ADVERTISEMENT

ಆಮದು ನಿರ್ಬಂಧಿಸಿದರೂ ಅಡಿಕೆ ಧಾರಣೆ ಕುಸಿತ!

ಹೆಚ್ಚುತ್ತಿರುವ ಬೆಳೆ ಪ್ರದೇಶ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ

ಚಂದ್ರಹಾಸ ಹಿರೇಮಳಲಿ
Published 11 ಜೂನ್ 2018, 19:30 IST
Last Updated 11 ಜೂನ್ 2018, 19:30 IST
ಅಡಿಕೆ
ಅಡಿಕೆ   

ಶಿವಮೊಗ್ಗ: ಕೇಂದ್ರ ಸರ್ಕಾರ ಆಮದು ಅಡಿಕೆಯ ಮೇಲೆ ₹ 25,100 (ಪ್ರತಿ ಕ್ವಿಂಟಲ್‌ಗೆ) ಸುಂಕ ವಿಧಿಸಿ, ನಿರ್ಬಂಧಿಸಿದರೂ ಸ್ಥಳೀಯ ಧಾರಣೆ ಮಾತ್ರ ನಿರಂತರವಾಗಿ ಕುಸಿಯುತ್ತಿದೆ.

ಎರಡು ವರ್ಷಗಳಿಂದ ₹ 38 ಸಾವಿರದಿಂದ ₹ 42 ಸಾವಿರದ ಅಸುಪಾಸಿನಲ್ಲಿದ್ದ ಧಾರಣೆ ಒಂದು ವಾರದಿಂದ ಕುಸಿಯುತ್ತಾ ಸಾಗಿದ್ದು, ಈಗ ₹ 34 ಸಾವಿರಕ್ಕೆ ಬಂದು ನಿಂತಿದೆ.

ನಾಲ್ಕು ವರ್ಷಗಳ ಹಿಂದೆ ಅಡಿಕೆ ಧಾರಣೆ ₹ 1 ಲಕ್ಷಕ್ಕೆ ತಲುಪಿತ್ತು. ಆ ವರ್ಷ ರೈತರು ಅಡಿಕೆ ಸಂಗ್ರಹಿಸದೇ ಮಾರಾಟ ಮಾಡಿದ್ದ ಕಾರಣ ವ್ಯಾಪಾರಿಗಳಿಗೆ ಮಾತ್ರ ಅದರ ಲಾಭ ದೊರಕಿತ್ತು. ನಂತರದ ದಿನಗಳಲ್ಲಿ ಧಾರಣೆ ಕುಸಿಯಲು ಆರಂಭಿಸಿದ್ದು, ಇದುವರೆಗೂ ₹ 50 ಸಾವಿರದ ಗಡಿ ದಾಟಿಲ್ಲ.

ADVERTISEMENT

ಧಾರಣೆ ಕುಸಿಯಲು ಶ್ರೀಲಂಕಾ, ಮಲೇಷ್ಯಾ ಸೇರಿದಂತೆ ಹೊರ ದೇಶಗಳಿಂದ ಆಮದಾಗುವ ಕಳಪೆ ಗುಣಮಟ್ಟದ ಅಡಿಕೆ ಕಾರಣ. ಅಲ್ಲಿ ಅಗ್ಗವಾಗಿ ದೊರೆಯುವ ಅಡಿಕೆಯನ್ನು ಭಾರತಕ್ಕೆ ತಂದು ಸ್ಥಳೀಯ ಅಡಿಕೆ ಜತೆ ಮಿಶ್ರಣ ಮಾಡಿ ಬಳಸಲಾಗುತ್ತಿದೆ. ಹೀಗಾಗಿ, ಆಮದು ಅಡಿಕೆಯ ಮೇಲೆ ದುಬಾರಿ ಸುಂಕ ವಿಧಿಸಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ರಾಜ್ಯದ ಅಡಿಕೆ ಮಾರಾಟ ಸಹಕಾರ ಸಂಘಗಳು, ಬೆಳೆಗಾರರು ಒತ್ತಡ ಹಾಕಿದ್ದರು.

ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ 2017ರ ಜನವರಿಯಿಂದ ಜಾರಿಗೆ ಬರುವಂತೆ ಆಮದಾಗುವ ಪ್ರತಿ ಕೆ.ಜಿ. ಅಡಿಕೆಯ ಮೇಲೆ ₹ 251 ಸುಂಕ ನಿಗದಿ ಮಾಡಿತ್ತು.

