ಪ್ರಾತಿನಿಧಿಕ ಚಿತ್ರ
ನಡುನೆತ್ತಿ ಸುಡುವ ಬಿಸಿಲು ಹೆಚ್ಚಾಗುತ್ತಿದ್ದಂತೆ ಚರ್ಮದ ಕೋಶಗಳೆಲ್ಲ ಉಸಿರಾಡಬೇಕೆನ್ನುತ್ತವೆ. ಬೆವರ ಹನಿಗಳು ಮುತ್ತಿನ ಮಾಲೆಯಾಗಿ ಚರ್ಮವನ್ನಲಂಕರಿಸುವಾಗ ವಸ್ತ್ರವೈರಾಗ್ಯ ಮೂಡುವುದು ಸಹಜ. ಬೇಸಿಗೆಯ ಬೇಗೆಯನ್ನು ಹೀರಿ, ಆರಾಮದಾಯಕ ಅನುಭವ ನೀಡಬಲ್ಲ ವಸ್ತ್ರಗಳ ಆಯ್ಕೆ ಮಾಡುವುದು ಹೇಗೆ?
ಬಿಸಿಲನ್ನು ಹೀರಿಕೊಳ್ಳುವಂಥ ಜವಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಗಾಳಿಯಾಡಬಹುದಾದ ಹತ್ತಿಯ ಉಡುಪುಗಳು, ಆಫೀಸಿಗೆ ಹೋಗುವಾಗ ಧರಿಸಲು ತಿಳಿಬಣ್ಣದ ಲೆನಿನ್‌ಗಳು ಉತ್ತಮ ಆಯ್ಕೆಯಾಗಿವೆ.
ಖಾದಿವಸ್ತ್ರವನ್ನೂ ಧರಿಸಬಹುದಾಗಿದೆ. ಖಾದಿ ಜೊತೆಗೆ ಮಸ್ಲಿನ್ ಸಹ ಆರಾಮದಾಯಕವಾಗಿರುತ್ತದೆ. ಬೆವರನ್ನು ಹೀರುವ, ಗಾಳಿಯಾಡಲು ಸುಲಭವಾಗುವಂಥ ನೇಯ್ಗೆ ಇರುವ ಬಟ್ಟೆಗಳನ್ನು ಖರೀದಿಸುವುದು ನಿಮ್ಮ ಆಯ್ಕೆಯಾಗಿರಲಿ.
ದೊಗಲೆಯಾದಷ್ಟೂ ಆರಾಮ: ಬೇಸಿಗೆಯ ಉಡುಗೆಗಳು ಚರ್ಮಕ್ಕೆ ಅಂಟಿಕೊಳ್ಳುವಂತಿರದೆ ದೊಗಳೆಯಾಗಿರಬೇಕು. ಗಾಳಿಯಾಡಲು ಅವಕಾಶ ಇರುವಂತಿರಬೇಕು. ಚರ್ಮ ಬಿಸಿಲುಣ್ಣುವಂಥ ಉಡುಗೆಗಳನ್ನೂ ಧಾರಾಳವಾಗಿ ಆಯ್ಕೆ ಮಾಡಿಕೊಳ್ಳಬಹುದು. ಆದರೆ ನಡುಮಧ್ಯಾಹ್ನ ಮತ್ತು ಬಿರುಬಿಸಿಲಿನಲ್ಲಿ ಓಡಾಡುವ ಸಂದರ್ಭ ಇದ್ದಲ್ಲಿ ತೆಳುವಾದ ಮೈ ಮುಚ್ಚುವ ಉಡುಗೆಗಳನ್ನೇ ಆಯ್ಕೆ ಮಾಡಿಕೊಳ್ಳಿ. ಇಳಿ ಸಂಜೆ, ಸವಿಬೆಳಗಿನ ಹೊತ್ತಿಗೆ ಚರ್ಮಕ್ಕೆ ಬಿಸಿಲು ತಾಕುವಂಥ ಉಡುಗೆಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು.
