ADVERTISEMENT

ಅಲ್ಟ್ರಾವೈಲೆಟ್‌ ಇ–ಬೈಕ್ ಎಫ್‌ 77

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 19:31 IST
Last Updated 20 ನವೆಂಬರ್ 2019, 19:31 IST
ಅಲ್ಟ್ರಾವೈಲೆಟ್‌ ಆಟೊಮೋಟಿವ್‌ ಕಂಪನಿಯ ಸ್ಥಾಪಕ ನೀರಜ್‌ ರಾಜ್‌ಮೋಹನ್‌, ಮಲಯಾಳಂ ಚಿತ್ರನಟ ದುಲ್ಕರ್ ಸಲ್ಮಾನ್‌ ಮತ್ತು ಕಂಪನಿಯ ಸ್ಥಾಪಕ ನಾರಾಯಣ್ ಸುಬ್ರಮಣಿಯಂ ಅವರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದರು –ಪ್ರಜಾವಾಣಿ ಚಿತ್ರ
ಅಲ್ಟ್ರಾವೈಲೆಟ್‌ ಆಟೊಮೋಟಿವ್‌ ಕಂಪನಿಯ ಸ್ಥಾಪಕ ನೀರಜ್‌ ರಾಜ್‌ಮೋಹನ್‌, ಮಲಯಾಳಂ ಚಿತ್ರನಟ ದುಲ್ಕರ್ ಸಲ್ಮಾನ್‌ ಮತ್ತು ಕಂಪನಿಯ ಸ್ಥಾಪಕ ನಾರಾಯಣ್ ಸುಬ್ರಮಣಿಯಂ ಅವರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರಿನ ಅಲ್ಟ್ರಾವೈಲೆಟ್‌ ಆಟೊಮೋಟಿವ್ ನವೋದ್ಯಮವು ದೇಶದ ಮಾರುಕಟ್ಟೆಗೆ ತನ್ನಮೊದಲ ವಿದ್ಯುತ್‌ ಚಾಲಿತ ಬೈಕ್‌ ಎಫ್‌77 ಪರಿಚಯಿಸಿದೆ.ಈಗಾಗಲೇ ಬುಕಿಂಗ್‌ ಆರಂಭವಾಗಿದ್ದು, ಗ್ರಾಹಕರ ಕೈಸೇರಲು 2020ರ ಮೂರನೇ ತ್ರೈಮಾಸಿಕದವರೆಗೂ ಕಾಯಬೇಕಾಗಿದೆ.

‘ಎಫ್‌77 ಲೈಟ್ನಿಂಗ್, ಎಫ್‌77 ಶಾಡೊ ಮತ್ತು ಎಫ್‌77 ಲೇಸ್‌ ಎಂಬ ಮೂರು ಮಾದರಿಗಳಲ್ಲಿ ಈ ಬೈಕ್‌ ಲಭ್ವಿಯದೆ. ಆನ್‌ ರೋಡ್‌ ಬೆಲೆ ₹ 3 ಲಕ್ಷದಿಂದ ₹ 3.25 ಲಕ್ಷದವರೆಗೆ ಇರಲಿದೆ’ ಎಂದು ಕಂಪನಿಯ ಸ್ಥಾಪಕ ನಾರಾಯಣ ಸುಬ್ರಮಣಿಯಂ ಅವರು ಮಾಹಿತಿ ನೀಡಿದರು.

‘ಭಾರತದಲ್ಲಿ ವಿದ್ಯುತ್‌ ಚಾಲಿತ ವಾಹನ ಬಳಕೆಯೇ ಮುಂಚೂಣಿಗೆ ಬರುವ ನಿರೀಕ್ಷೆಯೊಂದಿಗೆ ನಾವು ಕೆಲಸ ಆರಂಭಿಸಿದೆವು. ಗೌರವ ಮೂಡಿಸುವಂತಹ ವಾಹನ ಅಭಿವೃದ್ಧಿಪಡಿಸಬೇಕು ಮತ್ತು ವಿದ್ಯುತ್‌ ಬಳಕೆಗೆ ಸಂಬಂಧಿಸಿದಂತೆಯೂ ಹೊಸತನ ಇರಬೇಕು ಎನ್ನುವ ಎರಡು ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಬೈಕ್‌ ಅಭಿವೃದ್ಧಿಪಡಸಲಾಗಿದೆ. ಮೂರು ವರ್ಷಗಳ ನಿರಂತರ ಪರಿಶ್ರಮದಿಂದ ಈ ಉತ್ಪನ್ನ ಸಿದ್ಧಗೊಂಡಿದೆ’ ಎಂದು ಸುಬ್ರಮಣಿಯಂ ತಿಳಿಸಿದರು.

