ADVERTISEMENT

ಸೌಂದರ್ಯ: ಬ್ಯೂಟಿ ಸಿಕ್ರೇಟ್ ಹಂಚಿಕೊಂಡ ಚಿತ್ರನಟಿ ನಮ್ರತಾ ಗೌಡ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 23:30 IST
Last Updated 17 ಅಕ್ಟೋಬರ್ 2025, 23:30 IST
ನಮ್ರತಾ ಗೌಡ
ನಮ್ರತಾ ಗೌಡ   

ನನ್ನ ಚರ್ಮದಲ್ಲಿ ಏನೇನು ಆಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರತಿ ತಿಂಗಳೂ ಒಂದು ಬಾರಿ ಚರ್ಮವೈದ್ಯರನ್ನು ಭೇಟಿಯಾಗುತ್ತೇನೆ. ಸಕ್ಕರೆ ಮತ್ತು ಡೈರಿ ಉತ್ಪನ್ನಗಳಿಂದ ನನ್ನ ಚರ್ಮ ಹಾಳಾಗುತ್ತದೆ. ಹಾಗಾಗಿ, ಆದಷ್ಟೂ ಅವುಗಳಿಂದ ದೂರವಿರುತ್ತೇನೆ. ಶೂಟಿಂಗ್‌ ಸಮಯದಲ್ಲಿ ಎಳನೀರು, ತರಹೇವಾರಿ ಹಣ್ಣು ಮತ್ತು ಹಸಿರುಸೊಪ್ಪುಗಳು ನನ್ನ ಪಥ್ಯದಲ್ಲಿ ಇರುವಂತೆ ನೋಡಿಕೊಳ್ಳುತ್ತೇನೆ. ಇವು ಚರ್ಮವನ್ನು ಆರೋಗ್ಯವಾಗಿಡಲು ತುಂಬಾ ಸಹಾಯ ಮಾಡಿವೆ.

ಆಲೊವೆರಾ ಹಚ್ಚುತ್ತೇನೆ. ಇದೊಂದು ನನ್ನ ಚರ್ಮಕ್ಕೆ ಆಗಿಬರುತ್ತಿದೆ. ಇದು ಬಿಟ್ಟರೆ ಯಾವುದೇ ರೀತಿಯ ಮನೆಮದ್ದು ಉಪಯೋಗಿಸುವುದಿಲ್ಲ. ಮೊದಲು ಅರಸಿನ, ಟೊಮೆಟೊ, ಜೇನುತುಪ್ಪ ಅಂತ ಏನೇನೋ ಹಚ್ಚಿ, ಯಾವುದೂ ನನ್ನ ಚರ್ಮಕ್ಕೆ ಆಗಿಬರಲಿಲ್ಲ. ಇದರಿಂದ ಚರ್ಮ ಹಾಳಾಯಿತು. ಚರ್ಮವೈದ್ಯರು ಇಂಥ ಮನೆಮದ್ದುಗಳನ್ನು ಶಿಫಾರಸು ಮಾಡುವುದಿಲ್ಲ. ಹಾಗಾಗಿ, ಅವನ್ನೆಲ್ಲ ಹಚ್ಚುವುದನ್ನು ಬಿಟ್ಟಿದ್ದೇನೆ.

