ADVERTISEMENT

ಸೌಂದರ್ಯ: ಕೂದಲ ಎಳೆಗಳಲ್ಲಿ ಕಾಮನಬಿಲ್ಲು!

ವನಿತಾ ಜೈನ್
Published 29 ಜುಲೈ 2022, 19:30 IST
Last Updated 29 ಜುಲೈ 2022, 19:30 IST
   

ಮೊದಲೆಲ್ಲ ಬಿಳಿ ಕೂದಲು ಕಾಣಿಸಿಕೊಂಡರೆ ಆತಂಕಕ್ಕೆ ಒಳಗಾಗಿ ಕಪ್ಪು ಬಣ್ಣದ ಹೇರ್‌ ಡೈಯಿಂಗ್‌ ಮಾಡಿಕೊಳ್ಳುತ್ತಿದ್ದರು. ಈಗೆಲ್ಲ ಹೇರ್‌ ಡೈಯಿಂಗ್‌ ಮಾಡಿಕೊಳ್ಳೋಕೆ ಬಿಳಿ ಕೂದಲು ಬರೋವರೆಗೂ ಕಾಯಬೇಕಾಗಿಲ್ಲ. ಕೂದಲು ಯಾವತ್ತು ಕಪ್ಪಾಗೇ ಇರಲಿ ಅಂತ ಊಟದಲ್ಲಿ ಕರಿಬೇವನ್ನು ಹುಡುಕಿ ಹುಡುಕಿ ತಿನ್ನಿಸುತ್ತಿದ್ದ ಕಾಲವೂ ಹೋಯ್ತು. ಕಪ್ಪು ಕೂದಲಿಗೆ ತರಹೇವಾರಿ ಬಣ್ಣಗಳು ಸೇರಿ ತಲೆಯಲ್ಲೊಂದು ಕಾಮನಬಿಲ್ಲು ಮೂಡಿದಂತೆ ಕಂಡರೆ ಆಶ್ಚರ್ಯವಿಲ್ಲ.

ಹಿಂದೆಲ್ಲ ಮೆಹಂದಿ ಸೊಪ್ಪನ್ನು ಅರೆದು ಹಚ್ಚಿಕೊಳ್ಳುತ್ತಿದ್ದರು. ಕರಿಬೇವಿನ ಪುಡಿ, ಒಣಗಿಸಿ ಪುಡಿ ಮಾಡಿದ ದಾಸವಾಳ ಎಲೆಗಳ ಮಿಶ್ರಣವನ್ನು ಮೆಹಂದಿ ಪುಡಿಗೆ ಸೇರಿಸಿಯೂ ಹಚ್ಚಲಾಗುತ್ತಿತ್ತು. ಈಗಲೂ ಈ ಸಾಂಪ್ರಾದಾಯಿಕ ಶೈಲಿಯ ಹೇರ್‌ ಕಲರಿಂಗ್‌ ಮುಂದುವರಿದಿದೆ.

ಹೇರ್‌ಕಲರಿಂಗ್‌ನಲ್ಲಿಯೂ ಎರಡು ವಿಧಗಳಿವೆ. ಒಂದು ಸಸ್ಯಜನ್ಯ ಕಲರಿಂಗ್‌ ಮತ್ತೊಂದು ಸಿಂಥಟಿಕ್‌ ಕಲರಿಂಗ್‌ (ರಾಸಾಯನಿಕ ಆಧಾರಿತ). ಶಾಶ್ವತವಾಗಿಯೂ ಹೇರ್‌ ಕಲರಿಂಗ್‌ನ ಮೊರೆ ಹೋಗಬಹುದು. ಆಯಾ ಕಾಲಕ್ಕೆ ಬೇಕಾದ ಹಾಗೆ ತಾತ್ಕಲಿಕವಾಗಿಯೂ ಕಲರಿಂಗ್‌ ಮಾಡಿಸಿಕೊಳ್ಳಬಹುದು. ಬ್ಲಂಡ್, ಬಿಳಿ, ಕೆಂಪು, ಕಂದು ಮತ್ತು ಕಪ್ಪು ಈ ಐದು ಬಣ್ಣಗಳಲ್ಲಿ ಹೇರ್‌ ಕಲರಿಂಗ್‌ ಲಭ್ಯವಿದೆ. ಈ ಬಣ್ಣಗಳನ್ನು ಸ್ವಲ್ಪಮಟ್ಟಿಗೆ ಬದಲಾಯಿಸಿ ವಿಭಿನ್ನ ಬಣ್ಣಗಳು ಬರುವಂತೆ ಮಾಡಬಹುದು.

ADVERTISEMENT

ಯಾವ ಯಾವ ಬಣ್ಣಗಳಿವೆ: ಚಾಕಲೇಟ್ ಬ್ರೌನ್ , ಡಾರ್ಕ್ ಗೋಲ್ಡನ್ ಬ್ರೌನ್, ಮೀಡಿಯಂ ಆಶ್ ಬ್ರೌನ್, ರೆಡ್ಡಿಶ್ ಬ್ಲಂಡ್ , ಲೈಟ್ ಅಬರ್ನ್, ಮೀಡಿಯಮ್ ಅಬರ್ನ್, ರೆಡ್ ಹಾಟ್ ಸಿನಮನ್, ಎಕ್ಸ್ ಪ್ರೆಸ್ಸೋ, ಜೆಟ್ ಬ್ಲಾಕ್, ಕಾಟನ್ ಕ್ಯಾಂಡಿ ಹೀಗೆ ತರಹೇವಾರಿ ಬಣ್ಣಗಳು ಸದ್ಯಕ್ಕೆ ಟ್ರೆಂಡ್‌ನಲ್ಲಿವೆ. ಇವೆಲ್ಲವೂ ಸಾಮಾನ್ಯವಾಗಿ ಸಿಂಥೆಟಿಕ್ ಹೇರ್ ಕಲರಿಂಗ್ ಆಗಿರುತ್ತವೆ. ಮೈ ಬಣ್ಣಕ್ಕೆ ಅನುಗುಣವಾಗಿ ಹಾಕಿಕೊಂಡರೆ ಹೆಚ್ಚು ಒಪ್ಪವಾಗಿ ಕಾಣಬಹುದು.

