ನಮ್ಮಲ್ಲಿ ಮಧ್ಯಮವರ್ಗಕ್ಕೆ ಕಾರು ಖರೀದಿಸುವುದು ಪ್ರತಿಷ್ಠೆ ಮಾತ್ರವಲ್ಲ, ಅನಿವಾರ್ಯವೂ ಹೌದು. ಬೈಕ್‌ನಿಂದ ಕಾರಿಗೆ ಪ್ರಮೋಷನ್ ಪಡೆಯುವುದು ಮದುವೆಯಾಗಿ ಮಕ್ಕಳಾದ ಮೇಲೆಯೇ ಎನ್ನುವುದು ನಿಜ.
ಅದರಲ್ಲೂ ಎರಡು ಮಕ್ಕಳಾದ ಬಳಿಕ ಬೈಕ್‌ನಲ್ಲಿ ಜಾಗ ಸಾಲುವುದಿಲ್ಲ. ಬ್ಯಾಂಕ್‌ಗಳು ಸಾಲ ಕೊಡಲು ಕ್ಯೂ ನಿಂತಿರುವುದರಿಂದ ಈಗ ಕಾರು ಕೊಳ್ಳುವುದು ಸುಲಭ. ರಸ್ತೆಯ ಮೇಲಿರುವ ಶೇಕಡ 90ರಷ್ಟು ಕಾರುಗಳು ‘ಸಾಲಬಾಧೆ’ಯದ್ದೇ. ಆದರೆ, ಕಾರಿನ ನಿರ್ವಹಣೆ ಕುರಿತು ನಮ್ಮದು ಅಜ್ಞಾನವೇ. ನಿರ್ವಹಣೆ ಎಂದರೆ ಬೆಳಿಗ್ಗೆದ್ದು ನೀರು ಹಾಕಿ ಪಳಪಳ ಹೊಳೆಯುವಂತೆ ತೊಳೆಯುವುದು ಮಾತ್ರ ಎಂದು ತಿಳಿದುಕೊಂಡವರೇ ಹೆಚ್ಚು.
ಹೊಸಪೀಳಿಗೆಯ ಕಾರು ಹೆಚ್ಚು ತೊಂದರೆ ನೀಡುವುದಿಲ್ಲ ಎನ್ನುವುದು ನಿಜ. ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳಿಂದಾಗಿ ಡ್ರೈವಿಂಗ್ ಮತ್ತು ನಿರ್ವಹಣೆಯ ಕಷ್ಟಗಳು ಇಲ್ಲವಾಗಿವೆ. ಆದರೆ, ನಮ್ಮ ಕಾರಿನಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಹೇಗೆ ಬಳಸಬೇಕೆಂಬುದು ಹೆಚ್ಚಿನವರಿಗೆ ಗೊತ್ತೇ ಇರುವುದಿಲ್ಲ. ಇದೊಂಥರಾ ಮೊಬೈಲ್ ಪ್ರಕರಣದಂತೆ. ₹ 40 ಸಾವಿರಕ್ಕೂ ಹೆಚ್ಚು ಹಣ ಕೊಟ್ಟು ಖರೀದಿಸಿದ ಮೊಬೈಲ್‌ನಲ್ಲಿರುವ ಶೇಕಡ 20ರಷ್ಟು ಸವಲತ್ತುಗಳನ್ನೂ ಬಳಸದ ಲಕ್ಷಾಂತರ ಜನ ನಮ್ಮಲ್ಲಿದ್ದಾರೆ!
ಆಹಾ... ಸರಾಗವಾಗಿ ಕಾರು ಓಡಿಸುತ್ತಾ ಆನಂದಿಸುತ್ತಿದ್ದೀರಿ. ಇದ್ದಕ್ಕಿದ್ದಂತೆಯೇ, ಬೀಪ್ ಎಂಬ ಸದ್ದು ಕೇಳುತ್ತದೆ. ಡ್ಯಾಶ್‌ಬೋರ್ಡ್‌ನಲ್ಲಿ ಒಂದು ಬೆಳಕಿನ ಚಿಹ್ನೆಯೂ ಕಾಣಿಸುತ್ತದೆ. ಏನು ತಪ್ಪಾಗಿರಬಹುದು ಎಂದು ಯೋಚಿಸುತ್ತೀರಿ. ಅಲ್ಲಲ್ಲಿ ಕಣ್ಣು, ಕೈಯಾಡಿಸಿ ಕೊನೆಗೆ ಏನೂ ಗೊತ್ತಾಗದೆ ಸಹಾಯಕ್ಕಾಗಿ ಕರೆ ಮಾಡುತ್ತೀರಿ.
ಈಗಿನದ್ದು ಫಾಸ್ಟ್‌ಫುಡ್ ಕಾಲ. ಏನೋ ಸಮಸ್ಯೆ ಇದೆ ಎನ್ನುವುದು ಗೊತ್ತಾಗುತ್ತದೆ. ಗ್ಯಾರೇಜಿಗೆ ಕಾರು ಒಯ್ದು ಸಮಸ್ಯೆ ವಿವರಿಸುತ್ತೀರಿ. ಕಾರು ಅಲ್ಲೇ ಬಿಟ್ಟು ನಿಮ್ಮ ಕೆಲಸಕ್ಕೆ ತೆರಳುತ್ತೀರಿ. ಸಂಜೆ ಅಥವಾ ಮರುದಿನ ರಿಪೇರಿ ಆದ ಬಳಿಕ ಬಂದು ಕಾರು ಒಯ್ಯುತ್ತೀರಿ. ಸಮಸ್ಯೆಯ ಸ್ವರೂಪ ಏನು ಎನ್ನುವುದನ್ನು ಅಲ್ಲಿನ ತಂತ್ರಜ್ಞರೂ ತಿಳಿಸುವುದಿಲ್ಲ, ನಿಮಗೂ ಕೇಳಲು ಪುರುಸೊತ್ತಿಲ್ಲ. ಆತನೂ ಕಂಪ್ಯೂಟರ್‌ನಲ್ಲಿ ನೋಡಿ ರಿಪೇರಿ ಮಾಡುತ್ತಾನೆ. ಹಿಂದೆಲ್ಲ ಕಾರುಗಳ ಬಿಡಿಭಾಗಗಳನ್ನು ರಿಪೇರಿ ಮಾಡಿ ಮತ್ತೆ ಜೋಡಿಸುತ್ತಿದ್ದರು. ಈಗ ಏನಿದ್ದರೂ ರಿಪ್ಲೇಸ್‌ಮೆಂಟ್. ಹಾಗಾಗಿ ಮೆಕ್ಯಾನಿಕ್ ಕೂಡ ಕಂಪ್ಯೂಟರ್ ಮೇಲೆಯೇ ಹೆಚ್ಚು ಭರವಸೆ ಇಡುವವನು.ಇನ್ನೂ ಕೆಲವರಿದ್ದಾರೆ; ಅವರಿಗೆ ಗ್ಯಾರೇಜಿಗೆ ಹೋಗಲೂ ಪುರುಸೊತ್ತಿಲ್ಲ. ಫೋನ್ ಮಾಡಿದರೆ ಮನೆಗೇ ಬಂದು ಕಾರು ಒಯ್ಯುತ್ತಾರೆ. ರಿಪೇರಿ ಮಾಡಿ ಮನೆಗೆ ತಂದು ನಿಲ್ಲಿಸುತ್ತಾರೆ. ಬಿಲ್ ಪಾವತಿಸುವುದಷ್ಟೇ ಕೆಲಸ.
ಎರಡು ತಲೆಮಾರುಗಳ ಹಿಂದೆ ಹೀಗಿರಲಿಲ್ಲ. ಕಾರು ಮಾಲೀಕ ಗ್ಯಾರೇಜಿಗೆ ಹೋಗಿ ಮೆಕ್ಯಾನಿಕ್ ಜೊತೆಗೆ ಕುಳಿತು ಆತನ ರಿಪೇರಿ ಕೆಲಸ ಗಮನಿಸುತ್ತಿದ್ದ. ಎಲ್ಲಿ ಏನು ತೊಂದರೆ ಆಗಿದೆ ಎನ್ನುವುದನ್ನು ಕೇಳಿ, ನೋಡಿ ತಿಳಿದುಕೊಳ್ಳುತ್ತಿದ್ದ. ಯಾವ ಬಿಡಿಭಾಗಗಳ ಹೆಸರೇನು ಎನ್ನುವುದು ಗೊತ್ತಾಗುತ್ತಿತ್ತು. ಮೆಕ್ಯಾನಿಕ್‌ನ ಅನುಭವ ಕಾರು ಮಾಲೀಕನಿಗೂ ವರ್ಗಾವಣೆ ಆಗುತ್ತಿತ್ತು.
ಡ್ರೈವಿಂಗ್ ಮಾಡುವವನಿಗೆ ದೀಪಸ್ತಂಭದಂತೆ ಈಗಿನ ಕಾರುಗಳ ಡ್ಯಾಶ್‌ಬೋರ್ಡ್ ರೂಪಿಸಲಾಗಿದೆ. ಇದರಲ್ಲಿ ಸಾಮಾನ್ಯ ಎಚ್ಚರಿಕೆ, ಸುರಕ್ಷಾ ಮತ್ತು ದುರಸ್ತಿಗಳಿಗೆ ಸಂಬಂಧಿಸಿ ವಿವಿಧ ಚಿಹ್ನೆಗಳನ್ನು ನೀಡಲಾಗಿರುತ್ತದೆ. ಕಾರಿನ ಮಾಡೆಲ್ ಉತ್ಪಾದಕ ಸಂಸ್ಥೆಯ ಶೈಲಿಗೆ ಅನುಗುಣವಾಗಿ ವ್ಯತ್ಯಾಸ ಹೊಂದಿರುತ್ತದೆ. ಈಗ ಮಾರುಕಟ್ಟೆಯಲ್ಲಿರುವ ಹಲವು ಕಾರುಗಳಲ್ಲಿ ಹೊಸ ತಂತ್ರಜ್ಞಾನದ ಕ್ಯಾಮೆರಾ, ಅಂಡ್ರಾಯ್ಡ್ ಆಧಾರಿತ ಫೋನ್ ಬಳಕೆಯ ಮತ್ತು ವಿವಿಧ ಸಂಸ್ಥೆಗಳ ವಿಶಿಷ್ಟ ಸೇವೆಗಳ ಡ್ಯಾಶ್‌ಬೋರ್ಡ್‌ಗಳಿವೆ. ಇನ್ನೀಗ ಬರಲಿರುವ ಕಾರುಗಳಲ್ಲಿ ಎಲ್ಲಾ ಮಾಹಿತಿಗಳು ಚಾಲಕನ ಮುಂದಿನ ವಿಂಡ್ ಶೀಲ್ಡ್‌ನಲ್ಲಿ ಪ್ರಕಟಗೊಳ್ಳುತ್ತವೆ.
ನಿಮಗೆ ಗೊತ್ತಿದೆಯೆ? ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಏನೆಲ್ಲಾ ಎಚ್ಚರಿಕೆಯ ಚಿಹ್ನೆಗಳ ಮಾಹಿತಿ ಇದೆಯೆಂದು? ಪಟ್ಟಿ ನೋಡಿ–ಎಂಜಿನ್ ತಾಪಮಾನ ಎಚ್ಚರಿಕೆ ಬೆಳಕು, ಟೈರ್ ಪ್ರೆಶರ್ ಎಚ್ಚರಿಕೆ ಬೆಳಕು, ಇಂಧನಒತ್ತಡದ ಎಚ್ಚರಿಕೆ,ಎಂಜಿನ್ ಎಚ್ಚರಿಕೆ, ಆ್ಯಂಟಿಲಾಕ್ ಬ್ರೇಕ್ ಎಚ್ಚರಿಕೆ, ಸ್ವಯಂಚಾಲಿತ ಶಿಫ್ಟ್‌ಲಾಕ್ ಅಥವಾ ಎಂಜಿನ್ ಸ್ಟಾರ್ಟ್ ಇಂಡಿಕೇಟರ್,ಬ್ಯಾಟರಿ ಎಚ್ಚರಿಕೆ,ಹ್ಯಾಂಡ್‌ಬ್ರೇಕ್ ಎಚ್ಚರಿಕೆ! ಐಶಾರಾಮಿ ಕಾರುಗಳಲ್ಲಿ ಪಟ್ಟಿ ಇನ್ನೂ ಉದ್ದವಿದೆ.
