‘ಈ ಡ್ರೆಸ್ ತುಂಬಾ ಚೆನ್ನಾಗಿದೆ. ಒಳ್ಳೆ ಡಿಸೈನ್. ಆದರೆ ಇದರಲ್ಲಿ ಎಷ್ಟೊಂದು ಬಣ್ಣಗಳಿವೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ? ನನಗೆ ಯಾವ ಬಣ್ಣ ಸೂಟ್ ಆಗುತ್ತದೆ?’
ಶಾಪಿಂಗ್ ಮಾಡುವಾಗ ಸಾಮಾನ್ಯವಾಗಿ ನಾವೆಲ್ಲ ಹೇಳಿಕೊಳ್ಳುವ ಮಾತಿದು. ಬಟ್ಟೆಯ ಬಣ್ಣದ ಆಯ್ಕೆಯ ಗೊಂದಲ ಹಲವರನ್ನು, ಅದರಲ್ಲೂ ಹೆಣ್ಣುಮಕ್ಕಳನ್ನು ಸದಾ ಕಾಡುತ್ತದೆ. ಏಕೆಂದರೆ, ಎಷ್ಟೋ ಜನರಿಗೆ ಅವರು ಇಷ್ಟಪಡುವ ಬಣ್ಣಗಳು ಹಾಗೂ ಅವರಿಗೆ ಒಪ್ಪುವ ಬಣ್ಣಗಳು ಒಂದೇ ಆಗಿರುವುದಿಲ್ಲ.
ಯಾರಿಗೆ ಯಾವ ಬಣ್ಣದ ಬಟ್ಟೆ ಸರಿಯಾಗಿ ಹೊಂದುತ್ತದೆ ಎಂಬುದಕ್ಕೆ ಜಗತ್ತಿನಲ್ಲಿ ಹಲವು ಥಿಯರಿಗಳಿವೆ. ಚರ್ಮದ ಬಣ್ಣದ ಆಧಾರದ ಮೇಲೆ ಬಟ್ಟೆಯ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವ ‘ಸ್ಕಿನ್‌ಟೋನ್’ ವಿಧಾನ ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿದೆ ಮತ್ತು ಅನೇಕರು ಅದನ್ನು ಪಾಲಿಸುತ್ತಾರೆ. ಆದರೆ ನಿಮಗೆ ಗೊತ್ತೇ? ‘ಅಂಡರ್‌ಟೋನ್’ ಅಥವಾ ಚರ್ಮದ ಒಳಪದರದ ಆಧಾರದ ಮೇಲೆಯೂ ನಮಗೆ ಒಪ್ಪುವಂತಹ ಬಣ್ಣದ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳುವ ಹೊಸ ವಿಧಾನ ಇತ್ತೀಚೆಗೆ ಮುನ್ನೆಲೆಗೆ ಬಂದಿದೆ. ಅದರ ಪ್ರಕಾರ, ನಮ್ಮ ಚರ್ಮದ ಒಳಪದರವನ್ನು ವಾರ್ಮ್, ಕೂಲ್ ಮತ್ತು ನ್ಯೂಟ್ರಲ್ ಎಂದು ಮೂರು ವಿಧಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ನೀವು ಯಾವ ವಿಧಕ್ಕೆ ಸೇರುತ್ತೀರಿ ಎಂಬುದನ್ನು ತಿಳಿದುಕೊಳ್ಳುವುದು ಸುಲಭ. ಅದಕ್ಕಾಗಿ ಸಣ್ಣ ಪರೀಕ್ಷೆಗಳು ಇಲ್ಲಿವೆ:
1. ಮಣಿಕಟ್ಟಿನ ಮೇಲೆ ಕಾಣುವ ರಕ್ತನಾಳಗಳ ಬಣ್ಣದಿಂದ ನಿಮ್ಮ ಚರ್ಮದ ಒಳಪದರದ ವಿಧವನ್ನು ತಿಳಿದುಕೊಳ್ಳಬಹುದು. ರಕ್ತನಾಳಗಳು ಹಸಿರು ಬಣ್ಣದಲ್ಲಿದ್ದರೆ ‘ವಾರ್ಮ್’, ನೀಲಿಯಾಗಿದ್ದರೆ ‘ಕೂಲ್’, ಹಸಿರು ಮತ್ತು ನೇರಳೆ ಬಣ್ಣದಲ್ಲಿದ್ದರೆ ‘ನ್ಯೂಟ್ರಲ್’ ಟೋನ್.
2. ಬಿಸಿಲಿನಲ್ಲಿ ಕನಿಷ್ಠ 15 ನಿಮಿಷ ಇದ್ದಾಗ ನಿಮ್ಮ ಚರ್ಮದ ಬಣ್ಣವು ಗುಲಾಬಿ ಬಣ್ಣಕ್ಕೆ ತಿರುಗಿದರೆ ಕೂಲ್, ಕಂದು ಬಣ್ಣಕ್ಕೆ ತಿರುಗಿದರೆ ವಾರ್ಮ್ ಹಾಗೂ ಎರಡೂ ರೀತಿಯಾಗಿ ಕಂಡುಬಂದರೆ ನ್ಯೂಟ್ರಲ್ ಟೋನ್ ಎಂಬುದು ಗೊತ್ತಾಗುತ್ತದೆ.
