ADVERTISEMENT

ಫ್ಯಾಷನ್ | ತಾಳಿಕೆ–ಬಾಳಿಕೆಯ ಷಾಪುರಿ ಸೀರೆ, ಕಾಲಕಳೆದರೂ ಜಗಮಗಿಸುವ ಸೀರೆ

ಎಸ್.ರಶ್ಮಿ
Published 14 ಅಕ್ಟೋಬರ್ 2022, 21:00 IST
Last Updated 14 ಅಕ್ಟೋಬರ್ 2022, 21:00 IST
ಬೆಳಗಾವಿಯ ವಡಗಾವಿಯಲ್ಲಿರುವ ರಂಜನಾ ಸಿಲ್ಕ್ಸ್‌ ಮಳಿಗೆಯಲ್ಲಿನ ಷಾಪುರಿ ಸೀರೆಗಳು
ಬೆಳಗಾವಿಯ ವಡಗಾವಿಯಲ್ಲಿರುವ ರಂಜನಾ ಸಿಲ್ಕ್ಸ್‌ ಮಳಿಗೆಯಲ್ಲಿನ ಷಾಪುರಿ ಸೀರೆಗಳು   

ಹಿಂದೆಲ್ಲ ಒಂದು ಕಾಲವಿತ್ತು. ನಾಗರ ಪಂಚಮಿಗೆ ತವರು ಮನೆಯಿಂದ ಒಂದು ಸೀರೆ, ದೀಪಾವಳಿಗೆ ಗಂಡನ ಮನೆಯಿಂದ ಒಂದು ಸೀರೆ. ಈ ಎರಡೇ ಸೀರೆಗಳನ್ನು ಕೂಡಿಟ್ಟು ತಮ್ಮ ಸಂಗ್ರಹವನ್ನು ಹೆಂಗಳೆಯರು ಹೆಚ್ಚಿಸಿಕೊಳ್ಳುತ್ತಿದ್ದರು.

ಉತ್ತರ ಕರ್ನಾಟಕದಲ್ಲಿ ಹೀಗೆ ಹಬ್ಬದ ಸಂಭ್ರಮವೂ, ಜೇಬಿನ ನಿರ್ವಹಣೆಯೂ ಒಟ್ಟಿಗೆ ಮಾಡಬೇಕಾದ ಅನಿವಾರ್ಯ ಇದ್ದಾಗ, ಷಾಪುರಿ ಸೀರೆಗೆ ಎಲ್ಲ ಮುಗಿಬೀಳುತ್ತಿದ್ದರು. ನೂರು ವರ್ಷಗಳ ಇತಿಹಾಸ ಇರುವ ಷಾಪುರಿ ಸೀರೆಗೆ ಪಾಲಿಸ್ಟರ್‌ ದಾರವೇ ಮೂಲ ವಸ್ತು. ಜೊತೆಗೆ ಜಗಮಗಿಸುವ ಜರಿಯೂ ಇರುತ್ತದೆ. ಕೆಲವೊಮ್ಮೆ ನೂಲನ್ನೂ ಬಳಸುತ್ತಾರೆ.

ಪಾಲಿಸ್ಟರ್‌ ಆಗಿರುವುದರಿಂದ ಬಣ್ಣ ಹೋಗದು. ಮಗುವಿಗೆ ಲಾಲಿ ಹಾಡಲು ಜೋಳಿಗೆ ಕಟ್ಟಿದರೆ ಪಿಸಿಯುವುದೂ ಇಲ್ಲ. ಅದೆಷ್ಟೇ ತೂಕದ ಮಕ್ಕಳು ಜೋಕಾಲಿ ಆಡಬಹುದಾದಷ್ಟು ಗಟ್ಟಿತನ ಈ ಸೀರೆಯದ್ದು.

ADVERTISEMENT

ತವರು ಮನೆಯ ಸೀರೆಯುಟ್ಟರೆ ಬಣ್ಣ ಮಾಸದು, ಹರಿದು ಹೋಗದು. ಸವೆದು ಹೋದರೂ, ಕಣ್ಣೀರು ಸೆರಗಿನಂಚಿನಲ್ಲಿ ಹಿಂಗಿ ಹೋದರೂ, ಥಳಥಳ ಎನ್ನುವ ಸೀರೆ ಇದು ಎಂಬರ್ಥ ಬರುವ ಜನಪದದ ಸಾಲುಗಳು ಈ ಕಡೆಯಲ್ಲಿ ಜನಜನಿತವಾಗಿವೆ.

