ADVERTISEMENT

PV Web Exclusive | ಕಿಯಾ: ಕ್ಯಾ ಕಮಾಲ್‌ ಕಿಯಾ

2030ರ ವೇಳೆಗೆ ಭಾರತದಲ್ಲಿ ಮೂರನೇ ಸ್ಥಾನಕ್ಕೇರುವ ನಿರೀಕ್ಷೆಯಲ್ಲಿ ಕಿಯಾ ಮೋಟರ್ಸ್‌

ಮಹಮ್ಮದ್ ನೂಮಾನ್
Published 6 ಸೆಪ್ಟೆಂಬರ್ 2020, 5:14 IST
Last Updated 6 ಸೆಪ್ಟೆಂಬರ್ 2020, 5:14 IST
.
.   

ವಿಶ್ವದ ಬಹುತೇಕ ಎಲ್ಲ ಪ್ರಮುಖ ಕಾರು ತಯಾರಿಕಾ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿವೆ. ಟೊಯೋಟ, ಹೋಂಡಾ, ಹುಂಡೈ, ರೆನೋ, ಫೋಕ್ಸ್‌ವ್ಯಾಗನ್‌, ಫೋರ್ಡ್‌ ಕಂಪನಿಗಳು ಇಲ್ಲಿನ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಲೇ ಇವೆ. ಹೊಸ ಹೊಸ ಮಾದರಿಯ ಕಾರುಗಳ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿವೆ.

ವಾಹನ ತಯಾರಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ದೊಡ್ಡ ಕಂಪನಿಗಳಲ್ಲಿ ಒಂದಾಗಿರುವ ದಕ್ಷಿಣ ಕೊರಿಯಾದ ಕಿಯಾ ಮೋಟರ್ಸ್‌ ಕಾರ್ಪೊರೇಷನ್ ಭಾರತಕ್ಕೆ ಕಾಲಿಟ್ಟು ಒಂದು ವರ್ಷ ಆಗಿದೆಯಷ್ಟೆ. ಇತರ ಕಂಪನಿಗಳಿಗೆ ಹೋಲಿಸಿದರೆ ಕಿಯಾ ಬಹಳ ತಡವಾಗಿ ಭಾರತಕ್ಕೆ ಬಂದಿದೆ. ಆದರೆ ಅಲ್ಪ ಅವಧಿಯಲ್ಲೇ ಯಶಸ್ಸು ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಇತರ ಕಂಪನಿಗಳಿಗೆ ಪ್ರಬಲ ಪೈಪೋಟಿಯ ಸೂಚನೆ ನೀಡಿದೆ.

ಕಿಯಾ ಮೋಟರ್ಸ್ ಮುಂದಿನ 10 ವರ್ಷಗಳಲ್ಲಿ ಪ್ರಯಾಣಿಕ ವಾಹನ (ಪ್ಯಾಸೆಂಜರ್‌ ವೆಹಿಕಲ್‌) ಮಾರಾಟದಲ್ಲಿ ಭಾರತದಲ್ಲಿ ಮೂರನೇ ಸ್ಥಾನಕ್ಕೆ ಏರಲಿದೆ ಎಂದು ಎಲ್ಎಂಸಿ ಆಟೊಮೋಟಿವ್ ವರದಿ ತಿಳಿಸಿದೆ. ಮಾರುತಿ ಸುಜುಕಿ ಮತ್ತು ಹುಂಡೈ ಮೋಟರ್ಸ್‌ ಇಂಡಿಯಾ ಕಂಪನಿ ಬಳಿಕ ಮೂರನೇ ಸ್ಥಾನ ಅಲಂಕರಿಸಲಿದೆ ಎಂದು ವರದಿ ಹೇಳಿದೆ.

ADVERTISEMENT

2030ರ ವೇಳೆಗೆ ಕಂಪನಿಯ ವಾರ್ಷಿಕ ಮಾರಾಟ 3.57 ಲಕ್ಷಕ್ಕೆ ಏರಿಕೆಯಾಗಲಿದೆ ಎಂಬ ಅಂಶ ವರದಿಯಲ್ಲಿದೆ. ಕಂಪನಿಯು ಪ್ರಸ್ತುತ ವಾರ್ಷಿಕ 1.28 ಲಕ್ಷ ವಾಹನಗಳ ಮಾರಾಟ ಗುರಿ ಹೊಂದಿದೆ.

