ADVERTISEMENT

ಕುಂಡಲಿಯಲ್ಲಿ ಗ್ರಹಗಳು ಪ್ರಬಲವಾಗಿದ್ದರೆ ಮಾತ್ರ ರಾಜ ಯೋಗ: ಇಲ್ಲವಾದಲ್ಲಿ ಅಧೋಗತಿ!

ಮಹಾಬಲಮೂರ್ತಿ ಕೊಡ್ಲೆಕೆರೆ
Published 10 ಸೆಪ್ಟೆಂಬರ್ 2025, 23:30 IST
Last Updated 10 ಸೆಪ್ಟೆಂಬರ್ 2025, 23:30 IST
   
ಯಾರೇ ಆಗಲಿ, ತಮ್ಮ ತಮ್ಮ ಜನ್ಮ ಕುಂಡಲಿಯಲ್ಲಿ ರಾಜಯೋಗ ಇದೆಯೇ ಎಂಬುದನ್ನು ತಿಳಿಯಲು ಕುತೂಹಲಿಗಳಾಗಿರುತ್ತಾರೆ. ಹಾಗಾದರೆ ರಾಜ ಯೋಗ ಎಂದರೆ ಏನು ಎಂಬ ಉತ್ತರ ಹುಡುಕುತ್ತಾ ಹೋದರೆ ಮಹತ್ವಾಕಾಂಕ್ಷಿಯಾದ ಯಾರಿಗೆ ಇರಲಿ, ಯೋಗ ಎಂದರೆ ನಿರ್ದಿಷ್ಟವಾಗಿ ಯಾವುದು ಎಂಬುದನ್ನು ಸ್ಪಷ್ಟಗೊಳಿಸಿಕೊಳ್ಳುವುದು ಕಷ್ಟ. ಏಕೆಂದರೆ ನಮ್ಮ ವರ್ತಮಾನದ ಇಂದಿನ ಅಪೇಕ್ಷೆ ನಾಳೆಯ ಹೊತ್ತಿಗೆ "ಅಯ್ಯೋ ಇದು ಏನೂ ಅಲ್ಲ.. ಕಷ್ಟಪಟ್ಟು ಪಡೆಯಬೇಕಾದದ್ದು ಬೇರೆಯದೇ ಇದೆ. ಏನೂ ಅಲ್ಲದ ಇಲ್ಲದಿರುವುದನ್ನು ಇದೇ ದೊಡ್ಡದು ಎಂಬ ನಂಬಿಕೆ ಇಟ್ಟು, ಈ ಮಿತಿಯಲ್ಲಿಯೇ ಮುಂದುವರಿಸುವುದೇ?" ಎಂಬ ನಿರಾಸೆ ಆವರಿಸಬಹುದು.

ಕಾರ್ಪೊರೇಟರ್ ಆಗುವುದೇ ದೊಡ್ಡದು ಅಂದುಕೊಂಡ ಅನೇಕರು ಕಾರ್ಪೊರೇಟರ್ ಆದ ಮೇಲೆ ಎಂಎಲ್ಎ ಆಗಲು ಓಡಾಡುತ್ತಾರೆ. ನಂತರ ಮಂತ್ರಿ, ತದನಂತರ ಪ್ರಮುಖವಾದ ಖಾತೆ, ಇದಾದ ಬಳಿಕ ಮುಖ್ಯಮಂತ್ರಿ ಪಟ್ಟ. ಒಟ್ಟಿನಲ್ಲಿ ಜೀವನವಿಡೀ ಪ್ರತಿ ಹಂತವೂ, ನಿರಂತರವಾದ ಒಂದು ಹೋರಾಟವೇ ಆಗಿ ಹೋಗುತ್ತದೆ. ಯಾವುದಕ್ಕೂ ಕೊನೆ ಎಂಬುದೇ ಇಲ್ಲದೇ ಹೋಗುತ್ತದೆ. ಎಲ್ಲಿ ಇದ್ದಿರುವೆವೋ ಇದು ಯಃಕಶ್ಚಿತ ಎಂಬ ಭಾವನೆ ಬಂದುಬಿಡುತ್ತದೆ. ಮತ್ತೆ ಬೇರೊಂದನ್ನೇ ಹುಡುಕುವ ಗುರಿಯತ್ತ ಧಾವಿಸುವ, ಬೆನ್ನು ಹತ್ತಿಯೇ ತೀರುವ ದೃಷ್ಟಿ ಇರಿಸಿ, ಇನ್ನಿಲ್ಲದ ಚಡಪಡಿಕೆಯನ್ನು ಅವಾಹನೆ ಮಾಡಿಕೊಳ್ಳುವುದಾಗುತ್ತದೆ. ಗೆಳೆಯರೇ ಶತ್ರುಗಳಾಗುತ್ತಾರೆ. ಶತ್ರುಗಳೇ ಆಪ್ತ ಗೆಳೆಯರಾಗುತ್ತಾರೆ.

