ADVERTISEMENT

‘ಕೊಡಗಿನಲ್ಲಿ ರೈಲು ಮಾರ್ಗ ಬೇಡ’

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 19:37 IST
Last Updated 27 ಅಕ್ಟೋಬರ್ 2017, 19:37 IST
ಮನೆಯಪಂಡ ಎಂ.ಚೆಂಗಪ್ಪ(ಎಡತುದಿ) ಎಂ.ಆರ್‌.ಸೀತಾರಾಮ್‌ ಅವರೊಂದಿಗೆ ಮಾತುಕತೆ ನಡೆಸಿದರು. ಎಂ.ವಿ.ರಾಜೀವ್‌ ಗೌಡ ಇದ್ದರು –ಪ್ರಜಾವಾಣಿ ಚಿತ್ರ
ಮನೆಯಪಂಡ ಎಂ.ಚೆಂಗಪ್ಪ(ಎಡತುದಿ) ಎಂ.ಆರ್‌.ಸೀತಾರಾಮ್‌ ಅವರೊಂದಿಗೆ ಮಾತುಕತೆ ನಡೆಸಿದರು. ಎಂ.ವಿ.ರಾಜೀವ್‌ ಗೌಡ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೊಡಗು ಜಿಲ್ಲೆಯಲ್ಲಿ ರೈಲು ಮಾರ್ಗ ಮತ್ತು ಹೆದ್ದಾರಿ ನಿರ್ಮಾಣದಿಂದ ಪರಿಸರಕ್ಕೆ ಧಕ್ಕೆ ಆಗಲಿದೆ. ಹಾಗಾಗಿ ಜಿಲ್ಲೆಯಲ್ಲಿ ಇವುಗಳನ್ನು ನಿರ್ಮಿಸಬಾರದು’ ಎಂದು ಕರ್ನಾಟಕ ಪ್ಲಾಂಟರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಮನೆಯಪಂಡ ಎಂ.ಚೆಂಗಪ್ಪ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಅಸೋಸಿಯೇಷನ್‌ನ ‘59ನೇ ವಾರ್ಷಿಕ ಸಭೆ’ಯಲ್ಲಿ ಅವರು ಮಾತನಾಡಿದರು. ‘ಈ ಬೃಹತ್‌ ಸಾರಿಗೆ ವ್ಯವಸ್ಥೆಯ ವಿಸ್ತರಣೆಯಿಂದ ಜಿಲ್ಲೆಯಲ್ಲಿ ನೀರಿನ ಕೊರತೆ, ಮಾಲಿನ್ಯ ಮತ್ತು ಕೂಲಿ ಕಾರ್ಮಿಕರ ಕೊರತೆ ಉಂಟಾಗಲಿದೆ’ ಎಂದರು.

‘ಸಂಸ್ಕರಿಸಿದ ಕಾಫಿಬೀಜಗಳ ಮಾರಾಟದ ಆದಾಯದಲ್ಲಿನ ಶೇ 25 ಭಾಗ ಆದಾಯ ತೆರಿಗೆ ಕಟ್ಟಲು ಹೋಗುತ್ತದೆ. ಇದರಿಂದ ಸಣ್ಣ ಪ್ಲಾಂಟರ್ಸ್‌ಗಳಿಗೆ ನಷ್ಟವಾಗುತ್ತಿದೆ. ಹಾಗಾಗಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 7(1)ಬಿ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಸಾರ್ಕ್‌ ದೇಶಗಳಿಂದ ಕಾಳು ಮೆಣಸು ಆಮದಿನಿಂದಾಗಿ ಸ್ಥಳೀಯ ಬೆಳೆಗಾರರಿಗೆ ನಷ್ಟವಾಗುತ್ತಿದೆ. ಈ ಆಮದು ತಡೆಯಬೇಕು’ ಎಂದು ಮನವಿ ಮಾಡಿದರು. ಪ್ರತಿವರ್ಷ ಕಾಫಿತೋಟಗಳಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚುತ್ತಿದೆ. ಈ ವರ್ಷ 62 ಆನೆಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದೇವೆ’ ಎಂದು  ತಿಳಿಸಿದರು.

ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಆರ್‌.ಸೀತಾರಾಮ್‌ ಮಾತನಾಡಿ, ‘ಕೊಡಗು, ಚಿಕ್ಕಮಗಳೂರು ಮತ್ತು ಸಕಲೇಶಪುರಗಳಲ್ಲಿನ ಕಾಫಿ ಮತ್ತು ಕಾಳುಮೆಣಸು ಬೆಳೆಗಾರರ ಹಿತಾಸಕ್ತಿಗೆ ಅನುಗುಣವಾಗಿನೀತಿ–ನಿಯಮ ರೂಪಿಸುತ್ತಿದ್ದೇವೆ. ಕೊಡಗಿನಲ್ಲಿ ರೈಲು ಮಾರ್ಗ ನಿರ್ಮಿಸದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ’ ಎಂದರು.

**

ರಾಜ್ಯದ ಕಾಫಿತೋಟಗಳನ್ನು ಸುಮಾರು 50 ಲಕ್ಷ ಜನರು ಅವಲಂಬಿಸಿದ್ದಾರೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಕಾಫಿ ಕೃಷಿಗೂ ವಿಸ್ತರಿಸಬೇಕು.
–ಎಂ.ಎಸ್‌.ಭೋಜೇಗೌಡ
ಅಧ್ಯಕ್ಷ , ರಾಜ್ಯ ಕಾಫಿ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.