‘ಬಡವರ ಸೇಬು’ ಎಂದು ಸೀಬೆ ಅಥವಾ ಪೇರಲೆ ಹಣ್ಣನ್ನು ಕರೆಯುತ್ತೇವೆ. ಸೇಬಿನಷ್ಟೇ ಸಮೃದ್ಧವಾದ ಪೋಷಕಾಂಶಗಳನ್ನು ಒಳಗೊಂಡಿದ್ದರೂ ಅದರಷ್ಟು ದುಬಾರಿಯಲ್ಲದೇ ಇರುವುದು ಪೇರಲೆ ಹಣ್ಣಿನ ಹೆಗ್ಗಳಿಕೆ. ಈ ಹಣ್ಣು ಮತ್ತು ಎಲೆ ದೇಹದ ಆರೋಗ್ಯದಷ್ಟೇ ಸೌಂದರ್ಯಕ್ಕೂ ಪರಿಣಾಮಕಾರಿ ಎಂಬುದು ಅನೇಕ ಜನರಿಗೆ ತಿಳಿದಿಲ್ಲ.
ದೇಹದಲ್ಲಿ ಶಕ್ತಿ ಕುಂದಿದಾಗ, ಹಿಮೋಗ್ಲೋಬಿನ್ ಕಡಿಮೆಯಾದಾಗ ಚರ್ಮ ಮಂಕಾಗುತ್ತದೆ. ನೆರಿಗೆಗಳು ಕಾಣಿಸಿಕೊಂಡು ವಯಸ್ಸಾದಂತೆ ಕಾಣುತ್ತದೆ. ಈ ಬೆಳವಣಿಗೆಯನ್ನು ನಿಯಂತ್ರಿಸುವ ಅದ್ಭುತ ಶಕ್ತಿ ಪೇರಲೆ ಎಲೆಗಳಲ್ಲಿವೆ.ಎಲೆಗಳನ್ನು ತೊಳೆದು ಕುದಿಸಿ ಕಶಾಯ ಸಿದ್ಧಪಡಿಸಿಕೊಂಡು ಆ ನೀರನ್ನು ಮುಖಕ್ಕೆ ಹಚ್ಚುತ್ತಿದ್ದರೂ ಚರ್ಮದ ಸುಕ್ಕುಗಳು ಕಡಿಮೆಯಾಗುತ್ತವೆ.
ಬ್ಲ್ಯಾಕ್‌ಹೆಡ್:
ಪೇರಲೆ ಎಲೆ ಹಾಕಿ ಕುದಿಸಿದ ನೀರಿಗೆ ಅರಿಸಿನ ಪುಡಿ ಮತ್ತು ಸಾದಾ ನೀರು ಬೆರೆಸಿ ಸ್ಕ್ರಬ್ ಸಿದ್ಧಪಡಿಸಿಕೊಳ್ಳಿ. ಇದನ್ನು ಬ್ಲ್ಯಾಕ್‌ಹೆಡ್ ಇರುವ ಜಾಗಕ್ಕೆ ಹಚ್ಚಿ ವೃತ್ತಾಕಾರವಾಗಿ ಮಸಾಜ್ ಮಾಡಿ ಸಾದಾ ನೀರಿನಲ್ಲಿ ತೊಳೆಯಿರಿ. ವಾರಕ್ಕೆರಡು ಬಾರಿ ಇದನ್ನು ಪುನರಾವರ್ತಿಸಿ.
ಮೊಡವೆ, ಕಲೆ, ತುರಿಕೆಗೆ:
ಪೇರಲೆ ಎಲೆಯ ಕಶಾಯದ ನಿಯಮಿತ ಬಳಕೆಯಿಂದ ಮೊಡವೆ, ಕಪ್ಪು ಕಲೆ ನಿವಾರಣೆಯಾಗುತ್ತದೆ. ಚರ್ಮದ ಸೋಂಕಿನಿಂದಾಗಿ ಉಂಟಾಗುವ ತುರಿಕೆಗೂ ಇದು ಉತ್ತಮ ಚಿಕಿತ್ಸೆ.ಹಸಿ ಎಲೆಯನ್ನು ಜಜ್ಜಿ ರಸ ತೆಗೆದು ಹಚ್ಚಿದರೂ ಆಗುತ್ತದೆ.ಕಶಾಯವು ಟೋನರ್‌ನಂತೆ ಕೆಲಸ ಮಾಡುತ್ತದೆ.
ಬಣ್ಣ ತಿಳಿಯಾಗಿಸಲು:
ಪೇರಲೆ ಎಲೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣವಿದೆ. ಇದುಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಕಾರಣ ಒಣಗಿದ ಚರ್ಮ (ಡೆಡ್ ಸ್ಕಿನ್) ನಿವಾರಿಸಲು ನೆರವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.