ADVERTISEMENT

ಪ್ರಜಾವಾಣಿ ಕಥಾ ಸ್ಪರ್ಧೆ | ಮೆಚ್ಚುಗೆ ಪಡೆದ ಕಥೆ: ಕೈ ಹಿಡಿದು ನಡೆಸೆನ್ನ ತಂದೆ ...

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 0:03 IST
Last Updated 23 ನವೆಂಬರ್ 2025, 0:03 IST
<div class="paragraphs"><p>ಕಥೆ</p></div>

ಕಥೆ

   

ಮಗ ಕೇಳಿದ ಒಂದು ಪ್ರಶ್ನೆ ಮೂರು ದಿನಗಳಿಂದ ನನ್ನ ಅತೀವ ತೊಳಲಾಟಕ್ಕೆ ಕಾರಣವಾಗಿತ್ತು. ಮಗ ಕೇಳಿದ್ದು ಒಂದು ಸರಳವಾದ ಪ್ರಶ್ನೆ. “ತಾತ ಏನು ಮಾಡ್ತಾ ಇದ್ರು ಪಪ್ಪಾ” ಅಂತ. ತಕ್ಷಣ ಏನೋ ಒಂದು ಉತ್ತರ ಕೊಟ್ಟರೂ ಅಲ್ಲಿಂದ ಮುಂದೆ ನನ್ನ ಅಂತರಂಗದ ಚಡಪಡಿಕೆಗಳು ಏರುಗತಿಯಲ್ಲಿ ಸಾಗತೊಡಗಿದವು. ಮಗನಿಗೆ ಹೇಗೆಂದು ಕಟ್ಟಿ ಕೊಡಲಿ ಅಪ್ಪನನ್ನು ? ಇಲ್ಲಿಯವರೆಗೂ ಅಗಾಗ್ಗೆ ಕಾಡುತ್ತಿದ್ದ ಅಪ್ಪನ ’ಪೂರ್ಣ ಪರಿಚಯ’ ನನಗಿದೆಯೆ ? ಎಂಬ ಇದುವರೆಗೂ ಉತ್ತರ ಸಿಗದ ಪ್ರಶ್ನೆಗೆ ನೇರ ಮುಖಾಮುಖಿಯಾದೆ.

ಆರೋಗ್ಯವಾಗಿಯೇ ಇದ್ದ ಅಪ್ಪ ರಾತ್ರಿ ಸಣ್ಣ ಎದೆ ನೋವೆಂದು ಮಲಗಿ ಮೇಲೇಳದೇ ಹೋದಾಗ ನನಗೆ 30 ವರ್ಷ. ಅಲ್ಲಿಯವರೆವಿಗೂ ಅಪ್ಪನ ಇರುವಿಕೆಯಾಗಲೀ, ಪ್ರಾಮುಖ್ಯತೆಯಾಗಲೀ ನನ್ನ ಅರಿವಿಗೆ ಬಾರದೇ ಹೋದುದರ ಬಗ್ಗೆ ನನಗಿನ್ನೂ ಅಚ್ಚರಿಯಿದೆ. ಒಂದು ರೀತಿಯ ನೆಲ ಕುಸಿದ ಅನುಭವವಾಗಿತ್ತು. ಅಪ್ಪನ ವೈದಿಕ ಕ್ರಿಯೆಗಳು ಅಮ್ಮನ ನಿರ್ದೇಶನದಲ್ಲಿ ಕನಸಿನಂತೆ ನಡೆದುಹೋಗಿತ್ತು.

ಅಪ್ಪ ಬಳಸುತ್ತಿದ್ದ ಕಬ್ಬಿಣದ ಅಲ್ಮೇರವನ್ನು ತೆಗೆಯುವಾಗ ನನಗೆ ಕುತೂಹಲವೂ ಇತ್ತು. ಅಧೀರತೆಯೂ ಇತ್ತು. ಅಲ್ಲಿ ಪ್ರಮುಖವಾಗಿ ಸಿಕ್ಕಿದ್ದು ಕೇವಲ ಮೂರು ವಸ್ತುಗಳು. ಅಪ್ಪನ ಜೀವದ ಒಂದು ಭಾಗವಾಗಿದ್ದ ಕುಮಾರವ್ಯಾಸನ ಗದುಗಿನ ಭಾರತ ಗ್ರಂಥ, ಅಪ್ಪ ಹಾಗೂ ಚಿಕ್ಕಪ್ಪ ವಿದ್ಯಾರ್ಥಿಗಳಾಗಿ ಮತ್ತು ತಾತ ಮಾಸ್ತರಾಗಿ ಕುಳಿತಿರುವ – 1923 ರಲ್ಲಿ ಶಾಲೆಯೊಂದರಲ್ಲಿ ತೆಗೆದ ಗ್ರೂಪ್ ಫೋಟೊ ಹಾಗೂ ಲೇಖಕ್ ನೋಟ್ ಪುಸ್ತಕದಲ್ಲಿ ಅಪ್ಪನ ಕೈ ಬರಹದಲ್ಲಿದ್ದ ಮರಣ ಶಾಸನ.

ಈಗಲೂ ನೆನಪಿದೆ. ಅಪ್ಪನ ಮರಣ ಶಾಸನದ ಪುಸ್ತಕದ ಪುಟಗಳನ್ನು ತೆರೆಯುವುದಕ್ಕೇ ನನಗೆ ಸುಮಾರು ದಿನಗಳು ಬೇಕಾದವು. ತೆರೆಯಲು ಹೋದರೆ ಕೈ ನಡುಗುತ್ತಿತ್ತು. ಪುಸ್ತಕದ ಮುಖಪುಟದಲ್ಲಿ ‘ನನ್ನ ಮರಣಶಾಸನ, ನನ್ನ ಮರಣದ ನಂತರ ಓದಬೇಕು ಎಂದು ಬರೆದಿದ್ದ. ಎಂಥ ಆತ್ಮವಿಶ್ವಾಸದ ಬರಹ ! ಆದನ್ನು ಬರೆಯುವಾಗ ಅಪ್ಪನಿಗೆ ತನ್ನ ಮರಣದ ಬಗ್ಗೆ ಒಂದು ಸಣ್ಣ ಆತಂಕವೂ, ಭಯವೂ ಕಾಡಿಲ್ಲವೆಂದು ಬರಹವನ್ನು ನೋಡಿದರೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಬರೆದ ದಿನಾಂಕ ಕೂಡ ಇತ್ತು. ಅಪ್ಪ ಸಾಯುವ ಸುಮಾರು ಎರಡು ವರ್ಷದ ಹಿಂದೆ ಬರೆದದ್ದು. ಮೊದಲ ಕೆಲವು ಸಾಲುಗಳು ಅಪ್ಪ ಹುಟ್ಟಿದ್ದು, ಬೆಳೆದಿದ್ದು ಮಾಸ್ತರ ನೌಕರಿ ಹಿಡಿದಿದ್ದರ ಬಗ್ಗೆ ಇತ್ತು. ನಂತರ ಪುಟ್ಟ ಮನೆಯೊಂದನ್ನು ಕಟ್ಟಿದ್ದು, ಮತ್ತೆ ಆ ಮನೆ ತನ್ನ ಮರಣಾನಂತರ ಮಗನಿಗೆ ಸೇರಬೇಕೆಂದು ಉಲ್ಲೇಖಿಸಿದ್ದ. ನಂತರ ನನ್ನ ಬಗ್ಗೆ ನಾಲ್ಕೈದು ಪುಟಗಳ ಬರಹ !. ಅಪ್ಪ ನನ್ನ ಮೇಲಿಟ್ಟಿದ್ದ ದೈತ್ಯ ಪ್ರೀತಿ ಅಪ್ಪನ ಕೈ ಬರಹದಲ್ಲಿ ಕಾವ್ಯಮಯವಾಗಿ ಮೂಡಿತ್ತು. ಇಡೀ ಮರಣಶಾಸನದಲ್ಲಿ ನೂರು ಬಾರಿಯಾದರೂ ನನ್ನ ಹೆಸರನ್ನು ನಮೂದಿಸಿದ್ದ ಅಪ್ಪ! ಪ್ರಥಮ ಬಾರಿಗೆ ನಾನಂದು ಅಪ್ಪನ ಮುಖಾಮುಖಿಯಾದೆ. ಆ ಕ್ಷಣದಿಂದ ವಿಚಿತ್ರವಾದ ಖಿನ್ನತೆಯೊಂದು ನನ್ನ ಬೆನ್ನು ಹತ್ತಿತು. ಮರಣಾನಂತರದ ಅಪ್ಪನ ಈ ಭೇಟಿಗೆ ಏನೆಂದು ಹೆಸರು ಕೊಡಲಿ ?

ADVERTISEMENT

ನಾನು ಕಾಲೇಜಿಗೆ ಸೇರುವಷ್ಟರಲ್ಲಿ ಅಪ್ಪನ ಹೆಜ್ಜೆಗಳಿಂದ ಕವಲಾಗಿ, ಅಪ್ಪನ ಬೆಚ್ಚಗಿನ ಕೈ ಆಸರೆಯನ್ನು ಬಿಡಿಸಿಕೊಂಡು ಕಾಣದ ಕೈಗಳನ್ನರಸಿ ಕತ್ತಲಲ್ಲಿ ಓಡತೊಡಗಿದ್ದೆ. ಆಗಲೂ ಅಪ್ಪ ನಿರ್ವಿಕಾರ-ನಿರ್ವಿಚಿತ್ತ. ‘ನಿನ್ನ ಬದುಕು ನಿನ್ನದು ನಾನದನ್ನು ನೋಡುತ್ತ ಇರುವೆ’ ಎಂದು ನನ್ನಿಂದ ದೂರ ನಿಂತು ನಕ್ಕಿರಬೇಕು. ಅಪ್ಪ ಎಂದೂ ಮಕ್ಕಳ ಮೇಲೆ ಒಡೆತನವನ್ನಾಗಲೀ, ಪ್ರಭುತ್ವವನ್ನಾಗಲೀ ಮೆರೆದವನಲ್ಲ. ಅಪ್ಪ ಕೊಟ್ಟ ಈ ಅನಪೇಕ್ಷಿತ ಸ್ವಾತಂತ್ರಕ್ಕೆ ನಾನು ಈಗಾಗಲೇ ಬಹು ದೊಡ್ಡ ಬೆಲೆಯನ್ನೇ ತೆತ್ತಿದ್ದೇನೆ.

ಅಪ್ಪನ ಮಾತುಗಳು ಬಹಳ ಕಡಿಮೆ. ನನ್ನ ಹಲವಾರು ವ್ಯಂಗೋಕ್ತಿಗಳಿಗೆ ಅಪ್ಪನ ಮುಗುಳುನಗೆ ಮಾತ್ರ ಉತ್ತರವಾಗಿತ್ತು. ಅಪ್ಪ ಸತ್ತ ಮೇಲೆ ಬಹಳ ಸಲ ಅಂದುಕೊಂಡಿದ್ದೇನೆ. ಉತ್ಖನನ ಕ್ರಿಯೆಯನ್ನು ನಾನೇ ಪ್ರಾರಂಭಿಸಬೇಕಿತ್ತೆಂದು. ದಿನಕ್ಕೊಂದು ಗಂಟೆಯಾದರೂ ಅಪ್ಪನೊಡನೆ ಕಳೆಯಬೇಕಿತ್ತು. ಮರಣಶಾಸನದಲ್ಲಿ ಅಪ್ಪ ನನಗಾಗಿ ಬರೆದ ಮನೆಯ ಬದಲು ಅಪ್ಪನ ಇಡೀ ಬೌದ್ಧಿಕ ಆಸ್ತಿ ವರ್ಗಾವಣೆ ಮಾಡಿಕೊಳ್ಳಬೇಕಿತ್ತು. ತಲೆ-ತಲೆಮಾರುಗಳಲ್ಲಿರುವ ತತ್ವಗಳೂ , ಸತ್ವಗಳೂ, ಸಿದ್ಧಾಂತಗಳೂ ಇಡಿ ಇಡಿಯಾಗಿ ಮುಂದಿನ ಪೀಳಿಗೆಗೆ ವರ್ಗಾವಣೆ ಮಾಡಬಲ್ಲ ತತ್ರಾಂಶಗಳನ್ನು ಯಾವ ಪುಣ್ಯಾತ್ಮನಾದರೂ ಕಂಡುಹಿಡಿಯಬಾರದೆ ?

“ಶ್ರೀ ವನಿತೆಯರಸನೆ ......” ಎಂದು ಗದುಗಿನ ಭಾರತವನ್ನು ಹಾಡುತ್ತ ಅಪ್ಪ ಧ್ಯಾನಸ್ಥನಾಗಿ ಕುಳಿತನೆಂದರೆ ಮುಗಿಯಿತು. ಅಪ್ಪ ಆಗ ಒಬ್ಬ ತಪಸ್ವಿ. ಅಯಾಚಿತವಾಗಿ ಒಮ್ಮೊಮ್ಮೆ ಕಿವಿಗೆ ಬೀಳುತ್ತಿತ್ತು. ಗೆಳೆಯರೊಂದಿಗೆ ಆ ಕಾವ್ಯದ ಸೊಬಗನ್ನು ಇತರ ಮಹಭಾರತ ಗ್ರಂಥಗಳಿಗೆ ಹೊಲಿಕೆ ಮಾಡಿ ಗದುಗಿನ ಭಾರತದ ಕಾವ್ಯದ ಅದ್ಭುತ ಆಯಕಟ್ಟುಗಳನ್ನು ಲೀಲಾಜಾಲವಾಗಿ ಬಿಚ್ಚಿಡಬಲ್ಲ ಕಾವ್ಯಜ್ಞಾನಿ ! ಈಗ ಅನಿಸುತ್ತಿದೆ. ಅಪ್ಪನ ಮುಂದೆ ನೆಲದ ಮೇಲೆ ಕುಳಿತು ಗದುಗಿನ ಭಾರತವನ್ನು ಮೃಷ್ಟಾನ್ನದಂತೆ ಸವಿಯಬೇಕಿತ್ತೆಂದು. ತಲೆಮಾರಿನ ಅಂತರದಿಂದಲೋ, ಅಹಂನಿಂದಲೋ, ಕಳೆದುಕೊಂಡ ನವಿರಾದ ಕ್ಷಣಗಳ ಬಗ್ಗೆ ಉಂಟಾದ ವಿಷಾದ ಇನ್ನು ಮುಂದೆ ನನ್ನ ಇಡೀ ಜೀವನದ ಸಂಗಾತಿಯಷ್ಟೆ.

ಅಪ್ಪನ ಬದುಕಿನ ತತ್ವ ಇಷ್ಟೆ: ‘ಜೇಬಿನಲ್ಲಿರುವ ಹಣಕ್ಕೂ ನಿಮ್ಮ ತೃಪ್ತಿಗೂ ಯಾವುದೇ ಸಂಬಂಧ ಇರಬಾರದು. ಹಣದ ಕೊರತೆ ನಿಮ್ಮ ಖುಷಿಯನ್ನು ಕಸಿಯಲು ಅವಕಾಶ ನೀಡಬೇಡಿ’.
“ವಾಸ್ತವವೇ ಬೇರೆ ಅಪ್ಪ. ಜೇಬು ಬರಿದಾದಾಗ ನೆಮ್ಮದಿಯ ಬದುಕು ಸಾಧ್ಯವೆ ?’’ ಎಂದು ಕುಟುಕಿದ್ದೆ. ಅಪ್ಪ ದಾರ್ಶನಿಕ ನಗೆ ನಕ್ಕಿದ್ದ. ಬರುತ್ತಿದ್ದ 13 ರೂಪಾಯಿ ಸಂಬಳದಲ್ಲಿ ತಾನೂ ನಗುತ್ತಿದ್ದು ಎಲ್ಲರನ್ನೂ ನಗಿಸುತ್ತಿದ್ದ ಅಪ್ಪನ ಬದುಕು ನನ್ನ ಪ್ರಶ್ನೆಗೆ ಉತ್ತರವಾಗಿ-ಉದಾಹರಣೆಯಾಗಿ ನನ್ನ ಮುಂದೆಯೇ ಬಿದ್ದಿತ್ತು. ಯಾವ ಮಂಜು ಕವಿದಿತ್ತು ನನ್ನ ಕಣ್ಣಿಗೆ ? ಅಪ್ಪನ ತೃಪ್ತಿಯ ಸಿದ್ದಾಂತವನ್ನು ಇಂದು ಎಲ್ಲರಿಗೂ ಕೂಗಿ ಹೇಳುವಾಸೆ.