ಕಿಯಾ ಮೋಟರ್ಸ್‌ 2019ರ ಆಗಸ್ಟ್‌ನಲ್ಲಿ ತನ್ನ ಸಬ್‌ ಕಾಂಪ್ಯಾಕ್ಟ್‌ ಎಸ್‌ಯುವಿ ಸೆಲ್ಟೋಸ್‌ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಕಾಲೂರಿತ್ತು. ಈ ವರ್ಷದ ಫೆಬ್ರುವರಿಯಲ್ಲಿ ಐಷಾರಾಮಿ ಕಾರು ‘ಕಾರ್ನಿವಲ್‌’ನ್ನು ಪರಿಚಯಿಸಿತ್ತು. ಇವೆರಡು ಮಾದರಿಗಳಿಂದಲೇ ಕಂಪನಿಯು 11 ತಿಂಗಳ ಅವಧಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಕಾರುಗಳನ್ನು ಮಾರಾಟ ಮಾಡಿದೆ.

ಇದೀಗ ತನ್ನ ಹೊಸ ಸ್ಮಾರ್ಟ್‌ ಅರ್ಬನ್‌ ಕಾಂಪ್ಯಾಕ್ಟ್‌ ಎಸ್‌ಯುವಿ ಸೊನೆಟ್‌ ಅನ್ನು ಬಿಡುಗಡೆ ಮಾಡಿದೆ. ಸೆಲ್ಟೋಸ್ ಮತ್ತು ಕಾರ್ನಿವಲ್‌ ನಂತರದ ಮೂರನೇ ವಾಹನ ಇದಾಗಿದೆ. ಕಂಪನಿಯು ಭಾರತದ ಕಾರು ಮಾರುಕಟ್ಟೆಯ ನಾಡಿಮಿಡಿತವನ್ನು ಚೆನ್ನಾಗಿ ಅರಿತುಕೊಂಡು, ಅದಕ್ಕೆ ತಕ್ಕಂತೆ ಒಂದೊಂದೇ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.

ಗುಣಮಟ್ಟ, ತಂತ್ರಜ್ಞಾನ, ಸುರಕ್ಷತೆ ಮತ್ತು ವಿನ್ಯಾಸದ ವಿಷಯದಲ್ಲಿ ಹಲವಾರು ಹೊಸತನಗಳನ್ನು ಹೊಂದಿರುವ ಸೊನೆಟ್ ಕೂಡಾ ಮಾರುಕಟ್ಟೆಗೆ ಇಳಿದಿರುವುದರಿಂದ ಕಂಪನಿಗೆ ಮುಂದಿನ ಕೆಲ ವರ್ಷಗಳವರೆಗೆ ವಾರ್ಷಿಕ 1 ರಿಂದ 1.40 ಲಕ್ಷ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿದೆ ಎಂದು ವರದಿ ಅಂದಾಜು ಮಾಡಿದೆ.

ಮುಂದಿನ ವರ್ಷದಲ್ಲಿ ಎಂಪಿವಿ ಮತ್ತು 2024 ರಲ್ಲಿ ಎರಡು ಸಬ್ ಕಾಂಪ್ಯಾಕ್ಟ್‌ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಯೋಜನೆಯನ್ನು ಕಿಯಾ ಹಾಕಿಕೊಂಡಿದೆ. ಆದರೆ ಫೆಬ್ರುವರಿ ತಿಂಗಳಲ್ಲಿ ಮಾರುಕಟ್ಟೆಗೆ ಬಿಟ್ಟಿರುವ ‘ಕಾರ್ನಿವಲ್‌’ನಿಂದ ಹೆಚ್ಚಿನ ಯಶಸ್ಸು ಸಾಧ್ಯವಿಲ್ಲ ಎಂದು ವರದಿ ತಿಳಿಸಿದೆ. ವಾರ್ಷಿಕ 4 ರಿಂದ 6 ಸಾವಿರ ಕಾರುಗಳ ಮಾರಾಟ ಮಾತ್ರ ಸಾಧ್ಯ ಎಂಬ ಅಂಶ ವರದಿಯಲ್ಲಿದೆ.

ಕಂಪನಿಯು 2020ರ ಆಗಸ್ಟ್‌ನಲ್ಲಿ ಒಟ್ಟು 10,845 ಕಾರುಗಳನ್ನು ಮಾರಾಟ ಮಾಡಿದೆ. ಇದರಲ್ಲಿ 10,655 ಸೆಲ್ಟೋಸ್‌ ಆಗಿದ್ದರೆ, ಕಾರ್ನಿವಲ್‌ ಮಾರಾಟವಾಗಿದ್ದು 190 ಮಾತ್ರ. ಈ ತಿಂಗಳಿನಿಂದ ಸೊನೆಟ್ ಕಾರಿನ ಬುಕಿಂಗ್ ಆರಂಭವಾಗಿದೆ.

