ADVERTISEMENT

ಪ್ರಜಾವಾಣಿ ಕಥಾ ಸ್ಪರ್ಧೆ | ಮೆಚ್ಚುಗೆ ಪಡೆದ ಎಂ.ಎಸ್‌.ಶೇಖರ್ ಕಥೆ: ವರಹಾ ಪ್ರಸಂಗ

ಪ್ರಜಾವಾಣಿ ವಿಶೇಷ
Published 15 ನವೆಂಬರ್ 2025, 23:30 IST
Last Updated 15 ನವೆಂಬರ್ 2025, 23:30 IST
   

ಮೇರ‍್ವೆಯಲ್ಲಿ ಹನ್ನೆರಡು ವರ್ಷಕ್ಕೊಂದು ಸಲ ನಡೆಯುವ ಪಾತ್ರಾಯ, ಕರೆಬೀರ, ಸುಂಕನಮ್ಮ, ದೊಡ್ಡಮ್ಮ, ಚಿಕ್ಕಮ್ಮದೇವತೆಗಳ ದೊಡ್ಡಬ್ಬಕ್ಕೆ ಹೊಲಗೇರಿಯಲ್ಲಿ ವರ್ಷಕ್ಕೆ ಮುಂಚಿನಿಂದಲೇ ತಯಾರಿ ನಡೆಯುತ್ತಿತ್ತು. ದೊಡ್ಡಬ್ಬಕ್ಕಾಗಿ ಸಂತೆಯಿಂದ ಹಂದಿಮರಿಗಳನ್ನು ತಂದು ಸಾಕುತ್ತಿದ್ದರು. ಹಂದಿಮರಿ ತಂದು ಸಾಕಲಾಗದ ಕೆಳಗಲಕೇರಿಯ ಬಡವರು ಎರಡುಮೂರು ಮನೆಗೊಂದು ಹಂದಿಯಂತೆ ಸಾಕಿ ಬಾಡನ್ನು ಪಾಲು ಹಾಕಿಕೊಳ್ಳುತ್ತಿದ್ದರು. ‘ಯರ‍್ಡು ಮೂರಿಂಚ್ನ ಹಂದಿ ಬರ‍್ನೂವೆ, ಬಾಡ್ನೂವೆ ತಿಂದ್ರೆ ನೆಕ್ಕಂದು ಕುಣೀತೀತೆ. ಬುಕ್ಲು ರೋಗ ವಾಸಿ ಆಗ್ತೀತೆ’ ಎನ್ನುವ ಚುಂಡೀರಯ್ಯ ಮತ್ತು ಬೆಣ್ಣೆಗಿಡ್ಡಯ್ಯ ತೊಡೆನುಸುಕ ಜೋಡಿಗಳ ಮಾತಿಗೆ ಮರುಳಾಗಿದ್ದ ಲಿಂಗಾಯತರ ಪುಟ್ಟೇಗೌಡ, ಶಂಕರ, ರುದ್ರೇಶ ಈ ಮೂರು ಜನ, ‘ಪರಾಣ ತಗುದ್ರು ಯಾರಿಗೂ ಹೇಳ್ಬಾರ‍್ದು’ ಅಂತ ಧರ್ಮಸ್ಥಳದ ಮಂಜುನಾಥಸ್ವಾಮಿ ಮೇಲೆ ಆಣೆ ಮಾಡಿಸಿಕೊಂಡು, ದೊಡ್ಡಬ್ಬದಲ್ಲಿ ಯಾರಿಗೂ ಗೊತ್ತಾಗದಂತೆ ಹಂದಿ ಬಾಡನ್ನು ಉರಿದು ಕೊಡಬೇಕು ಎಂದು ಚುಂಡೀರಯ್ಯ ಮತ್ತು ಬೆಣ್ಣೆಗಿಡ್ಡಯ್ಯ ಜೋಡಿಜೊತೆ ಮೊದಲೇ ಒಪ್ಪಂದ ಮಾಡಿಕೊಂಡಿದ್ದರು.

ಚುಂಡೀರಯ್ಯ ಹಂದಿಮರಿಗಳ ಬೀಜಗಳನ್ನು ಕೀಳುವ ಶಸ್ತ್ರಚಿಕಿತ್ಸೆಯನ್ನು ಕಲಿತಿದ್ದ. ಹೊಗೆಸೊಪ್ಪು ಕಡ್ಡಿಹುಡಿಸಹಿತ ಎಲೆ ಅಡಿಕೆ ಮೆಲ್ಲುತ್ತಿದ್ದ ಚುಂಡೀರಯ್ಯ, ಚೂರಿಯಿಂದ ಸಣ್ಣ ಹಂದಿಮರಿಗಳ ಬೀಜ ಕಿತ್ತು, ಅದಕ್ಕೆ ಒಣಗಿದ ಬೆರಣಿ ಪುಡಿಯನ್ನು ತುಂಬಿ, ಗಾಯಕ್ಕೆ ಅರಿಶಿನ ಪುಡಿಯನ್ನು ಮೆತ್ತಿ, ಸೂಜಿ ದಾರದಲ್ಲಿ ಹೊಲೆದರೆ ‘ಆಪರೇಷನ್ ಸಕ್ಸಸ್’ ಆದಂತೆ! ಒಂದು ಹಂದಿ ಮರಿಗೆ ಇಂತಿಷ್ಟು ದುಡ್ಡು ಅಂತ ಸಂಗ್ರಹಿಸಿಕೊಂಡು ಅಂದಿನ ಶೇಂದಿಗುಡ್ಲಿನ ಖರ್ಚಿಗೆ ಜಮಾ ಮಾಡಿಕೊಳ್ಳುತ್ತಿದ್ದ. ಹಂದಿಮರಿಗಳ ಬೀಜಗಳಿಗೆ ಒಂದು ಕೈಮುಂದೆ ಅನ್ನುವಂಗೆ ಕಾರ ಜಾಸ್ತಿ ಹಾಕಿ ಉರಿದು ಶೇಂದಿಯೊಂದಿಗೆ ನೆಂಚಿಕೆ ಮಾಡಿಕೊಳ್ಳುತ್ತಿದ್ದ.

ಗ್ರಹಚಾರ, ತಮ್ಗನಹಳ್ಳಿಯವಳು ಸಾಲಸೋಲ ಮಾಡಿ ತಂದು ಸಾಕಿದ್ದ ಹಂದಿಮರಿಯ ಬೀಜ ಕಿತ್ತು ಹೊಲಿಗೆ ಹಾಕಿದ ಮೇಲೆ, ಚುಂಡೀರಯ್ಯನ ಕೈಗುಣದ ಶಸ್ತ್ರಚಿಕಿತ್ಸೆ ವಿಫಲವಾಗಿ ಮೂರೇ ದಿನಗಳಲ್ಲಿ ಆ ಮರಿ ಸತ್ತೇ ಹೋಯಿತು. ತಮ್ಗನಹಳ್ಳಿಯವಳು ಸತ್ತ ಹಂದಿಮರಿಯನ್ನು ಮುಂದಿಟ್ಟುಕೊಂಡು ಎದೆಎದೆ ಬಡಿದುಕೊಂಡು ಗೋಳಾಡುತ್ತಿದ್ದಳು. ‘ಅದ್ರ ಬೀಜ ನಾನೆ ಕೀಳ್ತಿದ್ದೆ. ಆ ಕರ‍್ಬ ಬೋಳಿಮಗುಂಗೆ ಯಾಕ್ಕೊಟ್ಟೆ’ ಅಂತ ಸಣ್ಣಬೋರ, ತನ್ನ ಹೆಂಡತಿಯನ್ನು ದನಬಡಿದಂಗೆ ಬಡಿದಿದ್ದ. ಸತ್ತಮರಿಯನ್ನು ಚುಂಡೀರಯ್ಯನ ಮನೆಮುಂದಕ್ಕೆ ಎಸೆದು ‘ಮರಿ ಮಡಿಕ್ಕಂಡು ದುಡ್ಕೊಡು. ಎಷ್ಟ್ ಜನ್ಕೆ ಹುಟ್ಟೀದ್ದೀಯಾ, ಬೇಕಂತ್ಲೆ ನನ್ನ ಹಂದಿಮರಿ ಸಾಯ್ಸಿದ್ದೀಯಾ!’ ಎಂದು ಚುಂಡೀರಯ್ಯನಿಗೆ ಉಗಿತು ಉಪ್ಪಾಕಿ ಬಂದಿದ್ದ, ಚುಂಡೀರಯ್ಯ ಸತ್ತ ಆ ಎಳೆಯ ಮರಿಯನ್ನೆ ಚೆನ್ನಾಗಿ ಉಜ್ಜಿ ತೊಳೆದು ಕುಯ್ದು ಹೆಚ್ಚುವರಿ ಉಪ್ಪುಕಾರ ಹಾಕಿ ಹುರಿದುಕೊಂಡು ಬೆಣ್ಣೆಗಿಡ್ಡಯ್ಯನ ಜೊತೆ ಶೇಂದಿ ಗುಡ್ಲಿಗೆ ಹೋಗಿಯೇ ಬಂದಿದ್ದ. ಬೀಜ ಕೀಳುವಾಗ ಚುಂಡೀರಯ್ಯನ ಕೈಗುಣ ಕೈಕೊಟ್ಟು, ಕೊಬ್ಬಿದ ಕೆಲವು ಗಂಡುಹಂದಿಗಳು ಹೆಣ್ಣುಹಂದಿಗಳ ಮೇಲೇರಿ ಹೋಗುತ್ತಿದ್ದವು. ಇದರಿಂದಾಗಿ ಕೆಲವು ಹೆಣ್ಣು ಹಂದಿಗಳು ಬಸುರಾಗಿ ತಮ್ಮ ಸಂತಾನ ವೃದ್ಧಿ ಮಾಡಿಕೊಳ್ಳುತ್ತಿದ್ದವು.