ಭಾರತದ ಚರಿತ್ರೆಯ ಆ ಎಲ್ಲ ಹಿಂದಿನ ದಿನಗಳನ್ನು ಬಿಟ್ಟು ಬರೀ 1977 ರಿಂದ 1997ರವರೆಗಿನ ರಾಜಕೀಯವನ್ನು ಗಮನಿಸಿದರೆ ಯಾರು ಯಾವಾಗ ಶತ್ರುಗಳು, ಯಾರು ಯಾವಾಗ ಮಿತ್ರರು ಎಂಬುದನ್ನು ಗಮನಿಸಿದರೆ ಸಾಕು. ಎಲ್ಲವೂ ವೇದ್ಯ. ಕೇವಲ ರಾಜಕೀಯ ಎಂದೇ ಅಲ್ಲ. ಸಿನಿಮಾ ರಂಗ, ಕೈಗಾರಿಕೆ, ಕ್ರೀಡೆ, ರಿಯಲ್ ಎಸ್ಟೇಟ್, ಚಿನ್ನಾಭರಣ, ಬ್ಯಾಂಕಿಂಗ್, ಹೋಟೆಲ್, ರೆಸ್ಟೋರೆಂಟ್, ಪ್ರವಾಸೋದ್ಯಮ, ಶೇರ್ ಮಾರ್ಕೆಟ್, ಗಣಿಗಾರಿಕೆ, ಕೃಷಿ ಇತ್ಯಾದಿ. ಯಾವುದೇ ಸರಹದ್ದುಗಳಲ್ಲೂ ಹದ್ದುಗಳ ರಣ ಬೇಟೆ ಶತಃಸಿದ್ಧ. ಈಗಂತೂ ಅರಾಜಕತೆಯನ್ನು ಯಾರು ಎಲ್ಲಿ ಬೇಕಾದರೂ ಸೃಷ್ಟಿಸಲು ಸಾಧ್ಯ. ಹಿಂದೆಲ್ಲ ವಿಷ ಕನ್ಯೆಯರ ರೋಚಕ ಕತೆಗಳನ್ನು ಯಾವಾಗಲೂ, ಬಹುವಾಗಿ ಕೇಳುತ್ತಿದ್ದೆವು, ಓದುತ್ತಿದ್ದೆವು. ಈಗ ಹನಿ ಟ್ರ್ಯಾಪ್ ಕತೆಗಳನ್ನು, ಆಡಿಯೊಗಳನ್ನು, ವಿಡಿಯೊಗಳನ್ನು ಗಮನಿಸುತ್ತಿದ್ದೇವೆ.

ರಾಜಯೋಗದ ಅಸಲಿಯತ್ತು ಏನು?

ADVERTISEMENT

ನಾವು ಸುಮ್ಮನೆ ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಸುಮಾರು ನೂರು ಜನರ ಜನ್ಮ ಕುಂಡಲಿಗಳನ್ನು ಸಂಗ್ರಹಿಸಿದೆವು ಅಂತಾದರೆ, ಇವುಗಳಲ್ಲಿ ಶೇಕಡಾ ಎಪ್ಪತ್ತು ಜಾತಕ ಕುಂಡಲಿಗಳಲ್ಲಿ ರಾಜ ಯೋಗಗಳನ್ನು ಹಲವಾರು ವಿಧದಲ್ಲಿ ಗುರುತಿಸಬಹುದು. ಆದರೆ ಈ ರಾಜ ಯೋಗಗಳು, ಆಯಾ ರಾಜ ಯೋಗಗಳನ್ನು ಕೂಡಿಸಿಕೊಂಡ ವಿಧಾನದಲ್ಲಿ ಅಸಲಿ ಪ್ರಮಾಣದ ಯೋಗದ ತೂಕವನ್ನು ಹೇಗೆ ಪಡೆದಿವೆ ಎಂಬುದರ ಮಾನದಂಡ ತೀರಾ ಮುಖ್ಯ. ಈ ಗ್ರಹಗಳ ಕೂಟದ ಕೆಮಿಸ್ಟ್ರಿ ಎಷ್ಟು ಪ್ರಾಬಲ್ಯ ಪಡೆದಿದೆ ಎಂಬುದರ ನಿಖರವಾದ ವಿಶ್ಲೇಷಣೆ ತೀರಾ ಅವಶ್ಯ. ವಿಭಿನ್ನ ಸನ್ನಿವೇಶಗಳಲ್ಲಿ ಪ್ರತಿ ಗ್ರಹಗಳೂ ವಿವಿಧ ರೀತಿಯ ಗುಣ ಧರ್ಮ ಪಡೆಯುತ್ತವೆ.

