ADVERTISEMENT

ತುಟಿಯ ಅಂದಕ್ಕೆ ತೆಂಗಿನೆಣ್ಣೆ, ಲೋಳೆಸರ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 21:00 IST
Last Updated 1 ನವೆಂಬರ್ 2021, 21:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸದಾ ಹೊಳೆಯುವ, ನವಿರಾದ, ರಂಗಿನ ತುಟಿ ಎಂದರೆ ಎಲ್ಲರಿಗೂ ಇಷ್ಟ. ಆದರೆ ಚಳಿಗಾಲದಲ್ಲಿ ತುಟಿಯ ಅಂದವನ್ನು ಕಾಪಾಡಿಕೊಳ್ಳುವುದು ಸವಾಲೇ ಸರಿ. ಚಳಿಗಾಲ ಈಗಷ್ಟೇ ಆರಂಭವಾಗಿದೆ. ಈ ಕಾಲದಲ್ಲಿ ತುಟಿ ಒಣಗುವುದು, ಸಿಪ್ಪೆ ಏಳುವುದು, ಬಿರುಕು ಮೂಡುವುದು ಸಾಮಾನ್ಯ. ತುಟಿಯ ಅಂದ ಕೆಟ್ಟರೆ ಬೇಡವೆಂದರೂ ಮುಖದ ಸೌಂದರ್ಯ ಕೆಡುತ್ತದೆ. ಹಾಗಾಗಿ ತುಟಿಯ ಅಂದ ಹೆಚ್ಚಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬೇಕು. ಕೆಲವೊಂದು ನೈಸರ್ಗಿಕ ವಿಧಾನಗಳಿಂದ ತುಟಿಯ ಅಂದವನ್ನು ಹೆಚ್ಚಿಸಿ
ಕೊಳ್ಳಬಹುದು. ಲಿಪ್‌ ಬಾಮ್‌ ಬಳಕೆಯಿಂದ ತಾತ್ಕಾಲಿಕ ಪರಿಹಾರ ಸಿಕ್ಕರೂ ಶಾಶ್ವತ ಪರಿಹಾರಕ್ಕೆ ಮನೆಮದ್ದಿನ ಬಳಕೆ ಉತ್ತಮ.

ಒಣ ಚರ್ಮವನ್ನು ನಿವಾರಿಸಿ...

ತುಟಿ ಒಣಗಿದ ಕೂಡಲೇ ಬಿರುಕು ಮೂಡಿ, ಸಿಪ್ಪೆ ಏಳುತ್ತದೆ. ಆ ಕಾರಣಕ್ಕೆ ಒಣ ಚರ್ಮದ ಸಮಸ್ಯೆಯನ್ನು ಮೊದಲು ನಿವಾರಿಸಿಕೊಳ್ಳಬೇಕು. ಒಣ ಚರ್ಮವಿದ್ದರೆ ಲಿಪ್‌ ಬಾಮ್ ಬಳಸಿದ ನಂತರವೂ ತುಟಿ ಒಣಗಿದಂತೆ ಕಾಣುತ್ತದೆ.

ADVERTISEMENT

ಒಂದು ಚಮಚ ಸಕ್ಕರೆ ಅಥವಾ ಕಲ್ಲುಪ್ಪಿಗೆ ಜೇನುತುಪ್ಪ ಅಥವಾ ಎಣ್ಣೆ ಹಾಕಿ ಮಿಶ್ರಣ ಮಾಡಿ. ಅದನ್ನು ಹತ್ತಿಯ ಸಹಾಯದಿಂದ ತುಟಿಗೆ ಹಚ್ಚಿ ಸ್ಕ್ರಬ್ ರೀತಿ ಉಜ್ಜಿ. ನಂತರ ಒದ್ದೆ ಬಟ್ಟೆಯಿಂದ ಚೆನ್ನಾಗಿ ಒರೆಸಿ. ಇದರಿಂದ ನೈಸರ್ಗಿಕವಾಗಿ ತುಟಿ ಮೇಲಿನ ಒಣ ಚರ್ಮ ನಿವಾರಣೆಯಾಗಿ ಸೌಂದರ್ಯ ಹೆಚ್ಚುತ್ತದೆ.

