ADVERTISEMENT

ಹೊಸ ಇ.ವಿ ನೀತಿಗೆ ಕೇಂದ್ರ ಸರ್ಕಾರ ಅಸ್ತು: ಟೆಸ್ಲಾ ಹಾದಿ ಸುಗಮ

ಆಮದು ಸುಂಕ ಕಡಿತ: ಟೆಸ್ಲಾ ಹಾದಿ ಸುಗಮ

ಪಿಟಿಐ
Published 16 ಮಾರ್ಚ್ 2024, 16:20 IST
Last Updated 16 ಮಾರ್ಚ್ 2024, 16:20 IST
ಟೆಸ್ಲಾ ಹಾಗೂ ಇಲಾನ್ ಮಸ್ಕ್
ಟೆಸ್ಲಾ ಹಾಗೂ ಇಲಾನ್ ಮಸ್ಕ್   

ನವದೆಹಲಿ: ಕೇಂದ್ರ ಸರ್ಕಾರವು ಹೊಸ ಎಲೆಕ್ಟ್ರಿಕ್‌ ವಾಹನ ನೀತಿಗೆ ಅನುಮೋದನೆ ನೀಡಿದೆ.

ದೇಶದಲ್ಲಿ ಕನಿಷ್ಠ ₹4,150 ಕೋಟಿ (500 ಮಿಲಿಯನ್‌ ಡಾಲರ್‌) ಬಂಡವಾಳ ಹೂಡಿಕೆ ಮಾಡಿ ಇ.ವಿ ತಯಾರಿಕಾ ಘಟಕ ಸ್ಥಾಪಿಸುವ ಕಂಪನಿಗಳಿಗೆ ಆಮದು ಸುಂಕದಲ್ಲಿ ರಿಯಾಯಿತಿ ಪ್ರಕಟಿಸಿದೆ. ಇದರಿಂದ ಭಾರತದ ಮಾರುಕಟ್ಟೆ ಪ್ರವೇಶಿಸಲು ಮುಂದಾಗಿರುವ ಉದ್ಯಮಿ ಇಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಕಂಪನಿಯ ಹಾದಿ ಸುಗಮವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಹೊಸ ನೀತಿ ಅನ್ವಯ ₹29 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಕಾರುಗಳ ಆಮದಿಗೆ ಶೇ 15ರಷ್ಟು ಆಮದು ಸುಂಕ ನಿಗದಿಪಡಿಸಲಾಗಿದೆ. ಈ ನಿಯಮವು ಸರ್ಕಾರ ಅನುಮತಿ ನೀಡಿದ ದಿನದಿಂದ ಐದು ವರ್ಷಗಳ ಅವಧಿಗೆ ಒಳಪಟ್ಟಿದೆ. ಪ್ರತಿ ವರ್ಷಕ್ಕೆ 8 ಸಾವಿರ ಕಾರುಗಳ ಆಮದಿಗೆ ಮಾತ್ರ ಸೀಮಿತಗೊಳಿಸಲಾಗಿದೆ. 

ADVERTISEMENT

ಪ್ರಸ್ತುತ ಆಮದು ಮಾಡಿಕೊಳ್ಳುವ ಕಾರುಗಳ ಮೇಲೆ ಕೇಂದ್ರ ಸರ್ಕಾರವು ಶೇ 70ರಿಂದ ಶೇ 100ರಷ್ಟು ಆಮದು ಸುಂಕ ವಿಧಿಸುತ್ತಿದೆ. ₹33 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಕಾರುಗಳ ಎಂಜಿನ್‌ ಗಾತ್ರ, ವಿಮೆ ಹಾಗೂ ಸಾಗಣೆ ಮೇಲೆ ಈ ಸುಂಕ ವಿಧಿಸಲಾಗುತ್ತದೆ. 

ಎಲೆಕ್ಟ್ರಿಕ್‌ ವಾಹನಗಳ ಮಾರುಕಟ್ಟೆಯಲ್ಲಿ ಭಾರತವನ್ನು ಮುಂಚೂಣಿ ಸ್ಥಾನಕ್ಕೇರಿಸಲು ಹಾಗೂ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಿಸಲು ಹೊಸ ನೀತಿ ಉತ್ತೇಜನ ನೀಡಲಿದೆ ಎಂದು ಕೇಂದ್ರ ಹೇಳಿದೆ.

ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯದಿಂದ ಅನುಮತಿ ಪಡೆದ ಮೂರು ವರ್ಷದೊಳಗೆ ಕಂಪನಿಗಳು ತಯಾರಿಕಾ ಘಟಕ ಸ್ಥಾಪಿಸಬೇಕು. ಮೇಕ್‌ ಇನ್‌ ಇಂಡಿಯಾ ನೀತಿಗೆ ಕೇಂದ್ರ ಒತ್ತು ನೀಡುತ್ತಿರುವುದರಿಂದ ಈ ಅವಧಿಯಲ್ಲಿ ದೇಶೀಯ ಮೌಲ್ಯ ವೃದ್ಧಿಗೆ ಒತ್ತು ನೀಡಬೇಕಿದೆ ಎಂದು ಹೇಳಿದೆ.

‘ಆಸಕ್ತ ಕಂಪನಿಗಳು ಸಚಿವಾಲಯದ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ’ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು (ಡಿಪಿಐಐಟಿ) ಕಾರ್ಯದರ್ಶಿ ರಾಜೇಶ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.