ADVERTISEMENT

ಆಲೂರು ದೊಡ್ಡನಿಂಗಪ್ಪ ಅವರ ಕಥೆ: ನೀಲಾ

ಆಲೂರು ದೊಡ್ಡನಿಂಗಪ್ಪ
Published 19 ಜನವರಿ 2025, 0:37 IST
Last Updated 19 ಜನವರಿ 2025, 0:37 IST
   

ಹೊರಗೆ ಮಳೆ ಸಣ್ಣಗೆ ಹನಿ. ಬಾಗಿಲಂತೆ ನಿಲ್ಲಿಸಿದ್ದ ಹಲಗೆ ಸರಿಸಿದ. ಮೈತಾಗಿ ಸುಯ್ದಾಡುತ್ತಿದ್ದ ಗಾಳಿ ಸುಖ, ಪಕ್ಕಕ್ಕೆ ನಿಂತ ನೀಲಾಳ ಸ್ಪರ್ಶ ಮತ್ತವಳ ಬಿಸುಪಿನಲ್ಲಿ ಸುಖವಿತ್ತು. ಬೀಸುವ ಗಾಳಿಗೆ ಅವಳ ಮುಖದಮೇಲೆ ತೋಯ್ದಾಡುತ್ತಿದ್ದ ಮುಂಗುರುಳ ಸರಿಸಿದ. ಅವಳ ಉದ್ದ ಜಡೆಯ ಸಿಂಬಿಸಿದ. ಜೋಕಾಲಿಯಲಿ ಮಲಗಿದ್ದ ಮಗು ಎದ್ದು ಕುಸು ಕುಸು ಅಳುವಂತೆ ಮಾಡಿ ಎಚ್ಚರಾಯಿತು. ನೀಲಾ ‘ಮಗು ಬಿದ್ದರೆ?’ ಎಂದು ಅತ್ತ ಜಾರಿದಳು. ಜೋಕಾಲಿ ಜೀಕುತ್ತಾ ಬಾಗಿಲತ್ತಲೇ ನೋಡುತ್ತಿದ್ದ ನೀಲಾಳಿಗೆ ನಿದ್ರೆ ಎಂಬ ಮಾಯೆ ಎರಡು ರೆಪ್ಪೆಗಳನ್ನು ಅದುಮಿ ಹಿಡಿದುಬಿಟ್ಟಿತು. ಆ ಕತ್ತಲೊಳಗೆ ಕುಮಾರ ಕರಗಿ ಅದೆತ್ತಲೋ ಹೋಗೇಬಿಟ್ಟ.

ಆ ಸರಿರಾತ್ರಿಯಲಿ ಕುಮಾರ ದಾಳಿಂಬೆ ತೋಟ ಹೊಕ್ಕಾಗ ಎಡೆಬಿಡದೆ ಹನಿಯಾಕಿದ್ದ ಮಳೆ ನಿಂತಿತ್ತು. ವತ್ತಾರೆ ಎದುರಾಗುವ ಕಷ್ಟಕಾರ್ಪಣ್ಯಗಳ ನೆನೆದು ದಾಳಿಂಬೆಯನ್ನು ಹೊರಲಾಗದಷ್ಟು ಕಿತ್ತುಬಿಟ್ಟ. ಹಣ್ಣು ಕೀಳುವಾಗ ಗಿಡಗಳು ಅಲುಗಾಡುತ್ತಿದ್ದವು. ಆತುರಾತುರವಾಗಿ ಹಣ್ಣುಗಳನ್ನ ಚೀಲಕ್ಕೆ ತುಂಬುತ್ತಿದ್ದ. ಆ ಆತುರಕ್ಕೆ ಕೆಳಗೆ ಬಿದ್ದವೆಷ್ಟೊ. ಆ ಕಾರ್ಗತ್ತಲೊಳಗೂ ಅದೇಗೋ ತೋಟದ ಬೇಟೆ ನಾಯಿ ಅವನನ್ನು ಪತ್ತೆಹಚ್ಚಿಬಿಟ್ಟಿತ್ತು. ಬೊಗಳಿದ ಒಂದೇ ಧ್ವನಿಗೆ ಕತ್ತಲೆ ಅಲುಗಿದಂತಾಗಿ ಗಿಡದ ಬಳಿಯ ಗುತ್ತಿಯೊಳಗೆ ಅವಿತುಬಿಟ್ಟ.

ಆ ಗುತ್ತಿಯೊಳಗೆ ನಿಶಾಚರಿಗಳು ಸರಿದಾಡುವ ಸದ್ದು ಕೇಳಿ ಹೆದರಿ ಆ ಚಳಿಯಲ್ಲೂ ಬೆವರತೊಡಗಿದ. ಆ ಮಹಾ ಮೌನದೊಳಗೆ ಪಕ್ಕದಲ್ಲೇ ಏನೋ ಉಸಿರಾಡುತ್ತಿರುವ ಸದ್ದು ಅವನನ್ನು ಸಾವಂತೆ ಕಾಡಿತ್ತು. ಅದೇನೋ ಕಾಲು ತಾಗಿ ಗುತ್ತಿಯೊಳಗಿಂದ ಓಡಿಹೋದಂತೆ ಭಾಸವಾಯಿತು. ಆ ಬೇಟೆ ನಾಯಿ ಅದನ್ನು ಅಟ್ಟಿಸಿಕೊಂಡು ಗುತ್ತಿಯ ಪಕ್ಕದಲ್ಲಿಯೇ ಓಡಿ ಹೋಯಿತು.

ADVERTISEMENT

ಸ್ವಲ್ಪ ಹೊತ್ತಿನಲ್ಲಿ ನಾಯಿಯನ್ನ ಹಿಂಬಾಲಿಸಿ ಯಾರೋ ಬರುತ್ತಿರುವುದು ಗೊತ್ತಾಯಿತು. ಕೆಳಗೆ ಬೀಳಿಸಿದ್ದ ದಾಳಿಂಬೆ ಹಣ್ಣುಗಳು ಕಾಲಿಗೆ ಸಿಕ್ಕಿದ್ದರಿಂದ ತೋಟ ಕಾಯುವ ಕಾವಲುಗಾರನಿಗೆ ಸೂಕ್ಷ್ಮತೆ ಅರ್ಥವಾಗಿಬಿಟ್ಟಿತ್ತು. ಪೊದೆಗೆ ದೊಣ್ಣೆಯಿಂದ ಬೀಸಿ ಬೀಸಿ ಹೊಡೆಯತೊಡಗಿದ. ಆ ಹೊಡೆತಕ್ಕೆ ಎಳೆ ಮೊಗರು ಹೂವುಗಳೆಲ್ಲ ಉದುರುದುರಿ ವಾಸನೆ ಮೂಗಿಗೆ ಬಡಿಯುತ್ತಿತ್ತು. ರೊಚ್ಚಿಗೆದ್ದ ಅವನು ಅಲ್ಲಲ್ಲಿ ತಿವಿದು ತಿವಿದು ತನ್ನ ಸಿಟ್ಟು ಹೊರಹಾಕುತ್ತಿದ್ದ. ಮನಸಾ ಇಚ್ಛೆ ಬಯ್ಯುತ್ತಿದ್ದ. ಪೊದೆಯೊಳಗಿದ್ದ ಆ ಪ್ರಾಣಿಗೆ ಅವನು ತಿವಿದಿರಬೇಕು, ಅದು ಎಚ್ಚರಗೊಂಡು ಮೇಲೇಳುವಾಗ ಅದರ ತಲೆ ಕುಮಾರನ ಬಿನ್ನಿಗೆ ತಾಗಿತ್ತು. ಭಯಭೀತನಾದ ಕುಮಾರ ಇದ್ದಕ್ಕಿದ್ದಂತೆ ಚಂಗನೆ ಪೊದೆಯೊಳಗಿಂದ ನೆಗೆದು ಓಡಲಾರಂಭಿಸಿದ. ತೋಟದ ಕಾವಲುಗಾರ ಅಟ್ಟಿಸಿಕೊಂಡು ಅವನ ಹಿಂದೆ ಓಡಿದ. ಅತ್ತ ಎಲ್ಲೋ ಓಡಿಹೋಗಿದ್ದ ನಾಯಿಗೆ ಬೇಟೆ ಸಿಗದೆ ಅದೇ ಸಿಟ್ಟಿನಲ್ಲಿ ಹಿಂದಿರುಗಿದಂತಿತ್ತು. ಅದು ಬಂದು ಬೇಟೆಗಾರನ ಜೊತೆ ಸೇರಿಕೊಂಡಿದ್ದು ಕುಮಾರನಿಗೆ ಜೀವ ಬಾಯಿಗೆ ಬಂದಂತಾಯಿತು. ಮಳೆಯಿಂದಾಗಿ ಉಂಟಾಗಿದ್ದ ಕೆಸರಿನೊಳಗೆ ಓಡಲು ಸಾಧ್ಯವಾಗದೆ ಸಿಕ್ಕಿಬಿದ್ದ.

ಕತ್ತಲ ಕಡುಕಪ್ಪಿನೊಳಗೂ ಒಬ್ಬರಿಗೊಬ್ಬರು ಗುರುತಿಗಾಗಿ ತಡಕಾಡಿದರು. ಎಷ್ಟೇ ಕಣ್ಣು ಅರಳಿಸಿ ನೋಡಿದರೂ ಯಾರೆಂದು ತಿಳಿಯದು. ಅವರು ಕಾಣದಂತೆ ಕತ್ತಲೆ ಅವರ ಮೇಲೆ ಮಾಯದ ಕಪ್ಪು ಹೊದಿಕೆಯನ್ನು ಹೊದಿಸಿರಬೇಕು. ಗುರುತು ಸಿಗದಿರಲೆಂದು ಕುಮಾರ ತನ್ನ ಮುಖಕ್ಕೆ ತಾನೇ ಕೆಸರು ಮೆತ್ತುಕೊಂಡ. ಎಷ್ಟು ಕಳ್ಳಪಟ್ಟುಗಳನ್ನು ಹಾಕಿದರೂ ಕಾವಲುಗಾರನ ವೃತ್ತಿಯ ಬಿಗಿಪಟ್ಟು ಸಡಿಲಗೊಳ್ಳುತ್ತಲೇ ಇಲ್ಲ. ಮದಗಜಗಳಂತೆ ಜಗ್ಗಾಡಿದರು. ಗುದ್ದಾಡಿದರು. ಕೈಗೆ ಮೆತ್ತಿಕೊಳ್ಳುತ್ತಿರುವುದು ರಕ್ತವೋ ಕೆಸರೋ ಅವರಿಗೆ ಗೊತ್ತಾಗುತ್ತಲೇ ಇಲ್ಲ.