ರಾತ್ರಿ ಒಂದು ನೈಟ್‌ ಕ್ರೀಂ ಹಚ್ಚಿ ಮಲಗುತ್ತೇನೆ. ಬೆಳಿಗ್ಗೆ ಮಾಯಿಶ್ಚರೈಸರ್‌, ಸನ್‌ಸ್ಕ್ರೀನ್‌ ಹಚ್ಚಿದ ನಂತರ ಫೇಷಿಯಲ್‌ ಮಿಸ್ಟ್‌ ಎನ್ನುವ ಸ್ಪ್ರೇ ಹಾಕಿಕೊಳ್ಳುತ್ತೇನೆ. ಬಳಿಕ ಶೂಟಿಂಗ್‌ಗೆ ಪ್ರೈಮರ್‌ ಹಾಕಿ ಮೇಕಪ್‌ ಮಾಡುತ್ತೇನೆ. ರಾತ್ರಿ ಡಬಲ್‌ ಕ್ಲೆನ್ಸ್ ಮಾಡಿ ಮೇಕಪ್‌ ತೆಗೆಯುತ್ತೇನೆ. ಸ್ನಾನ ಆದ ಮೇಲೆ ರಾತ್ರಿ ಹಚ್ಚುವ ಒಂದು ಕ್ರೀಂ ಇರುತ್ತದೆ. ಆದಷ್ಟೂ ಕಡಿಮೆ ಕ್ರೀಂಗಳನ್ನು ಬಳಸುತ್ತೇನೆ. ಜಾಸ್ತಿ ಕ್ರೀಂ ಹಚ್ಚಿದಷ್ಟೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ADVERTISEMENT

ತಿಂಗಳಲ್ಲಿ ಎರಡು ಸಾರಿ ಸ್ಪಾ ಮಾಡಿಸುತ್ತೇನೆ. ಆಲೊವೆರಾ, ಅಗಸೆ ಬೀಜ ಅಥವಾ ಮೆಂತ್ಯದಿಂದ ಮಾಡಿದ ಹೇರ್‌ಪ್ಯಾಕ್‌ ಮಾಡಿಕೊಳ್ಳುತ್ತೇನೆ. ಕರಿಬೇವು, ಮೆಂತ್ಯ, ಈರುಳ್ಳಿ ಹಾಕಿ ಅಮ್ಮ ಮನೆಯಲ್ಲಿಯೇ ತಯಾರಿಸಿದ ಎಣ್ಣೆಯನ್ನು ವಾರದಲ್ಲಿ ಎರಡು ಬಾರಿ ಹಚ್ಚುತ್ತೇನೆ. ಮೊದಲು ರಾತ್ರಿ ಹಚ್ಚಿ ಬೆಳಿಗ್ಗೆವರೆಗೂ ಬಿಡುತ್ತಿದ್ದೆ. ಅದು ಸಹ ನನ್ನ ಚರ್ಮಕ್ಕೆ ಆಗಿಬರುವುದಿಲ್ಲ. ಹಾಗಾಗಿ, ಹೆಚ್ಚೆಂದರೆ ಒಂದು ಅಥವಾ ಎರಡು ಗಂಟೆ ಮಾತ್ರ ಬಿಟ್ಟು ನಂತರ ಸ್ನಾನ ಮಾಡಿಬಿಡುತ್ತೇನೆ.

ನಿತ್ಯ ಎಳನೀರು ಕುಡಿಯುತ್ತೇನೆ. ಸ್ಟ್ರಾಬೆರ್‍ರಿ, ಬ್ಲೂಬೆರ್‍ರಿ, ರಾಸ್ಪ್‌ಬೆರ್‍ರಿಯನ್ನು ಹೆಚ್ಚಾಗಿ ತಿನ್ನುತ್ತೇನೆ. ಒಣಹಣ್ಣುಗಳಿಂದ ಮಾಡಿದ ಲಡ್ಡು ದಿನವೂ ಇರಬೇಕು.
 
ನನ್ನ ಪ್ರಕಾರ, ಸೌಂದರ್ಯ ಎನ್ನುವುದು ಆತ್ಮವಿಶ್ವಾಸ. ಎಂಥದ್ದೇ ಪರಿಸ್ಥಿತಿಯಲ್ಲೂ ಆತ್ಮವಿಶ್ವಾಸದಿಂದ ಹೊಳೆದರೆ ಅದೇ ನಿಜವಾದ ಸೌಂದರ್ಯ. ನಾವು ಮೊದಲು ನಮ್ಮನ್ನು ನಂಬಿ, ಪ್ರತಿಕ್ಷಣವೂ ನನ್ನದು ಎಂದುಕೊಂಡು ಬದುಕಿದರೆ ಅದೇ ಹೊಳಪು.

– ನಮ್ರತಾ ಗೌಡ, ಚಿತ್ರನಟಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.