ADVERTISEMENT

ಹೊಲಗೇರಿಯಲ್ಲಿ ಸಾಕಿದ್ದ ಹಂದಿಮರಿಗಳು ನೋಡಲು ಚೆಂದವಾಗಿಯೇ ಕಾಣುತ್ತಿದ್ದು ‘ಹಮಾರೆ ತುಮ್ಹಾರೆ’ ಅನ್ನುವಂತೆ ಬೆಳೆದಿದ್ದವು. ಶೆಟ್ಟರು, ಆಚಾರ‍್ರು, ಲಿಂಗಾಯತರು, ಐನೋರ ಮನೆಗಳ ಹಿತ್ತಿಲುಗಳಲ್ಲಿ, ಮಲ್ಲಿಗೆ ಅಂಟು, ಸಾವಂತಿಗೆ, ಕಾಕಡ, ಚೆಂಡೂವು, ಬೆಟ್ಟದಾವರೆ, ಕೆಂಪುದಾವರೆ ಹೂವುಗಳನ್ನು ಬೆಳೆದಿದ್ದರು. ಹೊಲ್ಗೇರಿಯ ಕೊಬ್ಬಿದ ಹಂದಿಗಳು ಈ ಹೂಗಿಡಗಳ ಬೇರುಗಳನ್ನೇ ಊಟಿ ತಿಂದು ಬರುತ್ತಿದ್ದವು. ಕರಾವಿನ ಹಸು ಎಮ್ಮೆಗಳಿಗೆ ಕುಡಿಸುವ ಕಲಗಚ್ಚನ್ನು ಕ್ಷಣಾರ್ಧದಲ್ಲಿ ಬಾಯಾಕಿ ಕುಡಿಯುವುದನ್ನು ರೂಢಿ ಮಾಡಿಕೊಂಡಿದ್ದೂ ಅಲ್ಲದೆ, ಇದಕ್ಕೆ ಅಡ್ಡಿ ಮಾಡುವ ಹೆಂಗಸರು, ಮಕ್ಕಳನ್ನು ಗುರಾಯಿಸುವ ಮಟ್ಟಕ್ಕೂ ಹೋಗಿದ್ದವು. ಬರುಬರುತ್ತ ಹೊಲಗೇರಿಯಲ್ಲಿ ಬೆಳಗ್ಗೆ ಸಂಜೆ ಈ ಹಂದಿ ಸಂತಾನಗಳ ಹಾರಾಟ ಬೋರಾಟ ಜೋರಾಗಿತ್ತು. ಮೇವು ತಿನ್ನಿಸುವುದಕ್ಕೆ ಬೆಳಗ್ಗೆ, ಸಂಜೆ ಹೊಲಗೇರಿ ಹೆಂಗಸರುಗಳು ತಮ್ಮ ವೇಳಾಪಟ್ಟಿಯಂತೆ ‘ಗೂಟಿ.. ಗೂಟಿ.. ಗೂಟೀ.. ಗೂಟೀ..’ ಎಂದು ಕರೆಯುವ ಸ್ತೋತ್ರ ರಾಗಮಯವಾಗಿ ಕೇಳುತ್ತಿತ್ತು. ಹಿತ್ತಿಲು ತಿಪ್ಪೆಗಳ ಬೇಲಿಸಾಲ ಮರೆಯಲ್ಲಿ ಹೆಂಗಸರು ಕೂರುವುದನ್ನೆ ಕಾಯ್ದು ಅದನ್ನು ತಿನ್ನದೆ ಈ ಹಂದಿಗಳು ಮನೆಕಡೆ ತಲೆಹಾಕುತ್ತಿರಲಿಲ್ಲ! ಒಮ್ಮೆ ಮರಿಕೊಂತಮ್ಮ ಕೋಲೂರಿಕೊಂಡು ನೀರ‍್ಕಡಿಕೆ ಹೋಗಿ ಬರುತ್ತಿರುವಾಗಲೇ ಈ ಗಡವ ಹಂದಿಗಳು ಮರಿಕೊಂತಮ್ಮನನ್ನು ಕೆಡವಿದ್ದ ಪ್ರಸಂಗದಿಂದ ಊರೊಳಗೆ ಪಂಚಾಯಿತಿ ಪರವಳಿಗೆಗೆ ಕಾರಣವೂ ಆಗಿತ್ತು.

ಚಂದ್ರೇಗೌಡರ ಕೊನೆ ಮಗ ಕಾಂತರಾಜ, ಬಾಣವಾರದಲ್ಲಿದ್ದ ಅವರ ಅಕ್ಕನ ಮನೆಯಿಂದ ಗೆಣಸುಬೀಳು ತಂದು ಹಿತ್ತಲಿನಲ್ಲಿ ಹೂವಿನ ಗಿಡಗಳ ನಡುವೆ ಹಾಕಿದ್ದ. ಅವು ಬೆಳೆದು ಗಣೇಶ, ಆಂಜನೇಯನ ಮೂತಿಗಳ ಗಾತ್ರಕ್ಕಿದ್ದವು. ಇನ್ನೇನು ಗೆಣಸು ಕೀಳಬೇಕು ಅಷ್ಟರಲ್ಲಿ, ಹೊಲಗೇರಿಯ ಹಂದಿಗಳು ಆ ಗೆಣಸನ್ನು ಊಟಿ, ತಿಂದು ತೇಗಿ, ಅಲ್ಲೆ ಇಡುಕಲನ್ನು ಹಾಕಿದ್ದವು. ಇದನ್ನು ನೋಡಿದ ಕಾಂತರಾಜನಿಗೆ ಪಿತ್ತ ನೆತ್ತಿಗೇರಿತು. ಹಂದಿ ಯಾರವೆ ಆಗಿರಲಿ, ಅವುಗಳಿಗೆ ಒಂದು ಗತಿಯನ್ನು ಕಾಣಿಸಲೇಬೇಕು ಅಂತ ಕಾಂತರಾಜ, ಭರ್ಜಿಯನ್ನು ಸೂರ್ಯನ ಬೆಳಕಿನಂತೆ ಚೂಪಾಗಿ ಮಸೆದುಕೊಂಡು ದಿನಗಟ್ಟಲೆ ಕಾದಿದ್ದ. ಆ ಬೆಳಗ್ಗೆ ಕಾಂತರಾಜನ ಅಜ್ಜಿ ಹಿತ್ತಿಲ ಮೂಲೆಗೆ ನೀರ‍್ಕಡಿಕೆ ಹೋಗಿ ಬಂದಿತ್ತು. ಹಿತ್ತಿಲು ತಿಪ್ಪೆಗಳ ಕ್ಷೇತ್ರಕಾರ್ಯದಲ್ಲಿದ್ದ ಚೋರಯ್ಯನ ಕೊಬ್ಬಿದ ಹಂದಿಯು ಮಾಮೂಲಿನಂತೆ ಏನನ್ನಾದರೂ ಹುಡುಕಿಕೊಂಡು ಅಲ್ಲಿಗೆ ಬಂದು ಗಪಗಪನೆ ತಿನ್ನುತ್ತಿತ್ತು. ಕಾಂತರಾಜ ಸದ್ದು ಮಾಡದೆ, ಹೆಜ್ಜೆ ಹಾಕಿ ರೊಟ್ಟೆಬಲವನ್ನು ಬಳಸಿಗುರಿ ತಪ್ಪದಂತೆ ಹಿಂದಿನಿಂದ ಭರ್ಜಿಯನ್ನು ಎಸೆದೇಟಿಗೆ, ಭರ್ಜಿ ಕೊಬ್ಬಿದ ಹಂದಿಯ ಪಕ್ಕೆಗೆ ಬಲವಾಗಿ ನಾಟಿಕೊಂಡಿತು. ಆ ಹಂದಿ ನೆಲಮುಗಿಲು ಒಂದು ಮಾಡುವಂತೆ ‘ಗೊಟ್ರೊ ಗೊಟ್ರೊ ಗರ‍್ರೊ.. ಗರ‍್ರೊ...’ ಎಂದು ಅರಚುತ್ತಾ, ಹಿತ್ತಿಲ ಬೇಲಿಕಡೆ ನುಗ್ಗುತ್ತ, ಸಿಕ್ಕಸಿಕ್ಕ ಕಡೆ ದಿಕ್ಕಾಪಾಲಾಗಿ ಓಡಿತು.