ಅಪ್ಪನ ಬಹಳಷ್ಟು ಗೆಳೆಯರು ಮನೆಗೆ ಬರುತ್ತಿದ್ದರು. ಸುಮಾರು ಗೆಳೆಯರದ್ದು ಒಂದೇ ವರಾತ.- “ನಮ್ಮ ಗ್ರಹಗತಿಯನ್ನು ನೋಡಪ್ಪ ಸ್ವಲ್ಪ ಯಾಕೋ ಯಾವುದೂ ಸರಿ ಇಲ್ಲ.” ಅಪ್ಪ ಅವರ ಹುಟ್ಟಿದ ದಿನವನ್ನು ಪಡೆದು ಕೂಡಿ ಕಳೆದು ಗುಣಾಕಾರಗಳನ್ನು ಮಾಡಿ ಸರಿ ಸುಮಾರು ಎಲ್ಲರಿಗೂ ಹೇಳುತ್ತಿದ್ದ ಮಾತುಗಳು –“ ಇನ್ನೆರೆಡು ತಿಂಗಳಷ್ಟೆ. ಎಲ್ಲವೂ ನೆಟ್ಟಗಾಗಲಿವೆ. ಅಲ್ಲಿಂದ ಮುಂದೆ ನೀನೇ ರಾಜ, ನೆಮ್ಮದಿಯಾಗಿ ಕಾಫಿ ಕುಡಿ” ಗೆಳೆಯರ ಕಣ್ಣಲ್ಲಿ ಮಿಂಚು. ಗೆದ್ದೆವು ಎಂಬ ಭಾವ. ನಿರಾಳವಾಗಿ ಮನೆಯಿಂದ ಹೆಜ್ಜೆ ಹಾಕುತ್ತಿದ್ದರು.

“ ಗ್ರಹಗತಿಗಳೂ, ಗ್ರಹಚಾರಗಳೂ ನಿಜವೇ ?” ಪರೋಕ್ಷವಾಗಿ ನೀನು ಹೇಳಿದ್ದು ಸುಳ್ಳು ಎಂದು ಅಪ್ಪನನ್ನು ಚುಚ್ಚುತ್ತಿದ್ದೆ. ಆಗಲೂ ಅಪ್ಪನದು ಸಂತ ನಗೆ. ಅಪ್ಪನೊಳಗಡಗಿದ್ದ ಒಬ್ಬ ಮನೋವಿಜ್ಞಾನಿಯನ್ನು ನಾನಂದು ಕಾಣದೇ ಹೋದೆ. ಯಾವ ನಂಬಿಕೆಗಳೇ ಇರಲಿ, ಅದರಲ್ಲಿ ಒಂದೇ ಒಂದು ಸಂತೈಸುವ ಗುಣವೊಂದಿದ್ದರೆ ಅದಕ್ಕಿಂತ ದೊಡ್ಡ ವೈದ್ಯ ಬೇಕೇ ? ಈ ಸತ್ಯ ಅರಿಯಲು ನಾನು ಇಷ್ಟು ವರ್ಷ ಸವೆಯಬೇಕಾಯಿತೆ ? ಈ ಸತ್ಯವನ್ನೂ ತತ್ವವನ್ನೂ ಅಕ್ಷರಶಃ ನಂಬಿ ಪೋಷಿಸುತ್ತಿದ್ದ ಅಪ್ಪನ ಬೇರುಗಳಲ್ಲಿ ನಾನೇಕೆ ಚಿಗುರೊಡೆಯಲಿಲ್ಲ? ಗೆಳೆಯರೆಲ್ಲರನ್ನೂ ಗ್ರಹಗತಿಗಳ ಮೂಲಕವೇ ಸಂತೈಸುತ್ತಿದ್ದ ಅಪ್ಪ ಈಗ ನನ್ನೊಡನೆ ಇಲ್ಲ!

ಅಪ್ಪನ ಹಿಂದಿನ ದಿನಗಳ ವಿವರಗಳು ನನಗೆ ಹೆಚ್ಚಿಗೆ ಸಿಕ್ಕಿಲ್ಲ. ಅಪ್ಪನನ್ನು ಹತ್ತಿರದಿಂದ ಬಲ್ಲವರೆಂದರೆ ಅಮ್ಮ ಮತ್ತು ಚಿಕ್ಕಪ್ಪ. ಈಗ ಅವರಿಬ್ಬರೂ ಇಲ್ಲ. ಅಪ್ಪ ಮನೆಯಲ್ಲಿ ಇಲ್ಲದಿದ್ದಾಗ ಅಮ್ಮ ಆಗೊಮ್ಮೆ ಈಗೊಮ್ಮೆ ಅಪ್ಪನ ಪೂರ್ವಾಶ್ರಮದ ಬಗ್ಗೆ ಹೇಳುತ್ತಿದ್ದಳು. ಅಪ್ಪ – ತಾತನನ್ನೂ ಅಜ್ಜಿಯನ್ನೂ ಕಳೆದುಕೊಂಡ ಮೇಲೆ ಅವರ ಸೋದರಮಾವನ ಆಶ್ರಯಕ್ಕೆ ಬಂದರಂತೆ. ಅಲ್ಲಿ ನರಕವನ್ನನುಭವಿಸಿ ತಮ್ಮನನ್ನೂ ಕರೆದುಕೊಂಡು ಉಟ್ಟ ಬಟ್ಟೆಯಲ್ಲೇ ಊರು ಬಿಟ್ಟರಂತೆ. ಐS ಪಾಸು ಮಾಡಿದ್ದ ಅಪ್ಪನಿಗೆ ಈ ಊರಿನಲ್ಲಿಒಂದು ಮಾಸ್ತರಿಕೆ ಹುದ್ದೆ ದೊರೆಯಿತಂತೆ. ಎರಡು ರೂಪಾಯಿ ಸಂಬಳ. ಕೆಲಸ ಖಾಯಂ ಆದಮೇಲೆ ಅಮ್ಮ ಸಂಗಾತಿಯಾಗಿದ್ದಳು. ಅಮ್ಮನ ಕಣ್ಣಲ್ಲಿ ಅಪ್ಪ ಒಬ್ಬ ದೊಡ್ಡ ಸಮಾಜ ಸೇವಕ. ಊರಿಗೆ ಊರೇ ಪ್ಲೇಗು ಮಾರಿ ಆವರಿಸಿಕೊಂಡು ಮನೆ ಮನೆಗಳಲ್ಲಿ ಹೆಣಗಳುದುರುತ್ತಿರುವಾಗ ಅಪ್ಪ ಹಗಲು ರಾತ್ರಿ ಎನ್ನದೆ ಅವರ ಸಹಾಯಕ್ಕೆ ಧಾವಿಸುತ್ತಿದ್ದನಂತೆ. ಒಂದು ಎತ್ತಿನಗಾಡಿಯಲ್ಲಿ ಮೂರು ಹೆಣಗಳನ್ನೇರಿಸಿಕೊಂಡು ರಾತ್ರೋರಾತ್ರಿ ಲಾಟೀನುಗಳ ಸಹಾಯದಿಂದ ದಫನು ಮಾಡುತ್ತಿದ್ದರಂತೆ. ಮಾಡಿ ಊರಿಗೆ ಹಿಂತಿರುಗುಷ್ಟರಲ್ಲಿ ಇನ್ನೊಂದಿಷ್ಟು ಹೆಣಗಳು ! ಎಷ್ಟೋ ರಾತ್ರಿಗಳು ಅಪ್ಪ ಮನೆಗೇ ಬಂದಿಲ್ಲ. ಅಪ್ಪನಲ್ಲಿ ಆ ದಿನಗಳಲ್ಲಿ ಸುಸ್ತಾಗಲೀ ಭಯವಾಗಲೀ ಕಂಡಿದ್ದೇ ಇಲ್ಲ ಎಂದು ಅಮ್ಮ ಹೆಮ್ಮೆಯಿಂದ ಹೇಳಿದ್ದಳು. ಹಸಿವು ನಿದ್ದೆಗಳನ್ನು ಗೆದ್ದು ನೂರಾರು ಹೆಣಗಳಿಗೆ ಸ್ಮಶಾನ ಕಟ್ಟಿ ಅಂತ್ಯ ಹಾಡಿದ ನಮ್ಮಪ್ಪ ಯಾವ ವೀರಬಾಹುವಿಗೆ ಕಡಿಮೆ ? ಕೋವಿಡ್ ನಂಥ ಸಣ್ಣ ಕ್ರಿಮಿಗೆ ಹೆದರಿ ವರ್ಷಾನುಗಟ್ಟಲೆ ಮನೆಯಲ್ಲಿ ಅವಿತುಕೊಂಡ ನಾವೆಲ್ಲಿ ? ಔಷಧವೇ ಇಲ್ಲದ ಮಾರಣಾಂತಿಕ ಪ್ಲೇಗಿನ ಹೆಗಲು ಮೇಲೇ ಕೈ ಹಾಕಿ ಸವಾಲೆಸೆದ ಅಪ್ಪ ಎಲ್ಲಿ ?

