ADVERTISEMENT

ವೃಷಭ, ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ: ಶಕ್ತಿ, ಗುಣಗಳ ಬಗ್ಗೆ ‌ತಿಳಿದುಕೊಳ್ಳಿ

ಎಲ್.ವಿವೇಕಾನಂದ ಆಚಾರ್ಯ
Published 14 ಸೆಪ್ಟೆಂಬರ್ 2025, 0:30 IST
Last Updated 14 ಸೆಪ್ಟೆಂಬರ್ 2025, 0:30 IST
   
ಜ್ಯೋತಿಷ ಶಾಸ್ತ್ರದಲ್ಲಿ ಗ್ರಹಗಳ ಕಾರಕತ್ವ ತುಂಬಾ ಮುಖ್ಯವಾದುದು. ಎಂದರೆ ಪ್ರತಿ ಗ್ರಹವೂ ಕೆಲವು ನಿರ್ದಿಷ್ಟ ಅಂಶಗಳು, ಸಂಬಂಧಗಳು ಮತ್ತು ಜೀವನದ ಘಟನೆಗಳನ್ನು ಸಂಕೇತಿಸುವುದೇ ಅದರ ಕಾರಕತ್ವ. ಉದಾಹರಣೆಗೆ, ಸೂರ್ಯನು ತಂದೆ ಅಥವಾ ರಾಜನ ಸಂಕೇತವಾದರೆ, ಚಂದ್ರನು ತಾಯಿಯ ಸಂಕೇತ. ಈ ಕಾರಕತ್ವಗಳು ಜಾತಕದ ವಿಶ್ಲೇಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಏಕೆಂದರೆ ಅವು ನಿರ್ದಿಷ್ಟ ವಿಷಯಗಳ ಸಂಭವನೀಯತೆಯನ್ನು ಮತ್ತು ಅವುಗಳ ಫಲಿತಾಂಶಗಳನ್ನು ನಿರ್ಧರಿಸಲು ಸಹಾಯ ಮಾಡುತ್ತವೆ. ಈ ಕಾರಕತ್ವದ ಆಧಾರದಲ್ಲಿ ಮತ್ತು ಜಾತಕದಲ್ಲಿ ಅನ್ಯ ರಾಶಿಗಳ ಸ್ಥಿತಿಗತಿಯ ಆಧಾರದಲ್ಲಿ ಜ್ಯೋತಿಷದ ಲೆಕ್ಕಾಚಾರ ನಡೆಯುತ್ತದೆ. ಈ ಲೇಖನದಲ್ಲಿ ವೃಷಭ ಮತ್ತು ತುಲಾದ ರಾಶಿಯ ಅಧಿಪತಿಯಾಗಿರುವ ಶುಕ್ರ ಗ್ರಹ ಮನುಷ್ಯನ ಜಾತಕದ ಮೇಲೆ ಪ್ರಭಾವ ಬೀರಬಹುದಾದ ಗುಣಗಳನ್ನು ತಿಳಿದುಕೊಳ್ಳೋಣ.

ಶುಕ್ರನು ವೃಷಭ ಮತ್ತು ತುಲಾದ ಅಧಿಪತಿಯಾಗಿರುತ್ತಾನೆ. ವೃಷಭದಲ್ಲಿ ಪ್ರಥ್ವಿ ತತ್ವದಲ್ಲಿದ್ದರೆ, ತುಲಾದಲ್ಲಿ ವಾಯು ತತ್ವದಲ್ಲಿರುವನು. ತುಲಾ ಶುಕ್ರನು ಬಹಳ ಧನಾತ್ಮಕನಾಗಿರುತ್ತಾನೆ. ಕಾರಣ ಇದೊಂದು ಪುರುಷ ರಾಶಿ. ಅದಕ್ಕೆ ತುಲಾ ಶುಕ್ರನಿಗೆ ಪ್ರಾಧಾನ್ಯ ಜಾಸ್ತಿ. ಅದೇ ವೃಷಭದಲ್ಲಿ ಋಣಾತ್ಮಕ ಆಗಿದ್ದರಿಂದ ಶಕ್ತಿಹೀನನಾಗಿ ಇರುತ್ತಾನೆ. ಶುಕ್ರನು ಚಂದ್ರನಂತೆ ಸ್ತ್ರೀ ಗ್ರಹ. ಚಂದ್ರನಂತೆಯೇ ಸೌಂದರ್ಯಕ್ಕೆ ಕಾರಕ ಗ್ರಹವಾಗಿದೆ. ಜೊತೆಗೆ ಒಳ್ಳೆಯ ಜ್ಯೋತಿಷ್ಯಗಾರರು ಆಗಿದ್ದು, ಜ್ಯೋತಿಷ್ಯದಲ್ಲಿ ಪರಿಣಿತರು ಆಗಿರುತ್ತಾರೆ. ಇವರಿಗೆ ಒಂದು ಒಳ್ಳೆಯ ಸ್ಥಾನಮಾನ ಉಂಟು. ಇದೊಂದು ಶ್ರೀಮಂತ ಗ್ರಹವಾಗಿದೆ. ಯಾರನ್ನೂ ಅತಿಯಾಗಿ ನಂಬುವುದಿಲ್ಲ ಹಾಗೂ ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ.

