ಒಂದು ರಾತ್ರಿ ಮರ್ಚೆಂಟ್ ಬಸ್ಸಿಗೆ ಬೆಂಗಳೂರು ಹತ್ತಿಬಿಟ್ಟ. ಸಾಬರ ರೆಹಮಾನಿ ಈಗಾಗಲೇ ಬೆಂಗಳೂರಲ್ಲಿ ಗಾರ್ಮೆಂಟ್ಸ್ ಪ್ರಪಂಚದಲ್ಲಿ ಈಗಲೂ ದೊಡ್ಡ ಹೆಸರು ಮಾಡಿದ್ದ. ಮಸೀದಿ ಕೇರಿ ಬಳಿ ಹೋಗಿ ರೆಹಮಾನಿ ಮನೆ ಹುಡುಕಿ ನಂಬರ್ ತಗಂಡು ಮಾತಾಡಿ ತಿಮ್ಮ ಬೆಂಗಳೂರು ಬಿದ್ದಿದ್ದ. ಹೋಗಿದ್ದಕ್ಕೆ ಯಾವುದೇ ನಷ್ಟ ಆಗಲಿಲ್ಲ. ರೆಹಮಾನಿಯ ಕೃಪೆಯಿಂದ ತಿಮ್ಮನಿಗೂ ಅವನ ತಮ್ಮನಿಗೂ ಗಾರ್ಮೆಂಟ್ಸಲ್ಲಿ ಕೆಲಸ ಸಿಕ್ಕಿತು. ಸಣ್ಣ ರೂಮು ಮಾಡಿಕೊಂಡು ಇಬ್ಬರಿಂದ ಎಲ್ಲ ಖರ್ಚು ಕಳೆದು ತಿಂಗಳಿಗೆ ಎಂಟರಿಂದ ಹತ್ತು ಸಾವಿರ ಉಳಿತಿತ್ತು. ಸಂತೋಷಪುರಕ್ಕೆ ಬಂದು ಹೋಗೋರ ಕೈಲಿ ಊರಲ್ಲಿದ್ದ ಅವ್ವ ಮತ್ತು ತಂಗಿಗೆ ಹಣ ಕಳಿಸಿ ಫೋನ್ ಮಾಡುತ್ತಿದ್ದ. ತಂಗಿ ಪಿಯುಸಿ ಓದ್ತಾ ಇದ್ದಳು. ಅವಳ ಮದುವೆಗೆ ಹಣ ಕೂಡಿಡುತ್ತಿದ್ದ ತಿಮ್ಮ. ಬಾಳು ಬಂಗಾರ ಆಯಿತು ಅನ್ನುವಾಗಲೇ ಅದೆಂಥದೋ ಕೊರೋನಾ ಕಾಯಿಲೆ ಬಂದು ನಾಡಿಗೆ ನಾಡೇ ಸಾವಿನ ಬಾಯಿಗೆ ಬಿದ್ದು ತಿಮ್ಮ- ತಮ್ಮನ ಸಮೇತ ಬೆಂಗಳೂರು ಬಿಟ್ಟು ಮರಳಿ ಮನೆ ಸೇರಿದ.

ಬೆಂಗಳೂರಿನಲ್ಲಿ ಎಲ್ಲಾ ಬಂದ್ ಆಗಿ ಹೋಯಿತು. ಅಣ್ಣ ತಮ್ಮ ಊರು ಸೇರಿಕೊಂಡು ಮತ್ತೆ ಕಾರ ಮಂಡಕ್ಕಿ ಅಂಗಡಿ ತೆರಯುವ ಆಲೋಚನೆ ಮಾಡುತ್ತಿದ್ದರು. ಮೊದಲ ಅಲೆ ಅದು. ಇಡೀ ಕರ್ನಾಟಕಕ್ಕೆ ಕೊರೋನಾ ಸಾಬರಿಂದ ಬಂತು, ಅವರೇ ಹೊರಗಿಂದ ತಂದ್ರು, ಅವರನ್ನು ಕರ್ನಾಟಕ ಬಿಟ್ಟು ಓಡಿಸಿ, ಹಳ್ಳಿಗಳಲ್ಲಿ ವ್ಯಾಪಾರಕ್ಕೆ ಅವರನ್ನು ಒಳಗೆ ಬಿಟ್ಟುಕೊಳ್ಳಬೇಡಿ, ಅವರ ಬಳಿ ವ್ಯವಹಾರ ಇಟ್ಕೊಬೇಡಿ ನಾಡಿನಾದ್ಯಂತ ಸುದ್ದಿ ಹಬ್ಬಿತ್ತು. ತಿಮ್ಮ ಮಾತ್ರ ರೆಹಮಾನಿಯ ಮಾನವೀಯ ಮುಖ ಹಟ್ಟಿ ಬಾಗಿಲ ಗೆಳೆಯರಿಗೆ ಹೇಳಿ ಆ ಕಾರಣ ಅಲ್ಲಗಳೆಯುತ್ತಿದ್ದ. ಅನ್ನ ಕೊಟ್ಟ, ಆಶ್ರಯ ಕೊಟ್ಟ, ಕೆಲಸ ಕೊಡಿಸಿ ಕೈ ಹಿಡಿದ ವ್ಯಕ್ತಿ ಎಂದೂ ಜಾತಿ ನೋಡಲಿಲ್ಲ. ನಮ್ಮೂರಿನ ನೂರಾರು ಜನ ಅವನಿಂದ ಎರಡು ಹೊತ್ತು ಅನ್ನ ಉಣ್ಣುತ್ತಿದ್ದಾರೆ. ಅವರಲ್ಲಿ ಹಿಂದೂಗಳೇ ಜಾಸ್ತಿ ಅಂತ ಸಮಜಾಯಿಷಿ ಕೊಡುತ್ತಿದ್ದ.

