ADVERTISEMENT

ದೊಡ್ಡ ಓಲೆಯ ಝಲಕ್‌...

ರೋಹಿಣಿ ಮುಂಡಾಜೆ
Published 7 ನವೆಂಬರ್ 2018, 19:31 IST
Last Updated 7 ನವೆಂಬರ್ 2018, 19:31 IST
ಲೇಯರ್ಡ್‌ ಜುಮುಕಿ(ಚಿತ್ರ: ಪಿಂಟರೆಸ್ಟ್‌)
ಲೇಯರ್ಡ್‌ ಜುಮುಕಿ(ಚಿತ್ರ: ಪಿಂಟರೆಸ್ಟ್‌)   

ಐದು ಬೆರಳಿನಷ್ಟು ಅಗಲದ ಲೋಲಕ್‌, ಕಿವಿಯ ಮುಂದಕ್ಕೂ ಹಿಂದಕ್ಕೂ ಜುಮುಕಿಗಳು, ಒಂದೇ ಓಲೆಯಲ್ಲಿ ತೂಗಾಡುವ ನಾಲ್ಕೈದು ಜುಮುಕಿಗಳು, ಗದ್ದದಿಂದ ಭುಜದವರೆಗೆ ಮುಚ್ಚಿರುವ ನೆಕ್‌ಲೇಸ್‌, ಅಂಗೈ ಅಗಲದ ಪದಕ, ನಾಲ್ಕು ಬೆರಳನ್ನು ಆವರಿಸಿಕೊಳ್ಳುವ ಉಂಗುರ! ಆಹಾ... ದೊಡ್ಡ ದೊಡ್ಡ ಒಡವೆಗಳು ಫ್ಯಾಷನ್‌ಪ್ರಿಯ ಹೆಣ್ಣುಮಕ್ಕಳ ‘ತೂಕ’ ಹೆಚ್ಚಿಸುತ್ತಿರುವ ಬಗೆ ಹೇಗಿದೆ ನೋಡಿ.

ಭಾರಿ ಒಡವೆಗಳ ಜಮಾನ ಶುರುವಾಗಿ ಕೆಲವು ವರ್ಷಗಳೇ ಆಗಿವೆ. ಅಲ್ಲಿಂದೀಚೆ ಹೊಸ ವಿನ್ಯಾಸ ಮತ್ತು ಆಕಾರಗಳು ಸೇರ್ಪಡೆಯಾಗುತ್ತಲೇ ಇವೆ. ಇತ್ತೀಚೆಗೆ ನಕಲಿ ಮತ್ತು ಅಸಲಿ ಒಡವೆ ಮಾರುಕಟ್ಟೆಯಲ್ಲಿ ದೊಡ್ಡ ಗಾತ್ರದ ಒಡವೆಗಳದ್ದೇ ಕಾರುಬಾರು. ಆಕಾರ ಹಿಗ್ಗುತ್ತಲೇ ಇವೆ. ಅದರ ಭಾರಕ್ಕೆ ಕಿವಿಗಳು ಜೋತುಬೀಳುತ್ತಿರುವುದೂ ಸುಳ್ಳಲ್ಲ.

ಇದಕ್ಕೆ ಪ್ರೇರಣೆಬಾಲಿವುಡ್‌ ಸಿನಿಮಾಗಳು. ಮೊಘಲ್‌, ರಜಪೂತ, ಮರಾಠ ರಾಜವಂಶಗಳ ಕತೆಗಳನ್ನುಳ್ಳ ಸಿನಿಮಾಗಳಿಗಾಗಿಯೇ ಒಡವೆ ಬ್ರ್ಯಾಂಡ್‌ಗಳು ವಿಶೇಷ ವಿನ್ಯಾಸಗಳನ್ನು ಪರಿಚಯಿಸಿದ್ದುಂಟು. ಸಿನಿಮಾ ತೆರೆಕಂಡು, ತೆರೆಗೆ ಸರಿದು ವರ್ಷಗಳೇ ಕಳೆದರೂ ಅದರಲ್ಲಿನ ಒಡವೆಗಳು ‘ಔಟ್‌ ಡೇಟೆಡ್‌’ ಆಗದೆ ಮಹಿಳೆಯರ ಪ್ರೀತಿ ಉಳಿಸಿಕೊಂಡಿರುವುದು ವಿಶೇಷ.‌ ಟೆಂಪಲ್‌ ವಿನ್ಯಾಸಗಳು ಪರಿಚಿತವಾದ ನಂತರ ಕೃತಕ ಒಡವೆ ಮಾರುಕಟ್ಟೆಯಲ್ಲೂ ಅವುಗಳದ್ದೇ ಮೇಲುಗೈ.