ಏಕನಾಮದ ಐನೋರು ಹನುಮಂತ್ರಾಯನ ದೇವಸ್ಥಾನದ ಬಾಗಿಲನ್ನು ಆಗತಾನೆ ತೆಗೆದು ಪೂಜೆಗೆ ಸಜ್ಜಾಗುತ್ತಿದ್ದರು. ಭರ್ಜಿ ನಾಟಿದ್ದ ಹಂದಿಯು ಗಾಬರಿಯಿಂದ ಏಕಾಏಕಿಯಾಗಿ ಹನುಮಂತ್ರಾಯನ ದೇವಸ್ಥಾನಕ್ಕೆ ನುಗ್ಗಿತು. ಹಂದಿಗೆ ಬಲವಾಗಿ ನಾಟಿದ್ದ ಭರ್ಜಿಯ ಏಟಿನಿಂದ ರಕ್ತ ಹನುಕುತ್ತಿತ್ತು. ಪೂಜೆ ಸಿದ್ಧತೆಯಲ್ಲಿದ್ದ ಐನೋರು ದಿಗಿಲುಬಿದ್ದು, ಪೂಜಾ ಸಾಮಾಗ್ರಿಗಳನ್ನು ಅಲ್ಲಿಯೇ ಬಿಟ್ಟು, ಸತ್ತೆನೋ, ಕೆಟ್ಟೆನೊ ಅಂತ ಬಿದ್ಹಾರುತ್ತಿದ್ದಾಗ ಅವರ ಅಡ್ಡಪಂಚೆ ದೇವಸ್ಥಾನದ ಬಾಗಿಲ ಚಿಲಕಕ್ಕೆ ಸಿಲುಕಿ ಹರಿದು ಹೋಯಿತು! ಪಂಚೆ ಹೋದರೆ ಹೋಗಲಿ ಅಂತ ಐನೋರು ಪ್ರಾಣಭಯದಿಂದ ಕೆಸರು ಪಸರು ನೋಡದೆ ಮನೆಯ ಕಡೆ ಬಿದ್ದಂಬೀಳ ಓಡಿದರು.

ಹಂದಿಯು ಕತ್ತಲು ಕವಿದಿದ್ದ ದೇವಸ್ಥಾನದ ಒಳಗೆ ಹೊಕ್ಕು ದೇವರ ಗದ್ದುಗೆಯಲ್ಲಿ ಮರೆಮಾಚಿಕೊಂಡಿತು. ಇರಿತದ ನೋವಿನಿಂದ ‘ಗೊಟ್ರೊ.. ಗೊಟ್ರೊ.. ಗರ‍್ರೊ.. ಗರ‍್ರೊ..’ ಅನ್ನುವ ಶಬ್ದ ದೇವಸ್ಥಾನದಿಂದ ಬರುತ್ತಿತ್ತು. ಹಂದಿಯನ್ನೇ ಬೆನ್ನಟ್ಟಿ ಹೋಗುತ್ತಿದ್ದ ಕಾಂತರಾಜ ಅರ್ಧ ಯುದ್ಧ ಗೆದ್ದ ಗತ್ತಿನಲ್ಲಿ ಹಿತ್ತಿಲುಗಳ ಬೇಲಿ ನುಸಿದು ಓಣಿ ಕಡೆ ಓಡಿದ. ಐನೋರು ಬೇರೆ ಅದೇ ದಾರಿಯಲ್ಲಿ ಬರಿ ಮೈಯಲ್ಲಿ, ಕಚ್ಚೆಪಂಚೆಯನ್ನು ಹಿಡಿದುಕೊಂಡು ಓಡುತ್ತಿದ್ದರು. ಕಾಂತರಾಜ ದಿನವೂ ಐನೋರು ಶಾಂತವಾಗಿ, ಮಿಳ್ಳೆ ಹಿಡಿದುಕೊಂಡು ಉದ್ದ ಪಂಚೆಯನ್ನು ಉಟ್ಟುಕೊಂಡು, ಮೈಮೇಲೆ ಮಾಸಲು ಅಡ್ಡಪಂಚೆಯನ್ನು ಹಾಕಿಕೊಂಡು ಹಣೆಗೆ ತ್ರಿವಳಿನಾಮ ಹಾಕಿಕೊಂಡು ಹೋಗುತ್ತಿದ್ದನ್ನು ಮಾತ್ರ ನೋಡಿದ್ದ. ಆದರೆ ಈವತ್ತು ಹೀಗೆ ಮೈಮೇಲೆ ಬಟ್ಟೆ ಇಲ್ಲದೆ ಬೆದರಿ ಹಾರುತ್ತಿರುವುದನ್ನು ನೋಡಿ ‘ಓಹೋ... ಏನೊ ಅನಾಹುತ ಆಗಿದೆ’ ಎಂದು ಕಾಂತರಾಜ ಹಂದಿ ಹನುಮಂತರಾಯನ ದೇವಸ್ಥಾನದ ಕಡೆ ಹೋಗಿರಬಹುದು ಎಂಬ ಅಂದಾಜಿನಲ್ಲಿ ದೇವಸ್ಥಾನದ ಕಡೆ ಓಡಿದ. ದೇವಸ್ಥಾನದ ಬಾಗಿಲು ತೆರೆದಿತ್ತು. ‘ಗೊಟ್ರೊ ಗೊಟ್ರೊ..’ ಎನ್ನುವ ಶಬ್ಧ ದೇವಸ್ಥಾನದ ಒಳಗಡೆಯಿಂದ ಬರುತ್ತಿದ್ದನ್ನು ಕೇಳಿದ ಕಾಂತರಾಜನಿಗೆ ದೇವಸ್ಥಾನದ ಕಲ್ಲುಗಳ ಮೇಲೆ, ಬಾಗಿಲು ದಿಂಡಿನ ಮೇಲೆ ರಕ್ತ ಹನುಕಿದ್ದು ಕಂಡಿತು. ಹಂದಿ ದೇವಸ್ಥಾನದ ಒಳಗೆ ಹೋಗಿದೆ ಎಂಬುದನ್ನು ಖಚಿತಪಡಿಸಿಕೊಂಡ. ಕಾಂತರಾಜನ ಸಿಟ್ಟು ನೆತ್ತಿಗೇರಿತು. ಗಾಬರಿಯಲ್ಲಿ ಕೆಸರು ಕಾಲಿನಲ್ಲೆ ದೇವಸ್ಥಾನದ ಒಳಕ್ಕೆ ನುಗ್ಗಿ ಇಣುಕಿದ. ಹಂದಿಯ ಕೆಸರಿನ ಹೆಜ್ಜೆಗಳು ಕಂಡವು. ನೆಲದ ಮೇಲೆ ಅದರ ರಕ್ತ ಹನಿಕಿದ್ದ ಕಲೆಯೂ ಕಂಡಿತು. ದೇವರ ಗದ್ದಿಗೆಯಲ್ಲಿ ಗವ್ವುಗತ್ತಲು ಕವಿದಿತ್ತು. ಕಾಂತರಾಜನ ಹೆಜ್ಜೆಯ ಸಪ್ಪಳವನ್ನು ಕೇಳಿದ ಹಂದಿ ಘೀಳಿಡುತ್ತಾ ಗರ್ಭಗುಡಿಯಿಂದ ಹೊರಗೆ ಬಂದು ಓಟ ಕಿತ್ತಿತು. ಗಾಬರಿಯಿಂದ ಅದು ಓಡುವ ಬಿರುಸಿಗೆ ಹಂದಿಗೆ ನಾಟಿದ್ದ ಭರ್ಜಿಯು ದೇವಸ್ಥಾನದ ಕಲ್ಲುಕಂಬಕ್ಕೆ ಬಡಿದು ಕಿತ್ತುಬಂದಿತು. ಆಗ ಅದರೆ ಪಕ್ಕೆಯಿಂದ ಚಿಲ್ಲೆಂದು ಹಾರಿದ ರಕ್ತ ದೇವಸ್ಥಾನದ ಕಂಬಕ್ಕೂ, ಬಾಗಿಲಿಗೂ ಹಾರಿತು.