ಸದಾ ಸಂಶಯವನ್ನು ಪಡುತ್ತಾ ಇರುತ್ತಾರೆ. ಇವರು ಜನರನ್ನು ಜಾಸ್ತಿ ಸ್ನೇಹಿತರನ್ನಾಗಿ ಮಾಡಿಕೊಳ್ಳುವುದಿಲ್ಲ. ಇವರದ್ದು ಯಾವಾಗಲೂ ಒಂದೇ ದಾರಿ. ತಮ್ಮ ಕುದುರೆಗೆ ಮೂರೇ ಕಾಲು ಎನ್ನುವವರು. ಕಾರಣ ಶುಕ್ರಚಾರ್ಯರಿಗೆ ಒಂದೇ ಕಣ್ಣು. ಇವರುಗಳು ಹೇಳಿದ್ದೇ ಸರಿ. ಇವರು ಶುಕ್ರಾಚಾರ್ಯನಂತೆ ಹಟ ಮಾಡುತ್ತಿರುತ್ತಾರೆ. ಲಗ್ನದಲ್ಲಿ ಶುಕ್ರ ಇದ್ದಲ್ಲಿ ಅವರು ನೂರಕ್ಕೆ ನೂರು ಕೆಡಿಸುತ್ತಾರೆ. ಶ್ರೀಮಂತ ವಸ್ತುಗಳ ಸಂಗ್ರಹವನ್ನು ಮಾಡುತ್ತಾರೆ. ಮನೆಯನ್ನು ಅಲಂಕಾರ ಮಾಡುವ ಗ್ರಹ. ಸುಗಂಧ ವಸ್ತುಗಳ ಸಂಗ್ರಹವನ್ನು ಮಾಡುವವರು ಆಗಿರುತ್ತಾರೆ. ಇವರದ್ದು ಅದ್ಧೂರಿತನದ, ಆಡಂಬರದ ಮನೆ. ಐಶಾರಾಮಿ ಜೀವನ ನಡೆಸುತ್ತಿರುತ್ತಾರೆ. ಇವರಲ್ಲಿ ದೊಡ್ಡ ಗಾಡಿ ಇದೆ ಎಂದರೆ ಇವರ ಶುಕ್ರ ಬಹಳ ಒಳ್ಳೆಯದು. ಇವರುಗಳು ಒಳ್ಳೇ ನ್ಯಾಯವಂತರು. ಬಹಳ ಒಳ್ಳೆಯ ಹೊಂದಾಣಿಕೆಯಿಂದ ಇರುತ್ತಾರೆ. ಇವರುಗಳು ಭಾವನಾತ್ಮಕ ಜೀವಿಗಳು. ಇವರು ಕೂಡ ಶುಕ್ರಾಚಾರ್ಯನಂತೆ ಯಾರೊಂದಿಗೂ ಸೇರುವುದಿಲ್ಲ. ಒಂಟಿ ಜೀವಿಗಳು ಆಗಿರುತ್ತಾರೆ.

