ಎಐ ಚಿತ್ರ
ಜ್ಯೋತಿಷಶಾಸ್ತ್ರ ಎಂದರೆ ವಿಷಯಗಳ ಮೇಲೆ ಬೆಳಕು ಚೆಲ್ಲುವ ಶಾಸ್ತ್ರ. ಇದರ ಸಹಾಯದಿಂದ ನಮ್ಮ ಜೀವನದ ಮಾರ್ಗವನ್ನು ಸರಿಯಾದ ರೀತಿಯಲ್ಲಿ ಕಂಡುಕೊಳ್ಳಬಹುದು. ಈ ಜ್ಯೋತಿಷಶಾಸ್ತ್ರವು ಬಹಳ ಪುರಾತನವಾದ ಶಾಸ್ತ್ರ. ಇದರ ಉಲ್ಲೇಖವನ್ನು ನಾವು ವೇದಗಳಲ್ಲೇ ಕಾಣುತ್ತೇವೆ. ಹಾಗಾಗಿ ಜ್ಯೋತಿಷವನ್ನು ವೇದಾಂಗವೆಂದೂ ಕರೆಯುವರು. ವೇದವು ಷಡಂಗಗಳಿಂದ ಕೂಡಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆ ಆರು ಅಂಗಗಳು ಯಾವುವೆಂದರೆ:
ಶಿಕ್ಷಾ ವ್ಯಾಕರಣಂ ಛಂದೋ ನಿರುಕ್ತಂ ಜ್ಯೋತಿಷಂ ತಥಾ |
ಕಲ್ಪಶ್ಚೇತಿ ಷಡಂಗಾನಿ ವೇದಸ್ಯಾಹುರ್ಮನೀಷಿಣಃ ||
ಎಂದರೆ, ಶಿಕ್ಷಾ, ಕಲ್ಪ, ನಿರುಕ್ತ, ವ್ಯಾಕರಣ, ಛಂದಸ್ಸು ಹಾಗೂ ಜ್ಯೋತಿಷ – ಇವೇ ವೇದದ ಆರು ಭಾಗಗಳು. ಈ ಆರೂ ಅಂಗಗಳನ್ನು ವೇದಪುರುಷನಿಗೆ ಸಮನ್ವಯ ಮಾಡಲಾಗಿದೆ. ಛಂದಸ್ಸು ವೇದಪುರುಷನ ಪಾದ, ವ್ಯಾಕರಣ – ಮುಖ, ಶಿಕ್ಷಾ – ಮೂಗು, ನಿರುಕ್ತ – ಕಿವಿ, ಕಲ್ಪ – ಅವನ ಕೈಗಳಾದರೆ, ಜ್ಯೋತಿಷವನ್ನು ಅವನ ಕಣ್ಣುಗಳಿಗೆ ಸಮನ್ವಯ ಮಾಡಲಾಗಿದೆ. ಹೇಗೆ ಕಣ್ಣುಗಳು ಮಾರ್ಗದರ್ಶನ ಮಾಡಲು ಸಹಕಾರಿಯಾಗಿರುವುದೋ ಹಾಗೆ ವ್ಯಕ್ತಿಯ ಜೀವನದುದ್ದಕ್ಕೂ ಮಾರ್ಗದರ್ಶನ ಮಾಡುವ ಶಾಸ್ತ್ರವಾಗಿದೆ ಈ ಜ್ಯೋತಿಷಶಾಸ್ತ್ರ. ಅದಕ್ಕಾಗಿಯೇ ಇದನ್ನು ವಿಷಯಗಳ ಮೇಲೆ ಬೆಳಕು ಚೆಲ್ಲುವ ಶಾಸ್ತ್ರ ಎಂದು ಕರೆದಿರುವುದು. ಇದರಿಂದ ನಾವು ತಿಳಿಯಬಹುದಾದ ವಿಷಯವೆಂದರೆ, ಜ್ಯೋತಿಷಶಾಸ್ತ್ರವು ಎಂದಿಗೂ ಕಾಲ್ಪನಿಕವಲ್ಲ, ವೇದಾಂಗದಿಂದಲೇ ಹುಟ್ಟಿತು