ಅಪ್ಪನ ಕಬ್ಬಿಣದ ಅಲ್ಮೇರಾದಲ್ಲಿ ಸಿಕ್ಕಿದ ವಸ್ತುಗಳಲ್ಲಿ 1923 ರಲ್ಲಿ ತೆಗೆದ ಶಾಲೆಯ ಗ್ರೂಪ್ ಫೋಟೋ ಕೂಡ ಒಂದು. ಅಪ್ಪ ಹೋದ ಮೇಲೆ 30 ವರ್ಷಗಳಿಂದ ನೂರಾರು ಬಾರಿ ಆ ಫೋಟೊವನ್ನು ನೋಡಿದ್ದೇನೆ. ಇಂದೇಕೋ ಮತ್ತೆ ನೋಡುವಾಸೆ. ಸುಮಾರು ನೂರು ವರ್ಷಗಳ ಹಿಂದಿನ ಫೋಟೊ. ಬ್ರಿಟಿಷರ ಕಾಲದ ಕಲ್ಲು ಕಟ್ಟಡದ ಶಾಲೆಯ ಮುಖ್ಯದ್ವಾರದ ಮುಂದೆ ಶಿಕ್ಷಕರೂ, ವಿದ್ಯಾರ್ಥಿಗಳೂ ನಿಂತ ಚಿತ್ರ. ಅಮ್ಮ ಹೇಳಿದ ಪ್ರಕಾರ ಅಪ್ಪ ಮನೆ ಬಿಟ್ಟಾಗ ತಂದ ವಸ್ತುಗಳಲ್ಲಿ ಇದೂ ಒಂದು. ಆ ಫೊಟೋದಲ್ಲಿ ಅಪ್ಪ- ಚಿಕ್ಕಪ್ಪ ವಿದ್ಯಾರ್ಥಿಗಳಾಗಿ, ತಾತ ಶಿಕ್ಷಕರಾಗಿ ನಿಂತಿದ್ದಾರೆ. ದುರಂತವೆಂದರೆ ಅದರಲ್ಲಿ ಯಾರ ಗುರುತು ಯಾರಿಗೂ ತಿಳಿಯದು. ಚಿಕ್ಕಪ್ಪ, ಅಪ್ಪ ಸುಮಾರು ಐದಾರು ವರ್ಷದವರು. ತಾತ ಆ ಶಾಲೆಯಲ್ಲೇ ಮಾಸ್ತರು.
ಅಪ್ಪ ಚಿಕ್ಕಪ್ಪ ಭೇಟಿಯಾದಾಗಲೆಲ್ಲ ಈ ಫೋಟೊ ಮುನ್ನಲೆಗೆ ಬರುತ್ತಿತ್ತು. ಇಬ್ಬರೂ ಆ ಫೋಟೊ ನೋಡುತ್ತ ತನ್ಮಯರಾಗಿ ಇದು ನಾನಿರಬಹುದು, ಇದು ನೀನಿರಬಹುದು, ಇದು ಅಪ್ಪ ಎಂದು ಅಂದಾಜು ಮಾಡಿ ಫೋಟೊವನ್ನು ಒಳಗಿಡುತ್ತಿದ್ದರು.

ಫೋಟೊವನ್ನು ಒಮ್ಮೆ ವಿವರವಾಗಿ ನೋಡಬೇಕೆನಿಸಿತು. ಕೈಗೆತ್ತಿಕೊಂಡೆ. ಒಂದಂಚಿನಲ್ಲಿ ‘ಕಲ್ಪನಾ ಸ್ಟುಡಿಯೊ’ ಎಂಬ ಹೆಸರು. ಫೋಟೊದಲ್ಲಿರುವ ಮುಖಗಳೆಲ್ಲ ಕೊಂಚ ಮಬ್ಬಾಗುತ್ತಿವೆ. ಕೆಲ ಕಡೆ ಬಿಳಿ ಮಚ್ಚೆಗಳು. ಅಪ್ಪ-ಚಿಕ್ಕಪ್ಪನ ಮುಖಚರ್ಯೆಯನ್ನು ಗುರುತಿಸಲು ಪ್ರಯತ್ನಿಸಿದೆ. ಉಹೂಂ ಊಹೆ ಮಾಡಬಹುದಷ್ಟೆ. ತಾತನನ್ನು ನಾನು ನೋಡೆ ಇಲ್ಲ. ಮೂರೂ ಜನ ಫೋಟೊದಲ್ಲಿರುವುದು ಅಪ್ಪನಿಂದ ತಿಳಿದಿತ್ತು. ಅವರು ಯಾರು ಎಂದು ತಿಳಿಯುತ್ತಿಲ್ಲ. ಎಲ್ಲರಿಗೂ ಇದನ್ನು ತೋರಿಸಿ ನನ್ನ ಹಿರೀಕರು ಎಂದು ಹೇಳುವಾಸೆ. ಯಾರೆಂದು ತೋರಿಸಿ ಎಂದು ಯಾರದರೂ ಕೇಳಿಬಿಟ್ಟರೆ ಹೇಗೆ ತೋರಿಸಲಿ ? ಫೋಟೋದಲ್ಲಿ ಸುಮಾರು 40 ಜನರಿದ್ದಾರೆ. ಶಿಕ್ಷಕರೆಲ್ಲ ಬಿಳಿ ಜುಬ್ಬ, ಕಚ್ಚೆ ಪಂಚೆ. ಹುಡುಗರೆಲ್ಲ ಬಿಳಿ ಅಂಗಿ, ನೀಲಿ ಚೆಡ್ಡಿ. ಕೋಟು ಹಾಕಿ ಮಧ್ಯೆ ಕುಳಿತವರು ಹೆಡ್ ಮಾಸ್ತರಿರಬೇಕು. ಎಲ್ಲರೂ ಶಿಸ್ತಿನ ಸಿಪಾಯಿಗಳಂತೆ ಎದೆಯುಬ್ಬಿಸಿ ನಿಂತಿದ್ದಾರೆ. ಫೋಟೊದ ಕೆಳಗೆ ‘‘ಪ್ರಾಥಮಿಕ ಶಾಲೆ, ಗಂಜಾಂ, ಶ್ರಿರಂಗಪಟ್ಟಣ ತಾಲ್ಲೂಕು ಎಂಬ ಮೊಹರು.

