ADVERTISEMENT

ಮಾರುತಿ: ‘ಫ್ಯೂಚರೊ-ಇ’ ಎಸ್‌ಯುವಿ ಅನಾವರಣ

ದ್ವೈವಾರ್ಷಿಕ 15ನೇ ವಾಹನ ಮೇಳಕ್ಕೆ ಚಾಲನೆ

​ಕೇಶವ ಜಿ.ಝಿಂಗಾಡೆ
Published 6 ಫೆಬ್ರುವರಿ 2020, 7:14 IST
Last Updated 6 ಫೆಬ್ರುವರಿ 2020, 7:14 IST
ವಾಹನ ಮೇಳದಲ್ಲಿ ಮಾರುತಿ ಸುಜುಕಿ ಕಂಪನಿಯು ಪರಿಚಯಿಸಿದ ಭವಿಷ್ಯದ ಎಸ್‌ಯುವಿ ‘ಫ್ಯೂಚರೊ–ಇ’
ವಾಹನ ಮೇಳದಲ್ಲಿ ಮಾರುತಿ ಸುಜುಕಿ ಕಂಪನಿಯು ಪರಿಚಯಿಸಿದ ಭವಿಷ್ಯದ ಎಸ್‌ಯುವಿ ‘ಫ್ಯೂಚರೊ–ಇ’   

ನವದೆಹಲಿ: ಕಾರ್ ತಯಾರಿಕೆಯ ದೇಶದ. ಅತಿದೊಡ್ಡ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐಎಲ್), ‘ಫ್ಯೂಚರೊ–ಇ’ ಹೆಸರಿನ ಭವಿಷ್ಯದ ವಿದ್ಯುತ್ ಚಾಲಿತ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಅನಾವರಣಗೊಳಿಸುವುದರ ಮೂಲಕ 15ನೇಯ ದ್ವೈವಾರ್ಷಿಕ ವಾಹನ ಮೇಳಕ್ಕೆ ಬುಧವಾರ ಇಲ್ಲಿ ಚಾಲನೆ ನೀಡಿತು.

2020 ದಶಕದಲ್ಲಿನ ಕಂಪನಿಯ ವಿದ್ಯುತ್ ಚಾಲಿತ ವಾಹನಗಳಿಗೆ ಇದು ಮುನ್ನುಡಿ ಬರೆದಿದೆ.ಕಂಪನಿಯ ದೇಶಿ ಎಂಜನಿಯರುಗಳೇ ಎಸ್‌ಯುವಿಯ ವಿನ್ಯಾಸ ರೂಪಿಸಿ, ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

‘ಕಡಿಮೆ ಮಾಲಿನ್ಯ ಹೊರಸೂಸುವ ಮತ್ತು ಇಂಧನ ಮಿತವ್ಯಯದ 5 ಮಾದರಿಯ ಕಾರ್ ಗಳನ್ನು ಕಂಪನಿಯು ತಯಾರಿಸುತ್ತಿದೆ. ಕಂಪನಿಯು ಹಿಂದಿನ ದಶಕದಲ್ಲಿ ಹೈಬ್ರಿಡ್, ಮತ್ತು ಸಿಎನ್ ಜಿ ತಂತ್ರಜ್ಞಾನದ 10 ಲಕ್ಷದಷ್ಟು ಕಾರ್ ಗಳನ್ನು ಮಾರಾಟ ಮಾಡಿದೆ. ಈ ದಶಕದಲ್ಲಿ ವಿದ್ಯುತ್ ಚಾಲಿತ ಕಾರ್ ಎಸ್ ಯುವಿಗಳು ಅತ್ಯಂತ, ತ್ವರಿತಗತಿಯಲ್ಲಿ ಮಾರುಕಟ್ಟೆಯನ್ನು ಆಕ್ರಮಿಸಲಿವೆ. ಈ ದಶಕವು ವಾಹನ ಉದ್ದಿಮೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ’ ಎಂದು ಕಂಪನಿಯ ಸಿಇಒ ಕೆನಿಚಿ ಆಯುಕಾವಾ ಹೇಳಿದರು.

ADVERTISEMENT

‘ಫ್ಯೂಚರೊ–ಇ’ ಎಸ್‌ಯುವಿ ಅನಾವರಣಗೊಳಿಸಿ ಅವರು ಮಾತನಾಡಿದರು.2020ರ ದಶಕದ ಆರಂಭದಲ್ಲಿ ದೇಶಿ ವಾಹನ ಉದ್ದಿಮೆಯು ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಮುಂಬರುವ ವರ್ಷಗಳಲ್ಲಿ ಈ ದಶಕವು ಉದ್ದಿಮೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಗಮನ ಸೆಳೆಯುವ ‘ಫ್ಯೂಚರೊ–ಇ’, ಹೊಸ ತಲೆಮಾರಿನವರ ಅಚ್ಚುಮೆಚ್ಚಿನ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಆಗಿರಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಉತ್ತೇಜನ ಮತ್ತು ಮೂಲಸೌಕರ್ಯಗಳ ಕೊರತೆಯ ಕಾರಣಕ್ಕೆ ಮಾರುತಿ ಸುಜುಕಿಯು ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೆ ಇದುವರೆಗೆ ಹೆಚ್ವಿನ ಆಸಕ್ತಿ ತೋರಿಸಿರಲಿಲ್ಲ.ವಿಶ್ವದ 4ನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿರುವ ಭಾರತದಲ್ಲಿ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚುತ್ತಿರುವಾಗಲೇ ‘ಫ್ಯೂಚರೊ–ಇ’ ಅನಾವರಣಗೊಳಿಸಿರುವುದು ಮಹತ್ವದ ಸಂಗತಿಯಾಗಿದೆ.

(ಕಂಪನಿಯ ಆಹ್ವಾನದ ಮೇರೆಗೆ ವರದಿಗಾರ ದೆಹಲಿಗೆ ತೆರಳಿದ್ದಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.