ತೆಂಗಿನೆಣ್ಣೆ

ಮನುಷ್ಯನ ಚರ್ಮಕ್ಕಿಂತ ತುಟಿಗಳು ಹೆಚ್ಚು ಸೂಕ್ಷ್ಮವಾಗಿರುತ್ತವೆ. ಆ ಕಾರಣಕ್ಕೆ ಗಾಳಿ, ಶಾಖ, ಶೀತದಂತಹ ಅಂಶಗಳಿಗೆ ತೆರೆದುಕೊಂಡಾಗ ಬೇಗನೆ ತುಟಿಯ ಅಂದ ಕೆಡುತ್ತದೆ. ಅದಕ್ಕಾಗಿ ತೆಂಗಿನೆಣ್ಣೆ ಬಳಕೆ ಉತ್ತಮ. ಇದು ತುಟಿಯ ಚರ್ಮವನ್ನು ತೇವಗೊಳಿಸುತ್ತದೆ. ತೆಂಗಿನೆಣ್ಣೆಯು ತುಟಿಯ ಊರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಆ್ಯಂಟಿಬ್ಯಾಕ್ಟೀರಿಯಲ್ ಲಕ್ಷಣವನ್ನು ಹೊಂದಿದೆ. ತೆಂಗಿನೆಣ್ಣೆಯನ್ನು ತುಟಿಗೆ ಹಚ್ಚಿ ಹತ್ತಿಯ ಸಹಾಯದಿಂದ ಸ್ಕ್ರಬ್‌ ಮಾಡಿ. ತೆಂಗಿನೆಣ್ಣೆಯಲ್ಲೂ ಕಲಬೆರಕೆ ಬರುತ್ತಿದ್ದು ಗಾಣದಲ್ಲಿ ತಯಾರಿಸಿದ ಶುದ್ಧ ತೆಂಗಿನೆಣ್ಣೆ ಬಳಕೆ ಉತ್ತಮ.

ಲೋಳೆಸರ

ಲೋಳೆಸರದ ಬಳಕೆಯಿಂದ ಚರ್ಮಕ್ಕೆ ಹಲವು ಬಗೆಯ ಉಪಯೋಗಗಳಿವೆ. ಇದರ ನಿರಂತರ ಬಳಕೆಯಿಂದ ಸನ್‌ಬರ್ನ್ ತಡೆಯಬಹುದು. ಇದರಲ್ಲಿ ಉತ್ಕರ್ಷಣ ಗುಣಗಳಿದ್ದು ಒಡೆವ ತುಟಿಗೆ ಉತ್ತಮ ಮದ್ದಾಗಿದೆ. ಲೋಳೆಸರದ ಎಲೆಯನ್ನು ಗಿಡದಿಂದ ನೇರವಾಗಿ ಕಿತ್ತು ಬಳಸುವುದು ಉತ್ತಮ. ಲೋಳೆಸರದ ಲೋಳೆಯನ್ನು ಡಬ್ಬದಲ್ಲಿ ಸಂಗ್ರಹಿಸಿ ಇರಿಸಿಕೊಂಡು ದಿನ ಬಳಸಬಹುದು. ಇದನ್ನು ದಿನದಲ್ಲಿ ಎರಡರಿಂದ ಮೂರು ಬಾರಿ ಹಚ್ಚಬೇಕು.

ಬೆಣ್ಣೆಹಣ್ಣು

ಬೆಣ್ಣೆಹಣ್ಣಿನ ತಿರುಳು ಲಿಪ್‌ಬಾಮ್ ರೀತಿ ಕೆಲಸ ಮಾಡುತ್ತದೆ. ಇದರಲ್ಲಿರುವ ಎಣ್ಣೆಯಂಶ ಒಣಗಿದ ತುಟಿಯನ್ನು ತೇವಾಂಶಭರಿತವನ್ನಾಗಿಸುತ್ತದೆ. ಇದರಲ್ಲಿರುವ ಹಲವು ಬಗೆಯ ಫ್ಯಾಟಿ ಆ್ಯಸಿಡ್ ಹಾಗೂ ಆ್ಯಂಟಿಆಕ್ಸಿಡೆಂಟ್ ಅಂಶಗಳು ಹಲವು ರೀತಿಯ ಚರ್ಮದ ರೋಗ ನಿವಾರಕ ಗುಣಗಳನ್ನು ಹೊಂದಿವೆ.

ಪೆಟ್ರೊಲಿಯಂ ಜೆಲ್ಲಿ

ತುಟಿಗಳ ಅಂದ ಕೆಡದಂತೆ ಕಾಪಾಡಿಕೊಳ್ಳಲು ಪ್ರತಿದಿನ ಪೆಟ್ರೊಲಿಯಂ ಜೆಲ್ಲಿಯನ್ನು ಹಚ್ಚಿಕೊಳ್ಳಬೇಕು. ಹಗಲಿನ ವೇಳೆ ಅಥವಾ ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಪೆಟ್ರೊಲಿಯಂ ಜೆಲ್ಲಿ ಹಚ್ಚಿಕೊಳ್ಳುವುದರಿಂದ ಒಣ ಚರ್ಮ ಸಮಸ್ಯೆ ಕಡಿಮೆಯಾಗುತ್ತದೆ. ಇದು ತುಟಿ ಸೀಳುವುದನ್ನು ತಡೆಯುತ್ತದೆ ಮತ್ತು ಸನ್‌ಬರ್ನ್‌ ಆಗುವುದನ್ನೂ ಇದರಿಂದ ತಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.