ಕೋಟೆ ಬೀದಿಯಲ್ಲಿ ಸಹಜವಾಗಿ ಸತ್ತ ಸಾಬರಿಗೆಲ್ಲಾ ಕೊರೋನಾ ಅಂತ ಹಬ್ಬಿಸಿ ಮಸೀದಿ ಕೇರಿಗಳನ್ನೆಲ್ಲಾ ಜಾಲಾಡಿಸಿ ಪೊಲೀಸ್, ಪಂಚಾಯಿತಿ ಮತ್ತು ಆರೋಗ್ಯ ಇಲಾಖೆ ಹುಡುಕಿ ಹುಡುಕಿ ಊರಿನಲ್ಲಿ ಅಲ್ಲಲ್ಲಿ ಶಾಮಿಯಾನ ಹಾಕಿ ತಪಾಸಣೆ ಮಾಡತೊಡಗಿದರು. ಸಾಬರಲ್ಲಿ ಹತ್ತು ಹದಿನೈದು ಜನ ವಯಸ್ಸಾದವರನ್ನು, ಹಿಂದೂಗಳಲ್ಲಿ ಮೂರ‍್ನಾಲ್ಕು ಜನರನ್ನು ಹೋಂ-ಕ್ವಾರೈಂಟೈನಿಗೆ ಕರೆದೊಯ್ದು ಊರ ಹೊರಗಿನ ಕಿತ್ತೂರು ಚೆನ್ನಮ್ಮ ಶಾಲೆಗೆ ಬಿಟ್ಟರು.

ಅದೇ ಸಮಯಕ್ಕೆ ಬಡ್ಡಿ ಲೇವಾದೇವಿಯಲ್ಲಿ ಕುಖ್ಯಾತನಾದ ಬೇವಿನ ಮರದ ನಾಗರಾಜ ಬಾಕಿ ವಸೂಲಿಗೆ ಹೋದ ಮಗನಿಗೆ ಫೋನಲ್ಲಿ ಸಾಬರನ್ನು ಕುರಿತು ‘ಅವರೇ ಕೊರೋನಾಕ್ಕೆ ಕಾರಣ, ಅವರ ಮನೆ ಒಳಗೆ ಹೋಗಬೇಡ, ಆ ಅನಿಷ್ಟ ಸೂಳೇ ಮಕ್ಕಳ ಕೈಯಿಂದ ಹಣ ತಗಬೇಡ, ಒಂದು ಪ್ಲಾಸ್ಟಿಕ್ ಕವರಲ್ಲಿ ತಗೋ, ಆಮೇಲೆ ಸ್ಯಾನಿಟೈಸರ್ ಹಾಕಿ ಕೈಕಾಲು ತೊಳ್ಕ, ಬಹಳ ಗಲೀಜು ನನ್ ಮಕ್ಳು ಅವ್ರು’ ಅಂತ ಅಸಹ್ಯವಾಗಿ ಮಾತಾಡಿದ್ದು ಹೇಗೋ ಇಡೀ ಊರಿಗೆ ಹಬ್ಬಿ ಸಾಬರ ಹುಡುಗರು ಸಿಡಿದೆದ್ದು ನಾಗರಾಜನನ್ನು ಹೊಡೆಯಲು ಸಜ್ಜಾದಾಗ ಮಸೀದಿಯ ಮುಖಂಡ ಖಾಜಿ ಏಜಾಸ್ ಅದನ್ನು ಸಾವಧಾನವಾಗಿ ತಿಳಿಗೊಳಿಸಿದ್ದು ಎಲ್ಲರೂ ನಿಟ್ಟುಸಿರು ಬಿಡುವಂತಾಗಿತ್ತು. ಇಂಥಾ ಸಣ್ಣ ಊರಲ್ಲೂ ಕೆಲವು ದಿನಗಳ ಕಾಲ ಸಾಬರು ಜೀವ ಮುಷ್ಠಿಯಲ್ಲಿ ಹಿಡಿದು ಬಾಳಿದರು.