ಕಂಚಿಯ ಸೀರೆಗಳ ವಿನ್ಯಾಸವನ್ನೇ ತಮ್ಮ ಮಗ್ಗಗಳಿಗೆ ಹೊಂದಿಸಿಕೊಳ್ಳುತ್ತ, ಸಮಕಾಲೀನ ಟ್ರೆಂಡ್‌ ಜೊತೆಗೆ ಹೆಜ್ಜೆ ಹಾಕುತ್ತಿರುವ ಷಾಪುರಿ ಸೀರೆಗೆ ತನ್ನದೇ ಆದ ವಿನ್ಯಾಸ ಅಥವಾ ಸ್ವರೂಪ ಇಲ್ಲ. ಸಣ್ಣ ಗೋಪುರದ ಅಂಚಿನಿಂದ ಆರಂಭಿಸಿ, ಎಲ್ಲ ಬಗೆಯ ಅಂಚುಗಳೂ ಕಂಗೊಳಿಸುತ್ತವೆ.

ಒಡಲಿನ ತುಂಬ ಜರಿಯಿರುವುದರಿಂದ ವಿಜ್ರಂಭಣೆಯ ಸೀರೆ ಇದು ಎಂದೆನಿಸುತ್ತದೆ. ದಿನ ಉಡಲು ಅನುವಾಗುವ ಈ ಸೀರೆಗಳು ಎಲ್ಲ ವರ್ಗದವರೂ ಆಸೆ ಪಡುತ್ತಾರೆ. ಕೂಲಿ ಕೆಲಸ ಮಾಡಿದರೂ, ಹೊಲದಲ್ಲಿ ಗೇಯ್ಮೆ ಮಾಡಿದರೂ, ಮದುವೆಯಂಥ ಸಮಾರಂಭಗಳಿಗೆ ಹೋದರೂ, ಎಲ್ಲದಕ್ಕೂ ಸಲ್ಲುವ ಗುಣ ಇರುವ ಈ ಸೀರೆ, ಈ ಭಾಗದ ಜನಜೀವನದಲ್ಲಿ ಹಾಸು ಹೊಕ್ಕಿದೆ. ರಾಜ್ಯದ ಗಡಿಗೆ ಹೊಂದಿಕೊಂಡಿರುವ ಗುಳೇದಗುಡ್ಡದ ಖಣಗಳು ಮತ್ತು ಷಾಪುರಿ ಸೀರೆಗಳು, ಅಲ್ಲಿಯ ಶ್ರಮಿಕ ವರ್ಗದ ಹೆಮ್ಮೆಯಾಗಿ ತಮ್ಮ ಅಸ್ತಿತ್ವ ಕಂಡುಕೊಂಡಿವೆ.

ಸೀಮಂತಕ್ಕೆನೀಡುವ ಹಸಿರು ಸೀರೆಯಿಂದ ಆರಂಭವಾದರೆ ಒಂದೊಂದು ಸಮಾರಂಭಕ್ಕೆ ಒಂದೊಂದು ಬಣ್ಣಗಳಿವೆ. ಬೀಗರಿಗೆ ಬೇಕಾದ ಬಣ್ಣಗಳೇ ಬೇರೆ. ವಧುವಿಗೆ ನೀಡುವ ಪೀತಾಂಬರ, ಗುಲಾಬಿ ಬಣ್ಣಗಳೂ ಇವೆ. ಬೀಗರಿಗೆ ಎಂದೇ ‘ಮೋರ್‌ಪಂಖಿ’ ಎಂದು ಕರೆಯುವ ನವಿಲಿನ ಕಂಠದ ನೀಲಿ, ಹಸಿರು ಮಿಶ್ರಿತ ನೀಲಿ ಬಣ್ಣಗಳು ಕಣ್ಮನ ಸೆಳೆಯುತ್ತವೆ. ಇಲ್ಲಿಯ ಬಣ್ಣಗಳ ಹೆಸರೇ ನವನವೀನ. ಅನಾರಿ (ದಾಳಿಂಬೆ ಬಣ್ಣ), ಸಿಂಧೂರಿ (ಕೆಂಪು ಕುಂಕುಮ), ಆನಂದಿ (ನೀಲಗಗನ), ಮೋರ್‌ ಪಂಖಿ (ನವಿಲಿನ ಕಂಠದ ಅಡಿಯ ನೀಲಿ ಮತ್ತು ಹಸಿರು ಮಿಶ್ರಿತ), ದೂಧಿ (ಹಾಲುಬಿಳುಪು) ಹೀಗೆ ಹೆಸರಿನಲ್ಲಿಯೇ ಬಣ್ಣವನ್ನೂ ವಿವರಿಸುವ ವಿಶೇಷ ಈ ಸೀರೆಗಳದ್ದು.

