ADVERTISEMENT

ವಿಶ್ವ ಸುಂದರಿ ಸ್ಪರ್ಧೆ: ಕಾರ್ಯಕ್ರಮದ ಮೂಲಕ ಹೂಡಿಕೆ ಆಕರ್ಷಿಸಲು ತೆಲಂಗಾಣ ಸಿದ್ಧತೆ

ಪಿಟಿಐ
Published 2 ಮೇ 2025, 14:11 IST
Last Updated 2 ಮೇ 2025, 14:11 IST
<div class="paragraphs"><p>ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆಯಲಿರುವ ವಿಶ್ವ ಸುಂದರಿ 2025 ಸ್ಪರ್ಧೆಗೆ ಪಾರಂಪರಿಕ ತಾಣಗಳ ಸ್ವಚ್ಛತೆ ಮತ್ತು ಅಲಂಕಾರಕ್ಕಾಗಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು</p></div>

ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆಯಲಿರುವ ವಿಶ್ವ ಸುಂದರಿ 2025 ಸ್ಪರ್ಧೆಗೆ ಪಾರಂಪರಿಕ ತಾಣಗಳ ಸ್ವಚ್ಛತೆ ಮತ್ತು ಅಲಂಕಾರಕ್ಕಾಗಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು

   

ಎಕ್ಸ್ ಚಿತ್ರ

ಹೈದರಾಬಾದ್: ವಿಶ್ವ ಸುಂದರಿ ಸ್ಪರ್ಧೆಯ 72ನೇ ಆವೃತ್ತಿಯು ಮೇ 10ರಿಂದ 31ರವರೆಗೆ ಹೈದರಾಬಾದ್‌ನಲ್ಲಿ ನಡೆಯಲಿದ್ದು,  ರಾಜ್ಯದ ಜಾಗತಿಕ ಬ್ರ್ಯಾಂಡ್‌ ಇಮೇಜ್ ಹೆಚ್ಚಿಸಿಕೊಳ್ಳುವ ನೆಪದಲ್ಲಿ ಹೂಡಿಕೆ ಆಕರ್ಷಿಸಲು ತೆಲಂಗಾಣ ಸರ್ಕಾರ ಕ್ರಿಯಾಯೋಜನೆ ಸಿದ್ಧಪಡಿಸಿದೆ.

ADVERTISEMENT

‘ವಿಶ್ವ ಸುಂದರಿ ಸ್ಪರ್ಧಿಗಳು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ. ಯುನೆಸ್ಕೊ ಪಾರಂಪರಿಕ ತಾಣಗಳಾದ ನಿಜಾಮರ ಕಾಲದ ಹೈದರಾಬಾದ್‌ನ ವಿವಿಧ ಸ್ಮಾರಕಗಳು, ವಾರಂಗಲ್‌ನ ರಾಮಪ್ಪ ದೇವಾಲಯ, ಬುದ್ಧವನಮ್‌, ಬುದ್ಧ ಉದ್ಯಾನ ಸೇರಿದಂತೆ ಹಲವೆಡೆ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ತೆಲಂಗಾಣದ ಶ್ರೀಮಂತ ಇತಿಹಾಸ, ಸಂಸ್ಕೃತಿಯ ಜತೆಗೆ ವೈದ್ಯಕೀಯ ಹಾಗೂ ಪ್ರವಾಸೋದ್ಯಮದ ಅವಕಾಶಗಳನ್ನು ಪ್ರದರ್ಶಿಸಲು ಸಿದ್ಧತೆ ನಡೆದಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ 120 ದೇಶಗಳ ಸ್ಪರ್ಧಿಗಳು ಹೈದರಾಬಾದ್‌ಗೆ ಬರಲಿದ್ದಾರೆ. ಚಾರ್‌ಮಿನಾರ್, ಲಾಡ್ ಬಜಾರ್, ಚೌಮಹಲ್ ಅರಮನೆ, ಯಾದಗಿರಿಗಟ್ಟದಲ್ಲಿರುವ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಜತೆಗೆ ಪೂಚಂಪಲ್ಲಿಯ ಕೈಮಗ್ಗ ಘಟಕ, ಎಐಜಿ ಆಸ್ಪತ್ರೆಗಳಿಗೂ ಭೇಟಿ ನೀಡಲಿದ್ದಾರೆ.

ಮಿಸ್‌ ವರ್ಲ್ಡ್‌ ಸ್ಪೋರ್ಟ್ಸ್‌ ಸ್ಪರ್ಧೆಯ ಅಂತಿಮ ಸುತ್ತು ಮೇ 17ರಂದು ಗಚಿಬೌಲಿಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರೊಂದಿಗೆ ರಾಮೋಜಿರಾವ್ ಸಿನಿ ನಗರಿ ಭೇಟಿ, ತೆಲಂಗಾಣ ಸಚಿವಾಲಯ ಮತ್ತು ಪೊಲೀಸ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಕ್ಕೂ ರೂಪದರ್ಶಿಯರು ಭೇಟಿ ನೀಡಲಿದ್ದಾರೆ. ಇದರೊಂದಿಗೆ ಐಪಿಎಲ್ ಪಂದ್ಯವನ್ನೂ ವೀಕ್ಷಿಸಲಿದ್ದಾರೆ. ಅಂತಿಮ ಸುತ್ತು ಮೇ 23ರಿಂದ ಆರಂಭವಾಗಲಿದೆ. ಅಂತಿಮ ಸ್ಪರ್ಧೆ ಮೇ 31ರಂದು ನಡೆಯಲಿದ್ದು, ಮಿಸ್‌ ವರ್ಲ್ಡ್‌ ಲಿಮಿಟೆಡ್‌ನ ಅಧ್ಯಕ್ಷೆ ಜೂಲಿಯಾ ಮಾರ್ಲೆ ಇಂದು (ಶುಕ್ರವಾರ) ಹೈದರಾಬಾದ್‌ಗೆ ಬಂದಿಳಿದಿದ್ದಾರೆ. ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.