ತೈಲ ಒತ್ತಡದ ಬೆಳಕು
ಹಳೆಯ ಶೈಲಿಯ ತೈಲ ಕ್ಯಾನ್ ಚಿತ್ರವು ಕಾರಿನ ತೈಲ ಒತ್ತಡ ವ್ಯವಸ್ಥೆಯಲ್ಲಿ ಸಮಸ್ಯೆ ಇದೆ ಎಂದು ಸೂಚಿಸುತ್ತದೆ. ಒಂದೋ ತೈಲವನ್ನು ಕಡಿಮೆ ಹಾಕಿರುತ್ತೀರಿ ಅಥವಾ ತೈಲ ಪಂಪ್ ಇಂಜಿನ್‌ನ ಮೇಲ್ಮೈಗಳನ್ನು ಸರಿಯಾಗಿ ನಯಗೊಳಿಸುವಷ್ಟು ದ್ರವವನ್ನು ಪರಿಚಲನೆ ಮಾಡುತ್ತಿಲ್ಲ. ಸರಿಯಾದ ನಯಗೊಳಿಸುವಿಕೆ ಇಲ್ಲದೆ ಎಂಜಿನ್ ತ್ವರಿತವಾಗಿ ಹಾಳಾಗಬಹುದಾದ್ದರಿಂದ ಇದನ್ನು ಸಾಧ್ಯವಾದಷ್ಟು ಬೇಗ ಗಮನಿಸಬೇಕು.
ಟೈರ್ ಪ್ರೆಶರ್ ವಾರ್ನಿಂಗ್ ಲೈಟ್
ಈ ಚಿಹ್ನೆ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಟೈರ್‌ಗಳಲ್ಲಿನ ಒತ್ತಡವು ತುಂಬಾ ಕಡಿಮೆ ಅಥವಾ ತುಂಬಾ ಹೆಚ್ಚಾಗಿದೆ, ಅದನ್ನು ಗಮನಿಸಬೇಕಾಗಿದೆ ಎಂದು ಸಂಕೇತಿಸುತ್ತದೆ. ಕಡಿಮೆ ಅಥವಾ ಹೆಚ್ಚಿನ ಒತ್ತಡದ ಟೈರ್‌ಗಳಲ್ಲಿ ಚಾಲನೆ ಮಾಡುವುದು ಅಸುರಕ್ಷಿತ ಮತ್ತು ವಾಹನಕ್ಕೆ ಹೆಚ್ಚುವರಿ ಹಾನಿಯನ್ನು ಉಂಟು ಮಾಡುತ್ತದೆ.
ಎಂಜಿನ್ ತಾಪಮಾನ ಎಚ್ಚರಿಕೆ
ಈ ಚಿಹ್ನೆಯನ್ನು ನೋಡಿದರೆ, ಎಂಜಿನ್ ಹೆಚ್ಚು ಬಿಸಿಯಾಗಿದೆ ಎಂದರ್ಥ. ಇದು ಹೆಚ್ಚಾಗಿ ಕೂಲಂಟ್‌ನೊಂದಿಗೆ (ಆ್ಯಂಟಿಫ್ರೀಜ್ ಎಂದೂ ಕರೆಯಲ್ಪಡುತ್ತದೆ) ಸಂಬಂಧಿಸಿದೆ. ಆದರೆ, ಇದು ವಿವಿಧ ಕಾರಣಗಳಿಗಾಗಿ ಸಂಭವಿಸಬಹುದು. ಹೆಚ್ಚಿನ ಹಾನಿಯನ್ನು ತಪ್ಪಿಸಲು ಇದನ್ನು ತಕ್ಷಣವೇ ಪರಿಹರಿಸುವುದು ಮುಖ್ಯ.
ಎಳೆತ ನಿಯಂತ್ರಣ ಬೆಳಕು
ವಾಹನದ ಎಳೆತ ನಿಯಂತ್ರಣ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ಸೂಚಿಸುತ್ತದೆ. ಎಳೆತ ನಿಯಂತ್ರಣ ವ್ಯವಸ್ಥೆಯು ನಿಮ್ಮ ಆ್ಯಂಟಿಲಾಕ್ ಬ್ರೇಕ್(ಎಬಿಎಸ್) ವ್ಯವಸ್ಥೆಯಲ್ಲಿ ಒಂದು ಚಕ್ರವು ಇನ್ನೊಂದಕ್ಕಿಂತ ವೇಗವಾಗಿ ತಿರುಗುತ್ತಿದೆಯೇ ಎಂದು ನಿರ್ಧರಿಸಲು ಇರುತ್ತದೆ. ಚಕ್ರವು ಜಾರಿ ಬೀಳುತ್ತಿದೆ ಎಂದು ಕಾರಿನ ಕಂಪ್ಯೂಟರ್ ಉಹಿಸಿ ಎಳೆತವನ್ನು ಮರಳಿ ಪಡೆಯುವವರೆಗೆ ಅದು ಬ್ರೇಕ್‌ಗಳನ್ನು ಹಾಕುತ್ತದೆ. ಮಳೆಯ ಮಧ್ಯೆ ಅಥವಾ ಹಿಮದಲ್ಲಿ ಚಾಲನೆ ಮಾಡುತ್ತಿದ್ದರೆ ಇದು ಹೆಚ್ಚು ಸಹಾಯಕ.
