
ಪ್ರತೀ ವಾರ ಇಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಆಗಾಗ ಕರ್ನಾಟಕದ ಕೆಲವು ಪ್ರಮುಖ ರಾಜಕೀಯ ನಾಯಕರ ಕುರಿತು ಬರೆದಿರುವುದನ್ನು ನೀವು ಗಮನಿಸಿರುತ್ತೀರಿ. ಆದರೆ, ಈ ಬಾರಿ ನಮ್ಮ ರಾಜ್ಯದ ರಾಜಕೀಯ ಸಂದರ್ಭ ಎದುರಿಸಬೇಕಾದ ಸವಾಲುಗಳ ಬಗ್ಗೆ ಗ್ರಹಗಳು ಯಾವ ರೀತಿ ಹುನ್ನಾರ ನಡೆಸುತ್ತಿವೆ ಎಂಬುದನ್ನು ತಿಳಿಯೋಣ.
ಸದ್ಯ ಬಿಹಾರ ವಿಧಾನಸಭಾ ಚುನಾವಣೆಯ ಪರಿಣಾಮದ ಪ್ರತಿಧ್ವನಿಯಾಗಿ ಕರ್ನಾಟಕ ರಾಜ್ಯದ ರಾಜಕೀಯ ಸ್ಥಿತಿ ಗತಿಗಳು ಅತ್ಯಂತ ಸೂಕ್ಷ್ಮವಾದ ಮಿಸುಕಾಟಗಳನ್ನು ಆಳುವ ಪಕ್ಷ,ವಿರೋಧ ಪಕ್ಷದ ಮುತ್ಸದ್ದಿಗಳು ಎಂದೇ ಗುರುತಿಸಿಕೊಂಡಿರುವ ನಾಯಕರುಗಳಲ್ಲಿ ತರುತ್ತಲಿದೆ. ಈ ಮಿಸುಕಾಟಗಳಿಗೆ ಭಾರತೀಯ ಜ್ಯೋತಿಷ ವಿಜ್ಞಾನದ ಪ್ರಕಾರ ಪ್ರಮುಖವಾಗಿ ಗುರು ಗ್ರಹದ ವಕ್ರ ಸ್ಥಿತಿಯೇ ಕಾರಣವಾಗಿರುತ್ತದೆ. ತನ್ನ ಚಲನೆಗೆ ವಕ್ರತ್ವ ಲೇಪದ ಆವರಣವನ್ನು ಪಡೆದುಕೊಂಡಿರುವ ಗುರು ಗ್ರಹವು, ಜಲ ತತ್ವದ ರಾಶಿಯಾದ ಕರ್ಕಾಟಕದಿಂದ ಡಿಸೆಂಬರ್ 5 ರಂದು ಹಿಂತಿರುಗಿ ವಾತ (ಗಾಳಿ) ತತ್ವದ ಮಿಥುನ ರಾಶಿಯನ್ನು ವಕ್ರಿಯಾಗಿಯೇ ಪ್ರವೇಶವನ್ನು ಪಡೆಯುತ್ತಿದೆ.
ಈ ಕಾರಣಕ್ಕಾಗಿಯೇ ನಮ್ಮ ರಾಜ್ಯ ರಾಜಕೀಯ ವರ್ತಮಾನದ ಹಲವು ಪ್ರಧಾನ ಶಕ್ತಿಶಾಲಿ ಹಾಗೂ ಪ್ರಭಾವೀ ನಾಯಕರ ಮೇಲೆ ಈ ಗುರು ಪ್ರವೇಶ ಮೂಲಭೂತವಾಗಿ ಸಕಾರಾತ್ಮಕವೋ ಅಥವಾ ನಕಾರಾತ್ಮಕವೋ ಆದ ಪರಿಣಾಮಗಳನ್ನು ಕೊಡಲು ಬದಲಾವಣೆಗಳಿಗಾಗಿ ಮುಂದಾಗುತ್ತಿದೆ. ನಮಗೆ ತಿಳಿದಂತೆ ಜಾತಿ ರಾಜಕಾರಣ ಬಿಟ್ಟು ನಮ್ಮ ರಾಜ್ಯದ ರಾಜಕೀಯ ವಾತಾವರಣ ಉಸಿರಾಡಲು ಸಾಧ್ಯವೇ ಇಲ್ಲ. ಹಾಗೆಯೇ ಇದು ಹೌದಾದರೂ ಕರ್ನಾಟಕದಲ್ಲಿ ತಮ್ಮ ರಾಜಕೀಯ ಕುಶಲತೆಯಿಂದ ದೊಡ್ಡ ನಾಯಕರುಗಳು ಎಂದು ಗುರುತಿಸಿಕೊಂಡ ಒಂದು ದಂಡೇ ಇದೆ. ಅನೇಕ ಕಾರಣಗಳಿಗಾಗಿ ರಾಜಕೀಯ ಸ್ಥಿತಿ ಗತಿಗಳ ವಿಚಾರದಲ್ಲಿ ಗಮನಾರ್ಹ ಬದಲಾವಣೆ ತರಬಲ್ಲ ಈ ನಾಯಕರುಗಳ ಮನೋ ವಲಯದಲ್ಲಿನ ಸ್ವಯಂ ಸಂವಿಧಾನಗಳು ವಿಚಿತ್ರವಾದ ಸಮೀಕರಣಗಳನ್ನು ದಾಳಗಳನ್ನಾಗಿಸಿಕೊಳ್ಳುವ ಸಾಧ್ಯತೆಗಳಿಂದ ಸದ್ಯ ವಕ್ರಿಯಾದ ಗುರು ಗ್ರಹವು ರಾಜ್ಯದ ರಾಜಕೀಯ ಕಕ್ಷೆಯನ್ನು ಭಿನ್ನವಾಗಿ ಹರಳುಗಟ್ಟಿಸಬಹುದು.
ಇವರುಗಳು ಇಡಬೇಕಾದ ಹೆಜ್ಜೆಗಳನ್ನು ಕ್ಷಿಪ್ರವಾದ ಭಿನ್ನ ವೇಗದಲ್ಲಿ ಬದಲಿಸಿ, ಈವರಗಿನ ಸಮೀಕರಣಗಳು ಬೇರೊಂದು ಸಾಧ್ಯತೆಗೆ ಬದ್ಧಗೊಂಡು, ರಾಜಕೀಯದ ಇದುವರೆಗಿನ ಪಟ್ಟುಗಳು, ಹೀಗೇ, ಇಷ್ಟು ಎಂದು ಇರಬೇಕಾದ ವರ್ತಮಾನದ ಅಳತೆಗಳು ಅದಲುಬದಲಾಗುವ ವಿಚಿತ್ರ ವಿಷಯದಲ್ಲಿ ನಾವೆಲ್ಲ ಪ್ರೇಕ್ಷಕರಾಗುವ ಸಾಧ್ಯತೆ ಅಧಿಕವಾಗಿದೆ. ವಕ್ರತ್ವ ಹೊಂದಿದ ಗುರು ಗ್ರಹಕ್ಕೆ ಆತಂಕಕಾರಿಯಾದ ಕುಂಭದಲ್ಲಿನ ರಾಹು ಗ್ರಹ ಖಳ ನಾಯಕನಾಗಿರುವುದೇ ಈ ಬದಲಾವಣೆಗೆ ಬೇಕಾದ ಮೂಲ ವಸ್ತುವಾಗಿದೆ. ಇಡೀ ನಮ್ಮ ದೇಶದ ರಾಜಕಾರಣಕ್ಕೆ ಕೂಡಾ ಆಂತರಿಕ ಭದ್ರತೆಯ ವಿಚಾರ ಆಮೂಲಾಗ್ರ ಬದಲಾಗಬೇಕಾದ ಅನಿವಾರ್ಯತೆಗಾಗಿಯೂ ಇದು ನಿರ್ದೇಶನ ಕೊಡುತ್ತಿದೆ.