ಬಿಳಿ–ತಿಳಿಬಣ್ಣಗಳಿರಲಿ: ತಿಳಿನೀಲಿ, ತಿಳಿಗುಲಾಬಿ, ತಿಳಿಹಳದಿ, ತಿಳಿಹಸಿರು, ನಿಂಬೆ ಹಳದಿ, ನಿಂಬೆ ಹಸಿರು ಇವೆಲ್ಲವೂ ಬೇಸಿಗೆಯ ಬಣ್ಣಗಳಾಗಿವೆ.
ಬಿಸಿಲಿನಲ್ಲಿ ಉಡುಪಿನ ಬಣ್ಣ ನೋಡಿದಾಗಲೇ ಶಾಂತವೆನಿಸುವಂಥ, ಹೊರಗಿನ ತಾಪ, ಒಳಗುದಿಗಳನ್ನೆಲ್ಲ ಸೆಳೆದಿಡುವಂಥ ಬಣ್ಣಗಳು ಇವಾಗಿವೆ. ಬಿಳಿ ಬಣ್ಣದ ಹಿನ್ನೆಲೆಯಲ್ಲಿ ಹೂ ಬಳ್ಳಿಗಳ ಪ್ರಿಂಟ್ ಇರುವ ವಸ್ತ್ರಗಳನ್ನು ಧಾರಾಳವಾಗಿ ಆಯ್ಕೆ ಮಾಡಿಕೊಳ್ಳಬಹುದು.
ಗಾಢ ಬಣ್ಣಗಳ ವಸ್ತ್ರಗಳು ಬಿಸಿಲಿನ ತಾಪ ಹೀರಿ ಇನ್ನಷ್ಟು ಸೆಕೆಯ ಅನುಭವ ನೀಡುವುದರಿಂದ ತಿಳಿ ಬಣ್ಣಗಳ ಆಯ್ಕೆ ಒಳಿತು.
ವಸ್ತ್ರಗಳ ಆಯ್ಕೆ: ಚಂದದ ಫ್ರಾಕುಗಳು, ಸ್ಕರ್ಟುಗಳು, ಬ್ಯಾಗಿ ಪ್ಯಾಂಟುಗಳು, ಪಲಾಝೋಗಳು, ಶಾರ್ಟ್ಸ್‌ಗಳು, ಉದ್ದನೆಯ ಕ್ಯಾಮಿಸೋಲ್‌ಗಳು, ಫ್ರಿಲ್ಸ್‌ಗಳು ಇವನ್ನೆಲ್ಲ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಬೇಸಿಗೆಯನ್ನೂ ಹಿತವಾಗಿ ಕಳೆಯಬೇಕೆಂದರೆ, ಆಹ್ಲಾದಕರವೆನಿಸಬೇಕಾದರೆ ಪ್ರಕೃತಿಯ ಪ್ರಿಂಟ್ ಇರುವ ವಸ್ತ್ರಗಳು ನಿಮ್ಮ ಸಂಗ್ರಹದಲ್ಲಿ ಹೆಚ್ಚಾಗಲಿ. ಸೀರೆ ಉಡುವವರು ಬಂಗಾಲಿ ಕಾಟನ್, ಮಾಹೇಶ್ವರಿ, ಗದ್ವಾಲ್, ಕಂಚಿ, ಕೊಯಮತ್ತೂರು, ಮಧುರೈ ಕಾಟನ್ ಸೀರೆಗಳನ್ನು ತಮ್ಮ ಸಂಗ್ರಹಕ್ಕೆ ಸೇರಿಸಬಹುದಾಗಿದೆ. ಜರಿ ಇಲ್ಲದ, ನೂಲಿನ ಅಂಚು, ಸೆರಗು ಇರುವ ಸೀರೆಗಳು ಕಣ್ಣಿಗೆ ಹಿತವಾಗಿರುತ್ತವೆ. ಮೈಮನಗಳಿಗೆ ಮುದ ನೀಡುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.