ಚಾಲ್ತಿಯಲ್ಲಿರುವ ಟ್ರೆಂಡ್: ಪೂರ್ಣ ಕೂದಲಿಗೆ ಕಲರಿಂಗ್ ಮಾಡಿಸುವುದಕ್ಕಿಂತ ಕೆಲವು ಎಳೆಗಳಿಗೆ ಕಲರಿಂಗ್‌ ಮಾಡಿಸುವುದು ಹೆಚ್ಚು ಚೆನ್ನಾಗಿ ಕಾಣುತ್ತದೆ. ಮೇಲೆ ಎತ್ತಿ ಕಟ್ಟುವ ಜುಟ್ಟಿನ ಬುಡದಲ್ಲಿ ಒಂದು ಬಣ್ಣವಿದ್ದರೆ, ತುದಿಯಲ್ಲಿ ಮತ್ತೊಂದು ಬಣ್ಣವಿರುತ್ತದೆ. ಈ ಬಣ್ಣಗಳೆಲ್ಲ ಆಸಕ್ತಿಗೆ ಅನುಗುಣವಾಗಿರುತ್ತದೆ. ತುರುಬು ಕಟ್ಟಿದಾಗ ತುರುಬು ಮಧ್ಯೆ ಇಷ್ಟವಾದ ಬಣ್ಣ ಬರುವ ಹಾಗೆ ಕಲರಿಂಗ್ ಮಾಡಿಸಬಹುದು.

ಗ್ರೇ ಹೇರ್‌ಗೆ ಭಾರಿ ಬೇಡಿಕೆ: ಬಿಳಿ ಕೂದಲು ಬಂತೆಂದು ಮೂಗು ಮುರಿಯುವ ಹಾಗಿಲ್ಲ. ಸದ್ಯಕ್ಕೆ ಗ್ರೇ ಹೇರ್‌ ಕಲರಿಂಗ್‌ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿದೆ. ಕೂದಲಿನ ಕೆಲವು ಎಳೆಗಳನ್ನು ಗ್ರೇ ಮಾಡಿಸಿಕೊಂಡರೆ, ಇನ್ನು ಕೆಲವರು ಸಂಪೂರ್ಣ ಕೂದಲನ್ನು ಗ್ರೇ ಮಾಡಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಆಶ್ ಗ್ರೇ, ಗ್ರೇ ಒಮ್ರೇ, ಸಿಲ್ವರ್ ಗ್ರೇ, ಸಿಲ್ವರ್ ಹೇರ್ ಹೀಗೆ ಸಾಕಷ್ಟು ಬಗೆಗಳಿವೆ. ಬ್ಲಾಕ್‌ ಆ್ಯಂಡ್‌ ಗ್ರೇ ಬಣ್ಣಕ್ಕೆ ಸಾಲ್ಟ್‌ ಆ್ಯಂಡ್‌ ಪೆಪ್ಪರ್‌ ಬಣ್ಣದ ಮಿಶ್ರಣ ಎಂದೂ ಕರೆಯಲಾಗುತ್ತದೆ. ಹಾಗಾಗಿ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ.

ಮಹಿಳೆಯರು ಹೆಚ್ಚಾಗಿ ಬ್ಲ್ಯಾಕ್‌ನ್ಯಾಚುರಲ್‌ ಕಲರಿಂಗ್ ಇಷ್ಟಪಡುತ್ತಾರೆ. ಸ್ಪ್ಯಾನಿಂಗ್ ಪಿಂಕ್ , ಟರ್ಕ್ಯೂಸ್ ಮತ್ತು ನೇರಳೆ ಈ ಬಣ್ಣದ ಕಲರಿಂಗ್‌ ಅನ್ನು ಯುವತಿಯರು ಹೆಚ್ಚು ಬಳಸುತ್ತಾರೆ. ಇನ್ನು ಗ್ರೇ ಕಲರಿಂಗ್‌ ಎಲ್ಲರಿಗೂ ಅಚ್ಚುಮೆಚ್ಚು. ಈ ಕಲರ್‌ ಮಾಡಿಸಿಕೊಳ್ಳುವವರು ಬೇಡವೆನಿಸಿದಾಗ ಸುಲಭವಾಗಿ ಬೇರೆ ಬಣ್ಣಗಳ ಮೊರೆ ಹೋಗಬಹುದು.

ಕಾಲಕ್ಕೆ ತಕ್ಕಂತೆ ಕಲರಿಂಗ್‌: ಕೂದಲು ಬಣ್ಣಗಳನ್ನು ಚಳಿ, ಬೇಸಿಗೆ, ಮಳೆಗಾಲಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳಬಹುದು. ಸಾಮಾನ್ಯವಾಗಿ ಬೇಸಿಗೆಯ ಸಮಯದಲ್ಲಿ ವೈಟ್ ಗೋಲ್ಡ್ ಶೇಡ್ ಆಫ್ ಪ್ಲಾಟಿನಂ , ಟೈಗರ್ಸ್ ಐ ಬ್ಲಂಡ್ ಹೇರ್ ಕಲರ್ ಬಳಸುವುದರಿಂದ ಅಂದ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.