ADVERTISEMENT

ಭಾರತದಲ್ಲಿ ಟೊಯೊಟಾ ಐಷಾರಾಮಿ ಎಂಪಿವಿ 'ವೆಲ್‌ಫೈರ್‌' ಬಿಡುಗಡೆ: ಬೆಲೆ ₹79.5 ಲಕ್ಷ 

ಏಜೆನ್ಸೀಸ್
Published 26 ಫೆಬ್ರುವರಿ 2020, 10:57 IST
Last Updated 26 ಫೆಬ್ರುವರಿ 2020, 10:57 IST
ಟೊಯೊಟಾ ವೆಲ್‌ಫೈರ್‌
ಟೊಯೊಟಾ ವೆಲ್‌ಫೈರ್‌   
""
""
""
""
""

ಭಾರತದ ಮಾರುಕಟ್ಟೆಗೆ ಟೊಯೊಟಾ ಬುಧವಾರ 'ವೆಲ್‌ಫೈರ್‌' (Vellfire) ಐಷಾರಾಮಿ ಎಂಪಿವಿ (multi purpose vehicle) ಬಿಡುಗಡೆ ಮಾಡಿದೆ. ದೇಶದಲ್ಲಿ ಟೊಯೊಟಾ ಕಾರುಗಳ‍ಪೈಕಿ ಅತ್ಯಂತ ದುಬಾರಿ ಹಾಗೂ ಅಲ್ಟ್ರಾ ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡಿರುವ ವೆಲ್‌ಫೈರ್‌ ಬೆಲೆ ₹79.5 ಲಕ್ಷ ನಿಗದಿಯಾಗಿದೆ.

ಪೆಟ್ರೋಲ್‌ ಮಾದರಿಯ ವೆಲ್‌ಫೈರ್‌ ಮಾತ್ರ ಅನಾವರಣಗೊಳಿಸಲಾಗಿದ್ದು, ಭಾರತದಲ್ಲಿ ಸಿಬಿಯು (ಕಂಪ್ಲೀಟ್ಬಿಲ್ಟ್ ಯೂನಿಟ್‌) ಮುಖಾಂತರ ಮಾರಾಟಕ್ಕೆ ಸಜ್ಜಾಗಿ ಬಂದಿಳಿಯಲಿವೆ. 4,935 ಮಿ.ಮೀ. ಉದ್ದ, 1,850 ಮಿ.ಮೀ., ಅಗಲ, 1,950 ಮಿ.ಮೀ ಎತ್ತರ ಹಾಗೂ 3,000 ಮಿ.ಮೀ. ವೀಲ್‌ಬೇಸ್‌ ಹೊಂದಿರುವ ಬೃಹತ್‌ ಗಾತ್ರದ ವೆಲ್‌ಫೈರ್‌ನ್ನು ಇನೋವಾ ಕ್ರಿಸ್ಟಾದ ದೊಡ್ಡಣ್ಣ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇನೋವಾ ಕ್ರಿಸ್ಟಾ 4,735 ಮಿ.ಮೀ. ಉದ್ದ, 1,830 ಮಿ.ಮೀ. ಅಗಲ, 1,795 ಮಿ.ಮೀ. ಎತ್ತರ ಹಾಗೂ 2,750 ಮಿ.ಮೀ. ವೀಲ್‌ಬೇಸ್‌ ಹೊಂದಿದೆ.

ADVERTISEMENT

2.5 ಲೀಟರ್‌ ಪೆಟ್ರೋಲ್‌ ಮೋಟಾರ್‌ ಜೊತೆಗೆ ಹೈಬ್ರಿಡ್‌ ತಂತ್ರಜ್ಞಾನದ ಭಾಗವಾಗಿ ಎರಡು ಪ್ರತ್ಯೇಕ ಎಲೆಕ್ಟ್ರಿಕ್‌ ಮೋಟಾರ್‌ಗಳನ್ನು ವೆಲ್‌ಫೈರ್‌ ಒಳಗೊಂಡಿದೆ. ಇದು 117 ಪಿಎಸ್‌ ಶಕ್ತಿ ಮತ್ತು 198 ನ್ಯೂಟನ್ ಮೀಟರ್‌ ಟಾರ್ಕ್‌ ಹೊಮ್ಮಿಸುತ್ತದೆ. ಪ್ರತಿ ಲೀಟರ್‌ ಪೆಟ್ರೋಲ್‌ಗೆ 16.35 ಕಿ.ಮೀ ಮೈಲೇಜ್‌ ನೀಡುತ್ತದೆ.