ಆ್ಯಂಟಿ ಲಾಕ್ ಬ್ರೇಕ್ ಎಚ್ಚರಿಕೆ ಬೆಳಕು
ಚಾಲನೆ ಮಾಡುವಾಗ ಆ್ಯಂಟಿಲಾಕ್ ಬ್ರೇಕ್‌ಗಳು ‘ಎಬಿಎಸ್’ ಎಚ್ಚರಿಕೆ ಬೆಳಗಿದರೆ, ಇದರರ್ಥ ಸಿಸ್ಟಂನಲ್ಲಿ ಏನೋ ತಪ್ಪಾಗಿದೆ. ಕಾರನ್ನು ರಸ್ತೆಯೊಂದಿಗೆ ಸುರಕ್ಷಿತವಾಗಿರಿಸಲು ಆ್ಯಂಟಿಲಾಕ್ ಬ್ರೇಕ್‌ಗಳು ಕಾರ್ಯ ನಿರ್ವಹಿಸುತ್ತವೆ. ಸಾಧ್ಯವಾದಷ್ಟು ಬೇಗ ಈ ಸಮಸ್ಯೆಯನ್ನು ಕಂಡುಹಿಡಿಯುವುದು ಮುಖ್ಯ. ಪ್ರತಿಬಾರಿ ವಾಹನವನ್ನು ಆನ್ ಮಾಡಿದಾಗ, ಸಿಸ್ಟಂ ಸ್ವಯಂ ಪರಿಶೀಲನೆ ಮಾಡುತ್ತದೆ ಮತ್ತು ಕೆಲವೇ ಸೆಕೆಂಡ್‌ಗಳವರೆಗೆ ದೀಪ ಬೆಳಗಿ ತಕ್ಷಣವೇ ನಂದಿ ಹೋದರೆ, ಸಿಸ್ಟಂ ಸುಸ್ಥಿತಿಯಲ್ಲಿದೆ ಎಂದರ್ಥ.
ಎಳೆತ ನಿಯಂತ್ರಣ ಅಸಮರ್ಪಕ ಕ್ರಿಯೆ
ವಾಹನದ ಎಳೆತ ನಿಯಂತ್ರಣ ವ್ಯವಸ್ಥೆಯು ಮುರಿದ ಅಥವಾ ಹಾನಿಗೊಳಗಾದ ಸಂವೇದಕ (ಸೆನ್ಸರ್ಸ್) ಅಥವಾ ಇತರ ಅಸಮರ್ಪಕ ಕಾರ್ಯಗಳನ್ನು ಹೊಂದಿರಬಹುದು ಎಂದು ಈ ಬೆಳಕು ಸೂಚಿಸುತ್ತದೆ. ಕೆಲವು ಕಾರುಗಳಲ್ಲಿ, ಅದೇ ನಿಯಂತ್ರಣ ಮಾಡ್ಯೂಲ್ ಆ್ಯಂಟಿಲಾಕ್ ಬ್ರೇಕ್ ಮತ್ತು ಎಳೆತ ನಿಯಂತ್ರಣ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಆದ್ದರಿಂದ ಎಬಿಎಸ್‌ನಲ್ಲಿ ಸಮಸ್ಯೆಗಳಿದ್ದಾಗ ಬೆಳಕು ಕೆಲವೊಮ್ಮೆ ಬೆಳಗುತ್ತದೆ.
