ADVERTISEMENT

ಇನ್ಫೊಸಿಸ್‌ಗೆ ಚಂದ್ರಶೇಖರ್‌ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ):  ಹಿರಿಯ ಶ್ರೇಣಿಯ ಇನ್ನೊಬ್ಬ ಅಧಿಕಾರಿ ಇನ್ಫೊಸಿಸ್‌ ತೊರೆದಿದ್ದಾರೆ. ಕಂಪೆನಿಯ ಭಾರತದ ವ್ಯವಹಾರ ಘಟಕದ ಮುಖ್ಯಸ್ಥ­ರಾಗಿದ್ದ ಚಂದ್ರಶೇಖರ್‌ ಕಾಕಲ್‌  ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಎನ್‌.ಆರ್‌. ನಾರಾಯಣಮೂರ್ತಿ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮರು ನೇಮಕಗೊಂಡ ನಂತರ (ಜೂನ್‌ನಲ್ಲಿ) ಇನ್ಫೊಸಿಸ್‌ ತೊರೆಯುತ್ತಿರುವ ಉನ್ನತ ಶ್ರೇಣಿಯ ಅಧಿಕಾರಿಗಳ ಸಂಖ್ಯೆ ಈ ಮೂಲಕ 9ಕ್ಕೆ ಏರಿಕೆ ಕಂಡಿದೆ.

ಕಾಕಲ್‌, 1999ರಲ್ಲಿ ಇನ್ಫೊಸಿಸ್‌ ಸೇರಿದ್ದರು.  ಭಾರತದ ವ್ಯವಹಾರ ಘಟಕದ ಮುಖ್ಯಸ್ಥ ಹುದ್ದೆಯ ಜತೆ ಅವರು ಅಪ್ಲಿಕೇಷನ್‌ ಅಭಿವೃದ್ಧಿ ಮತ್ತು ಮೂಲಸೌಕರ್ಯ ನಿರ್ವಹಣೆ ಜವಾ­ಬ್ದಾ­ರಿಯನ್ನೂ ನಿಭಾಯಿ­ಸುತ್ತಿದ್ದರು.

‘ಕಂಪೆನಿಯ ಹಿರಿಯ ಉಪಾಧ್ಯಕ್ಷ ಮತ್ತು ಕಾರ್ಯ­ಕಾರಿ ಮಂಡಳಿಯ ಸದಸ್ಯರಾಗಿದ್ದ ಚಂದ್ರಶೇಖರ್‌ ಕಾಕಲ್ ಮಾ.19ರಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಏ.18­ರಿಂದ ಇದು ಜಾರಿಗೆ ಬರಲಿದೆ’ ಎಂದು ಇನ್ಫೊಸಿಸ್‌, ಅಮೆರಿಕದ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಎಸ್‌ಇಸಿ) ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ. 

2013ರ ಜುಲೈನಲ್ಲಿ ಇನ್ಫೊಸಿಸ್‌ನ ಜಾಗತಿಕ ಮಾರಾಟ ಮುಖ್ಯಸ್ಥ ಬಸಾಬ್‌ ಪ್ರಧಾನ್‌ ರಾಜೀನಾಮೆ ಸಲ್ಲಿಸಿದ್ದರು. ಜಾಗತಿಕ ತಯಾರಿಕಾ ವಿಭಾಗದ ಮುಖ್ಯಸ್ಥರಾಗಿದ್ದ ಅಶೋಕ್‌ ವೆಮೂರಿ  ಆಗಸ್ಟ್‌ನಲ್ಲಿ ರಾಜೀನಾಮೆ ಸಲ್ಲಿಸಿ, ಪ್ರತಿಸ್ಪರ್ಧಿ ಕಂಪೆನಿಯಾದ ಐಗೇಟ್‌ನಲ್ಲಿ  ‘ಸಿಇಒ’ ಆಗಿ ಸೇರಿದ್ದರು.

ಇನ್ಫೊಸಿಸ್‌ ಕನ್ಸಲ್ಟಿಂಗ್‌ನ ಸಹ ಸ್ಥಾಪಕ­ರಾ­ಗಿದ್ದ ಸ್ಟೀಫನ್‌ ಪಿ ನವೆಂಬರ್‌­ನಲ್ಲಿ ರಾಜೀನಾಮೆ ಸಲ್ಲಿಸಿ ಕಂಪೆನಿ ತೊರೆದಿದ್ದರು. ಸೆಪ್ಟೆಂಬರ್‌ನಲ್ಲಿ  ಕಂಪೆ­ನಿಯ ಆಸ್ಟ್ರೇಲಿಯಾದಲ್ಲಿನ ‘ಬಿಪಿಒ’ ಘಟಕದ ಮುಖ್ಯಸ್ಥರಾಗಿದ್ದ ಕಾರ್ತಿಕ್‌ ಜಯರಾಮನ್‌ ರಾಜೀ­ನಾಮೆ ಸಲ್ಲಿ­ಸಿದ್ದರು. 

1 ತಿಂಗಳ ಹಿಂದಷ್ಟೇ  ಅಮೆರಿಕ­ದಲ್ಲಿ ಕಂಪೆನಿಯ ಹಣಕಾಸು ಸೇವೆಗಳ ಮುಖ್ಯ­ಸ್ಥರಾಗಿದ್ದ ಸುಧೀರ್‌ ಚತು­ರ್ವೇದಿ ರಾಜೀನಾಮೆ ನೀಡಿದ್ದರು. ವೆಚ್ಚ ಕಡಿತಕ್ಕಾಗಿ ಮತ್ತು ದೊಡ್ಡ ಪ್ರಮಾ­ಣದ ಹೊರಗುತ್ತಿಗೆ (ಬಿಪಿಒ) ಯೋಜನೆ­ಗಳನ್ನು ಪಡೆಯಲು, ನಾರಾ­ಯಣ­­­ಮೂರ್ತಿ ಅವರು ಕಂಪೆನಿಯ ಆಡ­ಳಿತ­ದಲ್ಲಿ ದೊಡ್ಡ ಮಟ್ಟದ ಬದಲಾ­ವ­ಣೆ­ಗಳ­ನ್ನು ಮಾಡುತ್ತಿ­ರುವುದು ಹಿರಿಯ  ಅಧಿ­ಕಾ­ರಿಗಳ ಅಸ­ಮಾ­ಧಾನಕ್ಕೆ ಕಾರ­ಣವಾ­-ಗಿವೆ ಎನ್ನುತ್ತಾರೆ ಐ.ಟಿ  ಮಾರುಕಟ್ಟೆ ತಜ್ಞರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT