ADVERTISEMENT

ಸೀರೆಗೂ ಸೈ, ಜೀನ್ಸ್‌ಗೂ ಸೈ ಜಾಕೆಟ್

ರೇಷ್ಮಾ
Published 19 ನವೆಂಬರ್ 2021, 19:30 IST
Last Updated 19 ನವೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಳಿಗಾಲದಲ್ಲಿ ದೇಹ ಬೆಚ್ಚಗಿಡುವುದೇ ಹರಸಾಹಸ. ರಾತ್ರಿ–ಹಗಲು ಮೈ ನಡುಗಿಸುವ ಚಳಿಗೆ ಬೆಚ್ಚಗಿದ್ದರೆ ಚೆನ್ನ ಎನ್ನಿಸದೇ ಇರದು. ಈ ಸಮಯದಲ್ಲಿ ದೇಹವನ್ನು ಬೆಚ್ಚಗಾಗಿಸಿ ಚಳಿ ದೂರ ಮಾಡಲು ಜಾಕೆಟ್‌ಗಳು ಸೂಕ್ತ. ಫ್ಯಾಷನ್ ಟ್ರೆಂಡ್‌ಗೆ ಹೊಂದುವಂತಹ, ಮಿಲೇನಿಯಲ್ ಯುವತಿಯರು ಇಷ್ಟಪಡುವಂತಹ ವೈವಿಧ್ಯಮಯ ಜಾಕೆಟ್‌ಗಳು ಫ್ಯಾಷನ್ ಮಾರುಕಟ್ಟೆಯಲ್ಲಿ ಕೈಬೀಸಿ ಕರೆಯುತ್ತವೆ. ಜಾಕೆಟ್ ಟ್ರೆಂಡ್‌ನಲ್ಲಿ ದೊಡ್ಡ ಮಟ್ಟಿಗೆ ಬದಲಾವಣೆಗಳಾಗದಿದ್ದರೂ ತಕ್ಕ ಮಟ್ಟಿಗೆ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ. ಲಾಂಗ್‌ ಜಾಕೆಟ್‌, ಸೀರೆಯೊಂದಿಗೆ ಧರಿಸುವ ರವಿಕೆ ರೂಪದ ಜಾಕೆಟ್ ಇತ್ತೀಚಿನ ಟ್ರೆಂಡ್‌ಗಳು. ಜಾಕೆಟ್ ಧರಿಸುವುದರಿಂದ ದೇಹ ಬೆಚ್ಚಗಿರುವ ಜೊತೆಗೆ ಟ್ರೆಂಡಿ ಆಗಿಯೂ ಕಾಣಿಸಬಹುದು. ಜಾಕೆಟ್‌ಗಳನ್ನು ಸೀರೆ, ಟಾಪ್‌, ಜೀನ್ಸ್‌, ಸ್ಕರ್ಟ್ ಹೀಗೆ ಎಲ್ಲದರ ಜೊತೆಗೂ ಧರಿಸಬಹುದು. ಆದರೆ ಯಾವುದಕ್ಕೆ ಯಾವುದು ಸೂಕ್ತ ಎಂದು ತಿಳಿದುಕೊಂಡಿರುವುದು ಅವಶ್ಯ.

