ಬೆಂಗಳೂರು: ಬಜಾಜ್ ಆಟೊ ಕಂಪನಿಯ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನ ಬಜಾಜ್ ಚೇತಕ್, 2024-25ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಅತಿಹೆಚ್ಚು ಮಾರಾಟವಾಗುವ ಮೂಲಕ, ದೇಶದ ಇ.ವಿ ದ್ವಿಚಕ್ರ ವಾಹನ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಈ ತ್ರೈಮಾಸಿಕದಲ್ಲಿ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ 29ರಷ್ಟು ಮಾರುಕಟ್ಟೆ ಪಾಲು ಪಡೆದಿದ್ದು, ನಂಬರ್ ಒನ್ ಸ್ಥಾನ ಪಡೆದಿದೆ ಎಂದು ಕಂಪನಿ ತಿಳಿಸಿದೆ.
ಕಾರ್ಯಕ್ಷಮತೆ, ವಿಶ್ವಾಸಾರ್ಹತೆ ಮತ್ತು ಹೊಸ ಶೈಲಿಯ ಮಾದರಿಯೊಂದಿಗೆ ಗ್ರಾಹಕರ ಆದ್ಯತೆಯ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಹೊರಹೊಮ್ಮಿದೆ. 70, 80 ಮತ್ತು 90ರ ದಶಕದಲ್ಲಿ ಸ್ಕೂಟರ್ ಮಾರುಕಟ್ಟೆಯ ನಿರ್ಮಾಣ ಮತ್ತು ನಾಯಕತ್ವದಲ್ಲಿ ಬಜಾಜ್ ಚೇತಕ್ ಮೇಲುಗೈ ಸಾಧಿಸಿತ್ತು. ಮತ್ತೆ ತನ್ನ ಪರಂಪರಾಗತ ಸ್ಥಾನ ಕಾಯ್ದುಕೊಳ್ಳುತ್ತಿದೆ ಎಂದು ಹೇಳಿದೆ.
ಬಜಾಜ್ ಚೇತಕ್‌ನ ಈ ಸಾಧನೆಗೆ ಬಜಾಜ್ ಆಟೊ ಲಿಮಿಟೆಡ್‌ನ ಸುಮಾರು 3,800 ಮಾರಾಟ ಮತ್ತು ಸರ್ವಿಸ್ ಕೇಂದ್ರಗಳೇ ಕಾರಣ. ಬಜಾಜ್ ಚೇತಕ್‌ನ 29 ಸರಣಿ ಮತ್ತು 35 ಸರಣಿ ಕೂಡ ಯಶಸ್ಸು ಕಂಡಿವೆ. ಇವೆರಡೂ ದ್ವಿಚಕ್ರ ವಾಹನ ಸೇರಿ 2024ರಲ್ಲಿ 2 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗಿವೆ ಎಂದು ತಿಳಿಸಿದೆ.
ಫ್ಲ್ಯಾಗ್‌ಶಿಪ್ 35ನೇ ಸರಣಿಯು ಸುಧಾರಿತ ಫ್ಲೋರ್‌ಬೋರ್ಡ್ ಇಂಟಿಗ್ರೇಟೆಡ್ ಬ್ಯಾಟರಿ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೆಚ್ಚಿನ ಸುರಕ್ಷಾ ಫೀಚರ್‌ಗಳನ್ನು ಹೊಂದಿದೆ.
2001ರಲ್ಲಿ ಕಂಪನಿಯು ದೇಶದಲ್ಲಿ ಸಿಎನ್‌ಜಿ ತ್ರಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿತು. ಆ ಮೂಲಕ ಬಜಾಜ್ ದೇಶದ ಶುದ್ಧ ಇಂಧನ ಕ್ರಾಂತಿಯ ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ. ಅಲ್ಲದೆ, ಅದೇ ಅವಧಿಯಲ್ಲಿ ಸಿಎನ್‌ಜಿ ಮತ್ತು ಇ.ವಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಲ್ಲಿ ಶೇ 28ರಷ್ಟು ಮಾರುಕಟ್ಟೆ ಪಾಲು ಹೊಂದಿದೆ ಎಂದು ಳಿಸಿದೆ.
‘ಚೇತಕ್ ಮತ್ತೊಮ್ಮೆ ಐಸಿಇನಿಂದ ಎಲೆಕ್ಟ್ರಿಕ್ ಅವತಾರದವರೆಗೂ ಗ್ರಾಹಕರ ಪ್ರೀತಿ ಗಳಿಸಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಕ್ಷೇತ್ರಗಳಿಗೆ ತನ್ನ ಕೊಡುಗೆ ಸಲ್ಲಿಸುವ ಮೂಲಕ ಬಜಾಜ್ ಆಟೊ ದೇಶದ ಇ.ವಿ ಕ್ರಾಂತಿಯ ನೇತೃತ್ವವಹಿಸಿದೆ’ ಎಂದು ಬಜಾಜ್ ಆಟೊ ಲಿಮಿಟೆಡ್‌ನ ನಗರ ಪ್ರದೇಶದ ವ್ಯಾಪಾರ ಘಟಕದ ಅಧ್ಯಕ್ಷ ಎರಿಕ್ ವ್ಯಾಸ್ ತಿಳಿಸಿದ್ದಾರೆ.
‘ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಸದೃಢ ಸೇವಾ ಜಾಲ ಹೊಂದಲಾಗಿದೆ. ಎಲೆಕ್ಟ್ರಿಕ್ ವಿಭಾಗದಲ್ಲಿ ಪ್ರಮುಖ ಭಾಗವಾಗಿರುವ ‘ಇದುವರೆಗಿನ ಅತ್ಯುತ್ತಮ ಚೇತಕ್’– 35 ಸರಣಿಯ ನಂತರ ಮುಂಬರುವ ತಿಂಗಳುಗಳಲ್ಲಿ ಇನ್ನೂ ಹೆಚ್ಚಿನ ಗ್ರಾಹಕರನ್ನು ಬಜಾಜ್ ಕುಟುಂಬಕ್ಕೆ ಸೇರ್ಪಡೆಗೊಳಿಸಲು ಸಜ್ಜಾಗಿದ್ದೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.