ADVERTISEMENT

ಮತ್ತೆ ಸದ್ದು ಮಾಡಲಿದೆ ಯಜಿಡಿ ರೋಡ್‌ಕಿಂಗ್‌

ಇ.ಎಸ್.ಸುಧೀಂದ್ರ ಪ್ರಸಾದ್
Published 28 ಆಗಸ್ಟ್ 2019, 13:26 IST
Last Updated 28 ಆಗಸ್ಟ್ 2019, 13:26 IST
ಚಿತ್ರ: ಯಜಡಿ.ಕಾಂ (yezdi.com)
ಚಿತ್ರ: ಯಜಡಿ.ಕಾಂ (yezdi.com)   

ಕಾಲಚಕ್ರ ಉರುಳಿದಂತೆ ಮರೆಯಾಗಿದ್ದ ಬೈಕ್‌ಗಳು ಮತ್ತೆ ಮುನ್ನೆಲೆಗೆ ಬರುತ್ತಿವೆ. ಕಳೆದ ವರ್ಷ ಜಾವಾ ಮೋಟಾರ್‌ಸೈಕಲ್‌ ಹೊಸ ಅವತಾರದಲ್ಲಿ ರಸ್ತೆಗಿಳಿಯಿತು. ಈಗ ತನ್ನ ಶಬ್ದ ಹಾಗೂ ಸಾಮರ್ಥ್ಯದ ಮೂಲಕವೇ ಗಮನ ಸೆಳೆದಿದ್ದ ಯಜಿಡಿ ಹೊಸ ಅವತಾರದಲ್ಲಿ ರಸ್ತೆಗಿಳಿಯುವ ಸಿದ್ಧತೆ ನಡೆಸಿರುವ ಕುರಿತು ಚರ್ಚೆಗಳು ನಡೆಯುತ್ತಿವೆ.

ಇದಕ್ಕೆ ಪುಷ್ಟಿ ನೀಡುವಂತೆ ಯಜಿಡಿ ಹೆಸರಿನ ಟ್ವಿಟರ್ ಖಾತೆ (@yezdiofficial) ಹಾಗೂ ಅಂತರ್ಜಾಲ ಪುಟ (yezdi.com) ಆರಂಭವಾಗಿದೆ. ಇನ್‌ಸ್ಟಾಗ್ರಾಮ್‌ (YezdiOfficial)ನಲ್ಲೂ ಯಜಡಿ ಸದ್ದು ಮಾಡುತ್ತಿದೆ.

ಜಾವಾ ಹಾಗೂ ಯಜಿಡಿ ಎರಡರ ಮಾಲೀಕತ್ವವನ್ನು ಪಡೆದಿರುವ ಮಹೀಂದ್ರ ಮತ್ತು ಮಹೀಂದ್ರ ಕಂಪನಿ ಈಗ ಇಂಥ ಮತ್ತೊಂದು ಸಾಹಸಕ್ಕೆ ಕೈಹಾಕಿದೆ ಎಂಬ ಸುದ್ದಿ ಕೇಳಿಬಂದಿದೆ. 2020ಕ್ಕೆ ಆಟೊ ಎಕ್ಸ್‌ಪೋಗೆ ಎಲ್ಲಾ ಕಂಪನಿಗಳು ಸಿದ್ಧತೆ ನಡೆಸಿರುವ ಬೆನ್ನಲ್ಲೇ, ಯಜಿಡಿ ಅಲ್ಲಿ ಅನಾವರಣಗೊಳ್ಳಲಿದೆಯೇ ಎಂಬ ಕುತೂಹಲ ಮೂಡಿದೆ.