ಸೀರೆಯೊಂದಿಗೆ ಜಾಕೆಟ್‌
ತುಂಬಾನೇ ಚಳಿ ಇದೆ, ಸೀರೆ ಧರಿಸಿದರೆ ಜಾಕೆಟ್ ಧರಿಸುವುದು ಹೇಗೆ? ಆದರೆ ಸೀರೆ ಧರಿಸದೇ ಬೇರೆ ವಿಧಿಯಿಲ್ಲ ಎಂದು ಕೊರಗುವವರಿದ್ದಾರೆ. ಆದರೆ ಸೀರೆಗೆ ಹೊಂದುವಂತಹ ಹಲವು ರೀತಿ ಹಾಗೂ ವಿನ್ಯಾಸದ ಜಾಕೆಟ್‌ಗಳಿವೆ. ಕಾಟನ್‌ ಸೀರೆಗೆ ಉದ್ದನೆಯ ಜಾಕೆಟ್ ಧರಿಸುವುದು ಇಂದಿನ ಟ್ರೆಂಡ್‌. ಇದು ಹಿಂಭಾಗದಲ್ಲಿ ಕತ್ತಿನಿಂದ ಮೊಣಕಾಲಿನವರೆಗೆ ಇಳಿಬಿದ್ದಿರುತ್ತದೆ. ಜಾಕೆಟ್‌ ಧರಿಸುವುದರಿಂದ ಸೀರೆ, ಬ್ಲೌಸ್ ಮುಚ್ಚುತ್ತದೆ, ಇದರಿಂದ ಸೀರೆ ಅಂದ ಕೆಡುತ್ತದೆ ಎಂಬ ಚಿಂತೆ ಈಗ ಬೇಡ. ಸೀರೆಯ ಬಣ್ಣಕ್ಕೆ ಹೊಂದುವಂತಹ ಕಾಟನ್ ಹಾಗೂ ಸಿಂಥೆಟಿಕ್ ಜಾಕೆಟ್‌ಗಳನ್ನು ಸೀರೆಯೊಂದಿಗೆ ಧರಿಸಬಹುದು. ಹೂವಿನ ಚಿತ್ತಾರವಿರುವ ಜಾಕೆಟ್‌ಗಳು ಸೀರೆಗೆ ಹೆಚ್ಚು ಹೊಂದುತ್ತವೆ. ಸೀರೆಯೊಂದಿಗೆ ಡೆನಿಮ್ ಜಾಕೆಟ್‌ಗಳನ್ನೂ ಧರಿಸಬಹುದು. ಇವು ಟ್ರೆಂಡಿ ಹಾಗೂ ಸ್ಟೈಲಿಶ್ ಆಗಿಯೂ ಕಾಣುವಂತೆ ಮಾಡುತ್ತವೆ. ಸೀರೆಯೊಂದಿಗೆ ಜಾಕೆಟ್‌ ಮಾದರಿಯ ರವಿಕೆ ಧರಿಸುವುದೂ ಕೂಡ ಲೇಟೆಸ್ಟ್ ಟ್ರೆಂಡ್‌. ಇದರೊಂದಿಗೆ ರವಿಕೆಯ ಬಣ್ಣದ್ದೇ ಕಾಟನ್ ಅಥವಾ ಸಿಂಥೆಟಿಕ್‌ನ ಫ್ಯಾನ್ಸಿ ಲುಕ್ ಇರುವ ಜಾಕೆಟ್‌ಗಳನ್ನು ಧರಿಸಬಹುದು. ಭುಜದಿಂದ ಕಾಲಿನವರೆಗೂ ಇಳಿ ಬಿದ್ದಿರುವ ಲಾಂಗ್ ಜಾಕೆಟ್ ಅನ್ನು ಸೀರೆಯೊಂದಿಗೆ ತೊಡುವ ಟ್ರೆಂಡ್‌ಗೆ ನಟಿಯರಾದ ಶಿಲ್ಪಾ ಶೆಟ್ಟಿ, ಜಾಕ್ವೆಲಿನ್ ಫೆರ್ನಾಂಡಿಸ್‌, ಸೋಹಾ ಅಲಿ ಖಾನ್ ಮೊದಲಾದವರು ಸೈ ಎಂದಿದ್ದಾರೆ.

ಜೀನ್ಸ್‌ನೊಂದಿಗೆ ಜಾಕೆಟ್
ಚಳಿಗಾಲದಲ್ಲಿ ಜೀನ್ಸ್ ತೊಡುವುದರಿಂದ ದೇಹವನ್ನು ಬೆಚ್ಚಗಾಗಿರಿಸಿಕೊಳ್ಳಬಹುದು. ಜೀನ್ಸ್ ಜೊತೆ ಸಾಮಾನ್ಯವಾಗಿ ಎಲ್ಲಾ ಬಗೆಯ ಜಾಕೆಟ್‌ಗಳು ಹೊಂದುತ್ತವೆ. ಇವು ನಮಗೆ ಟ್ರೆಂಡಿ ಲುಕ್ ಸಿಗುವಂತೆ ಮಾಡುವುದಲ್ಲದೇ ಸ್ಟೈಲಿಶ್ ಆಗಿಯೂ ಕಾಣುವಂತೆ ಮಾಡುತ್ತವೆ. ಡೆನಿಮ್‌, ಕಾಟನ್‌, ಲೆದರ್‌, ಉಲ್ಲನ್ ಜಾಕೆಟ್‌ನೊಂದಿಗೆ ಲಾಂಗ್ ಜಾಕೆಟ್ ಕೂಡ ಜೀನ್ಸ್‌ಗೆ ಹೆಚ್ಚು ಹೊಂದಿಕೆಯಾಗುತ್ತದೆ. ಲೆದರ್‌ ಜಾಕೆಟ್ ಧರಿಸಿದಾಗ ಲೆದರ್‌ನ ವೈಡ್‌ ಕಾಫ್ ಬೂಟ್ಸ್ ಧರಿಸಬಹುದು. ಉಲ್ಲನ್ ಜಾಕೆಟ್ ಜೊತೆ ಉಲ್ಲನ್ ಸ್ಕಾರ್ಫ್ ಧರಿಸುವುದರಿಂದ ಅಂದ ಹೆಚ್ಚಿಸಿಕೊಳ್ಳಬಹುದು. ಜೀನ್ಸ್ ಮೇಲೆ ಶರ್ಟ್‌, ಟೀ ಶರ್ಟ್‌, ಕುರ್ತಾ ಹೀಗೆ ಯಾವುದು ಧರಿಸಿದ್ದೀರಿ ಎಂಬುದರ ಮೇಲೆ ಜಾಕೆಟ್ ಆಯ್ಕೆ ಮಾಡಿಕೊಳ್ಳಬೇಕು.