ADVERTISEMENT

ಹಬ್ಬಕ್ಕೋ, ಸಮಾರಂಭಕ್ಕೋ ಭರ್ಜರಿ ಲೆಹೆಂಗಾ, ಸೀರೆ, ಹಾಫ್‌ ಸೀರೆ, ಲಾಂಗ್‌ ಗೌನ್‌, ಲಾಂಗ್‌ ಕುರ್ತಾ, ಲಂಗ ದಾವಣಿಯಂತಹ ಉಡುಪು ಧರಿಸಿದಾಗ ಈ ಬಗೆಯ ಒಡವೆಗಳು ಉತ್ತಮ ಸಾಥ್‌ ನೀಡುತ್ತವೆ. ದೊಡ್ಡ ದೊಡ್ಡ ಒಡವೆ ಧರಿಸುವುದೇ ಈಗಿನ ಟ್ರೆಂಡ್‌. ಹಬ್ಬದ ನೆಪದಲ್ಲಿ ನೀವೂ ಟ್ರೆಂಡಿಯಾಗಿ ಕಾಣಿಸಿಕೊಳ್ಳಬಹುದು.

ಫ್ಯಾನ್ಸಿ ಅಂಗಡಿಗಳ ಲೋಲಕ್‌, ಜುಮುಕಿ ವಿಭಾಗದಲ್ಲಿ ನೋಡಿದರೂ ಈ ಬಗೆಯ ಒಡವೆಗಳದ್ದೇ ಕಾರುಬಾರು. ಅಂಗೈ ಅಗಲದ ಲೋಲಕ್‌, ಲೇಯರ್ಡ್‌ ಲೋಲಕ್‌, ಕಿವಿಯ ತೂತಿಗೆ ಇಳಿಬಿಟ್ಟ ಲೋಹದ ತಂತಿಯಲ್ಲಿ ಬಿಗುಮಾನದಿಂದ ತೂಗುವ ಇಷ್ಟಗಲದ ಹ್ಯಾಂಗಿಂಗ್‌ ಮನಸೂರೆಗೊಳ್ಳುತ್ತವೆ. ಯಾವುದನ್ನು ಧರಿಸಿದರೂ ಈ ಉಡು‍ಪುಗಳಿಗೆ ಹೊಂದುತ್ತದೆ.

ಲೆಹೆಂಗಾ ಮತ್ತು ಜಾಕೆಟ್‌ ಮಾತ್ರ ಧರಿಸುವುದಾದರೆ ದೊಡ್ಡ ಜುಮುಕಿ ಉತ್ತಮ ಜೋಡಿಯಾಗುತ್ತದೆ. ಕಿವಿಯ ಹಿಂಬದಿಯಿಂದ ಕೂದಲಿಗೆ ಸಿಕ್ಕಿಸುವಂಥಹ ಮಾಂಗ್‌, ಮ್ಯಾಟಿಯಲ್ಲಿಯೂ ಈಗ ಪುಟಾಣಿ ಜುಮುಕಿ ವಿನ್ಯಾಸ, ಮುತ್ತಿನ ಅಥವಾ ಚಿನ್ನದ ಲೇಪನವುಳ್ಳ ಪುಟ್ಟ ಪುಟ್ಟ ಮಣಿ ಗೊಂಚಲಿನ ವಿನ್ಯಾಸ ಬರುತ್ತದೆ.

ಜುಮುಕಿಗಳು ಈಗ ಹೆಬ್ಬೆಟ್ಟು ಗಾತ್ರದಲ್ಲಿ ಉಳಿದಿಲ್ಲ ಬದಲಿಗೆ, ಮುಷ್ಟಿಯಷ್ಟು ದೊಡ್ಡ ಜುಮುಕಿಗಳ ಜಮಾನವಿದು. ಕಿವಿಗೆ ಸಣ್ಣ ಅಥವಾ ದೊಡ್ಡ ಓಲೆ, ಅದಕ್ಕೆ ಇಳಿಬಿದ್ದ ಜುಮುಕಿ ಧರಿಸಿದರೆ ಸಾಂಪ್ರದಾಯಿಕ ಮತ್ತು ಟ್ರೆಂಡಿ ನೋಟ ನಿಮ್ಮದಾಗುತ್ತದೆ.

ಓಲೆಯೇ ಇಲ್ಲದ ಜುಮುಕಿಯೂ ಈಗ ಲಭ್ಯ. ಮುತ್ತು ಅಥವಾ ಚಿನ್ನದ ಬಣ್ಣದ ಚೈನ್‌ನ ಎರಡೂ ತುದಿಯಲ್ಲಿ ಎರಡು ಜುಮುಕಿಗಳಿರುತ್ತವೆ. ಚೈನ್‌ನ್ನು ಕಿವಿಗೆ ಮೇಲಿಂದ ನೇತುಹಾಕಿಕೊಂಡರೆ ಆಯಿತು! ಜುಮುಕಿಯ ಭಾರಕ್ಕೆ ಕಿವಿ ಜೋತುಬೀಳುವ ಪ್ರಮೇಯವೇ ಇಲ್ಲ! ಮುಂಭಾಗದ ಜುಮುಕಿ ಕಿವಿಯಿಂದ ಎರಡು ಇಂಚು ಕೆಳಗೂ, ಹಿಂಭಾಗದ ಜುಮುಕಿಯನ್ನು ಭುಜದವರೆಗೂ ಇಳಿಬಿಡಬಹುದು. ಈ ಜುಮುಕಿ ಗಮನ ಸೆಳೆಯುವಂತಿರಬೇಕಾದರೆ ಜುಮುಕಿಯ ಗಾತ್ರ ದೊಡ್ಡದೇ ಇರಬೇಕು.

