ADVERTISEMENT

ಅಗ್ನಿ ಅವಘಢ ಹಿನ್ನೆಲೆ: 1,441 ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಹಿಂಪಡೆದ ಓಲಾ 

ಪಿಟಿಐ
Published 24 ಏಪ್ರಿಲ್ 2022, 8:51 IST
Last Updated 24 ಏಪ್ರಿಲ್ 2022, 8:51 IST
ಓಲಾ ಸ್ಕೂಟರ್‌ಗಳು
ಓಲಾ ಸ್ಕೂಟರ್‌ಗಳು    

ನವದೆಹಲಿ: ಓಲಾದ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆ ದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಕಂಪನಿಯು ತನ್ನ 1,441 ವಾಹನಗಳನ್ನು ಭಾನುವಾರ ಹಿಂಪಡೆದಿದೆ.

‘ಮಾರ್ಚ್ 26 ರಂದು ಪುಣೆಯಲ್ಲಿ ಸಂಭವಿಸಿದ ಅಗ್ನಿ ಅವಘಡದ ತನಿಖೆ ನಡೆಯುತ್ತಿದೆ. ಪ್ರಾಥಮಿಕ ತನಿಖೆ ಪ್ರಕಾರ ಇದೊಂದು ಪ್ರತ್ಯೇಕ ಸಮಸ್ಯೆ’ ಎಂದಷ್ಟೇ ಓಲಾ ಎಲೆಕ್ಟ್ರಿಕ್‌ ಹೇಳಿದೆ.

ಆದರೂ, ‘ಮುನ್ನೆಚ್ಚರಿಕಾ ಕ್ರಮವಾಗಿ ನಾವು ನಿರ್ದಿಷ್ಟ ಬ್ಯಾಚ್‌ನ ವಾಹನಗಳನ್ನು ಪರಿಶೀಲಿಸುತ್ತೇವೆ. ಆದ್ದರಿಂದ 1,441 ವಾಹನಗಳನ್ನು ಸ್ವಯಂಪ್ರೇರಿತವಾಗಿ ಹಿಂಪಡೆಯುತ್ತಿದ್ದೇವೆ’ ಎಂದು ಅದು ಹೇಳಿದೆ.

‘ಹಿಂಪಡೆದ ಸ್ಕೂಟರ್‌ಗಳನ್ನು ಎಂಜಿನಿಯರ್‌ಗಳು ಪರಿಶೀಲಿಸುತ್ತಾರೆ. ಬ್ಯಾಟರಿ ವ್ಯವಸ್ಥೆಗಳು, ಥರ್ಮಲ್ ಸಿಸ್ಟಮ್‌ಗಳು ಮತ್ತು ಸುರಕ್ಷತಾ ವ್ಯವಸ್ಥೆಗಳಲ್ಲಿನ ಸಮಸ್ಯೆಯನ್ನು ಪತ್ತೆ ಮಾಡಲಿದ್ದಾರೆ’ ಎಂದು ಸಂಸ್ಥೆ ತಿಳಿಸಿದೆ.

‘ಬ್ಯಾಟರಿ ವ್ಯವಸ್ಥೆಗಳು ಯುರೋಪಿನ ‘ಇಸಿಇ–136’ ಮಾನದಂಡಗಳಿಗೆ ಅನುಗುಣವಾಗಿವೆ. ಜತೆಗೆ, ಭಾರತದ ಇತ್ತೀಚಿನ ಪ್ರಸ್ತಾವಿತ ‘ಎಐಎಸ್–156’ಗೆ ಅನುಗುಣವಾಗಿ ಪರೀಕ್ಷಿಸಲ್ಪಟ್ಟಿದೆ’ ಎಂದು ಓಲಾ ಹೇಳಿದೆ.

ಇತ್ತೀಚೆಗೆ, ದೇಶದ ವಿವಿಧ ಭಾಗಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆಗಳು ಸಂಭವಿಸಿದ್ದು, ವಾಹನಗಳ ಸುರಕ್ಷತೆ ಬಗ್ಗೆ ಜನರಲ್ಲಿ ಆತಂಕ ಮನೆ ಮಾಡಿದೆ.

ಅಗ್ನಿ ಅವಘಡಗಳನ್ನು ಪರಿಶೀಲಿಸಲು ಸರ್ಕಾರ ಕೂಡ ಸಮಿತಿಯನ್ನು ರಚಿಸಿದೆ. ಕಂಪನಿಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ದಂಡ ವಿಧಿಸುವುದಾಗಿಯೂ ಸರ್ಕಾರ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.