ADVERTISEMENT

ಟೀ ಶರ್ಟ್‌ನೊಂದಿಗೆ
ಟೀ ಶರ್ಟ್ ಧರಿಸಿದಾಗ ಗಿಡ್ಡನೆಯ ಡೆನಿಮ್ ಅಥವಾ ಕಾಟನ್ ಜಾಕೆಟ್ ಧರಿಸುವುದು ಉತ್ತಮ. ಟೀ ಶರ್ಟ್ ಜೊತೆಗೆ ತುಂಬು ತೋಳು, ಅರ್ಧ ತೋಳು ಎರಡೂ ಬಗೆಯ ಜಾಕೆಟ್ ಹೊಂದಿಕೆಯಾಗುತ್ತದೆ. ತುಂಬು ತೋಳಿನ ಟೀ ಶರ್ಟ್ ಜೊತೆಗೆ ಅರ್ಧ ತೋಳಿನ ಜಾಕೆಟ್ ಹೆಚ್ಚು ಹೊಂದುತ್ತದೆ. ಟೀ ಶರ್ಟ್ ಜೊತೆ ಸ್ವೆಟ್ ಶರ್ಟ್ ಕೂಡ ಧರಿಸಬಹುದು.

ಶರ್ಟ್ ಜಾಕೆಟ್
ಶರ್ಟ್ ಜಾಕೆಟ್ ಇಂದಿನ ಲೇಟೆಸ್ಟ್ ಟ್ರೆಂಡ್. ಶರ್ಟ್ ರೂಪದಲ್ಲೇ ಇರುವ ಜಾಕೆಟ್‌ಗಳು ಚಳಿಗಾಲದಲ್ಲಿ ಹೆಚ್ಚು ಹೊಂದುತ್ತವೆ. ಕಾರ್ಗೋ ರೀತಿಯ ಪಾಕೆಟ್ ಇರುವ ಜಾಕೆಟ್‌ಗಳೂ ಕೂಡ ಇಂದು ಫ್ಯಾಷನ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಸಾದಾ ಕಾಟನ್‌ನ ಶರ್ಟ್ ಜಾಕೆಟ್‌ಗಳನ್ನು ಫಾರ್ಮಲ್, ಜೀನ್ಸ್, ಜೆಗ್ಗಿಂಗ್ಸ್‌ ಜೊತೆ ಧರಿಸಬಹುದು.

ಉಲ್ಲನ್ ಜಾಕೆಟ್
ಉಲ್ಲನ್ ಜಾಕೆಟ್‌ಹಿಂದಿನಿಂದಲೂ ಟ್ರೆಂಡ್‌ನಲ್ಲಿತ್ತು. ಈಗಲೂ ಈ ಟ್ರೆಂಡ್ ಮುಂದುವರಿದಿದೆ. ಇದನ್ನು ಟೀ ಶರ್ಟ್‌, ಶರ್ಟ್, ಸೀರೆ ಎಲ್ಲದರ ಜೊತೆ ಹಾಕಿಕೊಳ್ಳಬಹುದು. ಉಲ್ಲನ್ ಜಾಕೆಟ್ ಧರಿಸಿದಾಗ ಅದಕ್ಕೆ ಹೊಂದುವಂತಹ ಶೂ ಅಥವಾ ಸ್ಯಾಂಡಲ್ ಧರಿಸುವುದು ಮುಖ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.