ಎಂದು. ಈ ಜ್ಯೋತಿಷಶಾಸ್ತ್ರವನ್ನು ಇದುವರೆಗೂ ಸಂಸ್ಕರಿಸಿ, ಸಂರಕ್ಷಿಸಿ, ನಮ್ಮವರೆಗೂ ಕಾಪಿಟ್ಟು ಕೊಟ್ಟವರು ಹದಿನೆಂಟು ಜನ ಋಷಿಮುನಿಗಳು. ಇವರನ್ನು ‘ಜ್ಯೋತಿಷಶಾಸ್ತ್ರದ ಪ್ರವರ್ತಕರು’ ಎಂದು ಹೇಳಿದೆ. ಆ ಹದಿನೆಂಟು ಋಷಿಮುನಿಗಳನ್ನು ಸ್ಮರಿಸುವ ಶ್ಲೋಕ ಹೀಗಿದೆ:
ಸೂರ್ಯಃ ಪಿತಾಮಹೋ ವ್ಯಾಸೋ ವಸಿಷ್ಠೋತ್ರಿಃ ಪರಾಶರಾಃ
ಕಶ್ಯಪೋ ನಾರದೋ ಗರ್ಗೋ ಮರೀಚಿರ್ಮನುರಂಗಿರಾಃ |
ಲೋಮಶಃ ಪೌಲಶಶ್ಚೈವ ಚ್ಯವನೋ ಯವನೋ ಭೃಗುಃ |
ಶೌನಕೋ ಅಷ್ಟಾದಶಶ್ಚೈತೇ ಜ್ಯೋತಿಷಶಾಸ್ತ್ರಪ್ರವರ್ತಕಾಃ ||
ಈ ಹದಿನೆಂಟು ಮುನಿಗಳು ಇಂದಿಗೂ ನಮನೀಯರಾಗಿದ್ದಾರೆ. ಈ ಅಷ್ಟಾದಶ ಪ್ರವರ್ತಕರ ಸಿದ್ಧಾಂತಗಳು ಕಾಲವಶದಿಂದ ಕೆಲವು ಭಾಗ ನಶಿಸುತ್ತಾ ಬಂದರೂ, ವರಾಹಮಿಹಿರ, ಭಟ್ಟೋತ್ಪಲ, ಪರಾಶರರು ಈ ಶಾಸ್ತ್ರ ನಾಶವಾಗದಂತೆ ಗ್ರಂಥಗಳನ್ನು ರಚಿಸಿ ಮಹದುಪಕಾರ ಮಾಡಿದ್ದಾರೆ.
ಇದುವರೆಗೂ ಜ್ಯೋತಿಷ್ಯದ ಉಲ್ಲೇಖ ಎಲ್ಲಿ ಬಂದಿದೆ? ಇದು ಎಷ್ಟು ಪ್ರಾಚೀನ ಎಂದು ತಿಳಿದ ನಂತರ, ಇಷ್ಟು ಬೃಹತ್ತಾದ ಶಾಸ್ತ್ರವನ್ನು ಹೇಗೆ ತಿಳಿಯುವುದು? ಹೇಗೆ ಓದುವುದು? ಎಂದು ಈಗ ನೋಡೋಣ.
ಜ್ಯೋತಿಷವನ್ನು ಅಧ್ಯಯನ ಮಾಡಲು ಅನುಕೂಲವಾಗುವಂತೆ ಇದನ್ನು ಮೊದಲು ಮೂರು ಭಾಗಗಳನ್ನಾಗಿ ವಿಂಗಡಿಸಲಾಯಿತು. ಇದನ್ನೇ ‘ತ್ರಿಸ್ಕಂಧಜ್ಯೋತಿಷ್ಯ’ ಎಂದು ಕರೆಯುವುದು. ಆ ಮೂರು ವಿಭಾಗಗಳು ಯಾವುದೆಂದರೆ:
ಸಿದ್ಧಾಂತ
ಸಂಹಿತೆ
ಹೋರಾ
ಇವುಗಳನ್ನು ಈಗ ವಿವರವಾಗಿ ತಿಳಿಯೋಣ.
1. ಸಿದ್ಧಾಂತ: ಸಿದ್ಧಾಂತ ವಿಭಾಗವು ಖಗೋಳಶಾಸ್ತ್ರ(Astronomy)ದ ವಿವರಣೆಯಾಗಿದೆ.
