ADVERTISEMENT

ವಾಹನದ ಮೌಲ್ಯ ರಕ್ಷಣೆಗೆ ಆ್ಯಡ್‌ ಆನ್‌ ಅಗತ್ಯ

ತರುಣ್ ಮೆಹ್ತಾ
Published 21 ಆಗಸ್ಟ್ 2019, 19:31 IST
Last Updated 21 ಆಗಸ್ಟ್ 2019, 19:31 IST
   

ಹೊಸ ಕಾರು ಖರೀದಿಯು ವೈಯಕ್ತಿಕ ಜೀವನದಲ್ಲಿ ಬಹಳ ಮುಖ್ಯವಾದ ಹೂಡಿಕೆ ನಿರ್ಧಾರವಾಗಿರುತ್ತದೆ. ಹೀಗಾಗಿ ಕಾಂಪ್ರಹೆನ್ಸಿವ್‌ ಮೋಟಾರ್‌ ಇನ್ಶುರೆನ್ಸ್‌ ಪಾಲಿಸಿ (ಸಮಗ್ರ ವಾಹನ ವಿಮೆ ಯೋಜನೆ) ಮತ್ತು ಅಗತ್ಯವಾದ ಆ್ಯಡ್‌ಆನ್‌ಗಳ ಮೂಲಕ ಕಾರಿನ ರಕ್ಷಣೆ ಮಾಡಿಕೊಳ್ಳುವುದೂ ಅಷ್ಟೇ ಮುಖ್ಯ.

ಸಾಮಾನ್ಯ ಕಾರು ವಿಮೆ ಯೋಜನೆಯಿಂದ ಸಂಭಾವ್ಯ ಆಪತ್ತುಗಳಿಂದ ರಕ್ಷಣೆ ಸಿಗುತ್ತದೆ. ಅದಕ್ಕೆ ಆ್ಯಡ್‌ ಆನ್‌ಗಳನ್ನು ಸೇರಿಸುವುದರಿಂದ ಸಮಗ್ರ ರಕ್ಷಣೆ ಸಾಧ್ಯವಾಗಲಿದೆ. ಈ ಕಾರಣಕ್ಕಾಗಿ ಸೂಕ್ತವಾದ ಆ್ಯಡ್‌ಆನ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ.

ಸಮಗ್ರ ವಾಹನ ವಿಮೆ ಯೋಜನೆಯನ್ನು ಒಂದು ಉದಾಹರಣೆಯ ಮೂಲಕ ಅರ್ಥ ಮಾಡಿಕೊಳ್ಳೋಣ. ಒಬ್ಬ ವ್ಯಕ್ತಿ ₹ 30 ಲಕ್ಷ ಮೌಲ್ಯದ ಕಾರು ಖರೀದಿಸಿದ ಎಂದುಕೊಳ್ಳೋಣ. ವಿಮೆಯ ಘೋಷಿತ ಮೌಲ್ಯ 2017ರಲ್ಲಿ ₹ 26 ಲಕ್ಷ. ಕೆಲ ತಿಂಗಳ ಹಿಂದೆ ಕಾರು ಕಳ್ಳತನವಾಗಿದ್ದು, ನಿಯಮದ ಪ್ರಕಾರ ಎಫ್‌ಐಆರ್‌ ದಾಖಲಿಸಲಾಗಿದೆ. ಆದರೆ ಮರಳಿ ಪಡೆಯುವ ಸಾಧ್ಯತೆ ಕಡಿಮೆ. ಆಗ ನೀವು ಮಾಡಿಸಿರುವ ವಿಮೆಯು ಕಾರಿನ ನಷ್ಟವನ್ನು ಭರಿಸುವುದೇ ಎನ್ನುವ ಆತಂಕ ಕಾಡುತ್ತದೆ.

ADVERTISEMENT

ನಷ್ಟ ಭರಿಸಬಲ್ಲದು ಎನ್ನುವುದಾದರೆ ಎಷ್ಟು ಮೊತ್ತ ಸಿಗಲಿದೆ ಎನ್ನುವ ಪ್ರಶ್ನೆ ಮೂಡುತ್ತದೆ. ವಿಮೆ ಕಂಪನಿಯನ್ನು ಸಂಪರ್ಕಿಸಿದರೆ, ಕಳ್ಳತನ ಮತ್ತು ಕಾಣೆಯಾಗಿದ್ದರೆ ವಿಮೆ ಸಿಗುತ್ತದೆ ಎಂದು ಹೇಳುತ್ತಾರೆ. ಆದರೆ, ಕಾರು ನಿಜವಾಗಿಯೂ ಕಳ್ಳತನವಾಗಿದೆಯೇ ಅಥವಾ ಮಾಲೀಕನ ನಿರ್ಲಕ್ಷ್ಯವೇನಾದರೂ ಇದೆಯೇ ಎಂದು ತಿಳಿದುಕೊಳ್ಳಲು ವಿಮಾ ಕಂಪನಿಯವರು ಕಾರಿನ ಎರಡೂ ಕೀಯನ್ನು ನೀಡುವಂತೆ ಕೇಳುತ್ತಾರೆ.