ಐದಾರು ಜುಮುಕಿಗಳನ್ನು ಒಳಗೊಂಡ ಲೇಯರ್ಡ್‌ ಓಲೆಗಳೂ ಈಗ ಹೆಚ್ಚು ಚಾಲ್ತಿಯಲ್ಲಿವೆ. ಈ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳುವಾಗ ಪುಟಾಣಿ ಜುಮುಕಿ ಇರುವ ಓಲೆಗಳಿಗೇ ಆದ್ಯತೆ ಕೊಡುವುದು ಸೂಕ್ತ. ಯಾಕೆಂದರೆ ಕಿವಿಗೆ ಅತಿಯಾದ ಭಾರ ಹೇರುವುದು ಆರೋಗ್ಯಕರವಲ್ಲ. ಕೆಲವರಿಗೆ ಭರ್ಜರಿ ಓಲೆಗಳು ಕಿವಿ ಮತ್ತು ಕೆನ್ನೆಯ ನರಗಳಿಗೆ ಒತ್ತಡ ಬಿದ್ದು ತಲೆನೋವು ಕಾಡುವುದುಂಟು.

‘ಬಾಲಿವುಡ್‌ ಬಾದ್‌ಷಾ’ ಶಾರುಕ್‌ ಖಾನ್‌ ಇತ್ತೀಚೆಗೆ ಏರ್ಪಡಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಮಲೈಕಾ ಅರೋರಾ ಭಾರಿ ವಿನ್ಯಾಸದ ಒಡವೆಗಳಿಂದ ಗಮನ ಸೆಳೆದಿದ್ದರು. ನಟಿ ದೀಪಿಕಾ ಪಡುಕೋಣೆ ತಮ್ಮ ಮದುವೆಯ ನಾಂದಿ ಪೂಜೆ ಸಮಾರಂಭದ ದಿನ ಅಂಗೈ ಅಗಲದ ಲೋಲಕ್‌ ಧರಿಸಿದ್ದರು.

ಹಾಗಿದ್ದರೆ, ಹಬ್ಬದ ಉಡುಪಿನೊಂದಿಗೆ ದೊಡ್ಡ ದೊಡ್ಡ ಜುಮುಕಿ, ಲೋಲಕ್‌ ಧರಿಸಿ ಖದರು ಹೆಚ್ಚಿಸಲು ನೀವು ರೆಡಿನಾ?

ಕಿವಿ ನೋಯುತ್ತಿದೆ...

l ತೂಕದ ಓಲೆಗಳು ತೂಗಿ ತೂಗಿ‌ ಕಿವಿ ನೋವು ಬರುವುದುಂಟು. ಕೆನ್ನೆ, ಕಿವಿಯ ಹಿಂಭಾಗ, ಕತ್ತು ನೋಯುವುದೂ ಸಹಜ. ಬೆಳಿಗ್ಗಿನಿಂದ ಸಂಜೆವರೆಗೂ ಅಂತಹ ಓಲೆ ಧರಿಸಿದ್ದೀರಿ ಎಂದುಕೊಳ್ಳಿ. ಮನೆಗೆ ಮರಳಿದ ಬಳಿಕ ಕಿವಿ, ಹಿಂಭಾಗ, ಕತ್ತು ಮತ್ತು ಭುಜವನ್ನು ಮೃದುವಾಗಿ ಮಸಾಜ್‌ ಮಾಡಿಕೊಳ್ಳಿ.

l ನಿಮಗಿಷ್ಟದ ಎಣ್ಣೆ ಅಥವಾ ನೋವಿನ ತೈಲದಿಂದ ಮಸಾಜ್‌ ಮಾಡಬಹುದು.

l ಕೆನ್ನೆ ಅಥವಾ ಕಿವಿಯ ಹಿಂಭಾಗದ ನರಗಳು ನೋವಿನಿಂದ ಉಬ್ಬಿಕೊಂಡಂತೆ ಭಾಸವಾದರೆ ಉಗುರು ಬೆಚ್ಚಗಿನ ಎಣ್ಣೆ ಬಳಸಿ.

l ನೋವು ಶಮನ ಮಾಡುವ ಮುಲಾಮು ಹಚ್ಚಬಹುದು. ಹತ್ತಿಯ ಟವೆಲ್‌ ಅಥವಾ ಕರ್ಚೀಫ್‌ನ್ನು ಬಿಸಿ ನೀರಿನಲ್ಲಿ ಅದ್ದಿ ಕಿವಿಯಿಂದ ಭುಜದವರೆಗೂ ಶಾಖ ಕೊಟ್ಟರೆ ನೋವು ಉಪಶಮನವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.