ಒಂದು ದಶಕದಿಂದಲೂ ಗಮನಿಸತ್ತ ಬಂದಂತೆ ಸೂರ್ಯನ ಪ್ರಾಬಲ್ಯ ಸಿಕ್ಕಿದಾಗೆಲ್ಲ ಸಿದ್ದರಾಮಯ್ಯನವರು ತಮ್ಮ ಪಾಲಿಗೆ ವರ್ತಮಾನ ಹದವಾಗಿಯೇ ಮುದಗೊಳ್ಳುವ ಕಾಲ ಘಟ್ಟವನ್ನು ಪಡೆದವರಾಗಿರುತ್ತಾರೆ. ಸದ್ಯ ಬರುವ ಜೂನ್ ಮಧ್ಯ ಭಾಗದವರೆಗೂ ವರ್ತಮಾನ ಸೂರ್ಯನ ಕಾರಣದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಲದ ಘಟ್ಟ ಮೃದುವಾಗಿಯೇ ಇದ್ದು ಅವರ ಸ್ಥಾನ ಭದ್ರವಾಗಿರುತ್ತದೆ. ಆದರೆ ತದನಂತರ ಅವರಿಗೆ ಸುಖ ನೀಡಲು ಹಿಂದೇಟು ಹಾಕುವ ರಾಹು ಗ್ರಹ, ಕುಂಭದಲ್ಲಿ ಬಹು ಯಾತನಾಮಯನಾಗಬಹುದು. ಯಾತನಾಮಯ ಪರಿಸ್ಥಿತಿ ಇದೇ ರಾಹುವಿನ ಕಾರಣಕ್ಕಾಗಿ ಹೇಗೆ ಬರಬಹುದು ಎಂಬುದು ಸೂರ್ಯನ ಯಜಮಾನತ್ವದ ಮನೆಯದ ಸಿಂಹ ರಾಶಿಯಲ್ಲಿ ಇರುವ ಕೇತುವಿನ ಮೇಲೆ ಅವಲಂಬಿಸಿದೆ.
ಈ ಕೇತು ಸಿದ್ದರಾಮಯ್ಯನವರ ಪಾಲಿಗೆ ಅನೇಕ ರೀತಿಯ ವಿಘ್ನಗಳನ್ನು ಸೃಷ್ಟಿಸುವ ಕೇಡಿಗನಾಗಿ ಈಗಲೂ ಇರುತ್ತಾನೆ. ಮುಂದೆಯೂ ಹೆಚ್ಚೇ ಕಟುವಾಗಿ ಇರುತ್ತಾನೆ. ಈಗಲೂ ಹಲವು ಸಲ ಅನೇಕ ವಿಚಾರಗಳಲ್ಲಿ ಸಿದ್ದರಾಮಯ್ಯ ಕೇತು ಗ್ರಹದ ಕಾರಣದಿಂದ ಅಸಹಾಯಕರಾಗುವುದನ್ನು ನಾವು ಕಾಣುತ್ತಲೇ ಇದ್ದೇವೆ. ಕೌಟುಂಬಿಕ ವಿಚಾರಕ್ಕೆ ಕೂಡಾ ಅವರು ಗಮನ ಹರಿಸಬೇಕಾಗುತ್ತದೆ.
ಆದರೆ, ಸೂರ್ಯನ ಮೂಲಕ ಅವರು ಸದಾ ಕಾಲವೂ ಅಸಾಧ್ಯ ಧೈರ್ಯದಿಂದ ಯಾರನ್ನೇ ಆಗಲಿ ಎದುರಿಸುತ್ತೇನೆ ಎಂಬ ವಿಶ್ವಾಸ ಇರುತ್ತದೆ. ಈ ರೀತಿಯ ವಿಶ್ವಾಸ ಮುಂದಿನ ಸುಮಾರು 6 ತಿಂಗಳುಗಳ ಕಾಲ ದೊಡ್ಡ ಅದೃಷ್ಟವೇ ಹೌದು. ಮೇ 2026 ರ ಮಧ್ಯ ಭಾಗದಿಂದ ಮಾತ್ರ ಕೆಲವು ಹಿನ್ನಡೆಗಳು ಕೇತು ಗ್ರಹದ ಕಾರಣದಿಂದಾಗಿ ಅವರ ಪಾಲಿಗೆ ಇದ್ದಕ್ಕಿದ್ದಂತೆ ಆರಂಭವಾಗಬಹುದು. ಕೇತು ಗ್ರಹ ನಮ್ಮ ಪರಂಪರೆಯ ವಿಘ್ನರಾಜ ಗಣಪತಿಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಇಂದು ಬಲಿಷ್ಠವಾಗಿದ್ದಾರೆ ಎಂದೇ ಸ್ಪಷ್ಟವಾಗಿ ಕಾಣಿಸುತ್ತಿರುವ ಮುಖ್ಯಮಂತ್ರಿಗಳುನ ಹಲವು ವಿಚಾರಗಳಲ್ಲಿ ಮುಂದೆ ಏನೋ ಏಕಾಏಕಿ ಹಲವು ವಿಘ್ನಗಳು ಎದುರಾಗಿ ಬಂದಾಗ ಕಷ್ಟವೇ ಆಗಿಹೋಗುತ್ತದೆ. ಗಟ್ಟಿಗ ಸಿದ್ದರಾಮಯ್ಯ ಹೀಗಾಗಿ ತಾನು ಹೊಂದಿದ ರಾಜಕೀಯವಾದ ಬಿಗಿ ಹಿಡಿತವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಅಧಿಕವಾಗಿಯೇ ಇರುತ್ತವೆ. ಹಾಗೆಯೇ ವಿಘ್ನ ವಿನಾಶಕ ಗಣೇಶನನ್ನು ಸಿದ್ದರಾಮಯ್ಯ ಆರಾಧಿಸಲು ಅವರದ್ದೇ ಆದ ನಂಬಿಕೆಗಳು ಅವರಿಗೆ ಸಾಧ್ಯ ಮಾಡೀತೇ ಎಂಬುದು ಒಂದು ಒಗಟೇ ಸರಿ. ಗಣೇಶನ ಆರಾಧನೆ ಖಂಡಿತವಾಗಿ ಬೇಕು. ದೇವರನ್ನು ನಾನು ನಂಬದಿರುವ ನಾಸ್ತಿಕ ಅಲ್ಲ ಎಂಬುದನ್ನು ಆಗಾಗ ಅವರು ಹೇಳಿಯೂ ಇದ್ದಾರೆ.
2026 ರ ಮಾರ್ಚ್ ಎರಡನೇ ವಾರದವರೆಗೆ ಗುರು ವಕ್ರಿಯಾಗಿ ಮಿಥುನ ರಾಶಿಯಲ್ಲಿ ಇರುವುದರಿಂದ ಕೆಲವು ಕುತೂಹಲಕಾರಿ ಬೆಳವಣಿಗೆಗಳು ಕಾಂಗ್ರೆಸ್, ಬಿಜೆಪಿ ಹಾಗಗೂ ಜೆಡಿಎಸ್ ಪಕ್ಷಗಳ ಸಾಮೂಹಿಕ ಪರದಾಟಗಳಿಗೆ ಕಾರಣವಾಗಬಹುದು. ಪರದಾಟಗಳ ಮತ್ತೊಂದು ಕೊನೆಯು ಮಧ್ಯಂತರ ಚುನಾವಣೆಯ ಕೂಗನ್ನು ಎಬ್ಬಿಸುವ ಕಾಲಘಟ್ಟದ ನೀರಡಿಕೆಯಾಗಿಯೂ ಪರಿವರ್ತನಗೊಳ್ಳಬಹುದು. ಜಲ ತತ್ವದಲ್ಲಿ ಸ್ಥಿತನಾದ ಶನೈಶ್ಚರ ನಮ್ಮ ರಾಜ್ಯದ ಅನೇಕ ಪ್ರಮುಖರ ಪಾಲಿಗೆ ಮುಂದಿನ ಎರಡೂವರೆ ವರ್ಷಗಳ ಕಾಲ ಸುಮ್ಮನಿದ್ದರೆ ಒಂದು ಕಷ್ಟ, ಸುಮ್ಮನಿರದಿದ್ದರೆ ಇನ್ನೊಂದು ನಷ್ಟ ತರುವ ಸಾಧ್ಯತೆ ಇದೆ. ಹೀಗೆ ಎರಡೂ ಕಡೆ ಹರಿತ ಹೊಂದಿದ ಚೂರಿಯಂತಿದ್ದಾನೆ.
2026ರ ಮಾರ್ಚ್ ಅಥವಾ ಏಪ್ರಿಲ್ ತಿಂಗಳುಗಳ ಕಾಲ ರಾಜ್ಯದ ಕಾಲ ಘಟ್ಟದಲ್ಲಿ ರಾಜಕೀಯ ರಂಗದ ಸ್ಥಿತಿ ಹೆಚ್ಚು ಗಮನಾರ್ಹವಾದ ಏರುಪೇರುಗಳನ್ನು ಕಂಡರೆ ಆಶ್ಚರ್ಯವೇನಿಲ್ಲವೇ? ಎಂಬ ಪ್ರಶ್ನೆಯನ್ನು ಸದ್ಯದ ಗ್ರಹ ಸ್ಥಿತಿ ಎದ್ದು ಬರುವಂತೆ ಮಾಡುತ್ತಿದೆ ಎಂಬುದು ಸದ್ಯ ಸುಳ್ಳೇನಲ್ಲ. ಆದರೂ ಸದ್ಯದ ಸೂರ್ಯ ಸಿದ್ದರಾಮಯ್ಯನವರು ನಿಂತ ನೆಲವನ್ನು ತಣ್ಣಗೇ ಇಟ್ಟಿದೆ. ಇದು ಅವರ ಪಾಲಿಗೆ ಸದ್ಯದ ಸಮಾಧಾನಕರ ವಿಚಾರ. ಆದರೆ ಕಾಲವು ನಿಧಾನವಾಗಿ ಜಾರಿದಂತೆ ಬಿಸಿಯ ಕುದಿಗಾಗಿ ರಾಹು ಹವಣಿಸಿಯೇ ತೀರುತ್ತಾನೆ.