ಆ ಹಂತದಲ್ಲೇ ಸಂತೋಷಪುರದಲ್ಲಿ ಸಾಲು ಸಾಲು ಹೆಣಗಳು ಮಸಣ ಸೇರಿಬಿಟ್ಟವು. ಅವರಿವರೆನ್ನದೇ ಕೊರೋನಾ ನೆಪದಲ್ಲಿ ಜೀವಗಳು ಇದ್ದಕ್ಕಿದ್ದಂತೆ ಕೊನೆಯಾದವು! ಅವುಗಳಲ್ಲಿ ಈ ತಿಮ್ಮನ ಎಪ್ಪತ್ತು ವರುಷದ ತಾಯಿಯೂ ಒಬ್ಬರು. ಹೋಂ-ಕ್ವಾರಂಟೈನಿಗೆ ಹೋದವರು ಉಸಿರಾಟದ ಸಮಸ್ಯೆಯಾಗಿ ಅಲ್ಲಿಂದ ದಾವಣಗೆರೆ ಸಿ.ಜಿ ಆಸ್ಪತ್ರೆ ಮುಟ್ಟಿದವರು ಮರಳಿ ಮನೆ ಕಡೆ ಬಾರದೇ ಆಂಬುಲೆನ್ಸಲ್ಲಿ ಸೀದಾ ಈ ಮಸಣ ಸೇರಿದ್ದರು. ಆಂಬುಲೆನ್ಸ ಮಂದಿ ಬಿಟ್ಟು ಮತ್ಯಾರೂ ಇಲ್ಲ. ನೆಂಟರು, ಗೆಳೆಯರು ದೂರ ದೂರ! ತಿಮ್ಮನೇ ಮುಂದಾಗಿ ಅಮ್ಮನ ಹೆಣ ಮಣ್ಣಿಗಿಳಿಸಿ ಸಮಾಧಿ ಮಾಡಿ ಕಣ್ತುಂಬಿಕೊಂಡಿದ್ದ. ದುಡಿಮೆ ಚೆನ್ನಾಗಾದರೆ ಬಿಳಿ ಕಲ್ಲಿಂದ ಅಚ್ಚುಕಟ್ಟಾಗಿ ಗೋರಿ ಕಟ್ಟಿಸೋಣ, ಅವ್ವನ ತಲಿಗೆ ಒಂದು ಬೇವಿನ ಸಸಿ ನೆಟ್ಟು ನೆಳ್ಳು ಮಾಡೋಣ ಅಂದುಕೊಂಡಿದ್ದ. ಅಪ್ಪ ಸತ್ತು ಯಾವ ಕಾಲವೋ ಅವನ ಸಮಾಧಿ ಗುರುತು ಸಿಗಲಿಲ್ಲ. ಕಡೆಗೆ ಅವ್ವನ ಸಮಾಧಿನಾದರೂ ಸುಂದರವಾಗಿ ಕಟ್ಟಿಸೋಣ ಅಂತ ಬಹಳ ಬಹಳ ಕನಸು ಕಂಡಿದ್ದ ತಿಮ್ಮ.

ಅವ್ವನ ಸಮಾಧಿ ಕಣ್ಮರೆಯಾಗಿದೆ. ಅದೇ ದುಃಖ ಅವನೆದೆ ತುಂಬಾ ತುಂಬಿ ವಾರದಿಂದ ಅವ್ವನ ಸಮಾಧಿ ಸ್ಥಳ ಹುಡುಕಾಡಿ ಸೋತಿದ್ದ. ಅಲ್ಲಲ್ಲಿ ಕೈ ಮೂಳೆ ಕಾಲ ಮೂಳೆ ಯಾರದೋ ಬುರುಡೆ ಕಾಣುತ್ತಿದ್ದವು. ಎಲ್ಲವನ್ನೂ ಹಿಡಿದು ಅವ್ವನ ಕೈಯಾ? ಅವ್ವನ ಕಾಲಾ ಅವ್ವನ ಬುರುಡೆಯಾ ಅಂತ ಆಕಾಶ ಮುಟ್ಟುವಂತೆ ಅಳುತ್ತಿದ್ದ.