ಭೀತನಾದ ಕಾಂತರಾಜ ರಕ್ತ ಮೆತ್ತಿದ್ದ ಭರ್ಜಿಯನ್ನು ಕೈಗೆತ್ತಿಕೊಂಡ. ಮಳೆ ಜಿನುಗುತ್ತಿತ್ತು. ಕೆಸರು ಕಾಲಲ್ಲಿಯೆ ದೇವಸ್ಥಾನದ ಒಳಕ್ಕೆ ನುಗ್ಗಿದೆನಲ್ಲಾ...! ಎಂಬ ಭಯದಿಂದ ಅವನ ಮೈ ಬೆವರುತ್ತಿತ್ತು. ದೇವಸ್ಥಾನಕ್ಕೆ ನುಗ್ಗಿದ ಹಂದಿಯನ್ನು ಮುಗಿಸಲೇಬೇಕೆಂದು ತೀರ್ಮಾನಿಸಿದ. ಊರ ಬಾಗಿಲ ಕಡೆ ಬಂದು, ಹಂದಿಯ ರಕ್ತ ಹನಿಕಿದ್ದ ಹೆಜ್ಜೆಹಾದಿ ಅನುಸರಿಸಿ ಓಡುತ್ತಿದ್ದ. ಆ ಹಂದಿಯು ನಾಲೆ ಏರಿ ಗುಂಡ್ಕಟ್ಟೆ, ದಾಟಿ ವಾಯುವೇಗದಿಂದ ಓಡುತ್ತಿತ್ತು. ಕಾಂತರಾಜ ‘ಹಂದಿ.. ಹಂದಿ...’ ಎಂದು ಕಿರುಚುತ್ತಾ ಕೈಯಲ್ಲಿ ರಕ್ತ ಸಿಕ್ತವಾದ ಭರ್ಜಿ ಹಿಡಿದುಕೆದರಿದ ತಲೆ, ತೊಡೆಗಾತ್ರದ ಅವನ ತೋಳುನೋಡಿ ಜನ ಅವನನ್ನು ಮಾತಾಡಿಸಲೂ ಹಿಂಜರಿದರು. ‘ಕಾಂತರಾಜನಿಗೆ ಹುಚ್ಚುಗಿಚ್ಚು ಹಿಡಿದಿದೆಯೇ?’ ಎಂದು ಭಯವಾಗಿ ಕೆಲವರು ಹಾಗೆಯೇ ಅರುಗಾದರು. ಗದ್ದೆ ಬಯಲಲ್ಲಿ ಹುಲ್ಲು ಕುಯ್ಯುತ್ತಿದ್ದ ಸಣ್ಣಸ್ವಾಮಿ ‘ಇಲ್ಲೆ.. ಇಲ್ಲೆ.. ಆ ಹಂದಿ ಈ ನಾಲೆ ಏರಿ ಮೇಲಾಸಿ.. ಕಲ್ಲುಕಡದ ಕಡೆ ಓಡಿತು’ ಎಂದು ಬೆದರುತ್ತಲೆ ಹೇಳಿದ. ಕಾಂತರಾಜ ಭರ್ಜಿಯನ್ನು ಹಿಡಿದುಕೊಂಡು ಕಲ್ಲುಕಡದ ಕಡೆ ಧಮ್ಮು ಕಟ್ಟಿ ಓಡುತ್ತಿದ್ದ. ‘ಕಲ್ಲುಕಡ’ ಕರ‍್ಹುಡ್ಗ ಕರ‍್ಹುಡುಗಿಯರು, ಬಸರಿಯರು, ಬಾಣಂತಿಯರು ಸತ್ತರೆ ಅವರನ್ನು ಹೂಳದೆ, ಸುಡದೆ ‘ಕಲ್ಲುಶ್ಯಾವೆ’ ಮಾಡುವ ಹೊಳೆದಡದ ನಿರ್ಜನ ಪ್ರದೇಶವಾಗಿತ್ತು. ಆ ಹೆಣಗಳನ್ನು ಹದ್ದುಕಾಗೆಗಳು ಕಿತ್ತು ತಿನ್ನುತ್ತಿದ್ದವು. ಅವು ದೆವ್ವ ಪಿಶಾಚಿಗಳಾಗಿ ಕಲ್ಲುಕಡದಲ್ಲಿದ್ದ ನೂರಾರುವರ್ಷದ ಮರಗಳಲ್ಲಿ ನೆಲೆಸಿ ಅಲೆಯುತ್ತವೆ. ಅಮವಾಸೆಯಲ್ಲಿ ಕೆರಳುತ್ತವೆ ಎಂಬ ಹತ್ತಾರು ಭೀಭತ್ಸ ಕತೆಗಳು ಅದರ ಸುತ್ತ ಹಬ್ಬಿದ್ದವು. ಆದ್ದರಿಂದ ಆ ಕಡೆ ಯಾರೂ ತಲೆಹಾಕುತ್ತಿರಲಿಲ್ಲ. ಹೀಗಾಗಿ ‘ಕಲ್ಲುಕಡ’ ಊರಿನವರ ಪಾಲಿಗೆ ನಿಗೂಢ ರಹಸ್ಯದ ತಾಣವಾಗಿತ್ತು.

ವಿಷಯ ತಿಳಿದು, ಕಾಂತರಾಜನ ಅಣ್ಣಂದಿರಾದ ರಾಜೇಗೌಡ, ಮಲ್ಲೇಶಗೌಡ ಇಬ್ಬರೂ ‘ಯೇ.. ಕಾಂತ.. ಕಾಂತ.. ಕಲ್ಕಡ್ದಕಡೆ ಹೋಗ್ಬೇಡ, ಹೋಗ್ಬೇಡ..’ ಎಂದು ಕೂಗುತ್ತ ಅವನ ಹಿಂದೆ ಓಡಿ ಬರುತ್ತಿದ್ದರು. ಕಾಂತರಾಜ ಮಾತ್ರ ದೆವ್ವ ಮೈ ಮೇಲೆ ಬಂದಂತೆ ಓಡುತ್ತಿದ್ದ. ಗಂಟೆ ಮಡದ ತೋಪಿನಿಂದ ಹಕ್ಕಿಪಕ್ಷಿಗಳ ಚೀರಾಟ ಕೇಳಿ ಬರುತ್ತಿತ್ತು. ಗುಳ್ಳೆನರಿಯೊಂದು ಹೊಳೆದಡದಮರಗಳ ಮರೆಯಲ್ಲಿ ಓಡಿ ಹೋಯಿತು. ಹುಚ್ಹಿಡಿದ ನಾಯಿಯೊಂದು ಕಲ್ಲಳ್ಳಿಯ ಸಿಕ್ಕ ಸಿಕ್ಕ ನಾಯಿಗಳಿಗೆ ಕಚ್ಚಿಕಲ್ಲುಕಡದ ಕಡೆ ಓಡಿ ಬರುತ್ತಿತ್ತು. ದಡಿಗೆ ಬಡಿಗೆ ಹಿಡಿದು, ಅದನ್ನು ಓಡಿಸಿಕೊಂಡು ಬರುತ್ತಿದ್ದ ಕಲ್ಲಳ್ಳಿಯವರು ತಮಗೇ ಹುಚ್ಚು ಹಿಡಿದವರಂತೆ ನುಗ್ಗುತ್ತಿದ್ದರು. ಭರ್ಜಿ ಇರಿತದಿಂದ ಸಾಯಲೆಂದೇ ಓಡುತ್ತಿದ್ದ ಹಂದಿ ಓಟ, ಹುಚ್ಚುನಾಯಿಯ ಓಟ, ಕೈಯಲ್ಲಿ ಭರ್ಜಿ ಹಿಡಿದು ಮೃತ್ಯುವಿನ ಧೂತನಂತೆ ಓಡುತ್ತಿದ್ದ ಕಾಂತರಾಜ, ಇದ್ದಕಿದ್ದಂತೆಯೆ ಅಲ್ಲೊಂದು ಕ್ಷೊಭೆಯ ವಾತಾವರಣ ನಿರ್ಮಾಣಗೊಂಡಿತು. ಓಡಿಹೋಗುವ ಬರಕ್ಕೆ ಕಾಂತರಾಜ ಗದ್ದೆ ಬದುವನ್ನು ಎಡವಿ ನಾಲೆಯ ನೀರಿನ ಕಾಲುವೆಗೆ ಬಿದ್ದ. ಆ ರಭಸಕ್ಕೆ ಅವನ ಬಟ್ಟೆಯೆಲ್ಲ ಕೆಸರಾದವು. ರಾಜೇಗೌಡ, ಮಲ್ಲೇಶಗೌಡ ಕೆಳಕ್ಕೆ ಬಿದ್ದಿದ್ದ ಕಾಂತರಾಜನನ್ನು ಎದ್ದು ನಿಲ್ಲಿಸಿದರೂ ನಿಲ್ಲಲಾಗದೆ, ಅವನ ಕೈಕಾಲುಗಳೆಲ್ಲ ಗಢಗಢನೆ ನಡುಗುತ್ತಿದ್ದವು. ‘ಹೋದ್ರೆ ಹೋತೀತೆ.. ಬಾ.. ನೀನು ಇಂಥ ಕೆಲ್ಸ ಮಾಡದಾ..? ಮನೆರೆಲ್ಲಾ ಬಾಯ್ ಬಾಯ್ ಬಡ್ಕಾತಾವ್ರೆ. ಬಸ್ರಿಹೆಂಗ್ಸು ನಿನ್ನೆಂಡ್ತಿ ಬ್ಯಾರೆ ಅಳ್ತಾ ಕೂತವ್ಳೆ’ ಅಂತ ಅವನಿಗೆ ಸಮಾಧಾನ ಮಾಡಿದರು. ಸುಸ್ತಾಗಿದ್ದ ಕಾಂತರಾಜನನ್ನು ಅವರಿಬ್ಬರೂ ಹೆಗಲುಕೊಟ್ಟು ಊರಿಗೆ ಕರೆದುಕೊಂಡು ಹೋದರು.