ADVERTISEMENT

ವೈದ್ಯಕೀಯ ವೃತ್ತಿಯನ್ನು ಮಾಡುವವರು ಆಗಿರುತ್ತಾರೆ. ಒಳ್ಳೆಯ ಪ್ರಾಧ್ಯಾಪಕ ವೃತ್ತಿಯನ್ನು ಮಾಡುವವರು ಆಗಿರುತ್ತಾರೆ. ಶೃಂಗಾರ ವಿದ್ಯಗಳಲ್ಲಿ ಪ್ರವೀಣರು ಆಗಿರುತ್ತಾರೆ. ನವ ರಸ ವಿದ್ಯಗಳಲ್ಲಿ ಪರಿಣಿತರು ಕೂಡ ಆಗಿರುತ್ತಾರೆ. ಶುಕ್ರನು ಒಳ್ಳೆಯದಿಂದರೆ ಮನೆಯಲ್ಲಿ ಸುಗಂಧದ ಪರಿಮಳ ಬರುತ್ತದೆ. ‌ಅದೇ ರೀತಿ ಬುಧ ಒಳ್ಳೆಯದಿದ್ದಲ್ಲಿ ಮನೆ ತುಂಬಾ ಪೇಪರ್, ಗಲೀಜು ಇರುತ್ತೆ. ಅದೇ ಸೂರ್ಯನು ಬಲಿಷ್ಠವಾಗಿದ್ದಲ್ಲಿ ಕೆಲಸಗಾರರು ಬಾಗಿಲನ್ನು ತೆಗೆಯುತ್ತಾರೆ. ಅದೇ ರೀತಿ ಚಂದ್ರನು ಬಲಿಷ್ಠವಾಗಿದ್ದಲ್ಲಿ ಮನೆ ಒಡತಿ (ಹೆಂಡತಿ) ಬಾಗಿಲನ್ನು ತೆಗೆಯುತ್ತಾರೆ. ಅದೇ ಮನೆ ತುಂಬಾ ಗಲೀಜುಗಳ ರಾಶಿ ಇದ್ದಲ್ಲಿ, ಶನಿ ಗ್ರಹ ಶಕ್ತಿಶಾಲಿಯಾಗಿರುತ್ತೆ. ಶುಕ್ರನಲ್ಲಿ ಕೆಟ್ಟ ಗುಣವಿದ್ದಲ್ಲಿ ಹೊಟ್ಟೆ ಕಿಚ್ಚು ಜಾಸ್ತಿ ಇರುತ್ತದೆ. ತನಗಿಂತಾ ಹೆಚ್ಚಿಗೆ ವಿದ್ಯೆ ಇತ್ತೆಂದರೆ ಹೊಟ್ಟೆ ಕಿಚ್ಚು ಜಾಸ್ತಿ ಪಡುತ್ತಾರೆ. ಇದಕ್ಕೆ ಕಾರಣ ಶುಕ್ರಾಚಾರ್ಯರು ಯಾರೊಂದಿಗೂ ಸೇರುವುದಿಲ್ಲ. ಇದಕ್ಕೆ ಮತ್ತೊಂದು ಕಾರಣ ತನಗೆ ಎಲ್ಲಾ 64 ಕಲೆಗಳೂ ಗೊತ್ತಿವೆ ಎನ್ನುವ ಅಹಂನಲ್ಲಿ ಇರುತ್ತಾರೆ. ಆದರೆ ಇವರುಗಳು ಅತಿ ಉತ್ತಮ ರೀತಿಯಿಂದ ಹೊಂದಾಣಿಕೆ ಮಾಡಿಕೊಂಡು ಇರುತ್ತಾರೆ. ಇವರು ಒಳ್ಳೆಯ ಸುಂದರವಾದ ಕೋಮಲ ಶರೀರವನ್ನು ಹೊಂದಿರುತ್ತಾರೆ.

ರತ್ನ: ವಜ್ರ, ಬೆಳ್ಳಿ

ಬಣ್ಣ: ಬಿಳಿ

ಸಂಖ್ಯೆ: 6

ಕಾರಕತ್ವ: ಕಳತ್ರ

ಉಛ್ಚ ರಾಶಿ: ಮೀನ

ನೀಚ ರಾಶಿ: ಕನ್ಯಾ

ದಶಾ ವರ್ಷ: 20

ಮೂಲ ತ್ರಿಕೋಣ: ತುಲಾ ರಾಶಿ

ಉಛ್ಛಾಂಶ 27

ದಶಾವರ್ಷ: 20 ವರ್ಷಗಳು

ದಿಕ್ಕು: ಆಗ್ನೇಯ

ಧಾನ್ಯ: ಅವರೆ

ಇಂದ್ರಿಯ: ನಾಲಿಗೆ

ಕಾತ್ರಕ: ಕಫ

ದೃಷ್ಟಿ: 7

ಮಿತ್ರ ಗ್ರಹಗಳು: ಬುಧ, ಶನಿ

ಶತ್ರು ಗ್ರಹ: ಸೂರ್ಯ, ಚಂದ್ರ

ಸಮ ಗ್ರಹ: ಕುಜ, ಗುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.