‘ಕಂಟ್ರಾಕ್ಟುದಾರ ಕುರುಬರ ಆಸಾಮಿ. ಅವರೂ ಇಲ್ಲೆ ಗುಡ್ಡೆ ಹಾಕೋದು. ಉಪ್ಪಾರ‍್ರು ಇಲ್ಲೆ ಸಮಾಧಿ ಮಾಡೋದು. ಎಲ್ಲರಿಗೂ ಅನ್ಯಾಯ ಆಗಿದೆ. ಆಗಬಾರದಿತ್ತು ಆಗಿ ಹೋಗಿದೆ ಮುಂದೇನು ಮಾಡುವುದು? ಎಂತೆಂಥ ಸಮಸ್ಯೆಗಳಿಗೆ ದಾರಿಯಿರುತ್ತೆ ಹಂಗೇ ಇದಕ್ಕೂ ಮಾಡಿ’ ಅಂತ ಎಲ್ಲಾ ಸಮಾಜದ ಹಿರಿಯರ ಒಂದೇ ಮಾತು. ‘ಇದರಲ್ಲಿ ಹಲವರ ಪಾತ್ರವಿದೆ. ಶಿಕ್ಷೆ ಕೊಡಿಸಿದರೆ ಬರೋ ಲಾಭವೇನು? ಮಸಣ ಅಚ್ಚುಕಟ್ಟು ಮಾಡೋಣ ಅಂತ ಮುಂದಾಗಿದ್ದಾರೆ. ಅದು ಒಂದು ಹೋಗಿ ಮತ್ತೊಂದಾಗಿದೆ. ಇದಕ್ಕೆ ಕೋರ್ಟು ಕಟಕಟೆ ಅಂತ ಹೋರಾಟ ಮಾಡೋಕಾಯ್ತದ? ಹಟ್ಟಿ ಗುಡಿ ಮುಂದೆ ಅವರಿಗೆಲ್ಲಾ ಕರೆದು ಎಲ್ಲಾ ಸಮಾಜದ ಮುಖಂಡರ ಮುಂದೆ ಮೂರೂ ಗುಡಿಗಳಿಗೆ ಒಂದಿಷ್ಟು ತಪ್ಪು ಕಾಣಿಕೆ ಕೊಟ್ಟು ಮುಂದೆ ಏನೂ ಅವಾಂತರ ಆಗದಂಗೆ ಉಳಿದಿರೋ ಸಮಾಧಿಗಳನ್ನೆಲ್ಲಾ ಉಳಿಸಿಕೊಂಡು ಹೋಗಿ ಮಸಣ ನೀಟು ಮಾಡಿಕೊಡಲಿ’ ಅಂತ ಹಿರೀಕರು ನಾಯಕರ ಯುವ ಮುಖಂಡರ ಬಳಿ ಹೇಳಿದರು. ಬಹಳ ಜನ ಒಪ್ಕೊಂಡ್ರು ಕೆಲವರು ಗುರ್ ಅಂದರು.

ಪಿಡಿಒ, ಅಧ್ಯಕ್ಷ, ಕಂಟ್ರಾಕ್ಟುದಾರ, ಇಬ್ಬರು ಸದಸ್ಯರು ಹೇಳಿದ ದಿನ, ಹೇಳಿದ ಜಾಗಕ್ಕೆ ಬಂದರು. ‘ದೊಡ್ಡವರ ಮಾತಿಗೆ ಎದುರಾಡಲ್ಲ. ನೀವು ಏನು ಹೇಳಿದರೂ ತಲೆ ಬಾಗುತ್ತೇವೆ’ ಅಂದು ಕೈ ಕಟ್ಟಿ ನಿಂತರು.

ಕಣ್ಣೇಶಪ್ಪ ಮಾತ್ರ ತನ್ನೊಳಗೇ ಕ್ರಿಮಿನಲ್ ತಲೆ ಓಡಿಸಿ ಪ್ರತಿ ಮೀಟಿಂಗುಗಳ ವೀಡಿಯೋ, ಫೋನ್ ರೆಕರ‍್ಡಿಂಗ್ ಮಾಡಿಕೊಂಡು ಇಟ್ಟುಕೊಳ್ಳುತ್ತಿದ್ದ. ಒಮ್ಮೆ ಪಿಡಿಒ ಮಾತಾಡಿಸಿ ಮಾಹಿತಿ, ಮತ್ತೊಮ್ಮೆ ಅಧ್ಯಕ್ಷನ ಬಾಯಿಂದ ಬರೋ ಮಾತು, ಕಂಟ್ರಾಕ್ಟುದಾರನ ಜೊತೆಯಲ್ಲಿ ಕುಡಿಯಲು ಕೂತು ಅವನ ಮಾತು ಎಲ್ಲಾ ಸ್ಟಾಕು ಮಾಡಿಕೊಂಡು ಒಳಗೇ ನಗ್ತಿದ್ದ.