ಇನ್ನು ಬದುಕಿನಲ್ಲಿ ಒಂದು ಮೈಸೂರು ಸಿಲ್ಕ್‌ ಸೀರೆ ಇರಬೇಕು ಎಂದು ಕನ್ನಡಿಗರು ಬಯಸುವಂತೆ, ಈ ಕಡೆಯವರು ಷಾಪುರಿ ಜೊತೆಗೆ ಪೈಠಣಿ ಸೀರೆಯೂ ಇರಲಿ ಎಂದು ಬಯಸುತ್ತಾರೆ. ಬಾಜಿರಾವ್‌ ಮಸ್ತಾನಿಯಲ್ಲಿ ಸಣ್ಣ ಭುಟ್ಟಾ ಇರುವ ಸೀರೆಗಳನ್ನು ಉಟ್ಟು, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡಕೋಣೆ ನಲಿಯುವ ದೃಶ್ಯ ಯಾರಿಗೂ ಮರೆಯಾಗದು. ಅಂಥ ಸಣ್ಣ ಭುಟ್ಟಾ ಇರುವ, ಚೌಕಡಿಯ ಜರಿ ಅಂಚಿರುವ, ಸೆರಗಿನಲ್ಲಿ ಮೀನಾಕರಿ ಕೆಲಸ ಇರುವ, ಗಾಢ ಸಾಂಪ್ರದಾಯಿಕ ಬಣ್ಣದ ಸೀರೆಗಳಿವು.

ಬಂಗಾರದಷ್ಟೇ ತುಟ್ಟಿಯೆನಿಸುವ ಸೀರೆಗಳು, ಐದಾರು ತಲೆಮಾರು ಕಳೆದರೂ ಬಣ್ಣ ಮಾಸುವುದಿಲ್ಲ. ಸವೆದು ಪಿಸಿಯುವುದೇ ಹೊರತು, ಹಾಳಾಗುವುದಿಲ್ಲ. ಅಂಥ ಪೈಠಣಿ ಸೀರೆಗಳನ್ನೂ ಷಾಪುರಿ ಸೀರೆಯೊಂದಿಗೇ ನೇಯಲಾಗುತ್ತದೆ. ಟಂಕಿಸುವ ಯಂತ್ರದಲ್ಲಿ ಒಂದು ರೂಪಾಯಿಗೂ, ಹತ್ತು ರೂಪಾಯಿಗೂ ಒಂದೇ ಶ್ರಮ. ಆದರೆ ಬೆಲೆ ಮತ್ತು ಮೌಲ್ಯ ಬೇರೆ ಬೇರೆ ಇದ್ದಂತೆ, ಇಲ್ಲಿ ಮಗ್ಗಗಳು ಬದಲಾದಾಗ ವರ್ಣವಿನ್ಯಾಸಗಳೂ ಬದಲಾಗುತ್ತವೆ. ಸೀರೆಯ ಮಾತುಗಳಿಗೆ ಕೊನೆ ಇರುವುದಿಲ್ಲ. ನೆನಪಿನ ಒಡಲು, ಕಾಲದ ಅಂಚು, ಎಲ್ಲವನ್ನೂ ಉಟ್ಟು, ತೊಟ್ಟು, ಸಂಭ್ರಮಿಸುವಾಗ, ಪ್ರತಿ ಸೀರೆಯ ಹಿಂದೆ ಹತ್ತು ಕತೆಗಳು, ಹಲವು ನೆನಪುಗಳು. ಅವನ್ನು ಉಡುವುದಷ್ಟೇ ಅಲ್ಲ, ಜೀವಿಸುವುದೇ ಒಂದು ಆನಂದ.

ಬೆಳಗಾವಿಯ ವಡಗಾವಿಯಲ್ಲಿರುವ ಮಗ್ಗಗಳಲ್ಲಿ ಸೀರೆ ಸಿದ್ಧಗೊಳ್ಳುವ ಮುನ್ನ ಕಚ್ಚಾ ಎಳೆಗಳ ಸಂಗ್ರಹ

ಷಾಪುರಿ ಸೀರೆ ಕುರಿತ ವಿಡಿಯೊ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.