ಉದಾಹರಣೆಗೆ, ಕುಜ ಶುಕ್ರ ದೋಷವು ಕಾಮದ ಬೆಂಕಿಯ ಕೆನ್ನಾಲಗೆಯನ್ನು ಘಾತಕ ಶಕ್ತಿಯಿಂದ ಹೊರಚಾಚಿ ದೋಷವಿರುವ ವ್ಯಕ್ತಿಯ ನೈತಿಕತೆಯನ್ನು ಪ್ರಶ್ನಾರ್ಹ ಬಿಂದುವಿನಲ್ಲಿ ಇಡುತ್ತದೆ ಎಂಬುದು ವಿದಿತವಾದರೂ, ಧರ್ಮ ಕರ್ಮಾಧಿಪ ಯೋಗದ ಇನ್ನೊಂದು ಶುಭ ಶಕ್ತಿಯ ಕಾರಣದಿಂದಾಗಿ ಮುಟ್ಟಿದ್ದೆಲ್ಲ ಚಿನ್ನವಾಗುವ ಧಾರಾಳಿತನವನ್ನೂ ಒದಗಿಸಬಲ್ಲದು.

ನೆನಪಿಸಿಕೊಳ್ಳಲು ಸಾಧ್ಯವಿದೆ ಎಂದಾದರೆ ಬಹು ದೊಡ್ಡ ರಾಜ್ಯದ ಮುಖ್ಯಮಂತ್ರಿಗಳಾಗಿ, ಕೇಂದ್ರ ಸರಕಾರದ ಮಂತ್ರಿಗಳಾಗಿ ಹೆಸರು ಪಡೆದಿದ್ದ, ಎತ್ತರದ ವ್ಯಕ್ತಿತ್ವ ಹೊಂದಿದ್ದ ನೇತಾರರೊಬ್ಬರ ವಿಚಾರವನ್ನು ನೆನಪಿಸಿಕೊಳ್ಳಬಹುದು. ಈ ಪ್ರಭಾವಿ ವ್ಯಕ್ತಿ ತಾನು ಖಾಸಗಿಯಾದ ಆಪ್ತತೆಯಲ್ಲಿ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯಲ್ಲಿ ಜನಿಸಿದ ತನ್ನ ಮಗನನ್ನು ಮಗನೆಂದು ಸ್ವೀಕರಿಸಲು ನಿರಾಕರಿಸಿದ ಸಂಗತಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯೇ ಆಯಿತು. ನಂತರ ಈ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ತಾನು ಈ ಪ್ರಭಾವಿ ವ್ಯಕ್ತಿಯ ಬಯೋಲಾಜಿಕಲ್ ಮಗ ಹೌದೋ? ಅಲ್ಲವೋ? ಎಂಬುದನ್ನು ನಿರ್ಧರಿಸಲು DNA ಪರೀಕ್ಷೆಗೆ ಕೂಡ ಕೋರ್ಟ್‌ಗೆ ಅನುಮತಿ ನೀಡಲು ವಿನಂತಿಸಿಕೊಂಡ. ಕೋರ್ಟ್ ಆದೇಶದಂತೆ ಡಿಎನ್‌ಎ ಪರೀಕ್ಷೆಯೂ ನಡೆದು ಪ್ರಭಾವಿ ವ್ಯಕ್ತಿಯ ಮಗನೇ ಈತ ಎಂಬುದು ಸಾಬೀತಾಗಿತ್ತು.

ದೀರ್ಘಾಯುಷ್ಯದ ಅದ್ಭುತ ಹಾಗೂ ವಿಶೇಷ ವರ, ಧನ, ಧಾನ್ಯ, ಮೇಧಾವಿತನ, ಸಿದ್ಧಿ, ಆರೋಗ್ಯ, ಲವಲವಿಕೆ, ಚೈತನ್ಯ, ಅನನ್ಯತೆ, ಅನುಗ್ರಹಗಳನ್ನು, ಅಧಿಕಾರ, ಸಂಪತ್ತು, ಮಾತಿನ ಚಾತುರ್ಯ ಇತ್ಯಾದಿ ಎಲ್ಲವನ್ನೂ ಒದಗಿಸುವ ರಾಜಯೋಗ ಕಾರಕ ಗ್ರಹಗಳು ಇಳಿಗಾಲದಲ್ಲಿ ಎಲ್ಲವೂ ಕಣ್ಣೆದುರೇ ಹಾಳಾಗಿ ಹೋಗುವ ವರ್ತಮಾನವನ್ನೂ, ನಿಷ್ಕರುಣೆಯಿಂದ ಉರಿಸಿ ಘಾಸಿಸಬಹುದು.