ಬೆಂಬಲ ಬೆಲೆಯೂ ವಿಫಲ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳೆಯುವ ಅಡಿಕೆಯನ್ನು ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆ ಅಡಿ ಖರೀದಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿತ್ತು. ಮಧ್ಯವರ್ತಿಗಳಿಗೆ ಅವಕಾಶ ನೀಡದೇ ರಾಜ್ಯದ ಅಡಿಕೆ ಸಹಕಾರ ಸಂಘಗಳ ಮೂಲಕ ನೇರವಾಗಿ ಅಡಿಕೆ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ರಾಜ್ಯ ಸರ್ಕಾರಕ್ಕೆ ಖರೀದಿಯ ಮೇಲುಸ್ತುವಾರಿ ನೀಡಲಾಗಿತ್ತು. ಆದರೆ, ಎರಡು ವರ್ಷಗಳಾದರೂ ಬೆಂಬಲ ಬೆಲೆ ಯೋಜನೆ ಕಾರ್ಯಗತವಾಗಿಲ್ಲ.

ರೈತರ ಬಳಿ 3 ವರ್ಷಗಳ ಸಂಗ್ರಹ: ಅಡಿಕೆ ಧಾರಣೆ ₹ 1 ಲಕ್ಷದ ಹೊಸ್ತಿಲು ಮುಟ್ಟಿ ಬಂದ ನಂತರ ಕಡಿಮೆ ಧಾರಣೆಗೆ ಅಡಿಕೆ ಮಾರಾಟ ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಸಾವಿರಾರು ರೈತರು ಎರಡು ಮೂರು ವರ್ಷಗಳಿಂದ ಅಡಿಕೆ ಮಾರಾಟ ಮಾಡದೇ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.

‘ಆವಕ ಗಣನೀಯವಾಗಿ ಸಂಗ್ರಹ ಆಗುತ್ತಿರುವುದನ್ನು ಅರಿತಿರುವ ವ್ಯಾಪಾರಿಗಳು ಧಾರಣೆ ಹೆಚ್ಚಿಸಲು ಮುಂದಾಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಮಧ್ಯವರ್ತಿಗಳ ಮೂಲಕ ಚಿಲ್ಲರೆ ವ್ಯವಹಾರ ನಡೆಸಿ, ಅಗತ್ಯ ಇರುವಷ್ಟು ಅಡಿಕೆ ಸಂಗ್ರಹಿಸಲಾಗುತ್ತಿದೆ. ಜಿಎಸ್‌ಟಿ ಬಂದ ನಂತರ ಚೆಕ್‌ಪೋಸ್ಟ್‌ಗಳನ್ನು ತೆರವು ಮಾಡಿರುವುದು ತೆರಿಗೆ ವಂಚಿಸಿ, ಸಾಗಿಸಲು ದಾರಿಮಾಡಿಕೊಟ್ಟಿದೆ. ಈ ಎಲ್ಲ ಕಾರಣಗಳು ಅಡಿಕೆ ಧಾರಣೆ ಹೆಚ್ಚಳಕ್ಕೆ ಅಡ್ಡಿಯಾಗಿವೆ’ ಎಂದು ವಿಶ್ಲೇಷಿಸುತ್ತಾರೆ ಶಿವಮೊಗ್ಗ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಕಡಿದಾಳ್ ಗೋಪಾಲ್.

ಬೆಳೆ ಕ್ಷೇತ್ರ ವಿಸ್ತರಣೆ: ರಾಜ್ಯದಲ್ಲಿ ಪ್ರತೀ ವರ್ಷ 4 ಲಕ್ಷ ಟನ್‌ ಅಡಿಕೆ ಉತ್ಪಾದಿಸಲಾಗುತ್ತಿದೆ. ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯಲಾಗುತ್ತದೆ. ಉಳಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಕೆಲ ಭಾಗಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಬೆಳೆಯುವ ಶೇ 60ಕ್ಕೂ ಹೆಚ್ಚು ಅಡಿಕೆ ದಾವಣಗೆರೆ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿ 52 ಸಾವಿರ ಹೆಕ್ಟೇರ್ ಅಡಿಕೆ ತೋಟವಿದೆ. ವರ್ಷಕ್ಕೆ ಸರಾಸರಿ 75 ಸಾವಿರ ಟನ್‌ ಅಡಿಕೆ ಉತ್ಪಾದನೆಯಾಗುತ್ತದೆ. ರಾಜ್ಯದ ಉತ್ಪಾದನೆಯ ಶೇ 24ರಷ್ಟು ಜಿಲ್ಲೆಯಲ್ಲೇ ಬೆಳೆಯಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಅಡಿಕೆ ಬೆಳೆ ಕ್ಷೇತ್ರ ಹೆಚ್ಚುತ್ತಲೇ ಇದೆ. ಇದು ಬೇಡಿಕೆ ಮತ್ತು ಪೂರೈಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಧಾರಣೆ ಕುಸಿತಕ್ಕೆ ದಾರಿಯಾಗುತ್ತಿದೆ.