140ರಷ್ಟು ಸಂಖ್ಯೆಯ ಶಾಸಕರ ಬಲವಿರವ ಕಾಂಗ್ರೆಸ್ ಬುಡವೇ ಮುಂದೆ ಅಲ್ಲಾಡುವುದೆ ಹಾಗಾದರೆ? ಇದು, ಕಾಂಗ್ರೆಸ್‌ಗೆ ಮಾತ್ರ ಸಂಭವಿಸಿಲ್ಪಡುವ ಆಂತರಿಕ ಪ್ರಕ್ಷುಬ್ಧತೆಯೋ? ಅಥವಾ ಬಿಜೆಪಿ ಮತ್ತು ಜೆಡಿಎಸ್ ಕೂಡಾ ತಮ್ಮ ತಮ್ಮ ಬುಡವನ್ನು ಗಟ್ಟಿಗೊಳಸಿಕೊಳ್ಳುವ ಅನಿವಾರ್ಯತೆ ಇರುತ್ತದೋ ಎಂಬಿತ್ಯಾದಿ ಪ್ರಶ್ನೆ ಎದ್ದು ತಿಂಗಳುಗಳೇ ಕಳೆದಿವೆ.
ಕಾಂಗ್ರೆಸ್‌ನ ರಾಜಣ್ಣನವರ ಜಾತಕದ ಚಂದ್ರ, ಬಸವನ ಗೌಡ ಯತ್ನಾಳ ಜಾತಕದ ಶುಕ್ರ ಅವರ ಪಾಲಿಗೆ ಒಳಿತು ತರುವ ಪ್ರಾಬಲ್ಯ ಪಡೆದಿವೆ. ಅದಾಗ್ಯೂ ಕ್ರಮವಾಗಿ ಅವರುಗಳ ಮಾತಿನ ಉಗ್ರ ಖಾರಕ್ಕೆ ಕಾರಣವಾಗುವ (ರವಿ ಬುಧ ಗ್ರಹಗಳ ಕಾರಣದಿಂದ ಇದು ಸಾಧ್ಯವಾಗಿದೆ.) ಅನಿಷ್ಟ ಕಳೆದುಕೊಳ್ಳಲು ದೇವಿ ಶಾಂಭವಿ ಹಾಗೂ ಗುರು ದತ್ತಾತ್ರಯರ ಆರಾಧನೆ ಬೇಕು. ಆಗ ಇವರುಗಳ ಪಾಲಿನ ಸಂಪನ್ನ ದಾರಿಯ ಅದೃಷ್ಟ ಒಲಿಯಬಹುದು.
ಒಟ್ಟಿನಲ್ಲಿ ಶನೈಶ್ಚರ ಸ್ವಾಮಿ ಹಾಗೂ ಗುರು ಗ್ರಹಗಳು ಮೂರೂ ಪಕ್ಷಗಳ ಪ್ರಮುಖ ನಾಯಕರುಗಳನ್ನು ರಾಹುವಿನ ಕಾರಣದಿಂದಾಗಿ ಶಾಂತಿಯಿಂದ ಇರಲು ಬಿಡದಂತಿವೆ. ಹೀಗಾಗಿ ಈ ಅಶಾಂತತೆಯೇ ಸಾಕಷ್ಟು ಪ್ರಬಲ ಧ್ರುವೀಕರಣ ಒಂದನ್ನು ಕರ್ನಾಟಕ ರಾಜಕೀಯ ರಂಗದಲ್ಲಿ ಕೆಲವೇ ತಿಂಗಳುಗಳಲ್ಲಿ ನೆರವೇರಿಸಿದರೆ ಆಶ್ಚರ್ಯವೇನಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.