
2025 ರ ಡಿಸೆಂಬರ್ 8ರಂದು ಚತುರ್ಥಿ ತಿಥಿಯನ್ನು ಆಚರಿಸಲಾಗುತ್ತದೆ. ಇದನ್ನು ಸಂಕಷ್ಟಹರ ಚತುರ್ಥಿ ಎಂತಲೂ ಕರೆಯಲಾಗುತ್ತದೆ. ಈ ಚರ್ತುರ್ಥಿಯ ವಿಶೇಷತೆ ಏನು ಎಂಬುದನ್ನು ತಿಳಿಯೋಣ.
ಸಂಕಷ್ಟಹರ ಚತುರ್ಥಿ ಪ್ರತಿ ತಿಂಗಳು ಚೌತಿಯ ದಿನದಂದು ಬರುತ್ತದೆ. ಈ ವ್ರತವನ್ನು 21 ವಾರಗಳ ಕಾಲ ತಪ್ಪದೆ ಆಚರಿಸಿದರೆ, ಗಣೇಶನ ಅನುಗ್ರಹ ಪೂರ್ಣ ಪ್ರಮಾಣದಲ್ಲಿ ದೊರೆಯುತ್ತದೆ. ನಿಮ್ಮ ಎಲ್ಲಾ ಮನೋಕಾಮನೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.
ಸಂಕಷ್ಟಹರ ಚತುರ್ಥಿಯಂದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮುಗಿಸಿ, ಗಣೇಶನನ್ನು ಪ್ರಾರ್ಥಿಸಿ. ಪೂಜೆಯಾದ ನಂತರ ಆ ದಿನ ಪೂರ್ಣ ಚಂದ್ರನ ದರ್ಶನವಾಗುವವರೆಗೂ ಏನನ್ನು ಸೇವಿಸದೆ ಉಪವಾಸವಿರಬೇಕು. ಆರೋಗ್ಯದಲ್ಲಿ ವ್ಯತ್ಯಾಸ ಇರುವವರು ಹಾಲು, ಹಣ್ಣು ಅಥವಾ ಎಳೆನೀರು ಸೇವಿಸಬಹುದು.
ವ್ರತ ಆಚರಿಸುವವರು ಬೇಯಿಸಿರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಸಂಜೆ ಚಂದ್ರ ಗೋಚರಿಸದ ನಂತರ ಒಂದು ಲೋಟ ಹಾಲು, ಒಂದು ಉಂಗುರ, ಒಂದು ಚಿನ್ನದ ನಾಣ್ಯ ಅಥವಾ ಒಂದು ನಿಂಬೆಹಣ್ಣು ಇವುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ತೆಗೆದುಕೊಂಡು ಚಂದ್ರ ಹಾಗೂ ಗಣಪತಿಯನ್ನು ಭಕ್ತಿಯಿಂದ ಪೂಜಿಸಿ.
ನಿಂಬೆಹಣ್ಣು ಅಥವಾ ಚಿನ್ನದ ಉಂಗುರವನ್ನು ಬಲಗೈಯಿಂದ ಹಿಡಿದು ಎಡಗೈಯಿಂದ ಹಾಲಿನಿಂದ ಅರ್ಘ್ಯವನ್ನು ಕೊಡಬೇಕು. ಈ ರೀತಿ ಮೂರು ಬಾರಿ ಮಾಡಿದ ನಂತರ, ಲಕ್ಷ್ಮೀ, ಸರಸ್ವತಿ ಹಾಗೂ ಗಣೇಶನಿಗೆ ಪೂಜೆ ಮಾಡಿ ಆರತಿ ಮಾಡಬೇಕು.
ಪೂಜಾ ಗೃಹದಲ್ಲಿ ಇಟ್ಟಿರುವ ದೇವರನ್ನು ಕದಲಿಸಿ ವ್ರತವನ್ನು ಮುರಿಯಬೇಕು. ಒಂದು ವೇಳೆ ಚಂದ್ರನ ಗೋಚರವಾಗದಿದ್ದಲ್ಲಿ ಅಕ್ಕಿಯನ್ನು ಚಂದ್ರನೆಂದು ಭಾವಿಸಿ ಅಕ್ಕಿಗೆ ಅರ್ಗ್ಯವನ್ನು ಅರ್ಪಿಸುವುದು ಸೂಕ್ತ ಎಂದು ಹೇಳಲಾಗುತ್ತದೆ.
ಈ ಸಂಕಷ್ಟಹರ ಚತುರ್ಥಿಯನ್ನು ಆಚರಿಸುವುದರಿಂದ ಸುಖ, ಸಮೃದ್ಧಿ, ಆರ್ಥಿಕ ಸಮಸ್ಯೆ ಹಾಗೂ ಶಾಂತಿ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.