ಯಾವ ಟೋನ್‌ಗೆ ಯಾವ ಬಣ್ಣ?
ಕೂಲ್– ತಿಳಿ ಗುಲಾಬಿ, ಗುಲಾಬಿ, ನೀಲಿ, ತಿಳಿ ಹಸಿರು, ಕೆಂಪು, ಕ್ರೀಮ್ ಅಥವಾ ಆಫ್ ವೈಟ್, ಕಪ್ಪು, ನೇರಳೆ, ಲ್ಯಾವೆಂಡರ್ ಸೇರಿದಂತೆ ಹಲವು ಬಣ್ಣಗಳು ಕೂಲ್ ಸ್ಕಿನ್‌ಟೋನ್‌ಗೆ ಹೊಂದುತ್ತವೆ. ಇದು ಬೇಡ– ಗಾಢ ಹಳದಿ, ಕಿತ್ತಳೆ, ಬ್ರೌನ್ ಹಾಗೂ ಚಿನ್ನದ ಬಣ್ಣದ ಬಟ್ಟೆ.
ವಾರ್ಮ್– ಗಾಢ ನೀಲಿ, ಹಳದಿ, ಕೆಂಪು, ಕಿತ್ತಳೆ ಹಾಗೂ ಗಾಢ ನೇರಳೆ ವಾರ್ಮ್ ಸ್ಕಿನ್‌ಟೋನ್‌ಗೆ ಒಪ್ಪುತ್ತವೆ. ಇದು ಬೇಡ– ತಿಳಿ ನೀಲಿ, ತಿಳಿ ಹಸಿರು, ಗಾಢ ಬಿಳಿ ಹಾಗೂ ತಿಳಿ ಬೂದು.
ನ್ಯೂಟ್ರಲ್– ಕಪ್ಪು, ಬಿಳಿ, ಬೂದು, ಕಡು ನೀಲಿ, ಕಂದು, ಆಲಿವ್ ಗ್ರೀನ್ ಹಾಗೂ ಕ್ರೀಮ್ ಬಣ್ಣಗಳ ಎಲ್ಲ ಶೇಡ್‌ಗಳು ಈ ಸ್ಕಿನ್‌ಟೋನ್‌ನವರಿಗೆ ಒಪ್ಪುತ್ತವೆ. ಇದು ಬೇಡ– ಗಾಢ ಹಳದಿ, ಕೆಂಪು, ನೀಲಿ ಹಾಗೂ ಇತರ ಯಾವುದೇ ಅತಿಯಾದ ಗಾಢ ಬಣ್ಣಗಳು.
ಕಣ್ಣು ಮತ್ತು ಕೂದಲಿನ ಬಣ್ಣದ ಆಧಾರದ ಮೇಲೆಯೂ ಬಟ್ಟೆಯ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವ ವಿಧಾನವಿದೆ. ಅಷ್ಟೇ ಏಕೆ ಹುಟ್ಟಿದ ದಿನಾಂಕ, ವಾರ, ನಕ್ಷತ್ರ ಸೇರಿದಂತೆ ಜಾತಕದ ಆಧಾರದ ಮೇಲೆ ಸಹ ಕೆಲವರು ಅದೃಷ್ಟದ ಬಣ್ಣದ ಬಟ್ಟೆ ಧರಿಸುವುದು ರೂಢಿಯಲ್ಲಿದೆ.
ಆದರೆ ಅಂತಿಮವಾಗಿ, ಇವೆಲ್ಲವೂ ತರ್ಕಗಳಷ್ಟೆ. ಇವನ್ನು ಅನುಸರಿಸುವುದು ಅಥವಾ ಬಿಡುವುದು ನಿಮ್ಮ ವೈಯಕ್ತಿಕ ಆಯ್ಕೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಸುಂದರ. ಎಲ್ಲರ ಬಣ್ಣವೂ ಚೆಂದವೆ. ಎಲ್ಲರಿಗೂ ತಮಗೆ ಬೇಕಾದ ಬಟ್ಟೆಗಳನ್ನು ಧರಿಸುವ ಸ್ವಾತಂತ್ರ್ಯ ಮತ್ತು ಹಕ್ಕಿದೆ. ಇದರ ಜೊತೆಗೆ, ಆಂತರಿಕ ಸೌಂದರ್ಯವೇ ಎಲ್ಲಕ್ಕಿಂತ ಮುಖ್ಯ ಎಂಬುದನ್ನು ನಾವು ಮರೆಯಬಾರದು.