ಇತ್ತಕಡೆ; ದೇವಸ್ಥಾನದಿಂದ ಬಿದ್ಹಾರಿದ್ದ ಐನೋರು ಏದುಸಿರು ಬಿಡುತ್ತ, ಆಗಿದ್ದ ಅನಾಹುತವನ್ನು ನೆನೆದು, ತುಂತುರು ಮಳೆಯಲ್ಲೂ ಬೆವರುತ್ತಿದ್ದರು. ಕೈಕಾಲುಗಳು ಸಣ್ಣಗೆ ನಡುಗುತ್ತಿದ್ದವು. ಮೈಮೇಲೆ ಅಡ್ಡಪಂಚೆ ಇರಲಿಲ್ಲ. ಕೈಯಲ್ಲಿ ಪೂಜಾ ಸಾಮಾಗ್ರಿಗಳಿರಲಿಲ್ಲ. ಐನೋರ ಪತ್ನಿ ಶಾರದಮ್ಮನವರು ಗಡಿಬಿಡಿಯಿಂದಲೇ ಕಚ್ಚೆಪಂಚೆ ಸೀರೆಯನ್ನುಟ್ಟುಕೊಂಡು ತಲೆಗೆ ಬಟ್ಟೆ ಕಟ್ಟಿಕೊಂಡು ಹೊರಬಂದು ಪತಿದೇವರ ಸ್ಥಿತಿ ನೋಡಿ ಬೆದರಿದರು. ಮನೆಯ ಕರಿಯ ಬೆಕ್ಕು ವಿಚಿತ್ರವಾಗಿ ಬಾಲ ಆಡಿಸುತ್ತಾ ಉರಿಗಣ್ಣು ಬಿಡುತ್ತ ಕೆಕ್ಕರಿಸುತ್ತಿತ್ತು.

‘ಅಯ್ಯೋ... ಅಯ್ಯೋ.. ಪ್ರಮಾದ ಪ್ರಮಾದ..! ನನ್ನ ಬಾಯಲ್ಲಿ ಏನೆಂದು ಹೇಳುವುದು? ಗ್ರಹಚಾರ.. ಗ್ರಹಚಾರ.. ಊರಿನಲ್ಲಿ ಒಂದು ಕಟ್ಟಿಲ್ಲ.. ನಿಟ್ಟಿಲ್ಲ..’ ಎಂದು ಒಗಟು ಒಗಟಾಗಿ ಮಾತಾಡುತ್ತ, ಕಚ್ಚೆಪಂಚೆ ಸೀರೆಯ ಧರ್ಮಪತ್ನಿಗೂ ಅರ್ಧ ಜುಟ್ಟಿನ ಮಗನಿಗೂ ಉದುರುವ ಮಳೆಯಲ್ಲಿಯೇ ‘ಮೂರ‍್ನಾಲ್ಕು ಕೊಡ ತಣ್ಣೀರನ್ನು ನನ್ನ ಮೇಲೆ ಸುರಿಯಿರಿ’ ಎಂದು ಆಜ್ಞೆ ಮಾಡಿದರು. ತುಂತುರು ಮಳೆಯಲ್ಲಿಯೇ ಅವರಿಬ್ಬರೂ ಐನೋರ ಆಜ್ಞೆಯಂತೆ ಕೊಡದಲ್ಲಿ ನೀರನ್ನು ಅವರ ಮೇಲೆ ಸುರಿದರು. ಐನೋರು ಸ್ವಯಂಪ್ರೇರಣೆಯಿಂದ ಸಗಣಿನೀರನ್ನು ಮೈಮೇಲೆ ಚಿಮುಕಿಸಿಕೊಂಡು ‘ಭಿನ್ನಹ.. ಆಗಲೇಬೇಕು’ ಎಂದು ದೊಡ್ಡ ದನಿಯಲ್ಲಿ ಹೇಳಿದರು. ‘ಹಂದಿ’ ಎಂದು ಬಾಯಲ್ಲಿ ಉಚ್ಛಾರ ಮಾಡುವುದಕ್ಕೂ ಅವರು ಹಿಂಜರಿಯುತ್ತಿದ್ದರು. ‘ಅದು.. ಅದು..’ ಎಂದು ಹಂದಿ ನುಗ್ಗಿದ ವಿಷಯವನ್ನು ಮನೆಯವರಿಗೆ ಹೇಳುವುದಕ್ಕೂ ಅವರಿಗೆ ಬಾಯಿ ಬರುತ್ತಿಲ್ಲ! ಪಾದಕ್ಕೆ ಅಂಟಿದ್ದ ಹಂದಿಮರಿಯ ರಕ್ತವನ್ನು ಹೇಗೆ ತೆಗೆಯುವುದು? ಎಂಬ ಯೋಚನೆಯಲ್ಲೆ ಒಂದು ಗೆದರುಗಲ್ಲನ್ನು ಎಡಗೈಯಲ್ಲಿ ಎತ್ತಿಕೊಂಡು ರಕ್ತ ಮೆತ್ತಿದ್ದ ಪಾದಗಳನ್ನು ಕೆರೆಯಲು ಪ್ರಯತ್ನಿಸಿದರು. ಭರಭರನೆ ಕೆರೆಯುವ ಬರಕ್ಕೆ ಆ ಗೆದರುಗಲ್ಲು ಅಲ್ಲಾಡುತ್ತಿದ್ದ ಕಾಲಿನ ಉಗುರಿಗೆ ತಾಕಿ, ಕಿರುಬೆರಳಿಗೆ ಗೀರಿಕೊಂಡಿತು. ಅಲ್ಲಾಡುತ್ತಿದ್ದ ಉಗುರು ಕಿತ್ತು ಬಂದಿತ್ತು. ಆದರೆ ಅದು ಬಿದ್ದು ಹೋಗಿರಲಿಲ್ಲ! ನೋವಿನಿಂದ ಐನೋರಿಗೆ ಜೀವವೇ ಹೋದಂತಾಗುತ್ತಿತ್ತು. ಮೆತ್ತಗೆ ಎದ್ದ ಉಗುರನ್ನು ಕೀಳಲು ಯತ್ನಿಸಿದರು. ಅದು ಅಳ್ಳಾಡುತ್ತಿತ್ತೇ ವಿನಃ ಕಿತ್ತರೂ ಬರುತ್ತಿರಲಿಲ್ಲ. ಅಲ್ಲಿಂದಲೂ ಮತ್ತೆ ರಕ್ತ ಹನುಕಿತು. ಐನೋರಿಗೆ ಇದು ಹಂದಿಮರಿಯ ರಕ್ತದ ಕಲೆಯೋ? ಉಗುರಿನ ರಕ್ತದ ಕಲೆಯೋ? ತಿಳಿಯದೆ ಗೊಂದಲಕ್ಕೆ ಬಿದ್ದರು. ಹಂದಿ ರಕ್ತದ ಕಲೆಯನ್ನು ಕೆರೆಯಲು ತಂದ ಕಲ್ಲು ನನ್ನ ಉಗುರನ್ನು ಅಳ್ಳಾಡಿಸಿ ಹಿಂಸಿಸುತ್ತಿದೆಯಲ್ಲಾ ಎಂದು ರೋಷದಿಂದ ಎಡಗೈಯಲ್ಲಿದ್ದ ಕಲ್ಲನ್ನು ಬೀಸಿ ಎಸೆದರು. ಅದು ದೂರವೇನೂ ಹೋಗದೆ, ಅವರು ಸಾಕಿದ ಮನೆಯ ನಾಯಿಯ ಮೇಲೆ ರಪ್ಪಂಥ ಬಿದ್ದಿತು. ಅದು.. ‘ಕಯ್ ಕಯ್..’ ಎಂದು ವಿಕಾರವಾಗಿ ನೋವಿನಿಂದ ಬೊಗಳಿತು. ಅದರ ಜೊತೆಗೆ ಹಿಮ್ಮೇಳದಂತೆ ಊರಳ್ಳೊಲಗೇರಿಯ ನಾಯಿಗಳೂ ಘೀಳಿಡುತ್ತಿದ್ದವು. ‘ಅಪಶಕುನ.. ಅಪಶಕುನ..’ ಎಂದು ಐನೋರು ಗೊಣಗುತ್ತಿದ್ದರು. ಅವರ ಪಕ್ಕವೇ ಬಿದ್ದಿದ್ದ ಸಗಣಿ ತೊಪ್ಪೆ ಮೇಲೆ ಎರಡೂ ಕಾಲುಗಳಿಂದ ಪಚಕ್ ಪಚಕ್‌ನೆ ತುಣಿದು ದರಿದ್ರ ಹೋಯಿತು?’ಎಂದು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಲೆ, ಐನೋರು ಮತ್ತೆ ತಮ್ಮ ಧರ್ಮಪತ್ನಿ ಮತ್ತು ಮಗನಿಂದ ಎರಡ್ಮೂರು ಕೊಡ ತಣ್ಣೀರನ್ನು ಮೈಮೇಲೆ ಸುರಿಸಿಕೊಂಡರು. ಇಷ್ಟಾದರೂ ಈ ಹಂದಿ ರಕ್ತದ ಕಲೆಯು ತಾಕಿರುವ ರಕ್ತದ ಕಾಲಿನಲ್ಲಿ ಬಚ್ಚಲು ಮನೆಗೆ ಹೋಗಬಹುದೆ? ಬೇಡವೆ? ಎಂಬಮಡಿಯ ಬಗೆಗಿನ ಜಿಜ್ಞಾಸೆಯಿಂದಲೇ ಮನೆಯ ಹಿಂದಿನ ದನದ ಕೊಟ್ಟಿಗೆ ಕಡೆಯಿಂದ ಬಚ್ಚಲುಮನೆಗೆ ಸ್ನಾನ ಮಾಡಲು ಹೋದರು.