ಒಬ್ಬರಿಗೊಬ್ಬರು ಬಿಗಿಯಾಗಿ ಹೆಣೆದುಕೊಂಡರು. ಇಬ್ಬರೂ ಉರುಳುರುಳಿ ಆಲದ ಮರದ ಬುಡಕ್ಕೆ ಬಂದು ಗುದ್ದಿಕೊಂಡರು. ಎಚ್ಚರಗೊಂಡರು. ಆ ಎಚ್ಚರದೊಳಗೆ ಯಾರ ಜೀವ ಯಾರ ಕೈಯಲ್ಲಿದೆ ಎಂಬುದು ಮಾತ್ರ ತಿಳಿಯದಾಗಿತ್ತು. ಮರದಲ್ಲಿ ನೇತುಬಿದ್ದ ಬಾವಲಿಗಳು, ಬುಸುಗುಡುತ್ತಾ ಬಡಿದಾಡಿಕೊಳ್ಳುತ್ತಿರುವ ಅವರ ಮರಣಮತ್ತಿನಾಟವನ್ನ ನೋಡಿ ತಮಗೆ ಅಪಾಯ ತಪ್ಪಿದ್ದಲ್ಲ ಎಂದು ಪಟಪಟ ಹಾರಿದವು. ಅವುಗಳು ಹಾರಿಹೋಗುವ ರಭಸಕ್ಕೆ ಮರದ ಎಲೆಗಳು ಮರ್ಮರ ಮೊರೆದವು, ಕತ್ತಲೆ ಉಸಿರಾಡಿದಂತೆ.

ಕುಮಾರ ಕೊನೆಯದಾಗಿ ಎಂಬಂತೆ ಕಾವಲುಗಾರನನ್ನು ಹಲ್ಲಿನಿಂದ ಕಚ್ಚಿದ. ಕಾವಲುಗಾರ ಬಿಡಿಸಿಕೊಳ್ಳಲು ತುಂಬಾ ಹೆಣಗಿದ. ಕಳ್ಳನ ಕೈ ಮೇಲಾಗುವುದ ಅರಿತು ಬೆಚ್ಚಿದ. ಸಹಾಯಕ್ಕೆಂದು ಗೊರಕೆ ಹೊಡೆಯುತ್ತಾ ಮಲಗಿದ್ದ ಯಜಮಾನನನ್ನು ಕೂಗಿ ಕರೆದ. ಯಜಮಾನ ಕನಸೆಂಬಂತೆ ಬೆಚ್ಚಿ ಕತ್ತಲೆಗೆ ಕಿವಿಯಾದ. ಹಾ, ಹೂ, ಹೇ ಎನ್ನುತ್ತ ಕೂಗಾಡುವ ರೋಷಾವೇಶದ ಶಬ್ದಗಳು ಕೇಳಿಬರುತ್ತಿವ ಕಡೆ ಬೆಳಕನ್ನಿಡಿದು, ಕತ್ತಲೆಗೆ ಕಣ್ಣಾಗಿಸಿ ಹೆದರಿಕೆಯಿಂದಲೇ ತಿರುತಿರುಗಿ ನೋಡುತ್ತಾ ದನಿಕೇಳಿ ಬರುವತ್ತ ಓಡಿದ. ಅವನು ಬರುವಷ್ಟರಲ್ಲಿ ಕುಮಾರ ಕಾರಿರುಳ ಆ ಏರುಪೇರಿನ ದಾರಿಯಲ್ಲದ ದಾರಿಯಲ್ಲಿ ಪೊದೆ ಪೊದೆಗಳ ನಡುವೆ ಹಳ್ಳಕೊಳ್ಳಗಳನ್ನೂ ಲೆಕ್ಕಿಸದೆ ತಪ್ಪರಿಸಾಡುತ್ತಾ ಓಡಿ ಓಡಿ ತಪ್ಪಿಸಿಕೊಂಡುಬಿಟ್ಟ. ಅಲ್ಲೆಲ್ಲೋ ಅದಾವುದೋ ನಾಯಿ ಬೊಗಳಿದರೂ ಅದೇ ಬೇಟೆ ನಾಯಿ ಇರಬೇಕೆಂದು ಬೆಚ್ಚಿಬೆಚ್ಚಿ ಬೀಳುತ್ತಿದ್ದ. ಓಡುವ ರಭಸದಲ್ಲಿ ಕೈಕಾಲುಗಳಿಗೆ ಮುಳ್ಳು ತರಚುತ್ತಿದ್ದರೂ ಅದು ಅವನಿಗೆ ಏನೂ ಅನ್ನಿಸಲಿಲ್ಲ.

ಆಗ ಕಂಚುಗಾರನ ಹಳ್ಳಿಯಲ್ಲಿ ಬೆಳಕಾಗಿತ್ತು. ಪೊದೆಗಳ ಮರೆಮರೆಯಲ್ಲಿ ಅವಿತು ನಿದ್ರಿಸುತ್ತಿದ್ದ ಹಕ್ಕಿ ಪಕ್ಷಿಗಳು ಚಿಲಿಪಿಲಿಗುಡುತ್ತಾ ನಾನಾ ದಿಕ್ಕುಗಳಲ್ಲಿ ಚದುರಿ ಹಾರಿಹೋಗುತ್ತಿದ್ದವು; ತಿಳಿಮೇಲಾದ ಆ ನಸು ಬೆಳಕಿನಲ್ಲಿ ತೇಲಿಬಿಟ್ಟ ಬಣ್ಣದ ಕಾಗದದ ಚೂರುಗಳಂತೆ. ನೀಲಾ ಎದ್ದವಳೆ ಅದಾಗತಾನೇ ಮೇಲೇಳುತ್ತಿದ್ದ ಬಾಲ ಸೂರ್ಯನ ಆ ಕೆಂಪಿನೋಕುಳಿಯ ಬೆರಗಿನಾಟಕ್ಕೆ ಇಳೆಯ ಮೈ ರಂಗೇರುತ್ತಿರುವಾಗ ಇತ್ತ ತಲೆಬಾಗಿ ಉತ್ರಾಸಕ್ಕೆ ನೀರು ಹಾಕುತ್ತಿದ್ದಳು. ಜೋಕಾಲಿಯಲ್ಲಿ ಜೋಕಾಗಿ ಮಲಗಿದ್ದ ಮಗು ಎದ್ದು ಅಳುತ್ತಿತ್ತು. ಓಡಿ ಬಂದವಳೆ ಮಗುವನ್ನು ಎತ್ತಿ ಎದೆಗೆ ಹಾಕಿಕೊಂಡು ತೊಡೆ ಕುಣಿಸುತ್ತಾ ಲಾಲಿ ಗುನುಗಿದಳು. ತಾಯಿಯ ಲಾಲಿಯ ಆ ಮತ್ತಿನ ರಾಗ ಸಿರಿಗೆ ಮಗು ಶರಣಾಗಿತ್ತು.

ತುಸುವೇ ಅಂತರದಲ್ಲಿ ಬರ‍್ರನೆ ಮನೆ ಎದುರಿಗೆ ಇದ್ದಕ್ಕಿದ್ದಂತೆ ಪೊಲೀಸ್ ಜೀಪೊಂದು ಬಂದು ನಿಂತಿತು. ಅದರಿಂದ ಪೊಲೀಸ್ ಅಧಿಕಾರಿ ಕೆಳಗೆ ಇಳಿದ. ಅವರ ಹಿಂದೆ ಪೊಲೀಸ್ ಪೇದೆಗಳು ಬಂದರು. ಟಾಕುಟೀಕಿನ ನಡಿಗೆ, ಲಾಟಿಬೂಟಿನ ಮೆರವಣಿಗೆ. ಅದೇನೇನೋ ಮಾತನಾಡಿಕೊಂಡು ಊರ ಒಳಗೆ ಹೋದರು. ಪೊಲೀಸರನ್ನು ಕಂಡ ಜನ ಅತ್ತಿತ್ತ ಸರಿದರು. ಊರಿನ ಕಟಾರೋಪುದಾರಿಗಳಾದ ಕೆಲವರು ಮುಖ ತಿರುಗಿಸಿ ಅತ್ತ ಸರಿದು ಮಾಯವಾಗುತ್ತಿದ್ದರು, ಹುಲಿಗೆ ಹೆದರಿದ ಹುಲ್ಲೆಯಂತೆ. ಪೊಲೀಸರನ್ನು ಗಮನಿಸಿದ ನೀಲಾಳಿಗೆ ಭಯವಾಯಿತು. ಪ್ರೀತಿಸಿದವನನ್ನೇ ಮದುವೆಯಾಗುವ ಕಾಲದಲ್ಲಿ ಸ್ಟೇಷನ್ ಮೆಟ್ಟಿಲೇರಿದ್ದು ನೆನಪಾಯಿತು.

ಹಿಂದಿನ ಮನೆಯ ಸಾವಿತ್ರಿ ‘ನೀಲಾ, ನೀಲಾ’ ಎಂದು ಆಕಡೆಯಿಂದ ಕೂಗಿಕೊಂಡೆ ಒಳಗೆ ಬಂದಳು. ಅವಳ ಹೈದ ರಾಮಚಂದ್ರ ಸೆರಗಿಡಿದುಕೊಂಡು ಹಿಂದಿಂದೆ ಬಂತು. ಮೊಲೆ ಕಚ್ಚಿ ಸೆರಗಿನ ಮರೆಯಲ್ಲಿ ಹಾಲು ಉಣ್ಣುತ್ತಿದ್ದ ನೀಲಾಳ ಮಗು ಎದೆಬಿಟ್ಟು ಇತ್ತ ರಾಮಚಂದ್ರನತ್ತ ನೋಡಿ ಕೇಕೆ ಹಾಕಿತು. ಮಕ್ಕಳ ಆಟವನ್ನು ಗಮನಿಸಿದ ನೀಲಾ, ಸಾವಿತ್ರಿಯ ಮಗನನ್ನು ಮುದ್ದು ಮಾಡುತ್ತಲೇ ‘ಬಿಡಪ್ಪಾ, ಪಾಪ ಹಾಲು ಕುಡಿಯಲಿ’ ಎಂದು ಪ್ರೀತಿಯಿಂದ ಮೆಲು ದನಿಯಲ್ಲಿ ಗೋಗರೆದು ತಲೆ ಸವರಿದಳು.

