ADVERTISEMENT

2013ರಲ್ಲಿ ತಪ್ಪಿದ್ದ ಸಿಎಂ ಗಾದಿ ಈಗ ಸಿಗುವುದೇ? ಹೇಗಿದೆ ಜಿ. ಪರಮೇಶ್ವರ್ ಗ್ರಹಗತಿ

ಮಹಾಬಲಮೂರ್ತಿ ಕೊಡ್ಲೆಕೆರೆ
Published 27 ನವೆಂಬರ್ 2025, 1:30 IST
Last Updated 27 ನವೆಂಬರ್ 2025, 1:30 IST
<div class="paragraphs"><p>ಗೃಹ ಸಚಿವ ಜಿ. ಪರಮೇಶ್ವರ್</p></div>

ಗೃಹ ಸಚಿವ ಜಿ. ಪರಮೇಶ್ವರ್

   

ಶನೈಶ್ಚರನ ಮತ್ತು ಬುಧ ಗ್ರಹಗಳ ನಿಮ್ನ ಸ್ಥಿತಿ ಗತಿಯಿಂದಾಗಿ ನಮ್ಮ ರಾಜ್ಯದ ಸದ್ಯದ ಗೃಹ ಖಾತೆಯ ಸಚಿವರಾಗಿರುವ ಜಿ.ಪರಮೇಶ್ವರ ಅವರು 2013ರಲ್ಲಿ ಮುಖ್ಯಮಂತ್ರಿಯಾಗುವ ಅವಕಾಶದಿಂದ ವಂಚಿತರಾದರು. ತಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ತಮ್ಮ ಪಕ್ಷಕ್ಕೆ ಪೂರ್ಣ ಪ್ರಮಾಣದ ಜಯವನ್ನು ತಂದುಕೊಟ್ಟ ಕೀರ್ತಿ ಇವರಿಗೆ ಸಲ್ಲಬೇಕು. ಆದರೆ, ಮುಖ್ಯಮಂತ್ರಿಯಾಗುವ ಯೋಗವನ್ನು ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡರು. ಇವರು ತಮ್ಮ ಕ್ಷೇತ್ರ ಕೊರಟಗೆರೆಯಲ್ಲಿ ದುರದೃಷ್ಟವಶಾತ್ ಸೋಲು ಅನುಭವಿಸಿದ್ದರು.

ಈ ಸೋಲಿನಲ್ಲಿ ತನ್ನ ಪಕ್ಷದಲ್ಲೇ ಕೆಲವರು ಸೇರಿ ನಡೆಸಿದ ಒಳಸಂಚು ಹರಳುಗಟ್ಟಿದೆ ಎಂದು ಸ್ವತಃ ನೇರವಾಗಿ ಪರಮೇಶ್ವರ ಅವರು ಹೇಳದೇ ಇದ್ದರೂ, ಪರಮೇಶ್ವರ ಅವರ ಆಪ್ತರೇ ಈ ನೇರವಾದ ಆರೋಪವನ್ನು ಇತ್ತೀಚಿನವರೆಗೂ ಆಗಾಗ ಮಾಡುತ್ತ ಇದ್ದದ್ದು ಸುಳ್ಳೇನಲ್ಲ. ಜಿ.ಪರಮೇಶ್ವರ ಅವರ ಕುಂಡಲಿಯ ಶನಿ ಗ್ರಹ ಇವರ ಮೇಲುಗೈ ಅನ್ನು 2013ರಲ್ಲಿ ತಡೆಯುವಂತೆ ಮಾಡಿತ್ತು. ಶನೈಶ್ಚರನಿಗೆ ಹಾಗೆ ನೋಡಿದರೆ ಏಕಾಂಗಿಯಾಗಿ ಪರಮೇಶ್ವರ ಅವರನ್ನು ತಡೆಯುವ ಶಕ್ತಿ ಇರಲಿಲ್ಲ.

ADVERTISEMENT

ಈ ಶಕ್ತಿ ದೊರಕಿದ್ದೇ ಬುಧನಿಂದಾಗಿ. ಬುಧ ಗ್ರಹಕ್ಕೆ ಆ ಕಾಲ ಘಟ್ಟದಲ್ಲಿ ತಾನು ನಿರಂತರವಾಗಿ ಕೇತುವಿನ ಘಾತಕ ಶಕ್ತಿಯನ್ನು ತಡೆಯಲು ಅಸಾಧ್ಯವಾದ ಸ್ಥಿತಿ ಇದ್ದಿದ್ದರಿಂದ ಬುಧನ ಜತೆಗೇ ಸಂಬಂಧ ಪಡೆದಿದ್ದ ಶನೈಶ್ಚರನೂ ತೀವ್ರವಾಗಿ ಅಸಹಾಯಕತೆಗೆ ತಳ್ಳಲ್ಪಟ್ಟಿದ್ದ. ಆ ಸಮಯದಲ್ಲಿ ಹೀಗಾಗಿ ಉಸಿರು ಕಟ್ಟಿದ್ದ ತೀವ್ರ ಅಸಹಾಯಕತೆಯೊಂದಿಗೆ ಪರಮೇಶ್ವರ ಅವರು ಇರುವಂತೆ ಆಯಿತು. ಆ ಎರಡು ಗ್ರಹಗಳೇ 2013ರಲ್ಲಿ ತಮ್ಮ ದುರ್ಬಲ ಸ್ಥಿತಿಯ ಮೂಲಕ ಪರಮೇಶ್ವರ್ ಅವರ ವರ್ತಮಾನವನ್ನು ವಿಷಮಗೊಳಿಸಿದವು.

ಬೌದ್ಧಿಕತೆಗೆ ಶಕ್ತಿ ತುಂಬಬೇಕಿದ್ದ ಬುಧ, ಪರಮೇಶ್ವರರನ್ನು ಮಂಕುಗೊಳಿಸಲು ಸಫಲನಾಗಿದ್ದ. ಬಹುತೇಕ ತನ್ನ ಗೆಲುವು ಕಷ್ಟಕರ ಎಂದು ಪರಮೇಶ್ವರ್ ಅವರಿಗೆ ತಿಳಿದಿದ್ದರೂ ಪಕ್ಷದ ಅಧ್ಯಕ್ಷರಾಗಿ ಅವರು ಇದ್ದಿದ್ದರಿಂದ ಕೇವಲ ತನ್ನ ಕ್ಷೇತ್ರದ ಮೇಲೇ ಲಕ್ಷ್ಯಹಾಕಲು ಅವರಿಗೆ ದುಸ್ತರವಾಗಿತ್ತು. ಎಲ್ಲಾ ಕಡೆಗಿನ ವಿದ್ಯಮಾನಗಳ ಮೇಲೂ ಅವರು ಗಮನ ಹರಿಸಲೇಬೇಕಾದ ಅನಿವಾರ್ಯತೆ ಇತ್ತು. ತನ್ನ ಕ್ಷೇತ್ರದಲ್ಲಿನ ತನ್ನದಾದ ಸೋಲನ್ನು ಸ್ವೀಕರಿಸಲೇಬೇಕಾಗಿ ಬಂತು. ಪರಿಣಾಮ ಮುಖ್ಯಮಂತ್ರಿ ಪಟ್ಟದ ಸಂಭಾವ್ಯತೆ ತಪ್ಪಿತು. ಆಗ ಬೇಕಿದ್ದ ಮುಖ್ಯಮಂತ್ರಿ ಪಟ್ಟ ತಪ್ಪಿ ಹೋದುದನ್ನು ಅಸಹಾಯಕವಾಗಿ ನೋಡುವ ಅಪರೂಪದ ಸಹನೆ ತೋರಿದ್ದು ಪರಮೇಶ್ವರ ಅವರ ಹಿರಿಮೆಯೇ. ನಾಯಕನಲ್ಲೀ ಈ ಗುಣವೂಬೇಕು.

ಸದ್ಯದ ಗ್ರಹ ಸ್ಥಿತಿ ಮತ್ತು ಜಿ. ಪರಮೇಶ್ವರ

ತುಸು ಪರಿಣಾಮಕಾರಿಯಾದ ಹೆಜ್ಜೆಗಳೊಂದಿಗೆ ಪರಮೇಶ್ವರ ಅವರು ತಮ್ಮ ಈವರೆಗಿನ ರಾಜಕೀಯ ಜೀವನದ ಆಳವಾದ ಅನುಭವದೊಂದಿಗೆ ಮುಂದಕ್ಕೆ ಬಂದು ಅವರದೇ ಆದ ದಾಳಗಳನ್ನು ಉರುಳಿಸುವ ನಿಟ್ಟಿನಲ್ಲಿ ಸಫಲರಾದರೆ, ಬಿಜೆಪಿ ಪಕ್ಷವು ಕಾಂಗ್ರೆಸ್ ಪಕ್ಷದ ಸದ್ಯದ ಆಂತರಿಕ ತೊಳಲಾಟಗಳಲ್ಲಿ ತಾನು

ಕೈ ಆಡಿಸದಂತೆ ಮಾಡಲು ಪರಮೇಶ್ವರ ಅವರಿಗೆ ಸಾಧ್ಯವಿದೆ. ರಾಹು ಗ್ರಹದ ಅತ್ಯುತ್ತಮ ಬಲ ಪರಮೇಶ್ವರ ಅವರ ಪಾಲಿಗೆ ಬೆಳಕು ವಿಸ್ತರಿಸುವ ಬಲಯುತ ಮೂಲವನ್ನು ಸದ್ಯ ಒದಗಿಸಲು ಸಾಧ್ಯತೆ ಪಡೆದಿದೆ. ಬರುವ ಡಿಸೆಂಬರ್ 5 ನಂತರದ ಸುಮಾರು 6 ತಿಂಗಳುಗಳ ಕಾಲ ಗುರು ಬಲ ದಟ್ಟವಾದ ಗಟ್ಟಿ ಆಸರೆ ಹಾಗೂ ಬೆಂಬಲ ಪರಮೇಶ್ವರ ಅವರಿಗೆ ಒದಗುತ್ತದೆ.

ತನ್ನ ಬಲದ ಮೇಲೆ ತಾನು ಅವಲಂಬನ ಪಡೆಯುವುದರ ಬಗ್ಗೆ ಸದ್ಯ ಕಾಂಗ್ರೆಸ್ ಯೋಚಿಸಲೇಬೇಕು ಅಂದರೆ ಶನೈಶ್ಚರನ ಕೃಪೆ ಪಕ್ಷಕ್ಕೆ ಅನಿವಾರ್ಯವಾಗಿದೆ. ಕಾಂಗ್ರೆಸ್ ಪಕ್ಷದ ಸದ್ಯದ ಆಲೋಚನೆ ದೇಶದ ಮತದಾರರ ಲಕ್ಷ್ಯವನ್ನು ಸೆಳೆಯುವ ನಿಟ್ಟಿನಲ್ಲಿ ನಿಜಕ್ಕೂ ಭಿನ್ನ ಹಾಗೂ ಪರಿಣಾಮಕಾರಿಯಾದ ಸಾಫಲ್ಯ ಪಡೆಯಲು ತಹತಹ ಹೊಂದಿದ್ದರೆ ಕರ್ನಾಟಕ ರಾಜ್ಯದ ಸದ್ಯದ ಸ್ಥಿತಿ ಕಾಂಗ್ರೆಸ್ ಗೆ ಒಂದು ವರವೇ ಆಗಿದೆ.ರಾಹುಲ್ ಗಾಂಧಿಯವರ ಜನ್ಮ ಕುಂಡಲಿಯಲ್ಲಿನ ನೀಚ ಭಂಗ ಯೋಗ ಪಡೆದ ಶನಿ ಗ್ರಹ, ಸದ್ಯ ಒಂದು ಅವಕಾಶವನ್ನು ರಾಹುಲ

ಅವರ ಪಾಲಿಗೆ ಕರ್ನಾಟಕದ ಮೂಲಕ ಒದಗಿಸಲು ಸಾಧ್ಯತೆ ಪಡೆದಿದೆ. ಹೀಗಾಗಿ ರಾಹುಲ್ ಒಂದು ಇಚ್ಛಾ ಶಕ್ತಿ ತೋರಿಸಬೇಕಾಗಿದೆ. 2013ರಲ್ಲಿ ತಪ್ಪಿದ್ದ ಅವಕಾಶವನ್ನು ಈಗ ಪಡೆಯಲು ಪರಮೇಶ್ವರ ಅವರಿಗೂ ಸಾಧ್ಯತೆ ಕೂಡಿ ಬರುವ ಸಾಧ್ಯತೆ ಇದೆ.

ಪರಮೇಶ್ವರ ಅವರ ಆಯ್ಕೆ

ಕಾಂಗ್ರೆಸ್ ಒಳಗಿನ ಮಿಸುಕಾಟಗಳು ಬಂಡಾಯವಾಗುವ ಸ್ಥಿತಿ ಆಗದಂತೆ ಗುರು ಗ್ರಹ ಪರಮೇಶ್ವರ ಅವರ ಪಾಲಿಗೆ ರಕ್ಷೆ ಕೊಡಬಹುದಾಗಿದೆ. ಹೀಗಾಗಿ ಪರಮೇಶ್ವರ ಅವರು ತಾನು ಯಾವಾಗಲೂ ನಂಬಿದ ಅವರ ಕುಲ ದೇವರ ಅನುಗ್ರಹ ಮತ್ತು ಸರ್ಪ ಶಿಖೆಯ ಕಾಂತಿ ಅಂದರೆ ರಾಹು ಗ್ರಹದ ಬಲ ಸದ್ಯದ ಪರಿಸ್ಥಿತಿಯಲ್ಲಿ ಹೊಸ ಹಾಗೂ ಪರಮೋಚ್ಚ ಸ್ಥಾನಕ್ಕೆ ಏರಲು ಅವರಿಗೆ ಏಣಿ ನೀಡಿದೆ ಎಂದೇ ಅನ್ನಬಹುದು. ಪರಮೇಶ್ವರ ಈ ಏಣಿಯನ್ನು ಸರಿಯಾಗಿ ಬಳಸಲು ಮುಂದಾದರೆ, ರಾಹುಲರ ನೀಚ ಭಂಗ ಯೋಗದ ಶನಿ ಕೂಡ ರಾಹುಲರಿಗೂ ಸದ್ಯಕ್ಕೆ ತೀರಾ ಅವಶ್ಯವಾದ ಹೊಸ ರಾಜಕೀಯ ಬಲವನ್ನು ತುಂಬಬಹುದಾಗಿದೆ. ಹೆಚ್ಚು ಸಂವರ್ಧನೆ ಪಡೆಯುವ ದಿಕ್ಕು ಗ್ರಹಗಳ ಮೂಲಕ ತೆರೆದುಕೊಳ್ಳುವುದೇ ಕುಂಡಲಿಯ ಗ್ರಹಗಳ ರೋಚಕತೆಯಾಗಿದೆ ಎಂಬುದು ಯಾವಾಗಲೂ ವಿಸ್ಮಯಕಾರಕ ಅಂಶವಾಗಿದೆ.

ಅಂದರೆ ಸದ್ಯ ಪರಮೇಶ್ವರ ಅವರನ್ನು ಮತ್ತು ರಾಹುಲ್ ಗಾಂಧಿಯವರನ್ನು ಸದ್ಯದ ಗ್ರಹಗಳ ಚಲನವಲನಗಳು ಒಗ್ಗೂಡಿಸಿ ನಡೆಸುವ ಪ್ರಯತ್ನ ಮಾಡಲು ಮುಂದಾಗಬಹುದಾದ ಸಾಧ್ಯತೆಯನ್ನು ಸೂಕ್ಷ್ಮವಾಗಿ ಹೆಣೆಯುತ್ತಿರುವಂತಿದೆ.

ಪರಮೇಶ್ವರ ಮತ್ತು ಮಾತು

ಚಂದ್ರಗ್ರಹ ಪರಮೇಶ್ವರ ಅವರನ್ನು ಅವಸರದ ಮಾತನ್ನು ಆಡಲು ಬಿಡದು. ಜತೆಗೆ ತನ್ನ ವಿರುದ್ಧ ನಡೆಯುವ ಸಂಚನ್ನು ತಿಳಿದಾಗಲೂ ತಾಳ್ಮೆ ಕಳೆದುಕೊಳ್ಳದ ಅಪರೂಪದ ಗುಣ ಕೂಡಾ ಅವರಲ್ಲಿನ ಹೆಚ್ಚುಗಾರಿಕೆ. ಈ ಗುಣ, ಚಂದ್ರ ಗ್ರಹದ ಅನುಗ್ರಹವೇ ಆಗಿದೆ ಅವರ ಪಾಲಿಗೆ. ‘ನೋಡೋಣ, ವರದಿ ಬಂದ ಮೇಲೆ ಖಂಡಿತವಾಗಿ ಮಾತನಾಡುತ್ತೇನೆ’ ಎಂಬ ಅವರ ಮಾತುಗಳು ಅವರ ಟೀಕಾಕಾರರಿಗೆ ಅಸ್ತ್ರ ಆದಂತಿರಬಹುದು. ಆದರೆ ಈ ಮಾತು ಅವರ ಪ್ರಬಲ ಶಕ್ತಿಯಾಗಿದೆ ಎಂದು ಹಲವರು ಅವರನ್ನು ಶ್ಲಾಘಿಸುತ್ತಾರೆ.

ಮಾಹಿತಿಯ ಪೂರ್ಣ ವಿವರ ತಿಳಿಯದೇ ಮಾತನಾಡುವ ಆವೇಶ ಎಂದೂ ತೋರದ ಅವರ ಅಪರೂಪದ ಶಕ್ತಿ ಇದು. ಈ ಅಪರೂಪದ ವ್ಯವಧಾನವೂ ಚಂದ್ರ ಗ್ರಹದ ಅನುಗ್ರಹವೇ ಆಗಿದೆ. ಅವರಿಗೆ ಸೂಕ್ತ ಮಾಹಿತಿ ಇದ್ದಾಗಲೇ ಮಾತಿಗೆ ಅರ್ಥ ಇರುತ್ತದೆ ಎಂಬುದನ್ನು ಪರಮೇಶ್ವರ ಅವರು ಚೆನ್ನಾಗಿ ಅರಿತವರು ಎಂದು ಭಾವಿಸಬಹುದು. ಅವಸರದಲ್ಲಿ ಏನೋ ಮಾಡಿದಂತೆ ಮಾಡಿ ತೋರಿಸಿ ಖ್ಯಾತಿ ಪಡೆಯಲು ಮುಂದೆ ಬರುವ ಉತ್ಸಾಹ ಅವರಿಗೆ ಇರದಂತೆ ನೋಡಿಕೊಂಡ ಗ್ರಹವೂ ಚಂದ್ರಗ್ರಹವೇ ಆಗಿದೆ. ಸದ್ಯದ ಸ್ಥಿತಿಯಲ್ಲಿ ಚಂದ್ರನೇ ಅವರ ಸಫಲ ದಾರಿಯ ಮತ್ತೊಂದು ಮಗ್ಗುಲಲ್ಲಿ ಅವರನ್ನು ತಂದು ನಿಲ್ಲಿಸಿದರೆ ಆಶ್ಚರ್ಯ ಏನಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.