ನಾನೇ ಒಮ್ಮೆ ಅಪ್ಪನಿಗೆ ಕೇಳಿದ ನೆನಪು. ‘ನೀವು ಹಿಂದೆ ಓದಿದ್ದ ಗಂಜಾಂ ಶಾಲೆಗೆ ಮತ್ತೆ ಹೋಗಲೇ ಇಲ್ಲವೆ ? ಎಂದು. ಸಾಮಾನ್ಯವಾಗಿ ನಮ್ಮ ಹಳೆಯ ಶಾಲೆಗಳ ಬಗ್ಗೆ ನಮಗೊಂದು ಭಾವನಾತ್ಮಕ ಬಂಧ. ಬಹುಶಃ ಅಪ್ಪನಿಗೆ ಆ ದಿನಗಳು ಸಹ್ಯವಿರಲಿಲ್ಲವೇನೋ. ಅಪ್ಪನ ಸೋದರಮಾವನ ರಾಕ್ಷಸತ್ವವನ್ನು ಅಮ್ಮ ನಮಗೆಲ್ಲ ಒಂದು ಕಥೆಯಂತೆ ಹೇಳಿದ್ದಳು. ಅಪ್ಪ-ಚಿಕ್ಕಪ್ಪನ ದೇಹದಲ್ಲಿ ಸೋದರಮಾವ ಹಾಕಿದ ಕೆಂಡದ ಬರೆಯ ಗುರುತುಗಳು ಇನ್ನೂ ಹೋಗಿಲ್ಲವಂತೆ. ಇಂಥದ್ದೊಂದು ಭಯಾನಕ ಬಾಲ್ಯದ ಮಧ್ಯೆ ಅಗಾಧ ಮಾನವತಾವಾದಿ ಅಪ್ಪ ಹೇಗೆ
ಚಿಗುರೊಡೆದ ?

ಒಂದು ಯೋಚನೆ ಮನಸ್ಸಿನಲ್ಲಿ ಸುಳಿದಾಡತೊಡಗಿತು. ಎರಡೇ ನಿಮಿಷದಲ್ಲಿ ನಿಚ್ಚಳವಾಯಿತು ಕೂಡ. ಅಪ್ಪ ಓದಿದ ಶಾಲೆಗೆ ಒಮ್ಮೆ ಭೇಟಿ ಕೊಡುವ ವಿಚಾರ ನನ್ನಲ್ಲಿ ಕೊಂಚ ಲವಲವಿಕೆಯನ್ನು ತಂತು. ಅಪ್ಪ, ತಾತನ ಕಾಲದವರು ಈಗ ಯಾರೂ ಇರದೇ ಹೋದರೂ ಫೋಟೊದಲ್ಲಿರುವವರ ವಂಶಸ್ಥರಾರಾದರೂ ಇದ್ದು ಕೆಲವರನ್ನು ಗುರುತು ಹಿಡಿಯಬಹುದೇ ಎಂಬ ಆಶಾವಾದ ಮೂಡತೊಡಗಿತು. ಲಗುಬಗೆಯಿಂದ ಪ್ರಯಾಣಕ್ಕೆ ಸಿದ್ಧನಾದೆ.

ಗಂಜಾಂ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂದೆ ನಿಂತಾಗ 11 ಗಂಟೆಯ ಬೆಳಗು. ಗೇಟ್ ನಿಂದ ಸುಮಾರು ನೂರು ಹೆಜ್ಜೆಯಲ್ಲಿ ಶಾಲೆಯ ಮುಖ್ಯ ದ್ವಾರ. ಗಟ್ಟಿ ಮುಟ್ಟಾದ ಕಲ್ಲಿನ ಕಟ್ಟಡ. ಪರಿಸರ ಸ್ವಚ್ಚವಾಗಿತ್ತು. ಮುಖ್ಯದ್ವಾರದ ಮೆಟ್ಟಿಲುಗಳ ಮೇಲೆ ನಿಂತೆ. ಇದೇ ಮೆಟ್ಟಿಲುಗಳು. ಸುಮಾರು ನೂರು ವರ್ಷದ ಹಿಂದೆ ಅಪ್ಪ ಚಿಕ್ಕಪ್ಪ, ತಾತ ಎಲ್ಲರೂ ಇಲ್ಲಿ ನಿಂತಿದ್ದರು ! ನನ್ನ ಹಿರೀಕರ ಬೇರುಗಳೂ, ಬಿಳಲುಗಳೂ ಸಂಪನ್ನವಾದ ಪುಣ್ಯಭೂಮಿ. ಇದ್ದಕ್ಕಿದ್ದಂತೆ ಎದೆಯಲ್ಲಿ ಕಂಪನವೊಂದರ ಅನುಭವವಾಯಿತು. ಕಣ್ಮುಚ್ಚಿ ನನ್ನಲ್ಲಾಗುತ್ತಿದ್ದ ಸಂವೇದನೆಗಳನ್ನೆಲ್ಲ ಅನುಭವಿಸತೊಡಗಿದೆ.

“ಯಾರದು, ಒಳಗೆ ಬನ್ನಿ’’ ಎಂಬ ಮಾತು ಕೇಳಿ ಅವರತ್ತ ತಿರುಗಿದೆ. ಮುಖ್ಯ ಶಿಕ್ಷಕರಿರಬೇಕು. ಹಿಂಬಾಲಿಸಿ ಅವರ ಟೇಬಲ್ಲಿನ ಮುಂದೆ ಕುಳಿತಾಗ ಅವರ ಮುಖದಲ್ಲೊಂದು ಪ್ರಶ್ನಾರ್ಥಕ ಚಿಹ್ನೆ. ನನ್ನ ಪರಿಚಯ ಹೇಳಿ, ನನ್ನ ಬ್ಯಾಗ್ ನಿಂದ ಆ ಫೋಟೊವನ್ನು ತೆಗೆದು ಅವರ ಮುಂದಿಟ್ಟೆ. ಅಚ್ಚರಿ ಕುತೂಹಲಗಳಿಂದ ದಿಟ್ಟಿಸಿದರು.

“ಸುಮಾರು ನೂರು ವರ್ಷದ ಹಿಂದಿನ ಚಿತ್ರ. ಇದರಲ್ಲಿ ನಮ್ಮ ಅಪ್ಪ, ಚಿಕ್ಕಪ್ಪ, ತಾತ ಎಲ್ಲರೂ ಇದ್ದಾರೆ. ಅವರು ಯಾರು ಎಂದು ನನಗೆ ಗುರುತು ಸಿಗುತ್ತಿಲ್ಲ. ಹೇಗಾದರೂ ಇವರ ಗುರುತುಗಳನ್ನು ಪತ್ತೆ ಹಚ್ಚಬಹುದೇ ?’’ ಎಂದೆ.

ಐದಾರು ನಿಮಿಷಗಳ ಮೌನ. ಕಡೆಗೆ ಅವರೇ ಮೌನ ಮುರಿದರು. ‘‘ಇದು ತೆಗೆದಿರುವುದು ಈ ಶಾಲೆಯಲ್ಲೇ. 1923 ಎಂದರೆ ಈ ಚಿತ್ರದಲ್ಲಿರುವವರೂ, ಇದನ್ನು ತೆಗೆದವರೂ ಈಗ ಜೀವಂತ ಇರಲಾರರು. ಅಷ್ಟು ಹಳೆಯ ದಾಖಲೆಗಳೂ ಈಗ ಸಿಗುವುದಿಲ್ಲ. ಏನು ಮಾಡುವುದು ? ಎಂದು ಕೊಂಚ ಕನಿಕರದಿಂದಲೇ ನುಡಿದರು.

“ನಿಜ. ಆ ಕಾಲಘಟ್ಟದಲ್ಲಿ ಶಾಲೆಯಲ್ಲಿ ಕೆಲಸ ಮಾಡಿದವರ ಕುಟುಂಬದವರಾರಾದರೂ ಸಿಗಬಹುದೆಂಬ ಆಶಯದಿಂದ ನಾನಿಲ್ಲಿ ಬಂದಿದ್ದೇನೆ. ಸುತ್ತಮುತ್ತ ಯಾರಾದರೂ ನಿಮ್ಮ ಗಮನದಲ್ಲಿದ್ದಾರೆಯೇ ? ಎಂದೆ.