ರಾತ್ರಿ ನಾಯಿ ಬೊಗಳಿದ್ದು, ಯಾರೋ ದಡದಡನೆ ಓಡಿ ಹೋಗಿದ್ದು, ಆ ಸರಿರಾತ್ರಿಯಲಿ ಯಾರೋ ಅತ್ತಂಗಾಗಿದ್ದು, ಮೂಲೆ ಮನೆಯ ದ್ಯಾವಮ್ಮನ ಮಗಳು ಗಾರೆ ಕೆಲಸಕ್ಕೆ ಹೋದವಳು ಕಂಚುಗಾರನ ಹಿಂದೆ ಓಡಿ ಹೋಗಿದ್ದು-ಇಂತೆಲ್ಲಾ ಸೋಜಿಗಗಳನ್ನು ಅವರು ಉಸಿರಾಡುತ್ತಿದ್ದರು.

‘ನಮ್ಮನೆಯವನು ಕೊಟ್ಟಿಗೆ ಗುಡಿಸುತ್ತಿದ್ದ, ನಾನು ಹಾಲು ತಗಣಕೆ ಅಂತ ನಿಂಗಮ್ಮನ ಮನೆಗೆ ಬಂದಿದ್ದೆ. ಇನ್ನೂ ಕರೇವು ಬಿಟ್ಟಿರಲಿಲ್ಲ. ಅದ್ಕೆ ನಿನ್ನಟ್ಟಿಲಿ ಕ್ಷಣಹೊತ್ತು ಮಾತಾಡ್ಕಂಡು ಹೋಗನ ಅಂತ ಬಂದೆ, ಬಿಡುವಾಗ್ಲಿ ಆಮೇಲೆ ಬತ್ತಿನಿಕಣೆ’ ಎಂದು ತನ್ನ ಮಗುವನ್ನು ಎತ್ತಿಕೊಂಡು ಹಾಲು ತಂಬಿಗೆ ಹಿಡಿದು ಹೊರಟಳು.

ಸಾವಿತ್ರಿ ಅತ್ತ ಹೋದ ಮೇಲೆ ಮಗನನ್ನು ತಬ್ಬಿಕೊಂಡು ‘ಪ್ರೇಮ ಅನ್ನದು ಇವಳಿಗೇನು ಗೊತ್ತು. ಇವಳು ಇಂಗೊಂದು ಅಂಗೊಂದು ಅಂತಾಳೆ, ನಾಳೆ ದಿನ ನನಗೂ ಅಂಗೆತಾನೆ ಅನ್ನೋದು. ಮತ್ತೆ ಅಂತದ್ದೇನಾದರೂ ಮಾತಾಡಿದರೆ ಸರಿಯಾಗಿ ಮಾಡ್ತೀನಿ’ ಎಂದು ಗೊಣಗುತ್ತಲೇ ಹೋಗಿ ಮಗುವನ್ನು ಜೋಕಾಲಿ ಒಳಗೆ ಮಲಗಿಸಿದಳು.

ಜೋಕಾಲಿಯಲಿ ಆಡುತ್ತಿದ್ದ ಮಗು ತನ್ನ ಕೈ ಕಾಲು ಜೋಕಾಲಿಗೆ ಜಾಡಿಸುತ್ತಾ ಕೇಕೆ ಹಾಕಿ ಆಡುತ್ತಿತ್ತು. ಮನೆಯಲ್ಲಿನ ನೀರವತೆಗೆ ಮಗುವಿನ ಕೇಕೆ ಕಚಗುಳಿ ಇಟ್ಟಿತ್ತು. ಮಗುವಿನ ಆ ಪುಟ್ಟ ಗಂಟಲೊಳಗಿಂದ ಹೊರಟ ಆ ಕೀರಲು ಧ್ವನಿಯ ಮಾದಕ ಸೆಳವು ಕೂಡ ಅವಳನ್ನು ಮುದಗೊಳಿಸಿದಂತೆ ಕಾಣಲಿಲ್ಲ. ಮಗುವಿನ ನೆತ್ತಿ ಸವರುತ್ತಾ, ಕಾಲು ನೀವುತ್ತಾ, ಮೊಲೆ ಹಾಲ ಉಣಿಸುತ್ತಾ, ಮೈ ಮರೆವ ತಾಯ ಆ ಸುಖ ಸಹ ಅವಳಿಗೆ ಇಲ್ಲದಾಗಿ, ಅದೊಂದು ಯಾಂತ್ರಿಕ ಕ್ರಿಯೆ ಎಂಬಂತೆ ನಡೆದುಹೋಗುತ್ತಿತ್ತು. ಸಮೃದ್ಧ ತಾಯ್ತನವನ್ನು ಅತ್ಯಂತ ಪ್ರೀತಿಯಿಂದ, ಮಮಕಾರದಿಂದ ಧಾರೆ ಎರೆಯಬೇಕಾದ ತಾಯಿಗೆ ಕುಮಾರನ ಈ ನಡವಳಿಕೆಗಳು ಅಡ್ಡಿಯಾಗಿ ಅವಳ ತಾಯ್ತನಕ್ಕೆ ಕುಂದು ತಂದಿದ್ದವು.

ಪೊಲೀಸಿನವರು ಇಲ್ಲೇ ಸುತ್ತಾಡಿದ್ದು, ಗಂಡ ಕುಮಾರ ಎದ್ದು ಸರಿಹೊತ್ತಿನಲ್ಲೇ ಹೊರಗೆ ಹೋಗಿದ್ದು ನೋಡಿದ ನೀಲಾಳಿಗೆ ಉಸಿರಿನ ವೇಗ ಹೆಚ್ಚುತ್ತಲೇ ಇತ್ತು. ‘ಅಕ್ಕಪಕ್ಕದೂರಿನ ನಮ್ಮ ಸಂಬಂಧಿಗಳು ಮದುವೆಗೆಂದು ಬಂದವರು ಮನೆಗೆ ಬಂದರೆ ಕಾಫಿ಼ ಮಾಡಿಕೊಡಲೂ ಕೈಯಲ್ಲಿ ಕಾಸಿಲ್ಲ ಎಂದು ರಾತ್ರಿ ನನ್ನ ಜೊತೆ ಮಾತಾಡಿದ್ದ’ ಎಂಬುದೆಲ್ಲ ನೆನಪಾಗಿ ಗಂಡ ಹೋದ ಕಡೆಗೇ ಕಣ್ಣಾಯಿಸಿ ನೋಡಿ ನೋಡಿ ಹೈರಾಣಾಗಿದ್ದಳು. ನನ್ನ ಇಂಥ ನಡವಳಿಕೆಯಿಂದ ಪೊಲೀಸರಿಗೆ ಅನುಮಾನ ಬಂದರೆ? ಎಂದು ಗಾಬರಿಗೊಂಡು ಮನೆಯೊಳಗೆ ಸೇರಿಕೊಂಡಳು.

ಕುಮಾರ ಬಂದು ಹಾಲು ತರುತ್ತೇನೆ ಎಂದಿದ್ದ. ಮದುವೆಗೆ ಸಂಬಂಧಿಕರ ಪೈಕಿ ಯಾರಾದರೂ ಮನೆಗೆ ಬಂದರೆ ಅವರಿಗೆ ಏನು ಕೊಡೋದು? ಒಂದು ಲೋಟ ನೀರು ತೆಗೆದು ಗಟಗಟ ಕುಡಿದಳು. ಇಂತಹ ಸಂಕಷ್ಟ ಅವಳು ಯಾವತ್ತೂ ಅನುಭವಿಸಿರಲಿಲ್ಲ. ಏನೋ ಚಡಪಡಿಕೆ, ಏನೋ ದುಗುಡ ದುಮ್ಮಾನ ಹೊಟ್ಟೆಯೊಳಗೆ.

ಮದುವೆ ಮನೆಗೆ ಬಂದವರು ಹೊರಗೆ ಅತ್ತಿತ್ತ ಓಡಾಡುತ್ತಿದ್ದರು. ಗುಸು ಗುಸು ಮಾತನಾಡಿಕೊಳ್ಳುತ್ತ ನೋಡಿಯೂ ನೋಡದವರಂತೆ ಅತ್ತ ಹೋಗುತ್ತಿದ್ದರು. ಆ ಗುಸುಗುಸುಗೆ ಕಾರಣ ಏನಿರಬಹುದು? ಇನ್ನೇನಿದೆ? ಎಲ್ಲರದ್ದೂ ಒಂದೇ, ನಮಗೇ ಬೇಡವಾದದ್ದು ಇವರಿಗೇಕೆ? ನೀಲಾಳಿಗೆ ಸೋದರತ್ತೆ ಹೇಳಿದ ಮಾತು ಕಿವಿಯಲ್ಲಿ ಗುಯ್ಗುಟ್ಟಿದಂತಾಯಿತು: ‘ಜಾತಿ ಮೀರೋದು ಅಂದ್ರೆ ಕಡಿಮೆ ಅನ್ಕೋಬೇಡ ನೀನು. ಅದು ಒಬ್ಬರಿಗೊಬ್ಬರನ್ನ ಅರಿತುಕೊಂಡು ನುಂಗುತ್ತೆ, ಎಲ್ಲವೂ ಒಂದಾದ ಸೋಜಿಗವ ತೋರುತ್ತೆ. ನಿನಗೆ ಇದೆಲ್ಲ ಅರ್ಥ ಆಗಲ್ಲ ಬಿಡು’ ಎಂದು ಮಾತು ನಿಲ್ಲಿಸಿದಳು.

ಹೊರಗೆ ಓಡಾಡುವ ಸರೀಕರ ಎದುರು ನಿಲ್ಲಲಾರದೆ ಮನೆಯೊಳಗೆ ಹೋದಳು. ಗಂಡ ಕುಮಾರ ಕನ್ನೇರಿಯಲ್ಲಿ ಆ ಮುದುಕಿಯ ಚಹಾದಂಗಡಿಯಲ್ಲಿ ಕುಳಿತು ಅಂಗಡಿಗೆ ಬರುವ ಹೆಂಗಸರ ಸೊಂಟ, ಮುಖ ನೋಡಿ ಹಲ್ಲು ಬಿಡುತ್ತಾ ಕೂತಿರುತ್ತಿದ್ದ ಮಾತು ಹಿಡಿದು ಸೋಮಪ್ಪ ಆಗಾಗ ಹೇಳುತ್ತಿದ್ದರು. ಆಗ ಹಳ್ಳಿಗೆ ಹೋಗಿ ತಾನೇ ಎಳೆದುಕೊಂಡು ಬಂದುದೆಲ್ಲಾ ನೀಲಾಳಿಗೆ ನೆನಪಾದವು.