‘ನಾವು ಹೇಳೋದೇನೂ ಇಲ್ಲ. ಮಾಡಿರೋ ಅನಾಚಾರ ನೀವು, ನೀವೇ ಹೆಂಗೆ, ಯಾವ ರೀತಿ ಸರಿ ಮಾಡ್ತಿರೋ ನೋಡಿ... ಈ ಸಮಸ್ಯೆಗೆ ಪರಿಹಾರ ಮಹಾನುಭಾವರು ನೀವೇ ಹೇಳಿ’ ಅಂದ ಮಾಜಿ ಛೇರ್ಮನ್ ರಾಮಪ್ಪ. ಮಾತಲ್ಲಿ ವ್ಯಂಗ್ಯವಿತ್ತು. ಆದರೆ ಅಂದಿನ ಗರಮ್ ದನಿ ಈಗಿರಲಿಲ್ಲ. ಕಂಟ್ರಾಕ್ಟುದಾರ ಗಂಟಲು ಸರಿ ಮಾಡಿಕೊಂಡು ಏನೋ ಅನ್ನಲು ಅನ್ನಲು ಹೊರಟ ಅಷ್ಟರಲ್ಲಿ ಪಿಡಿಒ ಮುಂದಾಗಿ ‘ಮಸಣಕ್ಕಾಗಿಯೇ ಇಪ್ಪತ್ತು ಲಕ್ಷದ ಅನುದಾನ ಹಾಕಿ ಕೊಡ್ತೇನೆ. ಯಾರಾದರೂ ನಿಮ್ಮಲ್ಲಿ ಕೆಲಸ ಮಾಡಿಸಲಿ. ಸುತ್ತಾ ತಂತಿಬೇಲಿ ಹಾಕಿ ಕೊಡಿಸುವೆ ಅದು ಪಂಚಾಯಿತಿ ಲೆಕ್ಕವಲ್ಲ, ನಮ್ಮ ಜೇಬಿಂದ ಕೊಡ್ತೇವೆ. ಜೊತೆಗೆ ಮೂರೂ ದೇವಸ್ಥಾನಗಳಿಗೆ ತಲಾ ಹತ್ತು ಸಾವಿರ ರುಪಾಯಿಗಳ ಕಾಣಿಕೆ ಕೊಡ್ತೀವಿ’ ಅಂದಾಗ ಮುಖಂಡರು ಮೌನವಾದರು. ಏನು ಮಾತಾಡಬೇಕೆಂದು ತಿಳಿಯದೇ ಮಕ ಮಕ ನೋಡಿಕೊಂಡರು. ತಿಮ್ಮ ಮಾತ್ರ ಮತ್ತೆ ದೇವಸ್ಥಾನದ ಕಟ್ಟೆ ಮೇಲೆ ಕೂತು ‘ನಮ್ಮವ್ವನ ಸಮಾಧಿ ಹುಡುಕಿ ಕೊಡ್ರೋ, ಗೋರಿ ಕಟ್ಟಿಸ್ತೀನಿ. ಅವ್ವನ್ನ ಹುಡುಕಿ ಕೊಡ್ರೋ ಯಾಕ್ರೋ ನಮ್ಮವ್ವನ್ನ ದೂರ ಮಾಡಿದ್ರೋ, ಅವ್ವ ಎಲ್ಲಿದ್ದಾಳ್ರೋ... ಅವ್ವಾ, ಅವ್ವಾ. ಅವ್ವಾ...’ ಅಂತಾ ಎದೆಬಿರಿಯುವಂತೆ ಅಳುತ್ತಿದ್ದ. ಎಲ್ಲರೂ ತಿಮ್ಮನನ್ನೇ ಕರುಣೆಯಿಂದ ನೋಡಿದರು. ಕಣ್ಣಪ್ಪೇಶ ‘ಮುಚ್ಚಲೇ ಬಾಯಿ, ನಿಮ್ಮೌವ್ವ ಅಷ್ಟೇ ಕಳೆದು ಹೋಗಿಲ್ಲ, ನಮ್ಮಜ್ಜ, ಅವರಪ್ಪ, ಇವನ ದೊಡ್ಡಪ್ಪ, ಇನ್ನೊಬ್ಬರ ಸಣ್ಣಕೂಸು... ಹಿಂಗೆ ಎಲ್ಲಾ ಕಳೆದು ಹೋಗಿದ್ದಾರೆ, ಹುಡ್ಕನ ಸುಮ್ಕಿರು ಅಳಬೇಡ’ ಅಂದ ತಾತ್ಸಾರವಾಗಿ!
ತಿಮ್ಮನ ದುಃಖ ನೋಡಿದ ಪಿಡಿಒ ತುಂಬಿದ ಸಭೆಯಲ್ಲಿ ಅತ್ತುಬಿಟ್ಟ! ರಾಮಪ್ಪ ಎದ್ದು ನಿಂತು ‘ನೋಡ್ರಪ್ಪಾ ಈಗ ಇವರಿವರೇ ತೀರ್ಮಾನ ಮಾಡಿ ಈ ಪರಿಹಾರ ಹೇಳಿದ್ದಾರೆ. ನಂಗೆ ಇದು ಕಬೂಲ್ ಐತೆ. ಆಗಿದ್ದಾಗಿದೆ. ಊರಲ್ಲಿ ಸೌಹಾರ್ದ ವಾತಾವರಣ ಇರಲಿ. ನಾವು ಬ್ಯಾಡ್ರೆಲ್ಲಾ ಸೇರಿ ಕೊಟ್ಟಿರೋ ಪೊಲೀಸ್ ಕಂಪ್ಲೆಂಟು ವಾಪಸ್ ತಗಳನ. ನಮ್ಮಿಂದ ಸರ್ಕಾರಿ ಆಫೀಸರ್‌ಗೆ, ಅವರ ನೌಕರಿಗೆ ಏನೂ ಸಮಸ್ಯೆ ಆಗೋದು ಬ್ಯಾಡ. ಮನೆ ಮನೆಯಿಂದ ಸಹಿ ಸಂಗ್ರಹ ಮಾಡಿ ನಮ್ಮ ನಮ್ಮಲ್ಲೆ ವ್ಯಾಜ್ಯ ಪೈಸಲ್ ಆಗಿದೆ ಅಂತ ಸಹಿ ಪತ್ರ ಮೇಟಿ ಸಾಹೇಬರಿಗೆ ಕೊಟ್ಟು ಸಮಾಜದ ಒಗ್ಗಟ್ಟು ಊರಿಗೆ ತೋರಿಸೋಣ, ಇದನ್ನು ಇಲ್ಲಿಗೆ ನಿಲ್ಲಿಸೋಣ ಏನಂತೀರಾ?’ ಅಂದ ಕೈ ಮುಗಿಯುತ್ತಾ.

