ವಿವಾಹ ಹಾಗೂ ಇತರೆ ಶುಭಕಾರ್ಯಗಳಲ್ಲಿ ವಿಳಂಬ ಉಂಟಾಗುತ್ತಿದ್ದರೆ, ಅದಕ್ಕೆ ಕುಜ ದೋಷ ಅಥವಾ ಮಂಗಳ ದೋಷ ಕಾರಣ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ..
ಹಾಗಾದರೆ ಕುಜ ದೋಷ ಎಂದರೇನು?
ಕುಜನು ಅಗ್ನಿ ತತ್ವದ ಗ್ರಹವಾಗಿದ್ದಾನೆ. ಕುಜ ದೋಷವನ್ನು ಜನ್ಮ ಕುಂಡಲಿಯಲ್ಲಿ ಲಗ್ನದ ಭಾಗವಾಗಿ ನೋಡಲಾಗುತ್ತದೆ. ಜನ್ಮ ಲಗ್ನದ 1, 2, 4, 7, 8 ಹಾಗೂ 12ನೇ ಮನೆಯಲ್ಲಿ ಕುಜ ಇದ್ದಲ್ಲಿ ಅದನ್ನು ದೋಷ ಎಂದು ಪರಿಗಣಿಸಲಾಗುತ್ತದೆ.ಪುರುಷರ ಜಾತಕದ ಲಗ್ನದಲ್ಲಿ 2, 7 ಅಥವಾ 8ನೇ ಮನೆಯಲ್ಲಿ ಕುಜ ಗ್ರಹವಿದ್ದರೆ ಉಗ್ರ ಸ್ವರೂಪದ ಕುಜ ದೋಷವೆಂದು ಪರಿಗಣಿಸಲಾಗುತ್ತದೆ.. ಮಹಿಳೆಯರಲ್ಲಿ 7, 8 ಹಾಗೂ 12ನೇ ಮನೆಯಲ್ಲಿದ್ದರೆ ಕುಜ ದೋಷವು ಹೆಚ್ಚಾಗಿರುತ್ತದೆ. ಮಂಗಳ ದೋಷವಿರುವವರಿಗೆ ಮಂಗಳ ಗ್ರಹವು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದರಿಂದಾಗಿ ಮಂಗಳ ಕಾರ್ಯಗಳಲ್ಲಿ ತೊಡಕು ಉಂಟಾಗುತ್ತದೆ.
ಕುಜದೋಷದ ಲಕ್ಷಣಗಳು
ಜಾತಕದ ಜನ್ಮ ಕುಂಡಲಿಯಲ್ಲಿ ಮೊದಲನೇ ಮನೆಯಲ್ಲಿ ಕುಜನಿದ್ದರೆ, ವೈವಾಹಿಕ ಜೀವನವು ಕಲಹ ಹಾಗೂ ಹಿಂಸೆಯಿಂದ ಕೂಡಿರುತ್ತದೆ. ಜಾತಕದಲ್ಲಿ ಒಂದನೇ ಮನೆಯಲ್ಲಿ ಮಂಗಳ ಗ್ರಹ ಇರುವವರು ಅಕ್ರಮಣಕಾರಿಗಳು ಮತ್ತು ಅಸಭ್ಯರಾಗಿರುತ್ತಾರೆ. ಅವರು ಜೀವನದಲ್ಲಿ ಸಂತೋಷವನ್ನು ಕಳೆದುಕೊಳ್ಳುತ್ತಾರೆ. 1ನೇ ಮನೆಯಲ್ಲಿ ಮಂಗಳನಿರುವಾಗ ಚಿಂತೆ ಹಾಗೂ ಪತಿ–ಪತ್ನಿಯರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. 8ನೇ ಮನೆಯಲ್ಲಿದ್ದಾಗ ನಿಮ್ಮ ಸುಖ ಜೀವನದ ಮೇಲೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. 2ನೇ ಮನೆಯಲ್ಲಿ ಕುಜ ಗ್ರಹವಿದ್ದರೆ ಮದುವೆ ಹಾಗೂ ವೃತ್ತಿ ಬದುಕಿನಲ್ಲಿ ಸಮಸ್ಯೆ ಎದುರಾಗುತ್ತದೆ. ಮಂಗಳ ಗ್ರಹ ಎರಡನೇ ಮನೆಯಲ್ಲಿದ್ದರೆ ಕೌಟುಂಬಿಕ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಪತಿ-ಪತ್ನಿಯನ್ನು ಬೇರ್ಪಡಿಸಬಹುದು ಅಥವಾ ಪದೇ ಪದೇ ಇಬ್ಬರ ಮಧ್ಯೆ ಜಗಳವನ್ನುಂಟು ಮಾಡಬಹುದು.