ಎಂಜಿನ್ ಎಚ್ಚರಿಕೆ
ಎಂಜಿನ್ ಬೆಳಕು ವಿವಿಧ ಕಾರಣಗಳಿಗಾಗಿ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ, ಇದು ಗಂಭೀರ ಸಮಸ್ಯೆಯನ್ನು ಸೂಚಿಸುತ್ತದೆ. ಇದನ್ನು ತಕ್ಷಣವೇ ಸರಿಪಡಿಸಬೇಕು. ಇದು ಕಡಿಮೆ ತೈಲ ಒತ್ತಡ ಅಥವಾ ಅಧಿಕ ತಾಪವನ್ನು ಸೂಚಿಸುತ್ತದೆ. ಇತರ ಸಮಯಗಳಲ್ಲಿ, ಇಂಧನ ಕ್ಯಾಪ್ ತೆರೆದಿದ್ದರೆ, ಸಡಿಲವಾಗಿದ್ದರೆ ಅಥವಾ ಬಿರುಕು ಬಿಟ್ಟರೆ ಇಂಧನ ಆವಿಯಾಗಿ ಹೋಗಿರುತ್ತದೆ. ಈ ಬೆಳಕು ಕಾಣಿಸಿಕೊಂಡರೆ, ವಾಹನದಲ್ಲಿ ಇಂಧನ ಕ್ಯಾಪ್ ಮತ್ತು ಇತರ ವ್ಯವಸ್ಥೆಗಳನ್ನು ಪರಿಶೀಲಿಸುವುದು ಅವಶ್ಯ. ಅದು ಇನ್ನೂ ಮಿನುಗುತ್ತಿದ್ದರೆ, ಚಾಲನೆ ಮಾಡುವುದನ್ನು ನಿಲ್ಲಿಸಬೇಕು! ನಿರ್ಲಕ್ಷಿಸಿದರೆ ಅದು ಕಾರಿಗೆ ಗಂಭೀರ ಹಾನಿಯನ್ನು ಉಂಟು ಮಾಡುತ್ತದೆ.
ಬ್ಯಾಟರಿ ಎಚ್ಚರಿಕೆ
ಸ್ಟಾರ್ಟ್ ಮಾಡುವಾಗ ತಡವಾದರೆ, ಬರೀ ಕ್ಚಿ ಕ್ಚಿ ಕ್ಚೀ ಶಬ್ದ ಬಣದರೆ ವಾಹನದ ಚಾರ್ಜಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆ ಇದೆ ಎಂದರ್ಥ. ಸಡಿಲವಾದ ಅಥವಾ ಹಾನಿಗೊಳಗಾದ ಬ್ಯಾಟರಿ ಕೇಬಲ್ ಬಗ್ಗೆ ಅದು ಸೂಚಿಸಬಹುದಾದರೂ, ನಿಮ್ಮ ಆವರ್ತಕ ಬೆಲ್ಟ್ ಮುರಿದುಹೋಗಿದೆ ಎಂದೂ ಇದು ಸಂಕೇತಿಸುತ್ತದೆ. ಕಾರಿನ ಡ್ಯಾಶ್ ಬೋರ್ಡ್ ಗಡಿಯಾರವು ನಿಧಾನವಾಗಿ ಮಂಕಾಗುವುದು ಅಥವಾ ಹೆಡ್‌ಲೈಟ್‌ಗಳು ಮಂಕಾಗುತ್ತಿರುವುದನ್ನು ನೀವು ಗಮನಿಸಬಹುದು.
ಸ್ವಯಂಚಾಲಿತ ಶಿಫ್ಟ್ ಲಾಕ್ ಅಥವಾ ಎಂಜಿನ್ ಪ್ರಾರಂಭ ಸೂಚಕ
ಈ ಚಿಹ್ನೆಯನ್ನು ನೋಡಿದರೆ, ಗೇರ್‌ಗಳನ್ನು ಬದಲಾಯಿಸಲು ಅಥವಾ ಬ್ರೇಕ್ ಅನ್ನು ಹಾಕದೆ ಇಗ್ನಿಷನ್ ಅನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದೀರಿ. ಸ್ವಯಂಚಾಲಿತ ಶಿಫ್ಟ್ ಲಾಕ್ ಬ್ರೇಕ್ ಅನ್ನು ಹಾಕಿಕೊಳ್ಳುವವರೆಗೆ ವಾಹನವನ್ನು ತಟಸ್ಥವಾಗಿ ಲಾಕ್ ಮಾಡುತ್ತದೆ.
ಸೀಟ್ ಬೆಲ್ಟ್ ಜ್ಞಾಪನೆ: ಇದಂತೂ ಈಗ ಎಲ್ಲರಿಗೆ ಪರಿಚಿತ. ಏಕೆಂದರೆ ಬೀಪ್ ಬೀಪ್ ಶಬ್ದ ಕಿರಿಕಿರಿ ಉಂಟು ಮಾಡುತ್ತದೆ.