ಖಗೋಳ ವಿದ್ಯಮಾನಗಳಾದ ಗ್ರಹ, ನಕ್ಷತ್ರ, ಗ್ರಹಣಗಳ ಲೆಕ್ಕಾಚಾರವನ್ನು ಈ ವಿಭಾಗದಲ್ಲಿ ತಿಳಿಯಬಹುದು. ಗ್ರಹಗಳು ಈಗ ಎಲ್ಲಿ ಚಲಿಸುತ್ತಿವೆ? ನಕ್ಷತ್ರಗಳು ಎಷ್ಟು ದೂರದಲ್ಲಿವೆ ಸೂರ್ಯನಿಂದ? ಇಂತಹ ಮಾಹಿತಿಗಳನ್ನು ತಿಳಿಸುವುದು ಸಿದ್ಧಾಂತ. ಈ ಸಿದ್ಧಾಂತ ಭಾಗಕ್ಕೆ ವರಾಹಮಿಹಿರ ಹಾಗೂ ಆರ್ಯಭಟರು ಒಳ್ಳೆಯ ಮಾಹಿತಿಗಳನ್ನು ಒದಗಿಸಿರುವರು. ಇವರ ಕೊಡುಗೆ ಅಪಾರ.
2. ಸಂಹಿತೆ: ಈ ಭಾಗದಲ್ಲಿ ನಾವು ಜನಸಾಮಾನ್ಯರಿಗೆ ಬೇಕಾದ ವಿಚಾರ ಹಾಗೂ ದೇಶ, ರಾಜ್ಯದ ಭವಿಷ್ಯವನ್ನು ತಿಳಿಯಲು ಸಾಧ್ಯವಿದೆ. ಜನಸಾಮಾನ್ಯರಿಗೆ ಉತ್ತು-ಬಿತ್ತಲು ಬೇಕಾದ ಮಳೆ-ಬೆಳೆಗಳ ವಿಚಾರ. ಭೂಕಂಪ, ಗಾಳಿ-ಮೋಡಗಳ ವಿಚಾರ ಎಲ್ಲವನ್ನೂ ತಿಳಿಸಿಕೊಡುವುದು. ಜೊತೆಗೆ ದೇಶ, ರಾಜ್ಯಕ್ಕೆ ಬರುವ ಆಪತ್ತುಗಳ ಬಗ್ಗೆಯೂ ತಿಳಿಸಿಕೊಡುವುದು.
3. ಹೋರಾ: ಈ ಹೋರಾಭಾಗದ ಅಧ್ಯಯನವೇ ಜ್ಯೋತಿಷದ ಭಾಗವಾಗಿದೆ. ಇಲ್ಲಿ ಗ್ರಹಗಳ ವಿಚಾರ, ರಾಶಿ, ನಕ್ಷತ್ರಗಳ ವಿಚಾರಗಳನ್ನೆಲ್ಲಾ ಹೇಳಲಾಗಿದೆ. ಇದನ್ನು ಚೆನ್ನಾಗಿ ತಿಳಿದುಕೊಂಡರೆ, ಒಬ್ಬ ವ್ಯಕ್ತಿಯ ಮೇಲೆ ಇವುಗಳ ಪ್ರಭಾವ ಹೇಗಾಗುವುದು ಎಂದು ಹೇಳಲು ಸಾಧ್ಯವಾಗುವುದು. ಹಗಲು-ರಾತ್ರಿಗಳಲ್ಲಿ ನಡೆಯುವ ಎಲ್ಲಾ ಕೆಲಸಗಳ ಬಗ್ಗೆ ಮಾಹಿತಿ ನೀಡುವುದೇ ಹೋರಾ. ಹಗಲು-ರಾತ್ರಿ ಸತತವಾಗಿ ಎನ್ನಲು ‘ಅಹೋರಾತ್ರಿ’ ಎನ್ನುತ್ತೇವೆ. ಅಹೋರಾತ್ರಿಯಲ್ಲಿ, ಮಧ್ಯದ ಪದವನ್ನು ಪರಿಗಣಿಸಿ ‘ಹೋರಾಶಾಸ್ತ್ರ’ ಎಂದು ಪ್ರಸಿದ್ಧಿಯಾಗಿರುವುದು. ಈ ಹೋರಾಶಾಸ್ತ್ರಕ್ಕೆ ಪರಾಶರ ಪದ್ಧತಿಯೇ ಮೂಲ. ಈ ಪದ್ಧತಿಯೇ ಎಲ್ಲಕ್ಕೂ ಮೂಲವೆನ್ನಬಹುದು.
ಜ್ಯೋತಿಷ ಎಂದರೇನು? ಅದರ ಮೂಲವೆಲ್ಲಿ? ಅದರ ವಿಭಾಗಗಳು ಯಾವುವು? ಈ ವಿವರಗಳನ್ನು ನೋಡಿದೆವು. ಮುಂದಿನ ಸಂಚಿಕೆಯಲ್ಲಿ ಜ್ಯೋತಿಷಶಾಸ್ತ್ರದ ಇತರ ಪದ್ಧತಿಗಳನ್ನು ತಿಳಿಯೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.