ADVERTISEMENT

ಚಾರ್ಜಿಂಗ್‌:ಈ ಬೈಕ್‌ 3 ಲಿ ಐಯಾನ್‌ ಬ್ಯಾಟರಿ ಪ್ಯಾಕ್‌ ಹೊಂದಿದ್ದು ಗರಿಷ್ಠ ಸಾಮರ್ಥ್ಯ 4.2ಕೆಡಬ್ಲ್ಯುಎಚ್‌ ಇದೆ. ಬ್ಯಾಟರಿಗಳನ್ನು ಸುಲಭವಾಗಿ ಬೈಕ್‌ನಿಂದ ತೆಗೆದು ಚಾರ್ಜ್‌ ಮಾಡಬಹುದಾಗಿದೆ. ಸಿಸಿಎಸ್‌ ಟೈಪ್‌–2 ಚಾರ್ಜ್‌ ಪೋರ್ಟ್‌ ಎಸಿ ಮತ್ತು ಡಿಸಿ ಚಾರ್ಜಿಂಗ್‌ಗೆ ಬೆಂಬಲಿಸುತ್ತದೆ.ಒಮ್ಮೆ ಚಾರ್ಜ್‌ ಮಾಡಿದರೆ ಸರಾಸರಿ 150 ಕಿ.ಮೀ ಚಲಾಯಿಸಬಹುದು. ಗರಿಷ್ಠ ವೇಗ ಮಿತಿ ಗಂಟೆಗೆ 140 ಕಿ.ಮೀ ಇದೆ.

ಸಾಮಾನ್ಯ ಚಾರ್ಜಿಂಗ್‌: ಶೇ 0–80ರಷ್ಟು ಚಾರ್ಜ್‌ ಆಗಲು 3 ಗಂಟೆ ಬೇಕು. ಶೇ 100ರಷ್ಟು ಚಾರ್ಜ್‌ ಆಗಲು 5 ಗಂಟೆ ತೆಗೆದುಕೊಳ್ಳುತ್ತದೆ.

ಫಾಸ್ಟ್‌ ಚಾರ್ಜಿಂಗ್‌: 50 ನಿಮಿಷದೊಳಗೆ ಶೇ 0–80ರಷ್ಟು ಚಾರ್ಜ್‌ ಆಗಲಿದೆ. ಶೇ 100ರಷ್ಟು ಚಾರ್ಜ್‌ ಆಗಲು 90 ನಿಮಿಷ ಬೇಕು ಎಂದು ಕಂಪನಿ ತಿಳಿಸಿದೆ.

ಶಕ್ತಿ ಪುನರುತ್ಪಾದಕ ವ್ಯವಸ್ಥೆ: ಪ್ರತಿ ಬಾರಿ ಬ್ರೇಕ್‌ ಹಾಕಿದಾಗಲೂ ಸೆಲ್ಫ್‌ ಚಾರ್ಜಿಂಗ್‌ ಮೂಲಕ ಬ್ಯಾಟರಿ ಚಾರ್ಜ್‌ ಆಗುವಂತೆ ವ್ಯವಸ್ಥೆ ಮಾಡಲಾಗಿದೆ. ನಗರ ಪ್ರದೇಶದ ಅತಿಯಾದ ಟ್ರಾಫಿಕ್‌ನಲ್ಲಿ ಚಲಾಯಿಸುವಾಗ ಪದೇ ಪದೇ ಬ್ರೇಕ್‌ ಹಾಕಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪುನರುತ್ಪಾದಕ ಹೆಚ್ಚು ನೆರವಿಗೆ ಬರಲಿದೆ.

ಇಕೊ, ಸ್ಪೋರ್ಟ್ಸ್‌ ಮತ್ತು ಇನ್‌ಸೇನ್‌ ರೈಡ್‌ ಮೋಡ್‌ಗಳಿವೆ. ಮೊಬೈಲ್‌ನೊಂದಿಗೆ ಸಂಪರ್ಕಿಸಬಹುದಾಗಿದ್ದು, Find mybike ಸೌಲಭ್ಯವು ಬೈಕ್‌ ಇರುವ ಸ್ಥಳವನ್ನು ಗುರುತಿಸಲು ನೆರವಾಗುತ್ತದೆ. ಬೈಕ್‌ ಸವಾರಿಗೆ ಯೋಗ್ಯವಾದ ಸ್ಥಿತಿಯಲ್ಲಿ ಇದೆಯೇ ಎನ್ನುವುದನ್ನೂ ಮೊಬೈಲ್‌ನಲ್ಲಿಯೇ ತಿಳಿದುಕೊಳ್ಳಬಹುದು.

ಸುಸ್ಥಿರ ಚಾಲನೆ ಮತ್ತು ವಿದ್ಯುತ್ ಮೂಲಸೌಕರ್ಯ ಕ್ಷೇತ್ರದಲ್ಲಿ ನಾವಿನ್ಯತೆ ತರುವ ನಿಟ್ಟಿನಲ್ಲಿ ಈ ನವೋದ್ಯಮ ಕಾರ್ಯಗತವಾಗಿದೆ. ನಾರಾಯಣ ಸುಬ್ರಮಣಿಯಂ ಮತ್ತು ನೀರಜ್‌ ರಾಜ್‌ಮೋಹ್‌ ಅವರು 2016ರಲ್ಲಿ ಇದನ್ನು ಸ್ಥಾಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.