ಇತ್ತೀಚಿನ ದಿನಗಳಲ್ಲಿ ಜ್ಯೋತಿಷಶಾಸ್ತ್ರವು ಹಲವಾರು ವಿಧಗಳಾಗಿ ವಿಭಜನೆಯಾಗಿವೆ. ಜ್ಞಾನ ಬೆಳೆದಂತೆಲ್ಲಾ ಹೊಸ ಚಿಂತನೆಗಳಿಗೆ ಅವಕಾಶವಾಗುವಂತೆ ಜ್ಯೋತಿಷಶಾಸ್ತ್ರದಲ್ಲೂ ಅನೇಕ ಉಪವಿಭಾಗಗಳಿವೆ. ಪ್ರತಿಯೊಂದು ವಿಭಾಗವೂ ತನ್ನದೇ ಆದ ಪ್ರಾಮುಖ್ಯವನ್ನು ಹೊಂದಿದೆ. ಅವುಗಳಲ್ಲಿ ಕೆಲವನ್ನು ನೋಡೋಣ:
1. ಜ್ಯೋತಿಷಶಾಸ್ತ್ರ:
ಜ್ಯೋತಿಷ ಶಾಸ್ತ್ರವು ಜನ್ಮಕುಂಡಲಿಯ ಆಧಾರದಿಂದ ಗ್ರಹಗಳ ಸ್ಥಾನಕ್ಕನುಸಾರವಾಗಿ ದಶಾ-ಭುಕ್ತಿಯನ್ನು ಅನುಸರಿಸಿ, ಗೋಚಾರಕ್ಕೆ ತಕ್ಕಂತೆ ಫಲವನ್ನು ನುಡಿಯುವುದೇ ಆಗಿದೆ. ಜನ್ಮದಿನಾಂಕ, ಸಮಯ ಮತ್ತು ಸ್ಥಳದ ಮಾಹಿತಿ ಪಡೆದು ಅಲ್ಲಿನ ಅಕ್ಷಾಂಶ-ರೇಖಾಂಶಗಳನ್ನು ಅನುಸರಿಸಿ ಜಾತಕವನ್ನು ತಯಾರಿಸಲಾಗುವುದು. ನಮ್ಮ ಪೂರ್ವಪುಣ್ಯದ ಪ್ರಕಾರದಂತೆ, ನಮ್ಮ ಕರ್ಮಾನುಸಾರ ಘಟಿಸುವ ಘಟನೆಗಳನ್ನು, ನಡೆಯುವ ದಶಾ-ಭುಕ್ತಿ ನಕ್ಷತ್ರಗಳನ್ನು ಆಧರಿಸಿ, ಗ್ರಹಗಳ ಸ್ಥಿತಿಗೆ ತಕ್ಕಂತೆ ಜೀವನದ ಆಗುಹೋಗುಗಳನ್ನು ತಿಳಿಸಲಾಗುತ್ತದೆ.
2. ವಾಸ್ತುಶಾಸ್ತ್ರ:
ಗೃಹನಿರ್ಮಾಣ, ನಿವೇಶನಗಳ ಬಗೆಗೆ ಮಾಹಿತಿಯನ್ನು ನೀಡುವುದಲ್ಲದೇ ನಮಗೆ ಹೊಂದುವ ದಿಕ್ಕುಗಳ ಮಾಹಿತಿಯನ್ನೂ ನೀಡುತ್ತದೆ. ವಿವಿಧ ದಿಕ್ಕುಗಳ ಸಮರ್ಪಕ ಬಳಕೆಯೇ ವಾಸ್ತುಶಾಸ್ತ್ರವಾಗಿದೆ. ಪಂಚಭೂತ ತತ್ವಗಳಾದ ಗಾಳಿ, ನೀರು, ಬೆಂಕಿ, ಆಕಾಶ ಮತ್ತು ಭೂಮಿಯ ಉಪಯೋಗಗಳನ್ನು ಸಮರ್ಪಕವಾಗಿ ಬಳಸುವುದೇ ವಾಸ್ತುಶಾಸ್ತ್ರವಾಗಿದೆ. ಪ್ರಕೃತಿಯು ನೀಡಿರುವ ಪ್ರತಿಯೊಂದನ್ನೂ ಮಾನವನ ಜೀವನದ ಉನ್ನತಿಗೆ, ಸುಖಕ್ಕೆ ಮತ್ತು ಅನುಕೂಲಕ್ಕಾಗಿ ಬಳಸಿಕೊಳ್ಳುವಂತೆ ನೆರವಾಗುವುದೇ ವಾಸ್ತುವಿಜ್ಞಾನವಾಗಿದೆ. ವಾಸ್ತುಶಾಸ್ತ್ರವು ವಾಸಿಸುವ ಮನೆಗೆ ಸಂಬಂಧಪಟ್ಟ ಎಲ್ಲ ವಿಷಯಗಳ ಬಗ್ಗೆ ತಿಳಿಸುವ ಶಾಸ್ತ್ರ. ನಿವೇಶನದ ದಿಕ್ಕು, ನೀರಿನ ಆರ್ದ್ರತೆ, ಮನೆಯಲ್ಲಿ ಪೂಜಾಗೃಹ, ಶೌಚಾಲಯ, ನೀರಿನ ಟ್ಯಾಂಕು ಇತ್ಯಾದಿಗಳು ಇರಬೇಕಾದ ದಿಕ್ಕನ್ನು ಆಳವಾಗಿ ಅಧ್ಯಯನ ಮಾಡುವ ಶಾಸ್ತ್ರವಿದು.
3. ಹಸ್ತಸಾಮುದ್ರಿಕಾ ಶಾಸ್ತ್ರ:
ಹಸ್ತದಲ್ಲಿರುವ ರೇಖೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಭವಿಷ್ಯವನ್ನು ಹೇಳುವ ಶಾಸ್ತ್ರ ಇದಾಗಿದೆ. ಜಾತಕ ಇಲ್ಲದಿರುವವರಿಗೆ, ಹಸ್ತರೇಖೆಗಳನ್ನು ಪರಿಶೀಲಿಸಿ ಪೃಚ್ಛಕರ ಪ್ರಶ್ನೆಗಳಿಗೆ ಪರಿಹಾರವನ್ನು ನೀಡಬಲ್ಲ ಶಾಸ್ತ್ರ ಇದು. ಕರವನ್ನು ಮೂರು ಭಾಗಗಳಾಗಿ ವಿಂಗಡಿಸಿದಾಗ ಬೆರಳುಗಳು, ಹಸ್ತ ಮತ್ತು ಮಣಿಕಟ್ಟು ಎಂದಾಗುತ್ತದೆ. ಬೆರಳುಗಳ ಉದ್ದ, ಹಸ್ತದ ಅಗಲಗಳನ್ನು ಗಮನಿಸಿ ವ್ಯಕ್ತಿಯ ಸ್ವಭಾವವನ್ನು ನಿರ್ಧರಿಸಬಹುದಾಗಿದೆ. ಪರ್ವಗಳನ್ನು ಗಮನಿಸಿ ಯಾವ ಪರ್ವವು ಅನುಕೂಲಕರವಾಗಿದೆ ಎಂದು ತಿಳಿದು ಅದಕ್ಕೆ ತಕ್ಕಂತೆ ಉದ್ಯೋಗ ಮಾಡಬಹುದಾಗಿದೆ. ಹೃದಯರೇಖೆ, ಬುದ್ಧಿರೇಖೆ, ಜೀವರೇಖೆ ಎಂದು ಹಸ್ತದಲ್ಲಿ ಮೂರು ರೇಖೆಗಳು ಮುಖ್ಯ ರೇಖೆಗಳಾಗುತ್ತವೆ. ಒಂದು ರೇಖೆ ಇನ್ನೊಂದು ರೇಖೆಯನ್ನು ಕೂಡಿಕೊಂಡರೆ ಯೋಗ ಎನಿಸಿಕೊಳ್ಳುತ್ತದೆ. ಆದರೆ ಅದು ಶುಭಯೋಗವೋ ಅಶುಭಯೋಗವೋ ಎಂದು ತಿಳಿದು ಮುನ್ನೆಚ್ಚರಿಕೆ ವಹಿಸಲು ಸಾಧ್ಯವಿದೆ. ಹಸ್ತಸಾಮುದ್ರಿಕಾದಲ್ಲಿ ಹೆಬ್ಬೆಟ್ಟಿಗೆ ಅತ್ಯಂತ ಮಹತ್ವವಿದೆ. ಹೆಬ್ಬೆಟ್ಟಿನಿಂದ ಮನುಷ್ಯನ ಜೀವನಚರಿತ್ರೆಯನ್ನೇ ಹೇಳಬಹುದು.
