ಭಾರತದ ರಸ್ತೆಗಿಳಿಯಲು Tesla ಕಾರುಗಳು ರೆಡಿ: ಶೋರೂಂಗಳಿಗೆ ನೇಮಕಾತಿ ಆರಂಭ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಇಲಾನ್ ಮಸ್ಕ್ ಅವರು ಇತ್ತೀಚೆಗೆ ಅಮೆರಿಕದಲ್ಲಿ ಮಾತುಕತೆ ನಡೆಸಿದ ಬೆನ್ನಲ್ಲೇ ವಿದ್ಯುತ್‌ಚಾಲಿತ ಕಾರು ತಯಾರಿಕಾ ಕಂಪನಿ ಟೆಸ್ಲಾ, ದೇಶದಲ್ಲಿ ವ್ಯವಹಾರ ಕಾರ್ಯಾಚರಣೆಯ ವಿಶ್ಲೇಷಕರು ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ತನ್ನ ವೆಬ್‌ಸೈಟ್‌ನಲ್ಲಿ ಅರ್ಜಿ ಆಹ್ವಾನಿಸಿದೆ.
ಹಾಗಾಗಿ, ಮಸ್ಕ್ ಒಡೆತನದ ಈ ಕಂಪನಿಯು ಶೀಘ್ರವೇ ಭಾರತದ ಇ.ವಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಮುಂಬೈ ಉಪನಗರದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಸೇವಾ ಸಲಹೆಗಾರ, ಬಿಡಿಭಾಗಗಳ ಸಲಹೆಗಾರ, ಟೆಕ್ನಿಷಿಯನ್, ಮ್ಯಾನೇಜರ್, ಸ್ಟೋರ್ ಮ್ಯಾನೇಜರ್, ಮಾರಾಟ ವಿಭಾಗದ ಮ್ಯಾನೇಜರ್, ವಾಹನ ವಿತರಣಾ ತಜ್ಞರು ಸೇರಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಪ್ರಕಟಿಸಿದೆ.
ಭಾರತದಲ್ಲಿ ಟೆಸ್ಲಾದ ಕಾರ್ಯಾಚರಣೆ ಆರಂಭಕ್ಕೆ ಸಂಬಂಧಿಸಿದಂತೆ ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆಯೇ ಎಂಬ ಬಗ್ಗೆ ಪಿಟಿಐ ಕಳುಹಿಸಿದ ಇ–ಮೇಲ್‌ಗೆ ಕಂಪನಿಯು ಉತ್ತರ ನೀಡಿಲ್ಲ.
ಕಳೆದ ವರ್ಷದ ಏಪ್ರಿಲ್‌ನಲ್ಲಿಯೇ ಮಸ್ಕ್ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಟೆಸ್ಲಾ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರ ಭಾರತದ ಭೇಟಿ ರದ್ದಾಗಿತ್ತು.
ಕೇಂದ್ರ ಸರ್ಕಾರವು ಕಳೆದ ವರ್ಷ ಹೊಸ ಎಲೆಕ್ಟ್ರಿಕ್ ವಾಹನ ನೀತಿಯನ್ನು ಪ್ರಕಟಿಸಿದೆ. ಇದರಡಿ ಕನಿಷ್ಠ 500 ಮಿಲಿಯನ್ ಅಮೆರಿಕನ್ ಡಾಲರ್ (₹4,350 ಕೋಟಿ) ಹೂಡಿಕೆಯೊಂದಿಗೆ ದೇಶದಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಕಂಪನಿಗಳಿಗೆ ಆಮದು ಸುಂಕದಲ್ಲಿ ರಿಯಾಯಿತಿ ಘೋಷಿಸಿದೆ. ಟೆಸ್ಲಾ ಸೇರಿದಂತೆ ಜಾಗತಿಕ ಮಟ್ಟದ ಇ–ವಾಹನ ತಯಾರಿಕಾ ಕಂಪನಿಗಳನ್ನು ಆಕರ್ಷಿಸಲು ಸರ್ಕಾರ ಈ ನೀತಿ ರೂಪಿಸಿದೆ ಎಂದು ಹೇಳಲಾಗಿದೆ.
ಇ.ವಿ ನೀತಿಗೆ ಸಂಬಂಧಿಸಿದಂತೆ ನಡೆದ ವಿದ್ಯುತ್‌ಚಾಲಿತ ವಾಹನ ತಯಾರಿಕಾ ಕಂಪನಿಯ ಪ್ರತಿನಿಧಿಗಳ ಸಭೆಯಲ್ಲಿ ಟೆಸ್ಲಾದ ಸಲಹೆಗಾರ ಕೂಡ ಪಾಲ್ಗೊಂಡಿದ್ದರು. ವಿಯೆಟ್ನಾಂನ ವಿನ್‌ಫಾಸ್ಟ್ ಸೇರಿದಂತೆ ಮಾರುತಿ ಸುಜುಕಿ, ಹುಂಡೈ, ಟಾಟಾ, ಮಹೀಂದ್ರ, ಕಿಯಾ, ಸ್ಕೋಡಾ ಆಟೊ ವೋಕ್ಸ್‌ವ್ಯಾಗನ್, ರೆನೊ, ಮರ್ಸಿಡೀಸ್ ಬೆಂಜ್, ಬಿಎಂಡಬ್ಲ್ಯು, ಔಡಿ ಕಂಪನಿಗಳು ಭಾಗವಹಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.