ವಿಶ್ವ ಸುಂದರಿ ಸ್ಪರ್ಧೆಗೆ ಆಗಮಿಸಿದ ಸುಂದರಿಯರು
ಪಿಟಿಐ ಚಿತ್ರ
ಹೈದರಾಬಾದ್: ವಿಶ್ವ ಸುಂದರಿ ಸ್ಪರ್ಧೆಯ 72ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆ ಇಂದು (ಮೇ 31) ನಡೆಯಲಿದೆ.
ಸುಮಾರು ಒಂದು ತಿಂಗಳಿನಿಂದ ನಡೆದ ವಿವಿಧ ಕಾರ್ಯಕ್ರಮಗಳ ಬಳಿಕ ತೆಲಂಗಾಣದ ಹೈಟೆಕ್ಸ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಜಗತ್ತಿನ ವಿವಿಧ ದೇಶಗಳ 108 ಸುಂದರಿಯರು ಸ್ಪರ್ಧೆಯಲ್ಲಿದ್ದಾರೆ.
ವಿಶ್ವ ಸುಂದರಿ ಸ್ಪರ್ಧೆಯು ಸೌಂದರ್ಯ, ಒಗ್ಗಟ್ಟು ಮತ್ತು ನಿರ್ದಿಷ್ಟ ಉದ್ದೇಶದ ಅದ್ಭುತ ಕಾರ್ಯಕ್ರಮವಾಗಿದೆ ಎನ್ನುತ್ತಾರೆ ಆಯೋಜಕರು.
ಗ್ರ್ಯಾಂಡ್ ಫಿನಾಲೆಯ ನಿರೂಪಣೆಯನ್ನು 2016ರ ವಿಶ್ವ ಸುಂದರಿ ಸ್ಪರ್ಧೆಯ ವಿಜೇತೆ ಸ್ಟೆಫನಿ ಡೆಲ್ ವ್ಯಾಲೆ ನಡೆಸಿಕೊಡಲಿದ್ದಾರೆ. ಅವರೊಂದಗೆ ಭಾರತದ ಸಚಿನ್ ಕುಂಬಾರ್ ನಿರೂಪಣೆಯಲ್ಲಿ ಇರಲಿದ್ದಾರೆ.
ಕಾರ್ಯಕ್ರಮದಲ್ಲಿ 2017ರ ವಿಶ್ವ ಸುಂದರಿಯಾಗಿದ್ದ ಮಾನುಶಿ ಚಿಲ್ಲರ್, ಬಾಲಿವುಡ್ ನಟಿಯರು ಸೇರಿ ಹಲವರು ವಿಶೇಷವಾಗಿ ಕಾಣಿಸಿಕೊಳ್ಳಲಿದ್ದಾರೆ.
ತೀರ್ಪುಗಾರರ ಸ್ಥಾನದಲ್ಲಿ ನಟ, ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಇರಲಿದ್ದಾರೆ. ಇವರು ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ‘ಮಿಸ್ ವರ್ಲ್ಡ್ ಮಾನವೀಯ ಪ್ರಶಸ್ತಿ’ಯನ್ನು ಪಡೆಯಲಿದ್ದಾರೆ.
108 ಸುಂದರಿಯರಿಗೆ ಹಲವು ಸುತ್ತುಗಳ ಸ್ಪರ್ಧೆಗಳನ್ನು ನಡೆಸಿ ಕೊನೆಯಲ್ಲಿ ಒಬ್ಬರಿಗೆ ವಿಶ್ವ ಸುಂದರಿ ಕಿರೀಟ ತೊಡಿಸಲಾಗುತ್ತದೆ.
ಕಳೆದ ವರ್ಷ ಮುಂಬೈನಲ್ಲಿ ನಡೆದಿದ್ದ ಗ್ರ್ಯಾಂಡ್ ಫಿನಾಲೆಯಲ್ಲಿ 71ನೇ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದ ಕ್ರಿಸ್ಟಿನಾ ಪಿಸ್ಕೋವಾ ಅವರು ಹೊಸ ವಿಶ್ವ ಸುಂದರಿಗೆ ಕಿರೀಟ ತೊಡಿಸಲಿದ್ದಾರೆ.
ಭಾರತದಿಂದ ಮಿಸ್ ಇಂಡಿಯಾ ವಿಜೇತೆ ನಂದಿನಿ ಗುಪ್ತಾ ಟಾಪ್ 40 ಕ್ವಾರ್ಟರ್ ಫೈನಲಿಸ್ಟ್ ಹಾಗೂ ಏಷ್ಯಾ ಪ್ರದೇಶದ ಮೊದಲ ಹತ್ತರಲ್ಲಿ ಒಬ್ಬರಾಗಿ ಸ್ಥಾನ ಪಡೆದಿದ್ದಾರೆ.
1996 ಹಾಗೂ 2024ರ ನಂತರ ಭಾರತವು ಮೂರನೇ ಬಾರಿಗೆ ಪ್ರತಿಷ್ಠಿತ ಸ್ಪರ್ಧೆಯ ಆತಿಥ್ಯ ವಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.