ಗ್ರಹಗಳ ಚಲನೆ, ರಾಶಿಯಿಂದ ರಾಶಿಗೆ ಬದಲಾವಣೆಯಾಗುವಾಗ ಪ್ರತಿ ರಾಶಿಯವರ ಮೇಲೆಯೂ ವಿಭಿನ್ನ ಪ್ರಭಾವ ಉಂಟು ಮಾಡುತ್ತದೆ. ಹುಟ್ಟಿದ ಸಮಯದ ಕುಂಡಲಿಯ ಗ್ರಹಗಳ ಸ್ಥಿತಿಗಳು ಇಂದಿನ ಆಯಾ ಗ್ರಹಗಳು ಸಂಚರಿಸುವ ರೀತಿಗನುಗುಣವಾಗಿ ಒಳ್ಳೆಯದ್ದೋ, ಕೆಟ್ಟದ್ದೋ ಎಂಬ ಫಲಗಳನ್ನು ನೀಡುತ್ತವೆ. ಈ ಕೆಟ್ಟ ಫಲಗಳೋ, ಒಳ್ಳೆಯ ಫಲಗಳೋ ಒಬ್ಬ ವ್ಯಕ್ತಿಯ ಜಾತಕದಲ್ಲಿ ಪ್ರಧಾನವಾಗಿ ಯಾವ ಗ್ರಹದ ಮಹಾದಶ ಕಾಲ, ಯಾವ ಗ್ರಹದ ಭುಕ್ತಿ, ಅಂತರ್ಭುಕ್ತಿಗಳ ಕಾಲ ಎಂಬುದರ ಮೇಲೆಯೂ ಅವಲಂಬಿಸಿಕೊಂಡು ಹೋಗುತ್ತದೆ.
ಗ್ರಹಗಳು ಯಾವ ಸ್ವಭಾವ ಹೊಂದಿದ ರಾಶಿಯಿಂದ ಯಾವ ಸ್ವಭಾವ ಹೊಂದಿದ ರಾಶಿಗೆ ಪ್ರವೇಶಿಸುತ್ತಿದೆ ಎಂಬುದನ್ನೂ ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಈಗ ವಾತ ತತ್ವದ ರಾಶಿಯಾದ ಮಿಥುನ ರಾಶಿಯಿಂದ ಜಲ ತತ್ವದ ರಾಶಿಯಾದ ಕರ್ಕ ರಾಶಿಗೆ ಬಂದಾಗ ಏನು? ಎತ್ತ ಎಂಬುದೂ ಪರಿಗಣಿಸಬೇಕಾದ ವಿಷಯವಾಗುತ್ತದೆ. ಅಂತೂ ಒಂದು ಗ್ರಹದ ರಾಶಿ ಬದಲಾವಣೆಯ ಫಲವಾಗಿ ಅನೇಕ ವಿಚಾರಗಳು ನೋಡ ನೋಡುತ್ತಿದ್ದಂತೆ ಆಚೆ ಈಚೆ ಆಗುತ್ತವೆ. ಹೇಗೆ ಎರಡು ದೇಶಗಳ ನಡುವಣ ಯುದ್ಧ, ಅಂತರರಾಷ್ಟ್ರೀಯವಾಗಿ ಇತರ ಶಾಂತ ರೀತಿಯಲ್ಲಿ ಇರುವ ದೇಶಗಳ ಮೇಲೆಯೂ ತನ್ನದೇ ಆದ ಕಾವನ್ನು ನಿರ್ಮಿಸಬಹುದೋ ಹಾಗೆ.
ಇದೀಗ ಮಿಥುನ ರಾಶಿಯಲ್ಲಿ ಇರುವ ಗುರು ಗ್ರಹವು ಬರುವ 18ನೇ ತಾರೀಖಿನಂದು ಕರ್ಕಾಟಕ ರಾಶಿಯನ್ನು ನೇರ ಪಥದಲ್ಲಿಯೇ ಪ್ರವೇಶಿಸುತ್ತದೆ. ಹೀಗೆ ಪ್ರವೇಶಿಸುವ ಗುರು ಗ್ರಹ ನಂತರದಲ್ಲಿ ಕರ್ಕಾಟಕ ರಾಶಿಯಲ್ಲಿ ಇದೇ ನವಂಬರ್ 11 ರಂದು ವಕ್ರ ಸ್ಥಿತಿ ಪಡೆಯುತ್ತ ಪಡೆಯುತ್ತ ಹಿಂತಿರುಗಿ (ಬರುವ ಡಿಸೆಂಬರ್ 5 ರಂದು ವಕ್ರಿಯಾಗಿಯೇ) ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ನೇರ ಪಥದಲ್ಲಿ ಇದ್ದ ಶಕ್ತಿ ವಕ್ರೀಯವಾದಾಗ ಅದರ ಪರಿಣಾಮಗಳೂ ಆಯಾ ರಾಶಿಗಳ ಸದ್ಯದ ಬಲಾಬಲಗಳ ಮೇಲಿಂದ ಒಬ್ಬ ವ್ಯಕ್ತಿಯ ಜನ್ಮ ಕುಂಡಲಿಯ ಮೇಲೆ ವಿವಿಧ ರೀತಿಯ ಸಾಧಕ ಬಾಧಕ ಅಂಶಗಳ ರೂಪುರೇಷೆಗಳನ್ನು ಪಡೆದುಕೊಳ್ಳುತ್ತವೆ.