ಮುಕ್ಕಾಲು ಭಾಗ ಜನ ಆಗಲಿ ಎಂಬಂತೆ ಕೈ ಎತ್ತಿ ಸಮ್ಮತಿ ತೋರಿಸಿದರು. ಕೆಲ ಹುಡುಗರು ‘ನಮ್ಮ ಸಮಾಜದ ಸಮಾಧಿನೇ ಒಡೆದು ಹಾಳು ಮಾಡಿದ್ದಾರೆ, ನಮ್ ತಾತಾ ಮುತ್ತಾತ ಅಜ್ಜಿ, ದೊಡ್ಡಮ್ಮ ಚಿಕ್ಕಮ್ಮರ ಸಮಾಧಿಗಳು ನೆಲಸಮ ಆಗಿವೆ. ಇಂಥಾ ಜೀವ ಘಾತುಕ ಕೆಲಸಕ್ಕೆ ಈ ನನ್ನ ಮಕ್ಕಳ ತಲೆ ತಲೆಗಳೇ ಸೀಳಬೇಕು, ಜೈಲಿಗೆ ಹಾಕಬೇಕು. ಅದನ್ನು ಬಿಟ್ಟು ಅವರು ಕೊಡೋ ದುಡ್ಡು, ತಪ್ಪುಕಾಣಿಕೆ ತಗಂಡು ನೆಕ್ಕನಾ? ನಾವು ಈ ತೀರ್ಮಾನದ ವಿರುದ್ಧ ಕಾನೂನಾತ್ಮಕವಾಗಿ ಹೋರಾಡ್ತೀವಿ. ಅದ್ಯಾವನ್ ಬಂದು ನಮ್ ಹತ್ರ ಸಹಿ ಮಾಡಿಸ್ಕಂತನೋ ನೋಡನ ನಡಿರಲೆ’ ಅನ್ನುತ್ತಾ ಪಿಡಿಒನ, ಕಂಟ್ರಾಕ್ಟುದಾರನನ್ನು ಗುರಾಯಿಸಿ ಎದ್ದು ಹೋದರು.

ಸದ್ಯ ಊರು ತಣ್ಣಗಾಗಿದೆ ಅಂತ ಅಂದುಕೊಂಡಿದ್ದ ಅಧ್ಯಕ್ಷನ ಎದೆಗೆ ಬಾಂಬು ಬಿದ್ದ ಸುದ್ದಿ ಬಂತು. ಊರಿನ ಕೆಲಸದ ಅನುದಾನ ಸಾಂಕ್ಷನ್ನಿಗೆ ಹೆಚ್ಚುವರಿ ಕೆಲಸದ ಆರ‍್ಡರಿಗೆ ಹಾಲಿ ಎಮ್ಮೆಲ್ಲೆ ಜೊತೆ ಬೆಂಗಳೂರಿಗೆ ಹೋಗಿದ್ದಾಗ ಇದೇ ಅರ್ಧಂಬರ್ಧ ಓದಿದ್ದ ಕಣ್ಣಪ್ಪ ಫೋನ್ ಮಾಡಿ ‘ನೀವು ಇದುವರೆಗೂ ಮಾಡಿರೋ ಅನ್ಯಾಯಗಳದ್ದು ಮತ್ತು ನಮ್ಮ ಸಮಾಜದ ಸಮಾಧಿಯ ಅವಾಂತರ, ಪಿಡಿಒ ಮಾತು ಮತ್ತು ನಿಮ್ಮ ಅಡ್ಡಕಸುಬಿ ಕಾಂಟ್ರಾಕ್ಟುದಾರ ಆಡಿದ ಮಾತು ಎಲ್ಲಾ ಒಂದು ಬಲವಾದ ಫೈಲ್ ಮಾಡಿದ್ದೀನಿ. ಎಸ್‌ಟಿಗಳ ಸಮಾಧಿ ಹಾಳು ಮಾಡಿ ಜಾತಿಗವಮಾನ ಮಾಡಿದ್ದೀರಿ ಅಂತ ಅಟ್ರಾಸಿಟಿ ಕೇಸ್ ಆಧಾರದಲ್ಲಿ ಸಿಬಿಐಗೆ ಈ ಫೈಲ್ ಸಬ್ಮಿಟ್ ಮಾಡ್ತೀನಿ. ಸಮಾಧಿ ಕೆದರಿರೋದು, ಮೂಳೆಗಳು ಹೊರಗೆ ಬಂದಿರೋದು, ಪ್ರತಿ ಪಂಚಾಯಿತಿ ನಡೆದಾಗ ತೆಗೆದಿರೋ ಫೋಟೋಗಳು, ಪೊಲೀಸ್ ಕಂಪ್ಲೇಂಟ್ ಕೊಟ್ಟಿರೋ ಕಾಪಿ, ವೀಡಿಯೋಗಳು, ಕಾಲ್ ರೆಕರ‍್ಡಿಂಗು, ಎಫ್ಐಆರ್ ಕಾಪಿ ಎಲ್ಲಾ ಫೈಲಲ್ಲಿದೆ-ನೋಡಿ ಹೇಳಿ ಏನ್ ಮಾಡನ’ ಅಂದ!