ಕುಜದೋಷಕ್ಕೆ ಪರಿಹಾರ ಕ್ರಮಗಳೇನು?
ಕುಜ ದೋಷದಿಂದ ಮುಕ್ತಿಯನ್ನು ಪಡೆಯಲು ಕೆಳಗೆ ನೀಡಲಾದ ಅಂಶಗಳನ್ನು ಪಾಲಿಸಬೇಕಾಗುತ್ತದೆ. ಅವುಗಳೆಂದರೆ...
ಕುಜ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಪಠಿಸಿದರೆ ಕುಜದೋಷದ ಪ್ರಭಾವ ಕಡಿಮೆಯಾಗುತ್ತದೆ.
ಮಂಗಳವಾರ ನವಗ್ರಹ ಮಂತ್ರ ಅಥವಾ ಹನುಮಾನ್ ಚಾಲೀಸ ಪಠಿಸಬೇಕು.
ಮಂಗಳವಾರದಂದು ಮನೆ ದೇವರಿಗೆ ಹಾಗೂ ಮಂಗಳ ಗ್ರಹಕ್ಕೆ ಪೂಜೆ ಸಲ್ಲಿಸಬೇಕು. ಅಥವಾ ಸುಬ್ರಹ್ಮಣ್ಯನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ ಕುಜ ದೋಷದ ಪ್ರಭಾವ ಕಡಿಮೆಯಾಗಲಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕುಜ ದೋಷವಿರುವವರು ಕೆಂಪು ಹವಳವಿರುವ ಬಂಗಾರದ ಉಂಗುರವನ್ನು ಬಲಗೈ ತೋರು ಬೆರಳಿಗೆ ಧರಿಸಿದರೆ ಒಳಿತಾಗುತ್ತದೆ.
ಕುಜ ದೋಷವಿರುವವರು 28 ವರ್ಷದ ನಂತರ ಮದುವೆಯಾಗಬೇಕು. ವಯಸ್ಸಾದಂತೆ ಕುಜ ದೋಷದ ಪ್ರಭಾವ ಕಡಿಮೆಯಾಗುತ್ತದೆ.
ಕುಜ ದೋಷವಿರುವ ಜಾತಕದವರು ಮಂಗಳವಾರದಂದು ಕೆಂಪು ವಸ್ತ್ರ, ತೊಗರಿ ಬೇಳೆಯಿಂದ ತಯಾರಿಸಿದ ಆಹಾರವನ್ನು ದಾನ ಮಾಡಿದರೆ ಒಳಿತು.
ಕುಜ ದೋಷದ ಜಾತಕದವರು ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ದರ್ಶನ ಹಾಗೂ ನರಸಿಂಹ ಸ್ವಾಮಿಯ ಆರಾಧನೆ ಮಾಡುವುದರಿಂದ ಇದರ ಪ್ರಭಾವ ಕಡಿಮೆಯಾಗುತ್ತದೆ.
ವಿಷ್ಣುವಿಗೆ ಸಂಬಂಧಿಸಿದ ದೇವಸ್ಥಾನಗಳಲ್ಲಿ ಕಲ್ಯಾಣೋತ್ಸವ ಮಾಡಿಸುವುದರಿಂದಲೂ ಕುಜ ದೋಷ ನಿವಾರಣೆಯಾಗುತ್ತದೆ.
ಕುಜದೋಷವನ್ನು ಅನುಭವಿಸುತ್ತಿರುವವರು ಈ ಮೇಲಿನ ಪರಿಹಾರ ಕ್ರಮಗಳನ್ನು ಅನುಸರಿಸುವ ಮೂಲಕ ಈ ಗ್ರಹದ ಪ್ರಭಾವವನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.