ಕುಮಾರ ಚಹಾದಂಗಡಿಯಲ್ಲಿ ಕೂತು ಬಂದಾಗಲೆಲ್ಲ ಇವರಿಬ್ಬರಿಗೂ ಮಾತಿಗೆ ಮಾತು ಬೆಳೆದು ಮತ್ತೆ ಹಳೇ ಚಾಳಿ ಎಂದು ಕೇಳಿದಾಗ ‘ಪಾಪ ಅವರೆಲ್ಲ ನಮ್ಮ ಅಕ್ಕ ತಂಗಿಯರಂತೆ, ನಾನು ಮಾತಾಡಿದರೆ ಅವರಿಗೆ ಎಂಥದ್ದೋ ಸಮಾಧಾನ’ ಎಂದಿದ್ದ. ರಾತ್ರಿ ಅಂತಹ ಜಗಳವೇನೂ ಅವರ ನಡುವೆ ನಡೆದಿಲ್ಲ. ಬೇಗ ಬರುತ್ತೇನೆಂದು ಹೇಳಿ ಹೋಗಿದ್ದ ಅಷ್ಟೆ.

‘ಥೂ ಹಾಳಾದ ಮುದುಕಿ ಇನ್ನೂ ಸಾಯಲಿಲ್ಲ. ಯಾಕಾದರೂ ನಮ್ಮೊಟ್ಟೆ ಉರುಸ್ತಾಳೆ.’ ಮತ್ತೆ ಗೊಣಗಿದಳು. ಬೇಗ ಹೋಗಿ ಸೋಮಪ್ಪನನ್ನು ಕೇಳಿಬಿಡಬೇಕೆನಿಸಿತು. ಮಗು ಎಚ್ಚರಾಗಿ ಜೋಕಾಲಿಯಿಂದ ಕೆಳಗೆ ಬಿದ್ದರೆ? ಇವನು ಬಂದೋನು ನನ್ನ ಸುಮ್ಕೆ ಬಿಟ್ಟಾನ? ಮಗು ಎತ್ತಿಕೊಂಡು ಹೋದರೇ ಒಳ್ಳೆಯದು ಅನ್ನಿಸಿ ಜೋಕಾಲಿಯ ಹತ್ತಿರ ಬಂದಳು. ಮಗು ನಿದ್ರೆಯಲ್ಲಿತ್ತು.

ಪಾತ್ರೆಯಲ್ಲಿ ನೀರು ಸುರಿದಳು, ಟೀಪುಡಿ ಹಾಕಿ ಕುದಿಸಿ, ಕಪ್ಪಿನಲ್ಲಿ ಸುರಿದುಕೊಂಡು ಕುಳಿತಳು. ಮದುವೆ ಮನೆ ಸಂಭ್ರಮದಲ್ಲಿ ಬಾರಿಸುತ್ತಿದ್ದ ಸದ್ದು ಗದ್ದಲ ಸಣ್ಣದಾಗಿ ಹಿತವಾಗಿ ಕೇಳುತ್ತಿತ್ತು. ‘ನಮ್ಮ ಸಂಬಂಧಿಕರದ್ದೇ ಮದುವೆ. ಆದರೂ ನಾನು ಹೋಗಲ್ಲ. ನಮಗ್ಯಾಕೆ ಜಾತಿ ಸೂತಕ’ ಎಂದಿದ್ದ ಕುಮಾರ. ಅದು ನೀಲಾಳಿಗೂ ಸರಿ ಎನಿಸಿತ್ತು.

‘ಮಗ ಹುಟ್ಟಿದಾಗ ನಮ್ಮಲ್ಲಿ ಯಾವ ತಕರಾರುಗಳೂ ಇರಲಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ನೂರಿನ್ನೂರು ಖರ್ಚಾಗಿದ್ದು ಬಿಟ್ಟರೆ ಮತ್ತೇನೂ ಇಲ್ಲ. ಮಗು ಹೆಸರಿಡಲೂ ಸಹ ನನ್ನನ್ನೇ ಕೇಳಿದ್ದ. “ನಿನ್ನಿಷ್ಟ” ಅಂದಿದ್ದೆ. ಇಬ್ಬರಿಗೂ ಬೇಸರ ಆಗಬಾರದು ಎಂದು ಮಗುವಿಗೆ ಶಿವಕಬೀರ ಎಂದು ನಾಮಕರಣ ಮಾಡಿ ಜಾಣ್ಮೆ ಮೆರೆದಿದ್ದ. ಹಸಿ ಬಾಣಂತಿಯ ಬಟ್ಟೆ ತೊಳೆದ. ಮಗು ಸ್ನಾನ ಮಾಡಿಸಿದ. ನಾವು ಬೆರೆತಿದ್ದು ಕೇವಲ ದೈಹಿಕವಾಗಿ ಮಾತ್ರವಲ್ಲ’ ಹೀಗೆ ಅವರ ನಡುವಿನ ಸಾಮರಸ್ಯದ ಸೊಗಸಿನ ಬದುಕನ್ನ ನೀಲಾ ತೆರೆದಿಟ್ಟಳು.

‘ನನ್ನ ತಮ್ಮ ಜಾತಿಗೆ ಕಚ್ಚಿಕೊಂಡೇ ಜೀವ ಬಿಡುವ ಮುಂಗೋಪಿ. ನಮ್ಮಿಬ್ಬರ ಮದುವೆ ಸಹಿಸದವ. ಏನಾದರೂ ಮಾಡಿಬಿಟ್ಟನಾ, ಕ್ಷಣ ಅನಿಸಿತು.’ ನೀಲಾಳ ಕಣ್ಣಂಚಿನಲ್ಲಿ ನೀರು ಜಿನುಗಿದವು.

ಮಗು ಎದ್ದು ಮೆಲ್ಲಗೆ ಅಳಲು ಸುರು ಮಾಡಿತು. ಮಗನನ್ನು ತಬ್ಬಿಕೊಂಡು ಸೋಮಪ್ಪ ಅವರ ಮನೆಗೆ ಹೋಗಿ ‘ಅಪಾ ಕುಮಾರ ಅಂಗಡಿಯ ಹತ್ತಿರ ಏನಾದ್ರು...’ ಎಂದು ಕೇಳಿದಳು.

ನೀಲಾಳ ಮುಖ ಕಂಡ ಕೂಡಲೇ ‘ಏನ್ಲಾ ಪಾಪ, ನಿನ್ನ ಗಂಡ ಬಂದಿಲ್ಲವೆ?’ ಎಂದು ಕೇಳಿದರು. ಅವರು ಅಂಗಂದಿದ್ದೇ ತಡ ಅದೆಲ್ಲಿತ್ತೋ ಕಣ್ಣಲ್ಲಿ ನೀರು ಬಳಬಳ ಹರಿದು ಬರತೊಡಗಿದವು. ತನ್ನದೇ ಮನೆಯೊಳಗೆ ಇಲ್ಲವಾಗಿದ್ದ ಆತ್ಮೀಯತೆಯನ್ನ ಅವರಲ್ಲಿ ಕಂಡಿದ್ದಳು. ಕಣ್ಣೀರಾದ ನೀಲಾಳನ್ನು ನೋಡಿದ ಕೂಡಲೇ ‘ಬಿಡವ್ವ ಅದ್ಯಾಕೆ ಅಳ್ತೀಯ? ಅವನ ಜೊತೆ ಯರ‍್ಯಾರು ಹೋದರು ಅಂತೇನಾದರೂ ಗೊತ್ತಾಯ್ತಾ?’ ಎಂದರು. ‘ಅದೇನೂ ನನಗೆ ಗೊತ್ತಿಲ್ಲ’ ಎಂದು ಹೇಳುತ್ತಾ ನೀಲಾ ‘ನನಗ್ಯಾಕೋ ಜೀವ ತರತರ ಅನ್ನುಸ್ತೈತೆ’ ಅಂದು ಮಗುವನ್ನು ಹಾಗೇ ತಬ್ಬಿಕೊಂಡಳು.

ಸೋಮಪ್ಪ ಒಳಗಿದ್ದ ತನ್ನ ಹೆಂಡತಿ ಜಯಲಕ್ಷ್ಮಿಯನ್ನು ಕರೆದು ‘ನೋಡಿಲ್ಲಿ ಈ ಮಗಿಗೆ ಏನಾರಾ ತಿನ್ನಕ್ಕೆ ಕೊಡು’ ಎಂದರು. ‘ಸುಮ್ಮನಿರವ್ವ ಏನೂ ಆಗಲ್ಲ. ನಾನೀಗ ಹೊರಗೆ ಹೋಯ್ತಿನಿ. ಪತ್ತೆಹಚ್ಚುತ್ತೀನಿ’ ಎಂದು ಸಮಾಧಾನಿಸಿ ಹೊರಗೆ ಹೋದರು.

ಮನೆಗೆ ಬಂದ ನೀಲಾಳಿಗೆ ಯಾಕೋ ಬಿಕೋ ಎನಿಸಿತು. ಅವನು ಯಾವತ್ತೂ ಹಿಂಗೆ ಮಾಡಿದ್ದಿಲ್ಲ. ಗಾಳಿ ಮಳೆ ಬಂತೆಂದರೆ ಅವಳನ್ನು ಎಚ್ಚರಿಸುತ್ತಿದ್ದ. ಆದರೆ ಸ್ವತಃ ಅವನಿಗೇ ಅದ್ಯಾವುದರ ಹೆದರಿಕೆಯೂ ಇರಲಿಲ್ಲ. ನೆರೆ ಹೊರೆಗೆ ಅಂಜುತ್ತಿದ್ದ ಅಷ್ಟೆ. ತಳ್ಳೋಗಾಡಿಯಲ್ಲಿ ಹಣ್ಣು ಮಾರಿದ್ದ. ಬೀದಿಬೀದಿಗಳನ್ನು ಸುತ್ತಿ ಸೊಪ್ಪು ತರಕಾರಿ ಮಾರಿದ್ದ. ಗಾರೆ ಕೆಲಸಕ್ಕೂ ಹೋಗುತ್ತಿದ್ದ.

ಈ ರಾತ್ರಿ ಮಲಗುವಾಗ “ಯಾಕೋ ಅವಮಾನ” ಎಂದ. ಕಾಸು ಇಲ್ಲದಿದ್ದಾಗ ಕದ್ದರೂ ಪರವಾಗಿಲ್ಲ, ಒಬ್ಬರ ಹತ್ತಿರ ಕೈ ಚಾಚಿದವನಲ್ಲ. ಬದುಕು ಇಕ್ಕಟ್ಟಿಗೆ ಸಿಕ್ಕಿಸಿದಾಗ ಕೊನೆಯ ಆಯ್ಕೆಯಾಗಿ ಕಳ್ಳತನಕ್ಕೆ ಕೈ ಹಾಕುತ್ತಿದ್ದನಷ್ಟೆ. ಎಲ್ಲದಕ್ಕೂ ಟೈಂ ಬರಲಿ ಎಂದು ದುಡಿಯಲಿಕ್ಕಾಗಿ ಕಾಯುತ್ತಿದ್ದ.