ಹೆಡ್ ಮಾಸ್ತರು ಎರಡು ನಿಮಿಷ ಯೋಚಿಸುತ್ತ ಕುಳಿತು ನಂತರ ನುಡಿದರು “ಇರಿ, ಒಬ್ಬರು ನೆನಪಾಗುತ್ತಿದ್ದಾರೆ. ಈಗ ಐದಾರು ವರ್ಷಗಳ ಹಿಂದೆ ಶ್ರೀಕಂಠಮೂರ್ತಿ ಎಂಬುವರು ದಿನಾ ಬೆಳಿಗ್ಗೆ ಈ ಶಾಲೆಗೆ ಬರುತ್ತಿದ್ದರು. ಅಲ್ಲಿ ಕಾಣುತ್ತಿದೆಯಲ್ಲ ಆ ಕಲ್ಲು ಬೆಂಚಿನ ಮೇಲೆ ಕುಳಿತಿರುತ್ತಿದ್ದರು. ಯಾರು ಹತ್ತಿರ ಸುಳಿದರೂ ‘ಬನ್ನಿ ಇಲ್ಲಿ, ಇದು ನಮ್ಮ ತಾತ ಸೈಕಲ್ ವೆಂಕಣ್ಣಯ್ಯನವರು ಶಿಕ್ಷಕರಾಗಿದ್ದ ಶಾಲೆ’ ಎಂದು ಅವರ ತಾತನ ಬಗ್ಗೆ ತುಂಬ ಅಭಿಮಾನದಿಂದ ಮಾತನಾಡುತ್ತಿದ್ದರು. ಮೊದಮೊದಲು ಅವರ ತಾತನ ಕಥೆಯನ್ನು ನಾವೆಲ್ಲರೂ ಆಸ್ಥೆಯಿಂದ ಕೇಳುತ್ತಿದ್ದೆವು. ಆಮೇಲೆ ದಿನವೂ ಅದೇ ಕಥೆಯ ಪುನರಾವರ್ತನೆ. ವ್ಯಕ್ತಿಗೆ ಮಾನಸಿಕ ಸ್ಥಿಮಿತತೆ ತಪ್ಪಿತ್ತೆಂದು ಅನಿಸುತ್ತದೆ. ಇದೆಲ್ಲ ತಿಳಿದ ಮೇಲೆ ಯಾರೂ ಅವರ ಬಳಿ ಸುಳಿಯುತ್ತಿರಲಿಲ್ಲ. ಕಡೆಕಡೆಗೆ ಅವರು ಅದೇ ಕಲ್ಲು ಬೆಂಚಿನ ಮೇಲೆ ತಪಸ್ಸಿನಂತೆ ಧ್ಯಾನಸ್ಥರಾಗಿ ಕುಳಿತಿರುತ್ತಿದ್ದರು. ಒಂದು ಮಾತೂ ಯಾರ ಬಳಿಯೂ ಆಡುತ್ತಿರಲಿಲ್ಲ. ಒಮ್ಮೊಮ್ಮೆ ಎರಡು ಮೂರು ಗಂಟೆ ಹಾಗೇ ಅಲುಗಾಡದೆ ಕುಳಿತುಬಿಡುತ್ತಿದ್ದರು. ಕಡೆಗೊಮ್ಮೆ ನಮಗೆಲ್ಲ ಭಯವಾಗಿ ‘ಶಾಲೆಯ ಒಳಗಡೆ ಬರಬೇಡಿ’ ಎಂದು ಹೇಳಿದರೂ ಅವರು ಬರುವುದನ್ನು ಬಿಡಲಿಲ್ಲ. ಈಗ ಐದಾರು ವರ್ಷಗಳಿಂದ ಅವರ ಸುಳಿವಿಲ್ಲ. ಅವರ ಮಗ ಶ್ರೀನಿವಾಸನ ಪರಿಚಯ ನನಗಿದೆ. ನಂತರ ಅವನಿಂದ ತಿಳಿಯಿತು– ಶ್ರೀಕಂಠಮೂರ್ತಿಗೆ ಲಕ್ವ ಹೊಡೆದು ಕೈಕಾಲು ಸ್ವಾಧೀನ ಹೋಗಿದೆ, ಮಾತು ಕೂಡ ನಿಂತಿದೆ ಎಂದು.

“ಸೈಕಲ್ ವೆಂಕಣ್ಣಯ್ಯನವರೆಂದರೆ .... “ ಅಂದೆ.

“ಸೈಕಲ್ ವೆಂಕಣ್ಣಯ್ಯನವರು ತೀರಿಕೊಂಡು ಸುಮಾರು ವರ್ಷಗಳಾಯಿತು. ಆದರೆ ‘ಸೈಕಲ್’ ಎಂಬ ಉಪನಾಮ ಅವರನ್ನು ಬಿಟ್ಟಿಲ್ಲ. ಸುಮಾರು ಮೂರು ನಾಲ್ಕು ಕಿಲೊಮೀಟರ್ ದೂರದಿಂದ ದಿನವೂ ಸೈಕಲ್ ಮೇಲೆ ಬರುತ್ತಿದ್ದ ಅವರು ದಾರಿಯಲ್ಲಿ ಮೊದಲು ಕಣ್ಣಿಗೆ ಬಿದ್ದ ವಿದ್ಯಾರ್ಥಿಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ಬರುತ್ತಿದ್ದರಂತೆ. ಅವರೊಡನೆ ಸೈಕಲ್ ಸವಾರಿ ಮಾಡಲು ಹುಡುಗರೆಲ್ಲ ಅವರು ಬರುವ ದಾರಿಯಲ್ಲಿ ಕಾದು ನಿಂತಿರುತ್ತಿದ್ದರಂತೆ. ಇದೆಲ್ಲವೂ ನಮಗೆ ಶ್ರೀಕಂಠಮೂರ್ತಿಯಿಂದ ತಿಳಿದದ್ದು.” ಹೆಡ್ ಮಾಸ್ತರ ಧ್ವನಿಯಲ್ಲಿ ಉತ್ಸಾಹದೊಡನೆ ಕೊಂಚ ಉದ್ವೇಗವೂ ಸೇರಿದ್ದನ್ನು ನಾನು ಗಮನಿಸಿದೆ.

ಹಾಗಾದರೆ ತಾತ ಈ ಶಾಲೆಯಲ್ಲಿ ಮಾಸ್ತರಾಗಿದ್ದ ಸಮಯದಲ್ಲೇ ಸೈಕಲ್ ವೆಂಕಣ್ಣಯ್ಯನವರೂ ಮಾಸ್ತರಿದ್ದಿರಬಹುದು ಎನಿಸಿ ಕುತೂಹಲವೊಂದು ಚಿಗುರೊಡೆಯತೊಡಗಿತು.

“ನಾನೊಮ್ಮೆ ಶ್ರೀಕಂಠಮೂರ್ತಿಯನ್ನು ಭೇಟಿಯಾಗಬಹುದೆ ? ಅವರ ಮನೆ ವಿಳಾಸ ? “ ಎಂದೆ.
ಹೆಡ್ ಮಾಸ್ತರು ಅವರ ಮನೆಯ ಕೆಲ ಗುರುತುಗಳನ್ನು ಹೇಳಿ, “ಕಾಫಿ ತರಿಸಲೇ ? , ನಾನೂ ನಿಮ್ಮೊಡನೆ ಬರಲೇ ? ಇತ್ಯಾದಿ ಪ್ರಶ್ನೆಗಳನ್ನು ಆತ್ಮೀಯತೆಯಿಂದಲೇ ಕೇಳಿದರು. ಬೇಡವೆಂದು ತಿಳಿಸಿ , ಅವರಿಗೆ ವಂದನೆಗಳನ್ನು ಹೇಳಿ ಅಲ್ಲಿಂದ ಹೊರಟೆ.
ಶ್ರೀಕಂಠಮೂರ್ತಿಯ ಮನೆ ಹೊಕ್ಕಾಗ ಮಗ ಶ್ರೀನಿವಾಸ ಇರಬೇಕು, ದಿನಪತ್ರಿಕೆಯನ್ನು ಹಿಡಿದು ಕುಳಿತಿದ್ದ.
“ಶ್ರೀಕಂಠಮೂರ್ತಿಯವರ ಮನೆ ....... “ ಎಂದೆ.
“ಬನ್ನಿ ಬನ್ನಿ, ನಾನವರ ಮಗ ಶ್ರೀನಿವಾಸ. ತಾವು ಯಾರೆಂದು ತಿಳಿಯಲಿಲ್ಲ’’ ಎಂದ.
ನನ್ನ ಪರಿಚಯ ಹೇಳಿ, ನಾನು ಶ್ರೀಕಂಠಮೂರ್ತಿಯನ್ನು ಭೇಟಿಯಾಗಲು ಬಂದಿದ್ದೇನೆಂದು ಹೇಳಿದೆ.
“ಅಪ್ಪನ ಆರೋಗ್ಯ ತೀರಾ ಹದಗೆಟ್ಟಿದೆ. ಕೈಕಾಲು ಸ್ವಾಧೀನ ಇಲ್ಲ. ಮಾತೂ ಇಲ್ಲ. ಹದಿನೈದು ದಿನಗಳಿಂದ ಊಟವನ್ನೂ ಮಾಡಿಲ್ಲ “ ಎಂದ.
“ತಿಳಿಯಿತು. ಗಂಜಾಂ ಶಾಲೆಗೆ ಭೇಟಿ ನೀಡಿದ್ದೆ. ಹೆಡ್ ಮಾಸ್ತರು ಎಲ್ಲವನ್ನೂ ಹೇಳಿದ್ದಾರೆ’’ ಎಂದು ಹೇಳಿ, ಫೋಟೊವನ್ನು ಅವನ ಕೈಗಿತ್ತು ಹೇಳಿದೆ “ ತುಂಬಾ ಹಿಂದಿನ ಕಾಲದ ಫೋಟೊ ಇದು, ಇದರಲ್ಲಿ ನಮ್ಮ ಅಪ್ಪ, ಚಿಕ್ಕಪ್ಪ ನಮ್ಮ ತಾತ ಎಲ್ಲರೂ ಇದ್ದಾರೆ. ನಿಮ್ಮ ಮುತ್ತಾತ ಸೈಕಲ್ ವೆಂಕಣ್ಣಯ್ಯನವರೂ ಇರಬಹುದು. ನೀವೇನಾದರೂ ಗುರುತು ಹಿಡಿಯಬಹುದೇ ನೋಡಿ’’