ಅಧ್ಯಕ್ಷನಿಗೆ ಗುಂಡಿಗೆನೇ ಧಸಕ್ಕೆಂದು ‘ಬೇಡ ಮಾರಾಯ, ಊರಲ್ಲಿ ಈಗಾಗಲೇ ತೀರ್ಮಾನ ಆಗಿದೆ. ಮುಖಂಡರು ಒಪ್ಪಿ ಸಹಕಾರ ಕೊಟ್ಟಿದ್ದಾರೆ ಈಗ ನಿಂದೇನು ಹೊಸ ರಾಗ? ಬಿಟ್ಟಾಕಪ್ಪ ಕಣ್ಣಪ್ಪ ಊರಿಗೆ ಬಂದು ಕಾಣ್ತೀನಿ’ ಅಂದ.

‘ಕಾಣೋದೇನೂ ಬೇಡ ನಾ ತೆಪ್ಪಗಿರಬೇಕು ಅಂದ್ರೆ ನಂಗೆ ಎರಡು ಲಕ್ಷ ರುಪಾಯಿ ಕೊಡಬೇಕು. ಹಂಗಾದ್ರೆ ಈ ಫೈಲ್ ನನ್ ಹತ್ರಾನೇ ಇರುತ್ತೆ ನೋಡು’ ಅಂದ. ಅರೆರೆ ಮಿಕ ಬಿತ್ತು ಬಲೆಗೆ ಅಂದುಕೊಳ್ಳುತ್ತಾ ಫೋನಿನ ರೆಕರ‍್ಡಿಂಗ್ ಆನ್ ಮಾಡಿ ‘ತಡಿ ಕಣ್ಣಪ್ಪ ಈ ಬಿಲ್ಡಿಂಗಲ್ಲಿ ಸಿಗ್ನಲ್ ವೀಕು ಹೊರಗ್ ಬರ್ತಿನಿ ಅಂದು ಅರ್ಧ ನಿಮಿಷ ತಡೆದು, ಅದೇನಪ್ಪ ಈಗ ಹೇಳಪ್ಪ’ ಅಂದ ಸವಿಯಾಗಿ. ಅದೇ ಮಾತು ಮತ್ತೆ ಪುನರುಚ್ಚರಿಸಿದ ಕಣ್ಣಪ್ಪ. ‘ಸರಿ, ರಾತ್ರಿ ಬಸ್ಸಿಗೆ ಬರ್ತಿನಿ ಇತ್ಯರ್ಥ ಮಾಡ್ತೀನಿ ಮುಂದುವರೆಯಬೇಡ’ ಅಂದ. ಆಗಲೆಂದು ಕಣ್ಣಪ್ಪನೂ ಒಪ್ಪಿ ಸುಮ್ಮನಾದ.