ಯಾವಾಗಲೂ ಯಾವ ರಾಶಿಯಿಂದ ಗುರು ಗ್ರಹವು 2, 5, 7, 9 ಮತ್ತು 11ನೇ ಮನೆಗೆ ಬರುತ್ತದೆಯೋ ಆ ರಾಶಿಯವರಿಗೆ ಗುರು ಬಲ ಒದಗಿ ಬರುತ್ತದೆ. ಎರಡನೇ ಮನೆಗೆ ಬಂದಾಗ ಧನ ಲಾಭಕ್ಕೆ ಕಾರಣನಾಗಬಹುದು. ಹಾಗೆಯೇ ಕುಟುಂಬದಲ್ಲಿ ಶಾಂತಿ ತರುವ ಔದಾರ್ಯ ತೋರಬಹುದು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿಕೊಡಬಹುದು. ಮಹತ್ತರವಾದ ವಾಕ್ ಚಾತುರ್ಯವನ್ನು ಅನುಗ್ರಹಿಸಿ ವರ್ಚಸ್ಸಿಗೆ ಸಿದ್ಧಿ ರೂಪಿಸಿಕೊಡಬಹುದು.
ಐದನೇ ಮನೆಯಿಂದಾಗಿ ಒದಗಿದ ಗುರು ಬಲ ಮಕ್ಕಳ ವಿಷಯದಲ್ಲಿ ಧಾರಾಳಿಯಾಗಿ ಮಕ್ಕಳ ಭವಿಷ್ಯವನ್ನು ಗಟ್ಟಿಯಾಗಿ ಕಟ್ಟಿಕೊಡಬಹುದು. ವಿವೇಕಿಗಳ ಜತೆಗಿನ ಸ್ನೇಹ ಆ ಮೂಲಕ ಲಾಭ, ಬೌದ್ಧಿಕ ಅರಿವುಗಳೆಲ್ಲ ಗಟ್ಟಿತನ ಪಡೆದುಕೊಳ್ಳುವ ಅದೃಷ್ಟವೂ ಲಭ್ಯ. ಏಳನೇ ಮನೆಯ ಗುರು ಬಲ ದಾಂಪತ್ಯದಲ್ಲಿ ನೆಮ್ಮದಿ ನಿರ್ಮಿಸುತ್ತದೆ. ಮದುವೆ ಆಗದಿರುವವರಿಗೆ ಮದುವೆಗೂ ಕಾಲ ಕೂಡಿ ಬರಲು ಅನುಕೂಲವಾಗುತ್ತದೆ. ಒಂಭತ್ತನೇ ಮನೆಯ ಗುರು ಬಲದಿಂದ ಹಲವಾರು ಅದೃಷ್ಟಗಳು ದಿಢೀರನೆ ಒಲಿದು ಬರುವ ಸಾಧ್ಯತೆಯೂ ಇದೆ. ಪುಣ್ಯ ಕ್ಷೇತ್ರಗಳ ದರ್ಶನ, ವಿದೇಶ ಪ್ರವಾಸದ ಯೋಗವೂ ಒದಗಿಬರುವ ಸಾಧ್ಯತೆ ಇದೆ. ಹನ್ನೊಂದನೇ ಮನೆಯ ಗುರು ಬಲ ಅನೇಕ ರೀತಿಯ ಅಗಾಧವಾದ ಲಾಭಕರ ಪ್ರಾಪ್ತಿಗೆ ಅವಕಾಶ ನಿರ್ಮಿಸಿಕೊಡುತ್ತದೆ.
ಕರ್ಕಾಟಕ ರಾಶಿಯ ಗುರು ಪ್ರವೇಶದಿಂದಾಗಿ ಮಿಥುನ, ಕನ್ಯಾ, ವೃಶ್ಚಿಕ ಮಕರ ಹಾಗೂ ಮೀನ ರಾಶಿಗಳ ಜನರಿಗೆ ಗುರು ಬಲ ಲಭಿಸಲಿದೆ. ಹಾಗೆಯೇ ಇರುವ ಗುರು ಬಲವನ್ನು ವೃಷಭ, ಸಿಂಹ, ತುಲಾ, ಧನು ಹಾಗೂ ಕುಂಭ ರಾಶಿ ಜನರು ಕಳಕೊಂಡಿದ್ದಾರೆ.
ಹೀಗೆ ಆಕಾಶ ಕಾಯಗಳಾದ ಸೂರ್ಯ ಚಂದ್ರ ಅಥವಾ ಉಳಿದ ಯಾವುದೇ ಗ್ರಹಗಳು ತಮ್ಮ ತಮ್ಮ ಚಲನವಲನಗಳ ಸಂದರ್ಭದಲ್ಲಿ ಹಲವು ವಿಶಿಷ್ಟವಾದ ಶಕ್ತಿಗಳನ್ನು ಹಲವು ರಾಶಿಗಳಿಗೆ ಅಥವಾ ಅನ್ಯ ಗ್ರಹಗಳಿಗೆ ತುಂಬಿ ಕೊಡುತ್ತವೆ. ಹಾಗೆಯೇ ಇನ್ನಿತರ ರಾಶಿ ಅಥವ ಗ್ರಹಗಳ ಶಕ್ತಿಯನ್ನು ನಿರ್ದಾಕ್ಷಿಣ್ಯವಾಗಿ ಕರಗಿಸಿ ಬಿಡುತ್ತವೆ. ಗುರು ಬಲ ಕಳಕೊಂಡವರು ಗುರು ಗ್ರಹ ಸಂವೇದನ ಧ್ಯಾನ ಮಾಡಿ ಗುರುವಿನ ಒಲುಮೆ ಸಂಪಾದಿಸಿಕೊಳ್ಳಿ. ಗುರು ಶಕ್ತಿ ಸಂವರ್ಧಕ ಧಾತು ಧಾರಣವನ್ನೂ ಮಾಡಿಕೊಳ್ಳಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.