ದೆಹಲಿ: ಭಾರತದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳನ್ನು (ಎಚ್‌ಇವಿ) ಅಭಿವೃದ್ಧಿಪಡಿಸುತ್ತಿದೆ. ಈ ಕಾರುಗಳು ಚಾಲನೆ ವೇಳೆ ಸ್ವಯಂ ಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆ ಹೊಂದಿರಲಿವೆ.
ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಹ್ಯುಂಡೈನಂತಹ ಕಾರು ತಯಾರಕ ಸಂಸ್ಥೆಗಳಿಗೆ ಹೋಲಿಸಿದರೆ ಮಾರುತಿ ಸುಜುಕಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಯಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದೆ. ಆದರೆ, ಏಕಾಏಕಿ ಹೈಬ್ರೀಡ್ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಗೆ ಕೈ ಹಾಕಿ ಅಚ್ಚರಿ ಮೂಡಿಸಿದೆ. ಇದಕ್ಕಾಗಿ ಜಪಾನಿನ ಟೊಯೋಟಾದೊಂದಿಗೆ ಕೈ ಜೋಡಿಸಿದೆ.
ಸ್ಮಾರ್ಟ್ ಹೈಬ್ರಿಡ್ ಎಂಬುದು ಸುಧಾರಿತ ತಂತ್ರಜ್ಞಾನವಾಗಿದ್ದು ಅದು ಇಂಧನ ಮತ್ತು ಚಾಲನಾ ದಕ್ಷತೆ ಹೆಚ್ಚಿಸುತ್ತದೆ. ಈ ವಾಹನಗಳು ಲಿಥಿಯಂ ಅಯಾನ್ ಬ್ಯಾಟರಿ ಮತ್ತು ಡ್ಯುಯಲ್ ಬ್ಯಾಟರಿ ವ್ಯವಸ್ಥೆಯೊಂದಿಗೆ ಅಭಿವೃದ್ಧಿಗೊಳ್ಳುತ್ತಿವೆ. ಬ್ರೇಕ್ ಸಮಯದಲ್ಲಿ ಉತ್ಪತ್ತಿಯಾಗುವ ಶಕ್ತಿಯನ್ನು ಸಂಗ್ರಹಿಕೊಳ್ಳುವ ಬ್ಯಾಟರಿಗಳು, ಅದನ್ನು ಇಂಜಿನ್‌ನ ಐಡಲ್ ಸ್ಟಾರ್ಟ್-ಸ್ಟಾಪ್ ಮತ್ತು ಟಾರ್ಕ್ ಅಸಿಸ್ಟ್ ಫಂಕ್ಷನ್‌ಗಳಿಗೆ ಪೂರೈಸುತ್ತವೆ. ಲಿಥಿಯಂ-ಐಯಾನ್ ಬ್ಯಾಟರಿಯಲ್ಲಿ ಸಂಗ್ರಹವಾಗುವ ಶಕ್ತಿಯು ವೇಗವರ್ಧನೆ(ಆ್ಯಕ್ಸೆಲರೇಷನ್) ಸಮಯದಲ್ಲಿ ಬಳಕೆಯಾಗುತ್ತದೆ. ಎಂಜಿನ್ ಅತ್ಯುತ್ತಮ ವೇಗವರ್ಧನೆ ಪಡೆಯಲು, ಕಾರ್ಯಕ್ಷಮತೆಯನ್ನು ಸಾಧಿಸಲು ನೆರವಾಗುತ್ತದೆ.
ಸ್ವಯಂ-ಚಾರ್ಜಿಂಗ್ ಕಾರುಗಳಲ್ಲಿ, ಚಕ್ರದ ತಿರುಗುವಿಕೆಯಿಂದ ಮಾತ್ರವಲ್ಲದೇ, ಆಂತರಿಕ ದಹ್ಯ ಎಂಜಿನ್–ಐಸಿಇಯಿಂದಲೂ (internal combustion engine–ICE) ಬ್ಯಾಟರಿಗಳಿಗೆ ಶಕ್ತಿ ಪೂರೈಕೆಯಾಗುತ್ತದೆ. ಇದು ಹೆಚ್ಚುವರಿ ವಿದ್ಯುತ್ ಮೂಲ. ಹೀಗಾಗಿ ಈ ಕಾರುಗಳು ಹೆಚ್ಚಿನ ಮೈಲೇಜ್ ನೀಡುತ್ತವೆ.
‘ಮುಂದಿನ 10-15 ವರ್ಷಗಳ ಅವಧಿಯಲ್ಲಿ ಇದು ಪ್ರಬಲ ತಂತ್ರಜ್ಞಾನವಾಗಿ ಬೆಳೆಯಲಿದೆ. ಇದಕ್ಕೆ ಬಾಹ್ಯ ಚಾರ್ಜಿಂಗ್ ಮೇಲಿನ ಅವಲಂಬನೆ ಬೇಕಿಲ್ಲ. ಅಲ್ಲದೆ, ಕಾರ್ಬನ್ ಹೊರ ಸೂಸುವಿಕೆ ಸಮಸ್ಯೆಯೂ ನಿವಾರಣೆಯಾಗುತ್ತದೆ,‘ ಎಂದು ಕಂಪನಿ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.