ಏರ್‌ಬ್ಯಾಗ್ ಸೂಚಕ:ಏರ್‌ಬ್ಯಾಗ್ ಸೂಚಕವು ಏರ್‌ಬ್ಯಾಗ್‌ಗಳಲ್ಲಿ ಅಥವಾ ಒಟ್ಟಾರೆಯಾಗಿ ಸಿಸ್ಟಂನಲ್ಲಿ ಏನಾದರೂ ತಪ್ಪಾಗಿದೆ ಎಂದು ಸಂಕೇತಿಸುತ್ತದೆ. ಅಪಘಾತದ ಸಮಯದಲ್ಲಿ ಕಾರಿನ ಏರ್‌ಬ್ಯಾಗ್‌ಗಳು ಸುರಕ್ಷಿತವಾಗಿರಿಸುತ್ತವೆ. ಆದ್ದರಿಂದ ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸುವುದು ಮುಖ್ಯ.
ಮಂಜು ದೀಪ ಸೂಚಕ:ಮಂಜು ದೀಪಗಳು ಆನ್ ಆಗಿವೆ ಎಂದು ಈ ಚಿಹ್ನೆಯು ತಿಳಿಸುತ್ತದೆ. ಗೋಚರತೆ 100 ಮೀಟರ್‌ಗಿಂತ ಕಡಿಮೆಯಿದ್ದರೆ ಮಾತ್ರ ಮಂಜು ದೀಪಗಳನ್ನು ಬಳಸಬೇಕು. ಅನಗತ್ಯವಾಗಿ ಆನ್ ಮಾಡಿದರೆ, ಇದು ರಸ್ತೆಯ ಇತರ ಚಾಲಕರಿಗೆ ತೊಂದರೆ ಕೊಡುತ್ತದೆ.
ವಾಷರ್ ಫ್ಲೂಯಿಡ್ ಇಂಡಿಕೇಟರ್:ವಿಂಡ್‌ಶೀಲ್ಡ್ ವೈಪರ್‌ಗಳ ಚಲನೆಯನ್ನು ಅನುಕರಿಸುವುದರಿಂದ, ಈ ಚಿಹ್ನೆಯು ತೊಳೆಯುವ ದ್ರವ ಕಡಿಮೆ ಇದೆ ಎಂದರ್ಥ. ಸಾಧ್ಯವಾದಷ್ಟು ಬೇಗ ಟ್ಯಾಂಕ್‌ನಲ್ಲಿ ನೀರು ತುಂಬಿಸಿ.
ಹ್ಯಾಂಡ್ ಬ್ರೇಕ್ ಎಚ್ಚರಿಕೆ:ಕಾರನ್ನು ಚಾಲನೆ ಮಾಡಿ ಹೊರಡುವ ಮೊದಲು ಈ ಹ್ಯಾಂಡ್ ಬ್ರೇಕ್ ಅನ್ನು ಸ್ವಸ್ಥಾನಕ್ಕೆ ಮರಳಿಸಬೇಕು. ಇಲ್ಲದಿದ್ದರೆ ಕೆಲ ದೂರ ಸಾಗುವಷ್ಟರಲ್ಲಿ ಕಾರಿನ ಚಲನೆ ಬ್ರೇಕ್ ಹಾಕಿದಂತೆ ನಿಧಾನಗೊಳ್ಳುತ್ತದೆ.
ಅಲ್ಪ ಸ್ವಲ್ಪ ಹಣ ಉಳಿಸುವುದಕ್ಕೆಂದು ಅಧಿಕೃತ ಸರ್ವಿಸ್ ಕೇಂದ್ರಗಳನ್ನು ಬಿಟ್ಟು ಬೇರೆಡೆ ಕಾರು ರಿಪೇರಿಗೆ ಒಯ್ಯುವವರಿದ್ದಾರೆ. ಅವರು ಯಾವ ಕಾರಿನ ಪಾರ್ಟ್, ಯಾವ ಕಾರಿಗೆ ಜೋಡಿಸುತ್ತಾರೆ ಎನ್ನುವುದು ಖಚಿತವಿಲ್ಲ. ಕೊನೆಗೊಂದು ದೊಡ್ಡ ರಿಪೇರಿ ಬಂದಾಗ, ಆವರೆಗೆ ಉಳಿಸಿದ ನಿಮ್ಮ ಹಣವೆಲ್ಲ ಸೋರಿಹೋಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.