ಹಂದಿಯು ಹನುಮಂತರಾಯನ ದೇವಸ್ಥಾನದ ಒಳಗೆ ನುಗ್ಗಿ ಗದ್ದಿಗೆಯ ಕತ್ತಲೆಯಲ್ಲಿ ಔತುಕೊಂಡಿದ್ದು, ಐನೋರು ಬಿದ್ಹಾರಿದ್ದು, ಕಾಂತರಾಜ ಭರ್ಜಿ ಹಿಡಿದು ಊರ ಬಯಲಲ್ಲಿ ಹಂದಿಯನ್ನು ಓಡಿಸಿಕೊಂಡು ಕಲ್ಲುಕಡದ ಕಡೆ ಓಡಿದ್ದು, ಎಡವಿ ಬಿದ್ದ ಅವನನ್ನು ಹೊತ್ತುಕೊಂಡು ಮನೆಗೆ ಕರೆದುಕೊಂಡು ಹೋದದ್ದು,ಈ ಎಲ್ಲ ವಿಷಯಗಳೂ ಒಂದರೊಳಗೊಂದು ಬೆರೆತು ಕಾಳ್ಗಿಚ್ಚಿನಂತೆ ಊರಳ್ಳೋಳಗೇರಿಯಲ್ಲೆಲ್ಲಾ ಹಬ್ಬಿತು.

ಪಟೇಲರು, ಛೇರ್ಮನ್ನರು, ಮುಖ್ಯಕುಳವಾಡಿ, ಲಿಂಗಾಯತ ಮುಖಂಡರು, ಆಚಾರ‍್ರು, ಶೆಟ್ಟರು, ಮರಿಕುಳವಾಡಿಗಳ ಸಹಿತ ಹನುಮಂತ್ರಾಯನ ದೇವಸ್ಥಾನಕ್ಕೆ ಧಾವಿಸಿ ಬಂದು ಖುದ್ದಾಗಿ ನೋಡಿದರು. ಕಾಂತರಾಜ, ರಾಜೇಗೌಡ, ಮಲ್ಲೇಶಗೌಡ ಅವರ ಮನೆಮಂದಿ ಎಲ್ಲ ಸೇರಿಕೊಂಡು ಊರೊಳ್ಳಿನವರೆಲ್ಲ ಸೇದುವ ಬಾವಿಯಲ್ಲಿ ನೀರು ಸೇದಿ ಸೇದಿ ದೇವಸ್ಥಾನದ ಕಟೆಕಟೆ ಕಲ್ಲುಗಳಲ್ಲಿಗೆ ಹುಯ್ದು ಸಗಣಿ ನೀರ‍್ಹಾಕಿ ಗಂಜಲ ಚಿಮುಕಿಸಿದರು. ದೇವಸ್ಥಾನದ ಒಳಗೆ ನೀರು ಹಾಕಿ ರಕ್ತದ ಕಲೆಯನ್ನು ಕೆರೆದು ತೆಗೆದರು. ಸಗಣಿಯಲ್ಲಿ ಮೂರ‍್ನಾಲ್ಕು ಸಲ ತೊಳೆದು ಸಾರಿಸಿದರು. ಹಂದಿಮರಿ ಔತುಕೊಂಡಿದ್ದ ಗವ್ವುಗತ್ತಲೆ ಗದ್ದುಗೆಗೆ ಅಂಟಿದ ರಕ್ತವು ಸಂಪೂರ್ಣವಾಗಿ ಹೋಗಿದೆಯೇ? ಅಥವಾ ಹಾಗೇ ಉಳಿದಿದೆಯೇ? ಎಂಬ ಅನುಮಾನ ಅವರಲ್ಲಿ ಹಾಗೇ ಉಳಿಯಿತು. ಹುಣಸೆಹಣ್ಣಿನ ನೀರು, ಬೇವಿನಸೊಪ್ಪಿನ ನೀರು, ತುಳಸಿ ನೀರು, ಬಿಲ್ವಪತ್ರೆಯ ನೀರು ಹಾಕಿ ದೇವಸ್ಥಾನವನ್ನು ಸ್ವಚ್ಛಗೊಳಿಸಿದರು.

ಪಂಚಾಯಿತಿಯು ಊರಬಾಗಿಲ ಹಿಂದೆ ಕರೇಗಲ್ಲು ಪಕ್ಕ ಇದ್ದ ಹನುಮಂತರಾಯನ ದೇವಸ್ಥಾನದ ಮುಂದೆ ಪ್ರಾರಂಭವಾಯಿತು. ಪಟೇಲರು, ಛೇರ್ಮನ್ನರು ದೇವಸ್ಥಾನದ ಎತ್ತರದ ಜಗಲಿಯ ಹಾಸುಗಲ್ಲಿನ ಮೇಲೆ ಕುಳಿತರು. ಮುಖ್ಯಕುಳವಾಡಿ ರಾಮಪ್ಪನವರು ಆ ಜಗಲಿಗಳ ಕೆಳಗಡೆಯ ಗುಂಡುಕಲ್ಲ ಮೇಲೆ ಅಂಡೂರಿದ್ದರು. ಮಂಡಿವರೆಗೆ ಅಡ್ಡಪಂಚೆ ಉಟ್ಟಿದ್ದ, ಮರಿಕುಳವಾಡಿಗಳು ಕೋಲೂರಿಕೊಂಡು ನಿಂತಿದ್ದರು. ಲಿಂಗಾಯಿತ ಕೇರಿಯ ಸಾಮಾನ್ಯರು ನಿಂತುಕೊಂಡೇ ಪಂಚಾಯಿತಿ ಮಾತುಗಳನ್ನು ಆಲಿಸುತ್ತಿದ್ದರು. ಊರಿನಲ್ಲಿ ಯಾರಿಗೂ ಮುಖ ಇರಲಿಲ್ಲ! ಎಲ್ಲರ ಮುಖದಲ್ಲೂ ಪ್ರೇತಕಳೆ ಎದ್ದು ಕಾಣುತ್ತಿತ್ತು. ಯಾವ ಬಾಯಲ್ಲಿ ಮಾತಾಡುವುದು? ಅದೂ ಐನೋರಿಗೆ ಹೀಗಾಗಿದೆ ಅಂತ ಹೇಗೆ ಹೇಳುವುದು? ಹೇಳಿದರೆ ಐನೋರಿಗೆ ಅವಮಾನ ಎಂದು ಎಲ್ಲರೂ ಹಿಂಜರಿದರು. ಮೊದಲೇ ನಮ್ಮನ್ನು ಕಂಡರಾಗದ ಆ ಮರ‍್ನಳ್ಳಿಯವರಿಗೆ ವಿಷಯ ಗೊತ್ತಾದರೆ ಆಡಿಕೊಳ್ಳುತ್ತಾರೆಂದು ಹೆದರಿದ್ದರು.

ಪಟೇಲರು ‘ಇಬ್ರರ‍್ದು ತಪ್ಪೆಂದು’ ಎಂದರು. ಛೇರ್ಮನ್ನರು ‘ಏನೋ.. ದೊಡ್ಡಬೋರ, ನೀನೇನೆಳ್ತೀಯ’ ಎಂದು ಕೇಳಿದರು.

ದೊಡ್ಡಬೋರ ಮತ್ತು ಅವನ ಹೆಂಡತಿ ಪಂಚಾಯತಿಯವರ ಮುಂದೆ ಶಿರಬಾಗಿ, ಮುಖಂಡರಿಗೆಲ್ಲ ಕೈಮುಗಿದು ‘ಬುದ್ಧಿ.. ನಾವು ಬಡುವ್ರು.. ಯಂಗೊ ಅಪ್ಪಂತೋರು ಮನೇಲಿ ಸಾಲಸೋಲ ಮಾಡಿ ದೊಡ್ಹಬ್ಕೆ ಅಂತ ಸಾಕಿದ್ವಿ.. ಅದ್ಕೂ ಕಲ್ ಬಿದ್ದಂತೆ.. ಈಗ ನಾವು ಏನ್ ಮಾಡನ ಸ್ವಾಮಿ.. ತರ‍್ಕಂದು ತಿನ್ನರು... ಅದು ದೇವ್ರಿಗೆ ಬುಟ್ಟ ಮರಿ..’

