ADVERTISEMENT

ಉಂಡೆ ಕೊಬ್ಬರಿಗೆ ರೂ 1000 ಪ್ರೋತ್ಸಾಹ ಧನ

ನಿನ್ನೆಯಿಂದಲೇ ಜಾರಿ; ಕ್ವಿಂಟಲ್‌ಗೆ ರೂ 6,500 ಬೆಲೆ ಖಚಿತ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST

ಬೆಂಗಳೂರು: ಬುಧವಾರದಿಂದಲೇ ಜಾರಿಗೆ ಬರುವಂತೆ ಪ್ರತಿ ಕ್ವಿಂಟಲ್ ಉಂಡೆ ಕೊಬ್ಬರಿಗೆ ರಾಜ್ಯ ಸರ್ಕಾರ ರೂ1000 ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ.

ತೋಟಗಾರಿಕೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ ವಿಧಾನ ಪರಿಷತ್‌ನಲ್ಲಿ ಬುಧವಾರ ಈ ವಿಷಯ ಪ್ರಕಟಿಸಿದರು. `ಬೆಳಿಗ್ಗೆಯಷ್ಟೇ ಸಚಿವ ಸಂಪುಟದ ಉಪ ಸಮಿತಿ ಸಭೆ ನಡೆದಿದ್ದು, ಉಂಡೆ ಕೊಬ್ಬರಿಗೆ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಕೇಂದ್ರದ ಸರ್ಕಾರ ನೀಡುವ ರೂ5,500 ಬೆಂಬಲ ಬೆಲೆಯೂ ಸೇರಿದಂತೆ ಪ್ರತಿ ಕ್ವಿಂಟಲ್ ಉಂಡೆ ಕೊಬ್ಬರಿಗೆ ಈಗ ರೈತರು ರೂ6,500 ಪಡೆಯಲಿದ್ದಾರೆ' ಎಂದು ಹೇಳಿದರು.

`ಅಗತ್ಯಕ್ಕೆ ತಕ್ಕಂತೆ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು. ಕೊಬ್ಬರಿ ಖರೀದಿ ದಿನವೇ ಹಣ ಪಾವತಿ ಮಾಡಲಾಗುವುದು. ಅದಕ್ಕೆ ಅಗತ್ಯವಾದ ಮೊತ್ತವನ್ನು ಆವರ್ತ ನಿಧಿಯಿಂದ ಪಡೆಯಲಾಗುವುದು' ಎಂದು ತಿಳಿಸಿದರು.

ಎಲ್ಲ ಜಿಲ್ಲೆಗೆ ಹಾಪ್‌ಕಾಮ್ಸ
ಹಣ್ಣು ಹಾಗೂ ತರಕಾರಿ ಯೋಗ್ಯ ಬೆಲೆಗೆ ಸಿಗುವಂತೆ ನೋಡಿಕೊಳ್ಳಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಾಪ್‌ಕಾಮ್ಸ ಮಳಿಗೆ ಆರಂಭಿಸಲಾಗುವುದು ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು. `ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನವನ್ನು ಯೋಗ್ಯ ಬೆಲೆಗೆ ಒದಗಿಸುವ ಜತೆಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೂ ಹೆಚ್ಚಿನ ಆದಾಯ ಸಿಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು' ಎಂದು ವಿವರಿಸಿದರು.

`ತೋಟಗಾರಿಕೆ ಯೋಜನೆಗಳಿಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ250 ಕೋಟಿ ಖರ್ಚು ಮಾಡಲು ಉದ್ದೇಶಿಸಲಾಗಿದೆ' ಎಂದು ತಿಳಿಸಿದರು. ಬಿಜೆಪಿಯ ಡಾ. ಎ.ಎಚ್.ಶಿವಯೋಗಿಸ್ವಾಮಿ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.