ರಾಜ ಯೋಗ ಯಾವಾಗ?

ರಾಜಯೋಗದ ಕಾಲಾವಧಿಯ ವಿಚಾರವನ್ನು ಸೂಕ್ತವಾದ ಜಾತಕ ವಿಶ್ಲೇಷಣೆಯನ್ನು ಆಗಾಗ ನಡೆಸಿಯೇ ನಿರ್ಧರಿಸುವ ಕ್ರಮ ಸರಿಯಾದ ಬಗೆ. ಯಾಕೆಂದರೆ ರಾಜಯೋಗಕ್ಕೆ ಕಾರಣವಾದ ಗ್ರಹಗಳು, ಈ ಗ್ರಹಗಳಿಗೆ ಸಕಾರಾತ್ಮಕ ಬೆಂಬಲ ಒದಗಿಸಬಲ್ಲ ಗ್ರಹಗಳು. ಈ ರಾಜಯೋಗಕಾರಕ ಗ್ರಹಗಳ ಮೂಲಕ ಒಂದಿಷ್ಟು ಧನಾತ್ಮಕ ಶಕ್ತಿಯನ್ನು ಪಡೆದ ಗ್ರಹಗಳು ಉತ್ತಮವಾದ ಜೀವನದ ಸಂದರ್ಭದ ಏಳಿಗೆಯನ್ನು ರಾಜಯೋಗದ ಮೂಲಕ ಒದಗಿಸುತ್ತವೆ. ಉದಾಹರಣೆಗೆ ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಅವರಿಗೆ ರಾಜಯೋಗ ನಿರ್ಮಿಸಿದ ಗಜಕೇಸರಿ ಯೋಗದ ಕಾಲದಲ್ಲಿ ಅಧ್ಯಕ್ಷರಾದರು. ಈ ಯೋಗ, ಗುರು ಹಾಗೂ ಚಂದ್ರ ಗ್ರಹಗಳ ವಿಶಿಷ್ಟ ಸಂಯೋಜನೆಗಳ ಲೆಕ್ಕಾಚಾರದೊಂದಿಗೆ ಹರಳುಗಟ್ಟುತ್ತದೆ.

ಸ್ಪಷ್ಟವಾದ ಬಲದೊಂದಿಗೆ ಗುರು ಮಹಾ ದಶಾಕಾಲದ ಅವಧಿ ಸಿಕ್ಕಿದಾಗ ಎರಡು ಅವಧಿಗಳಿಗೆ ಕ್ಲಿಂಟನ್ ಅಧ್ಯಕ್ಷರಾದರು. ಆದರೆ ನಡುವೆ ಸಾಡೇಸಾತಿ ಕಾಟದ ಅವಧಿ ಶುರುಗೊಂಡಾಗ ಮೋನಿಕಾ ಲೆವೆಂಸ್ಕಿ ಎಂಬ ಕನ್ನಿಕೆಯ ಜತೆಗಿನ ಆಪ್ತ, ಆದರೆ ವಿವಾಹೇತರ ಸಂಬಂಧ ಕ್ಲಿಂಟನ್ ತತ್ತರಿಸಿ ಹೋಗುವ ಪರಿಸ್ಥಿತಿ ಎದುರಿಸುವಂತೆ ಏಟು ನೀಡಿತು. ಪದಚ್ಯುತಿಗೊಳ್ಳುವ ಸಂದಿಗ್ಧತೆಯಿಂದ, ಹೇಗೋ ಕಷ್ಟಪಟ್ಟು ಪಾರಾದರು ಎಂಬುದು ಬೇರೆ ವಿಷಯ. ಆದರೆ ಎದುರಿಸಿದ್ದ ಅವಮಾನ ಅಂತಿಂಥದ್ದಲ್ಲ. ನಮ್ಮ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಪ್ರಧಾನಿ ಪಟ್ಟ ಒಲಿದದ್ದು ಇದೇ ಗಜಕೇಸರಿ ಯೋಗದ ಗುರು ಗ್ರಹದ ದಯದಿಂದಲೇ. ಮುಂದರಿದು 2004 ರಿಂದ 2009ರ ಅವಧಿಗೂ ವಾಜಪೇಯಿ ಪ್ರಧಾನಿ ಆಗುತ್ತಾರೆ ಎಂಬ ನಂಬಿಕೆ ರಾಜಕೀಯ ತಜ್ಞರ ಲೆಕ್ಕಾಚಾರ. ಸಮೀಕ್ಷೆ ಇತ್ಯಾದಿಗಳು ಇದ್ದಿದ್ದರೂ ವಾಜಪೇಯಿ ಅವರಿಗೆ ಎನ್‌ಡಿಎಯನ್ನು 2ನೇ ಅವಧಿಗೆ ಅಧಿಕಾರಕ್ಕೆ ತರಲು ಆಗಿರಲಿಲ್ಲ. ಕಿರಿಕಿರಿಯನ್ನು ನಿರ್ಮಿಸಲೆಂದೇ ತಲೆ ಎತ್ತಿದಂತಿದ್ದ ಶನಿ ಮಹಾರಾಜ ವಾಜಪೇಯಿ ಅವರನ್ನು ಮುಗ್ಗರಿಸುವಂತೆ ನೋಡಿಕೊಂಡ.

