ADVERTISEMENT

ವಿದ್ಯುತ್ ಚಾಲಿತ ವಾಹನ ಮಾರಾಟ ಭಾರತದಲ್ಲಿ ಮೂರು ಪಟ್ಟು ಹೆಚ್ಚಳ

ಪಿಟಿಐ
Published 10 ಏಪ್ರಿಲ್ 2022, 10:57 IST
Last Updated 10 ಏಪ್ರಿಲ್ 2022, 10:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದ್ಯುತ್‌ ಚಾಲಿತ ವಾಹನಗಳ (ಇ.ವಿ.) ರಿಟೇಲ್‌ ಮಾರಾಟವು 2020–21ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2021–22ನೇ ಹಣಕಾಸು ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗಿದೆ.

2020–21ರಲ್ಲಿ 1.34 ಲಕ್ಷ ವಾಹನಗಳು ಮಾರಾಟ ಆಗಿದ್ದವು. ಈ ಸಂಖ್ಯೆಯು 2021–22ರಲ್ಲಿ 4.29 ಲಕ್ಷಕ್ಕೆ ಏರಿಕೆ ಆಗಿದೆ ಎಂದು ಭಾರತೀಯ ವಾಹನ ವಿತರಕರ ಒಕ್ಕೂಟ (ಎಪ್‌ಎಡಿಎ) ತಿಳಿಸಿದೆ.

ವಿದ್ಯುತ್ ಚಾಲಿತ ಪ್ರಯಾಣಿಕ ವಾಹನಗಳ ರಿಟೇಲ್‌ ಮಾರಾಟ 4,984ರಿಂದ 17,802ಕ್ಕೆ ಏರಿಕೆ ಆಗಿದೆ.

ADVERTISEMENT

ದೇಶಿ ಕಂಪನಿಯಾದ ಟಾಟಾ ಮೋಟರ್ಸ್‌ ವಿದ್ಯುತ್ ಚಾಲಿತ ಪ್ರಯಾಣಿಕ ವಾಹನಗಳ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಇದು ಶೇಕಡ 85.37ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದು, 15,198 ವಾಹನಗಳನ್ನು ಮಾರಾಟ ಮಾಡಿದೆ. 2020–21ರಲ್ಲಿ ಒಟ್ಟಾರೆ 3,523 ವಾಹನಗಳನ್ನು ಮಾರಾಟ ಮಾಡಿತ್ತು.

ಎಂ.ಜಿ. ಮೋಟರ್ ಇಂಡಿಯಾ ಕಂಪನಿಯು 2,045 ವಾಹನಗಳನ್ನು ಮಾರಾಟ ಮಾಡಿದ್ದು ಶೇ 11.49ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.

ಮಹೀಂದ್ರ ಆ್ಯಂಡ್‌ ಮಹೀಂದ್ರ ಮತ್ತು ಹುಂಡೈ ಮೊಟರ್ ಕಂಪನಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಮಹೀಂದ್ರ 156 ಮತ್ತು ಹುಂಡೈ 128 ವಾಹನಗಳನ್ನು ಮಾರಾಟ ಮಾಡಿವೆ.

ಇ.ವಿ. ದ್ವಿಚಕ್ರ ವಾಹನ: ದ್ವಿಚಕ್ರ ವಾಹನ ಮಾರಾಟ 41,046ರಿಂದ 2.31 ಲಕ್ಷಕ್ಕೆ ಭಾರಿ ಏರಿಕೆ ಕಂಡಿದೆ. ಹೀರೊ ಎಲೆಕ್ಟ್ರಿಕ್‌ ಕಂಪನಿ 65,303 ವಾಹನಗಳನ್ನು ಮಾರಾಟ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದೆ. ಇದರ ಮಾರುಕಟ್ಟೆ ಪಾಲು ಶೇ 28.23ರಷ್ಟಿದೆ.

ಒಕಿನೋವಾ ಆಟೊಟೆಕ್‌ ಮತ್ತು ಆಂಪೈರ್‌ ವೆಹಿಕಲ್ಸ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡಿವೆ. ಬೆಂಗಳೂರಿನ ಓಲಾ ಎಲೆಕ್ಟ್ರಿಕ್‌ 14,371 ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದು, ಆರನೇ ಸ್ಥಾನದಲ್ಲಿದೆ. ಟಿವಿಎಸ್‌ ಕಂಪನಿ ಏಳನೇ ಸ್ಥಾನದಲ್ಲಿದೆ.

ವಿದ್ಯುತ್ ಚಾಲಿತ ವಾಣಿಜ್ಯ ವಾಹನಗಳ ಮಾರಾಟ 400ರಿಂದ 2,203ಕ್ಕೆ ಏರಿಕೆ ಆಗಿದೆ ಎಂದು ಎಫ್‌ಎಡಿಎ ಮಾಹಿತಿ ನೀಡಿದೆ.

ಇ.ವಿ. ಪ್ರಯಾಣಿಕ ವಾಹನ ಮಾರುಕಟ್ಟೆ ಪಾಲು

ಟಾಟಾ ಮೋಟರ್ಸ್;85.37%

ಎಂಜಿ ಮೋಟರ್ಸ್‌;11.49%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.