ಅಷ್ಟು ಹೊತ್ತಿಗೆ ಪಕ್ಕದ ಊರಿಗೆ ಹೋಗಿ ಬಂದ ಸೋಮಪ್ಪ ‘ಆ ಚಹದಂಗಡಿಗೂ ನಿನ್ನ ಗಂಡ ಹೋಗಿಲ್ಲವಂತೆ ಕಣ್ಲ ಪಾಪ. ಕನ್ನೇರಿಯಲಿ ಎರಡು ಮೂರು ದಿನಗಳಿಂದಲೂ ಯಾರ ಕಣ್ಣಿಗೂ ಬಿದ್ದಿಲ್ಲವಂತೆ. ಇರು, ಇನ್ನೂ ನಾಲ್ಕಾರುಕಡೆ ವಿಚಾರ ಮಾಡುತ್ತೇನೆ’ ಒಂದೆರಡು ಮಾತು ಹೇಳಿ ಸೋಮಪ್ಪ ಅತ್ತ ಹೋದರು.

ನೀಲಾ ಮನೆ ಬಿಟ್ಟು ಕುಮಾರನ ಜೊತೆ ಹೊರಟು ನಿಂತಾಗ ಅವ್ವ, ಅಪ್ಪ, ಅಣ್ಣ ಅಷ್ಟೇ ಯಾಕೆ ಇಡೀ ಊರು ಅವಳನ್ನು ಮೇಲೆ ಕೆಳಗೆ ಅಳೆಯಿತು. ಕೊರಳಿಗೆ ತಾಳಿ ಎಂಬಂತೆ ಕಟ್ಟಿಕೊಂಡಿದ್ದ ಅರಿಶಿಣ ಕೊಂಬನ್ನು ಕಿತ್ತು ಎಸೆಯಲು ಮುಂದಾದರು. ಆಗ ಧೈರ್ಯಕ್ಕೆ ಅವಳ ಜೊತೆಗೆ ಪ್ರೇಮ ಇತ್ತು.

ನೀಲಾಳ ಅಣ್ಣನ ಗೆಳೆಯರಾದ ಗೋವಿಂದ, ರಾಮ ಸಿಕ್ಕಿ “ಮಳ್ಳ ನೀನು” ಎಂದು ಹಂಗಿಸಿ ಹೋಗಿದ್ದರು. ಆಗಲೂ ಕುಮಾರ ಕಿವಿ ಕೇಳದವನಂತೆ ಇದ್ದನಾದರೂ ನೆಟ್ ವರ್ಕ್ ಇಲ್ಲದೆ ಕವಚಿ ಬಿದ್ದ ಸೆಲ್ ಫೋನಿನಂತಾಗದೆ ಎಚ್ಚರವಾಗಿದ್ದ. ಅವಳಿಗೆ ಹುಡುಗನನ್ನು ಬೇರೆಕಡೆ ಹುಡುಕಿದರು. ಮನೆಯವರೆಲ್ಲ ಹಠ ಹಿಡಿದು ಕೂತರು. ನಾವು ತೋರಿದ ಹುಡುಗನ ಮದುವೆ ಆಗು ಎಂದು ರೂಮಲ್ಲಿ ಕೂಡಿಹಾಕೇಬಿಟ್ಟರು. ಆದರೂ ಅವಳು ಅಚಲವಾಗಿ ಕುಮಾರನನ್ನು ನಂಬಿ ಬಂದಳು. ಅವಳ ನಂಬಿಕೆಯ ಕುಮಾರನನ್ನ ಈಗ ಅವಳೇ ಹುಡುಕುವಂತಾಗಿದ್ದು ಅವಳ ಬದುಕಿನ ದುರಂತ ಎನ್ನುವುದೀಗ ಕಟುಸತ್ಯವಾಗಿತ್ತು.

ಅಕ್ಕಪಕ್ಕದವರು ಅವಳನ್ನು ನೋಡಿ ‘ಹೇಗಿದ್ದವಳು, ಈಗ ಕೈಯಲ್ಲಿ ಒಂದು ಸೆಲ್ ಫೋನ್ ತಗಣಕ್ಕೂ ಗತಿ ಇಲ್ಲ’ ಎಂದು ಮನಸಿಗೆ ನೋವಾಗುವಂತೆ ಆಡಿಕೊಳ್ಳುತ್ತಿದ್ದರು. ಇದೊಂಥರಾ ದ್ವೇಷ. ಸುಸ್ತು ಆದಂತೆನಿಸಿ ನೀಲ ನೆಲಕ್ಕೆ ದೊಪ್ಪನೆ ಕುಸಿದು ಕುಂತಳು.

‘ರಾತ್ರಿ ದಾಳಿಂಬೆ ತೋಟಕ್ಕೆ ಹಣ್ಣು ಕದಿಯಲು ಹೋದಾಗ ಕಾವಲುಗಾರರು ಕೊಲೆ ಮಾಡಿ, ಎಲ್ಲಾದರೂ ನಾಲೆಗೆ ಎಸೆದರಾ? ಅಥವಾ ಮಾಲೀಕರ ಕೈಗೆ ಸಿಕ್ಕಿ ಹೋಬಳಿ ಪೊಲೀಸ್ ಠಾಣೆಯಲ್ಲಿ ಏನಾದರೂ ಬುದ್ಧಿ ಕಲಿಲಿ ಅಂತ ಕೂಡಾಕಿದ್ದಾರಾ?’ ಎಂದು ತನ್ನ ಪಾಡಿಗೆ ತಾನು ಪೇಚಾಡುತ್ತಲೇ ಆಡುತ್ತಿದ್ದ ಮಗನನ್ನು ಬಾಚಿ ತಬ್ಬಿಕೊಂಡು ಮತ್ತೆ ಸೋಮಪ್ಪನವರ ಮನೆಗೆ ಹೊರಟಳು. ನೀಲಾ ಹೋಗುವ ದಾರಿಗೆ ಎದುರು ಸಿಕ್ಕ ವನವಳ್ಳಿ ಅಪ್ಪಯ್ಯಣ್ಣ ‘ಅಮ್ಮಾ ನಿನ್ನ ಗಂಡ ಕಂಚುಗಾರನ ಹಳ್ಳಿಲಿ ಸಿಕ್ಕಿದ್ದ’ ಎಂದು ಹೇಳಿ ಅತ್ತ ಹೋದ. ನೀಲಾಳಿಗೆ ಆ ಮಾತು ಕೇಳಿ ಪಿತ್ತ ನೆತ್ತಿಗೇರಿತು.

ಕನಸಿನ ಸಂಸಾರ ನೌಕೆಯಲ್ಲಿ ಕುಳಿತು ಹಾಯ್ ಎನಿಸುವ ತಂಗಾಳಿಗೆ ಮೈಯೊಡ್ಡಿ ತುಸು ದೂರ ಸಾಗಿದ್ದಷ್ಟೆ. ಕನಸು ಭಗ್ನವಾಗಿತ್ತು. ನೌಕೆ ಕಾಣದಾಗಿತ್ತು. ಹೆಣ್ಣಿಗೆ ಗಂಡ ಎಂದರೆ ತಾನು ಬದುಕಿನಲ್ಲಿ ಕಾಣುವ ಅತ್ಯಂತ ಸುಂದರ ಕಲ್ಪನೆ. ಅದು ಮುಕ್ಕಾಗಲು ಯಾವ ಹೆಣ್ಣೂ ಬಿಡಲಾರಳು. ಮದುವೆಯ ಸಂಭ್ರಮಕ್ಕೆ ಸಾಕ್ಷಿಯಾದ ಮಂಗಳ ವಾದ್ಯ ಇವಳ ಮನಸ್ಸನ್ನು ವ್ಯಘ್ರಗೊಳಿಸಿದವು. ಈ ಸದ್ದು ಗದ್ದಲಕ್ಕೆ ಜೋರಾಗಿ ಅಳುವ ಮಗುವನ್ನು ಎತ್ತಿ: ‘ನಿನ್ನಪ್ಪ ಬೋಳಿಮಗ ನನಗೆ ನಿನಗೆ ಇಬ್ಬರಿಗೂ ಮೋಸ ಮಾಡಿದ ಕಂದಾss’ ಎಂದು ಸಂಕಟವೆ ತಾನಾಗಿ ತನ್ನ ಭವಿಷ್ಯದ ಕುಡಿಯ ಬೆನ್ನನ್ನು ಎರಡೂ ಕೈಗಳಿಂದ ಸವರಿ ಸವರಿ ಸಂಕಟವನ್ನೇ ಹಿಂದಿಕ್ಕಿ ಆರ್ತನಾದವ ಮೊಳಗಿದಳು. ಕುಮಾರನ ಮೇಲಿನ ಸಿಟ್ಟು ಎಂಬುದು ಯಾಕೋ ವಿಷದಂತೆ ಮೈಗೆಲ್ಲ ಏರತೊಡಗಿತ್ತು.

ಮೈಯೆಲ್ಲ ಬೆವರು. ಒಂದು ತಂಬಿಗೆ ನೀರು ಹಿಡಿದು ಗಟಗಟ ಕುಡಿದಳು. ನೇರ ವನವಳ್ಳಿ ಅಪ್ಪಯ್ಯಣ್ಣನ ಮನೆಗೆ ಹೋದಳು. ‘ಅಣಾ ಕುಮಾರ ಎಲ್ಲಿ ಸಿಕ್ಕಿದ? ಏನು ಮಾಡುತ್ತಿದ್ದ? ನನಗೀಗಲೇ ತೋರಿಸಿ’ ಎಂದು ಪಟ್ಟು ಹಿಡಿದಳು. ‘ಹೊಸದಾಗಿ ಊರಿಗೆ ರಸ್ತೆ ಬಂದೈತೆ. ಅಲ್ಲಿ ಕೆಲಸ ಮಾಡ್ತಿದ್ದಾನೆ. ನಾನು ಅವನನ್ನ ಗುರುತಿಡಿಯಲಿಲ್ಲ. ಅವನೇ ನನ್ನನ್ನ ಗುರುತಚ್ಚಿ ಹತ್ತಿರ ಬಂದ. ಇಲ್ಲ ಅಂದಿದ್ದರೆ ಅವನ ಮುಖ ನನಗೆ ಗುರ್ತೆ ಸಿಗುತ್ತಿರಲಿಲ್ಲ. ಮೈ ಮುಖದ ತುಂಬಾ ಡಾಂಬರು. ಮೊದಲೇ ಕಪ್ಪು, ಇನ್ನೂ ಕಪ್ಪಾಗಿಹೋಗಿದ್ದ. ದುಡಿದ ಕೂಲಿನೂ ಕೊಡುತ್ತಿಲ್ಲ, ಹೋಗಲೂ ಬಿಡುತ್ತಿಲ್ಲ, ಅವರು ಯಾವಾಗ ಕೊಡ್ತಾರೆ ಆವಾಗ ಕೊಟ್ಟಷ್ಟು ಈಸ್ಕಬೇಕಂತೆ ಎಂದು ಹೇಳಿದ. ನನಗೇ ಹೊಟ್ಟೆ ಉರಿದೋಯ್ತು ಕಣವ್ವ’ ಅಂದರು ವನವಳ್ಳಿ ಅಪ್ಪಯ್ಯಣ್ಣ.