ಈ ಹಂದಿಮರಿಯನ್ನು ದೊಡ್ಡಬೋರನಿಗೆ ಸಾಕಲು ಕೊಡಿಸಿದ್ದ ರುದ್ರೇಶನು, ಕಾಂತರಾಜನ ಚಿಕ್ಕಪ್ಪನ ಮಗನಾಗಿದ್ದರೂ ಒಬ್ಬರ ನೆರಳನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಹೀಗಾಗಿ ರುದ್ರೇಶ ‘ದಂಡ ಕೊಡಲು ಯಾವ ಕಾರಣಕ್ಕೂ ಒಪ್ಗಾಬೇಡ.. ಅವ್ನು ಬೇಕಂತ್ಲೆ ಮಾಡಿದ್ದಾನೆ’ ಅಂತ ಹೇಳಿಕಳುಹಿಸಿದ್ದ.
ಕಾಂತರಾಜನ ಅಣ್ಣ ರಾಜೇಗೌಡ ‘ಇಬ್ಬರ‍್ದೂ ತಪ್ಪೆಂದು’ ಅಂದ.

‘ನಾನೆಲ್ಲಿಂದ ತಂದ್ಕಟ್ಲಿ.. ಹಂದಿ ಕಳ್ಕಂದಿರದಲ್ದೆಯಾ..! ಅದು ದೇವ್ರಿಗೆ ಬುಟ್ಟ ಮರಿ.. ಮೂರ‍್ಜಿನ ಅನ್ನ ನೀರು ಬುಟ್ಟು ಹುಡ್ಕೀದೀವಿ. ಅದ್ರ ಸುಳ್ವಿಲ್ಲ’ ಎಂದು ದೊಡ್ಡಬೋರ ಗೋಳಾಡುತ್ತಲೇ ಹೇಳಿದ.

‘ದೇವ್ರು ಮರಿ ಬಂದೇ ಬರ‍್ತೀತೆ ಅನ್ನಿಸ್ತೀತೆ..’ ಅಂತ ಹೊಲಗೇರಿಯ ಚಂಗಯ್ಯರು ಹೇಳಿದರು.

‘ಕಲ್ಕಡ್ದ ಕಡೀಗೆ ಹೋದ್ರೆ ಕಷ್ಟ ಕನ್ರಪ್ಪಾ..! ಆ ಕಲ್ಕಡ್ದ ಕಡೆ ಹೋದ್ರೆ ಗ್ರಾಚಾರ. ಅದು ಬಂದ್ರೂ ಕಷ್ಟ...! ಬರ‍್ದೆ ಇದ್ರೂ ಕಷ್ಟ! ಅದ್ಕೆ ದೆವ್ವಗಿವ್ವ ಹಿಡ್ಕಂಡರ‍್ತದೊ ಏನೊ?’ ಎಂದು ಊರೊಳ್ಳಿನ ಹೊನ್ನಪ್ಪನವರು ಹೇಳಿದರು.

‘ನಂಗೂ ಅಂಗೆ ಅನ್ನುಸ್ತೈತೆ. ಆದ್ರೂವೆ ದೇವ್ರಿಗೆ ಬುಟ್ಟ ಮರಿ ಬ್ಯಾರೆ.. ದೇವುಸ್ಥಾನಕ್ಕೆ ನುಗ್ಗೈತೆ.. ಏನೊ ಗ್ರಾಚರ‍್ವೊ ಏನೊ? ಹನುಮಂತ್ರಾಯ್ನ ದೃಷ್ಟಿ ಊರ‍್ನ ಮೇಲೆ ಬಿದ್ರೆ ಯೆಂಗೆ?’ ಎಂದರು ಛೇರ‍್ಮನ್ನರು.

ಕೊನೆಗೆ ಪಟೇಲರು ಛೇರ‍್ಮನ್ನರು ಮುಖ್ಯ ಕುಳವಾಡಿಗಳು ಏನೋ ಗುಸುಗುಸು ಮಾತಾಡಿಕೊಂಡರು. ಆ ಮಾತುಗಳು ಪಂಚಾಯ್ತಿಯ ಮುಖಂಡರಿಗಾಗಲಿ ಕೆಳಗೆ ಕುಂತಿದ್ದವರಿಗಾಗಲಿ ಕೇಳುತ್ತಿರಲಿಲ್ಲ. ‘ಅದು ದೇವರಮರಿ ತಪ್ಪಿಸಿಕೊಂಡು ಹೋಗಿದೆ. ಊರಿಗೆ ಏನಾದ್ರು ಕೆಡುಕು ಆಗಬಹುದೆ?’ ಎಂದು ಪಿಸುಪಿಸನೆ ಮಾತಾಡಿಕೊಂಡರು.

ಅಲ್ಲೇ ಮೌನವಾಗಿ ನಿಂತಿದ್ದ ಕಾಂತರಾಜ, ಹಂದಿಯನ್ನು ಇರಿದಿದ್ದ ಭರ್ಜಿಯ ರಕ್ತದ ಕಲೆ, ಹನುಮಂತ್ರಾಯನ ದೇವಸ್ಥಾನದ ಒಳಗೆ ಹಂದಿ ಓಡಿಹೋಗಿದ್ದು, ಅದು ಹನುಮಂತ್ರಾಯನ ಗದ್ದಿಗೆ ಹಿಂದೆ ಅವಿತುಕೊಂಡಿದ್ದು, ದೇವಸ್ಥಾನದ ಕಲ್ಲುಕಂಬಕ್ಕೆ ಬಡಿದು ರಕ್ತ ಚಿಲ್ಲನೆ ಹಾರಿದ್ದು, ಎಲ್ಲವನ್ನು ನೆನಪಿಸಿಕೊಂಡ. ‘ಹಂದಿಮರಿ ಹನುಮಂತ್ರಾಯ್ನ ದೇವಸ್ಥಾನದ ಒಳಗೆ ಹೋಗಿದ್ದ ಆ ಕರ್ಮಕ್ಕೆ ನಂಗೇನಾದ್ರೂ ಆದ್ರೆ?’ ಎಂದು ಭಯಭೀತನಾಗಿ: ‘ಐನಾರು, ಪಂಚಾತೇರು ಒಪ್ಪಿದ್ರೆ ಪುರ‍್ದಚಾರ್ ಹತ್ರ ಯಂತ್ರ ಮಾಡ್ಸಿ, ತಡೆ ಹೊಡ್ಸಿ ಶುದ್ಧ ಮಾಡ್ಸ ಖರ್ಚನ್ನು ನಾನೇ ನೋಡ್ಕತ್ತೀನಿ... ಆ ದೊಡ್ಬೋರನಿಗೂ ಒಂದು ಹಂದಿಮರಿ ಕೊಡುಸ್ತೀನಿ’ ಎಂದು ಪಂಚಾಯ್ತಿಯವರ ಮುಂದೆ ಕೈಮುಗಿದು ಕೇಳಿಕೊಂಡ.

ಪಟೇಲರು, ಛೇರ‍್ಮನ್ನರು, ಮುಖ್ಯಕುಳುವಾಡಿಗಳ ಆಹ್ವಾನದ ಮೇರೆಗೆ ಐನೋರು ಪಂಚಾಯ್ತಿ ಕಡೆ ಬಂದರು. ಎಲ್ಲರೂ ಎದ್ದು ನಿಂತು ಐನೋರನ್ನು ಗೌರವಿಸಿದರು. ಕೆಲವರು ತಲೆ ಮೇಲೆ ಪೇಟವನ್ನು ತೆಗೆದು ಗೌರವಿಸಿದರು. ಹೊಲ್ಗೇರಿಯ ಮಾಟಯ್ಯನವರು ಐನೋರು ಬರುವ ದಾರಿಗೆ ನೆಲಕ್ಕೆ ನೆಲಮಡಿ ಹಾಕಿ ನಮಿಸಿದರು. ಐನೋರು ಮಾತ್ರ ಮುಖ ಶಿಂಡರಿಸಿಕೊಂಡೇ, ಉಗುರು ಕಿತ್ತ ಕಾಲನ್ನು ಎಳೆದುಕೊಂಡೇ ಪಂಚಾಯ್ತಿಗೆ ಬಂದು:

‘ಏನೋ ನಿನ್ನೆಸ್ರು.. ಕಾಂತ ಅಂತ್ಲೆ.. ನೀನು ಚಂದ್ರೇಗೌಡ್ನ ಕಿರಿ ಮಗ್ನಲ್ಲವೆ...? ಛೇ.. ಛೇ.. ನಿಮ್ತಂದೆ ನಮ್ಮನ್ನು ಕಂಡರೆ ತಲೆಮೇಲಿನ ಪೇಟ ತೆಗೆದು ಗೌರವಿಸುತ್ತಿದ್ದರು. ಏನಯ್ಯ.. ಏನಯ್ಯಾ.. ನಿನ್ನದು ಶುದ್ಧ ಅವಿವೇಕ..’ ಎಂದರು. ‘ಊರಿನಲ್ಲಿ ಹೀಗೆ ಅಂಕೆ ಇಲ್ಲದಿದ್ದರೆ ಹೇಗೆ? ಸರಿಯಾಗಿ ಬಿಕ್ಕಟ್ಟು ಮಾಡದಿದ್ದರೆ ಪೂಜೆ ನಡೆಸುವುದು ಹೇಗೆ?’ ಎಂದು ಏರಿದ ಧ್ವನಿಯಲ್ಲಿ ಹೇಳಿದರು.

