ADVERTISEMENT

ಕೊಡಗು; ಸತತ ಮಳೆಯಿಂದ ಕೊಳೆರೋಗದ ಭೀತಿ....

ಶ್ರೀಕಾಂತ ಕಲ್ಲಮ್ಮನವರ
Published 4 ಸೆಪ್ಟೆಂಬರ್ 2011, 19:30 IST
Last Updated 4 ಸೆಪ್ಟೆಂಬರ್ 2011, 19:30 IST

ಮಡಿಕೇರಿ: ಕೊಡಗಿನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ, ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿ ಇಳು    ವರಿ ಗಣನೀಯವಾಗಿ ಕುಸಿಯುವ ಸಾಧ್ಯತೆ ಇದ್ದು, ಬೆಳೆಗಾರರು ಭೀತಿಗೆ ಒಳಗಾಗಿದ್ದಾರೆ.

ದೇಶದ ಕಾಫಿ ಉತ್ಪಾದನೆಗೆ ಸಿಂಹಪಾಲು ಕೊಡುಗೆ ನೀಡುವ ಕೊಡಗಿನ ಬೆಳೆಗಾರರಿಗೆ ಈ ಬಾರಿ ಎಡೆಬಿಡದೆ ಸುರಿಯುತ್ತಿರುವ ಮಳೆ ಆಘಾತ ಉಂಟುಮಾಡಿದೆ. ಸತತ ಮಳೆಯಿಂದ ಕಾಯಿ ಹಾಗೂ ಎಲೆಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದ್ದು, ಶೇ 15ರಿಂದ ಶೇ 18ರಷ್ಟು ಕಾಫಿ ಬೀಜ ಉದುರುವಿಕೆಗೆ ಕಾರಣವಾಗಿದೆ. ಇದು ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

ಪ್ರಸಕ್ತ ವರ್ಷದ ಜನವರಿಯಿಂದ ಆಗಸ್ಟ್ 30ರ ವರೆಗೆ ಜಿಲ್ಲೆಯಲ್ಲಿ 2141.85ಮಿ.ಮೀ. ಮಳೆಯಾಗಿದ್ದರೆ, ಕಳೆದ ವರ್ಷ 1650.30ಮಿ.ಮೀ ಮಳೆಯಾಗಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ ಶೇ 31ರಿಂದ ಶೇ 35ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಾಗಿರುವ ಶ್ರೀಮಂಗಲ, ಬೀರುನಾಣೆ, ನಾಪೋಕ್ಲು, ಶಾಂತಳ್ಳಿ, ನಾಲಡಿ, ಕಕ್ಕಬ್ಬೆ, ಮಡಿಕೇರಿ, ಭಾಗಮಂಡಲ, ತಲಕಾವೇರಿ ಮುಂತಾದ ಪ್ರದೇಶಗಳಲ್ಲಿ ಕಾಫಿ ಉದುರುವಿಕೆ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಹೆಚ್ಚು ಮಳೆ ಸುರಿಯುವುದರಿಂದ ಪ್ರತಿವರ್ಷ ಶೇ 5ರಷ್ಟು ಕಾಫಿ ಉದುರುವಿಕೆ ಸಾಮಾನ್ಯವಾಗಿರುತ್ತದೆ. ಆದರೆ, ಈ ಬಾರಿ ಕಾಫಿ ಉದುರುವಿಕೆ ಪ್ರಮಾಣ ಕೂಡ ಹೆಚ್ಚಾಗಿದೆ ಎಂದು ಕಾಫಿ ಮಂಡಳಿಯ ಮಡಿ   ಕೇರಿ -ಸೋಮವಾರಪೇಟೆ ವಲಯದ ಉಪ ನಿರ್ದೇಶಕ ಮಾರುತಿ ಸಿ. ರಟಗೇರಿ `ಪ್ರಜಾವಾಣಿ~ಗೆ ತಿಳಿಸಿದರು.

ಅರೇಬಿಕಾ ಹೆಚ್ಚು ನಷ್ಟ:   ಜಿಲ್ಲೆಯಲ್ಲಿ ಒಟ್ಟು 1,03,690 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಸುಮಾರು 1.23 ಲಕ್ಷ ಟನ್ ಕಾಫಿ ಉತ್ಪಾದಿಸುವ ಗುರಿ ಇಟ್ಟುಕೊಳ್ಳಲಾಗಿದೆ.ಜಿಲ್ಲೆಯಲ್ಲಿ 1 ಲಕ್ಷ ಟನ್ ರೋಬಸ್ಟಾ ಕಾಫಿ ಹಾಗೂ 23.280 ಟನ್ ಅರೇಬಿಕಾ ಕಾಫಿ ಉತ್ಪಾದಿಸುವ ಗುರಿ ಇದೆ.

ಈಗ ಕಾಣಿಸಿಕೊಂಡಿರುವ ಕೊಳೆರೋಗ ಹಾಗೂ ಕಾಫಿ ಉದುರುವಿಕೆ ಹೆಚ್ಚಾಗಿ ಅರೇಬಿಕಾ ಕಾಫಿ ಗಿಡಗಳಲ್ಲಿ ಕಾಣಿಸಿಕೊಂಡಿದ್ದರು, ಅರೇಬಿಕಾ ಕಾಫಿ ಇಳುವರಿ ಕಡಿಮೆಯಾಗುವ ಸಂಭವ ಇದೆ.

`ಸತತ ಮಳೆ ಹಾಗೂ ಮಂಜಿನಿಂದ ಕಾಫಿ ಗಿಡಗಳಲ್ಲಿ ಕೊಳೆ ರೋಗ ಬೇಗ ಉಲ್ಬಣಗೊಳ್ಳುತ್ತದೆ. ಇದರಿಂದಾಗಿ ಕಾಫಿ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ~ ಎಂದು ಕಾಫಿ ಮಂಡಳಿಯ ವೀರಾಜಪೇಟೆ ವಲಯದ ಉಪನಿರ್ದೇಶಕ ಯು. ಗೋಪಾಲಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.