ADVERTISEMENT

ಒಂದು ಕಾಲದಲ್ಲಿ ಬುಲೆಟ್, ಜಾವಾ ಹಾಗೂ ಯಜಿಡಿ ಬಾರೀ ಸದ್ದು ಮಾಡಿದ ಬೈಕ್‌ಗಳು. ಯಜಿಡಿಯಲ್ಲಿ ರೋಡ್‌ ಕಿಂಗ್‌, ಆಯಿಲ್ ಕಿಂಗ್‌, ಕ್ಲಾಸಿಕ್‌, ಸಿಎಲ್‌–2, ಮೊನಾರ್ಕ್‌, ಡಿಲಕ್ಸ್‌, 350 ಮತ್ತು 175 ಭಾರೀ ಜನಪ್ರಿಯ ಮಾಡೆಲ್‌ಗಳಾಗಿದ್ದವು. ಮೂಲಗಳ ಪ್ರಕಾರ ಅತ್ಯಂತ ಜನಪ್ರಿಯವಾಗಿದ್ದ ಯಜಿಡಿ ಕ್ಲಾಸಿಕ್ ಮತ್ತು ಯಜಿಡಿ ರೋಡ್‌ಕಿಂಗ್‌ ಪರಿಚಯಿಸುವ ಸಾಧ್ಯತೆ ಇದೆ.

ಕಳೆದ ವರ್ಷ ಮಹೀಂದ್ರಾದ ಕ್ಲಾಸಿಕ್ ಲೆಜೆಂಡ್‌ ಕಂಪನಿಯಿಂದ ಜಾವಾ 300, ಜಾವಾ 42 ಹಾಗೂ ಜಾವಾ ಪೆರಾಕ್‌ ಅನ್ನು ರೋಡಿಗಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

1978ರಲ್ಲಿ ಮೈಸೂರಿನಲ್ಲಿರುವ ಐಡಿಯಲ್ ಜಾವಾ ಕಂಪನಿಯಲ್ಲಿ ತಯಾರಾಗುತ್ತಿದ್ದ ಯಜಿಡಿ ರೋಡ್‌ಕಿಂಗ್‌ 1996ರವರೆಗೂ ನಿರ್ಮಾಣಗೊಂಡು ನಂತರ ಸ್ಥಗಿತಗೊಂಡಿತು.

ರೋಡ್‌ಕಿಂಗ್‌ನದ್ದು ಸಿಝಡ್‌ 250 ಮೊಟೊಕ್ರಾಸ್‌ನಿಂದ ಪ್ರೇರಣೆ ಪಡೆದ ವಿನ್ಯಾಸ. 1974ರಲ್ಲಿ ಜರೊಸಾಲವ್‌ ಫಾಲ್ಟಾ ಎಂಬ ಸವಾರ ಇದನ್ನು ವಿಶ್ವ ಮೊಟೊಕ್ರಾಸ್ ಚಾಂಪಿಯನ್‌ಶಿಪ್‌ನಲ್ಲಿ ಚಾಲನೆ ಮಾಡಿ ರನ್ನರ್‌ಅಪ್ ಸ್ಥಾನ ಪಡೆದಿದ್ದರು. ಈ ಬೈಕ್ ಭಾರತದಲ್ಲಿ ಯಜಿಡಿ ಹೆಸರಿನಲ್ಲಿ ಮಾರಾಟವಾಗುತ್ತಿತ್ತು.

ಯಜಿಡಿ ಜತೆಗಿನ ನೆನಪನ್ನು ಹಂಚಿಕೊಳ್ಳಲು ಯಜಿಡಿ ಅಂತರ್ಜಾಲ ಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇಂಥ 10 ಸಾವಿರ ಕಥೆಗಳನ್ನು ಸಂಗ್ರಹಿಸಲಾಗುವುದು ಎಂದೂ ಹೇಳಲಾಗಿದೆ.

ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯ ಬೈಕ್ ಆಗಿದ್ದ ಯಜಿಡಿ ಮತ್ತೆ ಸದ್ದು ಮಾಡುತ್ತಿರುವುದು ಕ್ಲಾಸಿಕ್‌ ಬೈಕ್‌ ಪ್ರಿಯರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ. ಆದರೆ ಅದು ಎಂದು ಸಾಕಾರಗೊಳ್ಳುವುದೋ ಎನ್ನುವುದಕ್ಕೆ ಕಾಯುವುದೊಂದೇ ಮಾರ್ಗವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.