ತಲೆಮಾರುಗಳ ಹುಚ್ಚು ಹಿಡಿಸಿಕೊಂಡ ಅಪ್ಪನ ಹಾಗೆಯೇ ಈ ವ್ಯಕ್ತಿಯೂ ಇರಬಹುದು ಎಂಬಂತೆ ನನ್ನತ್ತ ನೋಡಿದ. ಫೋಟೊದ ಕಡೆ ಕಣ್ಣು ಕೂಡ ಹಾಯಿಸದೆ “ನಾನು ನಮ್ಮ ತಾತನನ್ನೇ ನೋಡಿಲ್ಲ, ಇನ್ನು ಮುತ್ತಾತನ ಗುರುತು ಹೇಗೆ ಹಿಡಿಯಲಿ?’’ ಎಂದ. “ತಾತ ಯಾರು’’ಎಂದೆ. “ಸುಬ್ಬಣ್ಣಯ್ಯನವರು ಎಂದು, ಅಪ್ಪ ಹುಟ್ಟಿದಾಗಲೇ ಹೋಗಿಬಿಟ್ಟರಂತೆ ಮುತ್ತಾತನೇ ಅಪ್ಪನನ್ನು ಬೆಳೆಸಿದ್ದು ಹೀಗಿದ್ದರು ನೋಡಿ ನಮ್ಮ ಮುತ್ತಾತ’’ ಎಂದು ಹಾಲಿನಲ್ಲಿ ತೂಗು ಹಾಕಿದ್ದ ದೊಡ್ಡ ಭಾವಚಿತ್ರವೊಂದನ್ನು ತೋರಿಸಿದ. ಕಳೆ ತುಂಬಿದ್ದ ಮುಖ. ಜೀವನೋತ್ಸಾಹವನ್ನೆಲ್ಲ ಬಗೆಬಗೆದು ಭಟ್ಟಿ ಇಳಿಸಿದಂಥ ಕಣ್ಣುಗಳು. ಫೋಟೊದಂಚಿನಲ್ಲಿ ಕೈ ಬರಹದಲ್ಲಿ ‘ಸೈಕಲ್ ವೆಂಕಣ್ಣಯ್ಯನವರು’ ಎಂದು ಬರೆದಿತ್ತು. ಇಳಿವಯಸ್ಸಿನ ಫೋಟೊ. ಹಾಕಿದ್ದ ಹಾರಕ್ಕೂ ಅಷ್ಟೇ ವಯಸ್ಸಾಗಿತ್ತು. ಯಾರಿಗೆ ಗೊತ್ತು ? ಇವರು ತಾತನ ಗೆಳೆಯರಾಗಿದ್ದರೂ ಇರಬಹುದು ಎನಿಸಿ ಮತ್ತಷ್ಟು ತನ್ಮಯತೆಯಿಂದ ವೆಂಕಣ್ಣಯ್ಯನವರನ್ನು ನೋಡಿದೆ.

“ಶ್ರೀಕಂಠಮೂರ್ತಿಯವರನ್ನು ಒಮ್ಮೆ ನೋಡಬಹುದೇ?’’ ಎಂದೆ. “ ರೂಮಿನಲ್ಲಿ ಮಲಗಿದ್ದಾರೆ ಬನ್ನಿ’’ ಎಂದ.
ದೇಹ ಜರ್ಝರಿಭೂತವಾಗಿತ್ತು. ಬಹಳ ದಿನ ಬದುಕುವ ಲಕ್ಷಣ ಕಂಡು ಬರಲಿಲ್ಲ. “ ಶ್ರೀಕಂಠಮೂರ್ತಿಗಳೇ, ನಿಮ್ಮ ತಾತ ಸೈಕಲ್ ವೆಂಕಣ್ಣಯ್ಯನವರ ಶಾಲೆಗೆ ಭೇಟಿ ಕೊಟ್ಟು ಬರುತ್ತಿದ್ದೇನೆ’’ ಎಂದು ಗಟ್ಟಿಯಾಗಿ ಕೂಗಿದೆ. ಯಾವುದೇ ಪ್ರತಿಕ್ರಿಯೆ ಇಲ್ಲ. ಗಂಟಲು ಕೊಂಚ ಗೊರಗೊರ ಅಂದಂತಾಯಿತು. ಅಷ್ಟರಲ್ಲಿ ನನ್ನ ಫೋಟೊವನ್ನು ಗುರುತು ಹಿಡಿಯಬಲ್ಲ ಕ್ಷಮತೆ ಈ ವ್ಯಕ್ತಿಗೆ ಇಲ್ಲವೆಂಬುದು ವೇದ್ಯವಾಗಿತ್ತು.

ಶ್ರೀನಿವಾಸ ನಸು ನಕ್ಕ. “ಓಹೋ ಆ ಸೈಕಲ್ ಕಥೆ ನಿಮಗೂ ತಿಳಿಯಿತೇ? ಇಲ್ಲಿದೆ ನೋಡಿ ಸೈಕಲ್. ನೂರಿಪ್ಪತ್ತು ವರ್ಷ ಹಳೆಯದು. ಅಪ್ಪ ಮಾತನಾಡುವ ಹಾಗಿದ್ದಾಗ ಈ ಸೈಕಲ್ಲನ್ನು ಅವರ ಹಾಸಿಗೆಯ ಪಕ್ಕವೇ ಇಡಬೇಕೆಂದೂ, ಹೊರಗಡೆ ಇಡಬಾರದೆಂದೂ ತಾಕೀತು ಮಾಡಿದ್ದರು’’ ಅಂದ.