ವಿಮೆ ಪರಿಹಾರ ನೀಡಲು ಕಂಪನಿಯು ‘ಐಡಿವಿ’ಯನ್ನು ಪರಿಗಣಿಸುತ್ತದೆ. ಇಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಂಶ ಏನೆಂದರೆ, ವಾಹನದ ಸವಕಳಿ ಆಧರಿಸಿ ಪ್ರತಿ ವರ್ಷವೂ ಐಡಿವಿಯನ್ನು ಪರಿಷ್ಕರಿಸುತ್ತದೆ. ಕಾರು ಎರಡು ವರ್ಷ ಹಳೆಯದಾಗಿದ್ದರಿಂದ ಸವಕಳಿ ಪ್ರಮಾಣ ಶೇ 30ರಷ್ಟಾಗುತ್ತದೆ. ಇದರಿಂದ ಎರಡು ವರ್ಷಗಳ ಬಳಿಕ ₹ 18 ಲಕ್ಷದಿಂದ ₹ 18.5 ಲಕ್ಷದೊಳಗೆ ಐಡಿವಿ ಸಿಗಲಿದೆ. ಒಂದೊಮ್ಮೆ ರಿಟರ್ನ್‌ ಟು ಇನ್‌ವಾಯ್ಸ್‌ (ಆರ್‌ಟಿಐ) ಆ್ಯಡ್‌ ಆನ್‌ ಮಾಡಿಸಿದ್ದರೆ, ಐಡಿವಿ ಬದಲಾಗಿ ಕಾರಿನ ಖರೀದಿ ಬೆಲೆಯ ಮೇಲೆ ನಷ್ಟ ಪರಿಹಾರ ಸಿಗುತ್ತದೆ.

ಏನಿದು ಆರ್‌ಟಿಐ?

ಇದು ಅತ್ಯಂತ ಜನಪ್ರಿಯ ಆ್ಯಡ್‌ ಆನ್‌ ಆಗಿದೆ. ಐಡಿವಿ ಮತ್ತು ಕಾರಿನ ಇನ್‌ವಾಯ್ಸ್‌ ಮೌಲ್ಯದ ಮಧ್ಯೆ ಇರುವ ಅಂತರವನ್ನು ಇದು ಭರಿಸುತ್ತದೆ. ಇದನ್ನು ಮಾಡಿಸಿದರೆ, ಕಾರಿನ ಆನ್‌ರೋಡ್‌ ಬೆಲೆಯು ಪರಿಹಾರ ರೂಪದಲ್ಲಿ ಸಿಗುತ್ತದೆ. ಸಾಮಾನ್ಯ ಸಮಗ್ರ ವಿಮೆ ಯೋಜನೆಗಿಂತಲೂ ಈ ಆ್ಯಡ್‌ ಆನ್‌ ವೆಚ್ಚ ಶೇ 10ರಷ್ಟು ಹೆಚ್ಚಿಗೆ ಇರುತ್ತದೆ. ಆದರೆ, ಅದೇ ಮಾದರಿಯು ಕಡಿಮೆ ಬೆಲೆಗೆ ಲಭ್ಯವಿದ್ದರೂ ಹಿಂದಿನ ಬೆಲೆಯನ್ನೇ ಪರಿಗಣಿಸಲಾಗುತ್ತದೆ.

ಯಾವಾಗ ಅನ್ವಯಿಸುತ್ತದೆ?

ಸಣ್ಣ ಪ್ರಮಾಣದ ರಿಪೇರಿಗೂ ಪರಿಹಾರ ಸಿಗಲಿದೆ ಎನ್ನುವ ತಪ್ಪು ಭಾವನೆ ಗ್ರಾಹಕರಲ್ಲಿ ಇರುತ್ತದೆ. ಆದರೆ, ಕಾರು ಕಳುವಾದರೆ ಅಥವಾ ರಿಪೇರಿ ಮಾಡಲು ಸಾಧ್ಯವಾಗದಷ್ಟು ಹಾಳಾದರೆ ಮಾತ್ರವೇ ರಿಟರ್ನ್‌ ಆಫ್‌ ಇನ್‌ವಾಯ್ಸ್‌ ಪ್ರಯೋಜನಕ್ಕೆ ಬರುತ್ತದೆ. ಕಾರು ಖರೀದಿಸಿದ ಮೊದಲ ದಿನದಿಂದ ಆರು ತಿಂಗಳವರೆಗೆ ಶೇ 5ರಷ್ಟು ಡಿಪ್ರಿಸಿಯೇಷನ್‌ ಪರಿಗಣಿಸಲಾಗುತ್ತದೆ. ಪ್ರತಿ ವರ್ಷಕ್ಕೆ ಶೇ 10ರಷ್ಟು. ಕಾರು ಖರೀದಿಸಿದ ಮೂರು ವರ್ಷಗಳವರೆಗೆ ಮಾತ್ರವೇ ಆರ್‌ಟಿಐ ಆ್ಯಡ್‌ಆನ್‌ ಅನ್ವಯವಾಗುತ್ತದೆ.

(ಲೇಖಕ: ಪಾಲಿಸಿಬಜಾರ್‌ ಡಾಟ್‌ಕಾಂನಮುಖ್ಯ ವಹಿವಾಟು ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.