ಇದಲ್ಲದೇ ಅಂಗ ಸಾಮುದ್ರಿಕಾ ಶಾಸ್ತ್ರ, ಆಕೃತಿ ವಿದ್ಯಾ ಹಾಗೂ ಪದತಲ ಶಾಸ್ತ್ರಗಳೂ, ಹಸ್ತಸಾಮುದ್ರಿಕ ಶಾಸ್ತ್ರದ ಅಡಿಯಲ್ಲಿಯೇ ಬರುತ್ತವೆ. ಅಂಗ ಸಾಮುದ್ರಿಕಶಾಸ್ತ್ರದಲ್ಲಿ ದೇಹಲಕ್ಷಣದಿಂದ ವ್ಯಕ್ತಿಯ ಸ್ವರೂಪ, ಗುಣಗಳನ್ನು ತಿಳಿಯಬಹುದಾಗಿದೆ. ಆಕೃತಿ ವಿದ್ಯಾ- ಮಚ್ಚೆಗಳನ್ನು ಆಧರಿಸಿ ಫಲಗಳನ್ನು ನುಡಿಯುವ ವಿದ್ಯೆಯಾಗಿದೆ. ವಿವಿಧ ಕಡೆ ಇರುವ ಮಚ್ಚೆಗಳಿಗೆ ವಿವಿಧ ರೀತಿಯ ಫಲಗಳಿರುತ್ತವೆ. ಕೆಂಪುಮಚ್ಚೆ, ಕಪ್ಪುಮಚ್ಚೆ – ಎಂದು ಎರಡು ವಿಧವಾಗಿ ವಿಂಗಡಿಸಬಹುದು. ಪದತಲಶಾಸ್ತ್ರದಲ್ಲಿ ಪಾದರೇಖೆಗಳ ಅವಲೋಕನ ಮಾಡುತ್ತಾರೆ. ಹಸ್ತರೇಖೆಗಳ ಅಧ್ಯಯನದಂತೆ ಪಾದದ ತಳಭಾಗದಲ್ಲಿರುವ ರೇಖೆಗಳನ್ನು ಗುರುತಿಸಿ ಫಲವನ್ನು ಹೇಳಲಾಗುತ್ತದೆ.
4. ಪಂಚಪಕ್ಷಿ ಶಾಸ್ತ್ರ:
ಜ್ಯೋತಿಷ ಶಾಸ್ತ್ರಕ್ಕೆ ಪೂರಕವಾದ ಈ ಪಂಚಪಕ್ಷಿಶಾಸ್ತ್ರವು ಪಂಚಮಹಾಭೂತಗಳ ಆಧಾರದಿಂದ ರೂಪಿತವಾಗಿದೆ. ಪಂಚಮಹಾಭೂತಗಳ ಆಧಾರದ ಮೇಲೆ ಈ ಬ್ರಹ್ಮಾಂಡ, ಪಿಂಡಾಂಡಗಳು ಚಲಿಸುತ್ತವೆ ಎಂಬ ವಿಷಯ ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಪ್ರತಿನಿತ್ಯ ಗ್ರಹಗಳು ರವಾನಿಸುವ, ಪಂಚಮಹಾಭೂತಗಳು ಉತ್ಪಾದಿಸುವ ಶುಭ-ಅಶುಭ ಕಿರಣಗಳನ್ನು ಸ್ವೀಕರಿಸುವ ಹಾಗೂ ಈ ಸೂಕ್ಷ್ಮ ಕಿರಣಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರವೇ ಪಂಚಪಕ್ಷಿಶಾಸ್ತ್ರ. ಜನ್ಮಜಾತಕ ಮತ್ತು ಜನ್ಮನಕ್ಷತ್ರವನ್ನು ಮೊದಲು ತಿಳಿಯಬೇಕು. ನಂತರ ಜಾತಕರ ಜನನವು ಶುಕ್ಲಪಕ್ಷದಲ್ಲೋ ಅಥವಾ ಕೃಷ್ಣಪಕ್ಷದಲ್ಲೋ ಎಂಬುದನ್ನು ಅರಿಯಬೇಕು. ಜನ್ಮನಕ್ಷತ್ರದ ಆಧಾರದ ಮೇಲೆ ಜನ್ಮಪಕ್ಷಿಯನ್ನು ಗುರುತಿಸಬೇಕು. ಜನ್ಮಪಕ್ಷಿಯನ್ನು ಕಂಡುಹಿಡಿದಮೇಲೆ ಆ ಪಕ್ಷಿಯ ಎಲ್ಲ ವಿಷಯಗಳನ್ನೂ ಗಣನೆಗೆ ತೆಗೆದುಕೊಂಡು ವಿಶ್ಲೇಷಿಸಬೇಕಾಗುತ್ತದೆ.
5. ಕವಡೆ ಶಾಸ್ತ್ರ:
ಕವಡೆಗಳನ್ನು ಉಪಯೋಗಿಸಿ ಭವಿಷ್ಯ ನುಡಿಯುವ ಶಾಸ್ತ್ರ. ಇದಕ್ಕಾಗಿ 12, 24, 108 ಕವಡೆಗಳನ್ನು ಉಪಯೋಗಿಸುವರು. 12ರ ಒಳಗೆ ಕವಡೆ ಬಿದ್ದರೆ 12 ರಾಶಿಗಳಲ್ಲಿ ಒಂದಾಗಿರುತ್ತದೆ. 24 ಎಂದರೆ ದಿನದ 24 ಗಂಟೆಗಳು ಎಂದು ಪರಿಗಣನೆ. 108 ಎಂದರೆ ನಕ್ಷತ್ರದ ಯಾವ ಪಾದದಲ್ಲಿ ಕವಡೆ ಬಿದ್ದಿದೆ ಎಂದು ಅರಿತು ಅದರ ಪ್ರಕಾರ ಭವಿಷ್ಯ ಹೇಳುವ ಶಾಸ್ತ್ರ ಈ ಕವಡೆ ಶಾಸ್ತ್ರವಾಗಿದೆ.
6. ಶಕುನ ಶಾಸ್ತ್ರ:
ಪೃಚ್ಛಕರು ಕೇಳಿದ ಪ್ರಶ್ನೆಯ ಸಮಯಕ್ಕೆ ಸರಿಯಾಗಿ ಪ್ರಕೃತಿಯಲ್ಲಾಗುವ ಶಕುನಗಳನ್ನು ಅನುಸರಿಸಿ, ಫಲಗಳನ್ನು ಹೇಳುವ ಶಾಸ್ತ್ರ. ಪ್ರಕೃತಿಯಲ್ಲಾಗುವ ಬದಲಾವಣೆಗಳನ್ನು ಗಮನಿಸಿ ದೇಶಕ್ಕೂ ಭವಿಷ್ಯವನ್ನು ನುಡಿಯಬಹುದಾಗಿದೆ. ಪಂಚಭೂತಗಳಿಂದ ಆವೃತವಾಗಿರುವ ಈ ಬ್ರಹ್ಮಾಂಡದಲ್ಲಿ ಆಗುವ ವ್ಯತ್ಯಾಸಗಳನ್ನು ಗಮನಿಸಬೇಕು. ಕಾಲದಿಂದ ಕಾಲಕ್ಕೆ ಉಂಟಾಗುವ ಶಕುನಗಳನ್ನು ಆಧರಿಸಿ ಹೇಳುವ ಶಾಸ್ತ್ರವಾಗಿದೆ.
ಇವುಗಳಲ್ಲದೇ ಇನ್ನೂ ಹಲವಾರು ವಿಧಗಳಿವೆ, ಜ್ಯೋತಿಷ್ಯಶಾಸ್ತ್ರದಲ್ಲಿ. ಅವುಗಳನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.