ADVERTISEMENT

ನಟಿ ಯಮುನಾ ಶ್ರೀನಿಧಿ ಅವರ ಬ್ಯೂಟಿ ಸೀಕ್ರೆಟ್ ಏನು ಗೊತ್ತೆ?

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 23:30 IST
Last Updated 23 ಜನವರಿ 2026, 23:30 IST
<div class="paragraphs"><p>ಯಮುನಾ ಶ್ರೀನಿಧಿ</p></div>

ಯಮುನಾ ಶ್ರೀನಿಧಿ

   

ಕೂದಲಿಗೆ, ಚರ್ಮಕ್ಕೆ ಅಂಥ ವಿಶೇಷ ಆರೈಕೆಯನ್ನೇನೂ ಮಾಡುವುದಿಲ್ಲ. ಮೊದಲಿನಿಂದಲೂ ನನಗೆ ತಾಯಿ ಅಭ್ಯಾಸ ಮಾಡಿಸಿರುವುದು ಹೀಗೆ: ವಾರಕ್ಕೆ ಎರಡು ಬಾರಿ ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚುತ್ತೇನೆ. ಬೇಸಿಗೆಯಲ್ಲಿ ಹರಳೆಣ್ಣೆ ಹಾಕಿ ಕೂದಲನ್ನು ಮಸಾಜ್ ಮಾಡಿಕೊಳ್ಳುತ್ತೇನೆ. ಶ್ಯಾಂಪೂ ಬಳಸುವುದಿಲ್ಲ. ಸೀಗೆಪುಡಿಯನ್ನು ಹಚ್ಚಿಯೇ ತಲೆಸ್ನಾನ ಮಾಡುತ್ತೇನೆ. ಹುಟ್ಟಿದಾಗಿನಿಂದಲೂ ಸೀಗೆಪುಡಿಯನ್ನೇ ಬಳಸುತ್ತಿದ್ದೇನೆ. ಈವರೆಗೆ ಬ್ಯೂಟಿಪಾರ್ಲರ್‌ಗೆ ಕಾಲಿಟ್ಟಿಲ್ಲ. ಹುಬ್ಬಿಗೆ ನಾನೇ ಶೇಪ್ ಮಾಡಿಕೊಳ್ಳುತ್ತೇನೆ.

ಚರ್ಮ ಆರೋಗ್ಯದಿಂದ ಇರಲು ಚೆನ್ನಾಗಿ ನೀರು ಕುಡಿಯುತ್ತೇನೆ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಲಿಂಬೆರಸ ಬೆರೆಸಿದ ಜೇನಿನ ಮಿಶ್ರಣವಿರುವ ನೀರನ್ನು ಕುಡಿಯುತ್ತೇನೆ. ಇದು ರಕ್ತವನ್ನು ಶುದ್ಧಿ ಮಾಡುತ್ತದೆ. ಇದರ ಜತೆಗೆ ದಿನವಿಡೀ ಚೆನ್ನಾಗಿ ಡ್ರೈಫ್ರೂಟ್ಸ್ ತಿನ್ನುತ್ತೇನೆ. ರಾತ್ರಿಯೇ ಅದನ್ನು ನೆನೆಸಿಟ್ಟಿರುತ್ತೇನೆ. ಕೆಲವೊಮ್ಮೆ ಡ್ರೈಫ್ರೂಟ್ಸ್‌ನ ಮಿಲ್ಕ್‌ ಶೇಕ್ ಮಾಡಿಕೊಂಡು ಕುಡಿಯುತ್ತೇನೆ. ಡಯಟ್ ಅಂತ ಏನೂ ಮಾಡುವುದಿಲ್ಲ.  ಸಿಕ್ಕಾಪಟ್ಟೆ ಸಿಹಿ ಪದಾರ್ಥಗಳನ್ನು ತಿನ್ನುತ್ತೇನೆ. 