ಹಾಸಿಗೆಗೆ ಬಹಳ ಹತ್ತಿರವಾಗಿ ಸೈಕಲ್ ಸ್ಥಿತಪ್ರಜ್ಞನಂತೆ ನಿಂತಿತ್ತು. ಕುತೂಹಲದಿಂದ ಹತ್ತಿರಕ್ಕೆ ಹೋದೆ. ನೂರಾರು ವರ್ಷಗಳಿಂದ ಒಂದು ವ್ಯಕ್ತಿಯ ಹೆಸರಿನೊಡನೆ ಬೆರೆತು ಹೋಗಿರುವ ಜಡ ವಸ್ತು ! ಟೈರುಗಳಲ್ಲಿ ಗಾಳಿ ಇರಲಿಲ್ಲ. ಚೈನು ತುಕ್ಕು ಹಿಡಿದು ತುಂಡಾಗಿತ್ತು. ಅಲ್ಲಲ್ಲಿ ಜೇಡರಬಲೆ. ಇದರ ಮೇಲೆ ಕೂರಲು ಎಷ್ಟು ಹುಡುಗರು ಕನಸು ಕಂಡಿದ್ದರೋ ? ಅಷ್ಟೇ ಏಕೆ, ಅಪ್ಪ ಚಿಕ್ಕಪ್ಪಂದಿರೂ ಇದರ ಮೇಲೆ ಕುಳಿತಿರಬಹುದಲ್ಲವೇ ? ಒಂದು ಕ್ಷಣ ರೋಮಾಂಚನವಾಯಿತು. ಕ್ಯಾರಿಯರ್ ಮೇಲೆ ನಿಧಾನವಾಗಿ ಕೈ ಇಟ್ಟೆ. “ ಹುಷಾರು ಸ್ವಾಮೀ, ತುಕ್ಕು ಹಿಡಿದಿದೆ’’ ಎಂದು ಶ್ರೀನಿವಾಸ ಕೂಗಿಕೊಂಡ. ನಿಜ ಸೈಕಲ್ಲಿಗೆ ತುಕ್ಕು ಹಿಡಿದಿದೆ. ಶತಮಾನಗಳಿಂದ ವೆಂಕಣ್ಣಯ್ಯನವರ ಜೊತೆ ಇದು ಬದುಕುತ್ತಿರುವ ಬಂಧಕ್ಕೆ ತುಕ್ಕು ಹಿಡಿಯಲು ಸಾಧ್ಯವೇ ? ಕೆಲವೇ ದಿನಗಳಲ್ಲಿ ದಹನವಾಗಲಿರುವ ಶ್ರೀಕಂಠಮೂರ್ತಿಯ ದೇಹದೊಡನೆ ಈ ಸೈಕಲ್ ಕೂಡ ಗುಜರಿ ಸೇರುವುದು ಖಚಿತ ಅನಿಸಿತು. ಹೃದಯ ಕೊಂಚ ಭಾರವಾಗತೊಡಗಿತು. ನಾನೂ, ಶ್ರೀಕಂಠಮೂರ್ತಿ, ತಾತ, ವೆಂಕಣ್ಣಯ್ಯನವರು, ಎಲ್ಲರೂ ಬೇರೆ ಬೇರೆ ಶರೀರಗಳಲ್ಲಿ ಸೇರಿರುವ ಒಂದೇ ಜೀವದ ತುಣುಕುಗಳು ಅನಿಸತೊಡಗಿತು. ಕಡೆಯಬಾರಿ ಶ್ರೀಕಂಠಮೂರ್ತಿಯ ಮುಖವನ್ನು ನೋಡಿ , “ತಂದೆಯವರು ಶೀಘ್ರ ಗುಣಮುಖರಾಗಲಿ’’ ಎಂದು ಬಾಯಿ ಮಾತಿಗೆ ಹಾರೈಸಿ ಅಲ್ಲಿಂದ ಹೊರೆಟೆ. ಹೊರಡುವ ಮುನ್ನ ಹಾಲಿಗೆ ಬಂದು ಇನ್ನೊಮ್ಮೆ ವೆಂಕಣ್ಣಯ್ಯನವರ ಭಾವಚಿತ್ರವನ್ನು ಕಣ್ತುಂಬಿಕೊಂಡೆ. ಇನ್ನೂ ಶ್ರೀನಿವಾಸನ ಮುಖದಲ್ಲಿ ನನ್ನ ಬಗೆಗಿನ ಅಚ್ಚರಿ ಮಾಸಿರಲಿಲ್ಲ.

ಗಂಜಾಂ ಪ್ರವಾಸದ ನಂತರ ನನ್ನಲ್ಲಾದ ಅನೇಕ ಬದಲಾವಣೆಗಳು ನನ್ನಲ್ಲಿ ಅಚ್ಚರಿಯನ್ನು ತಂತು. ಮಗನ ಪ್ರಶ್ನೆ ನನ್ನ ಕಿವಿಗೆ ಬಿದ್ದ ಮೇಲೆ ನನ್ನಲ್ಲಿ ಉಂಟಾದ ವಿಷಾದಗಳೂ, ತಳಮಳಗಳೂ, ಚಡಪಡಿಕೆಗಳೂ ಒಂದು ತಹಬದಿಗೆ ಬಂದಿವೆ. ಮಗನನ್ನು ಎದುರು ಕೂರಿಸಿಕೊಂಡು ನನ್ನ ಪರಿಧಿಯಲ್ಲೇ ನಾ ಕಂಡ ಅಪ್ಪನನ್ನು ಬಿಚ್ಚಿಡಬೇಕು. ಹಾಗೆಯೇ ಅಪ್ಪನ ಬೃಹದ್ ಬಿಳಲುಗಳನ್ನು ಬದಿಯಲ್ಲಿಟ್ಟುಕೊಂಡು ಕಳಚಿಕೊಳ್ಳಲಾಗದಂಥ ನವಿರಾದ ಬಂಧದಿಂದ ಮಗನನ್ನು ಕಟ್ಟಬೇಕು ಎಂದು ನಿರ್ಧರಿಸಿದಾಗ ಮನಸ್ಸು ಮತ್ತಷ್ಟು ಹಗುರಾಯಿತು.

ಫೋಟೊದ ಬಗ್ಗೆಯೂ ನನ್ನ ನಿರ್ಧಾರ ಗಟ್ಟಿಯಾಯಿತು. ಫೋಟೊದಲ್ಲಿರುವ ಅಷ್ಟೂ ಮಂದಿ ನನ್ನ ಹಿರೀಕರೇ ಎಂಬ ಭಾವನೆ ನನ್ನನ್ನು ಹೆಚ್ಚು ಉಲ್ಲಸಿತನನ್ನಾಗಿ ಮಾಡಿದೆ. ಕಟ್ಟು ಹಾಕಿಸಿ, ದೊಡ್ಡ ಗೇಜಿನ ಗಾಜು ಹಾಕಿಸಿ ಫೋಟೊವನ್ನು ಸಿದ್ಧಪಡಿಸಿದೆ. ಅಪ್ಪನಿಗೆ ಪ್ರಿಯವಾಗಿದ್ದ ಈ ಫೋಟೊ ಅಪ್ಪ-ಅಮ್ಮಂದಿರ ಫೋಟೊ ಪಕ್ಕವೇ ತೂಗು ಹಾಕಲು ನಿರ್ಧರಿಸಿ ಎರಡಿಂಚಿನ ಮೊಳೆಯೊಂದನ್ನು ಗೋಡೆಗೆ ಬಡಿಯತೊಡಗಿದೆ. ಆ ಬಡಿತದ ಶಬ್ದದ ಒಡನೆಯೇ ನಾಳೆಯಿಂದ ಆಗಂತುಕರು ಅದರ ಬಗ್ಗೆ ಕೇಳುವ ಪ್ರಶ್ನೆಗಳಿಗೆ ನಾನು ನೀಡಬೇಕಾದ ಉತ್ತರಗಳ ಬಗ್ಗೆ ಮನಸ್ಸಿನಲ್ಲಿ ಸ್ಪಷ್ಟತೆಯೊಂದು ಮೂಡುತ್ತಾ ಹೋಯಿತು.

ಜಿ.ಸಿ.ರವಿ

ಭಾರತೀಯ ಜೀವವಿಮಾ ನಿಗಮದಲ್ಲಿ ಆಡಳಿತಾಧಿಕಾರಿಯಾಗಿ 2023ರಲ್ಲಿ ನಿವೃತ್ತಿ. ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ವ್ಯಾಸಂಗ. 1983ರಲ್ಲಿ ಪದವಿ. ಸಣ್ಣ ಕಥೆಗಳು, ಕವನಗಳು, ಹಲವಾರು ಕನ್ನಡ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಸುಧಾ ಮತ್ತು ಮಯೂರ ಮಾಸ ಪತ್ರಿಕೆಗಳಲ್ಲಿ 80ರ ದಶಕದಲ್ಲಿ ನಿಯಮಿತ ಬರಹಗಾರ. ಸಂಬಂಧಗಳ ಬಗ್ಗೆ , ಮನುಷ್ಯರ ವರ್ತನೆಗಳ ಕುರಿತಾಗಿ ಎಂದೂ ತಣಿಯದ ಕುತೂಹಲ. ತಲೆಮಾರುಗಳ ಅಂತರಗಳು ಇವರಿಗೆ ಯಾವಾಗಲೂ ಕಲಕುವ ವಸ್ತು.

ರವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.