‘ಸೊನೆಟ್‌’ನಿಂದ ಪ್ರಬಲ ಸ್ಪರ್ಧೆ

ಸೆಲ್ಟೋಸ್‌ ಕಾರು ಹುಂಡೈನ ಕ್ರೀಟಾಗೆ ಪ್ರಬಲ ಸ್ಪರ್ಧೆಯೊಡುತ್ತಿದ್ದರೆ, ಸೊನೆಟ್ ಕಾರು ದೇಶಿ ಮಾರುಕಟ್ಟೆಯಲ್ಲಿ ಹುಂಡೈನ ವೆನ್ಯೂ, ಮಾರುತಿಯ ವಿಟಾರಾ ಬ್ರೆಜಾ, ಟಾಟಾ ಕಂಪನಿಯ ನೆಕ್ಸನ್‌, ಮಹೀಂದ್ರಾದ ಎಕ್ಸ್‌ಯುವಿ 3ಒಒ ಮತ್ತು ಫೋರ್ಡ್‌ ಇಕೋಸ್ಪೋರ್ಟ್‌ಗೆ ಸ್ಪರ್ಧೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

2019ರ ಆಗಸ್ಟ್‌ ಮತ್ತು 2020ರ ಆಗಸ್ಟ್‌ಗೆ ಹೋಲಿಸಿದರೆ ಕಿಯಾ ಕಾರುಗಳ ಮಾರಾಟದಲ್ಲಿ ಶೇ 74 ರಷ್ಟು ಏರಿಕೆಯಾಗಿದೆ. ಕಳೆದ ಆಗಸ್ಟ್‌ನಲ್ಲಿ 6,236 ಕಾರುಗಳು ಮಾರಾಟವಾಗಿದ್ದರೆ, ಈ ಆಗಸ್ಟ್‌ನಲ್ಲಿ 10,845 ಮಾರಾಟ ಆಗಿವೆ.

ತನ್ನ ಎರಡೇ ಮಾದರಿಗಳಿಂದ ಭಾರತದ ಪ್ಯಾಸೆಂಜರ್ ಕಾರು ಮಾರುಕಟ್ಟೆಯಲ್ಲಿ ಶೇ 6 ರಷ್ಟು ಪಾಲನ್ನು ತನ್ನದಾಗಿಸಿಕೊಂಡಿರುವ ಕಿಯಾ ಇದೀಗ ಸೊನೆಟ್‌ ಮೂಲಕ ಮಾರುಕಟ್ಟೆಯ ಪಾಲನ್ನು ಇನ್ನಷ್ಟು ವಿಸ್ತರಿಸಲು ಪ್ರಯತ್ನಿಸಲಿದೆ.

10ನೇ ಸ್ಥಾನಕ್ಕೇರಲಿದೆ ಎಂಜಿ

ಎಂಜಿ ಮೋಟರ್ಸ್‌ ಕೂಡಾ ಮುಂದಿನ ಹತ್ತು ವರ್ಷಗಳಲ್ಲಿ ಭಾರತದ ಕಾರು ಮಾರುಕಟ್ಟೆಯ ಮೇಲೆ ತನ್ನ ಹಿಡಿತ ಬಿಗಿಗೊಳಿಸಲಿದೆ ಎಂದು ಎಲ್ಎಂಸಿ ಆಟೊಮೋಟಿವ್ ವರದಿ ತಿಳಿಸಿದೆ.

ಮುಂದಿನ ವರ್ಷಗಳಲ್ಲಿ ಭಾರತದ ಮಾರುಕಟ್ಟೆಗೆ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಕಂಪನಿ ಹಾಕಿಕೊಂಡಿದೆ. 2020 ರಲ್ಲಿ ಇದುವರೆಗೆ 16 ಸಾವಿರ ಕಾರುಗಳನ್ನು ಮಾರಾಟ ಮಾಡಿರುವ ಕಂಪನಿ, 2030ರ ವೇಳೆಗೆ ವಾರ್ಷಿಕ 72 ಸಾವಿರ ಕಾರುಗಳನ್ನು ಮಾರಾಟ ಮಾಡುವ ಸಾಮರ್ಥ್ಯ ಪಡೆಯಲಿದೆ ಎಂಬ ಅಂಶವೂ ವರದಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.