ADVERTISEMENT

ಹೊಸ ಸೆಲೆರಿಯೊ ಬೆಲೆ ₹ 4.99 ಲಕ್ಷದಿಂದ ಆರಂಭ

ಪಿಟಿಐ
Published 10 ನವೆಂಬರ್ 2021, 10:51 IST
Last Updated 10 ನವೆಂಬರ್ 2021, 10:51 IST
ಕಂಪನಿಯ ಸಿಇಒ ಕೆನೆಚಿ ಅಯುಕವಾ ಅವರು ಹೊಸ ಸೆಲೆರಿಯೊ ಬಿಡುಗಡೆ ಮಾಡಿದರು –ಪಿಟಿಐ ಚಿತ್ರ
ಕಂಪನಿಯ ಸಿಇಒ ಕೆನೆಚಿ ಅಯುಕವಾ ಅವರು ಹೊಸ ಸೆಲೆರಿಯೊ ಬಿಡುಗಡೆ ಮಾಡಿದರು –ಪಿಟಿಐ ಚಿತ್ರ   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಕಂಪನಿಯು ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ‘ಸೆಲೆರಿಯೊ’ದ ಹೊಸ ಆವೃತ್ತಿಯನ್ನು ಬುಧವಾರ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ ₹ 4.99 ಲಕ್ಷದಿಂದ ₹ 6.94 ಲಕ್ಷದವರೆಗೆ ಇದೆ.

ಮ್ಯಾನುಯಲ್‌ ಟ್ರಿಮ್‌ನ ಬೆಲೆಯು ₹ 4.99 ಲಕ್ಷದಿಂದ ₹ 6.44 ಲಕ್ಷ ಹಾಗೂ ಆಟೊ ಗಿಯರ್‌ ಶಿಫ್ಟ್‌ ಆವೃತ್ತಿಯ ಬೆಲೆಯು ₹ 6.13 ಲಕ್ಷದಿಂದ ₹ 6.94 ಲಕ್ಷದವರೆಗೆ ಇದೆ ಎಂದು ಕಂಪನಿಯು ತಿಳಿಸಿದೆ.

ಹೊಸ ಸೆಲೆರಿಯೊ, ಹಿಲ್‌ ಹೋಲ್ಡ್‌ ಅಸಿಸ್ಟ್‌ ಸೇರಿದಂತೆ 12 ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಹ್ಯಾಚ್‌ಬ್ಯಾಕ್‌ನ ಹೊಸ ಎಂಜಿನ್‌ ಕೆ10 ಸಿ ಪ್ರತಿ ಲೀಟರ್ ಪೆಟ್ರೋಲ್‌ಗೆ 26.68 ಕಿಲೋ ಮೀಟರ್‌ ಮೈಲೇಜ್ ನೀಡುತ್ತದೆ. ಇದು, ದೇಶದಲ್ಲಿಯೇ ಅತ್ಯಂತ ಹೆಚ್ಚು ಇಂಧನ ದಕ್ಷತೆಯ ಪೆಟ್ರೋಲ್‌ ಕಾರ್‌ ಎಂದು ಕಂಪನಿ ಹೇಳಿಕೊಂಡಿದೆ. ಮುಂಬರುವ ತಿಂಗಳುಗಳಲ್ಲಿ ಇನ್ನುಳಿದ ಮಾದರಿಗಳು ಸಹ ಮುಂದಿನ ಪೀಳಿಗೆಯ ಕೆ ಫ್ಯಾಮಿಲಿ ಎಂಜಿನ್‌ಗಳನ್ನು ಹೊಂದಲಿವೆ ಎಂದು ಕಂಪನಿ ತಿಳಿಸಿದೆ.

ADVERTISEMENT

ದೇಶದಲ್ಲಿ ಮಾರಾಟ ಆಗುತ್ತಿರುವ ಪ್ರತಿ ಎರಡು ಕಾರ್‌ನಲ್ಲಿ ಒಂದು ಹ್ಯಾಚ್‌ಬ್ಯಾಕ್‌ ಆಗಿದೆ. ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ಕಂಪನಿಯ ಮಾರುಕಟ್ಟೆ ಪಾಲನ್ನು ಹೆಚ್ಚಿಸುವಲ್ಲಿ ಸೆಲೆರಿಯೊ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ. ಈ ಮಾದರಿಯ ಸಿಎನ್‌ಜಿ ಆವೃತ್ತಿಯನ್ನು ತರುವ ನಿಟ್ಟಿನಲ್ಲಿ ಆಲೋಚನೆ ನಡೆಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.