ಬೈಕ್ ಟ್ಯಾಕ್ಸಿ ರೈಡರ್‌ಗಳಿಂದ ಸಾರಿಗೆ ಸಚಿವಾಲಯಕ್ಕೆ ಮನವಿ
ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆಗಳನ್ನು ಸರಿಯಾಗಿ ನಿರ್ವಹಿಸಲು ಸೂಕ್ತ ನಿಯಮಗಳ ಚೌಕಟ್ಟು ರೂಪಿಸುವಂತೆ ಬೈಕ್ ಟ್ಯಾಕ್ಸಿ ಅಸೋಸಿಯೇಶನ್ (ಬಿಟಿಎ) ಪ್ರತಿನಿಧಿಗಳು ಶನಿವಾರ (ಮೇ 17, 2025) ಬೆಂಗಳೂರಿನಲ್ಲಿ ಸಾರಿಗೆ ಸಚಿವರ ಕಚೇರಿಯಲ್ಲಿ ಔಪಚಾರಿಕ ಮನವಿ ಸಲ್ಲಿಸಿದರು. ಈ ಸಂದರ್ಭ 100ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ಚಾಲಕರು ಹಾಜರಿದ್ದರು.
6 ಲಕ್ಷಕ್ಕೂ ಹೆಚ್ಚು ಕನ್ನಡದ ರೈಡರ್‌ಗಳ ಜೀವನೋಪಾಯದ ಅಗತ್ಯಗಳ ಕುರಿತು ಮನವಿಯಲ್ಲಿ ವಿವರಿಸಲಾಗಿದೆ. ಶೇ.75ರಷ್ಟು ಮಂದಿ ತಮ್ಮ ಪ್ರಾಥಮಿಕ ಆದಾಯದ ಮೂಲವಾಗಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಂಬಿಕೊಂಡಿದ್ದಾರೆ. ನ್ಯಾಯಯುತ, ಎಲ್ಲರನ್ನೂ ಒಳಗೊಳ್ಳುವ ಮತ್ತು ಸುಸ್ಥಿರ ನಿಯಂತ್ರಣದ ಚೌಕಟ್ಟು ರೂಪಿಸಲು ಈ ಚಾಲಕರು ಮನವಿ ಮಾಡಿದ್ದು, ರಾಜ್ಯದ ಸಂಚಾರ ವ್ಯವಸ್ಥೆಯಲ್ಲಿ ಬೈಕ್ ಟ್ಯಾಕ್ಸಿಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದೂ ತಿಳಿಸಲಾಗಿದೆ.
ಮೋಟಾರು ವಾಹನಗಳ ಕಾಯ್ದೆ, 1988ರ ಪರಿಚ್ಛೇದ 66ರಲ್ಲಿ ವ್ಯಾಖ್ಯಾನಿಸಿದಂತೆ ಶಾಸನಬದ್ಧ ಚೌಕಟ್ಟಿನಲ್ಲಿ ಬೈಕ್ ಟ್ಯಾಕ್ಸಿಗಳು ಮತ್ತು ಡೆಲಿವರಿ ದ್ವಿಚಕ್ರ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಬೈಕ್ ಟ್ಯಾಕ್ಸಿಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕೆಂದು ಮನವಿಯಲ್ಲಿ ಕೋರಲಾಗಿದೆ. ಬೆಂಗಳೂರಿನಲ್ಲಿ 20 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಈ ಸೇವೆ ಅನುಕೂಲಕರವಾಗಿದ್ದು, ಅಗತ್ಯ, ಸುರಕ್ಷಿತ, ಕೈಗೆಟಕುವ ಮತ್ತು ದಕ್ಷತೆಯ ಸಾರಿಗೆ ವಿಧಾನವನ್ನು ಸಾರ್ವಜನಿಕರಿಗೆ ಒದಗಿಸುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಬೈಕ್ ಟ್ಯಾಕ್ಸಿ ರೈಡರ್‌ಗಳಲ್ಲಿ ಶೇ.80ಕ್ಕಿಂತ ಹೆಚ್ಚು ಸ್ಥಳೀಯ ಕನ್ನಡಿಗ ಪುರುಷರೂ ಮಹಿಳೆಯರೂ ಇದ್ದು, ಅವರು ಕಳೆದ 6 ವರ್ಷಗಳಿಂದಲೂ ಬೈಕ್ ಟ್ಯಾಕ್ಸಿಗಳಿಂದ ಗೌರವಯುತವಾಗಿ ಸಂಪಾದನೆ ಮಾಡುತ್ತಿದ್ದಾರೆ. ಬೈಕ್ ಟ್ಯಾಕ್ಸಿಗಳ ನಿರ್ವಹಣೆಗೆ ಸರ್ಕಾರ ಪರ್ಮಿಟ್ ಶುಲ್ಕ ಅಥವಾ ತೆರಿಗೆ ವಿಧಿಸಿದರೆ ಅದನ್ನು ಪಾವತಿಸಲು ಸಿದ್ಧರಿದ್ದಾರೆ ಎಂದೂ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.