ಅಲ್ಲಿಂದಲೇ ಅಧ್ಯಕ್ಷ ಈ ವಿಚಾರ ಇಡೀ ಬ್ಯಾಡ್ರ ಸಮಾಜದ ಮುಖಂಡರಿಗೆ ಊರಿನ ಕೆಲ ಬೇರೆ ಜನಾಂಗದ ಮುಖಂಡರಿಗೆ ತಿಳಿಸಿ ಆ ವಾಯ್ಸ್ ರೆಕರ‍್ಡಿಂಗ್ ಎಲ್ಲರಿಗೂ ಕಳಿಸಿಬಿಟ್ಟ. ಅಧ್ಯಕ್ಷ ಊರಿಗೆ ಬರೋದರಲ್ಲಿ ಹತ್ತಾರು ಹುಡುಗರು ಕಣ್ಣಪ್ಪನ ಮನೆ ನುಗ್ಗಿ ‘ಬಾರೋ ನಾವು ನಾಯಕರು ನಮ್ಮ ಎದುರಿಗೇ ಅದೇನೋ ಫೈಲ್ ಮಾಡಿದ್ದೀಯಂತಲ್ಲ ಸಿಬಿಐಗೆ ಕೊಡು. ನಾವೂ ಜೊತಿಗಿರ್ತಿವಿ. ನಿನ್ನ ಮಾತೂ ನೀ ಹೇಳು ನಮ್ಮ ಮಾತು ನಾವು ಹೇಳ್ತೀವಿ. ಸಮಾಜದ ಹಿರಿಯರು ಒಪ್ಪಿ ಮುಗಿದ ತೀರ್ಮಾನ ಬಿಟ್ಟು ನಿನ್ ತೀಟಿಗೆ ಎಂಜಲು ದುಡ್ಡಿಗೆ ಕೈ ಚಾಚ್ತಿಯಾ? ಹಣ ಇಸ್ಕೊಂಡು ಬ್ಯಾಡ್ರು ಸುಮ್ಕಾದ್ರು ಅಂತ ಸಾಯೋತನಕ ಬ್ಯಾಡ್ರಿಗೆ ಬೇರೆ ಜಾತಿ ಜನ ಆಡ್ಕಂಡು, ಅಂಡು ಬಡ್ಕಂಡು ನಗ್ತಾ ತಿರುಗಬೇಕ’ ಅಂತ ಮನೆ ಒಳಗೇ ಆಳಿಗೊಂದೊಂದರಂತೆ ಹಿಗ್ಗಾ ಮುಗ್ಗಾ ಬಾರಿಸಿಬಿಟ್ಟರು. ಅವರ ಅವ್ವ ಬಂದು ಅಳ್ತಾ ಕೈ ಮುಗಿದು ಬಿಡಲು ಕೋರಿದ್ದಕ್ಕೆ ಹುಡುಗರು ಹೊಡೆಯೋದು ನಿಲ್ಸಿ ಮನೆಯಿಂದ ಹೊರನಡೆದರು.

ತಿಮ್ಮಣ್ಣ ಹುಚ್ಚನಂತೆ ಮನೆಗೂ ಮಸಣಕ್ಕೂ ಈಗಲೂ ಅಲೆಯುತ್ತಿದ್ದಾನೆ. ಅವರ ಅವ್ವನ ಸಮಾಧಿ ಅವನಿಗೆ ಸಿಗಲೇ ಇಲ್ಲ. ಅವನಿಗೆ ಯಾರೂ ಸಹಾಯ ಮಾಡಲಿಲ್ಲ. ಸಮಾಧಿಯ ಸುತ್ತಾ ತಂತಿಬೇಲಿ ಕೆಲಸ ಸಾಗಿದೆ. ಊರಿನ ಗುಡಿಗಳ ಗರ್ಭಗುಡಿಗಳು ಲಕಲಕ ಅನ್ನುತ್ತಿವೆ. ಕಣ್ಣಪ್ಪನ ಸ್ವಾಟೆ, ಎಡಗಣ್ಣು ಊದಿಕೊಂಡು ಟವೆಲ್ ಸುತ್ತಿಕೊಂಡು ಓಡಾಡುತ್ತಿದ್ದಾನೆ. ಈಗೀಗ ಸತ್ತವರಿಗೆ ಭವ್ಯವಾಗಿ ಸಮಾಧಿ ಮಾಡಲಾಗುತ್ತಿದೆ. ಪಂಚಾಯಿತಿ ಕಾರ್ಯ-ಕಲಾಪ ಸರಾಗವಾಗಿ ಸಾಗುತ್ತಿವೆ. ಸಹಿ ಮಾಡದವರು ನಾವು ಗೆದ್ದೆವು ಅನ್ನುತ್ತಿದ್ದಾರೆ. ಮಾಡಿದವರು ಊರಲ್ಲಿ ಶಾಂತಿ ಸಾಕು ಎನ್ನುತ್ತಿದ್ದಾರೆ. ಸದ್ಯ ಸಂತೋಷಪುರ ಮಾತು ನುಂಗಿ ಮೌನವಾಗಿದೆ..

ತಿಮ್ಮನಿಗೆ ಹುಚ್ಚು ಹಿಡಿದಿದೆ ಅಂತ ಊರಲ್ಲಿ ಸುದ್ದಿ. ಧಾರವಾಡದ ನಿಮಾನ್ಸ್‌ಗೆ ತಮ್ಮ ಕರೆದೊಯ್ಯಲು ಅವರಿವರ ಬಳಿ ಸಹಾಯ ಕೇಳುತ್ತಿದ್ದಾನೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.