ಕರ್ನಾಟಕದ ಹೆಸರಾಂತ ಬ್ಯಾಟರ್ ಕರುಣ್ ನಾಯರ್, ಟೆಸ್ಟ್ ಪಂದ್ಯ ಆಡಿದ ಹೊಸತರಲ್ಲೇ ತ್ರಿಶತಕ ದಾಖಲಿಸಿದರಾದರೂ, ಮುಂದಿನ ಒಂದೇ ವರ್ಷದಲ್ಲಿ ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗದೇ ಉಳಿದರು. ನಂತರ 8 ವರ್ಷಗಳ ದೀರ್ಘ ಅವಧಿಯ ಬಳಿಕ ಟೆಸ್ಟ್‌ಗೆ ಆಯ್ಕೆಯೇನೋ ಆದರು. ಆದರೆ ಸೂಕ್ತ ಆಟ ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಟೆಸ್ಟ್ ಕ್ರಿಕೆಟ್ ಆಡಬಲ್ಲರೆ? ಮತ್ತೊಂದು ತ್ರಿಶತಕ ಹೋಗಲಿ, ಒಂದು ಶತಕ ಸಿಡಿಸುವ ಅವಕಾಶಕ್ಕಾಗಿ ಅದೃಷ್ಟ ದಕ್ಕಬಹುದೇ ಅವರಿಗೆ?

ಕರ್ನಾಟಕದ ಅದ್ಭುತ ಕ್ರಿಕೆಟ್ ಕಲಿಗಳಾದ ಗುಂಡಪ್ಪ ವಿಶ್ವನಾಥ್, ಪ್ರಸನ್ನ, ಚಂದ್ರಶೇಖರ್ ಮುಂತಾದವರು, ಗವಾಸ್ಕರ್ ಇಂದೂ ತಮ್ಮನ್ನು ಸುಣ್ಣದ ಬೆಳಕಿನಲ್ಲಿ ಇರಿಸಿಕೊಳ್ಳಬಹುದಾದ ಅವಕಾಶಗಳನ್ನು ಪಡೆದುಕೊಳ್ಳಬಹುದಾದ ದಾರಿಗೆ ಯಾಕೆ ಅಡಿ ಇಡಲಾರರು? ಹೀಗೆ ಸುಣ್ಣದ ಬೆಳಕಿನಲ್ಲಿ ಇದ್ದೇ ಇರುವ ಗವಾಸ್ಕರ್ ಅವರಿಗೆ ಮಗ ತನ್ನಂತೆ ಮಿಂಚಲಾಗದೇ ಹೋದ ವ್ಯಥೆಯು ನೋವನ್ನು ತರಬಹುದಲ್ಲವೆ? ಭಾರತದ ಕ್ರಿಕೆಟ್ ದೇವರೆಂದು ಪರಿಗಣಿತರಾದ ಸಚಿನ್ ತೆಂಡುಲ್ಕರ್ ಮಗ ಅರ್ಜುನ್ ಅವಕಾಶ ಇದ್ದರೂ ಕ್ರಿಕೆಟ್‌ನಲ್ಲಿ ಒಂದು ಸಾಬೀತುಪಡಿಸುವ ಶಕ್ತಿಯಾಗಲು ಪರದಾಡುತ್ತಿರುವುದು ಸಚಿನ್‌ಗೆ ತಲೆ ನೋವಾಗಿರಬಹುದೇ? ಪ್ರಧಾನಿ ಆಗದೆ ಉಳಿದ ಹೆಗಡೆ, 10 ತಿಂಗಳಲ್ಲಿ ವಿಶ್ವಾಸಮತ ಕಳಕೊಂಡ ದೇವೇಗೌಡರು, ಸಚಿನ್ ಅನ್ನು ಮೀರಿಸುವ ಶಕ್ತಿ ಇದ್ದರೂ ಸೊರಗಿದ ವಿನೋದ್ ಕಾಂಬ್ಳಿ, ಗಟ್ಟಿಗನಾಗಿ ಕಂಡ ಶೇನ್ ವಾರ್ನ್ ಅಕಾಲಿಕ ಸಾವು ಇತ್ಯಾದಿ ವಿಚಾರಗಳನ್ನು ಗಮನಿಸಿದಾಗ ಆಶ್ಚರ್ಯ ಹುಟ್ಟುತ್ತದೆ. ಹಾಗಾದರೆ ಇದರ ಅರ್ಥ ಏನು? ರಾಜ ಯೋಗ ಅಂದರೆ ಹಲವು ಸಲ ಆ ಕೆಲ ಕಾಲದ ಮಿಂಚು ಎಂಬುದೇ ಸರಿಯೇ? ಇದೇ ಸರಿ ಎಂದು ಹಾಗೆ ಹೇಳಲಾಗದು. ಹೇಳದೇ ಇರಲೂ ಆಗದು.