**

ಬೆಳೆ ಕ್ಷೇತ್ರ ವಿಸ್ತರಣೆ

ರಾಜ್ಯದಲ್ಲಿ ಪ್ರತೀ ವರ್ಷ 4 ಲಕ್ಷ ಟನ್‌ ಅಡಿಕೆ ಉತ್ಪಾದಿಸಲಾಗುತ್ತಿದೆ. ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯಲಾಗುತ್ತದೆ. ಉಳಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಕೆಲ ಭಾಗಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಬೆಳೆಯುವ ಶೇ 60ಕ್ಕೂ ಹೆಚ್ಚು ಅಡಿಕೆ ದಾವಣಗೆರೆ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿ 52 ಸಾವಿರ ಹೆಕ್ಟೇರ್ ಅಡಿಕೆ ತೋಟವಿದೆ. ವರ್ಷಕ್ಕೆ ಸರಾಸರಿ 75 ಸಾವಿರ ಟನ್‌ ಅಡಿಕೆ ಉತ್ಪಾದನೆಯಾಗುತ್ತದೆ. ರಾಜ್ಯದ ಉತ್ಪಾದನೆಯ ಶೇ 24ರಷ್ಟು ಜಿಲ್ಲೆಯಲ್ಲೇ ಬೆಳೆಯಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಅಡಿಕೆ ಬೆಳೆ ಕ್ಷೇತ್ರ ಹೆಚ್ಚುತ್ತಲೇ ಇದೆ. ಇದು ಬೇಡಿಕೆ ಮತ್ತು ಪೂರೈಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಧಾರಣೆ ಕುಸಿತಕ್ಕೆ ದಾರಿಯಾಗುತ್ತಿದೆ.

**

ಬೆಳೆಗಾರರಿಗೆ ತೆರಿಗೆಯೂ ಭಾರ

ಜಿಎಸ್‌ಟಿ ಜಾರಿಗೆ ಬಂದ ನಂತರ ಅಡಿಕೆ ಮಾರಾಟದ ಮೇಲೆ ಶೇ 5ರಷ್ಟು ತೆರಿಗೆ ವಿಧಿಸಲಾಗುತ್ತದೆ. ಅಲ್ಲದೇ, ಶೇ 1.5ರಷ್ಟು ಕೃಷಿ ಉತ್ಪನ್ನ ಮಾರುಕಟ್ಟೆ ಸೆಸ್ ಕಟ್ಟಬೇಕು. ಇದರಿಂದ ರೈತರು ಮಾರುಕಟ್ಟೆಯ ಬದಲು ಸ್ಥಳೀಯವಾಗಿ ಮಾರಾಟ ಮಾಡಲು ಒಲವು ತೋರುತ್ತಿದ್ದಾರೆ.

‘ಎಲ್ಲ ರೈತರೂ ಸಹಕಾರ ಸಂಘಗಳು ಅಥವಾ ಮಾರುಕಟ್ಟೆಯ ಮೂಲಕವೇ ಮಾರಾಟ ಮಾಡಬೇಕು. ಆಗ ಮಾತ್ರ ಸಂಗ್ರಹ ಇರುವ ಅಡಿಕೆ ಎಷ್ಟು,ಬೇಡಿಕೆ ಎಷ್ಟಿದೆ ಎಂದು ಖಚಿತವಾಗಿ ಲೆಕ್ಕಮಾಡಿ, ಬೆಲೆ ಏರಿಳಿತ ಅಂದಾಜಿಸಬಹುದು. ರೈತರು ಅಧಿಕೃತ ವ್ಯಾಪಾರಕ್ಕೆ ಮನಸ್ಸು ಮಾಡುವವರೆಗೂ ಈ ಸಮಸ್ಯೆ ತಪ್ಪಿಸಲು ಸಾಧ್ಯವಿಲ್ಲ’ ಎನ್ನುತ್ತಾರೆ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.