ನವದೆಹಲಿ (ಪಿಟಿಐ): ದೇಶದ ಅತ್ಯಂತ ಲಾಭದಾಯಕ ಕೇಂದ್ರೋದ್ಯಮ ತೈಲ ಮತ್ತು ನೈಸರ್ಗಿಕ ನಿಗಮ (ಒಎನ್‌ಜಿಸಿ) ಏಪ್ರಿಲ್ 5 ರಂದು ರೂ 11,500 ಕೋಟಿ ಗಳ ಪೂರಕ ಸಾರ್ವಜನಿಕ ಕೊಡುಗೆ (ಎಫ್‌ಪಿಒ) ಪ್ರಕಟಿಸಲಿದ್ದು, ಈ ಹಿನ್ನೆಲೆಯಲ್ಲಿ ‘ನವರತ್ನ’ ಸ್ಥಾನವನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.
‘ಎಫ್‌ಪಿಒ’ ಜಾರಿಗೆ ಸಂಬಂಧಿಸಿದಂತೆ ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಕೆಲವು ನಿಯಮಗಳನ್ನು ಜಾರಿಗೊಳಿಸಿದ್ದು, ಇದರ ಅನ್ವಯ ರೂ 11,500 ಕೋಟಿ ‘ಎಫ್‌ಪಿಒ’ ಪ್ರಕಟಿಸುವಾಗ ಕಾರ್ಯನಿರ್ವಾಹಕ ಮತ್ತು ಸ್ವತಂತ್ರ ನಿರ್ದೇಶಕರ ಸಂಖ್ಯೆ ಸಮನಾಗಿ ಇರಬೇಕು. ಆದರೆ, ಸರ್ಕಾರ ‘ಒಎನ್‌ಜಿಸಿ’ ಮಂಡಳಿಯಲ್ಲಿರುವ ತನ್ನಿಬ್ಬರು ನಿರ್ದೇಶಕರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ನಿರ್ಧರಿಸಿರುವುದರಿಂದ ಗೊಂದಲ ಮುಂದುವರೆದಿದೆ.
ಒಂದು ವೇಳೆ ಸರ್ಕಾರ ತನ್ನ ನಿರ್ದೇಶಕರನ್ನು ಹಿಂದಕ್ಕೆ ಕರೆಯಿಸಿಕೊಂಡರೆ ‘ಒನ್‌ಜಿಸಿ’ ‘ನವರತ್ನ’ ಸ್ಥಾನಮಾನ ಕಳೆದುಕೊಳ್ಳಲಿದೆ. ಒಮ್ಮೆ ‘ನವರತ್ನ’ ಸ್ಥಾನ ಕೈತಪ್ಪಿದರೆ ನಂತರ, ‘ಒಎನ್‌ಜಿಸಿ’ ಮಂಡಳಿ ರೂ 100 ಕೋಟಿ ಮೇಲಿನ ಯಾವುದೇ ಹೂಡಿಕೆಗೆ ಸಾರ್ವಜನಿಕ ಹೂಡಿಕೆ ಮಂಡಳಿಯಿಂದ (ಪಿಐಬಿ) ಅನುಮತಿ ಪಡೆಯಬೇಕಾಗುತ್ತದೆ. ಈಗ ‘ನವರತ್ನ’ ಸ್ಥಾನಮಾನ ಇರುವುದರಿಂದ ರೂ 1 ಸಾವಿರ ಕೋಟಿ ವರೆಗಿನ ಹೂಡಿಕೆಗೆ ಸಂಬಂಧಿಸಿದ ಸ್ವತಂತ್ರ ನಿಲುವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಮಂಡಳಿಗೆ ಇದೆ. ಇತ್ತೀಚೆಗೆ ತೈಲ ಸಚಿವಾಲಯವು ‘ಒಎನ್‌ಜಿಸಿ’ ಮಂಡಳಿಗೆ ಸ್ವತಂತ್ರ ನಿರ್ದೇಶಕರನ್ನು ನಾಮಕರಣ ಮಾಡಿದ ನಂತರ ಈ ಪರಿಸ್ಥಿತಿ ಬಿಗಡಾಯಿಸಿದೆ. ಅಧ್ಯಕ್ಷರನ್ನು ಹೊರತುಪಡಿಸಿ, ಸದ್ಯ ಆರು ಜನ ಅಧಿಕೃತ ನಿರ್ದೇಶಕರನ್ನು ‘ಒಎನ್‌ಜಿಸಿ’ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.