ಪಟೇಲರು ವಿನಯದಿಂದಲೇ ‘ಆತು ಸ್ವಾಮಿ.. ದಯ್ಮಾಡಿ ಚಮಿಸ್ಬೇಕು.. ಬೇಕಾದ್ರೆ ಭಿನ್ನ ಮಾಡ್ಸನ.. ಕಚಿಲಿನ್ ಮಾಡ್ಸನ..’ ಎಂದು ಸಣ್ಣದನಿಯಲ್ಲೇ ಹೇಳಿ ತಮ್ಮ ಮಾತಿನ ತುದಿಗೆ ‘ಈ ಹೊಲ್ಗೇರರ ಹೊಲ್ಸು ಹಂದಿಕಾಟ ಜಾಸ್ತಿ ಆಯ್ತು’ ಎಂದರು.

ತಿಪ್ಪೆಕಡೆ ಕೋಲೂರಿಕೊಂಡು ಹೋಗುತ್ತಿದ್ದ ಮರಿಕೊಂತಮ್ಮನ ಕಿವಿಗೆ ಈ ಮಾತುಗಳು ತಾಕಿದವು. ‘ಓಹೋ.. ಚಿಲೀನು ಮಾಡ್ತಾನೆ.. ಚಿಲೀನು..ಹೊಲ್ಗೇರ‍್ದ ನೆಕ್ಕಾಕೆ ಮಾತ್ರ ಆಯ್ತೀತೆ.. ಊರೊಳಗೆ ಏಟ್‌ಜನ್ರನ ಚಿಲೀನ್ ಮಾಡಿಸ್ತೀರಪ್ಪ! ಹೊಲ್ಸಂತೆ ಹೊಲ್ಸು.. ಥೂ ಇವ್ನ ಮಕುಕ್ಕೆ. ನಾನು ಕಾಣುದ್ದು ಮಡಿನಾ? ನೋಡಿಲ್ವಾ ಇವರ‍್ದೆಲ್ಲಾ!’ ಎಂದು ಮುಖ ಸಿಂಡ್ರಿಸಿಕೊಂಡು ಎಲೆಅಡಕೆ ಬಾಯಿಂದ ಉಗಿದು, ಒಮ್ಮೆ ದೊಡ್ಡಬೋರನ ಹೆಂಡತಿ ಕಡೆ, ಮತ್ತೊಮ್ಮೆ ಅಲ್ಲೇ ಮನೆಮುಂದೆ ಇಣುಕಿ ನೋಡುತ್ತ ನಿಂತಿದ್ದ ಐನೋರ ಹೆಂಡತಿ ಶಾರದಮ್ಮನ ಕಡೆ ಕೆಕ್ಕರಿಸಿ ನೋಡುತ್ತಾ ಹೋದಳು. ಈಗ್ಗೆ ನಾಲ್ಕೈದು ವರ್ಷಗಳ ಕೆಳಗೆ ಇದೇ ಕಲ್ಲುಕಡದಲ್ಲಿ ಮೈಯೆಲ್ಲ ರಕ್ತಮಯವಾಗಿ ತೇಲುತ್ತಿದ್ದ ಹೊಲಗೇರಿಯ ಮಿಜರಟಿಗೆ ಬಂದಿದ್ದ ಬೀರಯ್ಯನ ಮಗಳು ನಂಜಿಯ ಹೆಣ ಅವಳ ಕಣ್ಣಮುಂದೆ ಬಂದು ನಿಂತಿತ್ತು. ಮರಿಕೊಂತಮ್ಮನ ಮಾತಿಗೆ ಪಟೇಲರು ತಾವು ಹೊದ್ದಿದ್ದ ದುಪ್ಟಿಯಿಂದಲೇ ಮುಖ ಮುಚ್ಚಿಕೊಳ್ಳಲು ಯತ್ನಿಸಿದರು. ದೊಡ್ಡಬೋರನ ಹೆಂಡತಿ ತನ್ನ ಸೆರಗು ಸರಿಪಡಿಸಿಕೊಂಡು ಪಟೇಲರತ್ತ ನೋಡಿ ತಲೆತಗ್ಗಿಸಿದಳು. ಈ ಕಡೆ ಗರಬಡಿದವನಂತೆ ನಿಂತಿದ್ದ ಕಾಂತರಾಜ, ಶಾರದಮ್ಮನವರು ತಲೆಮೇಲೆ ಸೆರಗಾಕಿ ನಿಂತಿದ್ದ ಆ ಮನೆಯ ದಿಕ್ಕನ್ನೇ ನೋಡಿ ತಲೆತಗ್ಗಿಸಿ ನಿಂತ.

‘ಇಲ್ಲ.. ಇಲ್ಲ.. ನೀವು ಆ ದೇವಸ್ಥಾನವನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿ.. ಆ ಪರ‍್ದಚರ‍್ರ ಹತ್ತಿರ ದೇವಸ್ಥಾನಕ್ಕೆ ಏನು ಬೇಕೊ ಅದನ್ನು ಕಡ್ಡಾಯವಾಗಿ ಬಂದೂಬಸ್ತ್ ಮಾಡಿಸಿ.. ತಡೆ ಒಡ್ಸಿ ನಾನು ಹೇಗೆ ಶುದ್ಧವಾಗುವುದು ಎನ್ನುವುದು ನನಗೆ ಗೊತ್ತಿದೆ. ನಮಗೆ ಶುದ್ಧ ಮಾಡುವುದು ನಮ್ಮವರಿಂದಲೇ ಆಗಬೇಕು! ನಮ್ಮ ಕಿತ್ತಾನೆ ಕೌಶಿಕದ ಆದಿಶೇಷಯ್ಯನವರಿಂದಲೇ ನಾನು ಶುದ್ಧ ಮಾಡಿಸಿಕೊಳ್ಳುತ್ತೇನೆ. ಆದರೆ ಅದಕ್ಕೆ ಬೇಕಾದ ದಕ್ಷಿಣೆ ಖರ್ಚುನ್ನು ಮಾತ್ರ ನೀವು ಭರಿಸಬೇಕು’ ಎಂದು ಹೇಳಿದ ಐನೋರು ಯಾರ ಉತ್ತರಕ್ಕೂ ಕಾಯದೆ ಮನೆಕಡೆ ಹೊರಟರು.

ಪುರದಮ್ಮನ ದೇವಸ್ಥಾನದ ಆಚೆಯ ಶ್ರೀರಾಮದೇವರ ಹಳ್ಳದಿಂದ ತೀರ್ಥ ತಂದು ಹನುಮಂತರಾಯನ ಹೊಸ ಮುಖಸಿರಿಗೆ ಚುಮುಕಿಸಿ ಭಿನ್ನ ಮಾಡಿಸಲಾಯಿತು. ಇವೆಲ್ಲವನ್ನೂ ಪಟೇಲರೇ ಮುಂದೆ ನಿಂತು ಶುದ್ದಿ ಮಾಡಿಸಿದರು. ಐನೋರು ಕಿತ್ತಾನೆ ಕೌಶಿಕದ ಆದಿಶೇಷಯ್ಯನವರಿಂದ ಶುದ್ಧ ಮಾಡಿಸಿಕೊಂಡು ಬಂದು ಪೂಜೆ ಪುನಸ್ಕಾರ ಪ್ರಾರಂಭಿಸಿದರು.

ಅಲ್ಲಿಗೆ ಎಲ್ಲವೂ ‘ಶುದ್ದಿಯಾಯಿತು’..!

ಪ್ರೊ.ಎಂ.ಎಸ್‌.ಶೇಖರ್

ಮೈಸೂರು ವಿಶ್ವವಿದ್ಯಾನಿಲಯದ ಹಾಸನ ಸ್ನಾತಕೋತ್ತರ ಕೇಂದ್ರ, ಹೇಮಗಂಗೋತ್ರಿಯಲ್ಲಿ ಕನ್ನಡ ಹಿರಿಯ ಪ್ರಾಧ್ಯಾಪಕರು. ಹಾಸನ ಜಿಲ್ಲೆಯ ಮಲ್ಲಿಗೆವಾಳು ಗ್ರಾಮದವರು. ಗರಿಕೆ, ಚಿತ್ತಾರ ಜೋಳಿಗೆ ಸೇರಿದಂತೆ ಹಲವು ಕವನ ಸಂಕಲನಗಳು ಪ್ರಕಟಗೊಂಡಿವೆ. ಪ್ರವಾಸ ಕಥನ, ಜೀವನ ಚರಿತ್ರೆ, ಕಾದಂಬರಿಗಳನ್ನು ರಚಿಸಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪುಸ್ತಕ ಪ್ರಶಸ್ತಿ, ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಲಭಿಸಿವೆ.