ADVERTISEMENT

ಹೊಂಡಾದಿಂದ ’ಎಲಿವೇಟ್’ ಎಸ್‌ಯುವಿ ಬಿಡುಗಡೆ: ಜುಲೈನಿಂದ ಬುಕ್ಕಿಂಗ್ ಆರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜೂನ್ 2023, 7:41 IST
Last Updated 6 ಜೂನ್ 2023, 7:41 IST
   

ನವದೆಹಲಿ: ಜಪಾನ್‌ನ ಕಾರು ತಯಾರಿಕಾ ಕಂಪನಿ ಹೊಂಡಾ, ’ಎಲಿವೇಟ್‌‘ ಎಂಬ ಮಿನಿ ಎಸ್‌ಯುವಿ ಕಾರನ್ನು ಮಂಗಳವಾರ ಇಲ್ಲಿ ಬಿಡುಗಡೆ ಮಾಡಿತು.

ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ಎಲಿವೇಟ್‌ ಅನ್ನು ಹೊಂಡಾ ಕಾರ್ಸ್ ಇಂಡಿಯಾದ ಅಧ್ಯಕ್ಷ ಹಾಗೂ ಸಿಇಒ ತಕುವಾ ಸಮುರಾ ಮಂಗಳವಾರ ಬಿಡುಗಡೆ ಮಾಡಿದರು.

4.3ಮೀ ಉದ್ದ ಇರುವ ಎಲಿವೇಟ್ 220ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. 1.5 ಲೀ ಡಾಟಿಕ್, ಐ–ವಿಟೆಕ್ ಎಂಜಿನ್ ಹೊಂದಿರುವ ಈ ಕಾರು 6 ಮ್ಯಾನ್ಯುಯಲ್ ಗೇರ್‌ ಬಾಕ್ಸ್ ಅಥವಾ ಸಿವಿಟಿ ಹೊಂದಿದೆ. 120 ಬಿಎಚ್‌ಪಿ ಶಕ್ತಿ ಹಾಗೂ 145 ನ್ಯೂಟನ್ ಮೀಟರ್‌ ಸಾಮರ್ಥ್ಯವನ್ನು ಎಲಿವೇಟ್ ಹೊಂದಿದೆ. ಹೀಗಾಗಿ ಗರಿಷ್ಠ 89 ಕಿಲೋ ವ್ಯಾಟ್ ಶಕ್ತಿಯನ್ನು ಇದು ಉತ್ಪಾದಿಸಬಲ್ಲದು. ಹೀಗಾಗಿ ಕಠಿಣ ರಸ್ತೆಯಲ್ಲೂ ಪ್ರಯಾಣ ಹಿತಕರವಾಗಿರಲಿದೆ ಎಂದು ತಕುವಾ ತಿಳಿಸಿದರು.

ADVERTISEMENT

ಅತ್ಯಾಧುನಿಕ ಸೌಲಭ್ಯಗಳಲ್ಲಿ ಡಿಕ್ಕಿ ನಿರೋಧಕ ಬ್ರೇಕಿಂಗ್‌ ವ್ಯವಸ್ಥೆ (ಸಿಎಂಬಿಎಸ್), ಹೆದ್ದಾರಿಯಲ್ಲಿ ಲೇನ್‌ ಕಾಯ್ದುಕೊಳ್ಳುವ ವ್ಯವಸ್ಥೆ, ಆಟೊ ಹೆಡ್‌ಲ್ಯಾಂಪ್‌ಗಳು, ಅಡಾಪ್ಟಿವ್‌ ಹೆಡ್‌ಲ್ಯಾಂಪ್‌, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಮುಂದಿರುವ ವಾಹನ ದೂರ ಸಾಗಿದಲ್ಲಿ ತಿಳಿಸುವ ವ್ಯವಸ್ಥೆ ಇದರಲ್ಲಿದೆ. ಆಧುನಿಕ ಇನ್ಫೋಟೈನ್ಮೆಂಟ್‌ ಹೊಂದಿರುವ ಎಲವೇಟ್‌, ಆ್ಯಪಲ್‌ನ ವಾಚ್‌ಒಎಸ್‌ ಹಾಗೂ ಗೂಗಲ್‌ನ ವೇರ್‌ ಓಸ್‌ ಮೂಲಕವೂ ಸಂಪರ್ಕ ಹೊಂದಬಹುದಾಗಿದೆ. ಜುಲೈನಿಂದ ಹೊಂಡಾ ಎಲಿವೇಟ್‌ ಬುಕ್ಕಿಂಗ್ ಆರಂಭವಾಗಲಿದೆ ಎಂದು ತಕುವಾ ತಿಳಿಸಿದರು.

’ಭಾರತದಲ್ಲಿ ಹೊಂಡಾ ಕಂಪನಿಯು ಈಗ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಸುಮಾರು 20 ಲಕ್ಷ ಗ್ರಾಹಕರನ್ನು ಕಂಪನಿ ಹೊಂದಿದೆ. ಶೇ 7ರ ಪ್ರಗತಿಯಲ್ಲಿ ಕಾರುಗಳ ಮಾರಾಟ ನಡೆಯುತ್ತಿದೆ. ಭಾರತದಲ್ಲಿ ತಯಾರಾಗುವ ಕಾರುಗಳು ಟರ್ಕಿ, ಮೆಕ್ಸಿಕೊ, ಮಧ್ಯಪ್ರಾಚ್ಯ ಹಾಗೂ ದಕ್ಷಿಣ ಆಫ್ರಿಕಾಗೆ ರಫ್ತಾಗುತ್ತಿದೆ‘ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.