ಐಷಾರಾಮಿ ಪ್ರಯಾಣದ ಸಾಕಷ್ಟು ಸೌಲಭ್ಯಗಳನ್ನು ವೆಲ್‌ಫೈರ್‌ ಒಳಗೊಂಡಿದ್ದು, ಏಳು ಜನರ ಆರಾಮದಾಯಕ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಸ್ಲೈಡಿಂಗ್‌ ಡೋರ್‌, ಎರಡು ಸನ್‌ರೂಫ್‌ಗಳು, 3–ಜೋನ್‌ ಕ್ಲೈಮೇಟ್‌ ಕಂಟ್ರೋಲ್‌, ಮನರಂಜನೆಗಾಗಿ 13 ಇಂಚು ರೂಫ್‌ ಮೌಂಟ್‌ ಡಿಸ್‌ಪ್ಲೇ ಹಾಗೂ ಲೆದರ್‌ ಸೀಟ್‌ಗಳಿವೆ.

ಮಡಚಬಹುದಾದ ಟೇಬಲ್‌ಗಳು, ಪವರ್‌ ಅಡ್ಜಸ್ಟೆಬಲ್‌ ಸೀಟ್‌ಗಳ ಜೊತೆಗೆ ಬಿಸಿಯಾಗಿಸುವ ಮತ್ತು ತಣ್ಣಗಾಗಿಸುವ ಆಯ್ಕೆಗಳು ಹಾಗೂ 16 ಬಣ್ಣಗಳ ಲೈಟಿಂಗ್‌ ಒಳಾಂಗಣದ ಮೆರುಗು ಹೆಚ್ಚಿಸುತ್ತದೆ. ತೆಳು ಹಳದಿ (ಫ್ಲಾಕ್ಸೆನ್‌) ಮತ್ತು ಕಪ್ಪು ಬಣ್ಣಗಳ ಒಳಾಂಗಣ ಹಾಗೂ ಹೊರಗೆ ಬರ್ನಿಂಗ್‌ ಬ್ಲ್ಯಾಕ್‌, ವೈಟ್‌ ಪರ್ಲ್‌, ಗ್ರಾಫೈಟ್‌ ಮತ್ತು ಬ್ಲ್ಯಾಕ್‌ ಆಯ್ಕೆಗಳಿವೆ.

ಆಟೋಮ್ಯಾಟಿಕ್‌ ಎಲ್ಇಡಿ ಹೆಡ್‌ ಲೈಟ್‌ಗಳು, ಹೀಟೆಡ್‌ ಒಆರ್‌ವಿಎಂಗಳು (ಹಿಂಬದಿ ವಾಹನ ವೀಕ್ಷಣೆಗೆ ಬಳಸುವ ಅಕ್ಕಪಕ್ಕದ ಕನ್ನಡಿ), ಏಳು ಏರ್‌ಬ್ಯಾಗ್‌ಗಳು, ಮುಂದೆ ಮತ್ತು ಹಿಂಬದಿಯಲ್ಲಿ ಪಾರ್ಕಿಂಗ್‌ ಸೆನ್ಸರ್, ಟೈರ್‌ ಪ್ರೆಷರ್‌ ಮಾನಿಟರ್‌ ವ್ಯವಸ್ಥೆ (ಟಿಪಿಎಂಎಸ್‌) ಹಾಗೂ ಹಿಲ್‌ ಸ್ಟಾರ್ಟ್‌ ಅಸಿಸ್ಟ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ಕಳೆದ ವರ್ಷ ಬಿಡುಗಡೆಯಾಗಿರುವ ಮರ್ಸಿಡಿಸ್‌ ಬೆಂಜ್‌ ವಿ–ಕ್ಲಾಸ್‌ ಎಂಪಿವಿಗೆ ಪ್ರತಿ ಸ್ಪರ್ಧಿ ಎಂದೇ ಬಿಂಬಿತವಾಗಿದೆ. ಇತ್ತೀಚೆಗೆ ಕಿಯಾ ಮೋಟಾರ್ಸ್‌ ಇನೋವಾ ಕ್ರಿಸ್ಟಾಗೆ ಪ್ರತಿಸ್ಪರ್ಧಿಯಾಗಿ ಪ್ರೀಮಿಯಂ ಎಂಪಿವಿ ಕಾರ್ನಿವಾಲ್‌ ಬಿಡುಗಡೆ ಮಾಡಿದೆ. ಕಾರ್ನಿವಾಲ್‌ 2.2 ಲೀಟರ್‌ ವಿಜಿಟಿ ಬಿಎಸ್‌6 ಗುಣಮಟ್ಟದ ಡೀಸೆಲ್‌ ಇಂಜಿನ್, 8–ಸ್ಪೀಡ್‌ 'ಸ್ಫೋರ್ಟ್ಸ್‌ಮ್ಯಾಟಿಕ್‌' ಟ್ರಾನ್ಸ್‌ಮಿಷನ್‌, ಸ್ಲೈಡಿಂಗ್‌ ಡೋರ್‌ ಜೊತೆಗೆ ಹಲವು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಆರಂಭಿಕ ಬೆಲೆ ₹24.95 ಲಕ್ಷ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.