‘ಅಣ ನಡಿರಿ ನನಗೆ ಕುಮಾರನ್ನ ತೊರಿಸಿ ನಿಮ್ಮ ದಮ್ಮಯ್ಯ ಈ ಸಣ್ಣ ಮಗು ಕಟ್ಟಿಕೊಂಡು ಯಂಗೆ ಊರಲ್ಲಿ ಬದುಕೋದು? ಅವನಿಗಾದರೂ ಬೇಡವಾ? ಅನ್ನ ನೀರಿಗೂ ಗತಿಯಿಲ್ಲದವಳನ್ನಾಗಿ ಮಾಡಿ ಹೋಗಿದ್ದಾನೆ. ಕೈ ಮಗುವನ್ನ ನಾನೇಗೆ ಸಂಬಾಳಿಸಲಿ? ಕಂದನನ್ನ ನೆನೆದಾದರೂ ಬರಬಾರದಿತ್ತೆ ಅವನು?’ ಗದ್ಗದಿತಳಾದಳು. ಮಾತನಾಡಲು ಗಂಟಲೇ ಬಾರದಾಯಿತು. ವನವಳ್ಳಿ ಅಪ್ಪಯ್ಯಣ್ಣನ ತಾಯಿ ತಬ್ಬಿ ಹಿಡಿದು ಮಗುವಂತೆ ತಲೆ ಸವರಿದಳು. ಸಮಾಧಾನಿಸಿದಳು.

ವನವಳ್ಳಿ ಅಪ್ಪಯ್ಯಣ್ಣನ ತಾಯಿ ಸತ್ಯವನ್ನರಿತವಳು. ನೀಲಾಳ ಸಂಕಟವನ್ನು ನೋಡಿ ‘ಬಿಡು ಮಗ ಅಳಬ್ಯಾಡ ಅವನು ಎಲ್ಲಿಗಾದ್ರೂ ಹೋಗ್ಲಿ. ಈಗ ಒಂತಾವ ಅವ್ನೆ ಅಂತ ಗೊತ್ತಾಯಿತು ತಾನೆ. ಕರ್ಕಂಡು ಬರನ. ನೀನ್ಯಾಕೆ ದುಃಖ ಪಡ್ತೀಯ?’ ಸಮಾಧಾನದ ಮಾತಾಡುತ್ತಲೇ, ‘ಅಲ್ಲಾ ಅವನುತಾನೆ ಎಂತವನು? ಮಗ ಬಾಣತಿ ಬಿಟ್ಟು ಹೋಗೋದೆ? ಹತ್ತಿಪ್ಪತ್ತು ದಿನಗಳಾದರೂ ತಿರುಗಿ ನೋಡಿಲ್ಲವೆಂದ್ರೆ ಗಂಡ ಅನ್ನೋನು ಏನಾದ ಅಂತ ತಿಳ್ಕಬೇಕು?’ ಎಂದು ತನ್ನ ಅಸಮಾಧಾನವನ್ನ ಹೊರಹಾಕಿದಳು. ಮುಂದುವರಿದು ‘ಮಗ ಇಂಗೆ ಕೇಳ್ತೀನಿ ಅಂತ ಬೇಜಾರು ಮಾಡ್ಕಬೇಡ. ನೀನೇನದ್ರೂ ಬೈದ? ಅದಕ್ಕೇನಾದ್ರೂ ಮುನುಸ್ಕಂಡು ಹೋದ್ನಾ?’ ಎಂದಳು. ‘ಇಲ್ಲ ಕಣವ, ಬತ್ತಿನಿ ಅಂತ ಹೋದ. ಈಗ ಬತ್ತನೆ, ಆಗ ಬತ್ತನೆ ಅಂತ ಕಾದು ಕಾದು ಸಾಕಾದೆ. ಎಲ್ಲಿ ಹೋದ ಅನ್ನೋದಾದರೂ ಬೇಡವಾ?’ ಎಂದು ಉಸಿರುಚಲ್ಲಿ ಕುಳಿತಳು.

ಮಗು ಆಡುತ್ತಿತ್ತು. ಆ ಎಳೆಯ ಗಲ್ಲವ ಹಿಡಿದು ವನವಳ್ಳಿ ಅಪ್ಪಯ್ಯಣ್ಣ ತಾಯಿ ‘ಅಲಲಲಾ ನಿಮ್ಮಪ್ಪ ನಿನ್ನ ಬಿಟ್ಟು ಯಂಗಲಾ ಇದ್ದಾನೆ’ ಎಂದು ಮಾತಾಡುತ್ತಿದ್ದರೆ; ಮಗು ನೀಲಾಳ ಮಡಿಲೊಳಗೆ ಅವಿತು ಕೈ ಕಾಲು ಬಡಿಯುತ್ತಾ ಕಿಲಕಿಲ ನಗುತ್ತಿತ್ತು. ಆ ಆಟವ ನೋಡಿದ ವನವಳ್ಳಿ ಅಪ್ಪಯ್ಯಣ್ಣ ತಾಯಿ ‘ಬಿಡವ್ವ ನೀನು ಯಾಕೆ ಚಿಂತೆ ಮಾಡದು, ಈ ಮಗಿನ ಉಕ್ಕಿ ಚಲ್ಲುವ ನಗುವ ಚಲುವನ್ನು ನೋಡು. ಕ್ಷಣಕ್ಕೆ ಎಲ್ಲಾ ಮರೆತೋಗುತ್ತೆ. ಅವನೆಲ್ಲಾರ ಹೋಗ್ಲಿ, ಅವನೆಲ್ಲಾರ ಬರ್ಲಿ’ ಎಂದಳು.

ಸಂಜೆ ಅತ್ತಿಂದ ಹಸುಗಳನ್ನು ಎಳೆದುಕೊಂಡು ಬಂದ ವನವಳ್ಳಿ ಅಪ್ಪಯ್ಯಣ್ಣನ ಅಪ್ಪ ಗೊಂತಿಗೆ ಕಟ್ಟಿದರು. ಹಾಲು ಕರೆಯುವ ಸಮಯ ಆಗಿದ್ದರಿಂದ ಕುಂತಿದ್ದವರೆಲ್ಲ ಅತ್ತೊಬ್ಬರು ಇತ್ತೊಬ್ಬರಾದರು. ಅವ್ವ ನಾನು ಹೋಗುತ್ತೇನೆ ಎಂದು ಒಂದು ಸೊಲ್ಲು ಕೂಗಿ ನೀಲಾ ಹೊರಟಳಾದರೂ, ಹೋಗುವಾಗ ವನವಳ್ಳಿ ಅಪ್ಪಯ್ಯಣ್ಣನನ್ನು ‘ಅಣಾ ನಿಮ್ಮ ದಮ್ಮಯ್ಯ ಇವತ್ತಾಗ್ಲಿಲ್ಲ ಅಂದರೂ ನಾಳೆಗಾದರೂ ಕರ್ಕಂಡೋಗಿ ತೋರಿಸಿ’ ಎಂದು ಹೇಳುವುದ ಮರೆಯಲಿಲ್ಲ.

ಆ ರಾತ್ರಿ ಕತ್ತಲಲ್ಲಿ ಮನೆಗೆ ಬಂದ ನೀಲಾಳಿಗೆ ನಿದ್ರೆ ಹತ್ತಲಿಲ್ಲ. ಅವತ್ತು ಅಪ್ಪ ಅಮ್ಮ ಮದುವೆಗೆ ಒಪ್ಪದಿದ್ದಾಗ ರಾಮನಗರ ಪೊಲೀಸ್ ಠಾಣೆಯ ಮೆಟ್ಟಲೇರಬೇಕಾಯಿತು. ಜಾತ್ರೆಯಂತೆ ಜನ. ಒಬ್ಬೊಬ್ಬರೂ ಬಾಯಿಗೆ ಬಂದಂತೆ ಮಾತನಾಡಿದ್ದರು. ಡಿ.ಐ.ಜಿ. ಅರ್ಕೇಶಪ್ಪ ಎಲ್ಲರನ್ನೂ ಕೂರಿಸಿ ಮದುವೆಗೆ ಒಪ್ಪಿಸಲು ಯತ್ನಿಸಿದ್ದರು.

ಹುಡುಗನ ಜಾತಿ ಮುಂದೆ ಮಾಡಿ ‘ನಮ್ಮ ಪಾಲಿಗೆ ತಂಗಿ ಸತ್ತಳು’ ಎಂದು ಅಣ್ಣ ಜೋರಾಗಿ ಕೂಗಾಡಿದ್ದ. ಅದೇ ಕೋಪದಲ್ಲಿ ಕುಮಾರನಿಗೆ ಠಾಣೆಯ ಎದುರೇ ಅಣ್ಣ ಹಿಡಿದು ಬಡಿದಿದ್ದ. ಕೆನ್ನೆಗೆ ಬಾರಿಸಿದ್ದ. ‘ಜಾತಿ ಹಣ ಎಂಬ ಹಾಸುಬಂಡೆಯ ಮೈಮೇಲೆ ಎಳೆದುಕೊಂಡು ಬದುಕುತ್ತಿರುವ ಜನ ಇವರು’ ಎಂದು ನೀಲಾ ಬೇಸರಿಸಿದಳು.