ಗ್ರಹಗಳು ಕ್ರೂರವೋ, ಸಿದ್ಧಿಕರವೋ ಆಗುವುದು ಹೇಗೆ?

ಒಂದು ಜನ್ಮ ಕುಂಡಲಿಯಲ್ಲಿ 9 ಗ್ರಹಗಳು ಹಾಗೂ ಒಟ್ಟು 12 ಮನೆಗಳು ಇರುತ್ತವೆ. ಹಾಗೆಯೇ (ಸಾಕಷ್ಟು ಪರಿಣಾಮ ನೀಡಲು ಸಾಧ್ಯವಾಗದ ಪ್ಲುಟೋ, ಯುರೇನಸ್, ನೆಪ್ಚೂನ್ ಗ್ರಹಗಳನ್ನೂ, ಇತರೆಯಾಗಿ ಸೇರಿಸಿಕೊಳ್ಳುವ ಮಾಂದಿ ಎಂಬ ಕ್ಷುದ್ರಗ್ರಹಗಳ ಸಮೂಹವನ್ನೂ ಪ್ರಮುಖ ಪರಿಶೀಲನೆಗಾಗಿ ಸೇರಿಸಿಯೇ ನೋಡುವ ಅವಶ್ಯಕತೆ ಇರುತ್ತದೆ.) ತಾಯಿಯ ಗರ್ಭದಿಂದ ಮಗು ಹೊರ ಬಂದ ವೇಳೆಯನ್ನು ಆ ದಿನದ ಸೂರ್ಯೋದಯದ ವೇಳೆಗೆ ಅನುಲಕ್ಷಿಸಿ ನಿರ್ಧರಿಸಲ್ಪಡುವ, ಅತ್ಯಂತ ಹೆಚ್ಚು ಮಹತ್ವದ ಪರಿಗಣನಾ ಬಿಂದುವಾದ 'ಲಗ್ನ' ಎಂಬ ಘಟಕವೂ ಪ್ರಧಾನವೇ ಆಗಿದೆ.

ವ್ಯಕ್ತಿಯ ಜಾತಕ ಕುಂಡಲಿಯ ಏಳು ಬೀಳುಗಳ ವಿಚಾರದಲ್ಲಿ ಸಾಕಷ್ಟು ಶಕ್ತಿ, ಜತೆಗೆ ಸ್ಪಷ್ಟವಾದ ಮಿತಿಗಳನ್ನು ಈ ಘಟಕವು ಕಾಲಾನುಕಾಲಕ್ಕೆ ರೂಪಿಸಿ ಕೊಡುತ್ತದೆ. 'ಲಗ್ನ' ಎಂದರೆ ನಮ್ಮ ನಿತ್ಯ ಬಳಕೆಯ ಅರ್ಥದ 'ಲಗ್ನ' ಎಂಬುದಲ್ಲ. ಕುಂಡಲಿಯ ಈ 'ಲಗ್ನ' (ಜ್ಯೋತಿಷವನ್ನು ನಂಬುವುದಾದರೆ) ಜೀವಮಾನದ ಅನೇಕ ನಿಶ್ಚಿತ ಘಟನೆಗಳನ್ನು ಇವು ಹೀಗೆ ಎಂಬುದನ್ನು ನಿರ್ಧರಿಸುತ್ತವೆ. ಒಬ್ಬ ಸೂಕ್ತ, ಜ್ಯೋತಿಷ್ಯ ಶಾಸ್ತ್ರ ಅಧ್ಯಯನ ಮಾಡಿದ ಜ್ಯೋತಿಷ್ಯಿಯು ಕರಾರುವಾಕ್ಕಾಗಿ, ಸುಮಾರು ಶೇಕಡಾ ತೊಂಭತ್ತಕ್ಕಿಂತಲೂ ಮಿಕ್ಕಿ ನಿಖರವಾಗಿ ಹೇಳಬಲ್ಲ. ಆದರೆ ನೂರಕ್ಕೆ ನೂರು ನಿಖರವಾಗಿ ಹೇಳಲು ಯಾವುದೇ ಜ್ಯೋತಿಷ್ಯಿಗೂ ಅಸಾಧ್ಯ. ಇದಕ್ಕೆ ಕಾರಣಗಳೂ ಇವೆ.