ADVERTISEMENT

ದಿನವಿಡೀ ಕ್ರಿಯಾಶೀಲಳಾಗಿರುತ್ತೇನೆ. ಅದೇ ನನ್ನ ಫಿಟ್‌ನೆಸ್‌ನ ಗುಟ್ಟು. ಮನೆ ಸುತ್ತ ಜಾಗ ಇದೆ. ಎಲ್ಲ ಕಡೆ ತರಹೇವಾರಿ ಗಿಡಗಳನ್ನು ಹಾಕಿದ್ದೇನೆ. ಆದರೆ, ಗಾರ್ಡನರ್‌ ಅನ್ನು ಇಟ್ಟುಕೊಂಡಿಲ್ಲ. ಗಿಡಗಳಿಗೆ ನೀರು ಹಾಕುವುದು, ಪಾತಿ ಮಾಡುವುದು ಎಲ್ಲವನ್ನೂ ಮಾಡುತ್ತೇನೆ.ಮನೆಗೆಲಸಕ್ಕೂ ಸಹಾಯಕರನ್ನು ಇಟ್ಟುಕೊಂಡಿಲ್ಲ. ಮನೆ ತುಸು ದೊಡ್ಡದಾಗಿಯೇ ಇದ್ದರೂ  ಗುಡಿಸುವುದು, ಒರೆಸುವುದು, ಸ್ವಚ್ಛ ಮಾಡುವುದು ಸೇರಿ ಎಲ್ಲಾ ಕೆಲಸವನ್ನು ನಾನೇ ಖುದ್ದು ಮಾಡುತ್ತೇನೆ. ನಮ್ಮ ಮನೆಯಲ್ಲಿ ಐದು ಬಾತ್‌ ರೂಂಗಳಿವೆ. ಎಲ್ಲವನ್ನೂ ನಾನೇ ಸ್ವಚ್ಛ ಮಾಡುತ್ತೇನೆ. 

ಒತ್ತಡದಿಂದ ತೂಕ ಹೆಚ್ಚುತ್ತದೆ. ಇರುವುದರಲ್ಲಿ ಖುಷಿಯಾಗಿದ್ದರೆ ಒತ್ತಡ ಇರದು. ಮನಸ್ಸು ಕುಗ್ಗಿದಾಗ ಶಾಸ್ತ್ರೀಯ ಸಂಗೀತವನ್ನು ಹೆಚ್ಚು ಕೇಳುತ್ತೇನೆ.  ಆಹಾರಪ್ರಿಯೆ.  ಊಟದಲ್ಲಿ ನಿಯಂತ್ರಣವಿಲ್ಲ.  ದೇಹಕ್ಕೆ ಬೇಕಾದಾಗ ತಿನ್ನುವ ಆಸೆ ಬರುತ್ತದೆ ಎಂದು ನಂಬಿದ್ದೇನೆ. ಹಾಗಾಗಿ, ಡಯಟ್‌ ಅಲ್ಲಿ ಆಸಕ್ತಿ ಇಲ್ಲ. ತಿನ್ನಬೇಕು ಅನ್ನಿಸಿದ್ದೆಲ್ಲವನ್ನೂ ತಿನ್ನುತ್ತೇನೆ. ಮಾಡುವ ಕೆಲಸಗಳಿಂದ ನನ್ನ ದೇಹ ಟೋನ್ಡ್‌ ಆಗಿ ಇದೆ. ಹುಟ್ಟಿದ್ದು ಬೆಳೆದಿದ್ದೆಲ್ಲ ಮೈಸೂರಿನಲ್ಲಿ. 17 ವರ್ಷ ಅಮೆರಿಕದಲ್ಲಿದ್ದೆ. ವಾಪಸ್‌ ಬಂದು ಹದಿನೈದು ವರ್ಷಗಳಾಯಿತು. ಭರತನಾಟ್ಯದಿಂದ ನನ್ನ ಫಿಟ್‌ನೆಸ್‌ಗೆ ಸಹಾಯವಾಗಿದೆ. ಜತೆಗೆ ಯೋಗ ಮಾಡುತ್ತೇನೆ.  ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವೇ ಸೌಂದರ್ಯ. ಕೌಶಲಗಳನ್ನು ಕಲಿತರೆ ಆತ್ಮವಿಶ್ವಾಸ ತನ್ನಿಂದತಾನೇ ಬರುತ್ತದೆ. ಸರಳವಾಗಿ ಇರುವುದು ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.