ಅಲ್ಲೇ ಇದ್ದ ಅವ್ವ ಬೆಚ್ಚಿದ್ದಳು. ಕೋಪದಿಂದ ನೀಲಾಳತ್ತ ಕೈ ಮಾಡಿ ‘ಹೇ ನಿನಗೆ ಪ್ರೇಮಾ ಎಂಬ ಭ್ರಾಂತು. ಆ ಹುಚ್ಚು ಅಲೆಯಲ್ಲಿ ಕೊಚ್ಚಿಹೋಗ್ತೀಯ. ನೀನು ಎಲ್ಲೂ ನೆಲೆ ನಿಲ್ಲಕ್ಕಾಗಲ್ಲ’ ಎಂದು ಕಣ್ಣು ಮೆಡರಿಸಿ ವಿಕಾರವಾಗಿ ಹಲ್ಲು ಕಡಿದಿದ್ದಳು. ‘ಯಾವ ತಾಯ ಮಡಿಲಲ್ಲಿ ಮಮತೆಯ ಮಗುವಾಗಿ, ಅವಳೆಲ್ಲ ಭಾಗ್ಯಗಳ ಸಿರಿಯ ಚಂದ್ರಿಕೆಯಾಗಿ ಬೆಳೆದಿದ್ದೆನೋ ಅದೇ ತಾಯಿ ನನ್ನನ್ನ ಶಪಿಸುತ್ತಿರುವುದನ್ನು ನೋಡಿ ನನಗೂ ಈ ಮದುವೆ ಬ್ಯಾಡ ಅನ್ನಿಸದೇ ಇರಲಿಲ್ಲ. ಸಮಾಜಕಂಟದವಾದ ಜಾತಿಗೆ ಇದ್ದ ಶಕ್ತಿ ಅಂದೇ ನನಗೆ ಅರ್ಥವಾಗಿಬಿಟ್ಟಿತ್ತು. ಅದನ್ನು ಮೀರುವ ಸವಾಲು ನನ್ನದಾಗಿತ್ತು’ ಎಂದು ತಾಯಿಯೇ ತನ್ನ ದಾರಿಗೆ ಎದುರಾದುದನ್ನು ನೀಲಾ ನೆನೆದಳು.

‘ಹಾಗೆ ನೋಡಿದರೆ ಕುಮಾರನದ್ದು ಏನೂ ತಪ್ಪಿಲ್ಲ. ಅವತ್ತು ತೋಟದಲ್ಲಿ ಒಬ್ಬನೇ ಸಿಕ್ಕಾಗ ಮುದ್ದುಮುದ್ದಾಗಿ ಕಂಡಿದ್ದ. ಆ ದಿನವೇ ಅವನ ಮೇಲೆ ಅನುರಾಗ ಹುಟ್ಟಿತ್ತು. ನಾನೇ “ನನ್ನ ಮದುವೆ ಆಗುತ್ತೀಯ?: ಅಂತ ಕೇಳಿದ್ದೆ. ಆ ದಿನದಿಂದಲೇ ನಮ್ಮ ತೋಟದ ಕೆಲಸಕ್ಕೆ ಕುಮಾರ ಬರೋದ ನಿಲ್ಲಿಸಿಬಿಟ್ಟಿದ್ದ. ಅವನು ಸಿಗದಿದ್ದಾಗ ನಾನೇ ಅವನ ಹುಡುಕಿಕೊಂಡು ಹೋಗಿದ್ದೆ. ನನ್ನ ಕಂಡ ಕೂಡಲೇ ಅಯ್ಯೋ ನೀವ್ಯಾಕೆ ಬಂದ್ರಿ ಎಂದು ಹೆದರಿ ಸುತ್ತ ಕಣ್ಣಾಡಿಸಿದ್ದ, ಪಾಪ ಪುಣ್ಯ ಗೊತ್ತಿಲ್ಲದವ’ ಎಂದು ಕುಮಾರನ ಜೊತೆಗಿನ ತನ್ನ ನಡೆಗಳನ್ನು ನೆನೆದಳು.

‘ಎಲ್ಲ ಜನ ದುಡಿದು ಬದುಕುವಂತೆಯೇ ತಾನೂ ದುಡಿದು ಬದುಕಿದ ಜೀವ. ದುಡಿಮೆಗೆ ಎಂದೂ ಹಿಂದೆಬಿದ್ದವನಲ್ಲ. ನಾವಿಬ್ಬರೂ ಮದುವೆಯಾದಾಗಿನಿಂದಲೂ ಅವನನ್ನು ಯಾರೂ ಕೂಲಿಗೆ ಕರೆಯುತ್ತಿರಲಿಲ್ಲ. ಇದು ಅವನು ಕಳ್ಳತನಕ್ಕೆ ಅಂಟಿಕೊಳ್ಳಲು ಕಾರಣ ಇರಲೂಬಹುದು. ಅಣ್ಣನನ್ನು ಕಂಡರೆ ಕಮಾರನಿಗೆ ಹೆದರಿಕೆ ಇತ್ತು.’ ಇದನ್ನೆಲ್ಲ ನೆನೆದಳಾಗಿ ದುಃಖ ಉಕ್ಕಿ ಬಂತು. ನೋವ ನಡುವೆಯೇ ಬೆಳಗಾಯಿತು. ಎದ್ದವಳೇ ಸೋಮಪ್ಪನನ್ನು ಭೇಟಿಯಾಗಲು ಹೊರಟಳು.

ಎದ್ದ ಮಗು ಕಯ್ಯಾಪಿಯ್ಯಾ ಎನ್ನುತ್ತಿತ್ತು. ಅದನ್ನು ನೋಡಿದಾಗ ಮನಸ್ಸು ತಡಿಯದೆ ಸೋಮಪ್ಪ ‘ನೀನು ಇಲ್ಲೇ ಇರು ಮಗ, ನಾನೇ ಹೋಗಿ ಕುಮಾರನ ಕರ್ಕಂಡು ಬತ್ತಿನಿ. ಈ ಮಗ ಕಟ್ಕಂಡು ಅಲ್ಲೆಲ್ಲಾ ಯಾಕೆ ಪೇಚಾಡ್ತಿಯಾ?’ ಅಂದರು. ಆ ಮಾತು ಬಂದಿದ್ದೇ ತಡ ‘ನಾನು ಬರುತ್ತೇನೆ. ಅವನು ಇಲ್ಲದೆ ಇಷ್ಟು ದಿನ ಪೇಚಾಡಿದ್ದೀನಿ. ಅದಕ್ಕಿಂತ ಏನೂ ಕಷ್ಟ ಅಲ್ಲ’ ಎಂದು ಅವರಿಗಿಂತ ಎರಡೆಜ್ಜೆ ಮುಂದೆ ಹೊರಟು ನಿಂತಳು.

ನೀಲಾಳನ್ನು ಕುಮಾರ ಬಿಟ್ಟುಹೋಗಿದ್ದಾನೆ ಎಂಬ ಸುದ್ದಿ ಸುತ್ತಮುತ್ತಲೆಲ್ಲ ಹಬ್ಬಿ ಹರಡಿತ್ತು. ಅಲ್ಲಿಯೇ ಬಸ್ಸಿಗಾಗಿ ನಿಂತಿದ್ದ ಪರಿಚಯಸ್ಥ ಹೆಂಗಸೊಬ್ಬಳು, ಮಾತನಾಡಿಸದಿದ್ದರೆ ತಪ್ಪಾಗುತ್ತದೆ ಎಂದು ಬಗೆದು ನಗುನಗುತ್ತಲೇ ಮಗು ಮಾತನಾಡಿಸುವ ನೆಪದಲ್ಲಿ ಹತ್ತಿರ ಬಂದು ‘ಏನು ಅಮ್ಮ ಮಗ ಇಬ್ಬರೇ ಹೋಗುತ್ತಿದ್ದೀರಾ’ ಎಂದು ತುಸು ಮೆಲು ಧ್ವನಿಯಲ್ಲೇ ಕೇಳಿದರು. ಮಗು ಕಡೆ ತಿರುಗಿ ‘ಹೇ ಕಳ್ಳ’ ಎಂದು ಗಲ್ಲ ಸವರಿ ಮಾತನಾಡಿಸಿದಳು. ಕೆಲವರು ನೊಂದವಳ ನೋಯಿಸಬಾರದೆಂದು ‘ಏನವ್ವಾ ಊರಿಗಾ?’ ಒಬ್ಬಳೇ ಹೊರಟಿದ್ದೀಯ? ಕುಮಾರ ಎಲ್ಲಿ? ಎಂದು ಕೇಳಿದರು.

ನೀಲಾಳಿಗೆ ಯಾವುದೂ ಮುಚ್ಚು ಮರೆ ಇರಲಿಲ್ಲ. ತೆರೆದ ಬಯಲಿನಂತಿತ್ತು ಅವಳ ಬದುಕು, ಬಾಗಿಲಿಲ್ಲದ ಮನೆಯಂತೆ. ಎಲ್ಲರಿಗೂ ಗೊತ್ತಿರುವುದನ್ನ ಯಾರಿಗೂ ಗೊತ್ತಿಲ್ಲ ಎಂದುಕೊಳ್ಳುವುದು ನನ್ನ ಮೂರ್ಖತನ ಎಂದು ಅರಿತಿದ್ದಳು. ಅಲ್ಲಿ ನಿಂತ ಕಂಚುಗಾರರ ಸೊಸೆಗೆ ‘ನೋಡಕ್ಕ ನಮ್ಮ ಕುಮಾರ ತುಂಬಾ ದಿನ ಆಯ್ತು ಇನ್ನೂ ಏನು ಎತ್ತ ಅಂತ ತಿರುಗಿ ನೋಡಿಲ್ಲ, ನನ್ನ ನೋಡದೆ ಹೋದರೆ ಹಾಳುಬಿತ್ತು, ಹಸುಗೂಸನ್ನಾದರೂ ನೋಡಕ್ಕೆ ಬರಬಾರದ? ಎಂಥಾ ಮನುಷ್ಯ ಇವನು? ಅದಕ್ಕೇ ನಾನೇ ಖುದ್ದು ಕಂಚುಗಾರನ ಹಳ್ಳಿಗೆ ಹೋಗಿ ನೋಡ್ತಿನಿ ಅಂತ ಹೊರಟಿದ್ದೀನಿ’ ಎಂದು ಹೇಳಿದಳು.

ಆ ಕಂಚುಗಾರನ ಹಳ್ಳಿಯ ಹೆಂಗಸು ಏನನ್ನು ಕೇಳಬೇಕೆಂದಿದ್ದಳೋ ಅದನ್ನು ನೀಲಾಳಿಂದಲೇ ತಿಳಿದು ಒಂಥರಾ ಮನಸ್ಸಿಗೆ ಕಸಿವಿಸಿ ಆಯಿತು. ‘ಕ್ಷಮಿಸು ನೀಲಾ ಬಸ್ಸು ಬಂತು ಬಾ’ ಎಂದು ಅತ್ತ ಓಡಿದಳು. ಕುಂತಿದ್ದವರು, ನಿಂತಿದ್ದವರು ಹೊರಡುವ ತಯಾರಿಯಲ್ಲಿ ಅತ್ತಿತ್ತ ಚಲಿಸಿದರು. ಎಲ್ಲಾ ಒಟ್ಟಾಗಿ ಬಸ್ಸು ನಿಲ್ಲುವ ಮಾರ್ಗಕ್ಕೆ ನಿಂತರು. ಬಸ್ಸು ಎಲ್ಲರನ್ನೂ ತಬ್ಬಿಕೊಂಡು ಹೊರಟೇಬಿಟ್ಟಿತು.