ಒಬ್ಬ ವ್ಯಕ್ತಿ ಹುಟ್ಟಿದ ವೇಳೆಯಲ್ಲಿ, ಆ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಚದುರಿ ಬಿದ್ದ ಗ್ರಹಗಳು, ಇಂದು ಈಗ ಈ ಕ್ಷಣದಲ್ಲಿನ ಇವೇ ಗ್ರಹಗಳು, ತಾವು ಹೇಗೆ ಚದುರಿ ಬಿದ್ದಿದ್ದೇವೆ ವರ್ತಮಾನದಲ್ಲಿ (ಇದಕ್ಕೆ ಗೋಚಾರ ಫಲ ಎಂದು ಕರೆಯುತ್ತಾರೆ.) ಎಂಬುದರ ಮೇಲೂ ತಂತಮ್ಮ ಶಕ್ತಿ ಹಾಗೂ ಮಿತಿಗಳನ್ನು ಪಡೆದುಕೊಳ್ಳುತ್ತವೆ. ಹೀಗಾಗಿ ಇಂದು ಯಾವ ಗ್ರಹದ ಮಹಾ ದಶಾ ಕಾಲ, ಭುಕ್ತಿ, ಅಂತರ್ ಭುಕ್ತಿಗಳ ಕಾಲ ಒಬ್ಬನ ಅಥವಾ ಒಬ್ಬಳ ಜಾತಕದಲ್ಲಿ ನಡೆಯುತ್ತಿದೆ ಎಂಬುದರ ಮೇಲೆ ಒಳಿತು ಅಥವಾ ಕೆಡುಕುಗಳು ನಿರ್ಣಯವಾಗುತ್ತವೆ.

ಉದಾಹರಣೆಗೆ, ಇಂದು ವರ್ತಮಾನದಲ್ಲಿ ಯಾಕೆ ಶನಿ ಮಹಾದಶಾಕಾಲದ, ಶುಕ್ರ, ಸೂರ್ಯ ಭುಕ್ತಿಗಳ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರ ಅದೃಷ್ಟ, ಕೇವಲ ಮೂರು ಹೆಜ್ಜೆಗಳ ಮುಖ್ಯಮಂತ್ರಿ ಪಟ್ಟಕ್ಕಾಗಿ ಅಂತರವನ್ನೂ ಸಹಾ ಬಿಕ್ಕಟ್ಟಿನ ಗಂಟನ್ನಾಗಿಸುತ್ತಿದೆ? ಇದೇ ವೇಳೆಗೆ, ಬಿಕ್ಕಟ್ಟಿನ ಗಂಟನ್ನು ನಿವಾರಿಸಿಕೊಳ್ಳಲು ಬುದ್ಧಿಬಲವನ್ನೂ ಶಿವಕುಮಾರ್ ತಾಳ್ಮೆಯಿಂದಲೇ ಪ್ರದರ್ಶಿಸಬಲ್ಲವರಾಗಿದ್ದಾರೆ. ಯಾಕೆಂದರೆ ಇವರ ಕುಂಡಲಿಯಲ್ಲಿ ಬುಧಾದಿತ್ಯ ಯೋಗ ಇದೆ. ಈ ಯೋಗವನ್ನು ಹೊಂದಿರುವ ಶಿವಕುಮಾರ್, ಚತುರರಾಗಿದ್ದಾರೆ ಎಂಬುದು ಕುಂಡಲಿಯ ಪ್ರಕಾರವೂ ಸ್ಪಷ್ಟ. ಕುಂಡಲಿಯನ್ನು ನಾವು ನೋಡಿರದಿದ್ದರೂ ಸ್ಪಷ್ಟ.