ಬಸ್ಸು ಊರೂರು ದಾಟಿ ಕಂಚುಗಾರನಹಳ್ಳಿ ತಲುಪಿದಾಗ ರಸ್ತೆ ರಿಪೇರಿಯಾಗುತ್ತಿರುವುದು ಕಂಡುಬಂದಿತು. ಅಲ್ಲಿ ಡಾಂಬರು ಸುಡುವ ವಾಸನೆ ಪ್ರಯಾಣಿಕರ ಮೂಗಿಗೆ ಬಡಿಯುತ್ತಿತ್ತು.

ನೀಲಾಳಿಗೆ ಇದಾವುದರ ಪರಿವೇ ಇರಲಿಲ್ಲ. ಎಷ್ಟು ಬೇಗ ಕುಮಾರ ಕಣ್ಣಿಗೆ ಕಾಣಿಸುತ್ತಾನೋ ಎನ್ನುವಂತೆ ಕಿಟಕಿಯಿಂದಾಚೆ ಕಾಣುವ ಊರಿನಕಡೆ ಇಣುಕಿ ನೋಡುತ್ತಿದ್ದಳು. ಇಡೀ ಊರಿನ ಆ ಸೀನರಿಗೆ ಕಿಟಕಿ ಪ್ರೇಮ್ ಹಾಕಿದಂತೆ ಕಾಣುತ್ತಿತ್ತು. ‘ಇಲ್ಲೇ ಇಳಿಯಿರಿ’ ಎಂದನು ಕಂಡಕ್ಟರ್.

ಊರು ಬಂದಿದ್ದೇ ತಡ ನೀಲಾಳಿಗೆ ಕುಮಾರ ಸಿಕ್ಕಿದಷ್ಟೇ ಸಂತಸ ದುಃಖ ಒಟ್ಟೊಟ್ಟಿಗೇ ಆದಂತೆ ಅನುಭವ. ತುಟಿ ಕಚ್ಚಿ ಹಿಡಿದ ಅವಳು ಅವನನ್ನು ಜುಟ್ಟು ಹಿಡಿದು ಕೇಳುತ್ತೇನೆ ಎಂದು ಗೊಣಗಿಕೊಳ್ಳುತ್ತಾ ಬಸ್ಸು ಇಳಿದಳು. ಸೋಮಪ್ಪ ಆಕಡೆ ಈಕಡೆ ನೋಡಿದರು.‌

ಅಲ್ಲಿ ಮರದ ಕೆಳಗೆ ಜನ ಕುಳಿತು ಅಲ್ಲಿ ನಡೆಯುತ್ತಿದ್ದ ಕೆಲಸವನ್ನು ವೀಕ್ಷಿಸುತ್ತಿದ್ದರು. ಡ್ರಮ್ಮುಗಳಿಗೆ ಬೆಂಕಿ ಹಚ್ಚಿ ಡಾಂಬರು ಕಾಯಿಸುತ್ತಿದ್ದರು. ಯಾರೊಬ್ಬರ ಮುಖವನ್ನೂ ಗುರುತು ಹಚ್ಚಲು ಆಗುತ್ತಿರಲಿಲ್ಲ, ಮಕ್ಕಳು ಬಿಡಿಸಿಟ್ಟ ಚಿತ್ರದಂತೆ. ಸಿಟ್ಟಿಗೆದ್ದ ಕಲಾಕಾರನೊಬ್ಬ ಬೇಸರದಿಂದ ಎರಚಿದ ಬಣ್ಣದಿಂದ ಮೂಡಿದ ಅಸ್ಪಷ್ಟ ಚಿತ್ರಗಳಂತೆ ಅವರು ಓಡಾಡುತ್ತಿದ್ದರು. ಮೈಕೈ ಎಲ್ಲಾ ಟಾರು ಮೆತ್ತಿಕೊಂಡಿತ್ತು. ಅಷ್ಟು ದೂರದಿಂದಲೇ ನಾವು ಬರುತ್ತಿರುವುದನ್ನು ಕಂಡು ಅದ್ಯಾರೋ ‘ಅಲ್ಲೇ ಇರಿ ಬರಬೇಡಿ, ಎಣ್ಣೆ ಕಾದಿದೆ, ಕಾಲಿಗೇನಾದರೂ ತಾಗೀತು’ ಎಂದು ಕೂಗು ಹಾಕಿದರು. ನೀಲಾಳನ್ನು ಅಲ್ಲೇ ಇರುವಂತೆ ಸೋಮಪ್ಪ ಕೂಗಿ ಹೇಳಿದರು. ಮೋಡದಂತೆ ಮೇಲೇಳುತ್ತಿರುವ ಕಪ್ಪು ಹೊಗೆಯ ನಡುವೆ ಗಡಚಿಕ್ಕುವ ಯಂತ್ರಗಳು ರಾಕ್ಷಸರಂತೆ ಕೆಲಸ ಮಾಡುತ್ತಿದ್ದವು.
ಉದ್ದುದ್ದ ಶೂ ಹಾಕಿದ್ದವರೊಬ್ಬರು ಬಕೆಟ್ಟಿನಲ್ಲಿ ಟಾರನ್ನು ತಂದು ರಸ್ತೆಗೆ ಸುರಿಯುತ್ತಿದ್ದರು. ಮತ್ತೊಂದುಕಡೆ ರೋಡ್ ರೋಲರ್ ರಸ್ತೆಯಲ್ಲಿ ಉರುಳಿ ಹೋಗುತ್ತಿತ್ತು. ನೀಲಾ ಕುಮಾರನನ್ನು ಎಲ್ಲಾಕಡೆ ಹುಡುಕಿದಳು, ತಡಕಿದಳು, ದಿಗಿಲುಗೊಂಡಳು. ‘ನನ್ನನ್ನು ಕಂಡರೆ ಅವನೇ ಬರುತ್ತಾನೆ’ ಎಂದು ಮನಸ್ಸಿಗೆ ಅನ್ನಿಸದೇ ಇರಲಿಲ್ಲ. ಅಂಥಾ ಪ್ರೇಮಮಯಿ ಅವನು. ಸೋಮಪ್ಪ ಮುಂದೆ ಹೆಜ್ಜೆ ಇಟ್ಟರಷ್ಟೆ, ರಸ್ತೆಗೆ ಟಾರು ಸುರಿಯುತ್ತಿದ್ದ ಕುಮಾರ ಸೋಮಪ್ಪನನ್ನು ನೋಡಿ ‘ಅಪ್ಪಾರೆ ನೀವಿಲ್ಲಿ?’ ಎಂದು ಓಡಿ ಬಂದ.
ನೀಲಾ ಬೆಚ್ಚಿ ಪ್ರತಿಮೆಯಂತೆ ನಿಂತುಬಿಟ್ಟಳು. ಅವನ ಬಟ್ಟೆಗೆ ಡಾಂಬರ್ ಮೆತ್ತಿಕೊಂಡಿದ್ದರಿಂದ ರಟ್ಟುಗಟ್ಟಿ ಒಣಗಿದ ಚರ್ಮದಂತಾಗಿತ್ತು. ವನವಳ್ಳಿ ಅಪ್ಪಯ್ಯಣ್ಣ ಹೇಳಿದಂತೆ ಅವನ ಮುಖ ಕಪ್ಪಾಗಿತ್ತು. ಕುಮಾರನಿಗೆ ನೀಲಾಳನ್ನು ಕಂಡು ಕರುಳು ಚುರುಕ್ ಎಂದಿತು. ಅವಳು ಕಂಡ ಆ ಅನುಪಮ ರೂಪವಂತನ ರೂಪವ ಕಂಡು ಮರುಗಿದಳು.

ಯಂತ್ರದಂತೆ ದುಡಿದರೂ ತುತ್ತಿಗೆ ಆಹಾಕಾರ. ಎಷ್ಟೇ ಕೆಲಸ ಮಾಡಿದರೂ ಸರಿಯಾಗಿ ಹೇಳಿದಂತೆ ಕೆಲಸ ಮಾಡಿಲ್ಲ ಎಂದು ಕೂಲಿ ಹಿಡಿದು ಕೊಡುತ್ತಿದ್ದ ಮೇಸ್ತ್ರಿ, ಯಜಮಾನ ಹೇಳಿದಂತೆ ಕೆಲಸ ಮಾಡುತ್ತಿದ್ದ. ಮನುಷ್ಯನಿಗೆ ಬೆಲೆ ಇಲ್ಲದ ಸಮಾಜದಲ್ಲಿ ದುಡಿಮೆಗೆ ಬೆಲೆ ಎಲ್ಲಿಂದ ಬರಬೇಕು? ವ್ಯವಸ್ಥೆ ದಯಪಾಲಿಸಿದ ರೂಪ ಹೊತ್ತು ಕುಮಾರ ನಿಂತಿದ್ದ, ತಬ್ಬಲಿಯಂತೆ.

ಕೈಗಳನ್ನು ಉಜ್ಜಿಕೊಂಡು, ಕುಮಾರ ಮುಂದೆ ಬಂದ. ನೀಲಾಳ ಕಣ್ಣುಗಳು ಕೆಂಪಾಗಿದ್ದವು. ನೀಲಾಳಿಗೆ ತನ್ನ ಮೇಲೆ ತನಗೇ ಬೇಸರವಾಯಿತು. ಬಿಕ್ಕುತ್ತಾ ಹೇಳಿದಳು. ನಾನು ತಪ್ಪಾಗಿ ಭಾವಿಸಿದ್ದೆ. ಮತ್ತೆ ಕಣ್ಣೀರಾದಳು.

ಕತ್ತಲೆಯಲ್ಲಿ ಯಾರಿಗೂ ಕಾಣದಿರಲೆಂದು ಅವನು ಕಪ್ಪು ಬಟ್ಟೆ ತೊಟ್ಟು ಹೊರಟಿದ್ದು ನಿಜ. ಆದರೀಗ ಮೈಯೆಲ್ಲಾ ಕಪ್ಪಾಗಿಹೋಗಿದೆ. ಆ ಕಪ್ಪಿನೊಳಗೂ ಆ ಕಣ್ಣುಗಳು ತಮ್ಮ ಹೊಳಪನ್ನು ಕಳೆದುಕೊಂಡಿಲ್ಲ. ಅವನ ದೃಷ್ಟಿಗೆ ಯಾರೂ ಮಸಿ ಬಳಿಯಲಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.