ಆದರೆ, ಎಲ್ಲವೂ ಹೌದಾದರೂ, ಗ್ರಹಗಳು ಕೈ ಕೊಡುವ ರೀತಿಯೂ ವಿಚಿತ್ರವಾಗಿಯೇ ಇರುತ್ತದೆ. ಸಂಪುಟದಿಂದ ಹೊರದೂಡಲ್ಪಟ್ಟ ಮಾಜಿ ಮಂತ್ರಿ, ಹಾಲಿ ವಿಧಾನಸಭಾ ಸದಸ್ಯರಾಗಿರುವ ರಾಜಣ್ಣ ಎರಡು ತಿಂಗಳ ಹಿಂದೆಯೇ ಘೋಷಿಸಿದ್ದ 'ಸೆಪ್ಟೆಂಬರ್ ಕ್ರಾಂತಿ'ಯ ಮಾತುಗಳು ಈಗ ಯಾರಿಗೆಲ್ಲ ನೆನಪಿದೆ ಎಂಬುದು ತಿಳಿಯದು. ರಾಜಣ್ಣ ಮಾತನಾಡಿದರೆ ಖಡಕ್ಕಾದ ಮಾತುಗಳು ಗ್ಯಾರಂಟಿ ಎಂಬ ನಂಬಿಕೆ ಸದ್ಯ ಅವರನ್ನೇ ಕೆಡವಿದೆ ಕೆಳಗೆ. ಅನುಪಮವಾದ, ಆತ್ಮೀಯ ಸಂಬಂಧಗಳೇ ಹಳಸುವ ಮಾತು ರಾಜಕೀಯ ರಂಗದಲ್ಲಿ ಒಂದೇ ಅಲ್ಲ, ಎಲ್ಲಾ ರಂಗಗಳಲ್ಲೂ ಇದು ವೇದ್ಯ. ಎಷ್ಟೊಂದು ಪ್ರಾಮುಖ್ಯತೆಯ ವರ್ಚಸ್ಸನ್ನು ಸೃಷ್ಟಿಸಿಕೊಳ್ಳುವ ಸಾಧ್ಯತೆ ದೇವರು ಕೊಟ್ಟಾಗಲೂ, ಪ್ರಮಾದವಶಾತ್ ತನ್ನ ಪೂರ್ಣ ಪ್ರಮಾಣದ ಕುಸಿತ ಒಂದನ್ನು ಕೈಯಾರೆ ನಿರ್ಮಿಸಿಕೊಳ್ಳುವ ಪ್ರಾರಬ್ಧವನ್ನು ಹಲವರು ನಿರ್ಮಿಸಿಕೊಳ್ಳುತ್ತಾರೆ.

ರಾಜ ಯೋಗ ನೀಡಿದ್ದ ಗ್ರಹಗಳೇ ನಿಷ್ಕರುಣೆಯಿಂದ ಏಕಾಏಕಿ ನಯವಾಗಿ ಇಂಥವನ್ನೂ ಮಾಡಿ ತೋರಿಸುತ್ತವೆ, ಹೊಂಡಕ್ಕೆ ಬೀಳಿಸುತ್ತವೆ. ಕೆಡುಕಿಗಾಗಿ ಕಾರಸ್ಥಾನ ನಡೆಸುತ್ತವೆ. ಜೀವನದ ಒಳ್ಳೆಯ ಪ್ರಾರಂಭ ಒಂದು ಲಭಿಸುತ್ತಿರುವಾಗಲೇ ಸರ‍್ರನೇ ಹಿಡಿತ ಕಳೆದುಕೊಂಡು ಇಡೀ ಜೀವಮಾನವನ್ನು ಕಷ್ಟಕ್ಕೆ ದೂಡಿಕೊಳ್ಳುವ ಸಂದರ್ಭ ಹಲವರ ಪಾಲಿಗೆ ಎದ್ದೇಳುವುದು ತೀರಾ ದುರದೃಷ್ಟಕರ. ಅದರಲ್ಲೂ ರಾಜ ಯೋಗದ ಹೆಸರಲ್ಲಿ ಕೆಂಪು ಕಂಬಳಿ ಹಾಸಿ ನಮ್ಮನ್ನು ಮುನ್ನೆಲೆಗೆ ಬರುವಂತೆ ಸ್ವಾಗತ ಕೋರಿದ ಅದೇ ಗ್ರಹಗಳು, ನಿಧಾನವಾಗಿ ಕಸದ ಬುಟ್ಟಿಗೆ ನಮ್ಮನ್ನು ಎಸೆದು ಬಿಡುವ ಕ್ರೌರ್ಯಕ್ಕೆ ಏನನ್ನೋಣ? ಈ ರೀತಿಯ ಗ್ರಹಗಳ ಕಾರಣದಿಂದಲೇ "ನನ್ನ ಗ್ರಹಚಾರ ಸರಿ ಇಲ್ಲ" ಎಂಬ ಮಾತು ರೂಢಿಗೆ ಬಂತೇನೋ?

ರಾಜಯೋಗದ ಅತ್ಯಂತ ದೇದೀಪ್ಯಮಾನವಾದ ಸಿದ್ಧಿ ಸಿಗಲು, ಅದನ್ನು ನಿರ್ಮಿಸುವ ಗ್ರಹಗಳು ಪ್ರಶ್ನಾತೀತವಾದ ಪ್ರಾಬಲ್ಯ ಪಡೆದಾಗ ಮಾತ್ರ ರಾಜಯೋಗಕ್ಕೆ ಒಂದು ಅರ್ಥ ಬರುತ್ತದೆ. ಅದು ಇರದಿದ್ದರೆ ಸಾಮಾನ್ಯನಾಗಿ ಬದುಕುವುದೇ ವಾಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.